Home Blog Page 87

ಸೆ.26 ರಿಂದ ನಡೆಯಲಿರುವ ಕಾವೇರಿ ಆರತಿ ಸಿದ್ಧತೆ ಪರಿಶೀಲಿಸಿದ ಡಿಕೆಶಿ

ಮೈಸೂರು,ಸೆ.25- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೆ.ಆರ್‌.ಎಸ್‌‍ ಬೃಂದಾವನದಲ್ಲಿ ಸೆ.26 ರಿಂದ ನಡೆಯಲಿರುವ ಸಾಂಕೇತಿಕ ಕಾವೇರಿ ಆರತಿ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿದರು.

ವೇದಿಕೆ, ಕಾವೇರಿ ಆರತಿ ನಡೆಯುವ ಸ್ಥಳ ಮತ್ತು ವೀಕ್ಷಕರಿಗೆ ಆಸನದ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದ ಉಪಮುಖ್ಯ ಮಂತ್ರಿಗಳು ಅಧಿಕಾರಿಗಳಿಗೆ ಕಾರ್ಯಕ್ರಮವು ಯಾವುದೇ ಲೋಪವಿಲ್ಲದೆ ನಡೆಸಲು ಸೂಚನೆ ನೀಡಿದರು.

ಕಾವೇರಿ ಆರತಿ ಸಮಿತಿ ಅಧ್ಯಕ್ಷರೂ ಆದ ಬೆಂಗಳೂರು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಆಯುಕ್ತರಾದ ರಾಮ್‌ ಪ್ರಸಾತ್‌ ಮನೋಹರ್‌ ಅವರು ಕಾವೇರಿ ಆರತಿಯ ರೂಪುರೇಷೆಗಳನ್ನು ಕುರಿತು ಡಿಸಿಎಂ ಅವರಿಗೆ ವಿವರಿಸಿದರು.

ಉಪಮುಖ್ಯಮಂತ್ರಿಗಳು ಕಾವೇರಿ ಆರತಿ ಪೂರ್ವ ತಾಲೀಮು ವೀಕ್ಷಣೆ ಮಾಡಿದರು. ಪರಿಶೀಲನೆ ವೇಳೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚೆಸ್ಕಾಂ ಅಧ್ಯಕ್ಷರಾದ ರಮೇಶ ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ. ರವಿಕುಮಾರ್‌, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್‌ ನಂದಿನಿ ಮತ್ತು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಜತೆಗಿದ್ದರು.

ಮೈಸೂರಲ್ಲಿ ಟ್ರಿನ್‌ ಟ್ರಿನ್‌ ಸೈಕಲ್‌ಗಳ ಕಲರವ

ಮೈಸೂರು,ಸೆ.25- ದಸರಾ ಅಂಗವಾಗಿ ಇಂದು ಹಮಿಕೊಂಡಿದ್ದ ಪಾರಂಪರಿಕ ಸೈಕಲ್‌ಸವಾರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸದಾ ದ್ವಿಚಕ್ರ ವಾಹನ, ಕಾರಿನ ಸಂಚಾರ ಕಾಣುತ್ತಿದ್ದ ನಗರದ ರಸ್ತೆಗಳಲ್ಲಿ ಇಂದು ಬೆಳಿಗ್ಗೆ ಟ್ರಿನ್‌ ಟ್ರಿನ್‌ ಸೈಕಲ್‌ಗಳ ಕಲರವ ಜೋರಾಗಿತ್ತು. ಪುರಭವನದಿಂದ ಸೈಕಲ್‌ ಏರಿದ ಪುರತತ್ವ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಪಾರಂಪರಿಕ ಕಟ್ಟಡಗಳನ್ನು ವೀಕ್ಷಣೆ ಮಾಡಿ ಇತಿಹಾಸವನ್ನು ತಿಳಿಸಿಕೊಡಲಾಯಿತು.

ಸೈಕಲ್‌ ಸವಾರಿ ಆರೋಗ್ಯಕ್ಕೆ ಉತ್ತಮವಾಗಿದ್ದು, ವ್ಯಾಯಾಮದ ಜೊತೆಗೆ ಪ್ರತಿದಿನ ಒಂದು ಗಂಟೆಯಾದರೂ ಸೈಕಲ್‌ ತುಳಿದರೆ ದೈಹಿಕ ಸಾಮರ್ಥ್ಯವೂ ಕೂಡ ಹೆಚ್ಚುತ್ತದೆ. ಸಣ್ಣಪುಟ್ಟ ಕೆಲಸಕಾರ್ಯಗಳಿಗೂ ದ್ವಿಚಕ್ರ ವಾಹನವನ್ನು ಬಳಸುವುದನ್ನು ಬಿಟ್ಟು ಸೈಕಲ್‌ನಲ್ಲಿ ತೆರಳಿದರೆ ಪರಿಸರ ಮಾಲಿನ್ಯವೂ ಕೂಡ ನಿಯಂತ್ರಣವಾಗಲಿದೆ ಎಂದು ಸೈಕಲ್‌ ಸವಾರರು ಜಾಗೃತಿ ಮೂಡಿಸಿದರು.

ಒಂದೆಡೆ ಮೈಸೂರು ದೀಪಾಲಂಕಾರದಿಂದ ಜಗಮಗಿಸುತ್ತಿದ್ದರೆ ಜಗನೋಹನ ಅರಮನೆಯಲ್ಲಿ ಮಾತ್ರ ಕಗ್ಗತ್ತಲು

ಮೈಸೂರು,ಸೆ.25- ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಇಡೀ ನಗರ ವಿದ್ಯುತ್‌ ದೀಪಾಲಂಕಾರದಿಂದ ಜಗಮಗಿಸುತ್ತಿದ್ದರೆ ಇತ್ತ ಮೈಸೂರಿನ ಅರಮನೆಗಳಲ್ಲಿ ಒಂದಾದ ಪ್ರಖ್ಯಾತ ಜಗನೋಹನ ಅರಮನೆ ಮಾತ್ರ ಕಗ್ಗತ್ತಲಲ್ಲಿ ಮುಳುಗಿದೆ.

ದೇಶ-ವಿದೇಶಗಳಿಂದ ದಸರಾಕ್ಕಾಗಿ ಪ್ರವಾಸಿಗರು ಆಗಮಿಸಿದ್ದಾರೆ. ಇಡೀ ನಗರ ವೀಕ್ಷಿಸುವ ಜನತೆ ಜಗನೋಹನ ಅರಮನೆಗೂ ಬರುತ್ತಾರೆ. ಏಕೆಂದರೆ ಇಲ್ಲಿನ ಮ್ಯೂಸಿಯಂ ನೋಡಲೇಬೇಕಾದುದು. ಜತೆಗೆ ಈ ಅರಮನೆ ಕೂಡಾ ಸುಂದರ. ಹಾಗಾಗಿ ಈ ಅರಮನೆ ಹೆಸರುವಾಸಿಯಾಗಿದೆ.

ಚೆಸ್ಕಾಂ ಅಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಜಗನೋಹನ ಅರಮನೆ ಲೆಕ್ಕಕ್ಕೆ ಬರಲಿಲ್ಲವೆ. ಇದು ಐತಿಹಾಸಿಕ, ಪಾರಂಪರಿಕ ಕಟ್ಟಡವಾಗಿದ್ದರೂ ಇದಕ್ಕೆ ಬೆಳಕಿನ ಅಲಂಕಾರ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಇದು ಅಕ್ಷಮ್ಯ. ಇದನ್ನು ಇಡೀ ಮೈಸೂರಿನ ಜನತೆ ಖಂಡಿಸಬೇಕಿದೆ ಎಂದು ಮೈಸೂರಿನ ನಾಗರೀಕರೂ ಮುಖಂಡರೂ ಹಾಗೂ ಅಭಿಮಾನಿ ರವಿನಂದನ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆಸ್ಕಾಂನವರು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಬಳಿಯುವ ಕೆಲಸ ಮಾಡಿದ್ದಾರೆ. ತಕ್ಷಣವೇ ಜಗನೋಹನ ಅರಮನೆ ವಿದ್ಯುತ್‌ ದೀಪಗಳಿಂದ ಬೆಳಗುವಂತೆ ಮಾಡಬೇಕೆಂದು ರವಿನಂದನ್‌ ಆಗ್ರಹಿಸಿದ್ದಾರೆ.

ಜಗನೋಹನ ಅರಮನೆ ಕಗ್ಗತ್ತಲಿನಲ್ಲಿದ್ದರೆ ಮೈಸೂರಿಗೆ ಕಪ್ಪು ಚುಕ್ಕೆಯಾಗಿ ಬಿಡುತ್ತದೆ. ಇದು ನಿಜಕ್ಕೂ ಅಪಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಚೆಸ್ಕಾಂ ಅಧ್ಯಕ್ಷರು ಇತ್ತ ಗಮನ ಹರಿಸಬೇಕು ರಮೇಶ್‌ ಬಂಡಿಸಿದ್ದೇಗೌಡರು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇಂದಿನ ಪಚಂಗ ಮತ್ತು ರಾಶಿಭವಿಷ್ಯ (25-09-2025)

ನಿತ್ಯ ನೀತಿ : ಪ್ರತಿಯೊಂದು ಸೂರ್ಯೋದಯವೂ ನಾವು ಬೆಳಗಲು ದೊರೆತ ಮತ್ತೊಂದು ಅವಕಾಶ.

ಪಂಚಾಂಗ : 25-09-2025, ಗುರುವಾರ
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ತೃತೀಯಾ / ನಕ್ಷತ್ರ: ಸ್ವಾತಿ / ಯೋಗ: ವೈಧೃತಿ / ಕರಣ: ವಣಿಜ
ಸೂರ್ಯೋದಯ -ಬೆ.06.09
ಸೂರ್ಯಾಸ್ತ – 06.14
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30

ರಾಶಿಭವಿಷ್ಯ :
ಮೇಷ
: ವೈದ್ಯವೃತ್ತಿಯಲ್ಲಿರುವವರು ಅ ಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ವೃಷಭ: ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಮಿಥುನ: ವ್ಯವಹಾರದಲ್ಲಿ ಸ್ವಂತ ನಿರ್ಧಾರ.

ಕಟಕ: ತಾಳ್ಮೆಯಿಂದ ಕೆಲಸ-ಕಾರ್ಯಗಳನ್ನು ಮುಗಿಸುವಿರಿ.
ಸಿಂಹ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ಕನ್ಯಾ: ಹಂತ ಹಂತವಾಗಿ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.

ತುಲಾ: ಆರ್ಥಿಕ ಸುಧಾರಣೆಗೆ ಪತ್ನಿಯ ಸಹಕಾರ ಬಹಳ ಅಗತ್ಯವಾಗಿ ಬೇಕಾಗುತ್ತದೆ.
ವೃಶ್ಚಿಕ: ಹಲವಾರು ವಿಚಾರಗಳಲ್ಲಿ ತೊಂದರೆ ಕಂಡು ಬಂದರೂ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿವೆ.
ಧನುಸ್ಸು: ಷೇರು ಬಂಡವಾಳ ಹೆಚ್ಚಾಗಲಿದೆ.

ಮಕರ: ಎಲ್ಲಾ ಕೆಲಸ-ಕಾರ್ಯಗಳು ತ್ವರಿಗತಿಯಲ್ಲಿ ಸಾಗಲಿವೆ. ಹೆಚ್ಚು ಉತ್ಸಾಹದಿಂದಿರುವಿರಿ.
ಕುಂಭ: ಯಾವುದೇ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳುವ ಮುನ್ನ ಮನೆಯವರೊಂದಿಗೆ ಚರ್ಚಿಸಿ.
ಮೀನ: ನ್ಯಾಯವಾದಿಗಳು ಉದ್ಯೋಗದಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.

ಮದುವೆಯಾಗುವುದಾಗಿ ನಂಬಿಸಿ ದ್ರೋಹ : ದೈಹಿಕ ಶಿಕ್ಷಕನ ಮೊಬೈಲ್‌ನಲ್ಲಿದೆಯೇ ರಾಸಲೀಲೆಯ ದೃಶ್ಯ?

0

ಬೆಂಗಳೂರು, ಸೆ.24- ಖಾಸಗಿ ಶಾಲೆಯ ದೈಹಿಕ ಶಿಕ್ಷಕನಿಂದ ವಂಚನೆಯಾಗಿದೆ ಮತ್ತು ಆತನ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಖಾಸಗಿ ಕ್ಷಣಗಳ ವಿಡಿಯೋಗಳಿವೆ ಎಂದು ಸಂತ್ರಸ್ಥೆಯೊಬ್ಬರು ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಸಂತ್ರಸ್ಥ ಮಹಿಳೆ ನೀಡಿದ್ದ ದೂರು ಆಧರಿಸಿ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಎಬಿವಿ ಮಾಥ್ಯೂ ತಲೆ ಮರೆಸಿಕೊಂಡಿದ್ದು, ಅತನ ಬಂಧನಕ್ಕೆ ಕಾರ್ಯಚರಣೆ ಕೈಗೊಳ್ಳಲಾಗಿದೆ.

ಸಂತ್ರಸ್ಥ ಮಹಿಳೆ ಸುದ್ದಿಗಾರರೊಂದಿಗೆ ಮಾತನಾಡಿ, ತಮಗೆ ಮದುವೆಯಾಗಿ ಒಂದು ಹೆಣ್ಣು ಮಗುವಿದೆ. ಆಕೆಯನ್ನು ಖಾಸಗಿ ಶಾಲೆಗೆ ಸೇರಿಸಲಾಗಿತ್ತು. ಅದೇ ಶಾಲೆಯಲ್ಲಿ ದೈಹಿಕ ಶಿಕ್ಷಕ ಹಾಗೂ ಕ್ರಿಕೆಟ್‌ ಕೋಚ್‌ ಆಗಿದ್ದ ಮ್ಯಾಥ್ಯೂ ಜೊತೆ, ಮಗಳ ವಿಚಾರಕ್ಕೆ ನನ್ನ ಪರಿಚಯವಾಗಿತ್ತು. ಇತ್ತ ನನ್ನ ಕೌಟಂಬಿಕ ಸಮಸ್ಯೆ ಕೂಡ ಹೆಚ್ಚಾಗಿದ್ದು, ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಅದರಿಂದ ನಾನು ಅಲ್ಲಿಂದ ಹೊರಬಂದೆ ಎಂದು ಹೇಳಿದ್ದಾರೆ.

ಸಹೋದರರು, ಸಂಬಂಽಕರು ಸಹಾಯ ಮಾಡದಿದ್ದಾಗ ಸ್ನೇಹಿತರ ಬೆಂಬಲ ಕೇಳಿದ್ದೇನೆ. ಮ್ಯಾಥ್ಯೂ ಅವರ ಬಳಿ 2 ಸಾವಿರ ರೂ. ನೆರವು ಪಡೆದಿದ್ದೆ. ಪತಿ ನನಗೆ ಜೀವನಾಂಶ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದರು. ಈ ಸಂದರ್ಭದಲ್ಲಿ ಮ್ಯಾಥ್ಯೂ ನನಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು.

ನಾನು ಅಮ್‌ಆದ್ಮಿ ಪಕ್ಷದ ನಾಯಕನಾಗಿದ್ದು, ಪೊಲೀಸರ ಸಂಪರ್ಕ ಇದೆ. ಎಂದು ಹೇಳಿ ನನ್ನನ್ನು ಶಾನುಭೋಗನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿ ಇರಿಸಿದ್ದರು ಎಂದು ತಿಳಿಸಿದ್ದಾರೆ.
ಕಳೆದ ಸೆಪ್ಟಂಬರ್‌ನಲ್ಲಿ ನನಗೆ ಗಂಡನಿಂದ ವಿಚ್ಛೇದನ ಸಿಕ್ಕಿದೆ. ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಮ್ಯಾಥ್ಯೂ ನನ್ನೊಂದಿಗೆ ಸಹ ಜೀವನ ನಡೆಸಿದ್ದಾನೆ.

ಮದುವೆ ಮಾಡಿಕೊಳ್ಳಲು ಒತ್ತಾಯಿಸಿದಾಗ, ಅಪ್ಪ-ಅಮ್ಮನನ್ನು ಒಪ್ಪಿಸಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ತಾವು ಗರ್ಭಿಣಿಯಾಗಿದ್ದು, ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದಾಗ ಕಳೆದ ಶನಿವಾರ ನನ್ನ ಮೊಬೈಲ್‌ ಹಾಗೂ ಆತನ ಬಟ್ಟೆಗಳೊಂದಿಗೆ ಅಪ್ಪ-ಅಮ್ಮನ ಜೊತೆ ಪರಾರಿಯಾಗಿದ್ದಾನೆ ಎಂದಿದ್ದಾರೆ. ನ್ಯಾಯಕ್ಕಾಗಿ ತಾವು ಅಲೆದಾಡುವಂತಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ದೂರು ನೀಡಿದ್ದೇನೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ನಾನು ಗರ್ಭಿಣಿಯಾಗಿರುವುದನ್ನು ದೂರಿನಲ್ಲಿ ನಮೂದಿಸಿದ್ದರೂ, ಅದನ್ನು ಆರಂಭದಲ್ಲಿ ಕಡೆಗಣಿಸಲಾಗಿತ್ತು ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ.

ಮದುವೆಯಾಗು ಎಂದು ಕೇಳಿದ್ದಾಗ ಮ್ಯಾಥ್ಯೂ ತಮ್ಮನ್ನು ಅವಹೇಳನಕಾರಿಯಾಗಿ ನಿಂದಿಸಿದ್ದು, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಆತ ತೆಗೆದುಕೊಂಡು ಹೋಗಿರುವ ನನ್ನ ಮೊಬೈಲ್‌ನಲ್ಲಿ ನಮ್ಮಿಬ್ಬರ ಸಂಬಂಧಕ್ಕೆ ಪೂರಕವಾದ ಸಾಕ್ಷಿಗಳಿವೆ ಎಂದಿದ್ದಾರೆ. ಮ್ಯಾಥ್ಯೂ ಹಲವರ ಜೊತೆ ಇದೆ ರೀತಿ ನಡೆದುಕೊಂಡಿದ್ದಾರೆ. ಆತನ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಜೊತೆಗಿರುವ ಖಾಸಗಿ ಕ್ಷಣಗಳ ೇಟೊ ಹಾಗೂ ವಿಡಿಯೋಗಳಿವೆ ಎಂದು ಸಂತ್ರಸ್ಥೆ ಗಂಭೀರ ಆರೋಪ ಮಾಡಿದ್ದಾರೆ.

ಪಿಇಎಸ್‌‍ ಶಿಕ್ಷಣ ಸಂಸ್ಥೆಗೆ ಐಟಿ ಶಾಕ್‌, 200ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ

ಬೆಂಗಳೂರು, ಸೆ.24– ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಪಟ್ಟಂತೆ ನಗರದ ಪ್ರಮುಖ ಶಿಕ್ಷಣ ಸಂಸ್ಥೆಯ ಮೇಲೆ 200ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಪಿಇಎಸ್‌‍ ಶಿಕ್ಷಣ ಸಂಸ್ಥೆಗೆ ಸೇರಿದ ಕರ್ನಾಟಕ ಹಾಗೂ ಆಂಧ್ರಪ್ರದೇಶದ ವಿವಿಧ ಕಾಲೇಜುಗಳ ಕಚೇರಿಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ಹೊಸಕೆರೆಯಲ್ಲಿನ ಪಿಇಎಸ್‌‍ ಕಾಲೆಜು, ಎಲೆಕ್ಟ್ರಾನಿಕ್‌ ಸಿಟಿ ಕಾಲೇಜು, ಹನುಮಂತ ನಗರದ ಕಾಲೇಜು, ಆಂಧ್ರಪ್ರದೇಶದ ಕುಪ್ಪಂ ಕಾಲೇಜು, ಪಿಇಎಸ್‌‍ ಶಿಕ್ಷಣ ಸಂಸ್ಥೆಯ ಪೂರ್ವ ಮಾಲೀಕರಾದ ದಿವಂಗತ ದೊರೆಸ್ವಾಮಿ ಅವರ ನಿವಾಸ ಹಾಗೂ ಸಂಬಂಧಿಕರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಶಿಕ್ಷಣ ಸಂಸ್ಥೆಯ ಜವಾಬ್ದಾರಿಯನ್ನು ಪ್ರಸ್ತುತ ನಿರ್ವಹಿಸುತ್ತಿರುವ ದೊರೆಸ್ವಾಮಿ ಅವರ ಪುತ್ರ ಜವಾಹರ್‌ ದೊರೆಸ್ವಾಮಿ ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಇಂದು ಬೆಳಗ್ಗೆ ಇನ್ನೋವಾ ಹಾಗೂ ಸ್ವಿಫ್ಟ್ ಕಾರ್‌ನಲ್ಲಿ ಆಗಮಿಸಿದ ಚೆನ್ನೈ, ಆಂಧ್ರಪ್ರದೇಶ ಹಾಗೂ ಕರ್ನಾಟಕದ 200ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ವಿವಿಧ ತಂಡಗಳಾಗಿ ಕಾರ್ಯಾಚರಣೆ ನಡೆಸಿದ್ದು, ನಿರಂತರವಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಆದಾಯ ತೆರಿಗೆ ಪಾವತಿಯಲ್ಲಿ ಅನುಮಾನಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಸಂಸ್ಥೆಯ ಲೆಕ್ಕ ಪತ್ರಗಳನ್ನು ಪರಿಶೀಲನೆಗೊಳಪಡಿಸಿರುವ ಅಧಿಕಾರಿಗಳು, ಆಡಳಿತ ಮಂಡಳಿ ಹಾಗೂ ಕಾಲೇಜಿನ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.ದೊರೆಸ್ವಾಮಿ ಅವರಿಗೆ ಸಂಬಂಧಪಟ್ಟಂತಹ ಆಪ್ತರು, ಸಂಬಂಧಿಕರ ಆಸ್ತಿ ವಿವರ ಹಾಗೂ ಬ್ಯಾಂಕ್‌ ವಹಿವಾಟುಗಳನ್ನೂ ಪರಿಶೀಲನೆಗೊಳ ಪಡಿಸಲಾಗಿದೆ.

ಕುಂಟುತ್ತಾ ಸಾಗಿದ ಸಮೀಕ್ಷೆ..!

ಬೆಂಗಳೂರು, ಸೆ.23- ನಾನಾ ರೀತಿಯ ಗೊಂದಲ, ತಾಂತ್ರಿಕ ಸಮಸ್ಯೆ, ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರ ನಿರುತ್ಸಾಹ ಮೊಬೈಲ್‌ ಆ್ಯಪ್‌ನ ಜಂಜಾಟಗಳ ನಡುವೆ ಎರಡನೇ ದಿನವೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುಂಟುತ್ತಾ ಸಾಗುತ್ತಿದೆ.ನಿನ್ನೆಯಿಂದ ಆರಂಭವಾಗಿರುವ ಸಮೀಕ್ಷೆ ಅ.7ರ ವರೆಗೂ ನಡೆದು , ಒಟ್ಟು 2 ಕೋಟಿ ಮನೆಗಳ 7 ಕೋಟಿಗೂ ಅಧಿಕ ಜನರ ದತ್ತಾಂಶವನ್ನು ಸಂಗ್ರಹಿಸಬೇಕಿದೆ. ಆದರೆ ಸಮೀಕ್ಷೆ ನಿರೀಕ್ಷಿತ ವೇಗದಲ್ಲಿ ನಡೆಯದೆ ಗೊಂದಲಮಯವಾಗಿದೆ ಹಾಗೂ ಜನ ಸಾಮಾನ್ಯರನ್ನು ರೇಜಿಗಿಡಿಸಿದೆ. ಹಲವು ಸಮುದಾಯಗಳ ವಿರೋಧದ ನಡುವೆ ಕೂಡ ಹಠಕ್ಕೆ ಬಿದ್ದಂತೆ ನಡೆಯುತ್ತಿರುವ ಸಮೀಕ್ಷೆ ಬಗ್ಗೆ ಜನರಲ್ಲಿ ಅಸಹನೆ, ಆಕ್ರೋಶಗಳು ಮಡುಗಟ್ಟಿವೆ.

ರಾಜ್ಯದ ಒಟ್ಟು ಜನ ಸಂಖ್ಯೆಯಲ್ಲಿ ಶೇ. 20ಕ್ಕೂ ಹೆಚ್ಚು ಪಾಲು ಹೊಂದಿರುವ ಬೆಂಗಳೂರಿನಲ್ಲಿ ಈವರೆಗೂ ಸಮೀಕ್ಷೆ ಆರಂಭಗೊಂಡಿಲ್ಲ, ಬಹುತೇಕ ಸಮೀಕ್ಷಾದಾರರಿಗೆ ತರಬೇತಿಯನ್ನು ನೀಡಿಲ್ಲ. ಈ ಹಿಂದೆ ನ್ಯಾ.ನಾಗಮೋಹನದಾಸ್‌‍ ಆಯೋಗದ ಸಮೀಕ್ಷೆಯಲ್ಲೂ ಇದೇ ರೀತಿಯ ಅನಾದಾರಣೆಗಳು ಕಂಡು ಬಂದಿತ್ತು. ಕೊನೆ ಕೊನೆಗೆ ಅಧೋಗತಿಯಲ್ಲಿ ಕಾಟಾಚಾರದ ಸಮೀಕ್ಷೆ ನಡೆಸಿ, ವರದಿ ನೀಡಿದ್ದು ಕಂಡು ಬಂತು.

ಕೊನೆಯ ಹಂತದಲ್ಲಿ ಹೆಚ್ಚು ಮನೆಗಳನ್ನು ತಲುಪಬೇಕು ಎಂಬ ಕಾರಣಕ್ಕೆ ಹಿರಿಯ ಅಧಿಕಾರಿಗಳು ಸಮೀಕ್ಷಾದಾರರ ಮೇಲೆ ಒತ್ತಡ ಹೇರಿದರು. ಇದು ಹೇಗೊ ಮುಗಿದರೆ ಸಾಕು ಎಂಬ ಅಸಡ್ಡೆಯಲ್ಲಿ ಸಮೀಕ್ಷಾದಾರರು ದೂರವಾಣಿಯಲ್ಲೇ ಮಾಹಿತಿ ಪಡೆದು ಕೈತೊಳೆದುಕೊಂಡ ಉದಾಹರಣೆಗಳಿವೆ. ಹೀಗಾಗಿ ನ್ಯಾ.ನಾಗಮೋಹನದಾಸ್‌‍ ಸಮೀಕ್ಷೆ ಗೊಂದಲದ ಗೂಡಾಗಿದ್ದು, ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಈಗ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್‌‍ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಆಧಾರ ಸಂಖ್ಯೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ಗೆ ಓಟಿಪಿ ರವಾನೆಯಾಗುತ್ತಿಲ್ಲ. ಪ್ರತಿಯೊಬ್ಬ ಸಮೀಕ್ಷಾದಾರರಿಗೂ ಸುಮಾರು 50 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಸರಾಸರಿ ದಿನವೊಂದಕ್ಕೆ ಕನಿಷ್ಠ 10 ಮನೆಗಳನ್ನು ಸಮೀಕ್ಷೆ ಮಾಡುವ ಅನಿವಾರ್ಯತೆ ಇದೆ. ಆದರೆ ಓಟಿಪಿ ರವಾನೆಯಾಗದೆ ವಿಳಂಬವಾಗುತ್ತಿರುವುದರಿಂದ ಹಾಗೂ ಮೊಬೈಲ್‌ ಆ್ಯಪ್‌ ಹ್ಯಾಂಗ್‌ ಆಗುತ್ತಿರುವುದರಿಂದಾಗಿ ನಿಗದಿತ ಸಮಯಕ್ಕೆ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.

ಅಗತ್ಯವಾದರೆ ಒಂದೆರಡು ದಿನ ಸಮೀಕ್ಷಾ ಅವಧಿಯನ್ನು ವಿಸ್ತರಣೆ ಮಾಡುವುದಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂದನ್‌ ನಾಯಕ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ವರೆಗೂ ಸಮೀಕೆ್ಷಯೇ ಶುರುವಾಗಿಲ್ಲ. ಈಗಾಗಲೇ ದಸರಾ ರಜೆ ಆರಂಭಗೊಂಡಿದ್ದು ಬಹುತೇಕರು ಪ್ರವಾಸಕ್ಕೆ ತೆರಳಿದ್ದಾರೆ. ಇನ್ನೂ ಕೆಲವರು ಊರುಗಳಿಗೆ ಹೋಗಿ ಸಮಯ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಾಹಿತಿ ಕಲೆ ಹಾಕುವುದು ದುಸ್ತರವಾದ ಕೆಲಸ ಆಗಿದ್ದರೂ ಆಯೋಗ ಎಚ್ಚೆತ್ತುಕೊಳ್ಳದೆ ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭಿಸದೇ ವಿಳಂಬ ಮಾಡುತ್ತಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸ್ವಕ್ಷೇತ್ರದಲ್ಲೂ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ಆಕ್ಷೇಪಗಳಿವೆ. ಬಹುತೇಕ ಕ್ಷೇತ್ರಗಳಲ್ಲಿ ಸಮೀಕ್ಷೆಯ ಗೊಂದಲಗಳು ತೀವ್ರವಾಗಿವೆ. ರಾಜ್ಯಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡೆಸಿಕೊಳ್ಳದೇ ಎಲ್ಲವೂ ಸುಖಾಂತ್ಯವಾಗಿ ನಡೆಯುತ್ತಿದೆ ಎಂಬ ಭ್ರಮೆಯಲ್ಲಿದೆ.

ಇತ್ತ ಓಟಿಪಿ ಬರದೆ ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ನಡೆಸಲಾಗದೆ ಶಿಕ್ಷಕರು, ಆಶಾ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಸಮೀಕ್ಷಾದಾರರು ಭೇಟಿ ನೀಡುವ ಮೂರು ದಿನ ಮುಂಚಿತವಾಗಿಯೇ ಪ್ರಶ್ನಾವಳಿಗಳ ನಮೂನೆಗಳನ್ನು ಮನೆ ಮನೆಗಳಿಗೆ ತಲುಪಿಸಲಾಗುವುದೆಂದು ಆಯೋಗ ಹೇಳಿತ್ತು. ಆದರೆ ಎಲ್ಲಿಯೂ ಪ್ರಶ್ನಾವಳಿಗಳನ್ನು ತಲುಪಿಸಿದ ಉದಾಹರಣೆ ಇಲ್ಲ.

ಇನ್ನೂ ಮನೆಗಳಿಗೆ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸುವುದರಲ್ಲೂ ಪೂರ್ಣ ಪ್ರಮಾಣದ ಪ್ರಗತಿಯಾಗಿಲ್ಲ. ಅಸಂಬದ್ಧವಾದ ಸಮೀಕ್ಷೆ ನಡೆಸುವ ಬದಲಾಗಿ 3 ತಿಂಗಳ ಕಾಲ ಮುಂದೂಡುವಂತೆ ಜನ ಸಮುದಾಯ ಒತ್ತಡ ಹೇರಿದರೂ ಸರ್ಕಾರ ಅದನ್ನು ಪರಿಗಣಿಸದೆ ಸಮೀಕ್ಷೆ ಮಾಡಿಯೇ ತೀರುವುದಾಗಿ ಪಟ್ಟು ಹಿಡಿದಿದೆ.

ಈ ಮೊದಲು ಕಾಂತರಾಜು ಆಯೋಗದ ಸಮೀಕ್ಷೆಯ ವೇಳೆಯೂ ಇದೇ ರೀತಿಯ ಮೊಂಡು ಹಠ ಕಂಡು ಬಂದಿತ್ತು. ಕೊನೆಗೂ ಆ ವರದಿ 10 ವರ್ಷ ಆದರೂ ಅನುಷ್ಠಾನಗೊಳ್ಳದೆ ಮೂಲೆಗುಂಪಾಯಿತು. ಸುಮಾರು 175 ಕೋಟಿ ರೂ. ವ್ಯರ್ಥವಾಯಿತು. ಈಗ ಜನ ಸಮುದಾಯದ ಬೇಡಿಕೆಗಳನ್ನು ಕಡೆಗಣಿಸಿ, ಮತ್ತೆ ಸಮೀಕ್ಷೆಯನ್ನು ಮಾಡಿಯೇ ತೀರುವುದಾಗಿ ಸರ್ಕಾರ ಹಠಕ್ಕೆ ಬಿದ್ದಿದೆ. ಇದು ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡಬೇಕಿದೆ.

ಮಹೇಶ್‌ಶೆಟ್ಟಿ ತಿಮರೋಡಿಗೆ ಬಂಧನ ಭೀತಿ

ಬೆಂಗಳೂರು, ಸೆ.24- ಹೋರಾಟಗಾರ ಮಹೇಶ್‌ಶೆಟ್ಟಿ ತಿಮರೋಡಿ ಅವರಿಗೆ ಬಂಧನ ಭೀತಿ ಎದುರಾಗಿದೆ. ಬೆಳ್ತಂಗಡಿ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌‍ ನೀಡಿದ್ದ ಬೆನ್ನಲ್ಲೇ ತಿಮರೋಡಿ ಅವರು ನಾಪತ್ತೆಯಾಗಿದ್ದಾರೆ.ಹಾಗಾಗಿ ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಬೆಳ್ತಂಗಡಿ ಪೊಲೀಸ್‌‍ ಠಾಣೆಗೆ ಎಸ್‌‍ಐಟಿ ನೀಡಿರುವ ದೂರಿನನ್ವಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಎರಡು ಭಾರಿ ತಿಮರೋಡಿ ಅವರಿಗೆ ನೋಟೀಸ್‌‍ ನೀಡಿದ್ದರೂ ಇದುವರೆಗೂ ಹಾಜರಾಗಿಲ್ಲ.ಈ ನಡುವೆ ಪುತ್ತೂರು ಉಪವಿಭಾಗಾಧಿಕಾರಿ ಅವರು ತಿಮರೋಡಿ ಅವರ ಗಡೀಪಾರಿಗೆ ಆದೇಶಿಸಿದ್ದಾರೆ.

ಎಸ್‌‍ಐಟಿ ಪೊಲೀಸರು ಬುರುಡೆ ಚಿನ್ನಯ್ಯನನ್ನು ಬಂಧಿಸಿ ಆತನನ್ನು ವಿಚಾರಣೆ ನಡೆಸಿದಾಗ ತಿಮರೋಡಿ ಅವರ ಮನೆಯಲ್ಲಿ ಆಶ್ರಯ ನೀಡಿದ್ದಾಗಿ ಹೇಳಿದ್ದನು.ಹಾಗಾಗಿ ತಿಮರೋಡಿ ಮನೆ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಮಾರಾಕಾಸ್ತ್ರಗಳು, ಬಂದೂಕು ಪತ್ತೆಯಾಗಿತ್ತು. ಈ ಬಗ್ಗೆ ಎಸ್‌‍ಐಟಿ ಎಸ್‌‍ಪಿ ಅವರು ಬೆಳ್ತಂಗಡಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಸೌಜನ್ಯಪರ ಹೋರಾಟಗಾರ ತಿಮರೋಡಿ ಅವರ ಮೇಲೆ ಕಾನೂನುಗಳ ಉಲ್ಲಂಘನೆ, ಅಶಾಂತಿ ಸೃಷ್ಟಿ, ಸಮಾಜದಲ್ಲಿ ಅಸ್ಥಿರತೆ ಉಂಟು ಮಾಡುವ ಚಟುವಟಿಕೆಗಳು, ಅಕ್ರಮ ಶಸಾ್ತ್ರಸ್ತ್ರ ಹೊಂದಿರುವುದು ಸೇರಿದಂತೆ ಒಟ್ಟು 32 ಪ್ರಕರಣಗಳು ದಾಖಲಾಗಿವೆ. ಬುರುಡೆ ಗ್ಯಾಂಗ್‌ನಲ್ಲಿ ತಿಮರೋಡಿ ಗುರುತಿಸಿಕೊಂಡಿದ್ದಾರೆಂಬ ಆರೋಪ ಸಹ ಕೇಳಿಬಂದಿದೆ.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕಲು ಚುನಾವಣಾ ಆಯೋಗ ಹೊಸ ವ್ಯವಸ್ಥೆ

ನವದೆಹಲಿ,ಸೆ.24- ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕುವ ಭಾರತೀಯ ಚುನಾವಣಾ ಆಯೋಗ ಹೊಸ ತಾಂತ್ರಿಕ ವ್ಯವಸ್ಥೆಯನ್ನು ಪರಿಚಯಿಸಿದೆ.

ಹೆಚ್ಚುತ್ತಿರುವ ದುರುಪಯೋಗವನ್ನು ತಡೆಗಟ್ಟಿ ಮತದಾರರಲ್ಲಿ ಅನುಮಾನವನ್ನು ನಿವಾರಿಸಿ ಹೆಚ್ಚು ಪಾರದರ್ಶಕತೆ ಉಂಟು ಮಾಡುವ ಸದುದ್ದೇಶದಿಂದ ಚುನಾವಣಾ ಆಯೋಗ ದುರುಪಯೋಗ ತಡೆಗಟ್ಟಲು ಇಸಿಐಎನ್‌ಇಟಿ ಪೋರ್ಟಲ್‌ ಮತ್ತು ಅರ್ಜಿಗಳಲ್ಲಿ ಇ-ಸೈನ್‌ ಎಂಬ ವಿನೂತನ ತಂತ್ರಜ್ಞಾನವನ್ನು ಪರಿಚಯಿಸಿದೆ.

ಇದರಿಂದಾಗಿ ಬರುವ ದಿನಗಳಲ್ಲಿ ಮತದಾರರ ಪಟ್ಟಿಯಿಂದ ಯಾರೊಬ್ಬರು ಅಷ್ಟು ಸುಲಭವಾಗಿ ತಮ ಹೆಸರುಗಳನ್ನು ತೆಗೆದು ಹಾಕುವುದಾಗಲಿ ಇಲ್ಲವೇ ಸೇರ್ಪಡೆ ಮಾಡಲು ಅವಕಾಶ ಇರುವುದಿಲ್ಲ.

ಹೊಸದಾಗಿ ಮತದಾರರಪಟ್ಟಿಗೆ ಸೇರ್ಪಡೆಯಾಗುವವರು ತಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸುವವರು ತಮ ಆಧಾರ್‌ಲಿಂಕ್‌ ಮಾಡಲಾದ ಫೋನ್‌ ಸಂಖ್ಯೆಗಳನ್ನು ಬಳಸಿಕೊಂಡು ತಮ ಗುರುತನ್ನು ಬಳಸಬೇಕಾಗುತ್ತದೆ.
ಈ ಹಿಂದೆ ಅರ್ಜಿದಾರರು ಯಾವುದೇ ಪರಿಶೀಲನೆ ಇಲ್ಲದೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿತ್ತು. ಇದು ಮತದಾರರ ಗುರುತಿನಚೀಟಿಯ ದುರುಪಯೋಗವಾಗುವ ಸಾಧ್ಯತೆ ಇತ್ತು. ಇದನ್ನು ಮನಗಂಡೇ ಚುನಾವಣಾ ಆಯೋಗ ಇ-ಸೈನ್‌ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಸಾಮಾನ್ಯವಾಗಿ ಅರ್ಜಿದಾರರು ಚುನಾವಣಾ ಆಯೋಗದ ಅಪ್ಲಿಕೇಷನ್‌ಗಳು ಮತ್ತು ಪೋರ್ಟಲ್‌ನಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಫೋಟೋ ಗುರುತಿನ ಚೀಟಿ(ಎಪಿಕ್‌) ಸಂಖ್ಯೆಯೊಂದಿಗೆ ಫೋನ್‌ ಸಂಖ್ಯೆಯನ್ನು ಲಿಂಕ್‌ ಮಾಡಿ ಅರ್ಜಿ ಹಾಕಿದ್ದರೆ ಸಾಕಿತ್ತು.
ಇದನ್ನು ತಡೆಗಟ್ಟುವ ಉದ್ದೇಶದಿಂದಲೇ ಚುನಾವಣಾ ಆಯೋಗ ವಿನೂತನವಾದ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ದುರುಪಯೋಗವನ್ನು ತಡೆಗಟ್ಟಲು ಸಾಧ್ಯತೆ ಇದೆ ಎಂದು ಆಯೋಗ ಹೇಳಿಕೊಂಡಿದೆ.

ಇ-ಸೈನ್‌ ಹೇಗೆ ಕೆಲಸ ಮಾಡುತ್ತದೆ?:
ಅರ್ಜಿದಾರರು ಫಾರ್ಮ್‌ 6 (ಹೊಸ ಮತದಾರರ ನೋಂದಣಿಗಾಗಿ), ಅಥವಾ ಫಾರ್ಮ್‌ 7 (ಅಸ್ತಿತ್ವದಲ್ಲಿರುವ ಪಟ್ಟಿಗಳಲ್ಲಿ ಹೆಸರನ್ನು ಸೇರಿಸಲು/ಅಳಿಸುವುದಕ್ಕೆ ಆಕ್ಷೇಪಣೆ ಸಲ್ಲಿಸಲು) ಅಥವಾ ಫಾರ್ಮ್‌ 8 (ನಮೂದುಗಳ ತಿದ್ದುಪಡಿಗಾಗಿ) ಅನ್ನು ಭರ್ತಿ ಮಾಡುವ ಮೂಲಕ ಈಗ ಇ-ಸೈನ್‌ ಅಗತ್ಯವನ್ನು ತೆರವುಗೊಳಿಸಬೇಕಾಗುತ್ತದೆ.

ಇದರರ್ಥ ಅರ್ಜಿದಾರರು ತಮ ಅರ್ಜಿಗಾಗಿ ಬಳಸುತ್ತಿರುವ ಮತದಾರರ ಕಾರ್ಡ್‌ನಲ್ಲಿರುವ ಹೆಸರು ಅವರ ಆಧಾರ್‌ನಲ್ಲಿರುವ ಹೆಸರಿಗೆ ಸಮನಾಗಿದೆ ಮತ್ತು ಅವರು ಬಳಸುತ್ತಿರುವ ಮೊಬೈಲ್‌ ಸಂಖ್ಯೆಯು ಆಧಾರ್‌ಗೆ ಲಿಂಕ್‌ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಪೋರ್ಟಲ್‌ ಎಚ್ಚರಿಸುತ್ತದೆ.

ಇದು ಯಾರ ಹೆಸರನ್ನು ಅಳಿಸಲು ಅಥವಾ ಆಕ್ಷೇಪಿಸಲು ಬಯಸುತ್ತದೋ ಅವರ ಎಲ್ಲಾ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿದೆ (ಕಾರಣಗಳು ಸಾವು, ಸ್ಥಳಾಂತರ, ಭಾರತೀಯ ನಾಗರಿಕನಲ್ಲದ ಕಾರಣ ಅನರ್ಹತೆ ಅಥವಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬಹುದು).

ಅರ್ಜಿದಾರರು ಫಾರ್ಮ್‌ ಅನ್ನು ಭರ್ತಿ ಮಾಡಿದ ನಂತರ, ಅವರನ್ನು ಕೇಂದ್ರ ಎಲೆಕ್ಟ್ರಾನಿಕ್‌್ಸ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೆಂಟರ್‌ ಫಾರ್‌ ಡೆವಲಪೆಂಟ್‌ ಆಫ್‌ ಅಡ್ವಾನ್‌್ಸ್ಡ ಕಂಪ್ಯೂಟಿಂಗ್‌(ಸಿಎಡಿಸಿ) ಆಯೋಜಿಸಿರುವ ಬಾಹ್ಯ ಇ-ಸೈನ್‌ ಪೋರ್ಟಲ್‌ಗೆ ಕರೆದೊಯ್ಯಲಾಗುತ್ತದೆ. ಅಆಂಅ ಪೋರ್ಟಲ್ನಲ್ಲಿ, ಅರ್ಜಿದಾರರು ತಮ ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕು ಮತ್ತು ನಂತರ ಆಧಾರ್‌ ಔಖಿ ಅನ್ನು ರಚಿಸಬೇಕು, ಅಲ್ಲಿ ಆ ಆಧಾರ್‌ ಸಂಖ್ಯೆಯೊಂದಿಗೆ ಲಿಂಕ್‌ ಮಾಡಲಾದ ಫೋನ್‌ ಸಂಖ್ಯೆಗೆ ಔಖಿ ಕಳುಹಿಸಲಾಗುತ್ತದೆ.

ನಂತರ ಅರ್ಜಿದಾರರು ಆಧಾರ್‌ ಆಧಾರಿತ ದೃಢೀಕರಣಕ್ಕೆ ಒಪ್ಪಿಗೆ ನೀಡಬೇಕು ಮತ್ತು ಪರಿಶೀಲನೆಯನ್ನು ಪೂರ್ಣಗೊಳಿಸಬೇಕು. ಅದು ಪೂರ್ಣಗೊಂಡ ನಂತರವೇ ಅರ್ಜಿದಾರರನ್ನು ಫಾರ್ಮ್‌ ಅನ್ನು ಸಲ್ಲಿಸಲು ಇಸಿಐಎನ್‌ಇಟಿ ಪೋರ್ಟಲ್‌ಗೆ ಮರುನಿರ್ದೇಶಿಸಲಾಗುತ್ತದೆ.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ 450 ವಾರ್ಡ್‌ಗಳು..!

ಬೆಂಗಳೂರು,ಸೆ.24- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವಾರ್ಡ್‌ ಪುನರ್‌ವಿಂಗಡಣೆ ಕಾರ್ಯ ಪೂರ್ಣಗೊಂಡಿದೆ.198 ವಾರ್ಡ್‌ಗಳಿದ್ದ ಬಿಬಿಎಂಪಿಯನ್ನು ರದ್ದುಗೊಳಿಸಿದ ನಂತರ ರಚಿಸಲಾಗಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಲ್ಲಿ 400 ರಿಂದ 450 ವಾರ್ಡ್‌ಗಳು ರಚನೆಯಾಗುವ ಸಾಧ್ಯತೆಗಳಿವೆ.

ಜಿಬಿಎ ವಾರ್ಡ್‌ ವಿಂಗಡಣೆ ಪ್ರಕ್ರಿಯೆ ನಿಗದಿಯಂತೆ ಮುಕ್ತಾಯಗೊಂಡಿದ್ದು, ಇಂದು ಸಂಜೆ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಸರ್ಕಾರಕ್ಕೆ ವಾರ್ಡ್‌ ವಿಂಗಡಣಾ ವರದಿ ಸಲ್ಲಿಸಲಿದ್ದಾರೆ.
ವಾರ್ಡ್‌ ವಿಂಗಡಣೆಯಲ್ಲಿ ಈ ಹಿಂದೆ ಆಗಿದ್ದ ಕೆಲ ಲೋಪ ದೋಷಗಳನ್ನು ಸರಿಪಡಿಸಲಾಗಿದೆ.

ಆಯಾ ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳನ್ನು ಅದೇ ಕ್ಷೇತ್ರದಲ್ಲಿ ಮುಂದುವರೆಸಲಾಗಿದೆ. ಆದರೆ, ಕೆಲವೊಂದು ವಾರ್ಡ್‌ಗಳು ಪಕ್ಕದ ವಿಧಾನಸಭಾ ಕ್ಷೇತ್ರಗಳಿಗೆ ಸೇರ್ಪಡೆಯಾಗಿದೆ ಎಂದು ಜಿಬಿಎ ಮೂಲಗಳು ಈ ಸಂಜೆಗೆ ತಿಳಿಸಿವೆ.

ಮೂಲಗಳ ಪ್ರಕಾರ ಪ್ರತಿ ನಗರ ಪಾಲಿಕೆಗೆ 75 ರಿಂದ 100 ವಾರ್ಡ್‌ಗಳನ್ನು ರಚಿಸಲಾಗಿದ್ದು, ಐದು ನಗರ ಪಾಲಿಕೆಗಳಿಂದ ಬರೊಬ್ಬರಿ 400 ರಿಂದ 450 ವಾರ್ಡ್‌ಗಳು ರಚನೆಯಾಗುವ ಸಾಧ್ಯತೆಗಳಿವೆಯಂತೆ.

ಮಹೇಶ್ವರ್‌ ರಾವ್‌ ಸಲ್ಲಿಸಿರುವ ವಾರ್ಡ್‌ ವಿಂಗಡಣಾ ವರದಿಯನ್ನು ಪರಿಶೀಲಿಸಿದ ನಂತರ ಸರ್ಕಾರ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಲಿದೆ. ಆಕ್ಷೇಪಣೆ ಸಲ್ಲಿಕೆ ಅವಧಿ ಪೂರ್ಣಗೊಂಡ ಕೂಡಲೇ ಅಂತಿಮ ವಾರ್ಡ್‌ಗಳ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ತಿಳಿದುಬಂದಿದೆ. ಒಟ್ಟಾರೆ, ನ.30 ರೊಳಗೆ ವಾರ್ಡ್‌ ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸುವುದರ ಜೊತೆಗೆ ಮುಂದಿನ ಜನವರಿ ಇಲ್ಲವೇ ಫೆಬ್ರವರಿಯಲ್ಲಿ ಜಿಬಿಎಗೆ ಚುನಾವಣೆ ನಡೆಸುವುದು ಸರ್ಕಾರದ ಗುರಿಯಾಗಿದೆ.