ಮೈಸೂರು, ನ.3- ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ತಾವು ದೆಹಲಿಗೆ ತೆರಳುತ್ತಿದ್ದು ಸಚಿವ ಸಂಪುಟ ಪುನಾರಚನೆಯ ಕುರಿತು ವರಿಷ್ಠರ ಜೊತೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನವೆಂಬರ್ 15 ರಂದು ತಾವು ದೆಹಲಿಗೆ ತೆರಳುತ್ತಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ,
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಜೊತೆ ಚರ್ಚೆ ನಡೆಸುತ್ತೇನೆ ಎನ್ನುವ ಮೂಲಕ ಸಚಿವ ಸಂಪುಟ ಪುನರ್‌ರಚನೆಯ ಸುಳಿವು ನೀಡಿದರು.
ನಾಯಕತ್ವದ ಬದಲಾವಣೆ ಬಗ್ಗೆ ವರಿಷ್ಠ ಮಂಡಳಿಯ ಯಾವ ನಾಯಕರೂ ಮಾತನಾಡಿಲ್ಲ. ಹೀಗಿರುವಾಗ ಅನಗತ್ಯ ವದ್ದಂತಿಗಳು ಏಕೆ? ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ವರಿಷ್ಠ ನಾಯಕರು ಹೇಳದ ಹೊರತು, ಯಾರು ಏನೇ ಚರ್ಚೆ ಮಾಡಿದರೂ ಅದು ನಗಣ್ಯ. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಬೇಕು, ಅದಕ್ಕೆ ಮಾತ್ರ ಬೆಲೆ ಇದೆ. ಅದು ಬಿಟ್ಟು ಜನ ಮಾತನಾಡುತ್ತಾರೆ ಎಂದು ವದ್ದಂತಿಗಳನ್ನು ಹರಡಬೇಡಿ. ಜನರಿಗಿಂತಲೂ ಮಾಧ್ಯಮಗಳಲ್ಲಿಯೇ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಹಾರ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವಂತೆ ತಮಗೆ ಈ ವರೆಗೂ ಕರೆ ಬಂದಿಲ್ಲ. ಆಹ್ವಾನ ಬಂದರೆ ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿದರು.ಬಿಹಾರದಲ್ಲಿ ಇಂಡಿಯಾ ರಾಜಕೀಯ ಕೂಟ ಗೆಲುವು ಸಾಧಿಸಲಿದೆ ಎಂದು ಈವರೆಗಿನ ವಾತಾವರಣದ ಪ್ರಕಾರ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಬಿಹಾರದ ಮೂಲದವರು ಹೆಚ್ಚು ಜನ ನೆಲೆಸಿದ್ದಾರೆ. ಅವರು ಬಿಹಾರಕ್ಕೆ ತೆರಳಿ ಮತ ನೀಡಬೇಕು ಎಂದು ಕರೆ ನೀಡುತ್ತಿದ್ದೇವೆ. ಆದರೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂದು ಕಾದು ನೋಡುತ್ತೇವೆ ಎಂದರು.
ಬಿಹಾರದಲ್ಲಿ ದೀರ್ಘಕಾಲ ನಿತೀಶ್‌ಕುಮಾರ್ ಮುಖ್ಯಮಂತ್ರಿಯಾಗಿರುವುದರಿಂದ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿಯವರ ಭ್ರಷ್ಟಚಾರ, ದುರಾಡಳಿತ ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟದ ಗೆಲುವಿಗೆ ಕಾರಣವಾಗಲಿದೆ ಎಂದು ಹೇಳಿದರು.
ಬಿಹಾರದಲ್ಲಿ ಚುನಾವಣೆಯ ಕಾರಣಕ್ಕಾಗಿ ಏಕ ಕಾಲಕ್ಕೆ 10 ಸಾವಿರ ರೂ. ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ 1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ತಲಾ 2 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಈವರೆಗೂ ಸುಮಾರು ಒಂದು ಲಕ್ಷ ಕೋಟಿಗೂ ಹೆಚ್ಚಿನ ಹಣ ಖರ್ಚುಮಾಡಿದ್ದೇವೆ ಎಂದರು.
ನಿತೀಶ್‌ಕುಮಾರ್ ಅವರಿಗೆ ರಾಜಕೀಯ ಸಿದ್ಧಾಂತವಿಲ್ಲ. ಕಾಂಗ್ರೆಸ್, ಬಿಜೆಪಿ, ಲಾಲುಪ್ರಸಾದ್ ಯಾದವ್‌ರ ಆರ್‌ಜೆಡಿ ಸೇರಿದಂತೆ ಎಲ್ಲರ ಜೊತೆಯೂ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಬಿಹಾರದಲ್ಲಿ ಬಡತನ ಹೆಚ್ಚಿದ್ದು, ಅಲ್ಲಿರುವ ಬಡವರು, ಹಿಂದುಳಿದ ವರ್ಗದವರು, ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯ ಕಾಡಂಚಿನಲ್ಲಿ ಹುಲಿಗಳ ದಾಳಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿಯವರು, ನಿಜ ಹೇಳಬೇಕೆಂದರೆ ಕಾಡಿನಲ್ಲಿ ಜನರ ಓಡಾಟ ಹೆಚ್ಚಾಗುತ್ತಿವೆ. ರೆಸಾರ್ಟ್‌ಗಳನ್ನು ಮಾಡಿಕೊಂಡಿದ್ದಾರೆ, ಸಫಾರಿಗಳು ಹೆಚ್ಚಾಗಿವೆ ಈ ಕಾರಣಕ್ಕೆ ವನ್ಯ ಜೀವಿಗಳು ಕಾಡಿನಿಂದ ಹೊರ ಬರುತ್ತಿವೆ ಎಂದರು.
ಕಾಡಿನಲ್ಲಿ ನೀರು ಮತ್ತು ಮೇವಿನ ಕೊರತೆ ಇದೆ. ಜೊತೆಗೆ ಚಿರತೆಯ ಹಾವಳಿಯೂ ಹೆಚ್ಚಾಗಿದೆ. ಆನೆ, ಜಿಂಕೆ, ಹುಲಿ, ಚಿರತೆ, ಕಾಡುಹಂದಿ, ಕಾಡುಎಮೆಗಳು ಮೇವು, ನೀರಿಗಾಗಿ ಜನವಸತಿ ಪ್ರದೇಶಗಳತ್ತ ಬರುತ್ತಿವೆ ಎಂದು ವಿಶ್ಲೇಷಿಸಿದರು.
ಅರಣ್ಯ ಸಚಿವರು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ತಾವು ಕೂಡ ಅರಣ್ಯಾಧಿಕಾರಿಗಳ ಜೊತೆ ಸಭೆ ಮಾಡಿ ಚರ್ಚಿಸುತ್ತೇನೆ. ಅಕ್ರಮವಾಗಿರುವ ರೆಸಾರ್ಟ್‌ಗಳಿಗೆ ಕಡಿವಾಣ ಹಾಕಲಾಗುವುದು. ಸಫಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ವಿವರಿಸಿದರು.
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅರ್ಹರಿಗೆ ನೀಡಲಾಗಿದೆ. ಯಾರಿಂದಲೂ ಅರ್ಜಿ ಪಡೆಯಲಾಗಿಲ್ಲ. ಎಲೆ ಮರೆಕಾಯಿಯಂತಿರುವವರನ್ನು ಹುಡುಕಿ ಪ್ರಶಸ್ತಿ ನೀಡಲಾಗಿದೆ. ಸಾಮಾಜಿಕ ನ್ಯಾಯ, ಭೌಗೋಳಿಕ ಆದ್ಯತೆ ನೀಡಲಾಗಿದ್ದು ಪ್ರತಿ ಜಿಲ್ಲೆಗೂ ಅವಕಾಶ ಕಲ್ಪಿಸಿಲಾಗಿದೆ ಎಂದರು.