ಬೆಂಗಳೂರು. ನ.4- ಮಾಜಿ ಸಚಿವ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ವೈ. ಮೇಟಿ ಅವರು (79) ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮೇಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. 1946 ಅಕ್ಟೋಬರ್ 9ರಂದು ಬಾಗಲಕೋಟೆ ಜಿಲ್ಲೆಯ ತಿಮಾಪುರದಲ್ಲಿ ಜನಿಸಿದ್ದ ಮೇಟಿ ಅವರು, ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ರಾಜಕೀಯ ಜೀವನ ಆರಂಭಿಸಿದ್ದರು.
1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಚುನಾಯಿತರಾಗಿದ್ದರು. 1989, 1994 ಮತ್ತು 2004ರಲ್ಲಿ ಗುಳೇದಗುಡ್ಡ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಿಂದ ಗುಳೇದಗುಡ್ಡ ಕ್ಷೇತ್ರ ಇಲ್ಲವಾದ ಬಳಿಕ, ಬಾಗಲಕೋಟೆ ಕ್ಷೇತ್ರಕ್ಕೆ ಸ್ಥಳಾಂತರವಾದರು. 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಗೆದ್ದು ಆಯ್ಕೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
ಕುರುಬ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಹುಲ್ಲಪ್ಪ ಯಮುನಪ್ಪ ಮೇಟಿ ಮಹಿಳೆಯೊಂದಿಗೆ ಲೈಂಗಿಕ ಹಗರಣದಲ್ಲಿ ಸಿಲುಕಿ ಇದಕ್ಕೆ ಸಂಬಂಧಪಟ್ಟಂತ ಸಿಡಿ ಬಹಿರಂಗವಾದ ಬಳಿಕ 2016ರ ಡಿಸೆಂಬರ್ನಲ್ಲಿ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ವಿವಾದ ಹೊರತು ಪಡಿಸಿದರೆ ಮೇಟಿ ರಾಜಕಾರಣದಲ್ಲಿ ಸಜ್ಜನ, ಸೌಮ್ಯ ಸ್ವಭಾವದ ಅಜಾತಶತೃ ಎಂದೇ ಗುರುತಿಸಿಕೊಂಡಿದ್ದಾರೆ.
2018ರ ಚುನಾವಣೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಪುನರ್ ಆಯ್ಕೆಯಾಗಿದ್ದರು. 5 ಬಾರಿ ಶಾಸಕರಾಗಿದ್ದ ಮೇಟಿ ಮತ್ತೆ ಸಂಪುಟ ಸೇರಲು ಪ್ರಯತ್ನಿಸಿದ್ದರು. ಆದರೆ ರಾಜ್ಯ ರಾಜಕಾರಣದ ಒತ್ತಡದಲ್ಲಿ ಅದು ಸಾಧ್ಯವಾಗಿರಲಿಲ್ಲ.
ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೇಟಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಮೇಟಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನಲ್ಲಿದ್ದ ಸಿದ್ದರಾಮಯ್ಯ ತಮ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಆಗಮಿಸಿ, ಅಂತಿಮ ದರ್ಶನ ಪಡೆದಿದ್ದಾರೆ.