Home Blog Page 81

ಮಹಿಳೆಯರ ರಕ್ಷಣೆಗೆ ಬಂದಿದೆ ರಾಣಿ ಚೆನ್ನಮ ಪಡೆ

ಬೆಂಗಳೂರು,ಸೆ.27- ಮಹಿಳೆಯರು ಕಿರುಕುಳ, ದೌರ್ಜನ್ಯಕ್ಕೊಳಗಾದರೆ 112 ಗೆ ಕರೆ ಮಾಡಿದರೆ ತಕ್ಷಣ ರಾಣಿ ಚೆನ್ನಮ ಪಡೆ ನಿಮ ಸಹಾಯಕ್ಕೆ ಧಾವಿಸಲಿದೆ. ಈ ಪಡೆ ನಿನ್ನೆಯಿಂದ ಉತ್ತರ ವಿಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಒಬ್ಬರು ಮಹಿಳಾ ಇನ್‌್ಸಪೆಕ್ಟರ್‌, ನಾಲ್ವರು ಸಬ್‌ಇನ್ಸ್ ಪೆಕ್ಟರ್‌, 15 ಮಂದಿ ಸಿಬ್ಬಂದಿ ಸೇರಿ 20 ಮಂದಿ ತಂಡದಲ್ಲಿರುತ್ತಾರೆ.

ರಾಣಿ ಚೆನ್ನಮ ಪಡೆಯನ್ನು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ನಿನ್ನೆ ಉದ್ಘಾಟನೆ ಮಾಡಿದ್ದು, ಈ ಪಡೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗಸ್ತಿನಲ್ಲಿರಲಿದೆ.

ದಾರಿಯಲ್ಲಿ ಹೋಗುವ ಮಹಿಳೆಯರೊಂದಿಗೆ ಯಾರಾದರೂ ಅನುಚಿತವಾಗಿ ವರ್ತಿಸಿದರೆ, ಚುಡಾಯಿಸಿದರೆ, ಕಿರುಕುಳ ನೀಡಿದರೆ ಬಂಧನಕ್ಕೊಳಗಾಗುತ್ತೀರಿ ಎಚ್ಚರಿಕೆ.ಈ ಪಡೆ ಮಹಿಳೆಯರ ರಕ್ಷಣೆ ಮಾತ್ರವಲ್ಲದೇ ಅವರಿಗೆ ಕಾನೂನು ಕುರಿತು ಜಾಗೃತಿ ಮೂಡಿಸಲಿದೆ ಹಾಗೂ ಸ್ವಯಂ ರಕ್ಷಣೆ ಬಗ್ಗೆ ಶಾಲಾ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿನಿಯರಿಗೆ ತರಬೇತಿ ಕಾರ್ಯಾಗಾರ ನೀಡಲಿದೆ.

ಬಸ್‌‍ ನಿಲ್ದಾಣ, ಶಾಲಾ ಕಾಲೇಜುಗಳ ಸಮೀಪ ಸೇರಿದಂತೆ ಜನ ಸಂದಣಿ ಪ್ರದೇಶಗಳಲ್ಲಿ ಚೆನ್ನಮ ಪಡೆ ಗಸ್ತು ನಡೆಸಲಿದ್ದು, ತೊಂದರೆಗೊಳಗಾದ ಮಹಿಳೆಯರು ತಕ್ಷಣ 112 ಗೆ ಕರೆ ಮಾಡಿದರೆ, ಆ ಮಾಹಿತಿ ಚೆನ್ನಮ ಪಡೆಗೆ ರವಾನೆಯಾಗಲಿದ್ದು, ಆಗ ಕ್ಷಣಾರ್ಧದಲ್ಲಿ ನಿಮ ಸಹಾಯಕ್ಕೆ ಬರಲಿದೆ.

ಜೇಬಿನಿಂದ ಹಣ ಕದಿಯುತ್ತಿದ್ದ ಮಗಳನ್ನು ಕತ್ತು ಹಿಸುಕಿ ಕೊಂದ ತಂದೆ

ಬುಲಂದ್‌ಶಹರ್‌, ಸೆ. 27- ಜೇಬಿನಿಂದ ಹಣ ಕದ್ದ ಅಪ್ರಾಪ್ತ ಮಗಳನ್ನು ಪಾಪಿ ತಂದೆಯೊಬ್ಬ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ 13 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳನ್ನು ಬಿಚೌಲಾ ಗ್ರಾಮದ ನಿವಾಸಿ ಮತ್ತು ಏಳನೇ ತರಗತಿಯ ವಿದ್ಯಾರ್ಥಿನಿ ಸೋನಮ್‌ (13) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ, ಅನುಪ್‌ ಶಹರ್‌ ಪೊಲೀಸ್‌‍ ಠಾಣೆ ಪ್ರದೇಶದ ಸೇತುವೆಯ ಕೆಳಗೆ ಪೊದೆಗಳಲ್ಲಿ ಸಮವಸ್ತ್ರದಲ್ಲಿದ್ದ ಶಾಲಾ ಬಾಲಕಿಯ ಶವ ಪತ್ತೆಯಾಗಿದೆ ಎಂದು ಬುಲಂದ್‌ಶಹರ್‌ ಪೊಲೀಸರಿಗೆ ಕರೆ ಬಂದಿತು. ಪೊಲೀಸ್‌‍ ತನಿಖೆಯಲ್ಲಿ ಸೋನಂ ಗುರುವಾರ ಶಾಲೆಗೆ ಹೋಗಿದ್ದಳು ಎಂದು ತಿಳಿದುಬಂದಿದೆ. ಆಕೆಯ ತಂದೆ ಅಜಯ್‌ ಶರ್ಮಾ ಶಾಲೆ ಮುಗಿದ ನಂತರ ಆಕೆಯನ್ನು ಕರೆದುಕೊಂಡು ಹೋದರು, ಆದರೆ ಮನೆಗೆ ಕರೆದೊಯ್ಯುವ ಬದಲು, ತಮ್ಮ ಹೊಲಕ್ಕೆ ಕರೆದುಕೊಂಡು ಹೋಗಿದ್ದರು.

ವಿಚಾರಣೆಯ ಸಮಯದಲ್ಲಿ, ಶರ್ಮಾ ತನ್ನ ಮಗಳನ್ನು ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಂದು ನಂತರ ಆಕೆಯ ದೇಹವನ್ನು ಹತ್ತಿರದ ಕಾಲುವೆಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನ ತಪ್ಪೊಪ್ಪಿಗೆಯ ಆಧಾರದ ಮೇಲೆ ಆಕೆಯ ಬ್ಯಾಗ್‌ ಅನ್ನು ಹೊಲದಿಂದ ವಶಪಡಿಸಿಕೊಳ್ಳಲಾಯಿತು.

ಪೊಲೀಸರ ಪ್ರಕಾರ, ಶರ್ಮಾ ತನ್ನ ಮಗಳು ಮನೆಯಿಂದ ಹಣವನ್ನು ಕದಿಯುತ್ತಿದ್ದಳು ಎಂದು ಹೇಳಿಕೊಂಡಿದ್ದಾನೆ, ಇದರಿಂದಾಗಿ ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು.ಮಗಳನ್ನು ಕೊಂದ ನಂತರ, ಆ ವ್ಯಕ್ತಿ ಶಾಲೆಗೆ ತನ್ನ ಮಗಳು ಸಂಬಂಧಿಕರೊಂದಿಗೆ ಇರಲು ಹೋಗಿದ್ದಾಳೆ ಮತ್ತು ಮುಂದಿನ ಮೂರು ನಾಲ್ಕು ದಿನಗಳವರೆಗೆ ಶಾಲೆಗೆ ಹಿಂತಿರುಗುವುದಿಲ್ಲ ಎಂದು ತಿಳಿಸಿದ್ದ. ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಹೊಸಪೇಟೆ : ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ, 8 ಮಂದಿಗೆ ಗಾಯ

ಹೊಸಪೇಟೆ,ಸೆ.27– ವಕೀಲರೊಬ್ಬರ ಮನೆಯಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಪೋಟದಲ್ಲಿ 8 ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಗಾದಿಗನೂರಿನಲ್ಲಿ ಮುಂಜಾನೆ ನಡೆದಿದೆ. ಹೊಸಪೇಟೆ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ವಕೀಲ ಹಾಲಪ್ಪ ಅವರಿಗೆ ಸೇರಿದ ಮನೆಯಲ್ಲಿ ಇಂದು ಮುಂಜಾನೆ 5.15ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ತೋರಣಗಲ್‌ನ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕವಿತಾ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಕುಸಿದಿದೆ.ಬೆಳಿಗ್ಗೆ ಸ್ಟವ್‌ ಹಚ್ಚಲು ಕವಿತಾ ಯತ್ನಿಸಿದಾಗ ಏಕಾ ಏಕಿ ಬೆಂಕಿ ಹತ್ತಿಕೊಂಡಿತು. ಸ್ಫೋಟದಿಂದ ಮನೆ ಶೇ 50ರಷ್ಟು ಧ್ವಂಸವಾಗಿದೆ.
ಕವಿತಾ ಗೆ ತೀವ್ರ ಸುಟ್ಟ ಗಾಯವಾಗಿದ್ದು, ಹಾಲಪ್ಪ, ಮೈಲಾರಪ್ಪ, ಗಂಗಮ್ಮ, ಮಲ್ಲಮ ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಹೊಸಪೇಟೆಯಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಕ್ಕಮಕ್ಕದ ಮನೆಯವರು ಘಟನೆಯಿಂದ ಭಯ ಭೀತರಾಗಿದ್ದಾರೆ.

“ಅಧಿಕಾರದಲ್ಲಿರೋದು ಯಾರು ಎಂಬುದನ್ನು ಮರೆತಿದ್ದಾರೆ ಅನಿಸುತ್ತೆ” : ಗಲಭೆ ಕೋರರಿಗೆ ಯೋಗಿ ವಾರ್ನಿಂಗ್

ಲಖ್ನೋ,ಸೆ.27- ಅವ್ಯವಸ್ಥೆಯನ್ನು ಸೃಷ್ಟಿಸಲು ಯಾರೇ ಪ್ರಯತ್ನಿಸಿದರೂ ಅಂಥವರನ್ನು ಸರ್ಕಾರ ಹತ್ತಿಕ್ಕುತ್ತದೆ. ಗಲಭೆಕೋರರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮತ್ತೆ ಎಂದಿಗೂ ಅವ್ಯವಸ್ಥೆಯನ್ನು ಸೃಷ್ಟಿಸುವ ಬಗ್ಗೆ ಯೋಚಿಸದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಬರೇಲಿ ಮತ್ತು ಮೌನಲ್ಲಿ ನಡೆದ ಹಿಂಸಾಚಾರದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಹಬ್ಬದ ಸಮಯದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮತ್ತು ರಾಜ್ಯದಲ್ಲಿ ಶಾಂತಿ ಕಾಪಾಡಲು ನಿರ್ದೇಶನಗಳನ್ನು ನೀಡಿದ್ದಾರೆ.
ದಸರಾ ಕೆಟ್ಟದ್ದರ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುತ್ತದೆ. ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಈಗ ಬಂದಿದೆ. ಮೆರವಣಿಗೆಗಳು ಮತ್ತು ಪ್ರದರ್ಶನಗಳ ಮೇಲೆ ಯಾವುದೇ ಗುಂಪು ದುಷ್ಕತ್ಯ ನಡೆಸಿದರೆ ಸಹಿಸುವುದಿಲ್ಲ ಎಂದು ಹೇಳುವ ಮೂಲಕ ಸಿಎಂ ಯೋಗಿ ಗಲಭೆಕೋರರಿಗೆ ಕಠಿಣ ಎಚ್ಚರಿಕೆ ನೀಡಿದರು. ಬರೇಲಿಯ ಪರಿಸ್ಥಿತಿ ಪ್ರಸ್ತುತ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ.

ಐ ಲವ್‌ ಮುಹಮದ್‌ ಪೋಸ್ಟರ್‌ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರದ ಪ್ರಾರ್ಥನೆಯ ನಂತರ ಉತ್ತರಪ್ರದೇಶದ ಬರೇಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಾನ್ಪುರದಲ್ಲಿ ಪ್ರಾರಂಭವಾದ ಈ ವಿಷಯವು ಈಗ ಬರೇಲಿ ಮತ್ತು ಮೌ ಸೇರಿದಂತೆ ಇತರ ನಗರಗಳಿಗೂ ಹರಡಿದೆ.

ಘರ್ಷಣೆಯ ಸಮಯದಲ್ಲಿ, ಪೊಲೀಸರು ಲಾಠಿ ಚಾರ್ಜ್‌ ಮತ್ತು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದು, ಇದರಿಂದಾಗಿ ಜನಸಮೂಹವನ್ನು ಚದುರಿಸಲು ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಪ್ರತಿಭಟನಾಕಾರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಕಲ್ಲು ತೂರಾಟದಲ್ಲಿ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ಬರೇಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 30 ಗಲಭೆಕೋರರನ್ನು ಬಂಧಿಸಲಾಗಿದೆ. ಆದರೆ 50ಕ್ಕೂ ಹೆಚ್ಚು ಜನರು ಬಂಧನದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇತ್ತೇಹಾದ್‌-ಎ-ಮಿಲ್ಲತ್‌ ಕೌನ್ಸಿಲ್‌ (ಐಎಂಸಿ) ಮುಖ್ಯಸ್ಥ ಮೌಲಾನಾ ತೌಕೀರ್‌ ರಜಾ ಖಾನ್‌ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

ಕಾನ್ಪುರದಲ್ಲಿ ಆರಂಭವಾದ ಐ ಲವ್‌ ಮುಹಮದ್‌ ಪೋಸ್ಟರ್‌ ವಿವಾದವು ಈಗ ಬರೇಲಿ ಮತ್ತು ಮೌ ನಂತಹ ನಗರಗಳನ್ನು ತಲುಪಿದೆ. ಪ್ರಾರ್ಥನೆಯ ನಂತರ, ರಜಾ ಅವರ ಕರೆಯ ಮೇರೆಗೆ ಬರೇಲಿಯ ಇಸ್ಲಾಮಿಯಾ ಮೈದಾನದ ಹೊರಗೆ ನೂರಾರು ಪ್ರತಿಭಟನಾಕಾರರು ಜಮಾಯಿಸಿದ್ದರು. ಅವರು ಐ ಲವ್‌ ಮುಹಮದ್‌ ಸಂದೇಶವನ್ನು ಬೆಂಬಲಿಸುವ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು. ಪ್ರದೇಶದಲ್ಲಿ ಈಗಾಗಲೇ ಸೆಕ್ಷನ್‌ 144 ವಿಧಿಸಲಾಗಿತ್ತು. ಮಸೀದಿಯ ಹೊರಗೆ ಜಮಾಯಿಸಿದ್ದ ಜನಸಮೂಹವನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದರು.

ಬರೇಲಿಯಲ್ಲಿ ನಡೆದ ಹಿಂಸಾಚಾರವು ಐದು ದಿನಗಳ ಅವಧಿಯಲ್ಲಿ ಪೂರ್ವನಿಯೋಜಿತವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಪ್ರಸ್ತುತ ಪಿತೂರಿಯಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳನ್ನು ಗುರುತಿಸುತ್ತಿದ್ದಾರೆ.

ಗಲಭೆಕೋರರು ಮತ್ತು ಅಶಾಂತಿಯಲ್ಲಿ ಭಾಗಿಯಾಗಿರುವ ಸಂಘಟಕರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌‍ಎ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಪ್ರಮುಖ ಸಂಘಟಕರ ವಿರುದ್ಧ ಔಪಚಾರಿಕವಾಗಿ ಎನ್‌ಎಸ್‌‍ಎಯನ್ನು ಅನ್ವಯಿಸಲು ಸಿದ್ಧತೆಗಳು ನಡೆಯುತ್ತಿವೆ.

ಹೆಚ್ಚುವರಿಯಾಗಿ, ಎಲ್ಲಾ ಶಂಕಿತ ಭಾಗವಹಿಸುವವರ ಕರೆ ವಿವರ ದಾಖಲೆಗಳನ್ನು ವಿಶ್ಲೇಷಿಸಲಾಗುತ್ತಿದೆ ಮತ್ತು ಘರ್ಷಣೆಗಳು ನಡೆದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗಲಭೆಕೋರರನ್ನು ಗುರುತಿಸಲಾಗುತ್ತಿದೆ.

ತೌಕೀರ್‌ ರಝಾ ಪಾತ್ರ
ಬರೇಲಿ ಹಿಂಸಾಚಾರದಲ್ಲಿ ರಜಾ ಪ್ರಮುಖ ವ್ಯಕ್ತಿಯಾಗಿ ಹೊರಹೊಮಿದ್ದಾರೆ, ಪೊಲೀಸ್‌‍ ಮೂಲಗಳು ಅವರನ್ನು ಗಲಭೆಯ ಹಿಂದಿನ ಮಾಸ್ಟರ್‌ ಮೈಂಡ್‌ ಎಂದು ಗುರುತಿಸಿವೆ. ಗುರುವಾರ ರಾತ್ರಿಯಿಂದ ಅವರು ಸ್ನೇಹಿತನ ಮನೆಯಲ್ಲಿ ತಂಗಿದ್ದರು. ಪೊಲೀಸರು ರಜಾ ಅವರನ್ನು ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಮನೆಯಲ್ಲಿದ್ದ ಎಲ್ಲರ ಮೊಬೈಲ್‌ ಫೋನ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಹಿಂಸಾಚಾರದಲ್ಲಿ ಅವರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ಭಾಗಿಯಾಗಿರುವುದು ಸಾಬೀತಾದರೆ, ಅವರ ವಿರುದ್ಧ ಎಫ್‌ಐಆರ್‌ದಾಖಲಿಸಲಾಗಿದೆ

ಧರ್ಮಸ್ಥಳ ಪ್ರಕರಣದಲ್ಲಿ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಮುಖ್ಯ ಉದ್ದೇಶ : ಡಿಕೆಶಿ

ಬೆಂಗಳೂರು, ಸೆ.27– ಧರ್ಮಸ್ಥಳ ಪ್ರಕರಣದಲ್ಲಿ ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ನಮ ಸರ್ಕಾರದ ಉದ್ದೇಶ ಎಂದು ಉಪ ಮುಖ್ಯಮಂತ್ರಿಡಿ.ಕೆ. ಶಿವಕುಮಾರ್‌ ಅವರು ಸ್ಪಷ್ಟವಾಗಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖಾ ತಂಡದಿಂದ ಅಧಿಕೃತವಾಗಿ ನಮಗೆ ವರದಿ ಬರಲಿ ಎಂದರು.

ಎಸ್‌‍ಐಟಿ ರಚನೆಯಿಂದ ನನ್ನ ಮೇಲಿದ್ದ ಕಳಂಕ ಕಳೆಯುತ್ತಿದೆ ಎಂಬ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಈ ಪ್ರಕರಣದ ತನಿಖಾ ವರದಿ ಬರಲಿ. ಅನಂತರ ನಾನು ಮಾತನಾಡುತ್ತೇನೆ. ವೀರೇಂದ್ರ ಹೆಗ್ಗಡೆ ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ.

ತನಿಖಾ ವರದಿ ಬರುವ ಮುನ್ನವೇ ಈ ಬಗ್ಗೆ ಪ್ರತಿಕ್ರಿಯಿಸುವುದರಲ್ಲಿ ಅರ್ಥವಿಲ್ಲ. ರಾಜಕೀಯವಾಗಿ ಯಾರು ಏನು ಬೇಕಾದರೂ ಮಾತನಾಡಬಹುದು. ಆದರೆ ನಾನು ಸರ್ಕಾರದ ಪ್ರತಿನಿಧಿಯಾಗಿರುವುದರಿಂದ ಬೇರೆಯವರಂತೆ ಮಾತನಾಡಲು ಬರುವುದಿಲ್ಲ. ಈ ವಿಚಾರವಾಗಿ ವರದಿ ಬಂದ ನಂತರ ಮುಖ್ಯಮಂತ್ರಿಗಳು ಅಥವಾ ಗೃಹ ಸಚಿವರು ಅಧಿಕೃತ ಹೇಳಿಕೆ ನೀಡಬೇಕು. ಆ ನಂತರ ನಾನು ಮಾತನಾಡುತ್ತೇನೆ ಎಂದು ಹೇಳಿದರು.

ಸುಪ್ರೀಂ ಕೋರ್ಟಿನಲ್ಲಿ ಪಿಐಎಲ್‌ ವಜಾ ಆಗಿದ್ದರೂ ಸರ್ಕಾರದ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, ಈಗ ಆ ವಿಚಾರ ಚರ್ಚೆ ಬೇಡ. ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕಿದ್ದು, ಅದು ವಜಾಗೊಂಡಿದೆ. ಪಿಐಎಲ್‌ ಹಾಕಿದವರಿಗೆ ಸ್ಥಳೀಯವಾಗಿ ತನಿಖೆ ಮಾಡಲಿ ಎಂದು ಕೋರ್ಟ್‌ ಬೈದುಕಳುಹಿಸಿದ್ದು ಎಲ್ಲವೂ ಗೊತ್ತಿದೆ. ಸುಪ್ರೀಂ ಕೋರ್ಟಿನ ನಿರ್ದೇಶನದ ಬಗ್ಗೆ ಯಾರೂ ಹೇಳುವುದಿಲ್ಲ. ದೆಹಲಿಗೆ ಬುರುಡೆ ತೆಗೆದುಕೊಂಡು ಹೋಗಿದ್ದರು. ಅದರ ಬಗ್ಗೆಯೂ ನಮಗೆ ಮಾಹಿತಿ ಇದೆ. ಆದರೆ ತನಿಖಾ ತಂಡದಿಂದ ಅಧಿಕೃತವಾಗಿ ನಮಗೆ ವರದಿ ಬರಲಿ ಎಂದು ತಿಳಿಸಿದರು.

ದೆಹಲಿ-ಗುರುಗ್ರಾಮ ಎಕ್ಸ್ ಪ್ರೆಸ್‌‍ವೇನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಐವರ ಸಾವು

ಗುರುಗ್ರಾಮ, ಸೆ. 27 (ಪಿಟಿಐ)– ಇಂದು ಮುಂಜಾನೆ ದೆಹಲಿ-ಗುರುಗ್ರಾಮ ಎಕ್ಸ್ ಪ್ರೆಸ್‌‍ವೇಯಲ್ಲಿ ಥಾರ್‌ ವಾಹನವು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.

ಮೃತರು ಮತ್ತು ಗಾಯಾಳುಗಳನ್ನು ಇನ್ನೂ ಗುರುತಿಸಲಾಗಿಲ್ಲ ದೆಹಲಿ-ಗುರುಗ್ರಾಮ ಎಕ್ಸ್ ಪ್ರೆಸ್‌‍ ವೇಯ ನಿರ್ಗಮನ ಸಂಖ್ಯೆ 9 ರಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೇಗವಾಗಿ ಬಂದ ವಾಹನದ ಚಾಲಕ ಸಮತೋಲನ ಕಳೆದುಕೊಂಡು ನೇರವಾಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾನೆ.ಮೂರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದಂತೆ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದರು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರು ಹೇಳಿದರು.

ಪೊಲೀಸರ ಪ್ರಕಾರ, ಎಲ್ಲಾ ಆರು ಪ್ರಯಾಣಿಕರು ಉತ್ತರ ಪ್ರದೇಶದಿಂದ ಗುರುಗ್ರಾಮಕ್ಕೆ ಕೆಲಸದ ನಿಮಿತ್ತ ಬಂದಿದ್ದರು.ಮಾಹಿತಿ ಪಡೆದ ನಂತರ, ಸೆಕ್ಟರ್‌ 40 ಪೊಲೀಸ್‌‍ ಠಾಣೆಯ ಪೊಲೀಸ್‌‍ ತಂಡ ಸ್ಥಳಕ್ಕೆ ತಲುಪಿ ಆರು ಜನರನ್ನು ಆಸ್ಪತ್ರೆಗೆ ಸಾಗಿಸಿತು, ಅಲ್ಲಿ ವೈದ್ಯರು ಐವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು, ಆದರೆ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಮೃತರು ಮತ್ತು ಗಾಯಗೊಂಡವರನ್ನು ಇನ್ನೂ ಗುರುತಿಸಲಾಗಿಲ್ಲ, ಆದರೆ ಥಾರ್‌ ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಗುರುಗ್ರಾಮ್‌ ಪೊಲೀಸ್‌‍ ವಕ್ತಾರರು ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ಕೇಸ್ ದಾಖಲಾಗುತ್ತಿದ್ದಂತೆ ಬ್ಯಾಂಕ್‌ನಿಂದ 55 ಲಕ್ಷ ಹಣ ಡ್ರಾ ಮಾಡಿಕೊಂಡಿರುವ ಚೈತನ್ಯಾನಂದ ಸ್ವಾಮಿ

ನವದೆಹಲಿ, ಸೆ. 27 – ಹದಿನೇಳು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ತಮ್ಮ ವಿರುದ್ಧ ಕೇಸ್‌‍ ದಾಖ ಲಾಗುತ್ತಿದ್ದಂತೆ ಬ್ಯಾಂಕ್‌ನಿಂದ 55 ಲಕ್ಷ ಹಣ ಡ್ರಾ ಮಾಡಿಕೊಂಡಿರುವುದು ಪೊಲೀಸ್‌‍ ತನಿಖೆಯಲ್ಲಿ ಬಯಲಾಗಿದೆ.

ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವ ಮತ್ತು ವರ್ಗಾವಣೆಯ ಸಮಯದಲ್ಲಿ ವಿಭಿನ್ನ ದಾಖಲೆಗಳನ್ನು ಸಲ್ಲಿಸುವ ಮೂಲಕ ಎರಡು ಹೆಸರುಗಳಲ್ಲಿ ಬ್ಯಾಂಕ್‌ ಖಾತೆಯನ್ನು ನಿರ್ವಹಿಸುತ್ತಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ.

ಎಫ್‌ಐಆರ್‌ ದಾಖಲಾದ ನಂತರ ಸುಮಾರು 50 ರಿಂದ 55 ಲಕ್ಷ ರೂ.ಗಳನ್ನು ವಿತ್‌ಡ್ರಾ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದ್ದು, ವಂಚನೆ, ಪಿತೂರಿ ಮತ್ತು ಹಣ ದುರುಪಯೋಗದ ಸತ್ಯಾಂಶ ಹೊರ ಬರಬೇಕಾದರೆ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಅವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿದೆ.

ಪ್ರಕರಣದ ಗಂಭೀರತೆ ನೋಡಿ ದೆಹಲಿ ಹೈಕೋರ್ಟ್‌ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಚೈತನ್ಯಾನಂದ ಸ್ವಾಮೀಜಿ ಶ್ರೀ ಶಾರದಾ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಮ್ಯಾನೇಜ್ಮೆಂಟ್‌ ರಿಸರ್ಚ್‌ನ ಆಸ್ತಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಶ್ರೀ ಶಾರದಾ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಮ್ಯಾನೇಜ್ಮೆಂಟ್‌ ರಿಸರ್ಚ್‌ ಫೌಂಡೇಶನ್‌ ಟ್ರಸ್ಟ್‌ ಎಂಬ ನಕಲಿ ಟ್ರಸ್ಟ್‌ ಸ್ಥಾಪಿಸಿದ್ದರು ಎನ್ನುವವಿಚಾರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

ಸ್ವಾಮೀಜಿ ವಿರುದ್ಧ 17 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ವಿದ್ಯಾರ್ಥಿನಿಯರ ಮೊಬೈಲ್‌ ಫೋನ್‌ಗಳು ಮತ್ತು ಮೂಲ ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡು ಸ್ವಾಮೀಜಿಯ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಸಮೀಕ್ಷೆ ಮುಂದೂಡಲು ಸಿ.ಟಿ.ರವಿ ಆಗ್ರಹ

ಬೆಂಗಳೂರು,ಸೆ.27- ಪೂರ್ವ ತಯಾರಿ ಹಾಗೂ ಸೂಕ್ತ ತರಬೇತಿ ಅಗತ್ಯ ಇರುವುದರಿಂದ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಸಿಎಂ ಸಿದ್ದರಾಮಯ್ಯನವರಿಗೆ ಸುದೀರ್ಘ ಪತ್ರ ಬರೆದಿರುವ ಸಿ.ಟಿ.ರವಿ, ರಾಜ್ಯಾದ್ಯಂತ ನಡೆಸುತ್ತಿರುವ ಸಮೀಕ್ಷೆ ಸಾಕಷ್ಟು ಗೊಂದಲದಿಂದ ಕೂಡಿದೆ. ಸಮೀಕ್ಷೆದಾರರಿಗೆ ಸೂಕ್ತವಾದ ತರಬೇತಿ, ಪೂರ್ವ ಸಿದ್ದತೆ ಇಲ್ಲದೇ ಇರುವುದರಿಂದ ಗೊಂದಲಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.

ಗಣತಿದಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕ ಕಡೆ ನೆಟ್‌ವರ್ಕ್‌ ಸಿಗದೆ ಗೊಂದಲಕ್ಕೆ ಸಿಲುಕಿದ್ದಾರೆ. ಅಲ್ಲದೆ ಅವರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪರಿಹರಿಸುವ ಬದಲು ನೀವು ಅವರಿಗೆ ಬೆದರಿಕೆ ಹಾಕುತ್ತಿದ್ದೀರಿ. ಇದರಿಂದ ನಿಮ ಕನಸಿನ ಕೂಸು ಬಡವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಈಗಾಗಲೇ ಆರಂಭವಾಗಿದ್ದು, ಸಮೀಕ್ಷೆಯ ಸಂದರ್ಭದಲ್ಲಿ, ಈಗಾಗಲೇ ಹೆಚ್ಚುವರಿ ಜವಾಬ್ದಾರಿಗಳ ಹೊರೆಯಿಂದ ಬಳಲಿರುವ ಶಿಕ್ಷಕರು, ಇನ್ನಷ್ಟು ತೀವ್ರ ಸವಾಲುಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ.

ಕೆಲವೆಡೆ ಗಣತಿದಾರರಿಗೆ ಸ್ಥಳ ನಿಯುಕ್ತಿ ಸೇರಿದಂತೆ ಸಮೀಕ್ಷೆಯ ಮಾಹಿತಿ ಸಂಗ್ರಹಿಸಲು ನಿಗದಿಪಡಿಸಿರುವ ಅಪ್ಲಿಕೇಷನ್‌ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ನೆಟ್ವರ್ಕ್‌ ಸರಿಯಾಗಿ ಲಭ್ಯವಾಗದೆ ಇರುವುದರಿಂದ ಗಣತಿದಾರ ಶಿಕ್ಷಕರು ಸಮಸ್ಯೆಗೀಡಾಗಿದ್ದಾರೆ.

ಸಮೀಕ್ಷೆಗೆ ಸರಿಯಾದ ಪೂರ್ವ ತಯಾರಿ. ಯೋಜನೆ ಮತ್ತು ತಾಂತ್ರಿಕ ವ್ಯವಸ್ಥೆ ರೂಪಿಸುವಲ್ಲಿ ವಿಫಲವಾಗಿರುವ ಶಂಕೆ ಮೂಡುತ್ತಿದೆ. ಪ್ರಾಯೋಗಿಕವಾಗಿ ಟ್ರಯಲ್‌ ನಡೆಸಿ, ಅದರ ಅನುಭವದ ಮೇಲೆ ಸಂಪೂರ್ಣ ಸಮೀಕ್ಷಾ ಕಾರ್ಯವನ್ನು ವಿಸ್ತರಿಸಬೇಕಾಗಿತ್ತು. ಆದರೆ ಇಲ್ಲಿ ಇದ್ಯಾವುದನ್ನೂ ಮಾಡದೆ ಇರೋದು ಕಂಡುಬಂದಿದೆ. ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರು ಎದುರಿಸುತ್ತಿರುವ ಸವಾಲುಗಳು ತೀವ್ರ ಗಂಭೀರವಾಗಿದ್ದು , ಈ ಸವಾಲುಗಳನ್ನು ಬಗೆಹರಿಸಿ ಎಂದು ಕೋರಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕಾರ್ಯನಿರ್ವಹಣೆಯ ಪ್ರಕ್ರಿಯೆಯಲ್ಲಿ ಹಲವಾರು ಗಂಭೀರ ಸವಾಲುಗಳು ಎದುರಾಗುತ್ತಿವೆ. ಈ ಸಮೀಕ್ಷೆಯನ್ನು ನಿರ್ವಹಿಸುತ್ತಿರುವ ಶಿಕ್ಷಕ ಗಣತಿದಾರರು ತಾಂತ್ರಿಕ ಹಾಗೂ ಪ್ರಾಯೋಗಿಕ ತೊಂದರೆಗಳಿಂದಾಗಿ ಗೊಂದಲಕ್ಕೀಡಾಗಿದ್ದಾರೆ. ಸಮೀಕ್ಷೆಯ ಸಮರ್ಪಕ ಪೂರ್ವತಯಾರಿ ಹಾಗೂ ತಾಂತ್ರಿಕ ಸೌಲಭ್ಯಗಳ ಕೊರತೆಯಿಂದ, ನಿರೀಕ್ಷಿತ ರೀತಿಯಲ್ಲಿ ಕಾರ್ಯ ಸಾಗುತ್ತಿಲ್ಲ ಎಂದು ಹೇಳಿದ್ದಾರೆ.

ಸಮೀಕ್ಷೆಯಲ್ಲಿ ಮನೆಗಳ ನಿಖರವಾದ ಸರಣಿ ಜೋಡಣೆ ಮಾಡಲಾಗದಿರುವುದು ಗಣತಿದಾರರಿಗೆ ಹೆಚ್ಚಿನ ತೊಂದರೆ ಉಂಟುಮಾಡುತ್ತಿದೆ. ಕೆಲವೊಮೆ ಒಂದೇ ಮನೆಯನ್ನು ಎರಡು ಬಾರಿ ದಾಖಲು ಮಾಡುವ ಪರಿಸ್ಥಿತಿಯೂ ಎದುರಾಗುತ್ತಿದೆ ಮತ್ತು ಕೆಲವು ಮನೆಗಳು ತಪ್ಪಿಹೋಗುತ್ತಿರುವುದು ಕಂಡುಬಂದಿದೆ.ಮನೆ ಗುರುತಿಸಲು ನೀಡಲಾಗಿರುವ ಯು.ಎಚ್‌.ಐ.ಡಿ ಸಂಖ್ಯೆಯ ಮೂಲಕ ಮಾಹಿತಿ ಹುಡುಕುವಲ್ಲಿ ತಾಂತ್ರಿಕ ದೋಷಗಳು ಕಂಡುಬರುತ್ತಿವೆ. ಇದು ಗಣತಿದಾರರ ಸಮಯ ಮತ್ತು ಶ್ರಮವನ್ನು ವ್ಯರ್ಥಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.

ಸಮೀಕ್ಷೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ ವ್ಯವಸ್ಥೆಗೆ ಅವಲಂಬಿಸಿರುವುದರಿಂದ, ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ವರ್ಕ್‌ ಸೌಲಭ್ಯ ಕೊರತೆ ತೀವ್ರ ಸಮಸ್ಯೆಯಾಗಿದೆ. ಅನೇಕ ಸಂದರ್ಭಗಳಲ್ಲಿ ಸಮೀಕ್ಷೆಯ ಕೆಲಸ ಮಧ್ಯದಲ್ಲೇ ನಿಲ್ಲುತ್ತಿದೆ. ಗಣತಿದಾರರ ಸ್ಥಳದಿಂದ ದೂರದ ಪ್ರದೇಶಗಳಲ್ಲಿ ಸಮೀಕ್ಷೆ ಗಣತಿದಾರರ ಕೆಲಸವನ್ನು ಅವರ ಕಾರ್ಯಸ್ಥಳಕ್ಕಿಂತ ದೂರದ ಪ್ರದೇಶಗಳಲ್ಲಿ ಹಂಚಿರುವುದರಿಂದ ಸಂಚಾರದಲ್ಲಿ ಸಮಯ ಮತ್ತು ಶ್ರಮ ವ್ಯರ್ಥವಾಗುತ್ತಿದೆ., ಸಮೀಕ್ಷೆಗೆ ಸಂಬಂಧಿಸಿದ ಮನೆಗಳ ವಿಳಾಸ ಪಟ್ಟಿ ನೀಡದಿರುವುದು, ಹಾಗೂ ಸದಸ್ಯರನ್ನು ಸೇರಿಸುವುದು ಅಥವಾ ತೆಗೆದುಹಾಕುವ ಆಯ್ಕೆಯ ಕೊರತೆಯಿಂದ ಗೊಂದಲ ಹೆಚ್ಚಾಗಿದೆ.

ಒಂದೇ ದಿನ ಹಲವು ಗಂಟೆಗಳ ಕಾಲ ಮೊಬೈಲ್‌ ಬಳಸಿ ಮಾಹಿತಿಯನ್ನು ದಾಖಲಿಸುವುದರಿಂದ ಶಿಕ್ಷಕರು ಕಣ್ಣಿನ ತೊಂದರೆ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ದೈಹಿಕ ನ್ಯೂನ್ಯತೆ ಹೊಂದಿರುವವರು, ಅನಾರೋಗ್ಯ ಪೀಡಿತರು ಹಾಗೂ ವಯೋವೃದ್ಧ ಶಿಕ್ಷಕರಿಗೆ ಈ ಕೆಲಸದಲ್ಲಿ ಪಾಲ್ಗೊಳ್ಳುವುದು ಕಷ್ಟಕರವಾಗಿದೆ. ಒಬ್ಬಂಟಿ ಮಹಿಳಾ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಸುರಕ್ಷತೆ ಹಾಗೂ ಸಾಮಾಜಿಕ ಮುಜುಗರದ ಸಮಸ್ಯೆಗಳು ಎದುರಾಗುತ್ತಿವೆ. ಕೆಲ ಶಿಕ್ಷಕರಿಗೆ ಮೊಬೈಲ್‌ ಹಾಗೂ ತಾಂತ್ರಿಕ ಉಪಕರಣಗಳ ಬಳಕೆಯಲ್ಲಿನ ಪರಿಣತಿ ಕೊರತೆಯಿಂದ ಸಮೀಕ್ಷಾ ಕಾರ್ಯ ಇನ್ನಷ್ಟು ಕಷ್ಟಕರವಾಗಿದೆ ಎಂದು ಗಮನ ಸೆಳೆದಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ, ಜನ ಜೀವನ ತತ್ತರ

ಬೆಂಗಳೂರು,ಸೆ.27- ರಾಜ್ಯದ ನಾನಾ ಕಡೆ ನಿರಂತರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಹಾನಿ ಸಂಭವಿಸಿದ್ದು, ಬಾಗಲಕೋಟೆಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಬಾಗಲಕೋಟೆ, ಬೀದರ್‌, ಕಲಬುರಗಿ, ಬೆಳಗಾವಿ, ವಿಜಯಪುರ, ಸೇರಿದಂತೆ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಕಡೆ ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ.

ಈ ನಡುವೆ ಮಳೆಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ಜನರಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಸರ್ಕಾರ ಸೂಚಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ ಸೇರಿದಂತೆ ಇಡೀ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಿರಂತರ ಮಳೆಗೆ ಮನೆಯ ತಗಡಿನ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ನಾಗಪ್ಪ ಲಾತೂರ್‌ ಮಗ ದರ್ಶನ್‌ ಲಾತೂರ್‌ (11) ಮೃತಪ್ಟಿದ್ದಾನೆ.

ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಅವಘಡ ಸಭಂಭವಿಸಿದೆ. ಘಟನೆಯಲ್ಲಿ ಇನ್ನೊಬ್ಬ ಬಾಲಕ ಶ್ರೀಶೈಲ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿಯಲ್ಲಿ ಭಾರೀ ಮಳೆಯಿಂದ ಎಲ್ಲೆಡೆ ಪ್ರವಾಹ ಉಂಟಾಗಿದೆ. ಹಲವು ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ಗ್ರಾಮಗಳ ಸಂಪರ್ಕ ಕಡಿದುಕೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಜೇವರ್ಗಿ ಪಟ್ಟಣದ ಕಟ್ಟಿಸಂಗಾರಿ ಸೇತುವೆ ಮುಳುಗಡೆಯಾಗಿದೆ. ಎರಡು ದಿನ ನಿರಂತರ ಮಳೆಯಾಗುತ್ತಿರುವುದರಿಂದ ಕರ್ಚಾಖೇಡ ಗ್ರಾಮಕ್ಕೆ ನೀರು ನುಗ್ಗಿ ಅನೇಕ ಮನೆಗಳು ಜಲಾವೃತಗೊಂಡಿವೆ. ದೇವಸ್ಥಾನಕ್ಕೆ ಹಳ್ಳದ ನೀರು ಹರಿದ ಪರಿಣಾಮ ಜನರು ಪರದಾಡುವಂತಾಗಿದೆ. ತಾಲ್ಲೂಕಿನ ಯಂಕಂಚಿ ಗ್ರಾಮದ ಬಸವೇಶ್ವರ ಹಾಗೂ ಮಹಾಲಕ್ಷ್ಮಿ ದೇವಸ್ಥಾನಕ್ಕೂ ಪ್ರವಾಹದ ಭೀತಿ ಎದುರಾಗಿದೆ.

ಸನ್ನತಿ ಬ್ಯಾರೇಜ್‌ನಿಂದ ಯಾದಗಿರಿ ಕಡೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಭೀಮಾನದಿ ಪ್ರವಾಹಕ್ಕೆ ರೈತರ ಬದುಕು ಅಕ್ಷರಶಃ ನಲುಗಿ ಹೋಗಿದೆ. ನಾಯ್ಕಲ್‌ ಗ್ರಾಮದಲ್ಲಿ ನೂರಾರು ಎಕರೆ ಬೆಳೆ ಹಾನಿಗೊಂಡಿವೆ. ಈ ಪ್ರದೇಶದ ಒಂದು ಕಿ.ಮೀ ಸುತ್ತ ನೀರು ನುಗ್ಗಿರುವುದರಿಂದ ಬೆಳೆದಿದ್ದ ಭತ್ತ, ಹತ್ತಿ ಬೆಳೆಗಳು ಮುಳುಗಡೆಯಾಗಿವೆ.

ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಹಿನ್ನೆಲೆ ದಸರಾ ರಜೆ ನಡುವೆಯೂ ಕೆಲವು ಆಡಳಿತ ಮಂಡಳಿಯವರು ಶಾಲೆ ನಡೆಸುತ್ತಿದ್ದು, ಮಕ್ಕಳ ಹಿತದೃಷ್ಟಿಯಿಂದ ಸದರಿ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಿ ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ ಆದೇಶ ಹೊರಡಿಸಿದ್ದಾರೆ.

ಚಂದ್ರಂಪಳ್ಳಿ ಜಲಾಶಯಕ್ಕೆ 7,500 ಕ್ಯೂಸೆಕಗೂ ಅಧಿಕ ಒಳ ಹರಿವಿದ್ದು ಮೂರು ಗೇಟುಗಳನ್ನು ತಲಾ 10 ಅಡಿ ತೆರೆದು ನೀರು ಬಿಡಲಾಗಿದೆ. ಇದರಿಂದ ಚಂದ್ರಂಪಳ್ಳಿ ಕೂಡು ಸೇತುವೆ ಸಂಪೂರ್ಣ ಮುಳುಗಿದೆ. ಗ್ರಾಮ ಸಂಪರ್ಕ ಕಡಿದುಕೊಂಡಿದ್ದು ಗ್ರಾಮಸ್ಥರು ಜಾಗೃತರಾಗಿರಲು ಯೋಜನಾಧಿಕಾರಿ ಚೇತನ ಕಳಸ್ಕರ ಮನವಿ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಜೋರು ಮಳೆ ಸುರಿಯುತ್ತಿದ್ದು ಕುಂಭ ದ್ರೋಣ ಮಳೆಗೆ ಜನರು ತಲ್ಲಣಗೊಂಡಿದ್ದಾರೆ. ಚಂದಾಪುರ, ಗಾರಂಪಳ್ಳಿ, ಅಣವಾರ, ಕಲ್ಲೂರು, ಕನಕಪುರ ಸೇರಿದಂತೆ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದೆ.

ಬೀದರ್‌ನಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ನದಿಗಳು, ಹಳ್ಳಕೊಳ್ಳಗಳು, ತೊರೆಗಳು ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ನದಿಗಳಿಗೆ ವ್ಯಾಪಕ ಪ್ರಮಾಣದ ನೀರು ಹರಿದುಬಂದಿದೆ.

ಕೆಲವು ಕಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜಿಲ್ಲಾಡಳಿತ ನದಿ ಪಕ್ಕದ ಜನರನ್ನು ಬಲವಂತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಬಿಟ್ಟೂ ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಹುಲಸುರು, ಬೀದರ್‌ ತಾಲೂಕು, ಭಾಲ್ಕಿಯಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಹುಲಸೂರು ತಾಲೂಕಿನ ಇಂಚುರು ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿದು ರಸ್ತೆ ಸಂಚಾರ ಬಂದಾಗಿದೆ.

ಹುಲಸೂರು ಇಂದ ಭಾಲ್ಕಿ ರಸ್ತೆ ಸಂಚಾರ ಬಂದಾಗಿ ವಾಹನ ಸವಾರರು ಪರದಾಡುತ್ತಿದ್ದು ಬೀದರ್‌ ತಾಲೂಕಿನ ಚಿಲ್ಲರ್ಗಿ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಚಾರ ಬಂದಾಗಿದೆ. ಸೇತುವೆ ಮೇಲೆ ನೀರು ಹರಿದು ಪರಿಣಾಮ ರಸ್ತೆ ಸಂಚಾರ ಬಂದಾಗಿದ್ದು, ಚಿಲ್ಲರ್ಗಿ ಟು ಚಿಮಕೋಡ್‌, ಗಾದಗಿ ರಸ್ತೆ ಸಂಚಾರ ಬಂದಾಗಿದೆ. ರಸ್ತೆ ಸಂಚಾರ ಬಂದಾಗಿ ವಾಹನ ಸವಾರರು ಪರದಾಡುತ್ತಿದ್ದರೆ, ಕೆಲವರು ನೀರು ತುಂಬಿದ ರಸ್ತೆ ಮೇಲೆಯ ನಡೆದುಕೊಂಡು ಸೇತುವೆ ದಾಟುತ್ತಿದ್ದಾರೆ.

ಇನ್ನೂ ಕಮಲನಗರದ ಗ್ರಾಮವೊಂದರಲ್ಲಿ ರಸ್ತೆ ಮೇಲೆ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ದಾಟಲು ಎಮೆಗಳು ಪರದಾಡಿವೆ. ಮಾಂಜ್ರಾನದಿಗೆ ಲಕ್ಷ ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಮಾಂಜ್ರಾನದಿ ದಡದಲ್ಲಿರುವ ಲಕ್ಷಾಂತರ ಎಕರೆ ಜಮೀನುಗಳಲ್ಲಿ ಬೆಳೆದಿದ್ದ ಬೆಳಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

ಧಾರಾಕಾರ ಮಳೆ ಹಾಗೂ ಮಾಂಜ್ರಾನದಿ ಎಫೆಕ್ಟ್‌ ಜಿಲ್ಲೆಯ ಜನ್ರ ಜೀವನ ಮೂರಾಬಟ್ಟೆಯಾಗಿದ್ದು ಇಂದು ಕೂಡಾ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್‌ ಘೋಷಣೆಮಾಡಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಆಲಮೇಲ ತಾಲೂಕಿನ ತಾವರಖೇಡ ಗ್ರಾಮದಲ್ಲಿ ಭೀಮಾ ನದಿ ಪ್ರವಾಹದಿಂದ ಮನೆಗಳು ಜಲಾವೃತಗೊಂಡಿದೆ. ಪ್ರವಾಹ ಸ್ಥಿತಿಯ ನಡುವೆಯೂ ತೋಟದಲ್ಲಿ ಕುಟುಂಬಗಳು ವಾಸವಿದ್ದರು. ತೋಟದ ಮನೆಗಳಲ್ಲಿದ್ದ 8 ಜನರನ್ನು ಬೋಟ್‌ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಕಲಬುರಗಿ : ಪ್ರವಾಹ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಭೇಟಿ

ಗುಲ್ಬರ್ಗ,ಸೆ.27-ಮಳೆ ಹಾಗೂ ಪ್ರವಾಹ ಪೀಡಿತ ಚಿತ್ತಾಪುರ ತಾಲೂಕಿನ ಹಳೆ ಹೆಬ್ಬಾಳ ಗ್ರಾಮಕ್ಕೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರು ಇಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.ಈ ಸಂದರ್ಭದಲ್ಲಿ ಮಳೆಯಿಂದ ಬಿದ್ದ ಮನೆಯನ್ನು ಪರಿಶೀಲಿಸಿ ಹಾನಿಗೊಳಗಾದ ಮನೆಗಳ ಸರ್ವೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಹಳೆ ಹೆಬ್ಬಾಳ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರು ಸಚಿವರ ಮುಂದೆ ಬೇಡಿಕೆ ಇಟ್ಟಾಗ, ಗ್ರಾಮಸ್ಥರಿಗೆ ಸ್ಪಂದಿಸಿದ ಸಚಿವರು, ಮಳೆ ತುಸು ಕಡಿಮೆಯಾದ ನಂತರ ಗ್ರಾಮಕ್ಕೆ ಮತ್ತೆ ಭೇಟಿ ನೀಡಿ ಬೇಡಿಕೆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

ಗ್ರಾಮದ ಸ್ಥಳಾಂತರಕ್ಕೆ ತಾವು ಮುಂದಾಗಿರುವುದಾಗಿ ಹೇಳಿದ ಸಚಿವರು, ಎಷ್ಟು ಕುಟುಂಬಗಳು ಸ್ಥಳಾಂತರಗೊಳ್ಳಬೇಕು ಎನ್ನುವ ಬಗ್ಗೆ ತೀರ್ಮಾನಿಸುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.
ಈ ನಡುವೆ ಗ್ರಾಮಸ್ಥರೊಂದಿಗೆ ಗ್ರಾಮಸಭೆ ನಡೆಸುವಂತೆ ಸ್ಥಳದಲ್ಲಿದ್ದ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಎಸಿ ಸಾಹಿತ್ಯ ಅವರಿಗೆ ಸೂಚಿಸಿದರು.
ಗ್ರಾಮಸ್ಥರಿಗೆ ಬೇಕಾಗುವ ಸೌಲಭ್ಯ ಒದಗಿಸುವಂತೆ ಕಾಳಗಿ ತಹಸೀಲ್ದಾರ್‌ ಅವರಿಗೆ ಸೂಚಿಸಿದರು.

ನಿರಂತರ ಮಳೆಯಿಂದ ಬೆಣ್ಣೆತೊರ ಜಲಾಶಯದಿಂದ ನೀರು ಹರಿಬಿಟ್ಟಿದ್ದರಿಂದ ಹಳೆ ಹೆಬ್ಬಾಳ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಗ್ರಾಮಸ್ಥರನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.