Home Blog Page 80

ಕೆಎಸ್‌‍ಆರ್‌ಟಿಸಿ ಬಸ್‌‍ ಹಾಗೂ ಬೈಕ್‌ ಮುಖಾಮುಖಿ ಡಿಕ್ಕಿ, ಮೂವರು ಯುವಕರ ಸಾವು

ಹಾಸನ,ಸೆ.28- ಕೆಎಸ್‌‍ಆರ್‌ಟಿಸಿ ಬಸ್‌‍ ಹಾಗೂ ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಹಳ್ಳಿಮೈಸೂರು ಪೊಲೀಸ್‌‍ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.

ಇರ್ಫಾನ್‌ (25), ತರುಣ್‌ (26), ರೇವಂತ್‌ (27) ಮೃತಪಟ್ಟ ಬೈಕ್‌ ಸವಾರರು. ಈ ಮೂವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ಹೊಳೆನರಸೀಪುರ ತಾಲ್ಲೂಕಿನ ಎಡೇಗೌಡನಹಳ್ಳಿ ಬಳಿ ಎದುರಿನಿಂದ ಬಸ್‌‍ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಹೊಡೆದ ರಭಸಕ್ಕೆ ಬೈಕ್‌ ಉರಳಿಬಿದ್ದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮಧ್ಯೆ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧ ಹಳ್ಳಿಮೈಸೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು : ವೈಮಾನಿಕ ಪ್ರದರ್ಶನದಲ್ಲಿ ಸಾರಂಗ್‌ ಚಮತ್ಕಾರ

ಮೈಸೂರು, ಸೆ.28- ಕೆಂಪು ಮತ್ತು ಬಿಳಿ ಬಣ್ಣದ ಚಿತ್ತಾರದ ಜೊತೆಗೆ ಬೆಂಕಿಯ ಉಂಡೆಗಳನ್ನು ಉಗುಳುತ್ತಾ ನಾ ಮುಂದೆ, ನೀ ನನ್ನ ಹಿಂದೆ ಎಂಬಂತೆ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಂಡ ಜನ ದಿಗೂಢರಾದರು.

ವೈಮಾನಿಕ ಹಾರಾಟದ ಮೂಲಕ ಸಾರಂಗ್‌ ತನ್ನ ಯಶಸ್ಸು ಮತ್ತು ಧೈರ್ಯವನ್ನು ಪ್ರದರ್ಶಿಸುತ್ತಿದ್ದರೆ, ಇತ್ತ ಮೈಸೂರಿನ ಜನತೆ ಶಿಳ್ಳೆ, ಚಪ್ಪಾಳೆ ಚೀತ್ಕಾರದೊಂದಿಗೆ ಬೆರಗಿನಿಂದ ವೀಕ್ಷಿಸಿದರು.

ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆ ಸಾರಂಗ ತಂಡದಿಂದ ನಡೆದ ವೈಮಾನಿಕ ಪ್ರದರ್ಶನದಲ್ಲಿ ನವಿಲಿನ ಚಿತ್ತಾರವಿರುವ ಲೋಹದ ಹಕ್ಕಿಗಳ ಚಮತ್ಕಾರಿ ಪ್ರದರ್ಶನಕ್ಕೆ ಮಾರುಹೋದರು.

ಸುಮಾರು 22 ರಿಂದ 25 ನಿಮಿಷಗಳ ಕಾಲ ಶರವೇಗದಲ್ಲಿ ನಡೆದ ವೈಮಾನಿಕ ಹಾರಾಟದಲ್ಲಿ ಡಾಲ್ಫೀನ್‌ ಸ್ಲೀಪ್‌‍, ಸಾರಂಗ್‌ ಸ್ಪ್ಲೀಟ್‌‍, ಹಾರ್ಟ್‌ ಫಾರ್ಮೇಷನ್‌, ಡಿವೈನ್‌ ಗ್ಲಾಸ್‌‍, ಡಬಲ್‌ ಏರೋ ಕ್ರಾಸ್‌‍ ಸೇರಿದಂತೆ ಒಟ್ಟು 16 ರೀತಿಯ ಮಾದರಿಗಳನ್ನು ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.

ಇದಕ್ಕಾಗಿ ಒಟ್ಟು 70 ಸಿಬ್ಬಂದಿಗಳು ಶ್ರಮಿಸಿದ್ದು, ಐದು ಸಾರಂಗಗಳು ಅತ್ಯದ್ಭುತವಾದ ಪ್ರದರ್ಶನ ನೀಡುವ ಮೂಲಕ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿಯ ಮನಸ್ಸನ್ನು ಸೂರೆಗೊಂಡರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-09-2025)

ನಿತ್ಯ ನೀತಿ : ದುರ್ಬಲ ಮನಸ್ಸು ಹೊಂದಿದ ವ್ಯಕ್ತಿ ಅನೇಕ ಸಮಸ್ಯೆಗಳಿಗೆ ಕಾರಣನಾಗುತ್ತಾನೆ. ಎಲ್ಲಾ ದುಸ್ಥಿತಿಗೂ, ಸುಸ್ಥಿತಿಗೂ ತಾನೇ ಕರ್ತನು.

ಪಂಚಾಂಗ : ಭಾನುವಾರ, 28-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ಷಷ್ಠಿ / ನಕ್ಷತ್ರ: ಜ್ಯೇಷ್ಠಾ / ಯೋಗ: ಆಯು / ಕರಣ: ಗರಜ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.12
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ: ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರುವುದು ಒಳಿತು.
ವೃಷಭ: ಖಾಸಗಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ನಿರಾಸಕ್ತಿ ಉಂಟಾಗಲಿದೆ.
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲಿದೆ. ಮಹಿಳೆಯರಿಗೆ ಯಶಸ್ಸು ಸಿಗಲಿದೆ.

ಕಟಕ: ಆರ್ಥಿಕವಾಗಿ ಪ್ರಗತಿ ಸಾ ಸುವಿರಿ. ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗಲಿದೆ.
ಸಿಂಹ: ಸಿನಿಮಾ ಕ್ಷೇತ್ರದಲ್ಲಿ ರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
ಕನ್ಯಾ: ಸಣ್ಣ ಕೈಗಾರಿಕೆ ವ್ಯಾಪಾರಿ ಗಳಿಗೆ ಲಾಭ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ.

ತುಲಾ: ನಿದ್ರಾಹೀನತೆ ಕಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು.
ವೃಶ್ಚಿಕ: ಸಾರ್ವಜನಿಕ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ.
ಧನುಸ್ಸು: ಹೂವಿನ ವ್ಯಾಪಾರಿಗಳಿಗೆ ಆದಾಯ ವೃದ್ಧಿ ಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ.

ಮಕರ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉತ್ತಮ ದಿನ.
ಕುಂಭ: ಮಕ್ಕಳ ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸಿ. ದಿನಾಂತ್ಯದಲ್ಲಿ ಆಯಾಸವಾಗಬಹುದು.
ಮೀನ: ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿರುವವರು ಉತ್ತಮ ಫಲ ನಿರೀಕ್ಷಿಸಬಹುದು.

ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಸಿಟಿರೌಂಡ್ಸ್, ರಸ್ತೆಗಳ ಪರಿಶೀಲನೆ

ಬೆಂಗಳೂರು, ಸೆ.27 : ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಇವುಗಳನ್ನು ದುರಸ್ತಿಗೊಳಿಸಿ, ರಸ್ತೆಗಳನ್ನು ಸಂಚಾರ ಯೋಗ್ಯವಾಗಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರು ನಗರ ರಸ್ತೆಗಳ ಪರಿಸ್ಥಿತಿ ಅರಿಯಲು ಸಿಟಿರೌಂಡ್ಸ್ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದ್ದು, ಈ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು. ರಸ್ತೆ ದುರಸ್ತಿ ಕಾರ್ಯ ಸರಿಯಿಲ್ಲದ ಕಾರಣ, ಸಂಬಂಧಪಟ್ಟ ಎಕ್ಸಿಕ್ಯೂಟಿವ್ ಇಂಜಿನಿಯರ್ ನ್ನು ಅಮಾನತ್ತುಗೊಳಿಸಲಾಗಿದೆ. ಗುಂಡಿ ಮುಚ್ಚಲು ಕೇವಲ ಜಲ್ಲಿ ಹಾಕಿ ಟಾರ್ ಹಾಕದೇ ಹಾಗೇ ಬಿಟ್ಟಿದ್ದ ಕಾರಣ, ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಹೆಣ್ಣೂರು ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ನಿರ್ವಹಣೆಯನ್ನು ಸಂಬಂಧಪಟ್ಟ ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ. 5 ಕಿ.ಮೀ. ರಸ್ತೆ ಕಾಮಗಾರಿಯನ್ನು ಕಿ.ಮೀ. ಒಂದಕ್ಕೆ 13 ಕೋಟಿಗಳನ್ನು ಸರ್ಕಾರ ವ್ಯಯಿಸುತ್ತಿದೆ. ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ರಸ್ತೆಗಳಲ್ಲಿ ಯಾವುದೇ ಗುಂಡಿಗಳಿಲ್ಲದಂತೆ ಮುಚ್ಚಬೇಕೆಂದು ಸೂಚನೆ ನೀಡಲಾಗಿದೆ ಎಂದರು.

ಬಿಜೆಪಿ ಅವಧಿಯಲ್ಲಿ ರಸ್ತೆ ದುರಸ್ತಿ ನಡೆಯಲಿಲ್ಲ
ರಸ್ತೆ ಪರಿಶೀಲನೆ ನಡೆಯಲಿದೆಯೆಂಬ ಕಾರಣಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಗುಂಡಿಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಸ್ತೆ ಗುಂಡಿಗಳಿರುವುದು ನಿಜ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರಸ್ತೆ ಗುಂಡಿಗಳ ದುರಸ್ತಿ ನಡೆದಿದ್ದರೆ, ರಸ್ತೆಗಳು ಇಂತಹ ಪರಿಸ್ಥಿತಿಗೆ ತಲುಪುತ್ತಿರಲಿಲ್ಲ. ಮಳೆಗಾಲ ಮುಗಿಯುವುದರೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ನ್ಯಾಯಾಲಯದ ನಿರ್ದೇಶನದಂತೆ ಸಮೀಕ್ಷೆ
ಸಮೀಕ್ಷೆಯಲ್ಲಿ ಯಾರೂ ಭಾಗವಹಿಸಬಾರದೆಂದು ಸಂಸದ ತೇಜಸ್ವಿ ಸೂರ್ಯ ಅವರು ಕರೆನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮೀಕ್ಷೆಯನ್ನು ತಡೆಯಬೇಕೆಂದು ನ್ಯಾಯಾಲಯಕ್ಕೆ ಹೋಗಲಾಗಿತ್ತು. ನ್ಯಾಯಾಲಯ ನೀಡಿರುವ ನಿರ್ದೇಶನಗಳಂತೆ ಸಮೀಕ್ಷೆಯನ್ನು ನಡೆಸಲಾಗುವುದು. ಈಗಾಗಲೇ ಸುಮಾರು 10 ಲಕ್ಷ ಜನರ ಸಮೀಕ್ಷೆ ಪೂರ್ಣಗೊಂಡಿದೆ ಎಂದರು.

ತ್ಯಾಜದ ಸಮರ್ಪಕ ನಿರ್ವಹಣೆಗೆ ಸೂಚನೆ
ತ್ಯಾಜ್ಯ ನಿರ್ವಹಣೆ ಸಮಸ್ಯೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ರಸ್ತೆಗಳ ಕೆಲೆವೆಡೆಗಳಲ್ಲಿ ತ್ಯಾಜ್ಯವನ್ನು ನಿರ್ವಹಿಸದೇ ಹಾಗೇ ಬಿಟ್ಟಿದ್ದು, ತ್ಯಾಜ್ಯವನ್ನು ತ್ವರಿತವಾಗಿ ತೆಗೆಯಬೇಕೆಂದು ಸೂಚನೆ ನೀಡಲಾಗಿದ್ದು,, ಇಲ್ಲವಾದಲ್ಲಿ ಸಂಬಂಧಪಟ್ಟ ಕಮೀಷನರ್ ಹಾಗೂ ಇಂಜಿನಿಯರ್ ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕರೂರ್‌ ಕಾಲ್ತುಳಿತ ದುರಂತದಲ್ಲಿ ಮೃತರ ಸಂಖ್ಯೆ 39ಕ್ಕೆ ಏರಿಕೆ

ಚೆನ್ನೈ,ಸೆ.28- ತಮಿಳು ನಟ ಹಾಗೂ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್‌ ಅವರ ಕರೂರ್‌ ರ್ಯಾಲಿ ವೇಳೆ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಸಾವಿನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಂಬತ್ತು ಮಕ್ಕಳು ಮತ್ತು 17 ಮಹಿಳೆಯರು ಸೇರಿದಂತೆ 39 ಜನರು ಮೃತಪಟ್ಟಿದ್ದಾರೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಘಟನೆಯಲ್ಲಿ ಮೃತಪಟ್ಟವರ ಪೈಕಿ 35 ಮಂದಿ ಮೃತದೇಹಗಳ ಗುರುತು ಪತ್ತೆಯಾಗಿದೆ. ಗುರುತು ಪತ್ತೆಯಾದವರಲ್ಲಿ ಕರೂರು ಜಿಲ್ಲೆಯವರು 28 ಜನ, ಈರೋಡ್‌, ತಿರುಪುರ, ಧಾರಾಪುರಂ ಜಿಲ್ಲೆಗಳ ತಲಾ ಇಬ್ಬರು, ಸೇಲಂ ಜಿಲ್ಲೆಯ ಒಬ್ಬರ ಗುರುತು ಪತ್ತೆಯಾಗಿದೆ. ಉಳಿದ 4 ಶವಗಳನ್ನು ಗುರುತಿಸುವ ಕಾರ್ಯವನ್ನು ಸ್ಥಳೀಯ ಪೊಲೀಸರು ಮಾಡುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಕರೂರು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕಾಲ್ತುಳಿತದಲ್ಲಿ ಗಾಯಗೊಂಡ 50 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೂರಿನ ಖಾಸಗಿ ಆಸ್ಪತ್ರೆಗಳಲ್ಲಿ 61 ಜನರೂ ಸೇರಿ ಒಟ್ಟು 111 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್‌ ಸನ್‌ ದೇವರ್ಶಿತಮ್‌ ಮಾತನಾಡಿ, 10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ದುರಂತಕ್ಕೆ ಕಾರಣಗಳನ್ನು ಪಟ್ಟಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಪೊಲೀಸ್‌‍ ಮೂಲಗಳ ಪ್ರಕಾರ, ಹೆಚ್ಚಿನ ಸಂಖ್ಯೆಯಲ್ಲಿ ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಇದರಿಂದ ಕಾಲ್ತುಳಿತ ಸಂಭವಿಸಿದೆ. ನಮಕ್ಕಲ್‌ನಲ್ಲಿ ರ್ಯಾಲಿಯ ನಂತರ ವಿಜಯ್‌ ಭಾಷಣಕ್ಕೆ ನಿಗದಿಯಾಗಿದ್ದ ಸ್ಥಳದಲ್ಲಿ ಕನಿಷ್ಠ 30,000 ಜನರು ಸೇರಿದ್ದರು ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ.

38 ಜನರ ಶವಗಳನ್ನು ಗುರುತಿಸಲಾಗಿದೆ. ಈ ಪೈಕಿ 14 ಜನರನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಒಬ್ಬ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಅವರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ದಿಂಡಿಗಲ್‌ ಜಿಲ್ಲಾಧಿಕಾರಿ ಎಸ್‌‍.ಸರವಣನ್‌ ತಿಳಿಸಿದ್ದಾರೆ. ರ್ಯಾಲಿಗೆ ಕನಿಷ್ಠ 30 ಸಾವಿರ ಜನರು ಸೇರಿದ್ದರು. ಅಲ್ಲದೆ ಅತೀವ ಬಿಸಿಲು ಮತ್ತು ಸೆಖೆಯಿಂದಾಗಿ ದಣಿದಿದ್ದ ಜನರ ಪೈಕಿ ಹಲವರು ಮೂರ್ಛೆ ಹೋಗಿದ್ದರು. ಇದೇ ಸಂದರ್ಭದಲ್ಲಿ ನಟ ವಿಜಯ್‌ ವೇದಿಕೆ ಮೇಲೆ ಆಗಮಿಸಿದಾಗ ಅವರನ್ನು ನೋಡಲು ಅಭಿಮಾನಿಗಳು ಏಕಾಏಕಿ ನುಗ್ಗಿದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಜನಸಂದಣಿ ಹೆಚ್ಚಾದಾಗ ಮತ್ತು ಬಿಸಿಲು ಮತ್ತು ಜನದಟ್ಟಣೆಯಿಂದಾಗಿ ಜನರು ಉಸಿರುಗಟ್ಟಿ ಬೀಳಲು ಆರಂಭವಾದಾಗ , ನಟ ವಿಜಯ್‌ ತಮ ಭಾಷಣವನ್ನು ನಿಲ್ಲಿಸಿ ಸಹಾಯಕ್ಕಾಗಿ ಜನಸಮೂಹದ ಮೇಲೆ ನೀರಿನ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿದರು ಎಂದು ಸಾಮಾಜಿಕ ಜಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೊಗಳಲ್ಲಿ ದಾಖಲಾಗಿದೆ. ಕರೂರಿನಲ್ಲಿ ಲಕ್ಷಾಂತರ ಜನರು ಬೆಳಿಗ್ಗೆಯಿಂದಲೇ ಕುಡಿಯುವ ನೀರು ಅಥವಾ ಆಹಾರವಿಲ್ಲದೆ ವಿಜಯ್‌ ಅವರನ್ನು ನೋಡಲು ಕಾಯುತ್ತಿದ್ದರು. ಗಾಳಿ ವ್ಯವಸ್ಥೆ ಇಲ್ಲದ ಕಾರಣ ಜನರು ಸುಸ್ತಾಗಿದ್ದರು. ಸಾವಿರಾರು ಜನರು ಸೇರಿದ್ದರಿಂದ ಅವರಿಗೆ ಅಲ್ಲಿಂದ ಹೊರಹೋಗಲು ಕೂಡ ಸಾಧ್ಯವಾಗಲಿಲ್ಲ. ವಿಜಯ್‌ ತಮ ಭಾಷಣ ಮುಗಿಸಿದ ನಂತರ, ಜನರು ಹೊರಹೋಗಲು ಪ್ರಯತ್ನಿಸಿದಾಗ ಕಾಲ್ತುಳಿತ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಇನ್ನು ದುರಂತದ ಕುರಿತು ಮಾತನಾಡಿದ ತಮಿಳುನಾಡು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾನಿರ್ದೇಶಕ (ಎಡಿಜಿಪಿ) ಎಸ್‌‍. ಡೇವಿಡ್ಸನ್‌ ದೇವಶಿರ್ವತಮ್‌ ಅವರು, ನಾವು ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಬೇಕಾಗಿದೆ. ದುರಂತದಲ್ಲಿ ಮೂವತ್ತೊಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ತಾಯಿ ಎದುರೇ ಮಗುವಿನ ಶಿರಚ್ಛೇದನ ಮಾಡಿದ ಮೆಂಟಲ್

ಧಾರ್‌(ಮಧ್ಯಪ್ರದೇಶ)ಸೆ.27- ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ತಾಯಿಯ ಮುಂದೆಯೇ 5 ವರ್ಷದ ಪುಟ್ಟ ಮಗುವನ್ನು ಶಿರಚ್ಛೇದನ ಮಾಡಿರುವ ಆಘಾತಕಾರಿ ಘಟನೆ ಮದ್ಯಪ್ರದೇಶದಲ್ಲಿ ನಡೆದಿದೆ. ಮನೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ವಿಕಾಸ್‌‍ ಎಂಬ ಬಾಲಕ ಶಿರಚ್ಛೇದನವಾಗಿರುವ ನತದೃಷ್ಟ.

ಆರೋಪಿ ಮಹೇಶ್‌ನನ್ನ ಗ್ರಾಮಸ್ಥರೇ ಹಿಗ್ಗಾಮುಗ್ಗ ಥಳಿಸಿದ್ದರಿಂದ ಅವನು ಕೂಡ ಸಾವನ್ನಪ್ಪಿದ್ದಾನೆ. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿದೆ.
ಮನೆಯಲ್ಲಿ ಆಟವಾಡುತ್ತಿದ್ದಂತೆ ಸದ್ದುಗದ್ದಲ ಇಲ್ಲದೆ ಬಂದ ಮಹೇಶ್‌, ಕೈಗೆ ಸಿಕ್ಕ ಹರಿತವಾದ ಗುದ್ದಲಿಯನ್ನು ಎತ್ತಿಕೊಂಡು ಮಗುವಿನ ಕುತ್ತಿಗೆಯನ್ನು ಮುಂಡದಿಂದ ಬೇರ್ಪಡಿಸಿದ್ದಾರೆ. ಪುನಃ ಭುಜಕ್ಕೆ ಹೊಡೆದು ದೇಹವನ್ನು ವಿರೂಪಗೊಳಿಸಿದ್ದಾನೆ.

ಈ ಘಟನೆ ನೋಡಿದ ತಾಯಿ ಒಂದು ಕ್ಷಣ ದಿಗ್ಬ್ರಾಂತಕ್ಕೆ ಒಳಗಾಗಿ ರಕ್ಷಣೆಗೆ ಅಕ್ಕಪಕ್ಕದವರನ್ನು ಕೂಗಿ ಕರೆದರು. ನೆರೆಹೊರೆಯವರು ಧಾವಿಸಿ ಆರೋಪಿಯನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದರು.

ಮಗುವನ್ನು ಉಳಿಸುವ ಪ್ರಯತ್ನ ಮಾಡಿದರಾದರೂ ಆ ವೇಳೆಗಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಘಟನೆಯನ್ನು ಅತ್ಯಂತ ಹೃದಯವಿದ್ರಾವಕ ಎಂದು ಕರೆದಿರುವ ಧಾರ್‌ ಪೊಲೀಸ್‌‍ ವರಿಷ್ಠಾಧಿಕಾರಿ ಮಯಾಂಕ್‌ ಆವಸ್ತಿ ಕಂಬನಿ ಮಿಡಿದಿದ್ದಾರೆ. ಆರೋಪಿಯು ಆಲಿರಾಜ್‌ಪುರ ಜಿಲ್ಲೆಯ ಜೋಬತ್‌ ಬಾಗ್ಡಿ ನಿವಾಸಿ. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಈತ ಕೆಲ ದಿನಗಳಿಂದ ಮನೆಯಿಂದ ಕಾಣೆಯಾಗಿದ್ದ. ಈ ಘಟನೆಗೂ ಮೊದಲು ಆತ ಅಂಗಡಿಯೊಂದರಲ್ಲಿ ಕದಿಯಲು ಯತ್ನಿಸಿರುವ ಘಟನೆಯೂ ನಡೆದಿದೆ.

ಮಹಿಳೆಯರ ರಕ್ಷಣೆಗೆ ಬಂದಿದೆ ರಾಣಿ ಚೆನ್ನಮ ಪಡೆ

ಬೆಂಗಳೂರು,ಸೆ.27- ಮಹಿಳೆಯರು ಕಿರುಕುಳ, ದೌರ್ಜನ್ಯಕ್ಕೊಳಗಾದರೆ 112 ಗೆ ಕರೆ ಮಾಡಿದರೆ ತಕ್ಷಣ ರಾಣಿ ಚೆನ್ನಮ ಪಡೆ ನಿಮ ಸಹಾಯಕ್ಕೆ ಧಾವಿಸಲಿದೆ. ಈ ಪಡೆ ನಿನ್ನೆಯಿಂದ ಉತ್ತರ ವಿಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಒಬ್ಬರು ಮಹಿಳಾ ಇನ್‌್ಸಪೆಕ್ಟರ್‌, ನಾಲ್ವರು ಸಬ್‌ಇನ್ಸ್ ಪೆಕ್ಟರ್‌, 15 ಮಂದಿ ಸಿಬ್ಬಂದಿ ಸೇರಿ 20 ಮಂದಿ ತಂಡದಲ್ಲಿರುತ್ತಾರೆ.

ರಾಣಿ ಚೆನ್ನಮ ಪಡೆಯನ್ನು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ನಿನ್ನೆ ಉದ್ಘಾಟನೆ ಮಾಡಿದ್ದು, ಈ ಪಡೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗಸ್ತಿನಲ್ಲಿರಲಿದೆ.

ದಾರಿಯಲ್ಲಿ ಹೋಗುವ ಮಹಿಳೆಯರೊಂದಿಗೆ ಯಾರಾದರೂ ಅನುಚಿತವಾಗಿ ವರ್ತಿಸಿದರೆ, ಚುಡಾಯಿಸಿದರೆ, ಕಿರುಕುಳ ನೀಡಿದರೆ ಬಂಧನಕ್ಕೊಳಗಾಗುತ್ತೀರಿ ಎಚ್ಚರಿಕೆ.ಈ ಪಡೆ ಮಹಿಳೆಯರ ರಕ್ಷಣೆ ಮಾತ್ರವಲ್ಲದೇ ಅವರಿಗೆ ಕಾನೂನು ಕುರಿತು ಜಾಗೃತಿ ಮೂಡಿಸಲಿದೆ ಹಾಗೂ ಸ್ವಯಂ ರಕ್ಷಣೆ ಬಗ್ಗೆ ಶಾಲಾ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿನಿಯರಿಗೆ ತರಬೇತಿ ಕಾರ್ಯಾಗಾರ ನೀಡಲಿದೆ.

ಬಸ್‌‍ ನಿಲ್ದಾಣ, ಶಾಲಾ ಕಾಲೇಜುಗಳ ಸಮೀಪ ಸೇರಿದಂತೆ ಜನ ಸಂದಣಿ ಪ್ರದೇಶಗಳಲ್ಲಿ ಚೆನ್ನಮ ಪಡೆ ಗಸ್ತು ನಡೆಸಲಿದ್ದು, ತೊಂದರೆಗೊಳಗಾದ ಮಹಿಳೆಯರು ತಕ್ಷಣ 112 ಗೆ ಕರೆ ಮಾಡಿದರೆ, ಆ ಮಾಹಿತಿ ಚೆನ್ನಮ ಪಡೆಗೆ ರವಾನೆಯಾಗಲಿದ್ದು, ಆಗ ಕ್ಷಣಾರ್ಧದಲ್ಲಿ ನಿಮ ಸಹಾಯಕ್ಕೆ ಬರಲಿದೆ.

ಜೇಬಿನಿಂದ ಹಣ ಕದಿಯುತ್ತಿದ್ದ ಮಗಳನ್ನು ಕತ್ತು ಹಿಸುಕಿ ಕೊಂದ ತಂದೆ

ಬುಲಂದ್‌ಶಹರ್‌, ಸೆ. 27- ಜೇಬಿನಿಂದ ಹಣ ಕದ್ದ ಅಪ್ರಾಪ್ತ ಮಗಳನ್ನು ಪಾಪಿ ತಂದೆಯೊಬ್ಬ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ 13 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳನ್ನು ಬಿಚೌಲಾ ಗ್ರಾಮದ ನಿವಾಸಿ ಮತ್ತು ಏಳನೇ ತರಗತಿಯ ವಿದ್ಯಾರ್ಥಿನಿ ಸೋನಮ್‌ (13) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ, ಅನುಪ್‌ ಶಹರ್‌ ಪೊಲೀಸ್‌‍ ಠಾಣೆ ಪ್ರದೇಶದ ಸೇತುವೆಯ ಕೆಳಗೆ ಪೊದೆಗಳಲ್ಲಿ ಸಮವಸ್ತ್ರದಲ್ಲಿದ್ದ ಶಾಲಾ ಬಾಲಕಿಯ ಶವ ಪತ್ತೆಯಾಗಿದೆ ಎಂದು ಬುಲಂದ್‌ಶಹರ್‌ ಪೊಲೀಸರಿಗೆ ಕರೆ ಬಂದಿತು. ಪೊಲೀಸ್‌‍ ತನಿಖೆಯಲ್ಲಿ ಸೋನಂ ಗುರುವಾರ ಶಾಲೆಗೆ ಹೋಗಿದ್ದಳು ಎಂದು ತಿಳಿದುಬಂದಿದೆ. ಆಕೆಯ ತಂದೆ ಅಜಯ್‌ ಶರ್ಮಾ ಶಾಲೆ ಮುಗಿದ ನಂತರ ಆಕೆಯನ್ನು ಕರೆದುಕೊಂಡು ಹೋದರು, ಆದರೆ ಮನೆಗೆ ಕರೆದೊಯ್ಯುವ ಬದಲು, ತಮ್ಮ ಹೊಲಕ್ಕೆ ಕರೆದುಕೊಂಡು ಹೋಗಿದ್ದರು.

ವಿಚಾರಣೆಯ ಸಮಯದಲ್ಲಿ, ಶರ್ಮಾ ತನ್ನ ಮಗಳನ್ನು ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಂದು ನಂತರ ಆಕೆಯ ದೇಹವನ್ನು ಹತ್ತಿರದ ಕಾಲುವೆಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ತಪ್ಪೊಪ್ಪಿಗೆಯ ಆಧಾರದ ಮೇಲೆ ಆಕೆಯ ಬ್ಯಾಗ್‌ ಅನ್ನು ಹೊಲದಿಂದ ವಶಪಡಿಸಿಕೊಳ್ಳಲಾಯಿತು.

ಪೊಲೀಸರ ಪ್ರಕಾರ, ಶರ್ಮಾ ತನ್ನ ಮಗಳು ಮನೆಯಿಂದ ಹಣವನ್ನು ಕದಿಯುತ್ತಿದ್ದಳು ಎಂದು ಹೇಳಿಕೊಂಡಿದ್ದಾನೆ, ಇದರಿಂದಾಗಿ ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು.ಮಗಳನ್ನು ಕೊಂದ ನಂತರ, ಆ ವ್ಯಕ್ತಿ ಶಾಲೆಗೆ ತನ್ನ ಮಗಳು ಸಂಬಂಧಿಕರೊಂದಿಗೆ ಇರಲು ಹೋಗಿದ್ದಾಳೆ ಮತ್ತು ಮುಂದಿನ ಮೂರು ನಾಲ್ಕು ದಿನಗಳವರೆಗೆ ಶಾಲೆಗೆ ಹಿಂತಿರುಗುವುದಿಲ್ಲ ಎಂದು ತಿಳಿಸಿದ್ದ. ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಹೊಸಪೇಟೆ : ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ, 8 ಮಂದಿಗೆ ಗಾಯ

ಹೊಸಪೇಟೆ,ಸೆ.27– ವಕೀಲರೊಬ್ಬರ ಮನೆಯಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಪೋಟದಲ್ಲಿ 8 ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಗಾದಿಗನೂರಿನಲ್ಲಿ ಮುಂಜಾನೆ ನಡೆದಿದೆ. ಹೊಸಪೇಟೆ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ವಕೀಲ ಹಾಲಪ್ಪ ಅವರಿಗೆ ಸೇರಿದ ಮನೆಯಲ್ಲಿ ಇಂದು ಮುಂಜಾನೆ 5.15ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ತೋರಣಗಲ್‌ನ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕವಿತಾ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಕುಸಿದಿದೆ.ಬೆಳಿಗ್ಗೆ ಸ್ಟವ್‌ ಹಚ್ಚಲು ಕವಿತಾ ಯತ್ನಿಸಿದಾಗ ಏಕಾ ಏಕಿ ಬೆಂಕಿ ಹತ್ತಿಕೊಂಡಿತು. ಸ್ಫೋಟದಿಂದ ಮನೆ ಶೇ 50ರಷ್ಟು ಧ್ವಂಸವಾಗಿದೆ.
ಕವಿತಾ ಗೆ ತೀವ್ರ ಸುಟ್ಟ ಗಾಯವಾಗಿದ್ದು, ಹಾಲಪ್ಪ, ಮೈಲಾರಪ್ಪ, ಗಂಗಮ್ಮ, ಮಲ್ಲಮ ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಹೊಸಪೇಟೆಯಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಕ್ಕಮಕ್ಕದ ಮನೆಯವರು ಘಟನೆಯಿಂದ ಭಯ ಭೀತರಾಗಿದ್ದಾರೆ.

“ಅಧಿಕಾರದಲ್ಲಿರೋದು ಯಾರು ಎಂಬುದನ್ನು ಮರೆತಿದ್ದಾರೆ ಅನಿಸುತ್ತೆ” : ಗಲಭೆ ಕೋರರಿಗೆ ಯೋಗಿ ವಾರ್ನಿಂಗ್

ಲಖ್ನೋ,ಸೆ.27- ಅವ್ಯವಸ್ಥೆಯನ್ನು ಸೃಷ್ಟಿಸಲು ಯಾರೇ ಪ್ರಯತ್ನಿಸಿದರೂ ಅಂಥವರನ್ನು ಸರ್ಕಾರ ಹತ್ತಿಕ್ಕುತ್ತದೆ. ಗಲಭೆಕೋರರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮತ್ತೆ ಎಂದಿಗೂ ಅವ್ಯವಸ್ಥೆಯನ್ನು ಸೃಷ್ಟಿಸುವ ಬಗ್ಗೆ ಯೋಚಿಸದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಬರೇಲಿ ಮತ್ತು ಮೌನಲ್ಲಿ ನಡೆದ ಹಿಂಸಾಚಾರದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಹಬ್ಬದ ಸಮಯದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮತ್ತು ರಾಜ್ಯದಲ್ಲಿ ಶಾಂತಿ ಕಾಪಾಡಲು ನಿರ್ದೇಶನಗಳನ್ನು ನೀಡಿದ್ದಾರೆ.
ದಸರಾ ಕೆಟ್ಟದ್ದರ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುತ್ತದೆ. ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಈಗ ಬಂದಿದೆ. ಮೆರವಣಿಗೆಗಳು ಮತ್ತು ಪ್ರದರ್ಶನಗಳ ಮೇಲೆ ಯಾವುದೇ ಗುಂಪು ದುಷ್ಕತ್ಯ ನಡೆಸಿದರೆ ಸಹಿಸುವುದಿಲ್ಲ ಎಂದು ಹೇಳುವ ಮೂಲಕ ಸಿಎಂ ಯೋಗಿ ಗಲಭೆಕೋರರಿಗೆ ಕಠಿಣ ಎಚ್ಚರಿಕೆ ನೀಡಿದರು. ಬರೇಲಿಯ ಪರಿಸ್ಥಿತಿ ಪ್ರಸ್ತುತ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ.

ಐ ಲವ್‌ ಮುಹಮದ್‌ ಪೋಸ್ಟರ್‌ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರದ ಪ್ರಾರ್ಥನೆಯ ನಂತರ ಉತ್ತರಪ್ರದೇಶದ ಬರೇಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಾನ್ಪುರದಲ್ಲಿ ಪ್ರಾರಂಭವಾದ ಈ ವಿಷಯವು ಈಗ ಬರೇಲಿ ಮತ್ತು ಮೌ ಸೇರಿದಂತೆ ಇತರ ನಗರಗಳಿಗೂ ಹರಡಿದೆ.

ಘರ್ಷಣೆಯ ಸಮಯದಲ್ಲಿ, ಪೊಲೀಸರು ಲಾಠಿ ಚಾರ್ಜ್‌ ಮತ್ತು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದು, ಇದರಿಂದಾಗಿ ಜನಸಮೂಹವನ್ನು ಚದುರಿಸಲು ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಪ್ರತಿಭಟನಾಕಾರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಕಲ್ಲು ತೂರಾಟದಲ್ಲಿ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ಬರೇಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 30 ಗಲಭೆಕೋರರನ್ನು ಬಂಧಿಸಲಾಗಿದೆ. ಆದರೆ 50ಕ್ಕೂ ಹೆಚ್ಚು ಜನರು ಬಂಧನದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇತ್ತೇಹಾದ್‌-ಎ-ಮಿಲ್ಲತ್‌ ಕೌನ್ಸಿಲ್‌ (ಐಎಂಸಿ) ಮುಖ್ಯಸ್ಥ ಮೌಲಾನಾ ತೌಕೀರ್‌ ರಜಾ ಖಾನ್‌ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

ಕಾನ್ಪುರದಲ್ಲಿ ಆರಂಭವಾದ ಐ ಲವ್‌ ಮುಹಮದ್‌ ಪೋಸ್ಟರ್‌ ವಿವಾದವು ಈಗ ಬರೇಲಿ ಮತ್ತು ಮೌ ನಂತಹ ನಗರಗಳನ್ನು ತಲುಪಿದೆ. ಪ್ರಾರ್ಥನೆಯ ನಂತರ, ರಜಾ ಅವರ ಕರೆಯ ಮೇರೆಗೆ ಬರೇಲಿಯ ಇಸ್ಲಾಮಿಯಾ ಮೈದಾನದ ಹೊರಗೆ ನೂರಾರು ಪ್ರತಿಭಟನಾಕಾರರು ಜಮಾಯಿಸಿದ್ದರು. ಅವರು ಐ ಲವ್‌ ಮುಹಮದ್‌ ಸಂದೇಶವನ್ನು ಬೆಂಬಲಿಸುವ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು. ಪ್ರದೇಶದಲ್ಲಿ ಈಗಾಗಲೇ ಸೆಕ್ಷನ್‌ 144 ವಿಧಿಸಲಾಗಿತ್ತು. ಮಸೀದಿಯ ಹೊರಗೆ ಜಮಾಯಿಸಿದ್ದ ಜನಸಮೂಹವನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದರು.

ಬರೇಲಿಯಲ್ಲಿ ನಡೆದ ಹಿಂಸಾಚಾರವು ಐದು ದಿನಗಳ ಅವಧಿಯಲ್ಲಿ ಪೂರ್ವನಿಯೋಜಿತವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಪ್ರಸ್ತುತ ಪಿತೂರಿಯಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳನ್ನು ಗುರುತಿಸುತ್ತಿದ್ದಾರೆ.

ಗಲಭೆಕೋರರು ಮತ್ತು ಅಶಾಂತಿಯಲ್ಲಿ ಭಾಗಿಯಾಗಿರುವ ಸಂಘಟಕರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌‍ಎ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಪ್ರಮುಖ ಸಂಘಟಕರ ವಿರುದ್ಧ ಔಪಚಾರಿಕವಾಗಿ ಎನ್‌ಎಸ್‌‍ಎಯನ್ನು ಅನ್ವಯಿಸಲು ಸಿದ್ಧತೆಗಳು ನಡೆಯುತ್ತಿವೆ.

ಹೆಚ್ಚುವರಿಯಾಗಿ, ಎಲ್ಲಾ ಶಂಕಿತ ಭಾಗವಹಿಸುವವರ ಕರೆ ವಿವರ ದಾಖಲೆಗಳನ್ನು ವಿಶ್ಲೇಷಿಸಲಾಗುತ್ತಿದೆ ಮತ್ತು ಘರ್ಷಣೆಗಳು ನಡೆದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗಲಭೆಕೋರರನ್ನು ಗುರುತಿಸಲಾಗುತ್ತಿದೆ.

ತೌಕೀರ್‌ ರಝಾ ಪಾತ್ರ
ಬರೇಲಿ ಹಿಂಸಾಚಾರದಲ್ಲಿ ರಜಾ ಪ್ರಮುಖ ವ್ಯಕ್ತಿಯಾಗಿ ಹೊರಹೊಮಿದ್ದಾರೆ, ಪೊಲೀಸ್‌‍ ಮೂಲಗಳು ಅವರನ್ನು ಗಲಭೆಯ ಹಿಂದಿನ ಮಾಸ್ಟರ್‌ ಮೈಂಡ್‌ ಎಂದು ಗುರುತಿಸಿವೆ. ಗುರುವಾರ ರಾತ್ರಿಯಿಂದ ಅವರು ಸ್ನೇಹಿತನ ಮನೆಯಲ್ಲಿ ತಂಗಿದ್ದರು. ಪೊಲೀಸರು ರಜಾ ಅವರನ್ನು ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಮನೆಯಲ್ಲಿದ್ದ ಎಲ್ಲರ ಮೊಬೈಲ್‌ ಫೋನ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಹಿಂಸಾಚಾರದಲ್ಲಿ ಅವರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ಭಾಗಿಯಾಗಿರುವುದು ಸಾಬೀತಾದರೆ, ಅವರ ವಿರುದ್ಧ ಎಫ್‌ಐಆರ್‌ದಾಖಲಿಸಲಾಗಿದೆ