Home Blog Page 84

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಜನ್ಮದಿನ : ಗೌರವ ಸಲ್ಲಿಸಿದ ಪಿಎಂ ಮೋದಿ

ನವದೆಹಲಿ,ಸೆ.26- ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ದಿ.ಮನಮೋಹನ್‌ ಸಿಂಗ್‌ ಅವರ ಜನದಿನದಂದು ಅವರಿಗೆ ಗೌರವ ಸಲ್ಲಿಸಿ, ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಸರಿಸಿದ್ದಾರೆ.

ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಜಿ ಅವರಿಗೆ ಅವರ ಜನ ವಾರ್ಷಿಕೋತ್ಸವದಂದು ನಮನಗಳು. ಅವರ ಸುದೀರ್ಘ ವರ್ಷಗಳ ಸಾರ್ವಜನಿಕ ಜೀವನದಲ್ಲಿ ಅವರು ನಮ ದೇಶಕ್ಕೆ ನೀಡಿದ ಕೊಡುಗೆಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದು ಮೋದಿ ಎಕ್‌್ಸನಲ್ಲಿ ಬರೆದುಕೊಂಡಿದ್ದಾರೆ.

ಡಾ. ಮನಮೋಹನ್‌ ಸಿಂಗ್‌ ಅವರು 2004 ಮತ್ತು 2014 ರ ನಡುವೆ ಕಾಂಗ್ರೆಸ್‌‍ ನೇತೃತ್ವದ ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದರು ಮತ್ತು 1991 ಮತ್ತು 1996 ರ ನಡುವೆ ಪಿ ವಿ ನರಸಿಂಹ ರಾವ್‌ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅವರ ಅಧಿಕಾರಾವಧಿಯನ್ನು ಭಾರತವು ಮಾರುಕಟ್ಟೆ ಸುಧಾರಣೆಗಳನ್ನು ಪ್ರಾರಂಭಿಸಿದ ಮತ್ತು ಆರ್ಥಿಕತೆಯ ರಾಜ್ಯ ನಿಯಂತ್ರಣವನ್ನು ಸಡಿಲಗೊಳಿಸಿದ ಕಾರಣ ಯುಗಕಾಲ ಎಂದು ಪರಿಗಣಿಸಲಾಗಿದೆ.

ಈಗ ಪಾಕಿಸ್ತಾನದಲ್ಲಿರುವ ಪಂಜಾಬ್‌‍ನ ಒಂದು ಭಾಗದಲ್ಲಿ 1932 ರಲ್ಲಿ ಜನಿಸಿದ ಸಿಂಗ್‌, ಪ್ರತಿಷ್ಠಿತ ಅರ್ಥಶಾಸ್ತ್ರಜ್ಞರಾಗಿದ್ದರು. ನಂತರ ಸಾರ್ವಜನಿಕ ಜೀವನವನ್ನು ಪ್ರವೇಶ ಮಾಡಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಧನರಾಗಿದ್ದರು.

ದಾವಣಗೆರೆಯಲ್ಲಿ ಕೋಮುವಾದಿಗಳಿಂದ ಕಲ್ಲುತೂರಾಟ : ಪೊಲೀಸರಿಗೆ ಬಿ.ವೈ.ವಿಜಯೇಂದ್ರ ಎಚ್ಚರಿಕೆ

ಬೆಂಗಳೂರು,ಸೆ.26- ದಾವಣಗೆರೆಯ ಕಾರ್ಲ್‌ ಮಾರ್ಕ್ಸ್ ನಗರದಲ್ಲಿ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿರುವ ದುಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸದೇ ಹೋದರೆ ಪರಿಸ್ಥಿತಿ ಗಂಭೀರ ತಿರುವು ಪಡೆಯಲು ಪೊಲೀಸರೇ ಕಾರಣರಾಗುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಕಾಂಗ್ರೆಸ್‌‍ ಸರ್ಕಾರದ ಅವಧಿಯಲ್ಲಿ ಹಿಂದೂ ಸಮುದಾಯದ ಮೇಲಿನ ಕೋಮುವಾದಿ ದುಷ್ಟರ ದಾಳಿ ಸರಣೀ ರೂಪದಲ್ಲಿ ಮುಂದುವರೆಯುತ್ತಲೇ ಇದೆ. ದಾವಣಗೆರೆಯಲ್ಲಿ ಕೋಮು ಉದ್ವಿಗ್ನತೆ ಪ್ರಚೋದಿಸುವ ಬ್ಯಾನರ್‌ ಅಳವಡಿಸಿ ಹಿಂದೂ ಸಮುದಾಯದ ಮನೆಗಳನ್ನು ಟಾರ್ಗೆಟ್‌ ಮಾಡಿ ಕಲ್ಲು ತೂರಾಟ ನಡೆಸಿ ಆತಂಕಮಯ ವಾತಾವರಣ ಸೃಷ್ಟಿಸಿ ಹಿಂದುಗಳ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಅತ್ಯಂತ ಖಂಡನೀಯ ಎಂದು ತೀವ್ರ ವಾಗ್ದಳಿ ನಡೆಸಿದ್ದಾರೆ.

ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿ ಭಯಗ್ರಸ್ತ ವಾತಾವರಣ ಉಂಟುಮಾಡಿದ ಮುಸ್ಲಿಂ ಕೋಮುವಾದಿ ದುಷ್ಕರ್ಮಿಗಳನ್ನು ಪೊಲೀಸರು ಈ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಿ. ದೇಶದ ಹಲವೆಡೆಗಳಲ್ಲಿ ಐ ಲವ್‌ ಮೊಹಮದ್‌ ಎಂಬ ಬ್ಯಾನರ್‌ ಅಳವಡಿಸಿ ಹಿಂದೂಗಳನ್ನು ಪ್ರಚೋದಿಸಲೆಂದೇ ವಿವಾದ ಹುಟ್ಟುಹಾಕಲಾಗಿದ್ದು, ಇದು ದಾವಣಗೆರೆ ಮೂಲಕ ರಾಜ್ಯವನ್ನೂ ಪ್ರವೇಶಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪೋಲಿಸ್‌‍ ಇಲಾಖೆ ಅತ್ಯಂತ ಗಂಭೀರವಾಗಿ ಈ ಘಟನೆಯನ್ನು ಪರಿಗಣಿಸಿ ಕೋಮುವಾದಿ ದುಷ್ಟರ ಅಟ್ಟಹಾಸ ರಾಜ್ಯದ ಇತರೆಡೆಗಳಲ್ಲೂ ಪಸರಿಸದಂತೆ ಈ ಕೂಡಲೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಅಕ್ಟೋಬರ್‌ನಿಂದ ಜಾರಿಗೆ ಬರಲಿವೆ ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುವ ಹೊಸ ನಿಯಮಗಳು

ನವದೆಹಲಿ,ಸೆ.26- ಮುಂದಿನ ಅಕ್ಟೋಬರ್‌ ತಿಂಗಳ ಆರಂಭದಿಂದಲೇ ಸಾಮಾನ್ಯ ಜನರ ಜೀವನ ಖರ್ಚಿನ ಮೇಲೆ ನೇರವಾಗಿ ಪರಿಣಾಮ ಬೀರುವ ಹಲವಾರು ಹೊಸ ನಿಯಮಗಳು ಜಾರಿಯಾಗುತ್ತಿವೆ.

ರೈಲು ಟಿಕೆಟ್‌ನಿಂದ ಹಿಡಿದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ವರೆಗೆ ಬದಲಾವಣೆಗಳು ನಡೆಯಲಿವೆ. ಇದಲ್ಲದೆ ಎಲ್‌ಪಿಜಿ ಸಿಲಿಂಡರ್‌ ಬೆಲೆಗಳು, ಆನ್ಲೈನ್‌ ಗೇಮಿಂಗ್‌ ಕಾನೂನುಗಳು ಮತ್ತು ಇಪಿಎಫ್‌ ಹಣ ಹಿಂಪಡೆಯುವ ಸೌಲಭ್ಯಗಳಲ್ಲಿಯೂ ಮಹತ್ವದ ಪರಿಷ್ಕರಣೆಗಳು ಆಗಲಿವೆ.

ರೈಲು ಟಿಕೆಟ್‌ ಬುಕ್ಕಿಂಗ್‌ನಲ್ಲಿ ಆಧಾರ್‌ ಕಡ್ಡಾಯ :
ಅಕ್ಟೋಬರ್‌ 1, 2025ರಿಂದ ರೈಲ್ವೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತರಲಿದೆ. ಇದರ ಪ್ರಕಾರ, IRCTC ವೆಬ್ಸೈಟ್‌ ಅಥವಾ ಮೊಬೈಲ್‌ ಆ್ಯಪ್‌ ಮೂಲಕ ಬುಕಿಂಗ್‌ ಪ್ರಾರಂಭವಾದ ಮೊದಲ 15 ನಿಮಿಷಗಳಲ್ಲಿ ಸಾಮಾನ್ಯ ಟಿಕೆಟ್‌ ಬುಕ್‌ ಮಾಡುವಾಗ ಆಧಾರ್‌ ಆಧಾರಿತ ದೃಢೀಕರಣ ಕಡ್ಡಾಯವಾಗಲಿದೆ. ಈ ಕ್ರಮದಿಂದ ನಕಲಿ ಬುಕ್ಕಿಂಗ್‌ಗಳನ್ನು ತಡೆದು, ನಿಜವಾದ ಪ್ರಯಾಣಿಕರಿಗೆ ಟಿಕೆಟ್‌ ಸಿಗುವಂತೆ ಮಾಡಲು ರೈಲ್ವೆ ಸಚಿವಾಲಯ ಕ್ರಮ ಕೈಗೊಂಡಿದೆ. ಇದರ ಪರಿಣಾಮವಾಗಿ ರೈಲು ಪ್ರಯಾಣಿಕರಿಗೆ ಹೆಚ್ಚಿನ ಪಾರದರ್ಶಕತೆ ಲಭ್ಯವಾಗಲಿದೆ.

ಹೊಸ ಬದಲಾವಣೆ :
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಅ. 1ರಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುತ್ತಿದೆ. ಬಹು ಯೋಜನೆ ಚೌಕಟ್ಟು (Multiple Scheme Framework & MSF) ಎಂಬ ನಿಯಮ ಜಾರಿಯಾಗಲಿದೆ. ಇದರ ಮೂಲಕ ಸರ್ಕಾರೇತರ ವಲಯದ ಚಂದದಾರರು ಈಗ ಒಂದೇ PAN ಅಥವಾ PRAN ಅಡಿಯಲ್ಲಿ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.
ಈ ಬದಲಾವಣೆಯಿಂದ ಹೂಡಿಕೆದಾರರಿಗೆ ಹೆಚ್ಚು ಆಯ್ಕೆಗಳು ದೊರೆಯಲಿದ್ದು, ನಿವೃತ್ತಿ ನಿಧಿ ರೂಪಿಸುವಲ್ಲಿ ಹೆಚ್ಚು ಸ್ವಾತಂತ್ರ್ಯ ಸಿಗಲಿದೆ.

ಎಲ್‌ಪಿಜಿ ಸಿಲಿಂಡರ್‌ ಬೆಲೆಗಳಲ್ಲಿ ಬದಲಾವಣೆ :
ಪ್ರತಿ ತಿಂಗಳಂತೆ, ಅ.1ರಂದು ಎಲ್‌ಪಿಜಿ ಸಿಲಿಂಡರ್‌ ಬೆಲೆಗಳು ಬದಲಾಗುವ ಸಾಧ್ಯತೆ ಇದೆ. ಕಳೆದ ಕೆಲವು ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆಗಳಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ತಿಂಗಳು ಬೆಲೆಗಳಲ್ಲಿ ಪರಿಷ್ಕರಣೆ ಕೂಡ ಮಾಡಲಾಗಿತ್ತು. ಈ ಬಾರಿ ಕೂಡ ಅಕ್ಟೋಬರ್‌ ಆರಂಭದಲ್ಲಿ ಸಿಲಿಂಡರ್‌ ದರದಲ್ಲಿ ಬದಲಾವಣೆ ಕಾಣಬಹುದಾದ್ದರಿಂದ, ಗೃಹಿಣಿಯರ ಪಾಕೆಟ್‌ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ.

ಹೊಸ ಕಾನೂನು :
ಅ.1ರಿಂದ ಆನ್ಲೈನ್‌ ಗೇಮಿಂಗ್‌ ಕ್ಷೇತ್ರದಲ್ಲಿ ಹೊಸ ಕಾನೂನು ಜಾರಿಗೆ ಬರಲಿದೆ. ಇದರ ಪ್ರಕಾರ, ದೇಶದಲ್ಲಿ ಯಾವುದೇ ರೀತಿಯ ಆನ್ಲೈನ್‌ ಜೂಜಾಟ, ಬೆಟ್ಟಿಂಗ್‌ ಅಥವಾ ನೈಜ ಹಣದ ಆಟಗಳಿಗೆ ಅವಕಾಶವಿರುವುದಿಲ್ಲ. ಸರ್ಕಾರವು ಸ್ಪಷ್ಟವಾಗಿ ಕಾನೂನಿನಲ್ಲಿ ಈ ಬಗ್ಗೆ ಹೇಳಿದ್ದು, ಕೇವಲ ಕಾನೂನಾತಕ ಮತ್ತು ಸುರಕ್ಷಿತ ಆನ್ಲೈನ್‌ ಗೇಮ್ಸೌ ಮಾತ್ರ ಪ್ರೋತ್ಸಾಹಿಸಲಾಗುತ್ತದೆ. ಈ ಕ್ರಮವು ಯುವಕರನ್ನು ಆರ್ಥಿಕ ನಷ್ಟ ಮತ್ತು ವ್ಯಸನದಿಂದ ರಕ್ಷಿಸುವ ಗುರಿಯನ್ನು ಹೊಂದಿದೆ.

ಇಪಿಎಫ್‌ ಹಣ ಹಿಂಪಡೆಯುವ ಹೊಸ ಸೌಲಭ್ಯ :
ದೀಪಾವಳಿ ಹಬ್ಬಕ್ಕೂ ಮುನ್ನ ಇಪಿಎಫ್‌ ಖಾತೆದಾರರಿಗೆ ಸಂತೋಷದ ಸುದ್ದಿ ಬರಬಹುದಾಗಿದೆ. ಅಕ್ಟೋಬರ್‌ 10-11ರಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಭೆಯಲ್ಲಿ, 3.0 ಅಡಿಯಲ್ಲಿ ಎಟಿಎಂಗಳ ಮೂಲಕ ನೇರವಾಗಿ ಪಿಎಫ್‌ ಹಣ ಹಿಂಪಡೆಯುವ ಅವಕಾಶ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಕ್ರಮ ಜಾರಿಯಾದರೆ, ಇಪಿಎಫ್‌ ಹಣವನ್ನು ಎಟಿಎಂಗಳಿಂದಲೇ ಸುಲಭವಾಗಿ ಪಡೆಯಬಹುದಾಗಿದೆ. ಇದರಿಂದ ನೌಕರರಿಗೆ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ.

ಅಕ್ಟೋಬರ್‌ ಆರಂಭದಿಂದ ಜಾರಿಯಾಗುವ ಈ ಐದು ನಿಯಮ ಬದಲಾವಣೆಗಳು ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುವಂತಿವೆ. ರೈಲು ಟಿಕೆಟ್‌ ಬುಕ್ಕಿಂಗ್‌ ನಿಯಮ, ಎನ್‌ಪಿಎಸ್‌‍ ಹೂಡಿಕೆ ಆಯ್ಕೆಗಳು, ಎಲ್‌ಪಿಜಿ ಸಿಲಿಂಡರ್‌ ಬೆಲೆ ಬದಲಾವಣೆ, ಆನ್ಲೈನ್‌ ಗೇಮಿಂಗ್‌ ನಿಯಂತ್ರಣ ಹಾಗೂ ಇಪಿಎಫ್‌ ಹಣ ಹಿಂಪಡೆಯುವ ಹೊಸ ಸೌಲಭ್ಯ ಜಾರಿಗೆ ಬರಲಿದೆ.

ಮತ್ತೊಂದು ಶಾಕ್ ಕೊಟ್ಟ ಸುಂಕಾಸುರ ಡೊನಾಲ್ಡ್ ಟ್ರಂಪ್‌..!

ವಾಷಿಂಗ್ಟನ್‌,ಸೆ.26- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸುಂಕ ಹೇರಿಕೆಯನ್ನು ಘೋಷಿಸಿದ್ದಾರೆ. ಅ.1 ರಿಂದ ಬ್ರ್ಯಾಂಡೆಡ್‌ ಮತ್ತು ಪೇಟೆಂಟ್‌ ಪಡೆದ ಔಷಧಗಳ ಆಮದಿನ ಮೇಲೆ ಶೇ. 100ರಷ್ಟು ಸುಂಕ ವಿಧಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ.

ಔಷಧಗಳ ಆಮದಿನ ಮೇಲೆ ಶೇ. 100ರಷ್ಟು ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ, ಡೊನಾಲ್ಡ್ ಟ್ರಂಪ್‌ ಸಹಿ ಹಾಕಿದ್ದಾರೆ. ಟ್ರಂಪ್‌ ಅವರ ಈ ನಿರ್ಧಾರದಿಂದಾಗಿ ಭಾರತದ ಔಷಧ ವಲಯದ ಮೇಲೆ ಗಂಭೀರ ಪರಿಣಾಮಗಳು ಬೀರಬಹುದು ಎಂಬ ಆತಂಕ ಎದುರಾಗಿದೆ. ಆದರೆ ಭಾರತದ ಔಷಧ ವಲಯ ಪರ್ಯಾಯ ಮಾರ್ಗವನ್ನು ಶೋಧಿಸುವ ಕಾರ್ಯ ಈಗಾಗಲೇ ಆರಂಭಿಸಿದೆ.

ಅಡುಗೆಮನೆ ಕಿಚನ್‌ ಕ್ಯಾಬಿನ್‌ಗಳು ಮತ್ತು ಸ್ನಾನಗೃಹದ ವ್ಯಾನಿಟಿಗಳ ಮೇಲೆ ಶೇಕಡಾ 50, ಅಪ್ಹೋಲ್ಟರ್ಡ್‌ ಪೀಠೋಪಕರಣಗಳ ಮೇಲೆ ಶೇಕಡಾ 30 ಮತ್ತು ಭಾರೀ ಟ್ರಕ್‌ಗಳ ಮೇಲೆ ಶೇಕಡಾ 25ರಷ್ಟು ಆಮದು ತೆರಿಗೆಯನ್ನು ವಿಧಿಸುವುದಾಗಿ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಹೇಳಿದ್ದಾರೆ.

ಟ್ರೂತ್‌ ಸೋಶಿಯಲ್‌ನಲ್ಲಿ ಟ್ರಂಪ್‌, ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ನಿರ್ಮಿಸುತ್ತಿರುವ ಕಂಪನಿಗಳಿಗೆ ಔಷಧ ಸುಂಕಗಳು ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ಅವರು ಅಭಿವೃದ್ಧಿಶೀಲ ಅಥವಾ ನಿರ್ಮಾಣ ಹಂತ ಎಂದು ವ್ಯಾಖ್ಯಾನಿಸಿದರು. ಅಮೆರಿಕದಲ್ಲಿ ಈಗಾಗಲೇ ಕಾರ್ಖಾನೆಗಳನ್ನು ಹೊಂದಿರುವ ಕಂಪನಿಗಳಿಗೆ ಸುಂಕಗಳು ಹೇಗೆ ಅನ್ವಯಿಸುತ್ತವೆ ಎಂಬುದು ಸ್ಪಷ್ಟವಾಗಿಲ್ಲ.

2024 ರಲ್ಲಿ, ಜನಗಣತಿ ಬ್ಯೂರೋ ಪ್ರಕಾರ, ಅಮೆರಿಕ ಸುಮಾರು 233 ಬಿಲಿಯನ್‌ ಡಾಲರ್‌ ಔಷಧ ಮತ್ತು ಔಷಧೀಯ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತು.ಆಗಸ್ಟ್‌ನಲ್ಲಿ ಪ್ರಾರಂಭಿಸಲಾದ ವ್ಯಾಪಾರ ಚೌಕಟ್ಟುಗಳು ಮತ್ತು ಆಮದು ತೆರಿಗೆಗಳೊಂದಿಗೆ ಟ್ರಂಪ್‌ ಅವರ ಸುಂಕಗಳ ಮೇಲಿನ ಬದ್ಧತೆ ಕೊನೆಗೊಂಡಿಲ್ಲ ಎಂದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳುತ್ತವೆ, ಇದು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವಾಗ ಸರ್ಕಾರದ ಬಜೆಟ್‌ ಕೊರತೆಯನ್ನು ಕಡಿಮೆ ಮಾಡಲು ತೆರಿಗೆಗಳು ಸಹಾಯ ಮಾಡುತ್ತವೆ ಎಂಬುದು ಅವರ ನಂಬಿಕೆಯಾಗಿದೆ.

ಡೊನಾಲ್ಡ್ ಟ್ರಂಪ್‌ ಅವರು ಸುಂಕಗಳಿಗೆ ಕಾನೂನು ಸಮರ್ಥನೆಯನ್ನು ಒದಗಿಸದಿದ್ದರೂ, ಆಮದು ಮಾಡಿಕೊಂಡ ಅಡುಗೆಮನೆ ಕ್ಯಾಬಿನ್‌ ಗಳು ಮತ್ತು ಸೋಫಾಗಳ ಮೇಲಿನ ತೆರಿಗೆಗಳು ರಾಷ್ಟ್ರೀಯ ಭದ್ರತೆ ಮತ್ತು ಇತರ ಕಾರಣಗಳಿಗಾಗಿ ಅಗತ್ಯವಿದೆ ಎಂದು ಟ್ರೂತ್‌ ಸೋಷಿಯಲ್‌ ಮೀಡಿಯಾದಲ್ಲಿ ಟ್ರಂಪ್‌ ಅವರು ಹೇಳುವ ಮೂಲಕ ಅವರು ಕಮಾಂಡರ್‌-ಇನ್‌-ಚೀಫ್‌ ಪಾತ್ರದ ಮಿತಿಗಳನ್ನು ವಿಸ್ತರಿಸಿದಂತೆ ಕಂಡುಬಂದಿದೆ.

ಸುಂಕ ನಿಯಮ ಏನು? :
ಔಷಧಗಳ ಆಮದು ಮೇಲೆ ಶೇ. 100ರಷ್ಟು ಸುಂಕ ವಿಧಿಸಿರುವ ಡೊನಾಲ್ಡ್ ಟ್ರಂಪ್‌, ಕೆಲವು ವಿನಾಯಿತಿಗಳನ್ನೂ ಘೋಷಿಸಿದ್ದಾರೆ. ಅದರಲ್ಲಿ ಅತ್ಯಂತ ಪ್ರಮುಖವಾಗಿ ಒಂದು ವೇಳೆ ವಿದೇಶಿ ಕಂಪನಿಗಳು ಅಮೆರಿಕದಲ್ಲಿ ತಮ್ಮ ಔಷಧ ತಯಾರಿಕಾ ಘಟಕಗಳನ್ನು ಸ್ಥಾಪಿಸಿದರೆ, ಅವುಗಳಿಗೆ ಸುಂಕದಿಂದ ಸಂಪೂರ್ಣವಾಗಿ ವಿನಾಯತಿ ನೀಡಲಾಗುವುದು.

ಔಷಧ ತಯಾರಿಕಾ ಕಂಪನಿಗಳು, ವಿದೇಶದಲ್ಲಿ ಕಾರ್ಖಾನೆಗಳನ್ನು ನಡೆಸುವ ಬದಲು, ಅಮೆರಿಕದಲ್ಲೇ ತಮ್ಮ ಕಾರ್ಯಚರಣೆ ಆರಂಭಿಸುವಂತೆ ಡೊನಾಲ್‌್ಡ ಟ್ರಂಪ್‌ ಒತ್ತಡ ಹೇರುತ್ತಿರುವುದು ಸ್ಪಷ್ಟವಾಗಿದೆ. ಏಕೆಂದರೆ ಅಮೆರಿಕದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವುದರಿಂದ, ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಸಹಾಯವಾಗುತ್ತದೆ ಎಂಬುದು ಟ್ರಂಪ್‌ ಅವರ ಆಶಾಭಾವನೆಯಾಗಿದೆ.

ಕಾವೇರಿ ಆರತಿಗೆ ಕ್ಷಣಗಣನೆ, ಮಧುವಣಗಿತ್ತಿಯಂತೆ ಸಿಂಗಾರಗೊಂಡ ಕೆಆರ್‌ಎಸ್‌‍ ಜಲಾಶಯ

ಶ್ರೀರಂಗಪಟ್ಟಣ,ಸೆ.26– ಕಾವೇರಿ ಆರತಿಗೆ ಕ್ಷಣಗಣನೆ ಆರಂಭವಾಗಿದ್ದು, ಕೆಆರ್‌ಎಸ್‌‍ ಜಲಾಶಯ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿ ಅದ್ಧೂರಿಯಾಗಿ ಕಾವೇರಿ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕೆ ಕೃಷ್ಣ ರಾಜಸಾಗರದ ಬೋಟಿಂಗ್‌ ಪಾಯಿಂಟ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇಂದು ಸಂಜೆ 6 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

ಒಟ್ಟು 5 ದಿನಗಳ ಕಾಲ ನಡೆಯುವ ಕಾರ್ಯಕ್ರಮ ಒಂದು ರೀತಿ ಹಬ್ಬದಂತಿರಲಿದೆ. ಈಗಾಗಲೇ ಜಲಾಶಯಕ್ಕೆ ವರ್ಣರಂಜಿತ ವಿದ್ಯುತ್‌ ದ್ವೀಪಗಳಿಂದ ಅಲಂಕಾರ ಮಾಡಲಾಗಿದ್ದು, ಜಗಮಗಿಸುತ್ತಿದೆ. ಕಾವೇರಿ ಆರತಿಗೆ ಕರ್ನಾಟಕ ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ತರಬೇತಿ ಪಡೆದ 12 ರಿಂದ 13 ಸ್ಥಳೀಯ ಪುರೋಹಿತರು ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಆಚರಿಸಲಿದ್ದಾರೆ.

ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶವಿದೆ. ಜೊತೆಗೆ 5 ದಿನಗಳ ಕಾಲ ಟೋಲ್‌ ಸಂಗ್ರಹದಲ್ಲೂ ಪ್ರವಾಸಿಗರಿಗೆ ವಿನಾಯಿತಿ ಇರಲಿದೆ.ಕಾವೇರಿ ಆರತಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಉಚಿತ ಲಾಡು ವಿತರಿಸಲು ತೀರ್ಮಾನಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಲಿರುವ ಗಣ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಆಸನ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಮೈಸೂರು ದಸರಾಗೆ ಭೇಟಿ ನೀಡಿರುವ ಪ್ರವಾಸಿಗರು ಕಾವೇರಿ ಆರತಿಯಲ್ಲೂ ಪಾಲ್ಗೊಂಡು ಜಲಾಶಯದ ಸೌಂದರ್ಯವನ್ನು ಸವಿಯುವ ಸೌಭಾಗ್ಯವನ್ನು ಕಲ್ಪಿಸಲಾಗಿದೆ.

ಮೈಸೂರು ಮಾದರಿಯಲ್ಲೇ ತುಮಕೂರು ದಸರಾದಲ್ಲಿ ವಿದ್ಯಾರ್ಥಿಗಳಿಂದ ಪಂಜಿನ ಕವಾಯತು : ಗೃಹ ಸಚಿವ ಪರಮೇಶ್ವರ್

ತುಮಕೂರು,ಸೆ.26– ಮೈಸೂರು ಮಾದರಿಯಲ್ಲೇ 240 ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಪ್ರದರ್ಶನ ಸೆ.28 ರಂದು ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ನಗರದ ಮಹಾತ ಗಾಂಧಿ ಕ್ರೀಡಾಂಗಣದಲ್ಲಿ ಪಂಜಿನ ಕವಾಯತಿನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ಸೂಟ್‌ ಹಾಗೂ ಗಾಗಲ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಪಂಜಿನ ಕವಾಯತು ಪ್ರದರ್ಶನವನ್ನು ನಗರದ ಮಹಾತ ಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.

ತುಮಕೂರು ದಸರಾ ಉತ್ಸವವು ಈಗಾಗಲೇ ರಾಜ್ಯದ ಗಮನ ಸೆಳೆದಿದ್ದು, ವಿದ್ಯಾರ್ಥಿಗಳ ಪಂಜಿನ ಕವಾಯತು ಪ್ರದರ್ಶನವು ಉತ್ಸವಕ್ಕೆ ಇನ್ನಷ್ಟು ಮೆರಗು ನೀಡಲಿದೆ. ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಪ್ರದರ್ಶನ ಏರ್ಪಡಿಸುವ ಮೂಲಕ ಜಿಲ್ಲೆಯು ಮತ್ತೊಂದು ಇತಿಹಾಸ ಸೃಷ್ಟಿಸಲಿದ್ದು, ಈ ಪ್ರದರ್ಶನ ವಿದ್ಯಾರ್ಥಿಗಳ ಜೀವನದಲ್ಲೂ ನೆನಪಿನ ಕ್ಷಣವಾಗಲಿದೆ ಎಂದು ತಿಳಿಸಿದರು.

ಮೈಸೂರು ದಸರಾ ಉತ್ಸವದಲ್ಲಿ ಪೊಲೀಸ್‌‍ ಪಡೆಯು ಶಿಸ್ತಿನಿಂದ ಪಂಜಿನ ಕವಾಯತು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತದೆ. ಅದೇ ರೀತಿ ನಮ ಜಿಲ್ಲೆಯಲ್ಲೂ ಪಂಜಿನ ಕವಾಯತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ಪಾಲ್ಗೊಳ್ಳಲು ಒಂದೇ ರೀತಿಯ ಟ್ರ್ಯಾಕ್‌ಸೂಟ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದರಲ್ಲದೆ, ಪಂಜಿನ ಕವಾಯತು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಮಾಸ್ಟರ್‌ ಟ್ರೈನರ್‌ಗಳಿಂದ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಪಂಜಿನ ಕವಾಯತು ವೀಕ್ಷಿಸಲು ಹೆಸರು ನೋಂದಣಿಗಾಗಿ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು https://smarttumakuru.karnatakasmartcity.in/OneCityOneApp/#/Dasara/bookingdashboard ಈ ಆ್ಯಪ್‌ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ದಸರಾ ಉತ್ಸವದ ಪ್ರಯುಕ್ತ ರಾಷ್ಟ್ರ ಮಟ್ಟದ ರೈಫಲ್‌ ಶೂಟಿಂಗ್‌ ಸ್ಪರ್ಧೆಗಳು ಇದೇ ತಿಂಗಳು 27 ಮತ್ತು 28ರಂದು ಮಹಾತ ಗಾಂಧಿ ಕ್ರೀಡಾಂಗಣದ ಒಳಾಂಗಣದಲ್ಲಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಸುಮಾರು 500 ಕ್ರೀಡಾಪಟುಗಳು ಹಾಗೂ ಭಾರತದ ಯೋಧರ ಶೂಟಿಂಗ್‌ ತಂಡವೂ ಸಹ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಇದರ ಜೊತೆಗೆ ಟೆನ್ನಿಸ್‌‍, ಜಿಮ್ನಾಸ್ಟಿಕ್‌, ಕಬ್ಬಡ್ಡಿ, ವಾಲಿಬಾಲ್‌, ಚೆಸ್‌‍, ಮ್ಯಾರಥಾನ್‌ ಹಾಗೂ ಖೋ-ಖೋ ಸೇರಿ ಒಟ್ಟು 9 ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಸಚಿವರು :
ಇದಕ್ಕೂ ಮುನ್ನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಧಾರ್ಮಿಕ ಮಂಟಪದಲ್ಲಿ ರಾಜರಾಜೇಶ್ವರಿ ಅಲಂಕಾರದಲ್ಲಿದ್ದ ಶ್ರೀ ಚಾಮುಂಡೇಶ್ವರಿಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ದಂಪತಿ ಪೂಜೆ ಸಲ್ಲಿಸಿದರು. ನವರಾತ್ರಿ ಪ್ರಯುಕ್ತ ಜರುಗಿದ ಶ್ರೀ ಕನಕದುರ್ಗಾ ಹೋಮದಲ್ಲಿ ಪಾಲ್ಗೊಂಡ ಸಚಿವರು, ಪೂರ್ಣಾಹುತಿ ಸೇರಿದಂತೆ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಕೆ.ವಿ. ಅಶೋಕ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಉಪ ವಿಭಾಗಾಧಿಕಾರಿ ನಾಹಿದಾ ಜ಼ಮ್‌ ಜ಼ಮ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌‍ ಉಪಾಧೀಕ್ಷಕ ಪರಮೇಶ್ವರ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ದಸರಾ ಪ್ರಯುಕ್ತ ಹೆಚ್ಚುವರಿ ಬಸ್‌‍ ಸೇವೆಗೆ ಚಾಲನೆ

ಬೆಂಗಳೂರು,ಸೆ.26- ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಪ್ರಯಾಣಿಕರ ಬೇಡಿಕೆಯಾನುಸಾರ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ 280 ಹೆಚ್ಚುವರಿ ಬಸ್‌‍ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೈಸೂರು ಸ್ಯಾಟಲೈಟ್‌ ಬಸ್‌‍ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆ ಅಂಗವಾಗಿ ವಾಹನಗಳಿಗೆ ಪೂಜೆ ಸಲ್ಲಿಸುವ ಮುಖೇನ ದಸರಾ ವಿಶೇಷ ಬಸ್ಸುಗಳಿಗೆ ಚಾಲನೆ ನೀಡಲಾಯಿತು.

ಮುಂದಿನ 10 ದಿನಗಳವರೆಗೆ ಮೈಸೂರು ರಸ್ತೆ ಬಸ್‌‍ ನಿಲ್ದಾಣದಲ್ಲಿ ದಸರಾ ಕ್ಯಾಂಪ್‌ ಇರಲಿದ್ದು, ಬೆಂಗಳೂರು ಕೇಂದ್ರೀಯ ವಿಭಾಗ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ವಿಭಾಗಗಳಿಂದ ಒಟ್ಟು 280 ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ), ಮುಖ್ಯ ಭದ್ರತಾ ಮತ್ತು ಜಾಗ್ರತಾಧಿಕಾರಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೆಂಪೇಗೌಡ ಬಸ್‌‍ ನಿಲ್ದಾಣ, ವಿಭಾಗೀಯ ನಿಯಂತ್ರಣಾಧಿಕಾರಿ ಬೆಂಗಳೂರು ಕೇಂದ್ರೀಯ ವಿಭಾಗ ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಾಲಕ ನಿರ್ವಾಹಕರಿಗೆ ಹಾಗೂ ಪ್ರಯಾಣಿಕರಿಗೆ ಸಿಹಿ ವಿತರಿಸುವ ಮೂಲಕ ಶುಭ ಕೋರಲಾಯಿತು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-09-2025)

ನಿತ್ಯ ನೀತಿ : ಅವರಿಂದ ಇವರಿಂದ ಮೂರ್ಖನಾದೆ ಎಂದು ದುಃಖ ಪಡಬೇಡ.ಸತ್ಯದ ಅರಿವಾಯಿತು ಅಂದುಕೊಂಡು ಸಂತೋಷವಾಗಿರು. ಕೆಲವು ಸತ್ಯದ ಮುಖಗಳು ಬೆಳಕಿಗೆ ಬರುವುದೇ ಅನುಭವದ ಮೇಲೆ..!!

ಪಂಚಾಂಗ : ಶುಕ್ರವಾರ, 26-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ಚತುರ್ಥಿ / ನಕ್ಷತ್ರ: ವಿಶಾಖಾ / ಯೋಗ: ವಿಷ್ಕಂಭ / ಕರಣ: ಬವ

ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.13
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಜೀವನ ಸಂಗಾತಿಯ ಬೆಂಬಲ ನಿಮಗೆ ಸಿಗುತ್ತದೆ.
ವೃಷಭ: ಹಳೆ ಸ್ನೇಹಿತರೊಂದಿಗೆ ಮಾತನಾಡುವ ಮೂಲಕ ನಿಮ್ಮ ವಿಷಯಗಳನ್ನು ಹಂಚಿಕೊಳ್ಳಬಹುದು.
ಮಿಥುನ: ಮನೆಯ ಸದಸ್ಯರು ನಿಮ್ಮನ್ನು ನೋಯಿಸಿ ದ್ದರೆ, ಅವರು ನಿಮ್ಮ ಬಳಿ ಬಂದು ಕ್ಷಮೆ ಕೇಳುವರು.

ಕಟಕ: ಸಾಲದ ವ್ಯವಹಾರ ಮಾಡುವುದನ್ನು ತಪ್ಪಿಸಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ.
ಸಿಂಹ: ಮಾನಸಿಕ ಒತ್ತಡ ಹೆಚ್ಚಾಗಬಹುದು. ಯೋಗ ಮಾಡುವುದರಿಂದ ಪ್ರಯೋಜನವಾಗುತ್ತದೆ.
ಕನ್ಯಾ: ಆಹಾರದ ಬಗ್ಗೆ ಗಮನ ಕೊಡುವುದು ಒಳಿತು. ಇಲ್ಲದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು. ಎಚ್ಚರಿಕೆ ವಹಿಸಿ.

ತುಲಾ: ಕೆಲಸಕ್ಕೆ ಸಂಬಂ ಸಿದಂತೆ ಹಿರಿಯರಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು.
ವೃಶ್ಚಿಕ: ಗುರಿ ತಲುಪುವಲ್ಲಿ ನಿಮ್ಮ ಶ್ರಮ ಸಾರ್ಥಕವೆನಿಸಲಿದೆ. ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.
ಧನುಸ್ಸು: ಸಾಮಾಜಿಕ ಜೀವನದಲ್ಲಿ ಆಹ್ಲಾದಕರ ಅನುಭವಗಳಾಗುತ್ತವೆ.

ಮಕರ: ಒಡಹುಟ್ಟಿದವರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ ಮತ್ತು ಅವರಿಂದ ಲಾಭವೂ ದೊರೆಯುವುದು.
ಕುಂಭ: ತಂದೆಯೊಂದಿಗೆ ವೈಮನಸ್ಯವಿದ್ದರೆ ಪರಿಹರಿಸಿ ಕೊಳ್ಳಬಹುದು. ಅವರ ಮಾತಿಗೆ ಮನ್ನಣೆ ನೀಡಿ.
ಮೀನ: ಮನೆಯ ಸಾಮಗ್ರಿಗಳ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.

ಸಮೀಕ್ಷಾ ಕರ್ತವ್ಯದಿಂದ ವಿಮುಕ್ತರಾಗುವ ನೌಕರರ ಮೇಲೆ ಶಿಸ್ತು ಕ್ರಮ : ಸರ್ಕಾರ ಎಚ್ಚರಿಕೆ

ಬೆಂಗಳೂರು, ಸೆ.25-ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಳ್ಳಲಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲ್ಪಡುವ ಅಧಿಕಾರಿ/ನೌಕರರು ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೇ ಮತ್ತು ಕರ್ತವ್ಯಗಳನ್ನು ನಿರ್ವಹಿಸದೇ ಇರುವಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ ಪಾಟೀಲ ತಿಳಿಸಿದರು.

ಸಚಿವ ಸಂಪುಟದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲ್ಪಡುವ ಅಧಿಕಾರಿ/ನೌಕರರು ಸಮೀಕ್ಷಾ ಕಾರ್ಯಕ್ಕೆ ಗೈರುಹಾಜರಾದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಬೆಂಗಳೂರು ವ್ಯಾಪ್ತಿಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರ ಪ್ರಾಯೋಜಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತು ಕೆಲವು ನಿರ್ದೇಶನಗಳನ್ನು ನೀಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಬೆಳಿಗ್ಗೆ 11.30 ಗಂಟೆಗೆ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿ‍ರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಿದ್ದಾರೆಂದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕಾಗಿ ಗಣತಿದಾರರಾಗಿ ನಿಯೋಜಿಸಲ್ಪಡುವ ಸರ್ಕಾರ, ನಿಗಮ/ಮಂಡಳಿಗಳ ಅಧಿಕಾರಿ/ ನೌಕರರುಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021ರಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಶಿಸ್ತುಕ್ರಮ ಮತ್ತು ದಂಡನೆ ವಿಧಿಸುವ ಅಧಿಕಾರವನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಪ್ರತ್ಯಾಯೋಜಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ಅವರು ಹೇಳಿದರು.

ಮದುವೆಗೆಪೋಷಕರು ವಿರೋಧ, ರೈಲಿಗೆ ತಲೆಕೊಟ್ಟ ಪ್ರೇಮಿಗಳು

ಬೆಂಗಳೂರು,ಸೆ.25– ಮದುವೆಗೆ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರಿಂದ ನೊಂದ ಪ್ರೇಮಿಗಳು ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಾಲೂರು ತಾಲ್ಲೂಕಿನ ಬ್ಯಾಟರಾಯನಹಳ್ಳಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಶೆಟ್ಟಹಳ್ಳಿ ನಿವಾಸಿಗಳಾದ ಸತೀಶ್‌ (19) ಹಾಗೂ ಶ್ವೇತಾ (18) ಆತಹತ್ಯೆಗೆ ಶರಣಾದ ಪ್ರೇಮಿಗಳು.

ಸತೀಶ್‌ ಐಟಿಐ ವ್ಯಾಸಂಗ ಮಾಡಿದ್ದು, ಶ್ವೇತಾ ಮೊದಲ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದೇ ಮದುವೆ ಆಗೋಣವೆಂದು ನಿರ್ಧರಿಸಿದ್ದರು.ಅದರಂತೆ ಪರಸ್ಪರ ಪ್ರೀತಿಯನ್ನು ಪೋಷಕರ ಬಳಿ ಇಬ್ಬರೂ ಹೇಳಿಕೊಂಡಿದ್ದಾರೆ. ಆದರೆ ಜಾತಿ ಕಾರಣವೊಡ್ಡಿ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಮದುವೆಗೆ ಪೋಷಕರು ಒಪ್ಪದ ಕಾರಣ ನೊಂದಿದ್ದ ಪ್ರೇಮಿಗಳು ಆತಹತ್ಯೆಗೆ ನಿರ್ಧರಿಸಿದ್ದಾರೆ. ನಿನ್ನೆ ಸತೀಶ್‌ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾನೆ. ಇಂದು ಬೆಳಗ್ಗೆ ಇಬ್ಬರು ಮನೆಯಿಂದ ಹೊರಬಂದಿದ್ದಾರೆ.ನಂತರ ಬೈಕ್‌ನಲ್ಲಿ ತನ್ನ ಪ್ರಿಯತಮೆ ಶ್ವೇತಾಳನ್ನು ಸತೀಶ್‌ ಕರೆದುಕೊಂಡು ಮಾಲೂರಿನ ಬ್ಯಾಟರಾಯನಹಳ್ಳಿ ರೈಲ್ವೆ ನಿಲ್ದಾಣದ ಬಳಿಹೋಗಿ ಬೈಕ್‌ ನಿಲ್ಲಿಸಿದ್ದಾನೆ.

ನಂತರ ಕೋಲಾರದಿಂದ ಬೆಂಗಳೂರಿಗೆ ಹೊರಡುವ ರೈಲು ಬರುವುದನ್ನೇ ಕಾದು ರೈಲು ಬರುತ್ತಿದ್ದಂತೆ 6.30 ರ ಸುಮಾರಿನಲ್ಲಿ ಇಬ್ಬರೂ ಕೈ-ಕೈ ಹಿಡಿದು ಹಳಿ ಮೇಲೆ ಹಾರಿ ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿದ್ದಾರೆ.

ಸುದ್ದಿ ತಿಳಿದು ಕಂಟೋನೆಂಟ್‌ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಅವರ ಪೋಷಕರುಗಳಿಗೆ ಮಾಹಿತಿ ರವಾನಿಸಿದ್ದಾರೆ.
ಈ ಬಗ್ಗೆ ಕಂಟೋನೆಂಟ್‌ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.