Home Blog Page 79

ಏಷ್ಯಾಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯ : ಪಾಕ್‌-ಇಂಡಿಯಾ ಕದನ ಕುತೂಹಲ

ದುಬೈ, ಸೆ.28- ಕ್ರಿಕೆಟ್‌ನಲ್ಲಿ ಬದ್ಧ ವೈರಿಗಳೆಂದೇ ಬಿಂಬಿತವಾಗಿರುವ ಭಾರತ-ಪಾಕಿಸ್ತಾನ ನಡುವಿನ ಏಷ್ಯಾಕಪ್‌ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ಪಂದ್ಯಾವಳಿಯಲ್ಲಿ ಎಲ್ಲ ತಂಡಗಳನ್ನೂ ಮಣಿಸಿ ದಿಗ್ವಿಜಯ ಸಾಧಿಸಿರುವ ಸೂರ್ಯಕುಮಾರ್‌ ಯಾದವ್‌ ಸಾರಥ್ಯದ ಭಾರತ ತಂಡ ಬಲಿಷ್ಠವಾಗಿ ಕಾಣಿಸುತ್ತಿದ್ದು, ಈಗಾಗಲೇ ಎರಡು ಬಾರಿ ಸೋತಿರುವ ಪಾಕಿಸ್ತಾನವನ್ನು ಮತ್ತೊಮೆ ಬಗ್ಗು ಬಡಿದು ಏಷ್ಯಾ ಚಾಂಪಿಯನ್‌ ಕಿರೀಟ ಮುಡಿಗೇರಿಸಿ ಕೊಳ್ಳಲು ಹಾತೊರೆಯುತ್ತಿದೆ.

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ರಾತ್ರಿ 8 ಗಂಟೆಗೆ ಆರಂಭಗೊಳ್ಳಲಿರುವ ಫೈನಲ್‌ ಪಂದ್ಯಕ್ಕೆ ಈಗಾಗಲೇ ಪ್ರೇಕ್ಷಕರು ಕ್ರೀಡಾಂಗಣದತ್ತ ಜಮಾಯಿಸಿದ್ದು, ಎಲ್ಲ ಟಿಕೆಟ್‌ಗಳೂ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದ್ದು, ಎಲ್ಲ ಆಸನಗಳು ಕಿಕ್ಕಿರಿದು ತುಂಬಲಿವೆ. ಈಗಾಗಲೇ ಎರಡೂ ತಂಡಗಳು ಮಧ್ಯಮ ಕ್ರಮಾಂಕದಲ್ಲಿ ಒತ್ತಡ ಅನುಭವಿಸಿವೆ. ಆದರೂ ಫೈನಲ್‌ ಪಂದ್ಯ, ಅದರಲ್ಲೂ ಟಿ-20 ಪಂದ್ಯ ಕ್ಷಣ ಕ್ಷಣಕ್ಕೂ ರೋಚಕತೆಯಿಂದ ಕೂಡಿರುತ್ತದೆ.ಇದರ ನಡುವೆ ಪಹಲ್ಗಾಮ್‌ ದಾಳಿ ನಂತರ ಭಾರತ-ಪಾಕ್‌ ನಡುವೆ ಅಂತರ ಕಾಯ್ದುಕೊಂಡಿದ್ದು, ಅದು ಕ್ರೀಡೆಯಲ್ಲೂ ಕಾಣಿಸಿಕೊಂಡಿದೆ. ಪಂದ್ಯದ ನಂತರ ಹಸ್ತಲಾಘವ ಮಾಡದೆ ಸುದ್ದಿಯಾಗಿದ್ದ ಟೀಂ ಇಂಡಿಯಾ ಈಗ ಫೈನಲ್‌ ಪಂದ್ಯಕ್ಕೂ ಮುನ್ನ ಸಾಮೂಹಿಕ ಚಿತ್ರದಲ್ಲೂ ಕಾಣಿಸಿಕೊಳ್ಳಲು ನಿರಾಕರಿಸಿದ್ದು, ಭಾರೀ ಸಂಚಲನ ಮೂಡಿಸಿದೆ.

ಪ್ರತಿಯೊಂದು ಪಂದ್ಯದಲ್ಲೂ ಮೊದಲು ಬ್ಯಾಟ್‌ ಮಾಡುವ ತಂಡಗಳು ಒತ್ತಡದಲ್ಲಿ ಸಿಲುಕಿ ಗುರಿ ಮುಟ್ಟುವ ತಂಡಗಳ ಬ್ಯಾಟ್‌್ಸಮನ್‌ಗಳು ನಿರಾಯಾಸವಾಗಿ ಬ್ಯಾಟ್‌ ಬೀಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಏಷ್ಯಾಕಪ್‌ನಲ್ಲಿ ಬದ್ಧ ವೈರಿಗಳು ಮುಖಾಮುಖಿಯಾಗುತ್ತಿದ್ದು, ಕ್ರಿಕೆಟ್‌ ಪಂಡಿತರು ಹಲವಾರು ಲೆಕ್ಕಾಚಾರಗಳನ್ನು ಹಾಕಿ ಪಂದ್ಯ ಕೊನೆ ಹಂತದವರೆಗೂ ಹೋಗಬಹುದು ಎಂದು ನಿರೀಕ್ಷಿಸಿದ್ದಾರೆ.ಆದರೆ, ಬಲಿಷ್ಠವಾಗಿರುವ ಬ್ಯಾಟಿಂಗ್‌ ಭಾರತಕ್ಕೆ ಆಸರೆಯಾದರೆ ಬಲಿಷ್ಠ ಬೌಲಿಂಗ್‌ ಪಾಕಿಸ್ತಾನಕ್ಕೆ ನೆರವಾಗಿದೆ. ಈ ಎಲ್ಲದರ ನಡುವೆ ದುಬೈನ ಈ ಮೈದಾನ ಹವಾಮಾನಕ್ಕೆ ತಕ್ಕಂತೆ ಬದಲಾಗುತ್ತದೆ ಮತ್ತು ಪರಿಸ್ಥಿತಿ ಹಾಗೂ ಒತ್ತಡಗಳನ್ನು ಮೀರಿ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ.

ನೆರೆಪೀಡಿತ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಎಚ್‌ಡಿಕೆ ಆಗ್ರಹ

ಬೆಂಗಳೂರು, ಸೆ. 28– ಕಲ್ಯಾಣ ಕರ್ನಾಟಕ ಭಾಗದ ನೆರೆಪೀಡಿತ ಪ್ರತೀ ತಾಲ್ಲೂಕಿನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಎಲ್ಲಾ ತುರ್ತು ಸೌಲಭ್ಯಗಳು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರವು ಕರ್ನಾಟಕದ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ಕೇಂದ್ರ ಸಚಿವನಾಗಿ ಖಚಿತ ಭರವಸೆ ನೀಡುತ್ತೇನೆ. ನಮ ಜನರ ಕ್ಷೇಮ ಮತ್ತು ಅವರ ಸುರಕ್ಷಿತ ಜೀವನೋಪಾಯಕ್ಕಾಗಿ ಕಾಳಜಿ ವಹಿಸಿ ಸಾಧ್ಯವಿರುವ ಎಲ್ಲ ಸಹಕಾರವನ್ನೂ ಕೇಂದ್ರವು ನೀಡಲಿದೆ ಎಂದು ಅವರು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕದ ಕಲಬುರಗಿ, ವಿಜಯಪುರ, ಬೀದರ್‌, ರಾಯಚೂರು ಮತ್ತು ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿ ಜನರು ಅತೀವ ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲಿ ಪ್ರತಿಯೊಬ್ಬರ ಜೀವ ರಕ್ಷಣೆ, ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ.ಅವರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಆಹಾರ, ಕುಡಿಯುವ ನೀರು, ಉಡುಪು, ಹೊದಿಕೆ ಮತ್ತು ತುರ್ತು ಔಷಧಿಗಳ ಸಾಕಷ್ಟು ದಾಸ್ತಾನನ್ನು ವಿಳಂಬವಿಲ್ಲದೆ ಅಷ್ಟೂ ಜಿಲ್ಲೆಗಳಿಗೂ ತಲುಪಿಸಬೇಕು. ಸಿಬ್ಬಂದಿ ರಕ್ಷಣಾ ಪ್ರಯತ್ನಗಳನ್ನು ತೀವ್ರಗೊಳಿಸಿ ವೃದ್ಧರು, ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳ ಬಗ್ಗೆಯೂ ವಿಶೇಷ ಗಮನ ಹರಿಸಬೇಕು. ಶಾಲೆ, ಹಾಸ್ಟೆಲ್‌ ಮತ್ತು ಶಿಕ್ಷಣ ಸಂಸ್ಥೆಗಳನ್ನು ತಕ್ಷಣವೇ ತಾತ್ಕಾಲಿಕ ಪರಿಹಾರ-ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಿ ನೆರೆಪೀಡಿತ ಕುಟುಂಬಗಳು, ಚಿಕ್ಕ ಮಕ್ಕಳು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.

ಜನರ ಪ್ರಾಣ ನಷ್ಟದ ಜೊತೆಗೆ ಈ ಜಿಲ್ಲೆಗಳಲ್ಲಿ ತೀವ್ರ ಬೆಳೆನಷ್ಟ ಮತ್ತು ಹಾನಿ ಸಂಭವಿಸಿದೆ. ರೈತರ ಸ್ಥಿತಿ ಹೃದಯವಿದ್ರಾವಕವಾಗಿದ್ದು, ಅವರಿಗೆ ಸೂಕ್ತ-ಸಕಾಲಿಕ ಪರಿಹಾರ ಒದಗಿಸಬೇಕು. ಇದರಿಂದ ಅವರು ತಮ ಜೀವನೋಪಾಯವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಪಶು-ಪ್ರಾಣಿಗಳು ಅತೀವ ಸಂಕಷ್ಟಕ್ಕೆ ತುತ್ತಾಗಿವೆ. ವಿಶೇಷವಾಗಿ ಕೃಷಿ ಸಮುದಾಯದ ಜೀವನಾಡಿಯಾಗಿರುವ ಜಾನುವಾರುಗಳಿಗೆ ಮೇವು, ಆಶ್ರಯ ಮತ್ತು ವೈದ್ಯಕೀಯ ಆರೈಕೆ ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಜನಾರೋಗ್ಯ, ಪಶು ಆರೋಗ್ಯ ತಂಡಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಗೌರಿ ಗಣೇಶ ಹಬ್ಬದ ಸಮಯದಲ್ಲಿ ಬೀದರ್‌, ವಿಜಯಪುರ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಈಗಾಗಲೇ ಸಂಕಷ್ಟಕ್ಕೆ ತುತ್ತಾಗಿವೆ. ಆಯುಧ ಪೂಜೆ, ದಸರಾ, ದೀಪಾವಳಿಯ ಸಮಯದಲ್ಲಿ ಜನರು ಮತ್ತೆ ತೊಂದರೆ ಅನುಭವಿಸುವಂತೆ ಆಗಬಾರದು. ಆದ್ದರಿಂದ ಪರಿಹಾರ ಕಾರ್ಯಗಳು ನಿರಂತರವಾಗಿ ಮುಂದುವರಿಯಬೇಕು ಎಂದು ಅವರು ಹೇಳಿದ್ದಾರೆ.

ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಪರಿಹಾರ ಕ್ರಮಗಳ ತ್ವರಿತ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ನಾನು ಖುದ್ದಾಗಿ ಕಲಬುರಗಿ, ಯಾದಗಿರಿ, ವಿಜಯಪುರ, ಬೀದರ್‌ ಮತ್ತು ರಾಯಚೂರು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಪರಿಹಾರ ಕಾರ್ಯ, ಆಗಿರುವ ನಷ್ಟದ ಬಗ್ಗೆ ಮಾಹಿತಿ ಪಡೆದು ತುರ್ತು ಕ್ರಮ ವಹಿಸುವಂತೆ ಸೂಚಿಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಕಾಲ್ತುಳಿತ ಪ್ರಕರಣ ವ್ಯವಸ್ಥಿತ ಷಡ್ಯಂತ್ರ : ತನಿಖೆ ನಡೆಸುವಂತೆ ಹೈಕೋರ್ಟ್‌ ಮೊರೆ ಹೋದ ಟಿವಿಕೆ

ಚೆನ್ನೈ,ಸೆ.28- ತಮಿಳುನಾಡಿನ ಕರೂರು ಪಟ್ಟಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ವ್ಯವಸ್ಥಿತ ಷಡ್ಯಂತ್ರವಾಗಿದ್ದು, ತನಿಖೆ ನಡೆ ಸುವಂತೆ ಕೋರಿ ಟಿವಿಕೆ ಪಕ್ಷ ಹೈಕೋರ್ಟ್‌ ಮೊರೆ ಹೋಗಿದೆ.
ಮದ್ರಾಸ್‌‍ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ವಿಚಾರಣೆ ನಡೆಸಲು ಟಿವಿಕೆ ಪಕ್ಷದ ಪ್ರಮುಖರೊಬ್ಬರು ಮೇಲನವಿ ಸಲ್ಲಿಸಿದ್ದು, ಇದನ್ನು ವಿಚಾರಣೆ ನಡೆಸಲು ನ್ಯಾಯಾಲಯ ಸಮತಿಸಿದೆ.

ಪ್ರಕರಣವು ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯಲು ಮೇಲ್ನೋಟಕ್ಕೆ ಷಡ್ಯಂತ್ರವೇ ಕಾರಣ ಇರಬಹುದು. ರ್ಯಾಲಿ ನಡೆಯುವಾಗ ಪೊಲೀಸರು ಸಾರ್ವಜನಿಕರ ಮೇಲೆ ಏಕಾಏಕಿ ಲಾಠಿ ಚಾರ್ಜ್‌ ನಡೆಸಿದ್ದು ಏಕೆ? ಕೆಲವು ಕಡೆ ಕಲ್ಲು, ನೀರಿನ ಬಾಟಲ್‌ ಕೂಡ ಎಸೆಯಲಾಗಿದೆ. ಹೀಗಾಗಿ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅರ್ಜಿಯನ್ನು ದಾಖಲಿಸಿಕೊಂಡಿರುವ ಹೈಕೋರ್ಟ್‌ ವಿಚಾರಣೆ ಕೈಗೆತ್ತಿಕೊಳ್ಳವುದಾಗಿ ತಿಳಿಸಿದೆ. ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಬಿಗಿ ಭದ್ರತೆ:
ಈ ನಡುವೆ ಚೆನ್ನೈನಲ್ಲಿರುವ ವಿಜಯ್‌ ಅವರ ನಿವಾಸಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಬಿಗಿಭದ್ರತೆಯನ್ನು ಕಲ್ಪಿಸಲಾಗಿದೆ.ಘಟನೆ ನಡೆದ ನಂತರ ವಿಜಯ್‌ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಹೀಗಾಗಿ ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ಬಿಗಿಭದ್ರತೆಯನ್ನು ನಿಯೋಜಿಸಲಾಗಿದೆ. ಇನ್ನು ಅವರ ಭದ್ರತೆಗಾಗಿಯೂ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ.

ಕಾಲ್ತುಳಿತ ದುರಂತ : ನಟ ವಿಜಯ್‌ ಬಂಧನಕ್ಕೆ ವ್ಯಾಪಕ ಒತ್ತಡ

ಚೆನ್ನೈ,ಸೆ.28- ರಾಜ್ಯದಲ್ಲಿ ಭೀಕರ ಘಟನೆಗೆ ಕಾರಣವಾಗಿರುವ ಕರೂರು ಕಾಲ್ತುಳಿತ ಪ್ರಕರಣಕ್ಕೆ ಕಾರಣೀಭೂತರೆನ್ನಲಾದ ಚಿತ್ರನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್‌ ಬಂಧನಕ್ಕೆ ವ್ಯಾಪಕ ಒತ್ತಡ ಕೇಳಿ ಬರುತ್ತಿದೆ.

ಕಾಲ್ತುಳಿತಕ್ಕೆ ನಟ ವಿಜಯ್‌ ಅವರೇ ಕಾರಣ ಎಂದು ಆರೋಪಿಸಿರುವ ಡಿಎಂಕೆ ನಾಯಕರು ಕೂಡಲೇ ಅವರನ್ನು ಬಂಧಿಸ ಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ ರಾತ್ರಿಯೇ ತುರ್ತಾಗಿ ಕರೂರ್‌ಗೆ ಆಗಮಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದು ಎಂದಿಗೂ ಮರುಕಳಿಸಬಾರದು ಎಂದು ಭಾವುಕರಾಗಿದ್ದಾರೆ.

ವಿಜಯ್‌ ಅವರನ್ನು ಬಂಧಿಸುತ್ತೀರಾ ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನಾನು ನಿಮ ಪ್ರಶ್ನೆಗೆ ರಾಜಕೀಯವಾಗಿ ಉತ್ತರಿಸಲು ಸಾಧ್ಯವಿಲ್ಲ. ಇಷ್ಟು ಜನರ ಸಾವು ನನ್ನನ್ನು ಕುಗ್ಗಿಸಿದೆ.
ಈ ರಾಜ್ಯದ ಮುಖ್ಯಮಂತ್ರಿಯಾಗಿ ಈ ಪ್ರಕರಣದ ತನಿಖೆಗೆ ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರಾದ ಅರುಣಾ ಜಗತೀಸನ್‌ ನೇತೃತ್ವದ ಏಕವ್ಯಕ್ತಿ ಆಯೋಗ ರಚಿಸಲಾಗಿದೆ. ಆಯೋಗದ ವರದಿ ಆಧರಿಸಿ ಸಂಭಾವ್ಯ ಬಂಧನ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

ಟಿವಿಕೆ ಕಾರ್ಯಕ್ರಮದ ಆಯೋಜಕರು ಕೇವಲ 10000 ಜನರು ರ್ಯಾಲಿಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದರು, ಆದರೆ 50,000 ರಿಂದ 1 ಲಕ್ಷಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ತಮಿಳುನಾಡು ಪೊಲೀಸರು ವಿಧಿಸಿದ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಜೀವಗಳಿಗೆ ಅಪಾಯವನ್ನುಂಟು ಮಾಡಲಾಗಿದೆ.

ಕಳೆದುಹೋದ ಪ್ರತಿಯೊಂದು ಜೀವಕ್ಕೂ ವಿಜಯ್‌ ಜವಾಬ್ದಾರನಾಗಿರುತ್ತಾರೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಡಿಎಂಕೆ ವಕ್ತಾರ ಐಟಿ ವಿಭಾಗದ ಕಾರ್ಯದರ್ಶಿ ಸೇಲಂ ಧರಣಿಧರನ್‌ ಟ್ವಿಟರ್‌ ವೀಡಿಯೊದಲಿ ಒತ್ತಾಯಿಸಿದ್ದಾರೆ. ಎಫ್‌ಐ ಆರ್‌ ದಾಖಲು: ಏತನಧ್ಯೆ, ಕರೂರು ಪಟ್ಟಣ ಪೊಲೀಸರು ಟಿವಿಕೆ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮತಿಯಳಗನ್‌ ಸೇರಿದಂತೆ ಹಲವರ ವಿರುದ್ಧ ಬಿಎನ್‌ಎಸ್‌‍ನ ಸೆಕ್ಷನ್‌ 109, 110, 125ಬಿ, 223ರಡಿ ಎಫ್‌ಐಆರ್‌ ದಾಖಲಾಗಿದೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌‍) ಸೆಕ್ಷನ್‌ 109 ಮತ್ತು 110 ಕ್ರಮವಾಗಿ ಕೊಲೆ ಯತ್ನ ಮತ್ತು ಅಪರಾಧಿಕ ನರಹತ್ಯೆಗೆ ಯತ್ನಿಸುವ ಪ್ರಕರಣಗಳಾಗಿವೆ. ಸೆಕ್ಷನ್‌ 125 ದುಡುಕಿನ ಅಥವಾ ನಿರ್ಲಕ್ಷ್ಯದ ವರ್ತನೆಯ ಮೂಲಕ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳನ್ನು ಉಲ್ಲೇಖಿಸುತ್ತದೆ. ಸೆಕ್ಷನ್‌ 223 ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶವನ್ನು ಪಾಲಿಸದಿದ್ದಕ್ಕೆ ಸಂಬಂಧಿಸಿದ್ದಾಗಿದೆ.

125ನೇ ಮನ್‌ ಕೀ ಬಾತ್‌ ಹೈಲೈಟ್ಸ್ : ಆರ್‌ಎಸ್‌‍ಎಸ್‌‍, ಎಸ್‌‍.ಎಲ್‌.ಭೈರಪ್ಪ ಕುರಿತು ಪ್ರಧಾನಿ ಮೋದಿ ಮಾತು

ನವದೆಹಲಿ,ಸೆ.28- ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಪದಭೂಷಣ ಪ್ರಶಸ್ತಿ ಪುರಸ್ಕೃತ ಕನ್ನಡದ ಹೆಸರಾಂತ ಸಾಹಿತಿ ಎಸ್‌‍. ಎಲ್‌.ಭೈರಪ್ಪ ಅವರ ನಿಧನದಿಂದ ದೇಶವು ಮಹಾನ್‌ ಚಿಂತಕನನ್ನು ಕಳೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರಮೋದಿ ಕಂಬನಿ ಮಿಡಿದರು.

ತಮ್ಮ ಬಹುನೆಚ್ಚಿನ 125ನೇ ಮನ್‌ ಕೀ ಬಾತ್‌ ರೇಡಿಯೋ ಪ್ರಸಾರದಲ್ಲಿ ಮೊದಲು ಭೈರಪ್ಪನವರಿಗೆ ಶ್ರದ್ಧಾಂಜಲಿ ಅರ್ಪಿಸಿ, ನಾನು ಬೈರಪ್ಪನವರ ಜೊತೆ ವ್ಯಕ್ತಿಗತ ಸಂಪರ್ಕ ಇಟ್ಟುಕೊಂಡಿದ್ದೆ. ಹಲವು ಸಂದರ್ಭಗಳಲ್ಲಿ ಹಲವು ವಿಚಾರ ಗಳ ಮಂಥನ ನಡೆಸಿದ್ದೇವೆ.
ಅವರ ಕೃತಿಗಳು ಯುವ ಪೀಳಿಗೆಗೆ ದಾರಿದೀಪ. ಅವರ ಅನೇಕ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿವೆ. ನಮ ಮೂಲ ಸಂಸ್ಕೃತಿ ಬಗ್ಗೆ ಹೆಮೆಪಡಬೇಕು, ಗೌರವ ತೋರಿಸಬೇಕು ಎಂಬುದನ್ನು ಭೈರಪ್ಪನವರು ನಮಗೆ ಕಲಿಸಿಕೊಟ್ಟಿದ್ದಾರೆ. ಅವರ ಅಗಲಿಕೆಗೆ ನಾನು ಭಾವುಕ ವಿದಾಯ ತಿಳಿಸುತ್ತೇನೆ ಎಂದು ಭಾವುಕರಾದರು.

ಭೈರಪ್ಪ ಅವರ ಜೊತೆಗಿನ ಒಡನಾಟ ಪ್ರೇರಣಾದಾಯಕ, ಅವರ ಪುಸ್ತಕಗಳು ಯುವಕರಿಗೆ ಪ್ರೇರಣೆ, ಅವ್ರ ಕೃತಿಗಳನ್ನು ಯುವಕರು ಹೆಚ್ಚು ಹೆಚ್ಚು ಓದಬೇಕು ಎಂದು ಕರೆ ನೀಡಿದರು.
ಇದೇ ವೇಳೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್‌ಎಸ್‌‍ಎಸ್‌‍)ದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ನಿಸ್ವಾರ್ಥ ಸೇವೆಯ ಮನೋಭಾವ ಮತ್ತು ಶಿಸ್ತಿನ ಪಾಠವು ಸಂಘದ ನಿಜವಾದ ಶಕ್ತಿಯಾಗಿದೆ. ಅದರ ಅಸಂಖ್ಯಾತ ಸ್ವಯಂಸೇವಕರ ಪ್ರತಿಯೊಂದು ಕಾರ್ಯದಲ್ಲೂ ರಾಷ್ಟ್ರ ಮೊದಲ ಆದ್ಯತೆಯಾಗಿದೆ ಎಂದರು.
ಆರ್‌ಎಸ್‌‍ಎಸ್‌‍ ಸ್ಥಾಪನೆಯಾಗಿ 100 ವರ್ಷ ಪೂರೈಸಲು ಕೆಲವೇ ದಿನಗಳು ಬಾಕಿ ಇರುವಾಗ ಸಂಘದ ದೇಶ ಸೇವೆಯನ್ನು ಸರಿಸಿಕೊಂಡರು.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು, ರಾಷ್ಟ್ರಪಿತ ಮಹಾತ ಗಾಂಧೀಜಿಯವರ ಜನ ದಿನವಾದ ಅ.2ರಂದು ದೇಶದ ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಖಾದಿ ಖರೀದಿ ಮಾಡುವಂತೆ ಕರೆ ಕೊಟ್ಟರು. ತಮ ಮಾತಿನಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳನ್ನು ಜನರು ಹೆಚ್ಚು ಹೆಚ್ಚಾಗಿ ಖರೀದಿ ಮಾಡಬೇಕೆಂದು ಮನವಿ ಮಾಡಿದ ಮೋದಿಯವರು, ಖಾದಿ ಖರೀದಿಗೆ ಮುಂದಾಗುವಂತೆ ಸಲಹೆ ಮಾಡಿದರು.

ಕಳೆದ 11 ವರ್ಷಗಳಿಂದ ಖಾದಿಯ ಮೇಲಿನ ಆಕರ್ಷಣೆ ಗಮನಾರ್ಹವಾಗಿ ಬೆಳೆದಿದ್ದು, ಮಾರಾಟ ನಿರಂತರವಾಗಿ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಗಾಂಧಿ ಜಯಂತಿಯಾದ ಅಕ್ಟೋಬರ್‌ 2ರಂದು ಖಾದಿ ಉತ್ಪನ್ನಗಳನ್ನು ಖರೀದಿಸಲು ನಾನು ನಿಮನ್ನು ಒತ್ತಾಯಿಸುತ್ತೇನೆ. ಹೆಮೆಯಿಂದ ಹೇಳು, ಇದು ಸ್ವದೇಶಿ ಎಂದು ಕರೆ ನೀಡಿದರು.
ಇನ್ನು ಕೆಲವೇ ದಿನಗಳಲ್ಲಿ ನಾವು ವಿಜಯದಶಮಿಯನ್ನು ಆಚರಿಸಲಿದ್ದೇವೆ. ಈ ಬಾರಿಯ ವಿಜಯದಶಮಿ ಇನ್ನಷ್ಟು ವಿಶೇಷವಾಗಿದೆ. ಕಾರಣ ಈ ದಿನದಂದು ಆರ್‌ಎಸ್‌‍ಎಸ್‌‍ ಸ್ಥಾಪನೆಯಾಗಿ 100 ವರ್ಷಗಳಾಗುತ್ತಿದೆ ಎಂದು ಹೇಳಿದರು.

ಶತಮಾನದಷ್ಟು ಹಳೆಯದಾದ ಈ ಪ್ರಯಾಣವು ಕೇವಲ ಗಮನಾರ್ಹವಲ್ಲ ಆದರೆ ಸ್ಪೂರ್ತಿದಾಯಕವಾಗಿದೆ ಎಂದು ಪ್ರಧಾನಿ ಹೇಳಿದರು.ನೂರು ವರ್ಷಗಳ ಹಿಂದೆ, ಆರ್‌ಎಸ್‌‍ಎಸ್‌‍ ಸ್ಥಾಪನೆಯಾದಾಗ, ನಮ ದೇಶವನ್ನು ಗುಲಾಮಗಿರಿಯ ಸರಪಳಿಯಲ್ಲಿ ಬಂಧಿಸಲಾಗಿತ್ತು. ಈ ಶತಮಾನಗಳ ಹಿಂದಿನ ಗುಲಾಮಗಿರಿಯು ನಮ ಆತವಿಶ್ವಾಸ ಮತ್ತು ಆತಗೌರವದ ಮೇಲೆ ಆಳವಾದ ಗಾಯ ಉಂಟುಮಾಡಿದೆ. ಹಾಗಾಗಿ ದೇಶದ ಸ್ವಾತಂತ್ರ್ಯದ ಜೊತೆಗೆ ದೇಶವನ್ನು ಸೈದ್ಧಾಂತಿಕ ಗುಲಾಮಗಿರಿಯಿಂದ ಮುಕ್ತಗೊಳಿಸುವುದು ಅಗತ್ಯವಾಗಿದೆ ಎಂದು ಮೋದಿ ತಿಳಿಸಿದರು.

1925ರಲ್ಲಿ ಈ ಉದ್ದೇಶಕ್ಕಾಗಿ ಕೆಬಿ ಹೆಡ್ಗೆವಾರ್‌ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌‍ಎಸ್‌‍) ರಚಿಸಿದರು. ಅವರ ನಂತರ, ಗುರು ಗೋಲ್ವಾಲ್ಕರ್‌ ಜೀ ರಾಷ್ಟ್ರದ ಸೇವೆಯ ಈ ಮಹಾ ಯಜ್ಞವನ್ನು ಮುಂದಕ್ಕೆ ಕೊಂಡೊಯ್ದರು.ನಿಸ್ವಾರ್ಥ ಸೇವಾ ಮನೋಭಾವ ಮತ್ತು ಶಿಸ್ತಿನ ಪಾಠ ಸಂಘದ ನಿಜವಾದ ಶಕ್ತಿಗಳಾಗಿವೆ ಎಂದರು.

ಇಂದು, ಆರ್‌ಎಸ್‌‍ಎಸ್‌‍ ಕಳೆದ 100 ವರ್ಷಗಳಿಂದ ವಿರಾಮ ಅಥವಾ ವಿಶ್ರಾಂತಿ ಇಲ್ಲದೆ ದಣಿವರಿಯಿಲ್ಲದೆ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅದಕ್ಕಾಗಿಯೇ ನಾವು ಪ್ರಕೃತಿ ವಿಕೋಪ ಸಂಭವಿಸಿದಾಗ ಆರ್‌ಎಸ್‌‍ಎಸ್‌‍ ಸ್ವಯಂಸೇವಕರು ಮೊದಲು ಅಲ್ಲಿಗೆ ತಲುಪುವುದನ್ನು ನಾವು ನೋಡುತ್ತೇವೆ. ಆರ್‌ಎಸ್‌‍ಎಸ್‌‍ನ ಅಸಂಖ್ಯಾತ ಸ್ವಯಂಸೇವಕರ ಪ್ರತಿಕ್ರಿಯೆಯಲ್ಲಿ ನೇಷನ್‌ ಫಸ್ಟ್‌ ಎಂಬ ಮನೋಭಾವವು ಯಾವಾಗಲೂ ಸರ್ವೋಚ್ಚವಾಗಿದೆ ಎಂದು ಅವರು ಕೊಂಡಾಡಿದರು.

ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ೞಛತ್‌ ಮಹಾಪರ್ವ್‌ ಅನ್ನು ಸೇರಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.
ತಮ ಮನ್‌ ಕೀ ಬಾತ್‌ನಲ್ಲಿ ಮೋದಿಯವರು, ಮಹಿಳಾ ನೌಕಾಪಡೆಯ ಲೆಫ್ಟಿನೆಂಟ್‌ ಕಮಾಂಡರ್‌ ದಿಲ್ನಾ ಮತ್ತು ಲೆಫ್ಟಿನೆಂಟ್‌ ಕಮಾಂಡರ್‌ ರೂಪ ನಾವಿಕ ಸಾಗರ್‌ ಅವರೊಂದಿಗೆ ಮಾತನಾಡಿದರು. ನಿಮ ಸಾಹಸಮಯ ಎಲ್ಲರಿಗೂ ಪ್ರೇರಣೆ ಪ್ರಶಂಸಿದರು.

ಕೆಎಸ್‌‍ಆರ್‌ಟಿಸಿಗೆ 9 ವಿಭಾಗಗಳಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ

ಬೆಂಗಳೂರು, ಸೆ. 28 – ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ವತಿಯಿಂದ ನಡೆದ 15ನೇ ವಿಶ್ವ ಸಂವಹನ ಸಮೇಳನ ಮತ್ತು ಎಕ್ಸಲೆನ್ಸ್ ಅವಾಡ್ಸ್ 2025ರ ಕಾರ್ಯಕ್ರಮದಲ್ಲಿ 9 ವಿಭಾಗಗಳಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸಿದೆ.

ಡಿಜಿಟಲ್‌ ಮೀಡಿಯಾ ಇನೋವೇಶನ್‌ ಮತ್ತು ಹೌಸ್‌‍ ಜರ್ನಲ್‌ ಪ್ರಿಂಟ್‌ (ಪ್ರಾದೇಶಿಕ) ವಿಭಾಗದಲ್ಲಿ ಚಿನ್ನದ ಪದಕ, ಹೆಲ್ತ್‌ ಕೇರ್‌ ಕಮ್ಯುನಿಕೇಶನ್‌ ಫಿಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ, ವಿಶಿಷ್ಟ ಮಾನವ ಸಂಪನೂಲ ಕಾರ್ಯಕ್ರಮಕ್ಕಾಗಿ ಕೆಎಸ್‌‍ಆರ್‌ಟಿಸಿ ಕಂಚಿನ ಪದಕ ಪಡೆದಿದೆ.
ಗ್ರಾಹಕ ಸೇವಾ ಶ್ರೇಷ್ಠತೆ, ಬ್ಯಾಂಡಿಂಗ್‌, ವೆಬ್‌ಸೈಟ್‌ ಮತ್ತು ಮೈಕ್ರೋಸೈಟ್‌, ಕಾರ್ಪೊರೇಟ್‌ ಫಿಲ್ಸ್ , ಮಾರ್ಕೆಟಿಂಗ್‌ ಕ್ಯಾಂಪೇನ್‌ ಮತ್ತು ಆಂತರಿಕ ಕಮ್ಯುನಿಕೇಶನ್‌ ಕ್ಯಾಂಪೇನ್‌ ವಿಭಾಗಗಳಲ್ಲಿ ಪ್ರಶಸ್ತಿಗಳು ಲಭಿಸಿರುತ್ತವೆ ಎಂದು ಕೆಎಸ್‌‍ಆರ್‌ಟಿಸಿ ಪ್ರಕಟಣೆ ತಿಳಿಸಿದೆ.
ಈ ಸಾಧನೆಗಳು ನಿಗಮವು ಆಧುನಿಕ ತಂತ್ರಜ್ಞಾನ, ನವೀನ ಚಟುವಟಿಕೆಗಳು ಮತ್ತು ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಕಾರ್ಯಾಚರಣೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದಕ್ಕೆ ಸಾಕ್ಷಿಯಾಗಿದೆ.

ಗೋವಾದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗೋವಾ ವಿಧಾನಸಭೆ ವಿಧಾನಸಭಾಧ್ಯಕ್ಷ ಡಾ. ಗಣೇಶ್‌ ಗಾಂವ್ಕರ್‌, ನಟಿ ಮತ್ತು ಗಾಯಕಿ ಎಸ್ಟರ್‌ ವ್ಯಾಲೆರಿ ನೊರೊನ್ಹಾ, ನಟ, ರೂಪದರ್ಶಿ ಮಿಲಿನ್‌ ತೆಂಡೂಲ್ಕರ್‌ ಮತ್ತು ಪಿಆರ್‌ಸಿಐ ಅಧ್ಯಕ್ಷ ಎಂ.ಬಿ.ಜಯರಾಮ್‌‍ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.

ಶ್ರೀ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್‌, ಮತ್ತು ಚಿಕ್ಕಬಳ್ಳಾಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರು ಕೆಎಸ್‌‍ಆರ್‌ಟಿಸಿ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ಕರೂರು ಕಾಲ್ತುಳಿತ : ಯಾವುದೇ ರಾಜಕೀಯ ಟೀಕೆ ಮಾಡಲ್ಲ, ಆದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ : ಸ್ಟಾಲಿನ್‌

ಚೆನ್ನೆ,ಸೆ.28- 39 ಮಂದಿಯ ಸಾವಿಗೆ ಕಾರಣವಾದ ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ರಾಜಕೀಯ ಟೀಕೆಗಳನ್ನು ಮಾಡುವುದಿಲ್ಲ.. ಆದರೆ ನ್ಯಾಯಾಂಗ ಆಯೋಗದ ವರದಿ ಆಧರಿಸಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೂರ್‌ ಕಾಲ್ತುಳಿತದ ಬಗ್ಗೆ ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ. ಮಾಜಿ ಹೈಕೋರ್ಟ್‌ ನ್ಯಾಯಾಧೀಶೆ ಅರುಣಾ ಜಗದೀಶನ್‌ ಅವರ ತನಿಖಾ ಆಯೋಗದ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕರೂರಿಗೆ ಧಾವಿಸಿದ ಸ್ಟಾಲಿನ್‌ ಅವರು, ಮೃತರ ಕುಟುಂಬಗಳೊಂದಿಗೆ ಸಂವಾದ ನಡೆಸಿ ಶವಗಳಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಆಗಮಿಸಿದ ಸಿಎಂ ಸ್ಟಾಲಿನ್‌, ರೋಗಿಗಳ ಚಿಕಿತ್ಸೆಯನ್ನು ಪರಿಶೀಲಿಸಿದರು. ಈ ವೇಳೆ 51 ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ, ಅದರಲ್ಲಿ 26 ಪುರುಷರು ಮತ್ತು 25 ಮಹಿಳೆಯರು ಎಂದು ವೈದ್ಯರು ಅವರಿಗೆ ವಿವರಿಸಿದರು.

ನಾನು ರಾಜಕೀಯವಾಗಿ ಏನನ್ನೂ ಹೇಳಲು ಬಯಸುವುದಿಲ್ಲ. ಯಾವುದೇ ಕ್ರಮವು ಆಯೋಗದ ವರದಿ ಆಧರಿಸಿರುತ್ತದೆ.ಅಂತೆಯೇ ಟಿವಿಕೆ ಮುಖ್ಯಸ್ಥ ವಿಜಯ್‌ ಅವರ ಹೆಸರನ್ನು ನೇರವಾಗಿ ಹೆಸರಿಸದೆ ರಾಜಕೀಯ ಪಕ್ಷ ನಡೆಸಿದ ಕಾರ್ಯಕ್ರಮದಿಂದಾಗಿ ಜನರು ಪ್ರಾಣ ಕಳೆದುಕೊಂಡರು. ಇದು ಮತ್ತೆ ಎಲ್ಲಿಯೂ ಸಂಭವಿಸಬಾರದು ಎಂದರು. ಅಂತೆಯೇ ಮೃತರು ಮತ್ತು ಗಾಯಗೊಂಡವರಿಗೆ ಪರಿಹಾರ ನಿಧಿಯನ್ನು ಬಿಡುಗಡೆ ಮಾಡುವ ಘೋಷಣೆಯನ್ನು ಸಿಎಂ ಪುನರುಚ್ಚರಿಸಿದರು.

ಅಧಿಕೃತ ಅಂಕಿಅಂಶಗಳ ಪ್ರಕಾರ, ಕರೂರ್‌ ಕಾಲ್ತುಳಿತದ ಸಾವಿನ ಸಂಕ್ಯೆ 39ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದವರಲ್ಲಿ 13 ಪುರುಷರು, 17 ಮಹಿಳೆಯರು ಮತ್ತು ಆರು ಮಕ್ಕಳು ಸೇರಿದ್ದಾರೆ. ಅವರಲ್ಲಿ ನಾಲ್ವರು ಹುಡುಗರು ಮತ್ತು ಇಬ್ಬರು ಹುಡುಗಿಯರು ಸೇರಿದ್ದಾರೆ. ಈ ದುರಂತದ ಕುರಿತು ತನಿಖೆ ನಡೆಸಲು ತಮಿಳುನಾಡು ಸರ್ಕಾರ ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶೆ ನ್ಯಾಯಮೂರ್ತಿ ಅರುಣಾ ಜಗದೀಶನ್‌ ಅವರ ನೇತೃತ್ವದಲ್ಲಿ ಸರ್ಕಾರ ಏಕವ್ಯಕ್ತಿ ತನಿಖಾ ಆಯೋಗ ನೇಮಿಸಿದೆ.

ಕರೂರು ಕಾಲ್ತುಳಿತ ದುರಂತ : ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ ವಿಜಯ್

ಚೆನ್ನೈ,ಸೆ.28– ತಮಿಳುನಾಡಿನ ಕರೂರು ಪಟ್ಟಣದಲ್ಲಿ ಕಾಲ್ತುಳಿತ ಉಂಟಾಗಿ ಸಾವನ್ನಪ್ಪಿದವರ ಕುಟುಂಬಗಳಿಗೆ ಚಿತ್ರನಟ ಹಾಗೂ ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ವಿಜಯ್‌, ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ ಘಟನೆಯಲ್ಲಿ ಗಾಯಗೊಂಡಿರುವ ಕುಟುಂಬಗಳಿಗೂ ಚಿಕಿತ್ಸೆಗಾಗಿ ತಲಾ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ವಿಜಯ್‌ ತಿಳಿಸಿದ್ದಾರೆ.

ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಕರೂರು ಪಟ್ಟಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರ ಪ್ರತಿ ಕುಟುಂಬಗಳಿಗೆ 20 ಲಕ್ಷ ರೂ. ಪರಿಹಾರ ನೀಡುತ್ತೇನೆ. ಅಲ್ಲದೆ ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೂ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ.

ಇದೇ ವೇಳೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು, ಘಟನೆ ಸಂಬಂಧ ಸರ್ಕಾರದ ವತಿಯಿಂದ ಪ್ರತಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ. ತೀವ್ರವಾಗಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ತಲಾ ಎರಡು ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ.

Xನಲ್ಲಿ ಏನಿದೆ?
ನನ್ನ ಹೃದಯದಲ್ಲಿ ನೆಲೆಸಿರುವ ಎಲ್ಲರಿಗೂ ನಮಸ್ಕಾರಗಳು. ಶನಿವಾರ ಕರೂರಿನಲ್ಲಿ ನಡೆದ ದುರಂತದಿಂದ ನನ್ನ ಹೃದಯ ಮತ್ತು ಮನಸ್ಸು ಭಾರವಾಗಿದೆ. ತಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿರುವ ಕುಟುಂಬಗಳಿಗೆ ನನ್ನ ಸಂತಾಪವನ್ನು ಸೂಚಿಸುತ್ತಾ, ಈ ದುಃಖವನ್ನು ನಿಮೊಂದಿಗೆ ಹಂಚಿಕೊಳ್ಳುತ್ತೇನೆ.

ಇದು ನಿಜಕ್ಕೂ ನಮಗೆ ತುಂಬಲಾರದ ನಷ್ಟ. ಘಟನೆಯಿಂದ ನನ್ನ ಹೃದಯ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಯಾರೇ ಸಾಂತ್ವನದ ಮಾತುಗಳನ್ನು ಹೇಳಿದರೂ, ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಭರಿಸಲು ಸಾಧ್ಯವಿಲ್ಲ. ಆದರೂ, ನಿಮ ಕುಟುಂಬದ ಸದಸ್ಯನಾಗಿ, ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೆ 20 ಲಕ್ಷ ರೂ. ಮತ್ತು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ 2 ಲಕ್ಷ ರೂ. ನೀಡಲು ನಾನು ಉದ್ದೇಶಿಸಿದ್ದೇನೆ. ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ಈ ಮೊತ್ತವು ಗಮನಾರ್ಹವಾಗಿಲ್ಲ. ಆದರೂ ಈ ಕ್ಷಣದಲ್ಲಿ, ನಿಮ ಕುಟುಂಬಕ್ಕೆ ಸೇರಿದವನಾಗಿ, ನಿಮೊಂದಿಗೆ ನಿಲ್ಲುವುದು ನನ್ನ ಕರ್ತವ್ಯ.

ಅದೇ ರೀತಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಮೆಲ್ಲರ ಪ್ರೀತಿಪಾತ್ರರು ಬೇಗನೆ ಚೇತರಿಸಿಕೊಂಡು ಮನೆಗೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಮ ಪ್ರೀತಿಪಾತ್ರರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನಮ ತಮಿಳಗ ವೆಟ್ರಿ ಕಳಗಂ ನೀಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಆಶ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಸ್ವಾಮಿ ಚೈತನ್ಯಾನಂದ ಸರಸ್ವತಿ ಅರೆಸ್ಟ್

ನವದೆಹಲಿ,ಸೆ.28- ಆಶ್ರಮದಲ್ಲಿ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಬಂಧನದ ಭೀತಿಯಿಂದ ತಲೆಮೆರೆಸಿಕೊಂಡಿದ್ದ ದೆಹಲಿಯ ಸ್ವಾಮಿ ಚೈತನ್ಯಾನಂದ ಸರಸ್ವತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ, ಬಲವಂತದ ದೈಹಿಕ ಸಂಪರ್ಕ ನಡೆಸಿದ ಆರೋಪಗಳಿವೆ.

ಪ್ರಕರಣ ಹೊರಬಂದ ನಂತರ ಆಶ್ರಮದಿಂದ ತಲೆಮೆರೆಸಿಕೊಂಡು ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಇವರನ್ನು ಉತ್ತರಪ್ರದೇಶದ ಆಗ್ರದಲ್ಲಿ ಬಂಧಿಸಿರುವದೆಹಲಿ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಶಾರದಾ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಮ್ಯಾನೇಜೆಂಟ್‌ನ ನಿರ್ವಹಣಾ ಸಮಿತಿಯ ಸದಸ್ಯರಾಗಿರುವ ಆರೋಪಿ ವಿರುದ್ಧ 2009 ಮತ್ತು 2016 ರಲ್ಲಿ ಸಹ ಎರಡು ಲೈಂಗಿಕ ಕಿರುಕುಳದ ದೂರು ದಾಖಲಾಗಿದ್ದವು.

ಸ್ವಾಮೀಜಿ, ವಿದ್ಯಾರ್ಥಿಗಳನ್ನು ತಮ ಕೋಣೆಗೆ ಕರೆಸಿಕೊಂಡು ಉಚಿತ ವಿದೇಶ ಪ್ರವಾಸಗಳ ಆಮಿಷವೊಡ್ಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರು. ಮಹಿಳಾ ಹಾಸ್ಟೆಲ್‌ನಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಆರೋಪಗಳು ಹೊರಬಿದ್ದ ನಂತರ, ಆಶ್ರಮದ ಆಡಳಿತ ಮಂಡಳಿ ಚೈತನ್ಯಾನಂದರನ್ನು ಅವರ ಹುದ್ದೆಯಿಂದ ಹೊರಹಾಕಿತ್ತು.

ವಿದ್ಯಾರ್ಥಿನಿಯರ ದೂರು ಏನು?
ಸ್ವಾಮಿ ಚೈತನ್ಯಾನಂದ ಸರಸ್ವತಿ ಪಾರ್ಥ ಸಾರಥಿ, ಇಡಬ್ಲ್ಯೂಎಸ್‌‍ ವಿದ್ಯಾರ್ಥಿವೇತನದಡಿ ಪಿಜಿಡಿಎಂ ಕೋರ್ಸ್‌ಗಳನ್ನು ಕಲಿಯುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ ಅಶ್ಲೀಲ ಭಾಷೆಯನ್ನು ಬಳಸಿ ನಿಂದಿಸುತ್ತಿದ್ದರು ಮತ್ತು ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದರು. ಅಲ್ಲದೇ ದೈಹಿಕ ಸಂಪರ್ಕಕ್ಕೂ ಪ್ರಯತ್ನಿಸಿದ್ದರು. ಸಂಸ್ಥೆಯಲ್ಲಿನ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಅವರ ಬೇಡಿಕೆ ಈಡೇರಿಸುವಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದಾಗಿ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದರು.

ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು, 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ಈ ಪೈಕಿ 17 ಮಂದಿ ತಮ ಮೇಲೆ ನಿಂದನೆಯ ಭಾಷೆ ಬಳಸಿದ್ದಾರೆ, ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಇದಕ್ಕೆ ನಾವು ವಿರೋಧ ಮಾಡಿದಾಗ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಸಹಕರಿಸುವಂತೆ ನಮ ಮೇಲೆ ಒತ್ತಡ ಹೇರುತ್ತಿದ್ದರು. ಇದು ಒಂದು ದಿನದ ಸಮಸ್ಯೆಯಲ್ಲ ದೀರ್ಘಕಾಲದ ಸಮಸ್ಯೆ ಎಂದು ಹೇಳಿದ್ದರು.

ಈ ಪ್ರಕರಣ ವಿದ್ಯಾರ್ಥಿನಿಯರ ಭಯಾನಕ ಕಥೆಗಳನ್ನು ಬಯಲು ಮಾಡಲಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಸಹ ಸ್ವತಃ ಸ್ವಯಂಪ್ರೇರಣೆಯಿಂದ ತನಿಖೆಗೆ ಸೂಚನೆ ನೀಡಿದೆ.
ವಿದ್ಯಾರ್ಥಿನಿಯರು ನೀಡಿದ ಮಾಹಿತಿ ಪ್ರಕಾರ, ಸ್ವಾಮಿ ಚೈತನ್ಯಾನಂದ ತಮನ್ನು ಅಂತಾರಾಷ್ಟ್ರೀಯ ವ್ಯಕ್ತಿಯೆಂದು ಪರಿಚಯಿಸಿಕೊಂಡು, ಉತ್ತಮ ಉದ್ಯೋಗದ ಭರವಸೆ ನೀಡಿ ಹುಡುಗಿಯರನ್ನು ಆಕರ್ಷಿಸುತ್ತಿದ್ದ. ತಡರಾತ್ರಿ ಅವರನ್ನು ತನ್ನ ಕೋಣೆಗೆ ಕರೆಸಿ, ಅಂಕಗಳನ್ನು ಕಡಿತಗೊಳಿಸುವ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ವಾಟ್‌್ಸಆಪ್‌ ಮೂಲಕ ಬೇಬಿ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ದುರ್ಬಳಕೆಯ ಸಂದೇಶಗಳನ್ನು ಕಳುಹಿಸುತ್ತಿದ್ದರು. ಒಬ್ಬ ವಿದ್ಯಾರ್ಥಿನಿಯನ್ನು ಕಾಂಡೋಮ್‌ ಬಳಸುತ್ತೀಯಾ? ಎಂದು ಕೇಳಿದ್ದಾರೆ. ಹರಿಯಾಣದ ಹುಡುಗಿಯೊಬ್ಬಳಿಗೆ ಗೆಳೆಯ ಇದ್ದಿದ್ದಕ್ಕೆ ನೀನು ಸರಿ ಇಲ್ಲ ಎಂದು ಕರೆದಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಸಿಸಿಟಿವಿ ಇಟ್ಟು ಬಾಬಾ ಕಳ್ಳಾಟದ ಆರೋಪ!
ಭದ್ರತೆಯ ಹೆಸರಿನಲ್ಲಿ ಮಹಿಳಾ ಹಾಸ್ಟೆಲ್‌, ಕೊಠಡಿಗಳು ಮತ್ತು ಸ್ನಾನಗೃಹಗಳ ಬಳಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸ್ವಾಮಿ ಚೈತನ್ಯಾನಂದ ತಮ ಮೊಬೈಲ್‌ನಲ್ಲಿ ಈ ಫೀಡ್‌ಗಳನ್ನು ನೇರವಾಗಿ ನಿಗಾ ಇಟ್ಟುಕೊಳ್ಳುತ್ತಿದ್ದರು. ಹುಡುಗಿಯರ ಎಲ್ಲಾ ಚಟುವಟಿಕೆಗಳನ್ನು 24/7 ಮೇಲ್ವಿಚಾರಣೆ ಮಾಡುತ್ತಿದ್ದರು. ಹೋಳಿ ಹಬ್ಬದಂದು ವಿದ್ಯಾರ್ಥಿನಿಯರನ್ನು ಸಾಲಿನಲ್ಲಿ ನಿಲ್ಲಿಸಿ, ಎಲ್ಲರೂ ಆತನಿಗೆ ನಮಸ್ಕರಿಸುವಂತೆ ಒತ್ತಾಯಿಸಲಾಗುತಿತ್ತು.

ನಂತರ ಆತ ಕೂದಲು ಮತ್ತು ಕೆನ್ನೆಗೆ ಬಣ್ಣ ಹಚ್ಚುತ್ತಿದ್ದ ಮತ್ತೊಂದು ಗಂಭೀರ ಆರೋಪವೆಂದರೆ, ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲೆಗಳನ್ನು ಸಂಸ್ಥೆಯು ಹಿಂತಿರುಗಿಸಲಿಲ್ಲ ಎನ್ನಲಾಗಿದೆ.
ಆಗಸ್ಟ್‌ 25ರಂದು ಇನ್ನೊಂದು ಎಫ್‌ಐಆರ್‌ ದಾಖಲಾಗಿ, ಸಂಸ್ಥೆಯ ಬೇಸ್‌‍ಮೆಂಟ್‌ನಲ್ಲಿ ಸ್ವಾಮಿ ಬಳಸುತ್ತಿದ್ದ ಲಕ್ಷ್ವರಿ ವೊಲ್ವೊ ಕಾರ್‌ ಜಪ್ತಿ ಮಾಡಲಾಗಿದೆ. ಆತನ ಆಸ್ತಿಗಳು, ಬ್ಯಾಂಕ್‌ ಖಾತೆಗಳು ಮತ್ತು ವಿದೇಶ ಪ್ರಯಾಣಗಳನ್ನು ತನಿಖೆ ಮಾಡಲಾಗುತ್ತಿದೆ.
2009 ಮತ್ತು 2016ರಲ್ಲಿ ಇಬ್ಬರು ಮೊಲೆಸ್ಟೇಶನ್‌ ಕೇಸ್‌‍ಗಳಲ್ಲಿ ಆತನ ವಿರುದ್ಧ ಪ್ರಕರಣಗಳಿದ್ದು, ಒಂದರಲ್ಲಿ ಸ್ವಲ್ಪಕಾಲ ಬಂಧನಗೊಂಡಿದ್ದನು. ಆದರೆ, ಆಶ್ರಮವು ಯಾವ ಕ್ರಮವೂ ತೆಗೆದುಕೊಂಡಿರಲಿಲ್ಲ.

ದೆಹಲಿ ಪೊಲೀಸ್‌‍ ಡಿಪ್ಯೂಟಿ ಕಮಿಷನರ್‌ (ಸೌತ್‌ ವೆಸ್ಟ್‌) ಅಮಿತ್‌ ಗೋಯಲ್‌, ಆಗ್ರದಲ್ಲಿ ಸ್ವಾಮಿಯ ಸ್ಥಳವನ್ನು ಟ್ರ್ಯಾಕ್‌ ಮಾಡಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೃಷ್ಣಾ-ಭೀಮಾ ನದಿ ತೀರದಲ್ಲಿ ಪ್ರವಾಹ ಸ್ಥಿತಿ, ರಕ್ಷಣೆ-ಪರಿಹಾರ ಕಾರ್ಯ ಕೈಗೊಳ್ಳಲು ಸಿಎಂ ಸೂಚನೆ

ಕಲಬುರಗಿ,ಸೆ.28- ಭೀಮನದಿ ತೀರ ಹಾಗೂ ಬೆಣ್ಣೆತೋರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ತೀವ್ರ ನಿಗಾವಹಿಸಿ, ಅಗತ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆ ಹಾಗೂ ಕೃಷ್ಣ ನದಿಯ ಮಹಾರಾಷ್ಟ್ರದ ಉಜನಿ ಹಾಗೂ ನೀರ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಟ್ಟಿರುವುದರಿಂದ ಪ್ರವಾಹ ಸ್ಥಿತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹಾಗೂ ಕಲ್ಬುರ್ಗಿ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಅಗತ್ಯ ರಕ್ಷಣಾ, ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒ ಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಬೇಕು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಕ್ಷಣ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆಗಳನ್ನು ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು, ಜಲ ಸಂಪನೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಸ್ಥಳಕ್ಕೆ ಭೇಟಿ ನೀಡಬೇಕು, ಮಾನವ ಮತ್ತು ರಾಸುಗಳ, ಜಾನವಾರುಗಳ ಪ್ರಾಣಹಾನಿ ಆಗದಂತೆ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಸಂತ್ರಸ್ಥರಿಗೆ ಆಹಾರ ಕೇಂದ್ರಗಳು, ಜಾನವಾರುಗಳಿಗೆ ಅಗತ್ಯ ಮೇವಿನ ವ್ಯವಸ್ಥೆ ಜೊತೆಗೆ ಜನಜಾನುವಾರು ಪ್ರಾಣಕ್ಕೆ ಕುತ್ತು ಉಂಟಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಬೇಕೆಂದು ಸಿಎಂ ಮುನ್ನೆಚ್ಚರಿಕೆ ನೀಡಿದ್ದಾರೆ.