Home Blog Page 74

ದೊಡ್ಡಬಳ್ಳಾಪುರ : ಅಡಿಕೆ ತೋಟದಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ದೊಡ್ಡಬಳ್ಳಾಪುರ, ಅ.1- ತಾಲೂಕಿನಲ್ಲಿ ವನ್ಯಜೀವಿಗಳ ಉಪಟಳ ದಿನೇ ದಿನೆ ಹೆಚ್ಚುತ್ತಿದ್ದು, ಅಡಿಕೆ ತೋಟದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ.ತಿಪ್ಪೂರು ಗ್ರಾಮದ ಅಡಿಕೆ ತೋಟದಲ್ಲಿ ಸುಮಾರು 9 ಅಡಿ ಉದ್ದ, 20 ಕೆಜಿ ತೂಕದ ಬೃಹತ್‌ ಹೆಬ್ಬಾವು ಪತ್ತೆಯಾಗಿದ್ದು, ರೈತರಲ್ಲಿ ಆತಂಕ ಉಂಟಾಗಿದೆ.

ಹೆಜ್ಜಾಜಿ ಗ್ರಾಮದ ಯೋಗಿ ಎಂಬುವವರು ಕಾರ್ಮಿಕರೊಂದಿಗೆ ಅಡಿಕೆ ಕೀಳಲು ತೆರಳಿದ ಸಂದರ್ಭದಲ್ಲಿ ಭಾರೀ ಗಾತ್ರದ ಹೆಬ್ಬಾವು ಕಂಡುಬಂದಿದೆ. ತಕ್ಷಣ ಉರಗ ರಕ್ಷಕ ನಾಗರಾಜ್‌ ಅವರಿಗೆ ಕರೆ ಮಾಡಿದರೂ, ಅವರು ಕೆಲಸದ ಒತ್ತಡದಲ್ಲಿದ್ದ ಕಾರಣ ತಮ ಮಿತ್ರ ಹಾಗೂ ಮತ್ತೊಬ್ಬ ಉರಗ ರಕ್ಷಕ ರಾಮಾಂಜಿನಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ಸುರಕ್ಷಿತವಾಗಿ ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

ನಂತರ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಸ್ತಾಂತರಿಸಲಾಗಿದ್ದು, ಮಾಕಳಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಬಿಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

ಇತ್ತೀಚೆಗೆ ರೈತರು ನವಿಲು, ಕಾಡುಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳುವುದು ಒಂದು ಕಡೆಯಾದರೆ, ಚಿರತೆ-ಕರಡಿ ದಾಳಿಗಳಿಂದ ಸಾಕು ಪ್ರಾಣಿಗಳನ್ನ ಕಾಪಾಡಿಕೊಳ್ಳುವುದು ಮತ್ತೊಂದು ಕಡೆ.

ಈ ಎಲ್ಲಾ ಆತಂಕದ ನಡುವೆ ಈಗ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆಯಾಗಿರುವುದರಿಂದ ರೈತರು ಹೊಲ, ಗ್ದೆ , ತೋಟಗಳ ಬಳಿ ಓಡಾಡಲು ಭಯ ಪಡುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ

ಬೆಂಗಳೂರು, ಅ.1- ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯು 500 ಕೋಟಿ ಮಹಿಳಾ ಟಿಕೆಟ್‌ ಉಚಿತ ಪ್ರಯಾಣ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

ಈಗಾಗಲೇ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿತ್ತು. ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಮಸ್ತ ಅಧಿಕಾರಿ/ ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕ ಮುಖಂಡರುಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಸಬಲರನ್ನಾಗಿಸಿದೆ.

ಶಕ್ತಿ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿರುವುದು ಶಕ್ತಿ ಯೋಜನೆಯ ಯಶಸ್ಸನ್ನು ಬಿಂಬಿಸಿದೆ. ಇದರೊಂದಿಗೆ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದು ಹೆಮೆಯ ವಿಷಯವಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಮಹಿಳಾ ಪ್ರಯಾಣಿಕರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಆರ್‌ಎಸ್‌‍ಎಸ್‌‍ ಸೇರ್ಪಡೆಗೊಳ್ಳಲಿದ್ದಾರೆ ಕೇರಳ ಮಾಜಿ ಡಿಜಿಪಿ ಜಾಕೋಬ್‌ ಥಾಮಸ್‌‍

ಕೊಚ್ಚಿ, ಅ.1- ಕೇರಳದ ಮಾಜಿ ಪೊಲೀಸ್‌‍ ಮಹಾ ನಿರ್ದೇಶಕ ಜಾಕೋಬ್‌ ಥಾಮಸ್‌‍ ಅವರು ಪೂರ್ಣಾವಧಿ ಪ್ರಚಾರಕರಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌‍ಎಸ್‌‍)ಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಕ್ರೈಸ್ತ ಸಮುದಾಯದ ಮೇಲೆ ಆರ್‌ಎಸ್‌‍ಎಸ್‌‍ ಮತ್ತು ಬಿಜೆಪಿ ಆಕ್ರಮಣಕಾರಿಯಾಗಿ ಪ್ರಭಾವ ಬೀರುತ್ತಿರುವ ಸನ್ನಿವೇಶದಲ್ಲಿ ಜಾಕೋಬ್‌ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.
ಇಂದು ಎರ್ನಾಕುಲಂ ಜಿಲ್ಲೆಯ ಪಳ್ಳಕ್ಕರದಲ್ಲಿ ಗಣವೇಷ ಎಂದು ಹೆಸರಾದ ಆರ್‌ಎಸ್‌‍ಎಸ್‌‍ ಸಮವಸ್ತ್ರ ಧರಿಸಿ ಆರ್‌ಎಸ್‌‍ಎಸ್‌‍ನ ಪಥಸಂಚಲನದಲ್ಲಿ ಪಾಲ್ಗೊಳ್ಳುವುದಾಗಿ ಟಿಎನ್‌ಐಇ ಜೊತೆಗೆ ನಡೆಸಿದ ಸಂವಾದದ ವೇಳೆ ಜಾಕೋಬ್‌ ತಿಳಿಸಿದ್ದಾರೆ.

ನಾನು ದಶಕಗಳಿಂದ ಸರಸಂಘ ಚಾಲಕ ಮೋಹನ್‌ ಭಾಗವತ್‌ ಸೇರಿದಂತೆ ಆರ್‌ಎಸ್‌‍ಎಸ್‌‍ನ ಉನ್ನತ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇನೆ. ಆರ್‌ಎಸ್‌‍ಎಸ್‌‍ನ ಶಿಸ್ತು ಮತ್ತು ಅದರ ಕಾರ್ಯಕರ್ತರು ದೇಶಕ್ಕೆ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ನನ್ನನ್ನು ಈ ಸಂಘಟನೆಯತ್ತ ಆಕರ್ಷಿಸಿವೆ. ಸ್ವಯಂ ಸೇವಕರು ನಿಜವಾಗಿಯೂ ದೇಶಪ್ರೇಮಿಗಳು ಮತ್ತು ಸ್ವಹಿತಾಸಕ್ತಿಯನ್ನು ಚಿಂತಿಸುವ ಯಾವುದೇ ಆರ್‌ಎಸ್‌‍ಎಸ್‌‍ ಕಾರ್ಯಕರ್ತನನ್ನು ನಾನು ಕಂಡಿಲ್ಲ. ಆರ್‌ಎಸ್‌‍ಎಸ್‌‍ ಬಿಟ್ಟರೆ ರಾಷ್ಟ್ರಕ್ಕಾಗಿ ಇಂಥ ಸಮರ್ಪಣೆ, ದೇಶಪ್ರೇಮ ಹೊಂದಿರುವ ಅನ್ಯ ಸಂಸ್ಥೆಯನ್ನು ಜಗತ್ತಿನಲ್ಲಿ ನಾ ಕಾಣೆ ಎಂದು ಅವರು ಹೇಳಿದ್ದಾರೆ.

ನಾನು ಐಪಿಎಸ್‌‍ ಅಧಿಕಾರಿಯಾಗಿ ಸೇವೆಯಲ್ಲಿದ್ದ ದಿನಗಳಿಂದಲೂ ಆರ್‌ಎಸ್‌‍ಎಸ್‌‍ನ ಸಾಹಚರ್ಯ ಹೊಂದಿದ್ದೇನೆ. ಪೂರ್ಣಾವಧಿ ಪ್ರಚಾರಕನಾಗಿ ಆರ್‌ಎಸ್‌‍ಎಸ್‌‍ಗೆ ಸೇರುವ ನನ್ನ ಇಚ್ಛೆಯನ್ನು ತಿಳಿಸಿದ್ದೇನೆ. ನನ್ನ ಸೇವೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸಂಘಟನೆ ನಿರ್ಧರಿಸಬೇಕು ಎಂದು ಜಾಕೋಬ್‌ ನುಡಿದಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-10-2025)

ನಿತ್ಯ ನೀತಿ : ಪ್ರಾರಬ್ಧ ಕರ್ಮವನ್ನು ಅನುಭವಿಸಿದ ಮೇಲೆ ನಿಶ್ಚಯವಾಗಿಯೂ ಸತ್ಕರ್ಮದ ಫಲವು ದೊರೆಯುತ್ತದೆಂಬ ದೃಢ ವಿಶ್ವಾಸ, ನಂಬಿಕೆಯನ್ನಿಟ್ಟು ಸ್ಥೈರ್ಯದಿಂದ ಬದುಕಬೇಕು.

ಪಂಚಾಂಗ : ಬುಧವಾರ, 01-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ನವಮಿ / ನಕ್ಷತ್ರ: ಪೂ.ಷಾ. / ಯೋಗ: ಅತಿಗಂ / ಕರಣ: ಬಾಲವ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.10
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರಲಿವೆ.
ವೃಷಭ: ಧ್ಯಾನ ಮಾಡುವುದರಿಂದ ಮನಸ್ಸು ನಕಾರಾತ್ಮಕ ಭಾವನೆಯಿಂದ ಹೊರಬರಲಿದೆ.
ಮಿಥುನ: ಬಹಳ ದಿನಗಳ ನಂತರ ಕಚೇರಿಯ ಕೆಲಸ-ಕಾರ್ಯಗಳು ತೃಪ್ತಿಕರವಾಗಲಿವೆ.

ಕಟಕ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ.
ಸಿಂಹ: ಸಂಗಾತಿಯೊಂದಿಗೆ ಇದ್ದ ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು.
ಕನ್ಯಾ: ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಿಂದ ಆರ್ಥಿಕ ಸಹಾಯ ಸಿಗಲಿದೆ.

ತುಲಾ: ತಂದೆ-ತಾಯಿಯರ ಹಿತವಚನವನ್ನು ಸಹನೆ ಯಿಂದ ಕೇಳುವುದು ಒಳಿತು.
ವೃಶ್ಚಿಕ: ಆರ್ಥಿಕ ವಿಚಾರದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಕೊಳ್ಳುವಿರಿ.
ಧನುಸ್ಸು: ವಾಹನ ಚಾಲನೆ ಹಾಗೂ ವಾಹನದಲ್ಲಿ ಪ್ರಯಾಣಿಸುವಾಗ ಹೆಚ್ಚು ಜಾಗೃತರಾಗಿರಿ.

ಮಕರ: ಅತಿಯಾದ ಆಲಸ್ಯ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟುಮಾಡಲಿದೆ. ದೂರ ಪ್ರಯಾಣ ಬೇಡ.
ಕುಂಭ: ಆಹಾರದಲ್ಲಿನ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ.
ಮೀನ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಗಳಾಗಲಿವೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.

ಇಂಡೋನೇಷ್ಯಾ : ಶಾಲಾ ಕಟ್ಟಡ ಕುಸಿದು ಮೂವರ ಸಾವು, 38 ಮಂದಿ ಕಣ್ಮರೆ

ಸಿಡೋರ್ಜೊ, ಸೆ.30 (ಎಪಿ)– ಇಂಡೋನೇಷ್ಯಾದಲ್ಲಿ ಶಾಲಾ ಕಟ್ಟಡ ಕುಸಿದು ಮೂವರು ವಿದ್ಯಾರ್ಥಿಗಳು ಜೀವಂತ ಸಮಾಧಿಯಾಗಿದ್ದು, 38ಕ್ಕೂ ಹೆಚ್ಚು ಮಂದಿ ಕಣರೆಯಾಗಿದ್ದಾರೆ ಎಂದು ತಿಳಿದುಬಂದಿದೆ.ಇಂದು ಬೆಳಿಗ್ಗೆ ಏಕಾಏಕಿ ಕಟ್ಟಡ ಕುಸಿದು ಈ ಘಟನೆಯಲ್ಲಿ ನೂರಕ್ಕೂ ಹೆಚ್ಚು ಜನರು ಅವಶೇಷಗಳಲ್ಲಿ ಹೂತುಹೋಗಿದ್ದರು.

ಪೂರ್ವ ಜಾವಾ ಪಟ್ಟಣದ ಸಿಡೋರ್ಜೊದಲ್ಲಿರುವ ಅಲ್‌ ಖೋಜಿನಿ ಇಸ್ಲಾಮಿಕ್‌ ಬೋರ್ಡಿಂಗ್‌ ಶಾಲೆಯಲ್ಲಿ ಕುಸಿದು ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ರಕ್ಷಣಾ ಕಾರ್ಯಕರ್ತರು, ಪೊಲೀಸರು ಮತ್ತು ಸೈನಿಕರು ರಾತ್ರಿಯಿಡೀ ಅಗೆದ್ತು ಗಾಯಗೊಂಡ ಬದುಕುಳಿದವರನ್ನು ಹೊರತೆಗೆದರು. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ದೃಢಪಟ್ಟಿದೆ. ವಿದ್ಯಾರ್ಥಿಗಳ ಕುಟುಂಬಗಳು ಆಸ್ಪತ್ರೆಗಳಲ್ಲಿ ಅಥವಾ ಕುಸಿದ ಕಟ್ಟಡದ ಬಳಿ ಜಮಾಯಿಸಿ, ತಮ್ಮ ಮಕ್ಕಳ ಸುದ್ದಿಗಾಗಿ ಆತಂಕದಿಂದ ಕಾಯುತ್ತಿದ್ದರು.

ಬೋರ್ಡಿಂಗ್‌ ಶಾಲಾ ಸಂಕೀರ್ಣ ದಲ್ಲಿ ಸ್ಥಾಪಿಸಲಾದ ಕಮಾಂಡ್‌ ಪೋಸ್ಟ್‌ನಲ್ಲಿರುವ ಸೂಚನಾ ಫಲಕವು ಇಂದು ಬೆಳಿಗ್ಗೆ 65 ವಿದ್ಯಾರ್ಥಿಗಳು ಕಾಣೆಯಾಗಿದ್ದು ಅವರಲ್ಲಿ 38 ಮಂದಿಯನ್ನು ಪತ್ತೆಹಚ್ಚಲು ಇನ್ನು ಸಾಧ್ಯವಾಗಿಲ್ಲ ಎಂದು ಪಟ್ಟಿ ಮಾಡಲಾಗಿದೆ. ಇವರಲ್ಲಿ ಹೆಚ್ಚಿನವರು ಏಳರಿಂದ ಹನ್ನೊಂದು ತರಗತಿಯವರೆಗಿನ, 12 ರಿಂದ 17 ವರ್ಷದೊಳಗಿನ ಹುಡುಗರು ಎಂಬುದು ವಿಶೇಷ.

ಓ ದೇವರೇ… ನನ್ನ ಮಗನನ್ನು ಇನ್ನೂ ಸಮಾಧಿ ಮಾಡಲಾಗಿದೆ, ಓ ದೇವರೇ ದಯವಿಟ್ಟು ಸಹಾಯ ಮಾಡಿ! ಎಂದು ಫಲಕದಲ್ಲಿ ತನ್ನ ಮಗುವಿನ ಹೆಸರನ್ನು ನೋಡಿ ತಾಯಿಯೊಬ್ಬರು ಉನ್ಮಾದದಿಂದ ಅಳುತ್ತಿದ್ದರು, ನಂತರ ಇದೇ ರೀತಿಯ ಅದೃಷ್ಟವನ್ನು ಅನುಭವಿಸಿದ ಸಂಬಂಧಿಕರ ಇತರ ಪೋಷಕರ ಕೂಗುಗಳು ಕೇಳಿಬಂದವು.

ದಯವಿಟ್ಟು, ಸರ್‌ ದಯವಿಟ್ಟು ನನ್ನ ಮಗುವನ್ನು ತಕ್ಷಣ ಹುಡುಕಿಕೊಡಿ ಎಂದು ರಕ್ಷಣಾ ತಂಡದ ಸದಸ್ಯರೊಬ್ಬರ ಕೈ ಹಿಡಿದು ತಂದೆ ಕೂಗಿದರು.ಕಾಂಕ್ರೀಟ್‌ ಮತ್ತು ಇತರ ಅವಶೇಷಗಳ ಭಾರವಾದ ಚಪ್ಪಡಿಗಳು ಮತ್ತು ಕಟ್ಟಡದ ಅಸ್ಥಿರ ಭಾಗಗಳು ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯುಂಟುಮಾಡಿದವು ಎಂದು ಪ್ರಯತ್ನವನ್ನು ಮುನ್ನಡೆಸುವ ಶೋಧ ಮತ್ತು ರಕ್ಷಣಾ ಅಧಿಕಾರಿ ನಾನಂಗ್‌ ಸಿಗಿಟ್‌ ಹೇಳಿದರು.

ಭಾರೀ ಉಪಕರಣಗಳು ಲಭ್ಯವಿದ್ದವು ಆದರೆ ಅದು ಮತ್ತಷ್ಟು ಕುಸಿತಕ್ಕೆ ಕಾರಣವಾಗಬಹುದು ಎಂಬ ಕಳವಳದಿಂದಾಗಿ ಅವುಗಳನ್ನು ಬಳಸಲಾಗುತ್ತಿರಲಿಲ್ಲ. ನಾವು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರಿಗೆ ಆಮ್ಲಜನಕ ಮತ್ತು ನೀರನ್ನು ಪೂರೈಸುತ್ತಿದ್ದೇವೆ ಮತ್ತು ಅವರನ್ನು ಹೊರತರಲು ನಾವು ಶ್ರಮಿಸುತ್ತಿದ್ದೇವೆ ಎಂದು ಸಿಗಿಟ್‌ ಹೇಳಿದರು. ರಕ್ಷಣಾಕಾರರು ಅವಶೇಷಗಳ ಅಡಿಯಲ್ಲಿ ಹಲವಾರು ಶವಗಳನ್ನು ನೋಡಿದ್ದಾರೆ ಆದರೆ ಇನ್ನೂ ಜೀವಂತವಾಗಿರುವವರನ್ನು ಉಳಿಸುವತ್ತ ಗಮನಹರಿಸಿದ್ದಾರೆ ಎಂದು ಅವರು ಹೇಳಿದರು.

ನೂರಾರು ರಕ್ಷಣಾ ಕಾರ್ಯಕರ್ತರು ಈ ಪ್ರಯತ್ನದಲ್ಲಿ ಭಾಗಿಯಾಗಿದ್ದರು ಮತ್ತು ಉಸಿರಾಟ, ಹೊರತೆಗೆಯುವಿಕೆ, ವೈದ್ಯಕೀಯ ಸ್ಥಳಾಂತರಿಸುವಿಕೆ ಮತ್ತು ಇತರ ಸಹಾಯಕ ಸಾಧನಗಳನ್ನು ಹೊಂದಿದ್ದರು.ಅನಧಿಕೃತ ವಿಸ್ತರಣೆಗೆ ಒಳಗಾಗುತ್ತಿದ್ದ ಕಟ್ಟಡದಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ, ಅದು ಇದ್ದಕ್ಕಿದ್ದಂತೆ ಅವರ ಮೇಲೆ ಕುಸಿದು ಬಿದ್ದಿತು ಎಂದು ಪ್ರಾಂತೀಯ ಪೊಲೀಸ್‌‍ ವಕ್ತಾರ ಜೂಲ್‌್ಸ ಅಬ್ರಹಾಂ ಅಬಾಸ್ಟ್‌ ಹೇಳಿದರು.

ನಿವಾಸಿಗಳು, ಶಿಕ್ಷಕರು ಮತ್ತು ನಿರ್ವಾಹಕರು ಗಾಯಗೊಂಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು, ಅವರಲ್ಲಿ ಅನೇಕರಿಗೆ ತಲೆಗೆ ಗಾಯಗಳು ಮತ್ತು ಮೂಳೆಗಳು ಮುರಿದಿವೆ. ಕಟ್ಟಡದ ಇನ್ನೊಂದು ಭಾಗದಲ್ಲಿ ಮಹಿಳಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುತ್ತಿದ್ದಾಗ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಬದುಕುಳಿದವರು ಹೇಳಿದರು.

99 ಇತರ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕುಸಿತದ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಳೆಯ ಪ್ರಾರ್ಥನಾ ಮಂದಿರವು ಎರಡು ಅಂತಸ್ತುಗಳದ್ದಾಗಿತ್ತು ಆದರೆ ಪರವಾನಗಿ ಇಲ್ಲದೆ ಇನ್ನೆರಡು ಸೇರಿಸಲಾಗುತ್ತಿದೆ ಎಂದು ಅಬಾಸ್ಟ್‌ ಹೇಳಿದರು.

ವಿಧಾನಸೌಧ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧ ಪೂಜೆ ಸಂಭ್ರಮ

ಬೆಂಗಳೂರು, ಸೆ30- ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡ ಸೇರಿದಂತೆ ರಾಜ್ಯಾದ್ಯಂತ ಇಂದು ಬಹುತೇಕ ಸರ್ಕಾರಿ ಕಚೇರಿ ಗಳಲ್ಲಿ ಆಯುಧ ಪೂಜೆಯನ್ನು ಸಂಭ್ರಮ ಸಡಗರದಿಂದ ನೆರವೇರಿಸ ಲಾಯಿತು.

ಸರ್ಕಾರಿ ಕಚೇರಿಗಳಲ್ಲದೇ ಖಾಸಗಿ ಸಂಸ್ಥೆಗಳ ಕಚೇರಿಗಳು, ಕೈಗಾರಿಕೆಗಳು, ಅಂಗಡಿ-ಮುಂಗಟ್ಟುಗಳಲ್ಲಿ ಇಂದು ಆಯುಧ ಪೂಜೆಯನ್ನು ಮಾಡಲಾಯಿತು.ವಿಧಾನಸೌಧ, ವಿಕಾಸಸೌಧದ ವಿವಿಧ ಕಚೇರಿಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಕಚೇರಿ ಮುಂದೆ ರಂಗೋಲಿ ಬಿಡಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು.

ಅದೇ ರೀತಿ ರಾಜ್ಯದ ವಿವಿಧ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳಲ್ಲೂ ಕೂಡ ಅಲಂಕರಿಸಿ ಆಯುಧ ಪೂಜೆಯನ್ನು ನೆರವೇರಿಸಲಾಯಿತು. ನಾಳೆ ಮತ್ತು ಗುರುವಾರ ರಜೆಯಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ವಾಣಿಜ್ಯ ವ್ಯವಹಾರ ನಡೆಸುವ ಕಚೇರಿಗಳಲ್ಲೂ ಪೂಜೆ ಮಾಡಲಾಯಿತು.

ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಕಚೇರಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಕಚೇರಿಗಳು, ಸರ್ಕಾರದ ಉನ್ನತ ಅಧಿಕಾರಿಗಳ ಕಚೇರಿಗಳನ್ನೂ ವಿಶೇಷವಾಗಿ ಅಲಂಕರಿಸಿ ಆಯುಧ ಪೂಜೆ ಮಾಡಲಾಯಿತು.

ಪರಸ್ಪರ ಸಿಹಿ ಹಂಚಿ ಆಯುಧ ಪೂಜೆ, ವಿಜಯದಶಮಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿ ಕಂಡುಬಂದಿತು.ಹೀಗಾಗಿ ಬಹುತೇಕ ಕಚೇರಿಗಳಲ್ಲಿ ದೈನಂದಿನ ಕೆಲಸ ಕಾರ್ಯಗಳಿಗಿಂತ ಹಬ್ಬದ ಸಡಗರ-ಸಂಭ್ರಮವೇ ಹೆಚ್ಚಾಗಿತ್ತು. ಅದೇ ರೀತಿ ರಾಜ್ಯದ ವಿವಿಧ ಸರ್ಕಾರಿ ಕಚೇರಿಗಳು, ಖಾಸಗಿ ಕಾರ್ಖಾನೆ-ಸಂಸ್ಥೆಗಳ ಕಚೇರಿಗಳಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಸಮೀಕ್ಷೆ ಮೂಲಕ ಗ್ಯಾರಂಟಿಗಳನ್ನು ನಿಲ್ಲಿಸಲು ಸರ್ಕಾರ ಸಂಚು : ಆರ್‌.ಅಶೋಕ್‌

ಬೆಂಗಳೂರು,ಸೆ.30- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ರಾಜ್ಯಾದ್ಯಂತ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕಯ ಉದ್ದೇಶವೇ ಗ್ಯಾರಂಟಿಗಳನ್ನು ಕಡಿತ ಮಾಡುವ ಏಕೈಕ ಗುರಿಯಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಮತ್ತೆ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ನೀಡಿದ ಹೇಳಿಕೆಗೆ ಬದ್ದನಾಗಿದ್ದೇನೆ. ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಮೂಲಕ ಗ್ಯಾರಂಟಿಗಳನ್ನು ಬಂದ್‌ ಮಾಡಲು ಸಂಚು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಜನರಿಗೆ ಗೊತ್ತಾಗಲಿದೆ ಎಂದು ಎಚ್ಚರಿಸಿದರು.

ಮಾಹಿತಿ ಪಡೆಯಲು ಬಲವಂತ ಮಾಡುವಂತಿಲ್ಲ ಎಂದು ಕೋರ್ಟ್‌ ಹೇಳಿದೆ. ಆದರೆ ಇವರು ಜನರ ವೈಯಕ್ತಿಕ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ನ್ಯಾಯಾಲಯ ಹೇಳಿದಂತೆ ಸಮೀಕ್ಷೆ ನಡೆಯುತ್ತಿಲ್ಲ. ಇದು ಸಿದ್ದರಾಮಯ್ಯ ಅವರ ಸಮೀಕ್ಷೆ. ಗ್ಯಾರಂಟಿಗಳನ್ನು ಕಟ್‌ ಮಾಡಲು ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಯಾವ ಪುರುಷಾರ್ಥಕ್ಕೆ ಹದಿನೈದೇ ದಿನ ನಿಗಧಿ ಮಾಡಿದ್ದೀರಿ? ತರಬೇತಿ ಕೊಡದೇ ಸಮೀಕ್ಷೆಗೆ ಗಣತಿದಾರರನ್ನು ಕಳಿಸಿದ್ದಾರೆ. ಹದಿನೈದು ದಿನಗಳಲ್ಲಿ ಪ್ರಳಯ ಆಗುತ್ತಾ? ಕೇಂದ್ರದ ಗಣತಿಯನ್ನೂ ತಪ್ಪು ದಾರಿಗೆ ಎಳೆಯಲು ಈಗಿಂದಲೇ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ಗೊಂದಲ ಸೃಷ್ಟಿಸುತ್ತಿದ್ದಾರೆ. ದುರುದ್ದೇಶ ಸ್ವಾರ್ಥ, ದುರುಳತನ ಇರುವ ಸಮೀಕ್ಷೆ ಇದು ಎಂದು ಕಿಡಿಕಾರಿದರು.

ಹಲವು ಜಾತಿ ಸಮುದಾಯಗಳು ಸಮೀಕ್ಷೆ ಅವೈಜ್ಞಾನಿಕ ಎನ್ನುತಿವೆ. ಸಮೀಕ್ಷೆಯಲ್ಲಿ ಭಾಗವಹಿಸುವುದು, ಬಿಡುವುದು ಜನರ ವಿವೇಚನೆಗೆ ಬಿಟ್ಟ ವಿಚಾರ. ಕೋರ್ಟ್‌ ಕೂಡ ಕಡ್ಡಾಯವಲ್ಲ ಎಂದೇ ಹೇಳಿದೆ. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿರುವುದು ಸಂವಿಧಾನದ ಪ್ರಕಾರ. ಆದರೆ ರಾಜ್ಯ ಸರ್ಕಾರ ಮಾಡುತ್ತಿರುವುದು ಸಂವಿಧಾನ ಪ್ರಕಾರ ಅಲ್ಲ. ತೇಜಸ್ವಿ ಸೂರ್ಯ ಅವರು ತಮ ವೈಯಕ್ತಿಕ ಹೇಳಿಕೆ ನೀಡಿದ್ದಾರೆ.

ಕೋರ್ಟ್‌ ಪ್ರಕಾರ, ಇಷ್ಟವಿದ್ದರೆ ಮಾಹಿತಿ ಕೊಡಬಹುದು ಇಲ್ಲದಿದ್ದರೂ ಬಿಡಬಹುದು. ವೈಯಕ್ತಿಕ ಮಾಹಿತಿ ಕೊಡುವುದು, ಬಿಡುವುದು ಜನರ ತೀರ್ಮಾನ. ಎಲ್ಲ ಮಾಹಿತಿ ಕೊಟ್ಟರೆ ಸರ್ಕಾರದ ಸೌಲಭ್ಯಕ್ಕೆ ಕೊಕ್‌ ಬೀಳಬಹುದು.ಸಿದ್ದರಾಮಯ್ಯನವರದ್ದು ಜಾತಿ ಒಡೆಯುವ ಬ್ರಾಂಡ್‌. 15 ದಿನದಲ್ಲೇ ಸರ್ವೆ ಮಾಡಬೇಕು ಎನ್ನುವ ಆತುರ ಏಕೆ ? 15 ದಿನದಲ್ಲಿ ಸಿಎಂ ಬಿಟ್ಟೋಗುತ್ತಾರಾ? ತರಬೇತಿ ಇಲ್ಲದೇ ಸರ್ವೆಗೆ ಹೋಗುತ್ತಿದ್ದಾರೆ. ನಾಯಿಯಿಂದ ಕಚ್ಚಿಸಿಕೊಂಡು ಬರಲು ಸರ್ವೆಗೆ ಹೋಗಬೇಕಾ ? ಎಂದು ಪ್ರಶ್ನಿಸಿದರು.

ಅಂತೂ ಇಂತೂ ಸಿಎಂ ನೆರೆ ಪೀಡಿತ ಪ್ರದೇಶಗಳಿಗೆ ಹೋಗುತ್ತಿರುವುದು ಸಂತೋಷ. ಆದರೆ ವೈಮಾನಿಕ ಸಮೀಕ್ಷೆ ಯಾಕೆ? ಯಾಕೆ ರಸ್ತೆ ಮೇಲೆ ಸಿಎಂ ಹೋಗುತ್ತಿಲ್ಲ? ಸಿಎಂ ಏನು ದೆಹಲಿಯಿಂದಲೋ ಮುಂಬೈಯಿಂದಲೋ ಬರುತ್ತಿದ್ದಾರಾ? ರಸ್ತೆಗಳಲ್ಲಿ ರಸ್ತೆಗುಂಡಿಗಳಿವೆ ಅದಕ್ಕೇ ಸಿಎಂ ರಸ್ತೆ ಮಾರ್ಗದಲ್ಲಿ ನೆರೆಪೀಡಿತ ಪ್ರದೇಶಗಳ ಭೇಟಿ ಮಾಡುತ್ತಿಲ್ಲ. ರಸ್ತೆ ಮಾರ್ಗದಲ್ಲಿ ಹೋದರೆ ಜನ ಘೇರಾವ್‌ ಹಾಕುತ್ತಾರೆ ಎಂದು ಭಯದಿಂದ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದಾರೆ

ಸರ್ಕಾರ ನೆರೆ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡಬೇಕಿತ್ತು. ಮಂತ್ರಿಗಳ, ಅಧಿಕಾರಿಗಳ ಒಂದು ತಂಡ ರಚಿಸಿ ಕಳಿಸಬೇಕಿತ್ತು. ಆದ್ರೆ ಇದುವರೆಗೆ ಒಬ್ಬೇಒಬ್ಬ ಮಂತ್ರಿ ನೆರೆ ಪ್ರದೇಶಗಳ ಕಡೆ ಸುಳಿದಿಲ್ಲ. ಇದು ಯಾವ ಸೀಮೆ ಸರ್ಕಾರ ಎಂದು ಜನರೇ ಪ್ರಶ್ನಿಸುತ್ತಿದ್ದಾರೆ. ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಸಚಿವ ಸಂಪುಟ ಪುನಾರಚನೆ ಬಗ್ಗೆ ಸಚಿವ ಜಮೀರ್‌ ಅಹಮದ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್‌, ಇದು ತಂತ್ರ ಇಲ್ಲದೇ ನಡೀತಿರುವ ಅತಂತ್ರ ಸರ್ಕಾರ. ಜಮೀರ್‌ ಹೇಳಿಕೆ ಅಕ್ಟೋಬರ್‌ ಕ್ರಾಂತಿ ಆಗುವುದರ ಸುಳಿವುಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಅಕ್ಟೋಬರ್‌ ಕ್ರಾಂತಿ ಆಗುವುದು ಪಕ್ಕಾ. ಕ್ರಾಂತಿ ಬಗ್ಗೆ ಮಾತನಾಡಲು ಹೋಗುತ್ತಿದ್ದಾರೆ. ರಾಜಣ್ಣ ವಜಾ ಆದರು. ಒಟ್ಟಿನಲ್ಲಿ ಅಕ್ಟೋಬರ್‌ ಕ್ರಾಂತಿ ಆಗುವುದು ಖಚಿತ . ಅಕ್ಟೋಬರ್‌ ಕ್ರಾಂತಿ ಆಗಿ ಸರ್ಕಾರ ಬಿದ್ದು ಹೋದರೆ ನಾವು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು.

ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್‌‍ ಸಚಿವರೇ ಹೇಳುತ್ತಿದ್ದಾರೆ. ಇದು ಅಸ್ಥಿರ ಸರ್ಕಾರ. ನಾವು ನಾಲ್ಕೈದು ತಿಂಗಳಿನಿಂದ ಅಕ್ಟೋಬರ್‌ ಕ್ರಾಂತಿ ಬಗ್ಗೆ ಹೇಳುತ್ತಿದ್ದೆವು. ಈಗ ಮಂತ್ರಿಯೇ ಕ್ಯಾಬಿನೆಟ್‌ ಪುನರ್‌ ರಚನೆ ಎಂದು ಹೇಳಿದ್ದಾರೆ. ಪುನರ್‌ ರಚನೆ ಅಂದರೆ ಮುಖ್ಯಮಂತ್ರಿಯೂ ಸೇರಿ ಬದಲಾಗುತ್ತಾರೆ, ಅಕ್ಟೋಬರ್‌ ಕ್ರಾಂತಿ ಎಂದ ಕಾಂಗ್ರೆಸ್‌‍ ನಾಯಕರು ಮನೆಗೆ ಹೋಗಿದ್ದಾರೆ. ಈಗ ಹೇಳುತ್ತಿರುವವರೂ ಮನೆಗೆ ಹೋಗುತ್ತಾರೆ ಎಂದರು.

ಕಲ್ಯಾಣ ಕರ್ನಾಟಕ ಪ್ರವಾಹ : ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.30- ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದ 6-7 ಜಿಲ್ಲೆಗಳು ಜಲಾವೃತವಾಗಿದ್ದು, ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಪರಿಹಾರ ಕಾರ್ಯಗಳಿಗೆ ತತ್ವಾರ ಎದುರಾಗಿದೆ. ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್‌, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆಗಳಲ್ಲಿ ಜಲ ಪ್ರಳಯದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಗಳು ಜಲ ದಿಗ್ಬಂಧನಕ್ಕೊಳಗೊಂಡಿವೆ. ಊರು ಕೆರೆಯಂತಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು, ಎಲೆಕ್ಟ್ರಾನಿಕ್‌ ಸಲಕರಣೆಗಳು ನೀರಿನಿಂದ ಹಾನಿಗೊಳಗಾಗಿವೆ.

ಕಳೆದ ನಾಲ್ಕೈದು ದಿನಗಳಿಂದಲೂ ನೆರೆ ಹಾವಳಿ ನಿರಂತರವಾಗಿದೆ. ಭೀಮಾ ನದಿ ಪಾತ್ರದಲ್ಲಿ ಜನ ಪರದಾಡುವಂತಾಗಿದೆ. ಜೊತೆಗೆ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ, ಪರಿಹಾರ ಕಾರ್ಯಗಳಿಗೂ ಕಷ್ಟವಾಗಿದೆ. ಬೆಳೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಇನ್ನೂ ಕೆಲವು ಕಡೆ ನೀರು ನಿಂತು ಕೊಳೆಯಲಾರಂಭಿಸಿವೆ. ರಸ್ತೆ ಸೇತುವೆಗಳು ಹಾನಿಗೊಳಗಾಗಿವೆ. ಜಿಲ್ಲಾಡಳಿತಗಳು ಪುನರ್ವಸತಿ ಕೇಂದ್ರಗಳನ್ನು ತೆರೆದು ಜನರಿಗೆ ನೀರು, ಆಹಾರ, ವೈದ್ಯಕೀಯ ನೆರವು ಒದಗಿಸುತ್ತಿವೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಮಹಾರಾಷ್ಟ್ರದ ಜಲಾಶಯಗಳಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರನ್ನು ಹರಿಯ ಬಿಟ್ಟಿರುವುದರಿಂದಾಗಿ ಮತ್ತಷ್ಟು ಪ್ರವಾಹಪರಿಸ್ಥಿತಿ ಎದುರಾಗಿದೆ. ಜನ ಜಾನುವಾರುಗಳ ಪ್ರಾಣ ರಕ್ಷಣೆಗೆ ಸವಾಲಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಖ್ಯಮಂತ್ರಿಯಿಂದ ಸಮೀಕ್ಷೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನೆರೆಬಾಧಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಮಧ್ಯಾಹ್ನ ಕಲಬುರಗಿಯಲ್ಲಿ ಯಾದಗಿರಿ, ವಿಜಯಪುರ, ಕಲಬುರಗಿ, ಬೀದರ್‌ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

ವೈಮಾನಿಕ ಸಮೀಕ್ಷೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು.

ನೆರೆ ಸಂತ್ರಸ್ಥ ಪ್ರದೇಶಗಳಿಗೆ ರಾಜ್ಯಸರ್ಕಾರವೇ ತ್ವರಿತ ಸ್ಪಂದನೆ ನೀಡಿದ್ದು, ಮತ್ತಷ್ಟು ಸಹಾಯಕ್ಕಾಗಿ ಜನ ಯಾಚಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಏಕಾಏಕಿ ಹೆಚ್ಚುವರಿ ನೀರು ಹರಿಯ ಬಿಟ್ಟಿರುವುದರಿಂದ ಕರ್ನಾಟಕದಲ್ಲಿ ಸಮಸ್ಯೆಗಳಾಗುತ್ತಿವೆ ಎಂಬ ಅಸಮಾಧಾನ ನಾಯಕರಿಂದ ಕೇಳಿ ಬರುತ್ತಿವೆ.

ತಿಮರೋಡಿ ಗಡೀಪಾರಿಗೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು. ಸೆ.30- ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಹಾಗೂ ನಿಗೂಢವಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯ ಪರ ಹೋರಾಟ ನಡೆಸುತ್ತಿದ್ದ ಮಹೇಶ್‌ ತಿಮರೋಡಿ ಗಡಿಪಾರಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ತಮನ್ನು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಿರುವುದನ್ನು ಪ್ರಶ್ನಿಸಿ ತಿಮರೋಡಿ ಪರ ವಕೀಲರು ಹೈಕೋರ್ಟ್‌ಗೆ ಮೇಲನವಿ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌ ರಜಾಕಾಲೀನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರು ಗಡಿಪಾರಿಗೆ ತಡೆಯಾಜ್ಞೆ ನೀಡಿ ಆರೋಪಿ ವಿರುದ್ದ ಯಾವುದೇ ರೀತಿಯ ಬಲವಂತದ ಕ್ರಮ ಬೇಡ ಎಂದು ನಿರ್ದೇಶನ ನೀಡಿತು.

ಮುಂದಿನ ಅ.8ರವರೆಗೆ ಗಡಿಪಾರು ಮಾಡದಂತೆ ಸೂಚನೆ ನೀಡಿದ ನ್ಯಾಯಾಧೀಶರು ರಾಜ್ಯ ಗೃಹ ಇಲಾಖೆ ಪುತ್ತೂರು ಸಹಾಯಕ ಆಯುಕ್ತರು, ಭಂಟ್ವಾಳ ಉಪವಿಭಾಗದ ಉಪಪೊಲೀಸ್‌‍ ವರಿಷ್ಠಾಧಿಕಾರಿ ಮತ್ತು ಬೆಳ್ತಂಗಡಿ ಪೊಲೀಸ್‌‍ ಸಬ್‌ ಇನ್‌ಸ್ಪೆಕ್ಟರ್‌ ಅವರಿಗೂ ನೋಟಿಸ್‌‍ ಜಾರಿ ಮಾಡಿದೆ.

ತಮ ವಿರುದ್ಧ ಹೊರಡಿಸಿರು ಗಡಿಪಾರು ಆದೇಶವನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೂ ಆದೇಶ ಜಾರಿಗೆ ತಡೆ ನೀಡುವಂತೆ ತಿಮರೋಡಿ ಪರ ವಕೀಲರು ಮನವಿ ಮಾಡಿಕೊಂಡಿದ್ದರು.

ಪ್ರಕರಣದ ಹಿನ್ನಲೆ:
ಧರ್ಮಸ್ಥಳದ ಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಮಂಗಳೂರಿನಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್‌‍ ಆದೇಶ ಹೊರಡಿಸಿದ್ದರು.
ಮಹೇಶ್‌ ತಿಮರೋಡಿ ವಿರುದ್ಧ ಸುಮಾರು 32 ವಿವಿಧ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡುವಂತೆ ಆಗ್ರಹಗಳು ವ್ಯಕ್ತವಾಗಿದ್ದವು. ಮಂಗಳೂರಿನಿಂದ ರಾಯಚೂರಿನ ಮಾನ್ವಿ ತಾಲೂಕಿಗೆ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷಗಳ ಕಾಲ ಗಡಿಪಾರು ಮಾಡಲಾಗಿತ್ತು.

ಪೊಲೀಸರು ಅಥವಾ ನ್ಯಾಯಾಲಯದ ಸೂಚನೆಗಳು ಅಗತ್ಯವಿದ್ದಾಗ ಮಾತ್ರ ತಿಮರೋಡಿ ಈ ಜಿಲ್ಲೆಯನ್ನು ಪ್ರವೇಶಿಸಬಹುದು. ಪೊಲೀಸರ ಪರವಾಗಿ ಬಂಟ್ವಾಳ ಉಪ ಪೊಲೀಸ್‌‍ ವರಿಷ್ಠಾಧಿಕಾರಿಮತ್ತು ತಿಮರೋಡಿ ಪರ ವಕೀಲರು ಈ ವಿಷಯಕ್ಕೆ ಕಾನೂನು ಪ್ರಾತಿನಿಧ್ಯವನ್ನು ಒದಗಿಸಿದ್ದು ಅಗತ್ಯವಿದ್ದರೆ ತಿಮರೋಡಿ ಸರ್ಕಾರ ಅಥವಾ ಹೈಕೋರ್ಟ್‌ನಲ್ಲಿ ವರ್ಗಾವಣೆ ಆದೇಶದ ಪುನರ್ವಿಮರ್ಶೆ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು.

ಕೆಲವು ದಿನಗಳ ಹಿಂದೆ, ಅವರ ಮನೆಯಲ್ಲಿ ಒಂದು ಚಾಕು ಮತ್ತು ಬಂದೂಕುಗಳು ಸಹ ಪತ್ತೆಯಾಗಿದ್ದವು. ಪೊಲೀಸರ ಪ್ರಕಾರ, ಬೆಳ್ತಂಗಡಿ ಪೊಲೀಸ್‌‍ ಠಾಣೆಯಲ್ಲಿ ತಿಮರೋಡಿ ವಿರುದ್ಧ
ನಾಲ್ಕು ಪ್ರಕರಣಗಳು ದಾಖಲಾಗಿತ್ತು. ಇವುಗಳ ಜೊತೆ ಬ್ರಹಾವರ ಪೊಲೀಸ್‌‍ ಠಾಣೆಯ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣವನ್ನು ಈಗಾಗಲೇ ಬೆಳ್ತಂಗಡಿಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಜಪ್ತಿ ಪ್ರಕ್ರಿಯೆಯ ಸಮಯದಲ್ಲಿ ತಿಮರೋಡಿ ಪೊಲೀಸರ ತಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಆರೋಪ ಎದುರಿಸುತ್ತಿದ್ದಾರೆ.

ಆಯುಧ ಪೂಜೆ ಹಾಗೂ ವಿಜಯದಶಮಿಗೆ ಖರೀದಿ ಭರಾಟೆ ಜೋರು

ಬೆಂಗಳೂರು,ಸೆ.30- ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂಭ್ರಮ ರಾಜ್ಯಾದ್ಯಂತ ಮನೆ ಮಾಡಿದ್ದು, ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.ಆಯುಧ ಪೂಜೆ ದಿನವಾದ ನಾಳೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಗುರುವಾರ ಸರ್ಕಾರಿ ರಜೆ ಇರುವುದರಿಂದ ಕೆಲವು ಕಚೇರಿಗಳು, ವ್ಯಾಪಾರ ಮಳಿಗೆಗಳು, ಗೋದಾಮು, ಕಾರ್ಖಾನೆಗಳಲ್ಲಿ ಇಂದೇ ಪೂಜೆ ನೆರವೇರಿಸಲಾಗಿದ್ದು, ಹೀಗಾಗಿ ಎರಡು ದಿನಗಳ ಮುಂಚಿತವಾಗಿಯೇ ಜನರು ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದ ದೃಶ್ಯಗಳು ಕಂಡುಬಂದವು.

ನಗರದ ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಗಾಂಧಿಬಜಾರ್‌, ವಿಜಯನಗರ, ಉಲ್ಲಾಳ ಮುಖ್ಯರಸ್ತೆ, ಮಹಾಲಕ್ಷ್ಮಿ ಲೇ ಔಟ್‌, ರಾಜಾಜಿನಗರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಹೂ-ಹಣ್ಣು, ಬಾಳೆಕಂದು, ನಿಂಬೆಹಣ್ಣು, ಬೂದುಕುಂಬಳಕಾಯಿ, ಕಡ್ಲೆಪುರಿ, ಸಿಹಿ ಪದಾರ್ಥಗಳ ಮಾರಾಟ ದೃಶ್ಯಗಳು ಕಂಡುಬಂದವು.

ವಾಹನಗಳಿಗೆ ಹಾಗೂ ಕಾರ್ಖಾನೆಗಳ ಯಂತ್ರೋಪಕರಣಗಳಿಗೆ ಹೆಚ್ಚಾಗಿ ಬಳಕೆಯಾಗುವ ಬೂದುಕುಂಬಳಕಾಯಿ ಬೆಲೆ ಹೆಚ್ಚಾಗಿದ್ದು, ಸಗಟು ದರದಲ್ಲಿ ಕೆಜಿಗೆ 25 ರೂ.ಗಳಿಂದ 30 ರೂ.ಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆಯಾಗಿ ಕೆಜಿಗೆ 40 ರಿಂದ 60 ರೂ. ಮಾರಾಟ ಮಾಡಲಾಗುತ್ತಿದೆ. ಇನ್ನೂ ಹಲವೆಡೆ ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಲಾಗಿದೆ.

ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧೆಡೆಯಿಂದ ಲೋಡ್‌ಗಟ್ಟಲೆ ಬೂದುಕುಂಬಳಕಾಯಿ ಬಂದಿದೆ. ಬೇಡಿಕೆ ಹೆಚ್ಚಾದ್ದರಿಂದ ಬೆಲೆಯೂ ಸಹ ಹೆಚ್ಚಳವಾಗಿದೆ. ಹಬ್ಬಗಳ ಸಂದರ್ಭದಲ್ಲಿ ಹೂಗಳ ಬೆಲೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಸೇವಂತಿ ಮಾರು 150 ರೂ., ಕೆಜಿಗೆ 200 ರೂ. ಚೆಂಡು ಹೂವಿನ ಬೆಲೆಯೂ ಸಹ ತುಸು ಏರಿಕೆಯಾಗಿದ್ದು, ಕೆಜಿಗೆ 50 ರೂ.ಗಳಿಂದ 60 ರೂ. , ಮಲ್ಲಿಗೆ 400 ರೂ.ಗಳಿಂದ 800 ರೂ., ಗುಲಾಬಿ 300 ರೂ., ಕನಕಾಂಬರ 1000 ರೂ., ಸುಗಂಧರಾಜ 300 ರೂ.ಗಳಿಗೆ ಮಾರಾಟವಾಗುತ್ತಿದೆ.

ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು, ದಾಳಿಂಬೆ 150 ರೂ., ಸೇಬು 150 ರೂ.ಗಳಿಂದ 200, ಮೂಸಂಬೆ 80 ರಿಂದ 100, ಏಲಕ್ಕಿ ಬಾಳೆ 120 ರೂ., ಪಚ್ಚಬಾಳೆ 50 ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಜೋಡಿ ಬಾಳೆಕಂದು ಗಾತ್ರಕ್ಕೆ ತಕ್ಕಂತೆ 50 ರೂ.ಗಳಿಂದ 500 ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿದೆ.