Home Blog Page 76

ಸಮರೋಪಾದಿಯಲ್ಲಿ ನೆರೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಎಚ್‌ಡಿಕೆ ಆಗ್ರಹ

ನವದೆಹಲಿ,ಸೆ.30- ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಲಘುವಾಗಿ ತೆಗೆದುಕೊಳ್ಳದೆ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ರಾಜ್ಯಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಉತ್ತಮ ಮಳೆಯಾಗಿ, ಹಲವು ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿವೆ. ರೈತರಿಗೂ ಖುಷಿಯಾಗಿತ್ತು. ಆದರೆ ರಾಜ್ಯದ ಹಲವೆಡೆ ಪ್ರವಾಹ ಉಂಟಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ಬೆಳಗಾವಿ ಭಾಗದಲ್ಲಿ ಪ್ರವಾಹ ಉಂಟಾಗಿದೆ ಎಂದರು.

ಪ್ರವಾಹಪೀಡಿತ 6 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದು, ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್‌ ಬೆಳೆಹಾನಿಯಾಗಿದೆ ಎಂಬ ಮಾಹಿತಿ ಇದೆ. ಮನೆಗಳಿಗೂ ನೀರು ನುಗ್ಗಿ ನಷ್ಟವಾಗಿದೆ. 12 ಗೋಶಾಲೆಗಳು ಮುಳುಗಿವೆ ಎಂಬ ಮಾಹಿತಿ ಇದೆ ಎಂದು ಹೇಳಿದರು.

ಮಹಾರಾಷ್ಟ್ರದಿಂದ 4.50 ಲಕ್ಷ ಕ್ಯೂಸೆಕ್ಸ್ ನಷ್ಟು ನೀರು ಹರಿದುಬರುತ್ತಿರುವುದರಿಂದ ದೊಡ್ಡಮಟ್ಟದಲ್ಲಿ ಅನಾಹುತ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರೂ ಯಾವೊಬ್ಬ ಸಚಿವರೂ ಭೇಟಿ ಕೊಟ್ಟು ಸಂತ್ರಸ್ತ ಜನರಿಗೆ ಧೈರ್ಯ ತುಂಬಿಲ್ಲ ಎಂದು ಆರೋಪಿಸಿದರು. ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಪ್ರವಾಹ ಉಂಟಾಗುತ್ತಿದ್ದು, ಪರಿಹಾರ ಕ್ರಮಗಳು ಆಗಿಲ್ಲ, ರೈತರಿಗೆ ಸರಿಯಾಗಿ ಸಾಲ ಸಿಗುತ್ತಿಲ್ಲ, 2 ದಿನಗಳ ಹಿಂದೆ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಮುಂದಾಗಿದ್ದೆ. ಹವಾಮಾನ ವೈಪರೀತ್ಯದ ಕಾರಣ ಅಧಿಕಾರಿಗಳು ಬೇಡ ಎಂದಿದ್ದರು. ತಕ್ಷಣವೇ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಿ ಎಂದು ಹೇಳಿದರು.

ಎಸಿ ರೂಂಗಳಲ್ಲಿರುವ ಮಂತ್ರಿಗಳನ್ನು ಪ್ರವಾಹಪೀಡಿತ ಪ್ರದೇಶಗಳಿಗೆ ಕಳುಹಿಸಿ. ಮಹಾರಾಷ್ಟ್ರದಲ್ಲಿ ಚೆಕ್‌ ಡ್ಯಾಂ ನಿರ್ಮಿಸಿ ನೀರು ನಿಲ್ಲಿಸಿ ಈಗ ಏಕಾಏಕಿ ಬಿಡುತ್ತಿದ್ದಾರೆ? ಈ ವಿಷಯ ಗೊತ್ತಿದ್ದರೂ ಸಚಿವ ಎಂ.ಬಿ.ಪಾಟೀಲ್‌ ಮೌನವಾಗಿ ಕೂತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌‍ನವರ ಧಂಗಳು ಈಗ ಎಲ್ಲಿ ಹೋಗಿವೆ?, ಪಾದಯಾತ್ರೆ ಮಾಡಿದ್ದರಲ್ಲವೇ? ಎಂದು ಪ್ರಶ್ನಿಸಿದ ಅವರು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಜೊತೆ ಸರಿದೂಗಿಸಿಕೊಂಡು ಹೋಗುತ್ತಿಲ್ಲ. ಒಂದೂವರೆ ವರ್ಷದಲ್ಲಿ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ಬರೀ ಬಯ್ಯುವುದೇ ಆಯಿತು. ಇದರ ಬದಲು ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಎಂದು ಹೇಳಿದರು.

ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಬೆಳೆನಾಶ ಹಾಗೂ ಮಳೆಹಾನಿಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ನನಗೆ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ಪ್ರವಾಹಪೀಡಿತ ಪ್ರದೇಶದಲ್ಲಿ ಒಂದು ವಾರ ಬಿಡಾರ ಹೂಡುತ್ತಿದ್ದೆ ಎಂದು ಹೇಳಿದರು.

ಪದೇಪದೇ ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಮಾಡಿಕೊಳ್ಳಬೇಡಿ. ವಿಶ್ವಾಸವಿಟ್ಟು ಸರಿಯಾದ ರೀತಿಯಲ್ಲಿ ನೆರವು ಕೇಳಿದರೆ ಸಿಗುತ್ತದೆ. ಈತನಕ ಕೇಂದ್ರ ಸಚಿವರನ್ನು ಯಾರೂ ಭೇಟಿ ಮಾಡಿಲ್ಲ. ಬೇಕಿಲ್ಲದ ವಿಷಯಗಳತ್ತ ರಾಜ್ಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ ಎಂದು ಅವರು ಟೀಕಿಸಿದರು.

ಬೆಂಗಳೂರಿನ ಉಸ್ತುವಾರಿ ಸಚಿವರು ಭಾರೀ ಬ್ಯುಸಿಯಾಗಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ನಗರ ಪ್ರದಕ್ಷಿಣೆ ಮಾಡಿದ್ದಾರೆ. ಮುಖ್ಯಮಂತ್ರಿ ಮುಚ್ಚಿದ ಗುಂಡಿ ನೋಡಿಕೊಂಡು ಮುಂದೆ ಹೋಗುತ್ತಿದ್ದರೆ. ಹಿಂದೆ ಹಾಕಿದ್ದ ಟಾರು ಕಿತ್ತುಕೊಂಡು ಹೋಗುತ್ತಿತ್ತು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ದಸರಾ ಹಬ್ಬದ ಹೆಸರಿನಲ್ಲಿ ಬಸ್‌‍ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಖಾಸಗಿ ಬಸ್‌‍ ಪ್ರಯಾಣದರಕ್ಕೆ ಪೈಪೋಟಿಗಿಳಿದು ಬಸ್‌‍ ದರ ಹೆಚ್ಚಿಸಿದ್ದಾರೆ ಎಂದು ಆರೋಪಿಸಿದರು.ಕಳೆದ 2006 ರಲ್ಲಿ 5 ಟೌನ್‌ಶಿಪ್‌ ನಿರ್ಮಿಸುವ ನಿರ್ಧಾರ ಮಾಡಿದ್ದು ನಿಜ. ಬಿಡದಿಯ ಟೌನ್‌ಶಿಪ್‌ ಬಗ್ಗೆ ಕಾಂಗ್ರೆಸ್‌‍ ನಾಯಕರೇ ಮಾಡಿದ ಸತ್ಯಶೋಧನಾ ಸಮಿತಿಯ ವರದಿಯನ್ನೊಮೆ ನೋಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದರು.

ಬಿಡದಿ ಬಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ನಾನು ಮಾಡಿರಲಿಲ್ಲ. ಈಗಾಗಲೇ 2-3 ಸಾವಿರ ಎಕರೆ ಭೂಮಿ ಕಥೆ ಏನಾಗಿದೆ? ಈ ವ್ಯವಸ್ಥೆಯಲ್ಲಿ ನೀವು ಮಾಡಿದ ಕರ್ಮ ತೊಳೆಯಲು ಆಗುವುದಿಲ್ಲ. ಕರ್ನಾಟಕದ ಸಂಪತ್ತು ಲೂಟಿ ಹೊಡೆಯುವುದನ್ನು ತಡೆಯಲು ಜನರು 5 ವರ್ಷ ಅಧಿಕಾರವನ್ನು ನೀಡಬೇಕು ಎಂದರು.

ಉಪಮುಖ್ಯಮಂತ್ರಿಯವರು ಎದೆಮುಟ್ಟಿ ಹೇಳಲಿ ಶಾಂತಿನಗರ ಹೌಸಿಂಗ್‌ ಸೊಸೈಟಿ ಹಾಗೂ ಎನ್‌ಟಿಐ ಪ್ರಕರಣಗಳೇನು ಎಂಬುದು ನನ್ನ ಬಳಿ ಎಲ್ಲಾ ದಾಖಲೆಗಳೂ ಇವೆ ಎಂದು ಹೇಳಿದರು.ಬೆಂಗಳೂರಿನ 59 ರಸ್ತೆಗಳನ್ನು ನನ್ನ ಅವಧಿಯಲ್ಲಿ ಅಭಿವೃದ್ಧಿ ಮಾಡಿದ್ದರೂ ಪ್ರಚಾರ ಪಡೆಯಲಿಲ್ಲ. ಸಿದ್ದರಾಮಯ್ಯ ಅವರೇ ನಿಮನ್ನು ಗೆಲ್ಲಿಸಿದ ಜನರ ಋಣ ತೀರಿಸಿ. ಜಾತಿಗಣತಿಯಿಂದ ಎಲ್ಲರ ಉದ್ಧಾರ ಆಗುವುದಿಲ್ಲ. ರಾಜಕೀಯಕ್ಕಾಗಿ ಮಾಡುತ್ತಿದ್ದೀರಿ. ಬಡವರ ನೆರವಿಗೆ ಬನ್ನಿ. ಜಾತಿಜಾತಿ ನಡುವೆ ಸಂಘರ್ಷ ತಂದಿಟ್ಟಿದ್ದೀರಿ ಎಂದು ಆರೋಪಿಸಿದರು. ಭಾವ ಮೈದುನನಿಗೆ ಅನುಕೂಲ ಮಾಡಿಕೊಡಲು ಕುಣಿಗಲ್‌ ಅನ್ನು ತುಮಕೂರಿನಿಂದ ಬೆಂಗಳೂರು ದಕ್ಷಿಣಕ್ಕೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇವರನ್ನು ಬಿಟ್ಟರೆ ಮಂಗಳೂರನ್ನೂ ಬೆಂಗಳೂರಿಗೆ ಸೇರಿಸುತ್ತಾರೆ ಎಂದು ಎಚ್‌ಡಿಕೆ ವ್ಯಂಗ್ಯವಾಡಿದರು.

ವಯೋಮಿತಿ ಸಡಿಲಿಕೆ ಕುರಿತು ಪೊಲೀಸ್‌‍ ಇಲಾಖೆಯಲ್ಲಿ ಒಂದುವಾರದೊಳಗಾಗಿ ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ; ಪರಂ

ಬೆಂಗಳೂರು, ಸೆ.30- ಪೊಲೀಸ್‌‍ ಇಲಾಖೆಯಲ್ಲಿ ಸಬ್‌ಇನ್ಸ್ ಪೆಕ್ಟರ್‌, ಕಾನ್ಸ್ ಟೆಬಲ್‌ ಹುದ್ದೆಗಳ ನೇಮಕಾತಿಗೆ ಶಾಶ್ವತವಾಗಿ ವಯೋಮಿತಿ ಸಡಿಲಿಕೆಗೆ ಒಂದುವಾರದೊಳಗಾಗಿ ವೃಂದಾ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ಇರುವುದಾಗಿ ಗೃಹ ಸಚಿವ ಡಾ. ಪರಮೇಶ್ವರ್‌ ಸ್ಪಷ್ಟ ಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿಯ ಕಾರಣಕ್ಕಾಗಿ ನೇಮಕಾತಿಗಳು ನಡೆಯದೇ ಬಹಳಷ್ಟು ಮಂದಿ ಅವಕಾಶ ವಂಚಿತರಾಗುತ್ತಿದ್ದರು. ಅಂತವರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಅವಧಿಗೆ ಸೀಮಿತಗೊಂಡಂತೆ 2027ರ ವರೆಗೆ ಎಲ್ಲಾ ಇಲಾಖೆಯ ನೇಮಕಾತಿಗಳಲ್ಲೂ ವಯೋಮಿತಿ ಸಡಿಲಿಸಿದ್ದಾರೆ ಎಂದರು.
ಪೊಲೀಸ್‌‍ ಇಲಾಖೆಯಲ್ಲಿ ಶಾಶ್ವತವಾಗಿ ವಯೋಮಿತಿ ಸಡಿಲಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಬೇರೆಬೇರೆ ರಾಜ್ಯಗಳಲ್ಲಿರುವ ವಯೋಮಿತಿಯ ಮಾಹಿತಿಯನ್ನು ಪಡೆಯಲಾಗಿದೆ. ಹಲವು ರಾಜ್ಯಗಳಲ್ಲಿ 27,30,33 ವರ್ಷಗಳವರೆಗೂ ವಯೋಮಿತಿ ಸಡಿಲಿಕೆಯಿದೆ. ನಮಲ್ಲೂ ಕಾನ್‌್ಸಟೆಬಲ್‌ ಮತ್ತು ಪೊಲೀಸ್‌‍ ಸಬ್‌ಇನ್ಸ್ ಪೆಕ್ಟರ್‌ ಹುದ್ದೆಗಳಿಗೆ ಶಾಶ್ವತವಾಗಿ ವಯೋಮಿತಿ ಸಡಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಧರ್ಮಸ್ಥಳದ ಪ್ರಕರಣದಲ್ಲಿ ತನಿಖೆ ವಿಳಂಬವಾಗುತ್ತಿದೆ ಎಂಬುವುದು ಸರಿಯಲ್ಲ. ಷಡ್ಯಂತ್ರ ಮಾಡಿದವರನ್ನು ಬಂಧಿಸಲು ಕಾನೂನಿನ ತೊಡಕುಗಳಿವೆ. ಬಹಳಷ್ಟು ವಿಚಾರಗಳಲ್ಲಿ ಎಫ್‌ಎಸ್‌‍ಎಲ್‌ ವರದಿಗಳು ಬಾಕಿ ಇವೆ. ಎಸ್‌‍ಐಟಿ ಅಧಿಕಾರಿಗಳು ತಮ ಪಾಲಿನ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಈ ವರೆಗೂ ಸಿಕ್ಕಿರುವ ಕೆಲ ಅಂಶಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಮೊದಲು ಸಿಕ್ಕಿರುವ ಅಂಶಗಳನ್ನು ಕ್ರೊಡೀಕರಿಸಿದ್ದಾರೆ. ಶೀಘ್ರದಲ್ಲೇ ತನಿಖೆ ಪೂರ್ಣ ಗೊಳಿಸಲು ಸೂಚಿಸಲಾಗಿದೆ ಎಂದರು.

ಈ ನಡುವೆ ಸಿಕ್ಕವರೆಲ್ಲಾ ಅರ್ಜಿ ಕೊಡುತ್ತಿದ್ದಾರೆ. ಅಲ್ಲಿ ಮೂಳೆಗಳಿವೆ. ಇಲ್ಲಿ ಮೂಳೆಗಳಿವೆ ಎಂದು ಹೇಳುತ್ತಿದ್ದಾರೆ. ಇಂತಹ ವಿಚಾರಗಳಿಗೆ ಕೊನೆಯಾಡಬೇಕಿದೆ ಎಂದರು.ಮಹೇಶ್‌ ತಿಮರೋಡಿ ಗಡಿಪಾರು ಪ್ರಕರಣವನ್ನು ನ್ಯಾಯಾಲದಲ್ಲಿ ಪ್ರಶ್ನಿಸಲಾಗಿದೆ. ಅಲ್ಲಿನ ತೀರ್ಪನ್ನು ಕಾಯುತ್ತಿದ್ದೇವೆ. ಎಲ್ಲವನ್ನೂ ಕಾನೂನಿನ ಪ್ರಕಾರವೇ ಬಂಧನ ಸೇರಿದಂತೆ ಎಲ್ಲಾ ಪ್ರಕ್ರಿಯಗಳನ್ನು ನಡೆಸಲಾಗುತ್ತದೆ. ಎಸ್‌‍ಐಟಿಗೆ ಸರ್ಕಾರ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ ಎಂದರು.

ತನಿಖೆಯ ಹಂತದಲ್ಲಿ ಇಂತಿಷ್ಟೇ ಕಾಲಮಿತಿ ಎಂದು ನಿಗಧಿಪಡಿಸಲು ಸಾಧ್ಯವಿಲ್ಲ. ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಪ್ರಮುಖ ಮಾಹಿತಿಗಳ ಅಗತ್ಯವಿರುತ್ತದೆ. ಎಫ್‌ಎಸ್‌‍ಎಲ್‌ನ ವರದಿ ಅಂತಿಮಗೊಳ್ಳಬೇಕು. ಸುಪ್ರೀಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಗೊಂಡಿರುವ ವಿಚಾರವನ್ನು ಎಸ್‌‍ಐಟಿ ಅಧಿಕಾರಿಗಳು ಪರಿಗಣಿಸಿ ತಮ ವರದಿಯಲ್ಲಿ ಉಲ್ಲೇಖಿಸಬಹುದು ಎಂದು ಪರಮೇಶ್ವರ್‌ ಹೇಳಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಮಾಹಿತಿ ಕೊಡಬಾರದು ಜನ ಬಹಿಷ್ಕಾರ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದ ತೇಜಸ್ವಿಸೂರ್ಯ ಹೇಳಿಕೆ ಸರಿಯಲ್ಲ. 2026ರಲ್ಲಿ ಕೇಂದ್ರ ಸರ್ಕಾರ ಜನಗಣತಿ ಮತ್ತು ಜಾತಿಗಣತಿ ನಡೆಸಲಿದೆ. ಆ ಸಂದರ್ಭದಲ್ಲಿ ಬೇರೆಯರು ಮತ್ತೊಂದು ರೀತಿಯ ಹೇಳಿಕೆ ನೀಡುವಂತಾಗಬಾರದು. ಕೇಂದ್ರ ಸರ್ಕಾರದ ಜನಗಣತಿಯಲ್ಲಿ ಭಾಗವಹಿಸಬೇಡಿ ಎಂದು ಹೇಳಿದರೆ ಸರಿಹೋಗಲಿದೆಯೇ ಎಂದರು.

ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಯಲ್ಲಿ ದುರುಪಯೋಗವಾಗುವಂತಹದು ಏನಿದೆ? ಜನರ ಸ್ಥಿತಿಗತಿ ತಿಳಿದುಕೊಳ್ಳುವ ಸಲುವಾಗಿಯೇ ಸಮೀಕ್ಷೆ ನಡೆಸಲಾಗುತ್ತಿದೆ. ಅದಕ್ಕೂ ಅಡ್ಡಿ ಪಡಿಸಲಾಗುತ್ತಿದೆ. ವಾಸ್ತವಾಂಶಗಳ ಮಾಹಿತಿ ಸಿಗದೇ ಇದ್ದರೆ, ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವುದು ಹೇಗೆ ಎಂದು ಪ್ರಶ್ನಿಸಿದರು.

ಸಮೀಕ್ಷೆ ನಿಗದಿತ ಕಾಲಾವದಿಯಲ್ಲಿ ಪೂರ್ಣಗೊಳ್ಳಲಿದೆ. ಉದಾಹರಣೆಗೆ ತುಮಕೂರು ಜಿಲ್ಲೆಯಲ್ಲಿ 7 ಲಕ್ಷ ಕುಟುಂಬಗಳಿವೆ. ಈಗಾಗಲೇ 2 ಲಕ್ಷ ಕುಟುಂಗಳು ಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಕಾಲಾವದಿಯಲ್ಲಿ ಬಾಕಿ ಮನೆಗಳ ಸಮೀಕ್ಷೆ ಮುಗಿಯಲಿದೆ ಎಂದು ಹೇಳಿದರು.

ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಯಾವುದೇ ಗೊಂದಲಗಳಿಲ್ಲ ಮುಖ್ಯಮಂತ್ರಿ ಅವರರ ಹಿಡಿತ ಸಡಿಲವಾಗುತ್ತಿದೆ ಎಂಬುದನ್ನು ಸದ್ಯಕ್ಕೆ ದೂರವಾದ ವಿಚಾರ. ಪಕ್ಷದ ಅಧ್ಯಕ್ಷರೂ, ಮುಖ್ಯಮಂತ್ರಿ ಅವರು ಚರ್ಚೆ ಮಾಡಿ ಹೈಕಮಾಂಡ್‌ ಅವರ ಗಮನಕ್ಕೆ ತಂದು ನೇಮಕಾತಿ ಮಾಡಲಾಗುತ್ತಿದೆ. ಈ ಹಿಂದೆ ನಾನು ಅಧ್ಯಕ್ಷನಾಗಿದ್ದಾಗಲೂ ಇದೇ ರೀತಿ ನಡೆದಿತ್ತು. ಹೈಕಮಾಂಡ್‌ಗೆ ಪಟ್ಟಿ ಸಲ್ಲಿಸಿ ಅನುಮತಿ ಪಡೆದು ನಂತರ ನೇಮಕಾತಿ ಪಡೆಯುವ ಪರಿಪಾಟ ಇಲ್ಲ.

ನಿಗಮ ಮಂಡಳಿಗಳ ನಿರ್ದೇಶಕರ ನೇಮಕಾತಿಗೆ 11 ಜನರ ಸಮಿತಿಯನ್ನು ತಮ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ನಾವು ಪಟ್ಟಿ ನೀಡಿದ್ದೇವೆ. ಅದರಲ್ಲಿ ಸೇರ್ಪಡೆ ಹಾಗೂ ತೆಗೆದುಹಾಕುವ ಮೂಲಕ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದರು.
ಶೇ.50 ರಷ್ಟು ಸಚಿವರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ನೀಡಿರುವ ಹೇಳಿಕೆ ತಮಗೆ ಗೊತ್ತಿಲ್ಲ. ಸಂಪುಟ ವಿಚಾರದಲ್ಲಿ ಸಿಎಂ ಮತ್ತು ಹೈಕಮಾಂಡ್‌ನ ವಿವೇಚನೆಗೆ ಬಿಟ್ಟಿದೆ. ಎರಡೂವರೆ ವರ್ಷದಲ್ಲಿ ಬದಲಾವಣೆ ಬಗ್ಗೆ ತಮಗೆ ಗೊತ್ತಿಲ್ಲ. ಹೈಕಮಾಂಡ್‌ ಸೇರಿದಂತೆ ಯಾರೂ ತಮ ಬಳಿ ಈ ವಿಚಾರ ಚರ್ಚೆಯಾಗಿಲ್ಲ ಎಂದರು.

ತುಮಕೂರನ್ನು ವಿಸ್ತರಣೆ ಮಾಡಿ, ಗ್ರೇಟರ್‌ ತುಮಕೂರು ರಚನೆ ಮಾಡಲು ನಾವು ಚರ್ಚೆ ಮಾಡಿದ್ದೇವೆ. ಕುಣಿಗಲ್‌ ತಾಲ್ಲೂಕ ಅನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.ತುಮಕೂರು ದಸರಾ ಹಬ್ಬದ ವಾತಾವರಣ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಹುಲ್‌ಗಾಂಧಿ ಎದೆಗೆ ಗುಂಡುಹಾರಿಸುತ್ತೇವೆ ಎಂಬ ಹೇಳಿಕೆ : ಹರಿಪ್ರಸಾದ್‌ ಖಂಡನೆ

ಬೆಂಗಳೂರು, ಸೆ.30- ರಾಹುಲ್‌ಗಾಂಧಿ ಅವರ ಎದೆಗೆ ಗುಂಡುಹಾರಿಸುತ್ತೇವೆ ಎಂದು ಬಿಜೆಪಿ ವಕ್ತಾರ ನೀಡಿರುವ ಹೇಳಿಕೆ ಬಾಯಿ ತಪ್ಪಿನಿಂದ ಬಂದಿರುವುದು ಅಲ್ಲ. ಭಾರಿ ಪಿತೂರಿ ನಡೆದಿರುವುದರ ಸಂಕೇತ ಎಂದು ಹಿರಿಯ ಕಾಂಗ್ರೆಸ್ಸಿಗ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಆತಂಕ ವ್ಯಕ್ತಪಡಿಸಿದ್ದಾರೆ.

ತಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸತ್ಯ, ಶಾಂತಿ, ಸೌಹಾರ್ದತೆ, ನ್ಯಾಯ-ನೀತಿಯ ಪ್ರತಿರೂಪವಾಗಿ ಬಾಳಿ ಬದುಕಿದ್ದ ಮಹಾತಾ ಗಾಂಧಿಯವರ ಎದೆಗೆ ಗುಂಡಿಕ್ಕಿ ಕೊಂದ ಸಂತತಿಯವರೇ ಇಂದು ದೇಶದ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಎದೆಗೆ ಗುಂಡಿಕ್ಕಿ ಕೊಲೆ ಮಾಡುತ್ತೇವೆ ಎಂದು ಘೋಷಿಸಿದ್ದಾರೆ. ಬಿಜೆಪಿಯ ಕೊಲೆಗಡುಕ ಸಂಸ್ಕೃತಿಯ ಮುಖವಾಡಕ್ಕೆ ಇದು ಕೈಗನ್ನಡಿ ಎಂದಿದ್ದಾರೆ.

ದೇಶದ ಕೋಟ್ಯಂತರ ಜನರ ನ್ಯಾಯಕ್ಕಾಗಿ ಹೋರಾಡುತ್ತಿರುವ ರಾಹುಲ್‌ ಗಾಂಧಿಯವರಿಗೆ ಈಗಾಗಲೇ ಬಿಜೆಪಿಯ ನಾಯಕರು ಬೆದರಿಕೆ ಒಡ್ಡುತ್ತಿದ್ದಾರೆ. ಈಗ ಪಕ್ಷದ ವಕ್ತಾರರೇ ಖಾಸಗಿ ಸುದ್ದಿ ವಾಹಿನಿಯಲ್ಲಿ ಬಹಿರಂಗವಾಗಿಯೇ ಬಿಜೆಪಿಯ ವಿರುದ್ಧ ರಾಹುಲ್‌ ಗಾಂಧಿ ಮಾತಾಡಿದರೆ ಗುಂಡು ಹಾರಿಸುತ್ತೇವೆ ಎಂದು ಹೇಳಿಕೆ ನೀಡುವುದು ರಾಹುಲ್‌ ಗಾಂಧಿಯವರ ವಿರುದ್ಧ ಗಂಭಿರವಾಗಿ ಭಾರಿ ಪಿತೂರಿ ನಡೆಸಿರುವುದರ ಸಂಕೇತ ಎಂದು ಹರಿಪ್ರಸಾದ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರ ವಿರುದ್ಧ ಬಿಜೆಪಿ ನಾಯಕರು ಕೊಲೆಗೆ ಪ್ರಚೋದನೆ ನೀಡುವುದು ಬಾಯಿ ತಪ್ಪಿನಿಂದಲ್ಲ, ಬಿಜೆಪಿಯ ಉದ್ದೇಶ ಬಹಿರಂಗಗೊಂಡಿದೆ. ಇಂತಹ ಅಪಾಯವನ್ನು ದೇಶದ ಪ್ರತಿಯೊಬ್ಬ ನಾಯಕರು ಖಂಡಿಸಬೇಕಿದೆ ಎಂದಿದ್ದಾರೆ.

ದೇಶದ ವಿರೋಧ ಪಕ್ಷದ ನಾಯಕರನ್ನೇ ಬಹಿರಂಗವಾಗಿ ಗುಂಡಿಕ್ಕಿ ಕೊಲೆ ಮಾಡುತ್ತೇವೆ ಎನ್ನುವುದು ಬಿಜೆಪಿಯ ದ್ವೇಷಮಯ ರಾಜಕೀಯದ ಪರಮಾವಧಿ. ಕೂಡಲೇ ಬಿಜೆಪಿ ಪಕ್ಷ ಕೊಲೆ ಹೇಳಿಕೆ ನೀಡಿರುವ ವಕ್ತಾರನನ್ನು ಪಕ್ಷದಿಂದ ಉಚ್ಚಾಟಿಸಿ ದೇಶದ ಜನರೆದುರು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.

ಕಾರು ಡಿಕ್ಕಿಯಾಗಿ ದೇವಸ್ಥಾನದ ಮೆಟ್ಟಿಲಲ್ಲಿ ಕುಳಿತಿದ್ದ ವೃದ್ಧೆ ಸಾವು

ಬೆಂಗಳೂರು,ಸೆ.30-ದೇವರ ದರ್ಶನ ಪಡೆದು ಮೆಟ್ಟಿಲಿನ ಮೇಲೆ ಕುಳಿತಿದ್ದ ವೃದ್ಧೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಚಿಕ್ಕಬಾಣವಾರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ದಾಸರಹಳ್ಳಿ ನಿವಾಸಿ ಗಂಗಮ (65) ಮೃತಪಟ್ಟ ವೃದ್ಧೆ. ಕಾರು ಚಾಲಕ ಅಪಘಾತದ ನಂತರ ಪರಾರಿಯಾಗಿದ್ದಾನೆ.ನಿನ್ನೆ ಸಂಜೆ ಗಂಗಮ ಅವರು ದಾಸರಹಳ್ಳಿಯ ನೆಲಮಹೇಶ್ವರಮ ದೇವಸ್ಥಾನಕ್ಕೆ ಹೋಗಿದ್ದು, ದೇವಿ ದರ್ಶನ ಪಡೆದು ನಂತರ ಮಾರುತಿ ಮಂದಿರದಲ್ಲಿ ದರ್ಶನ ಮಾಡಿ, ಮಂದಿರದ ಮೆಟ್ಟಿಲುಗಳ ಮೇಲೆ 7 ಗಂಟೆ ಸುಮಾರಿನಲ್ಲಿ ಕುಳಿತಿದ್ದರು.

ಆ ಸಂದರ್ಭದಲ್ಲಿ ಅದೇ ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದ ವ್ಯಕ್ತಿ ಪೂಜೆ ಮುಗಿಸಿಕೊಂಡು ಕಾರನ್ನು ಪಾರ್ಕ್‌ ಮಾಡಿದ್ದ ಸ್ಥಳದಿಂದ ತೆಗೆದುಕೊಳ್ಳುವಾಗ ಅತೀ ವೇಗವಾಗಿ ಚಾಲನೆ ಮಾಡಿದ್ದರಿಂದ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಗಂಗಮ ಅವರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಗಂಗಮ ಕೆಳಗೆ ಬಿದ್ದಿದ್ದು ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಪೆಟ್ಟಾಗಿದೆ. ಇದರಿಂದ ಗಾಬರಿಗೊಂಡ ಚಾಲಕ ಸ್ಥಳದಲ್ಲೇ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ.
ಅಪಘಾತ ಗಮನಿಸಿ ಸಂಬಂಧಿಯೊಬ್ಬರು ವೃದ್ಧೆಯ ಸಹಾಯಕ್ಕೆ ದಾವಿಸಿ, ಅದೇ ಕಾರಿನಲ್ಲಿ ಗಂಗಮ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತಕ್ಷಣ ವೈದ್ಯರು ಪರೀಕ್ಷಿಸಿದ್ದು, ಈ ವೃದ್ಧೆ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಚಿಕ್ಕಬಾಣವಾರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕನ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

ಹಾಸನ : ಮನೆಯೊಂದರಲ್ಲಿ ನಿಗೂಢ ಸ್ಫೋಟ, ದಂಪತಿಗೆ ಗಂಭೀರ ಗಾಯ

ಹಾಸನ,ಸೆ.30- ಮನೆಯೊಂದರಲ್ಲಿ ಸಂಭವಿಸಿದ ನಿಗೂಢ ಸ್ಫೋಟದಿಂದ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಲೂರು ತಾಲ್ಲೂಕಿನ ಹಳೆ ಆಲೂರಿನಲ್ಲಿ ನಡೆದಿದೆ.
ಸುದರ್ಶನ್‌ ಆಚಾರ್‌ (32), ಕಾವ್ಯ(27) ಗಾಯಗೊಂಡ ದಂಪತಿ.

ಮನೆಯಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ರಭಸಕ್ಕೆ ದಂಪತಿಗೆ ಗಂಭೀರವಾಗಿ ಗಾಯಗಳಾಗಿದ್ದು, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ದಂಪತಿಗೆ ಹಾಸನದ ಹಿಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ರವಾನಿಸಲಾಗಿದೆ. ಮನೆಯಲ್ಲಿ ಯಾವ ವಸ್ತುವಿನಿಂದ ಸ್ಫೋಟಗೊಂಡಿದೆ ಎಂಬುದರ ಬಗ್ಗೆ ಆಲೂರು ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಿಂಸಾಚಾರ ಒಬ್ಬ ಸಾವು, ಹಲವರಿಗೆ ಗಾಯ

ಇಸ್ಲಮಾಬಾದ್‌,ಸೆ.30-ಪಾಕಿಸ್ತಾನ ಆಕ್ರಮಿತ ಕಾಶೀರದಲ್ಲಿ (ಪಿಒಕೆ) ಜೆಕೆಜೆಎಎಸಿ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದು ಒಬ್ಬ ಸಾವನ್ನಪ್ಪಿ,ಪೊಲೀಸರು ಸೇರಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ವಿವಿಧ ಬೇಡಿಕೆ ಈಡೇಕಿಕೆಗೆ ಒತ್ತಾಯಿಸಿ ಕರೆ ನೀಡಿದ್ದ ಮುಷ್ಕರ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಗುಂಪುಗಳು ಏಕಕಾಲದಲ್ಲಿ ಪ್ರತಿಭಟನೆಗಳನ್ನು ನಡೆಸಿದೆ,ಶಾಂತಿಯುತ ಪ್ರತಿಭಟನೆ ಏಕಾಏಕಿ ಎರಡೂ ಕಡೆಯವರು ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಪರಸ್ಪರ ಆರೋಪಿಸಲಾಗಿದೆ.

ಪಿಒಕೆಯಲ್ಲಿ ಮೊಬೈಲ್‌ ಮತ್ತು ಇಂಟರ್ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.ನೀಲಂ ಸೇತುವೆಯ ಸುತ್ತಲೂ ಸಾವುನೋವುಗಳು ಸಂಭವಿಸಿವೆ, ಮುಸ್ಲಿಂ ಕಾನ್ಫರೆನ್‌ನಾಯಕ ರಾಜಾ ಸಾಕಿಬ್‌ ಮಜೀದ್‌ ನೇತೃತ್ವದ ಶಾಂತಿ ರ್ಯಾಲಿ ವೇಳೆ ಜೆಕೆಜೆಎಸಿ ಸದಸ್ಯರು ಘರ್ಷಣೆಗೆ ಇಳಿದರು.

ಯಾವುದೇ ಪ್ರಚೋದನೆಯಿಲ್ಲದೆ ಜೆಕೆಜೆಎಎಸಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಮಜೀದ್‌ ಅವರ ಬೆಂಗಾವಲು ಪಡೆಯನ್ನು ಹಾದುಹೋಗಲು ಪ್ರತಿಭಟನಾಕಾರರು ಸ್ಥಳಾವಕಾಶ ಕಲ್ಪಿಸಲು ಪ್ರಯತ್ನಿಸಿದರು, ಆದರೆ ಅವರ ತಂಡದ ಸದಸ್ಯರು ತಮ್ಮ ವಾಹನಗಳಿಂದ ಹೊರಬಂದು ಅವರ ಮೇಲೆ ದಾಳಿ ಮಾಡಿದರು
ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಕೆಲವರನ್ನು ರಕ್ಷಿಸಿದ್ದಾರೆ. ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ,ಗುಂಡು ಹಾರಿಸಿದರು. ರಾವಲಕೋಟ್‌ ಮತ್ತು ಸುಧ್ನೋಟಿಯಲ್ಲೂ ಇದೇ ರೀತಿಯ ಸಭೆಗಳು ನಡೆದಿವೆ

ನ್ಯೂಜಿಲೆಂಡ್‌ ವಿರುದ್ದ ಸರಣಿಯಿಂದ ಗ್ಲೆನ್‌ ಮ್ಯಾಕ್ಸ್ ವೆಲ್‌‍ ಔಟ್‌

ಮೆಲ್ಬೋರ್ನ್‌,ಸೆ.30- ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ಗ್ಲೆನ್‌ ಮ್ಯಾಕ್ಸ್ ವೆಲ್‌‍ ಅವರು ಮೌಂಟ್‌ ಮೌಂಗನುಯಿಯಲ್ಲಿ ನೆಟ್ಸ್ ನಲ್ಲಿ ಬೌಲಿಂಗ್‌ ಮಾಡುವಾಗ ಮಣಿಕಟ್ಟಿನ ಮುರಿತ ಗಾಯವಾಗಿದೆ.ಇದರಿಂದ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ್ದು ಮುಂದಿನ ನ್ಯೂಜಿಲೆಂಡ್‌ ವಿರುದ್ಧದ ಮೂರು ಟಿ 20 ಪಂದ್ಯಗಳ ಸರಣಿಯಿಂದ ಹೊರಬಿದಿದ್ದಾರೆ.

ವಿಕೆಟ್‌ ಕೀಪರ್‌/ಬ್ಯಾಟರ್‌ ಜೋಶ್‌ ಫಿಲಿಪ್‌ ಅವರನ್ನು ಬುಧವಾರದಿಂದ ಮೌಂಟ್‌ ಮೌಂಗನುಯಿಯಲ್ಲಿರುವ ಬೇ ಓವಲ್‌ನಲ್ಲಿ ನಡೆಯಲಿರುವ ಸರಣಿಗೆ ಕರೆಸಲಾಗಿದೆ. ಸರಣಿಯ ಪೂರ್ವಭಾವಿ ಹಂತದಲ್ಲಿ ಜೋಶ್‌ ಇಂಗ್ಲಿಸ್‌‍ ಅವರ ಕಾಲಿನ ಗಾಯದಿಂದ ಹೊರಗುಳಿದಿರುವುದು ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದುಹಿನ್ನಡೆಯಾಗಿದೆ, ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿ ಗೆಲುವಿನಲ್ಲಿ ಅಜೇಯ ಅರ್ಧಶತಕ ಗಳಿಸಿದ 36 ವರ್ಷದ ಮ್ಯಾಕ್ಸ್ ವೆಲ್‌‍ ನೆಟ್ಸ್ ನಲ್ಲಿ ಬೌಲಿಂಗ್‌ ಮಾಡುವಾಗ ಬಲ ಮಣಿಕಟ್ಟಿಗೆ ಪೆಟ್ಟು ಬಿದ್ದಿದೆ.

ಮ್ಯಾಕ್ಸ್ ವೆಲ್‌‍ ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ ಮತ್ತು ತಜ್ಞರನ್ನು ಭೇಟಿಯಾಗಲಿದ್ದಾರೆ. ಅವರ ಬದಲಿ ಆಟಗಾರ ಫಿಲಿಪ್‌ ಇತ್ತೀಚಿನ ಭಾರತ ಪ್ರವಾಸದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮುಂಬರುವ ಆಶಸ್‌‍ ಸರಣಿಗೆ ಆದ್ಯತೆ ನೀಡಲಾಗುತ್ತಿದೆ.ಬೆನ್ನು ನೋವಿನಿಂದಾಗಿ ಪ್ರಮುಖ ವೇಗಿ ಹಾಗು ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಕೂಡ ಪ್ರಸ್ತುತ ಆಸ್ಟ್ರೇಲಿಯಾ ತಂಡದ ಭಾಗವಾಗಿಲ್ಲ,ಜೊತೆಗೆ ನಾಥನ್‌ ಎಲಿಸ್‌‍ ತಮ ಮೊದಲ ಮಗುವಿನ ಜನನದ ನಿಮಿತ್ತ ನ್ಯೂಜಿಲೆಂಡ್‌ ಸರಣಿಯಿಂದ ಹೊರಗುಳಿದಿದ್ದಾರೆ.ಹಿಗಾಗಿ ಆಸ್ಸಿಸ್‌‍ ಯುವ ತಂಡಕ್ಕೆ ಸರಣಿ ಸವಾಲಾಗಿದೆ.

ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಾಬಾ ಚೈತನ್ಯಾನಂದನ ಮಹಿಳಾ ಸಹಾಯಕಿಯರ ವಿಚಾರಣೆ

ನವದೆಹಲಿ, ಸೆ.30 (ಪಿಟಿಐ) ಖಾಸಗಿ ಸಂಸ್ಥೆಯೊಂದರಲ್ಲಿ 17 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಚೈತನ್ಯಾನಂದ ಸರಸ್ವತಿ ಅವರನ್ನು ಹಾಗೂ ಅವರ ಇಬ್ಬರು ಮಹಿಳಾ ಸಹಾಯಕರು ವಿಚಾರಣೆಗೆ ಒಳಪಡಿಸಲಾಗಿದೆ.

ಸ್ವಾಮಿಜಿ ಮಹಿಳಾ ಸಹಾಯಕಿಯರು ಸಂತ್ರಸ್ತರಿಗೆ ಬೆದರಿಕೆ ಹಾಕಿ ತಮ್ಮ ಅಶ್ಲೀಲ ಸಂದೇಶಗಳನ್ನು ಅಳಿಸುವಂತೆ ಒತ್ತಾಯಿಸಿದ್ದರು ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

62 ವರ್ಷದ ಸರಸ್ವತಿ ಅವರ ಫೋನ್‌ನಲ್ಲಿ ಅನೇಕ ಮಹಿಳೆಯರೊಂದಿಗೆ ಚಾಟ್‌ ಮಾಡಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ, ಅವರು ಸುಳ್ಳು ಭರವಸೆಗಳ ಮೂಲಕ ಅವರನ್ನು ಆಕರ್ಷಿಸಲು ಪ್ರಯತ್ನಿಸಿದರು.ಅವರ ಫೋನ್‌ಗಳಲ್ಲಿ ಅವರು ಏರ್‌ ಹೋಸ್ಟೆಸ್‌‍ಗಳೊಂದಿಗೆ ಇರುವ ಬಹು ಛಾಯಾಚಿತ್ರಗಳು ಮತ್ತು ಮಹಿಳೆಯರ ಪ್ರದರ್ಶನ ಚಿತ್ರಗಳ (ಡಿಪಿ) ಸ್ಕ್ರೀನ್‌ಶಾಟ್‌ಗಳು ಸಹ ಇದ್ದವು ಎಂದು ಅಧಿಕಾರಿ ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರೀಯವಾಗಿ ಅನುಮೋದಿತ ಖಾಸಗಿ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಾಗ ಸ್ವಯಂ ಘೋಷಿತ ದೇವಮಾನವ ತನ್ನ ಕ್ರಿಮಿನಲ್‌ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಸರಸ್ವತಿ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ವಿಚಾರಣಾಧಿಕಾರಿಗಳನ್ನು ದಾರಿ ತಪ್ಪಿಸುತ್ತಲೇ ಇದ್ದಾರೆ ಎಂದು ಅಧಿಕಾರಿ ಹೇಳಿದರು.ಅವರು ತಮ್ಮ ಕೃತ್ಯಗಳಿಗೆ ಯಾವುದೇ ಪಶ್ಚಾತ್ತಾಪವನ್ನು ತೋರಿಸಿಲ್ಲ ಮತ್ತು ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಅವರ ಇಬ್ಬರು ಮಹಿಳಾ ಸಹಚರರನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ತನಿಖೆಯ ಭಾಗವಾಗಿ ಅವರನ್ನು ಎದುರಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿಚಾರಣೆಯ ಸಮಯದಲ್ಲಿ, ಸಾಕ್ಷ್ಯಾಧಾರಗಳನ್ನು ಎದುರಿಸಿದಾಗಲೂ, ಸರಸ್ವತಿ ಪದೇ ಪದೇ ಸುಳ್ಳು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಖಲೆಗಳು ಮತ್ತು ಡಿಜಿಟಲ್‌ ಪುರಾವೆಗಳನ್ನು ತೋರಿಸಿದಾಗ ಮಾತ್ರ ಅವನು ಇಷ್ಟವಿಲ್ಲದೆ ಪ್ರತಿಕ್ರಿಯಿಸುತ್ತಾನೆ ಎಂದು ಅವರು ಹೇಳಿದರು. ತನ್ನ ಬಲಿಪಶುಗಳಿಗೆ ಕರೆ ಮಾಡುತ್ತಿದ್ದ ಸ್ಥಳಗಳನ್ನು ತೋರಿಸಲು ಅವನನ್ನು ಸಂಸ್ಥೆಯ ಆವರಣಕ್ಕೆ ಕರೆದೊಯ್ಯಲಾಯಿತು.

“ಶೇ.80 ಕಮಿಷನ್‌ ಸರ್ಕಾರಕ್ಕೆ ಕಿಂಚಿತ್ತಾದರೂ ಘನತೆ ಉಳಿದಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು”

ಬೆಂಗಳೂರು,ಸೆ.30– ಕರ್ನಾಟಕ ಗುತ್ತಿಗೆದಾರರು ಸಂಘವು ಕಾಂಗ್ರೆಸ್‌‍ ಭ್ರಷ್ಟಾಚಾರ ಬಯಲು ಮಾಡಿರುವ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಘನತೆ ಉಳಿದಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸವಾಲು ಹಾಕಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಪ್ರತಿಪಕ್ಷದಲ್ಲಿದ್ದಾಗ ಸಿ.ಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರುಗಳು ಶೇ.40 ಪರ್ಸೆಂಟ್‌ ಕಮಿಷನ್‌ ಎಂದು ಆರೋಪಿಸಿದ್ದರು. ಇಂದು ಇವರ ಆಳ್ವಿಕೆಯಲ್ಲಿ ಗುತ್ತಿಗೆದಾರರೇ ದುಪ್ಪಟ್ಟಾಗಿರುವುದನ್ನು ಬಯಲಿಗೆಳೆದಿದ್ದಾರೆ- ಕರ್ನಾಟಕದಲ್ಲಿ ಶೇ.80 ಕಮಿಷನ್‌ ಸರ್ಕಾರವಾಗಿದೆ ಎಂದು ವಾಗ್ದಳಿ ನಡೆಸಿದ್ದಾರೆ.

ಕರ್ನಾಟಕ ಗುತ್ತಿಗೆದಾರರು ಸಂಘವು, ಪತ್ರದಲ್ಲಿ ಹೆಸರಿಸಿರುವ ಸಚಿವರು ಆರೋಪಗಳನ್ನು ನಿರಾಕರಿಸಲು ಏಕೆ ಮುಂದಾಗಿಲ್ಲ? ರಾಜ್ಯದ ಕೀರ್ತಿಯನ್ನು ಕೆಸರೆರಚಾಟದ ಮೂಲಕ ಎಳೆದು ತರುತ್ತಿರುವಾಗ ಸಿಎಂ ಮೌನವಾಗಿರುವುದೇಕೆ? ಎಂದು ತರಾಟೆಗೆತಗೆದುಕೊಂಡಿದ್ದಾರೆ.

ಬಿಡದಿ ಟೌನ್‌ಶಿಪ್‌ನಂತಹ ಯೋಜನೆಗಳನ್ನು ಅಕ್ರಮ ರಿಯಲ್‌ ಎಸ್ಟೇಟ್‌ ವ್ಯವಹಾರಗಳಿಗೆ ಮತ್ತು ಫಲವತ್ತಾದ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಏಕೆ ಬಳಸಲಾಗುತ್ತಿದೆ? ಇದು ದ್ರೋಹದ ಪರಮಾವಧಿ. ಪಾರದರ್ಶಕತೆ ಬದಲಿಗೆ ಕಾಂಗ್ರೆಸ್‌‍ ಕಿರುಕುಳ, ಲೂಟಿ ಮತ್ತು ಹಿಂಬಾಗಿಲ ಭ್ರಷ್ಟಾಚಾರವನ್ನು ನೀಡಿದೆ.ಕರ್ನಾಟಕವು ಈ ಭ್ರಷ್ಟ ಕಾಂಗ್ರೆಸ್‌‍ ಆಡಳಿತವನ್ನು ಇನ್ನು ಮುಂದೆ ಭರಿಸಲು ಸಾಧ್ಯವಿಲ್ಲ ಎಂದು ಅಶೋಕ್‌ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಕಲ್ಯಾಣ ಕರ್ನಾಟಕದ ಪ್ರವಾಹ ಪೀಡಿತ ಪ್ರತಿ ಕುಟುಂಬಕ್ಕೆ 50,000 ರೂ. ಗಳ ತುರ್ತು ಪರಿಹಾರ ನೀಡುವಂತೆ ಆರ್‌.ಅಶೋಕ್‌ ಆಗ್ರಹ

ಬೆಂಗಳೂರು,ಸೆ.30– ಕಲ್ಯಾಣ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ಥರಿಗೆ ರಾಜ್ಯ ಸರ್ಕಾರ ಕೂಡಲೇ ಪ್ರತಿ ಕುಟುಂಬಕ್ಕೆ 50,000 ರೂ. ಗಳ ತುರ್ತು ಪರಿಹಾರವನ್ನು ಇಂದೇ ಘೋಷಣೆ ಮಾಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅಶೋಕ್‌ ಅವರು, ನಿಮ ವಿಮಾನ ಟೇಕಾಫ್‌ ಆಗುವ ಮುನ್ನ, ಪರಿಹಾರ ಕಾರ್ಯ ಟೇಕಾಫ್‌ ಆಗಲಿ ಎನ್ನುವ ಉದ್ದೇಶದಿಂದ ನಿಮ ಸರ್ಕಾರಕ್ಕೆ ನನ್ನ ಆಗ್ರಹವಾಗಿದೆ. ಪ್ರತಿ ಕುಟುಂಬಕ್ಕೆ 50,000 ರೂ. ತುರ್ತು ಪರಿಹಾರ ಘೋಷಿಸಿ ಎಂದು ಆಗ್ರಹಿಸಿದ್ದಾರೆ.

ಕಳೆದ ವರ್ಷಗಳಂತೆ ಸಾಫ್‌್ಟವೇರ್‌ ಲೋಪ, ಸರ್ವರ್‌ ಡೌನ್‌, ಇನ್ನೊಂದು ಮತ್ತೊಂದು ಕುಂಟು ನೆಪ ಹೇಳುವುದನ್ನು ಬಿಟ್ಟು, ಕಾಳಜಿ ಕೇಂದ್ರಗಳಲ್ಲಿರುವ ಪ್ರತಿ ಸಂತ್ರಸ್ತ ಕುಟುಂಬಕ್ಕೆ ಈ ಕೂಡಲೇ 50,000 ರೂ. ತುರ್ತು ಪರಿಹಾರ ಹಣ ಬಿಡುಗಡೆ ಮಾಡಿ. ಪರಿಹಾರ ವಿಳಂಬ ಮಾಡಿ ನೆರೆ ಸಂತ್ರಸ್ತರು ದೀಪಾವಳಿಯನ್ನು ಕತ್ತಲೆಯಲ್ಲಿ ಕಳೆಯುವಂತೆ ಮಾಡಬೇಡಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ ನೀಡಬೇಕು. ಕಲ್ಯಾಣ ಕರ್ನಾಟಕದ ಜನ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌‍ ಸರ್ಕಾರ ಈ ಭಾಗದ ಜನರ ನೋವಿಗೆ ಸ್ಪಂದಿಸಬೇಕು. ಕಲ್ಯಾಣ ಕರ್ನಾಟಕಕ್ಕೆ 10,000 ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಬೇಕು. ಘೋಷಣೆ ಮಾಡುವುದು ಮಾತ್ರವಲ್ಲ ಅದನ್ನು ಬಿಡುಗಡೆ ಮಾಡಿ ಪುನರ್‌ನಿರ್ಮಾಣ, ಪುನರ್ವಸತಿ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ನಿಮ ವೈಮಾನಿಕ ಸಮೀಕ್ಷೆ ಮತ್ತೊಂದು ಕಾಟಾಚಾರದ ಸಮೀಕ್ಷೆ ಆಗದೆ, ವಿಮಾನ ಟೇಕಾಫ್‌ ಆಗುವ ಮುನ್ನ, ಪರಿಹಾರ ಕಾರ್ಯ ಟೇಕಾಫ್‌ ಆಗಲಿ. ಪ್ರಗಾಢ ನಿದ್ದೆಯಲ್ಲಿದ್ದ ನಿಮ ಸರ್ಕಾರಕ್ಕೆ, ಕಲ್ಯಾಣ ಕರ್ನಾಟಕದ ಪ್ರವಾಹ ಪರಿಸ್ಥಿತಿಯ ಬಗ್ಗೆ ಈಗಲಾದರೂ ನೆನಪಾಯಿತಲ್ಲ ಅದೇ ದೊಡ್ಡ ಪುಣ್ಯ. ಆದರೆ ಪ್ರವಾಹದಿಂದ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಜನರಿಗೆ ಬೇಕಿರುವುದು ನಿಮ ವೈಮಾನಿಕ ಸಮೀಕ್ಷೆಯ ಫೋಟೋ ಶೂಟ್‌ ಅಲ್ಲ, ತುರ್ತು ಪರಿಹಾರ ಎನ್ನುವುದು ಅಲ್ಲಿನ ಜನರ ನಿರೀಕ್ಷೆ ಎಂದು ಹೇಳಿದ್ದಾರೆ.

ಸ್ಪಾಟ್‌ ಪರಿಶೀಲನೆ, ಸ್ಪಾಟ್‌ ಚೆಕ್‌ ವಿತರಣೆ ಆಗಲಿ.ನೆರೆ ಕಡಿಮೆಯಾದ ಕೂಡಲೇ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳ ತಂಡ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ, ಬೆಳೆ, ಆಸ್ತಿಪಾಸ್ತಿ, ಜಾನುವಾರು ನಷ್ಟದ ಸಮಗ್ರ ಸಮೀಕ್ಷೆ ನಡೆಸಬೇಕು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ ಅಂದಿನ ಸಿಎಂ ಯಡಿಯೂರಪ್ಪನವರು ಸ್ಥಳದಲ್ಲೇ ಚೆಕ್‌ ವಿತರಣೆ ಮಾಡಿದ್ದರು.

ಕಾಂಗ್ರೆಸ್‌‍ ಸರ್ಕಾರವೂ ಅದೇ ರೀತಿ ಮಾಡಿ ಸ್ಥಳದಲ್ಲೇ ಚೆಕ್‌ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸಾಂಕ್ರಾಮಿಕ ರೋಗ ಭೀತಿ, ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಪ್ರವಾಹ ಇಳಿದ ಮೇಲೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿರುತ್ತದೆ. ಆದ್ದರಿಂದ ಆರೋಗ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತರಾಗಬೇಕು. ಮೊಬೈಲ್‌ ಆರೋಗ್ಯ ವ್ಯಾನ್‌ಗಳನ್ನು ಪ್ರತಿ ಗ್ರಾಮಕ್ಕೆ ಕಳುಹಿಸುವ ಮೂಲಕ ಅರಿವು ಮೂಡಿಸಬೇಕು, ಅಗತ್ಯ ಔಷಧಿಗಳ ಬೃಹತ್‌ ಶೇಖರಣೆ ಮಾಡಿಕೊಳ್ಳುವ ಜೊತೆಗೆ ಸಾಂಕ್ರಾಮಿಕ ರೋಗಗಳು ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಇರಬೇಕು. ಕಳೆದ ಎರಡು ವರ್ಷಗಳಲ್ಲಿ ನೆರೆ, ಬರ ಪರಿಸ್ಥಿತಿಗಳು ಉಂಟಾದಾಗ ಪರಿಹಾರ ವಿತರಣೆಯಲ್ಲಿ ಹಲವಾರು ಸಂತ್ರಸ್ತರು ಬಿಟ್ಟುಹೋಗಿರುವ, ಸಂತ್ರಸ್ತರು ಪರಿಹಾರಕ್ಕಾಗಿ ವರ್ಷಗಟ್ಟಲೆ ಕಚೇರಿಗಳಿಗೆ ಅಲೆದಾಟ ನಡೆಸಿರುವ ಅನೇಕ ಉದಾಹರಣೆಗಳು ಇವೆ. ಈ ಬಾರಿಯಾದರೂ ಯಾರೂ ಪರಿಹಾರದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು.

ಅರ್ಹ ಸಂತ್ರಸ್ತರಿಗೆ ಪರಿಹಾರ ತಲುಪಿದ ಬಗ್ಗೆ ಸಂಪೂರ್ಣ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗಬೇಕು ಪರಿಹಾರ ಕಾರ್ಯಗಳಲ್ಲಿ ಯಾವುದೇ ರಾಜಕೀಯ ದುರುಪಯೋಗ, ಭ್ರಷ್ಟಾಚಾರ ಆಗದಂತೆ ಎಚ್ಚರವಹಿಸಬೇಕು. ಸಿಎಂ ಸಿದ್ದರಾಮಯ್ಯನವರೇ, ನಿಮ ವೈಮಾನಿಕ ಸಮೀಕ್ಷೆಯ ಫ್ಲೈಟ್‌ ಟೇಕ್‌ ಆಫ್‌ ಆಗುವ ಮುನ್ನ, ನಿಮ ಪರಿಹಾರ ಕಾರ್ಯ ಟೇಕ್‌ ಆಫ್‌ ಆಗಲಿ. ಇದೇ ಉತ್ತರ ಕರ್ನಾಟಕದ ಜನರ ಆಗ್ರಹವಾಗಿದೆ ಎಂದು ಅಶೋಕ್‌ ಹೇಳಿದ್ದಾರೆ.