Home Blog Page 82

ಗ್ರೇಟರ್‌ ಬೆಂಗಳೂರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಮಹತ್ವದ ಕೋರ್‌ ಕಮಿಟಿ ಸಭೆ

ಬೆಂಗಳೂರು,ಸೆ.27- ಮುಂಬರುವ ಜಿಬಿಎ (ಗ್ರೇಟರ್‌ ಬೆಂಗಳೂರು ಅಥಾರಟಿ ) ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ದ ಹೋರಾಟ ನಡೆಸುವ ಕುರಿತು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಸಂಜೆ ಬಿಜೆಪಿಯ ಮಹತ್ವದ ಕೋರ್‌ ಕಮಿಟಿ ಸಭೆ ನಡೆಯಲಿದೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಕೋರ್‌ ಕಮಿಟಿ ಸಭೆಗೆ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ಅಗರ್‌ವಾಲ್‌, ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌‍.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಪದಾಧಿಕಾರಿಗಳು ಭಾಗಿಯಾಗುವರು. ಮುಂಬರುವ ಜಿಬಿಎ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಿ ಐದು ಪಾಲಿಕೆಗಳಲ್ಲೂ ಗೆಲ್ಲಲೇಬೇಕಾದ ರೂಪಿಸಲಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್‌, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರಿಗೆ ಹೊಂದುಕೊಂಡಿರುವ ಚಿಕ್ಕಬಳ್ಳಾಪುರ ಸೇರಿದಂತೆ ಐದು ಕ್ಷೇತ್ರಗಳನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು.ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಮತದಾರರು ಬಿಜೆಪಿಗೆ ಒಲವು ತೋರಿರುವುದರಿಂದ ಮೊದಲ ಬಾರಿಗೆ ಬಿಬಿಎಂಪಿ ವಿಭಜನೆಗೊಂಡು ಐದು ಮಹಾನಗರ ಪಾಲಿಕೆಯಾಗಿ ಗ್ರೇಟರ್‌ ಬೆಂಗಳೂರು ಅಥಾರಟಿ ಎಂಬ ಹೆಸರಿನೊಂದಿಗೆ ಅಸ್ತಿತ್ವಕ್ಕೆ ಬಂದಿದೆ.ಐದಕ್ಕೆ 5 ಪಾಲಿಕೆಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ನಗರದ ಜನತೆಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಬೆಂಗಳೂರಿನಲ್ಲಿ ಹದಗೆಟ್ಟಿರುವ ರಸ್ತೆಗಳು, ಮುಚ್ಚದೇ ಇರುವ ಗುಂಡಿಗಳು, ಹೆಚ್ಚುತ್ತಿರುವ ಅಪಘಾತ, ಬೆಂಗಳೂರು ಬಿಟ್ಟು ಕೆಲವು ಬಹುರಾಷ್ಟ್ರೀಯ ಕಂಪನಿಗಳು ಹೊರರಾಜ್ಯಕ್ಕೆ ಹೋಗಲು ಮುಂದಾಗಿರುವುದು, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಹೀಗೆ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಲಿದೆ.

ಇನ್ನು ಕೋರ್‌ ಕಮಿಟಿ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚುನಾವಣೆಯನ್ನು ಡಿಸೆಂಬರ್‌ ನಂತರ ನಡೆಸಲು ಸರ್ಕಾರ ಉದ್ದೇಶಿಸಿದೆ.ಇದೇ ಸಂದರ್ಭದಲ್ಲಿ ಚುನಾವಣೆ ಎದುರಾದರೆ ಹೆಚ್ಚಿನ ಸ್ಥಾನ ಗಳಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಪ್ರಮುಖರು ಚರ್ಚೆ ನಡೆಸಲಿದ್ದಾರೆ.

ಸರ್ಕಾರ ಪ್ರತಿದಿನ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಿದ್ದು, ಜಾತಿ ಜನಗಣತಿಯಿಂದ ಉಂಟಾಗಿರುವ ಗೊಂದಲ, ಹಿಂದೂ ಧರ್ಮದ ಉಪಜಾತಿಗಳ ಜೊತೆ ಕ್ರಿಶ್ಚಿಯನ್‌ ಧರ್ಮದ ಸೇರ್ಪಡೆ, ಸರ್ಕಾರದ ಮೇಲೆ ಕೇಳಿ ಬರುತ್ತಿರುವ ಹಗರಣಗಳು, ಅಭಿವೃದ್ದಿ ಕುಂಠಿತ ಹೀಗೆ ಸಾಲು ಸಾಲು ವೈಫಲ್ಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಗೊತ್ತಾಗಲಿದೆ.

ತನ್ನ ಸಹಪಾಠಿಯ ತಾಯಿಯನ್ನೇ ವಿವಾಹದ ವಿದ್ಯಾರ್ಥಿ

ಟೋಕಿಯೋ, ಸೆ.27-ಯುವಕನೊಬ್ಬ ತನ್ನ ಸಹಪಾಠಿಯ ತಾಯಿಯನ್ನೇ ವಿವಾಹವಾಗಿರುವ ವಿಚಿತ್ರ ಘಟನೆ ಜಪಾನ್‌ನಲ್ಲಿ ನಡೆದಿದೆ. 33 ವರ್ಷದ ಇಸಾಮು ಟೊಮಿಯೋಕಾ ತನ್ನ ಸಹಪಾಠಿ ತಾಯಿಯಾಗಿದ್ದ 54 ವರ್ಷದ ಮಿಡೋರಿಯಾ ಅವರನ್ನು ಮದುವೆಯಾಗಿದ್ದಾರೆ.ತನ್ನ ಶಾಲಾ ದಿನಗಳಲ್ಲಿ ಪೇರೆಂಟ್‌್ಸ, ಟೀಚರ್‌ ಮೀಟಿಂಗ್‌ನಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಭೇಟಿಯಾಗಿದ್ದ ಯುವಕ ದಶಕಗಳ ಬಳಿಕ ತನ್ನ ಹಳೆಯ ಸಹಪಾಠಿ ನಡೆಸುತ್ತಿದ್ದ ಬ್ಯೂಟಿ ಸಲೂನ್‌ನಲ್ಲಿ ನಡೆದ ಆಕಸ್ಮಿಕ ಭೇಟಿಯು ಇವರ ಪ್ರೀತಿಗೆ ಕಾರಣವಾಗಿತ್ತು.

ನಾನು ಆಕೆಯನ್ನು ನೋಡಿದಾಕ್ಷಣ ಪ್ರೀತಿಯಲ್ಲಿ ಬಿದ್ದೆ ಎಂದು ಮಿಡೋರಿಯಳನ್ನು ಭೇಟಿಯಾದ ದಿನವನ್ನು ನೆನಪಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಕೆ ಗಂಡನಿಂದ ವಿಚ್ಛೇದನ ಪಡೆದಿದ್ದರು. ತನ್ನನ್ನು ಇಷ್ಟು ಸಣ್ಣವನು ಇಷ್ಟಪಡುತ್ತಿರುವ ಬಗ್ಗೆ ಖುಷಿ ಎನಿಸಿದರೂ ತುಂಬಾ ಆಶ್ಚರ್ಯ ಕೂಡಾ ಆಗಿತ್ತು ಎಂದು ಮಿಡೋರಿ ಹೇಳಿದ್ದಾರೆ.

ಇಬ್ಬರೂ ಪ್ರವಾಸಕ್ಕೆ ಹೋಗಿ ಜತೆಗೆ ಸಮಯ ಕಳೆದಿದ್ದರು. ಬಲೂನ್‌ಗಳು, ಹೂವುಗಳಿಂದ ತುಂಬಿದ ಹೋಟೆಲ್‌ ಕೊಠಡಿ ಆತ ಕೊಟ್ಟ ಸರ್ಪ್ರೈಸ್‌‍ಗಳಿಂದ ಆತನ ಪ್ರೀತಿಯಲ್ಲಿ ಬೀಳದೆ ಇರಲು ಕಾರಣವೇ ಇರಲಿಲ್ಲ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದಾಗ ಮಿಡೋರಿ ಕುಟುಂಬದಲ್ಲಿ ಸಾಕಷ್ಟು ವಿರೋಧಗಳು ಕೇಳಿಬಂದವು.ಮಿಡೋರಿಗೆ ಈಗ 54 ವರ್ಷ ನೀವು ನಿಮ್ಮದೇ ಆದ ಸ್ವಂತ ಮಗುವನ್ನು ಹೊಂದಲು ಸಾಧ್ಯವಿಲ್ಲ, ನಿನಗಿನ್ನೂ 30 ವರ್ಷ ನಿನ್ನ ವಯಸ್ಸಿನವಳನ್ನೇ ಮದುವೆಯಾಗಬಹುದಲ್ಲಾ ಎಂದು ಇಸಾಮುಗೆ ಹಲವರು ಬುದ್ಧಿವಾದ ಹೇಳಿದ್ದರು.

ಆತ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಟೋಮಿಯೋಕಾದಲ್ಲಿ ಮನೆಯನ್ನು ಖರೀದಿಸಿ, ಮಿಡೋರಿ ಪೋಷಕರೆದುರು ಆಕೆಯನ್ನು ಮದುವೆ ಮಾಡಿಕೊಡುವಂತೆ ಧೈರ್ಯದಿಂದ ಕೇಳಿದ್ದ, ಅಂತಿಮವಾಗಿ ಇಬ್ಬರೂ ಹಿರಿಯರ ಆಶೀರ್ವಾದ ಸಿಕ್ಕಿದೆ. 2024ರ ಜುಲೈನಲ್ಲಿ ತಮ್ಮ ಮದುವೆಯನ್ನು ಅಧಿಕೃತವಾಗಿ ನೋಂದಾಯಿಸಿಕೊಂಡರು.ಟೊಮಿಯೋಕಾ ಮಿಡೋರಿಯ ಮಗಳಿಗೆ ಮಲತಂದೆ ಮಾತ್ರವಲ್ಲದೆ ಅವರ ನಾಲ್ವರು ಮೊಮ್ಮಕ್ಕಳಿಗೆ ಅಜ್ಜನೂ ಆಗಿದ್ದಾರೆ.

‘ನಾನು ವೀಕೆಂಡ್‌ ರಾಜಕಾರಣಿ ಅಲ್ಲ’ : ನಟ ವಿಜಯ್‌ ಕಾಲೇಳೆದ ಉದಯನಿಧಿ

ಚೆನ್ನೈ,ಸೆ. 27 (ಪಿಟಿಐ) ನಾನು ವೀಕೆಂಡ್‌ ರಾಜಕಾರಣಿ ಅಲ್ಲ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರು ನಟ ಕಮ್‌ ರಾಜಕಾರಣಿ ವಿಜಯ್‌ಗೆ ಟಾಂಗ್‌ ನೀಡಿದ್ದಾರೆ.

ನಾನು ಕೆಲವರಂತೆ ಶನಿವಾರ ಮಾತ್ರ ಪ್ರಚಾರ ಅಥವಾ ಪಕ್ಷದ ಕೆಲಸಕ್ಕೆ ಹೋಗುವುದಿಲ್ಲ ಅವರಿಗೆ ಸಿದ್ಧಾಂತದ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದು ಅವರು ವಿಜಯ್‌ ಕಾಲು ಎಳೆದಿದ್ದಾರೆ.

ನಮ ಡಿಎಂಕೆ ಪಕ್ಷ ಕಾಂಗ್ರೆಸ್‌‍ ಪಕ್ಷದ ಮೈತ್ರಿಕೂಟದ ಭಾಗವಾಗಿ ಮುಂದುವರಿಯುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.ಡಿಎಂಕೆ ನಾಯಕ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು, ವಿರೋಧ ಪಕ್ಷದ ನಾಯಕ ಈಗ ನೆನಪಿಸಿಕೊಳ್ಳುತ್ತಿರುವುದು ಬಿಜೆಪಿ ಉನ್ನತ ನಾಯಕ ಅಮಿತ್‌ ಶಾ ಅವರನ್ನು ಮತ್ತು ಅವರು ಎಐಎಡಿಎಂಕೆ ಸಂಸ್ಥಾಪಕ ನಾಯಕ ಎಂಜಿ ರಾಮಚಂದ್ರನ್‌ ಅವರನ್ನು ಸಹ ಮರೆತಿದ್ದಾರೆ ಎಂದು ಹೇಳಿದರು.

ನಾನು ಪ್ರತಿ ಶನಿವಾರ ಮಾತ್ರ ಹೊರಗೆ ಬರುವುದಿಲ್ಲ ಎಂದು ಇಲ್ಲಿ ನಡೆದ ಡಿಎಂಕೆ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಅವರು ಗುಡುಗಿನ ಚಪ್ಪಾಳೆಯೊಂದಿಗೆ ಹೇಳಿದರು.ಇದಲ್ಲದೆ, ಉಪಮುಖ್ಯಮಂತ್ರಿ ಅವರು ತಮ್ಮ ಕೆಲಸವನ್ನು ಮಾಡಲು ವಾರದ ದಿನವನ್ನು ನೋಡುವುದಿಲ್ಲ ಮತ್ತು ಎಲ್ಲಾ ಜಿಲ್ಲೆಗಳನ್ನು ಒಳಗೊಳ್ಳುತ್ತಾರೆ ಎಂದು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಪ್ರವಾಸ ಆರಂಭಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್‌‍, ಇದುವರೆಗೆ ಶನಿವಾರ ಮಾತ್ರ ಪ್ರಚಾರ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ, ವಿಜಯ್‌ ತಮ್ಮ ಪ್ರಚಾರ ವೇಳಾಪಟ್ಟಿಯಲ್ಲಿ ಆಯ್ದ ಭಾನುವಾರಗಳನ್ನು ಸೇರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.

.ಮುಂದಿನ 6 ತಿಂಗಳ ಕಾಲ, ಪದಾಧಿಕಾರಿಗಳು ಪ್ರತಿದಿನ ಜನರನ್ನು ಭೇಟಿ ಮಾಡಬೇಕು ಮತ್ತು ಪ್ರಚಾರವನ್ನು ವೇಗಗೊಳಿಸಬೇಕು. ತಿನ್ನೈ ಪ್ರಚಾರಂ (ಮನೆ-ಮನೆಗೆ ಪ್ರಚಾರ) ವನ್ನು ಕೈಗೆತ್ತಿಕೊಳ್ಳಬೇಕು ಮತ್ತು ಡಿಎಂಕೆ ಆಡಳಿತದ ಸಾಧನೆಗಳನ್ನು ಸಾರ್ವಜನಿಕರಿಗೆ ವಿವರಿಸಬೇಕು.ಟಿವಿಕೆಯನ್ನು ಗುರಿಯಾಗಿಸಿಕೊಂಡು, ಅದರ ನೇರ ಹೆಸರನ್ನು ಹೇಳದೆ, ಉಪ ಮುಖ್ಯಮಂತ್ರಿ ಹೇಳಿದರು.

ಕೆಲವು ಪಕ್ಷಗಳು ಹೊಸದಾಗಿ ಹುಟ್ಟಿಕೊಂಡಿವೆ ಮತ್ತು ಅಂತಹ ಸಂಘಟನೆಗಳ ಸದಸ್ಯರಿಗೆ ಸಿದ್ಧಾಂತದ ಬಗ್ಗೆ ತಿಳಿದಿಲ್ಲ; ಸಿದ್ಧಾಂತ ಏನೆಂಬುದರ ಬಗ್ಗೆ ಯಾವುದೇ ಕಲ್ಪನೆ ಇಲ್ಲ.ಆದ್ದರಿಂದ, ಡಿಎಂಕೆ ಪದಾಧಿಕಾರಿಗಳು ಪಕ್ಷದ ಸಿದ್ಧಾಂತ ಮತ್ತು ರಾಜ್ಯದ ಹಕ್ಕುಗಳು ಮತ್ತು ತಮಿಳು ಭಾಷೆಯ ರಕ್ಷಣೆಗಾಗಿ ಪಕ್ಷವು ಮಾಡಿದ ತ್ಯಾಗಗಳ ಕುರಿತು ಪ್ರಚಾರ ಮಾಡಬೇಕು.

ನೀವು ನಮ್ಮ ಸಿದ್ಧಾಂತದ ಬಗ್ಗೆ ಯುವಕರನ್ನು ತಲುಪಬೇಕು, ನೀವು ಅದನ್ನು ಮಾಡುತ್ತೀರಾ? ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ವಿದ್ಯಾರ್ಥಿಗಳೊಂದಿಗೆ ಮಾತನಾಡಬೇಕು; ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಿದ್ಧಾಂತದ ಬಗ್ಗೆ ತಿಳಿದಿಲ್ಲದ ಕಾರಣ. ಡಿಎಂಕೆ ಕೇವಲ ಚುನಾವಣೆಗಳಲ್ಲಿ ಹೋರಾಡುವ ಸಲುವಾಗಿ ಸ್ಥಾಪಿಸಲಾದ ಪಕ್ಷವಲ್ಲ. ಇದು ಜನರ ಹಕ್ಕುಗಳಿಗಾಗಿ ಹೋರಾಡಲು ಸ್ಥಾಪಿಸಲಾದ ಪಕ್ಷವಾಗಿದೆ ಎಂದು ಅವರು ಹೇಳಿದರು.

ಕಾಶ್ಮೀರ : ಉಗ್ರನ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಎನ್‌ಐಎ

ನವದೆಹಲಿ, ಸೆ. 26 (ಪಿಟಿಐ) ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ನಿಷೇಧಿತ ಸಂಘಟನೆಯ ಸಕ್ರಿಯ ಸದಸ್ಯರಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸುವಲ್ಲಿ ತೊಡಗಿರುವ ಹಿಜ್ಬುಲ್‌ ಮುಜಾಹಿದ್ದೀನ್‌ (ಎಚ್‌ಎಂ) ಭಯೋತ್ಪಾದಕನ ಸ್ಥಿರ ಆಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಟ್ಟುಗೋಲು ಹಾಕಿಕೊಂಡಿದೆ.

ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ, ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಏಪ್ರಿಲ್‌ನಲ್ಲಿ ಬಂಧಿಸಲ್ಪಟ್ಟ ಆರೋಪಪಟ್ಟಿಯಲ್ಲಿ ಆರೋಪಿಯಾಗಿರುವ ತಾರಿಕ್‌ ಅಹ್ಮದ್‌ ಮಿರ್‌ ಅವರ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಮಾಲ್ಡೇರಾ ಗ್ರಾಮದಲ್ಲಿ 780 ಚದರ ಅಡಿ ಅಳತೆಯ ಭೂಮಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್‌ ಹಾಗೂ ಒಂದೇ ಅಂತಸ್ತಿನ ವಸತಿ ಕಟ್ಟಡ ಮತ್ತು ಹಣ್ಣಿನ ತೋಟದ ರೂಪದಲ್ಲಿ ಎಂಟು ಮಾರ್ಲಾ ಅಳತೆಯ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಸೇರಿವೆ ಎಂದು ತನಿಖಾ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹಿಜ್ಬುಲ್‌ ಮುಜಾಹಿದ್ದೀನ್‌ ಸದಸ್ಯ ಸೈಯದ್‌ ನವೀದ್‌ ಮುಷ್ತಾಕ್‌ ನ ಸಹಚರ ಮಿರ್‌ ವಿರುದ್ಧ 2024 ರ ಅಕ್ಟೋಬರ್‌ನಲ್ಲಿ ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಲಾಯಿತು.

ಭಾರತದ ಶಾಂತಿ, ಸ್ಥಿರತೆ ಮತ್ತು ಸಾಮರಸ್ಯವನ್ನು ಭಂಗಗೊಳಿಸುವ ಉದ್ದೇಶದಿಂದ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲಗಳ ವಿರುದ್ಧ ನಡೆಸುತ್ತಿರುವ ಕ್ರಮದ ಭಾಗವಾಗಿ ಇಂದಿನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಯುದ್ಧ ನಿಲ್ಲಿಸುವಂತೆ ಪಾಕ್‌ ಬೇಡಿಕೊಂಡಿತ್ತು ; ವಿಶ್ವಸಂಸ್ಥೆಯಲ್ಲಿ ಭಾರತ ಪುನರುಚ್ಚಾರ

ವಿಶ್ವಸಂಸ್ಥೆ, ಸೆ. 27 (ಪಿಟಿಐ) ಆಪರೇಷನ್‌ ಸಿಂಧೂರ್‌ ಸಮಯದಲ್ಲಿ ಪಾಕಿಸ್ತಾನದ ಸೇನೆಯು ಹೋರಾಟವನ್ನು ನಿಲ್ಲಿಸುವಂತೆ ಬೇಡಿಕೊಂಡಿತ್ತು ಮತ್ತು ನವದೆಹಲಿ ಮತ್ತು ಇಸ್ಲಾಮಾಬಾದ್‌ ನಡುವಿನ ಯಾವುದೇ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಗೆ ಮಧ್ಯಪ್ರವೇಶಿಸಲು ಅವಕಾಶವಿಲ್ಲ ಎಂದು ಭಾರತ ಪುನರುಚ್ಚರಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) 80 ನೇ ಅಧಿವೇಶನದ ಸಾಮಾನ್ಯ ಚರ್ಚೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ತಮ್ಮ ಭಾಷಣದಲ್ಲಿ ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವಿನ ಯುದ್ಧವನ್ನು ತಪ್ಪಿಸಿದ ಕೀರ್ತಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡಿದ ನಂತರ, ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಕಾರ್ಯಾಚರಣೆಯ ಪ್ರಥಮ ಕಾರ್ಯದರ್ಶಿ ಪೆಟಲ್‌ ಗಹ್ಲೋಟ್‌ ಈ ಹೇಳಿಕೆ ನೀಡಿದ್ದಾರೆ.

ಈ ಸಭೆಯು ಬೆಳಿಗ್ಗೆ ಪಾಕಿಸ್ತಾನದ ಪ್ರಧಾನ ಮಂತ್ರಿಯಿಂದ ಅಸಂಬದ್ಧ ನಾಟಕೀಯತೆಯನ್ನು ಕಂಡಿತು, ಅವರು ತಮ್ಮ ವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿರುವ ಭಯೋತ್ಪಾದನೆಯನ್ನು ಮತ್ತೊಮ್ಮೆ ವೈಭವೀಕರಿಸಿದರು ಎಂದು ಯುಎನ್‌ಜಿಎಯಲ್ಲಿ ಭಾರತದ ಪ್ರತ್ಯುತ್ತರ ಹಕ್ಕನ್ನು ನೀಡುತ್ತಾ ಗಹ್ಲೋಟ್‌ ಹೇಳಿದರು.

ಶರೀಫ್‌ ತಮ್ಮ ಭಾಷಣದಲ್ಲಿ, ಕಾಶ್ಮೀರದ ಪರಿಸ್ಥಿತಿಯ ಕುರಿತು ನವದೆಹಲಿಯನ್ನು ಟೀಕಿಸುತ್ತಾ, ಪಾಕಿಸ್ತಾನವು ಎಲ್ಲಾ ಬಾಕಿ ಇರುವ ವಿಷಯಗಳ ಕುರಿತು ಭಾರತದೊಂದಿಗೆ ಸಂಯೋಜಿತ, ಸಮಗ್ರ ಮತ್ತು ಫಲಿತಾಂಶ-ಆಧಾರಿತ ಸಂವಾದಕ್ಕೆ ಸಿದ್ಧವಾಗಿದೆ ಎಂದು ಹೇಳಿದರು.ದಕ್ಷಿಣ ಏಷ್ಯಾದಲ್ಲಿ … ಯುದ್ಧವನ್ನು ತಪ್ಪಿಸಲು ಟ್ರಂಪ್‌ ಅವರ ಶಾಂತಿಗಾಗಿ ಮಾಡಿದ ಪ್ರಯತ್ನಗಳು ಸಹಾಯ ಮಾಡಿದವು ಎಂದು ಷರೀಫ್‌ ಶ್ಲಾಘಿಸಿದರು.ನಮ್ಮ ಭಾಗದಲ್ಲಿ ಶಾಂತಿಯನ್ನು ಉತ್ತೇಜಿಸಲು ಅಧ್ಯಕ್ಷ ಟ್ರಂಪ್‌ ಅವರ ಅದ್ಭುತ ಮತ್ತು ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ, ಪಾಕಿಸ್ತಾನ ಅವರನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ನಾವು ಮಾಡಬಹುದಾದ ಕನಿಷ್ಠ ಇದು … ಅವರು ನಿಜವಾಗಿಯೂ ಶಾಂತಿಯ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

26 ನಾಗರಿಕರನ್ನು ಕೊಂದ ಏಪ್ರಿಲ್‌ 22 ರ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7 ರಂದು ಪ್ರಾರಂಭಿಸಲಾದ ಆಪರೇಷನ್‌ ಸಿಂಧೂರ್‌ನ ಭಾಗವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿತು.ಎರಡೂ ಮಿಲಿಟರಿಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ನೇರ ಮಾತುಕತೆಗಳ ನಂತರ ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ತಿಳುವಳಿಕೆಯನ್ನು ತಲುಪಲಾಗಿದೆ ಎಂದು ಭಾರತ ನಿರಂತರವಾಗಿ ಸಮರ್ಥಿಸಿಕೊಂಡಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-09-2025)

ನಿತ್ಯ ನೀತಿ : ಸತ್ಯ ಹೇಳಲು ಯಾವತ್ತೂ ಹಿಂಜರಿಯಬಾರದು. ಇಂತಹ ಶಕ್ತಿ ಇದ್ದರೆ ಮಾತ್ರ ಬರಹಗಾರ ಒಬ್ಬ ಕಲಾವಿದನಾಗುತ್ತಾನೆ! – ಎಸ್‌.ಎಲ್‌.ಭೈರಪ್ಪ

ಪಂಚಾಂಗ : ಶನಿವಾರ, 27-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ಪಂಚಮಿ / ನಕ್ಷತ್ರ: ಅನುರಾಧಾ / ಯೋಗ: ಪ್ರೀತಿ / ಕರಣ: ಕೌಲವ

ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.12
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರುವುದು ಒಳಿತು.
ವೃಷಭ: ಖಾಸಗಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ನಿರಾಸಕ್ತಿ ಉಂಟಾಗಲಿದೆ.
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲಿದೆ. ಮಹಿಳೆಯರಿಗೆ ಯಶಸ್ಸು ಸಿಗಲಿದೆ.

ಕಟಕ: ಆರ್ಥಿಕವಾಗಿ ಪ್ರಗತಿ ಸಾ ಸುವಿರಿ. ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗಲಿದೆ.
ಸಿಂಹ: ಸಿನಿಮಾ ಕ್ಷೇತ್ರದಲ್ಲಿ ರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
ಕನ್ಯಾ: ಸಣ್ಣ ಕೈಗಾರಿಕೆ ವ್ಯಾಪಾರಿ ಗಳಿಗೆ ಲಾಭ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ.

ತುಲಾ: ನಿದ್ರಾಹೀನತೆ ಕಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು.
ವೃಶ್ಚಿಕ: ಸಾರ್ವಜನಿಕ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ.
ಧನುಸ್ಸು: ಹೂವಿನ ವ್ಯಾಪಾರಿಗಳಿಗೆ ಆದಾಯ ವೃದ್ಧಿ ಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ.

ಮಕರ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉತ್ತಮ ದಿನ.
ಕುಂಭ: ಮಕ್ಕಳ ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸಿ. ದಿನಾಂತ್ಯದಲ್ಲಿ ಆಯಾಸವಾಗಬಹುದು.
ಮೀನ: ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿರುವವರು ಉತ್ತಮ ಫಲ ನಿರೀಕ್ಷಿಸಬಹುದು.

ಸೌಜನ್ಯ ಪ್ರಕರಣ ಮರು ತನಿಖೆಗೆ ಸಿಬಿಐಗೆ ಸ್ನೇಹಮಯಿ ಕೃಷ್ಣ ಮನವಿ

ಬೆಂಗಳೂರು, ಸೆ.26– ಧರ್ಮಸ್ಥಳದಲ್ಲಿನ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸಿಬಿಐಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಅಂಚೆ ಮೂಲಕ ದೂರು ರವಾನಿಸಿರುವ ಅವರು, 7 ದಿನಗಳ ಒಳಗಾಗಿ ತಮ ಪತ್ರಕ್ಕೆ ಪ್ರತಿಕ್ರಿಯಿಸಬೇಕು. ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಈವರೆಗೂ ನಾನು ಅನೇಕ ಪ್ರಕರಣಗಳಲ್ಲಿ ತನಿಖೆಯ ಲೋಪಗಳ ಬಗ್ಗೆ ನ್ಯಾಯಾಲಯಗಳ ಅನುಮತಿ ಪಡೆದು, ಹಿರಿಯ ಅಧಿಕಾರಿಗಳ ಅವಗಾಹನೆಗೆ ತಂದಿದ್ದೇನೆ. ಅದರದ ಆಧಾರದ ಮೇಲೆ ಕೆಲವು ಪ್ರಕರಣಗಳು ತನಿಖೆಯಾಗಿದ್ದು ಸಂತ್ರಸ್ಥರಿಗೆ ನ್ಯಾಯ ಸಿಕ್ಕಿದೆ. ನೈಜ ಅಪರಾಧಿಗಳ ಬಂಧನವಾಗಿದೆ ಎಂದು ಸ್ನೇಹಮಯಿ ಕೃಷ್ಣ ವಿವರಿಸಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ಆಕೆಯ ಮಾವ ವಿಠಲಗೌಡನೇ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಸಾಧ್ಯತೆಗಳಿವೆ. ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋಗಳು ಹಾಗೂ ಲಭ್ಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕ ತಮಗೆ ಈ ಅಭಿಪ್ರಾಯ ಬಂದಿದೆ ಎಂದಿದ್ದಾರೆ.

ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿ ಭಾಸ್ಕರ್‌ ರೈ ಬಂಧಿತ ಆರೋಪಿ ಸಂತೋಷ್‌ರಾವ್‌ನಿಂದ ಹೇಳಿಕೆ ಪಡೆದಿರುವುದನ್ನು ಗಮನಿಸುವುದಾದರೆ, ಸೌಜನ್ಯ ಶವ ಸಿಗುವ ಮುನ್ನವೇ ಸಂತೋಷ್‌ರಾವ್‌ ನನ್ನು ಬಂಧಿಸಲಾಗಿತ್ತು ಎಂದು ಕಂಡು ಬಂದಿದೆ.
ಒಂದು ಕೊಲೆ ಪ್ರಕರಣವನ್ನು ಸಮರ್ಥವಾಗಿ ತನಿಖೆ ನಡೆಸಲು ಬೇಕಾದ ಪರಿಣಿತಿ, ತರಬೇತಿ ಸ್ಥಳೀಯ ಪೊಲೀಸರಿಗೆ, ಸಿಐಡಿ ಹಾಗೂ ಸಿಬಿಐ ಅಧಿಕಾರಿಗಳಿಲ್ಲವೇ ಎಂದು ಸ್ನೇಹಮಹಿ ಕೃಷ್ಣ ಪ್ರಶ್ನಿಸಿದ್ದಾರೆ.

ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ಗೌರವವನ್ನು ಹಾಗೂ ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡಲಾಗುತ್ತಿದೆ. ನನಗೆ ಲಭ್ಯವಾದ ಸಾಕ್ಷ್ಯಾಧಾರಗಳನ್ನು ಆಧರಿಸಿ ದಕ್ಷಣ ಕನ್ನಡ ಜಿಲ್ಲೆಯ ಎಸ್‌‍ಪಿ ಅವರಿಗೆ ಸೆ.8 ರಂದು ದೂರು ಅರ್ಜಿ ನೀಡಿದ್ದೆ. ಅದಕ್ಕೆ ಹಿಂಬರಹ ನೀಡಿರುವ ಎಸ್‌‍ಪಿ ಅವರು ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐಗೆ ವರ್ಗಾಹಿಸಲಾಗಿದ್ದು, ಕಡತವು ಸಿಬಿಐ ಕಚೇರಿಯಲ್ಲಿಯೇ ಇದೆ. ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆರೋಪಿಯು ಖುಲಾಸೆಯಾಗಿದೆ. ಮರು ತನಿಖೆಯ ಬಗ್ಗೆ ನ್ಯಾಯಾಲಯದಲ್ಲೇ ವ್ಯವಹರಿಸಬೇಕೆಂದು ತಿಳಿಸಿದ್ದಾರೆ.

ತಮ ದೂರು ಅರ್ಜಿಯನ್ನು ಪರಿಗಣಿಸಿ ಪ್ರಕರಣವನ್ನು ಮರು ತನಿಖೆಗೊಳಪಡಿಸಬೇಕು. ತಪ್ಪಿತಸ್ಥರಿಗೆ ನ್ಯಾಯ ಕೊಡಿಸಬೇಕು ಎಂದು ಸ್ನೇಹಮಹಿ ಕೃಷ್ಣ ಸಿಬಿಐಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಾದ್ಯಂತ ವಾರದಲ್ಲಿ 2 ದಿನ ಪೊಲೀಸರ ವಿಶೇಷ ಗಸ್ತು

ಬೆಂಗಳೂರು,ಸೆ.26– ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗಿದ್ದು, ವಾರದಲ್ಲಿ ಎರಡು ದಿನ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಮಲ್ಲೇಶ್ವರಂನ 18ನೇ ಅಡ್ಡ ರಸ್ತೆಯಲ್ಲಿರುವ ಮೈದಾನದಲ್ಲಿ ಉತ್ತರ ವಿಭಾಗದ ಪೊಲೀಸರು ಹಮಿಕೊಂಡಿದ್ದ ರಾಣಿ ಚೆನ್ನಮ ಪಡೆ-ಮಹಿಳಾ ಜಾಗೃತಿ ಕಾರ್ಯಕ್ರಮಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾರ್ವಜನಿಕರಲ್ಲಿ ಸ್ಥೈರ್ಯ ಮೂಡಿಸಲು ನಗರದಾದ್ಯಂತ ಪೊಲೀಸರು ನಾಕಾ ಬಂದಿ ಹಾಕಿ ಪರಿಶೀಲಿಸುತ್ತಿದ್ದಾಗ ಮಾದಕ ವಸ್ತುಗಳು ಪತ್ತೆಯಾಗಿವೆ. ಅಲ್ಲದೇ ದಾಖಲೆ ಇಲ್ಲದ ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.

ಜನಸ್ನೇಹಿಯಾಗಿ ಪೊಲೀಸ್‌‍ ವ್ಯವಸ್ಥೆ ಬಲಪಡಿಸಲು ಕ್ರಮ ವಹಿಸಲಾಗಿದೆ. ನಗರದಲ್ಲಿ ಅಪರಾಧ ಚಟುವಟಿಕೆಗಳ ಕಡಿವಾಣಕ್ಕೆ ಗಸ್ತು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್‌‍ ಠಾಣೆಯ ಎಲ್ಲಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.ಅಪರಾಧ ವಿಭಾಗದ ಪೊಲೀಸರಿಗೆ ನಗರದಲ್ಲಿ ಹೆಚ್ಚು ನಾಕಾ ಬಂಧಿ, ಗಸ್ತು ಹಾಗೂ ಏರಿಯಾ ಡೊಮಿನೇಷನ್‌ಗೆ ಮಾಡುವಂತೆ ಸೂಚಿಸಿರುವ ಆಯುಕ್ತರು, ರಾತ್ರಿ ಗಸ್ತು ಹೊರತುಪಡಿಸಿ ಹೆಚ್ಚುವರಿಯಾಗಿ ಗಸ್ತು ಮಾಡಲು ಸಲಹೆ ನೀಡಿದ್ದಾರೆ.

ಪ್ರತಿ ಮಂಗಳವಾರ ಹಾಗೂ ಗುರುವಾರ ಪೊಲೀಸ್‌‍ ಠಾಣಾ ವ್ಯಾಪ್ತಿಯ ಒಂದು ಏರಿಯಾವನ್ನು ಡೊಮಿನೇಷನ್‌ ಮಾಡಲು, ರಾತ್ರಿ 9 ಗಂಟೆಯಿಂದ 11 ಗಂಟೆಯ ಅಂತರದಲ್ಲಿ ತಪಾಸಣೆ ಮಾಡುವಂತೆ, ಪರಿಶೀಲನೆ ವೇಳೆ ಮಹಿಳೆಯರು ಮತ್ತು ಮಕ್ಕಳ ನಡುವೆ ಒಳ್ಳೆಯ ರೀತಿ ವರ್ತಿಸುವಂತೆ ಆಯುಕ್ತರು ಸೂಚಿಸಿದ್ದಾರೆ.

ಅದೇ ರೀತಿ ಪ್ರತಿ ಶುಕ್ರವಾರ ಹಾಗೂ ಶನಿವಾರ ಕಾಲ್ನಡಿಗೆಯಲ್ಲಿ ಅತೀ ಸೂಕ ಹಾಗೂ ಜನಸಂದಣಿ ಏರಿಯಾದಲ್ಲಿ ಗಸ್ತು ತಿರುಗಲು ತಿಳಿಸಿದರು.ಈ ಎಲ್ಲಾ ಚಟುವಟಿಕೆಗಳಲ್ಲಿ ಇನ್‌್ಸಪೆಕ್ಟರ್‌ಗಳು,ಎಸಿಪಿಗಳು ಹಾಗೂ ಡಿಸಿಪಿಗಳು ಭಾಗವಹಿಸುವಂತೆ, ಈ ಬಗ್ಗೆ ಆಗಿಂದ್ದಾಗೆ ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡುವಂತೆ ಆಯುಕ್ತರು ಆದೇಶಿಸಿದ್ದಾರೆ.ಕಾರ್ಯಕ್ರಮದಲ್ಲಿ ಜಂಟಿ ಪೊಲೀಸ್‌‍ ಆಯುಕ್ತ ವಂಶಿಕೃಷ್ಣ, ಉಪ ಪೊಲೀಸ್‌‍ ಆಯುಕ್ತ ನೇಮೆಗೌಡ ಉಪಸ್ಥಿತರಿದ್ದರು.

ಬೆಂಗಳೂರಲ್ಲಿ ಪುಂಡರ ಅಟ್ಟಹಾಸ : 22 ವಾಹನಗಳ ಗಾಜು ಪುಡಿಗಟ್ಟಿದ ದುಷ್ಕರ್ಮಿಗಳು

ಬೆಂಗಳೂರು,ಸೆ.26-ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ 22 ವಾಹನಗಳಿಗೆ ಹಾನಿ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಮುದ್ದಯ್ಯನ ಪಾಳ್ಯದಲ್ಲಿ ಮೊನ್ನೆ ರಾತ್ರಿ ಪುಂಡರು ದೊಣ್ಣೆ ಹಿಡಿದು ತಿರುಗಾಡುತ್ತಾ ರಸ್ತೆ ಬದಿ ನಿಲ್ಲಿಸಿದ್ದ 6 ಕಾರುಗಳು ಹಾಗೂ ಒಂದು ಆಟೋರಿಕ್ಷಾದ ಗಾಜನ್ನು ಒಡೆದು ಹಾನಿಗೊಳಿಸಿದ್ದಾರೆ.

ನಂತರ ಬ್ಯಾಡರ ಹಳ್ಳಿ ಕಡೆಗೆ ಹೋದ ಈ ಪುಂಡರು ವಾಲೀಕಿ ನಗರದ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳು ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಪಾರ್ಕಿಂಗ್‌ ಮಾಡಿದ್ದ ವಾಹನಗಳ ಗಾಜುಗಳನ್ನು ಒಡೆದಿದ್ದಾರೆ. ದುಷ್ಕರ್ಮಿಗಳ ಪುಂಡಾಟದಿಂದಾಗಿ 15 ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ಹಾನಿಯಾಗಿವೆ. ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಷ್ಟಕ್ಕೆ ಸುಮನಾಗದ ದುಷ್ಕರ್ಮಿಗಳು ಮಾಗಡಿ ರಸ್ತೆಗೆ ತೆರಳಿದ್ದು, ರಸ್ತೆ ಬದಿ ಹಾಲಿನ ಕ್ಯಾಂಟರ್‌ ಪಾರ್ಕಿಂಗ್‌ ಮಾಡಿ ವಾಹನದೊಳಗೆ ಮಲಗಿದ್ದ ಚಾಲಕನಿಗೆ ದೊಣ್ಣೆ ತೋರಿಸಿ ಬೆದರಿಸಿ ಹಲ್ಲೆ ನಡೆಸಿ ಮೊಬೈಲ್‌ ಹಾಗೂ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ್ದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ರೀತಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲೂ ಪುಂಡಾಟ ಮೆರೆದು ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಮೂವರು ಐಎಎಸ್‌‍ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು,ಸೆ.26- ರಾಜ್ಯ ಸರ್ಕಾರ ಮೂವರು ಐಎಎಸ್‌‍ ಅಧಿಕಾರಿ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿ ಡಾ.ಮಂಜುಳಾ ಎನ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ಡಾ. ಎಕರೂಪ್‌ ಕೌರ್‌ ಅವರು ಕೇಂದ್ರ ಸೇವೆಗೆ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಐಟಿಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಹುದ್ದೆ ತೆರವಾಗಿತ್ತು.
ಮಂಜುಳಾ ಅವರಿಗೆ ಹೆಚ್ಚುವರಿಯಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹುದ್ದೆಯ ಸಮವರ್ತಿತ ಪ್ರಭಾರದಲ್ಲಿರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಪೂವಿತ ಎಸ್‌‍. ಅವರನ್ನು ವರ್ಗಾಯಿಸಲಾಗಿದೆ. ಶರತ್‌ ಬಿ. ಅವರ ವರ್ಗಾವಣೆಯಿಂದ ಈ ಹುದ್ದೆ ತೆರವಾಗಿತ್ತು.

ಮೂಲಸೌಕರ್ಯ ಅಭಿವೃದ್ಧಿ, ಬಂದರು, ಒಳನಾಡು, ಜಲಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ಗೋವಿಂದ ರೆಡ್ಡಿ ಅವರಿಗೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರ ಹುದ್ದೆಯ ಸಮವರ್ತಿತ ಪ್ರಭಾರದಲ್ಲಿರಿಸಿ ಆದೇಶಿಸಲಾಗಿದೆ. ಈ ಹುದ್ದೆ ರವಿಕುಮಾರ್‌ ಎಂ.ಆರ್‌. ಅವರ ವರ್ಗಾವಣೆಯಿಂದ ಈ ಹುದ್ದೆ ತೆರವಾಗಿತ್ತು.