Home Blog Page 88

ಸಾಲ ತೀರಿಸಲು ಸ್ನೇಹಿತನ ಮನೆಗೇ ಕನ್ನ ಹಾಕಿದ್ದ ಪದವೀಧರ ಅರೆಸ್ಟ್

ಬೆಂಗಳೂರು,ಸೆ.24- ಸಾಲ ತೀರಿಸಲು ಸ್ನೇಹಿತನ ಮನೆಗೆ ಕನ್ನ ಹಾಕಿದ್ದ ಬಿಇ ಪದವೀಧರನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ 5.80 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮೂಲತಃ ಕಲ್ಬುರ್ಗಿ ನಿವಾಸಿ ಮಂಜುನಾಥ್‌ (38) ಬಂಧಿತ ಪದವೀಧರ. ಈತ ಕೆಆರ್‌ಪುರಂನ ಅಯ್ಯಪ್ಪನಗರದಲ್ಲಿ ವಾಸವಾಗಿದ್ದು, ಬಿಇ ಸಿವಿಲ್‌ ಎಂಜಿನಿಯರ್‌ ವ್ಯಾಸಂಗ ಮಾಡಿದ್ದು, ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.

ಸಾಲ ಮಾಡಿಕೊಂಡಿದ್ದ ಮಂಜುನಾಥ್‌ ಅದನ್ನು ತೀರಿಸಲು ಕಳ್ಳತನದ ಹಾದಿ ಹಿಡಿದಿದ್ದಾನೆ.
ಕೊಡಿಗೆಹಳ್ಳಿ ಗ್ರಾಮದಲ್ಲಿ ಈತನ ಸ್ನೇಹಿತ ನವೀನ್‌ ವಾಸವಾಗಿದ್ದು, ಆ.29 ರಂದು ಸಂಜೆ ಗ್ರಾಮದಲ್ಲಿ ಕೂರಿಸ್ದಿ ಗಣೇಶನ ಮೂರ್ತಿಗೆ ಪೂಜೆ ಮಾಡಿಸಿಕೊಂಡು ಬರಲು ಅವರ ಪತ್ನಿ ಸುಷಾ ಮನೆಗೆ ಬೀಗಹಾಕಿಕೊಂಡು ಹೋಗಿದ್ದರು.

ಇದೇ ಸಮಯಕ್ಕಾಗಿ ಕಾದಿದ್ದ ಮಂಜುನಾಥ್‌ ಸ್ನೇಹಿತನ ಮನೆಯ ಮುಂಬಾಗಿಲನ್ನು ಒಡೆದು ಒಳನುಗ್ಗಿ ಕೊಠಡಿಯ ಕಬೋರ್ಡ್‌ನಲ್ಲಿಟ್ಟಿದ್ದ 50 ಗ್ರಾಂ ಚಿನ್ನದ ಮಾಂಗಲ್ಯ ಸರ, 20 ಗ್ರಾಂ 2 ಚಿನ್ನದ ಬಳೆ, 35 ಗ್ರಾಂ ಕಿವಿಯೋಲೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು.
ಸುಷಾ ಅವರು ಕೆಲ ಸಮಯದ ಬಳಿಕ ಮನೆಗೆ ಬಂದಾಗ ಕಳ್ಳತನವಾಗಿರುವುದು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿ ಆರೋಪಿ ಮಂಜುನಾಥ್‌ನನ್ನು ಆತನ ಮನೆಯಲ್ಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಸ್ನೇಹಿತನ ಮನೆಯಲ್ಲಿ ಕಳ್ಳತನ ಮಾಡಿದ್ದಾಗಿ ಹೇಳಿದ್ದಾನೆ. ಆತನ ಮನೆಯಲ್ಲಿದ್ದ 58 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 5.80 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಸರಾಸರಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ

ಬೆಂಗಳೂರು, ಸೆ. 24-ನೈರುತ್ಯ ಮುಂಗಾರು ಮಳೆಯ ಅವಧಿ ಮುಗಿಯುವ ಹಂತ ತಲುಪಿದ್ದು, ರಾಜ್ಯದಲ್ಲಿ ಸರಾಸರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ. ಸೆಪ್ಟೆಂಬರ್‌ನಲ್ಲಿ ಇದುವರೆಗೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಮಳೆಯಾಗದೇ ಚದುರಿದಂತೆ ಮಳೆಯಾಗುತ್ತಿದೆ. ಇದರಿಂದ ಮುಂಗಾರು ಹಂಗಾಮಿನ ಬೆಳೆಗಳಿಗೆ ತೇವಾಂಶದ ಕೊರತೆ ಉಂಟಾಗುವ ಆತಂಕ ಎದುರಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್‌ ಒಂದರಿಂದ ನಿನ್ನೆವರೆಗೆ ರಾಜ್ಯದಲ್ಲಿ 385. 3 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.24ರಷ್ಟು ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ ಪ್ರಮಾಣ 311.6 ಮಿ.ಮೀ. ಆಗಿದೆ. ಅದೇ ರೀತಿ ಜನವರಿ ಒಂದರಿಂದ ನಿನ್ನೆಯವರೆಗಿನ ಮಾಹಿತಿ ಪ್ರಕಾರ 1117 ಮಿ.ಮೀ.ನಷ್ಟು ಮಳೆಯಾಗಿದ್ದು. ವಾಡಿಕೆಗಿಂತ ಶೇ.20 ರಷ್ಟು ಹೆಚ್ಚು ಮಳೆ ಬಿದ್ದಿದೆ. ಈ ಅವಧಿಯ ವಾಡಿಕೆ ಮಳೆ ಪ್ರಮಾಣ 929 ಮಿ.ಮೀ. ಆಗಿದೆ. ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ವಾಡಿಕೆಗಿಂತ ಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.

ಸೆಪ್ಟೆಂಬರ್‌ ಒಂದರಿಂದ ನಿನ್ನೆಯವರೆಗೆ ರಾಜ್ಯದಲ್ಲಿ 830 ಮಿ.ಮೀ.ನಷ್ಟು ಮಳೆ ಬಿದ್ದಿದ್ದು, ಶೇ.3ರಷ್ಟು ವಾಡಿಕೆಗಿಂತ ಹೆಚ್ಚಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.2ರಷ್ಟು ಹಾಗೂ ಮಲೆನಾಡಿನಲ್ಲಿ ಶೇ.8ರಷ್ಟು ವಾಡಿಕೆಗಿಂತ ಮಳೆ ಕೊರತೆಯಾಗಿದೆ.

ಚಾಮರಾಜನಗರದಲ್ಲಿ ಶೇ.29,ಚಿತ್ರದುರ್ಗದಲ್ಲಿ ಶೇ.10, ಚಿಕ್ಕಮಗಳೂರು, ಬೆಂಗಳೂರು ದಕ್ಷಿಣದಲ್ಲಿ ಶೇ.13, ಶಿವಮೊಗ್ಗದಲ್ಲಿ ಶೇ,11, ಹಾವೇರಿಯಲ್ಲಿ ಶೇ.17 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಶೇ.12ರಷ್ಟು ಮಳೆ ಕೊರತೆ ಕಂಡು ಬಂದಿದೆ.ನಿನ್ನೆ ರಾಜ್ಯದಲ್ಲಿ ಸಾಧಾರಣ ಮಳೆಯಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಉಳಿದೆಡೆ ಚದುರಿಂತೆ ಮಳೆಯಾಗಿದ್ದು, ಕುಮಟಾ ತಾಲ್ಲೂಕಿನ ಕಲಭಾಗ ಗ್ರಾಮ ಪಂಚಾಯಿತಿಯಲ್ಲಿ 68 ಮಿ.ಮೀ.ನಷ್ಟು ಅತಿಹೆಚ್ಚು ಮಳೆ ಬಿದ್ದಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಸೇರಿದಂತೆ ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.

2030ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಅತಿಥ್ಯಕ್ಕೆ ಮುಂದಾದ ಗುಜರಾತ್‌

ಅಹಮದಾಬಾದ್‌, ಸೆ. 24 (ಪಿಟಿಐ) ಮುಂಬರುವ 2030 ರ ಕಾಮನ್‌ವೆಲ್ತ್‌‍ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸುವ ಪ್ರಸ್ತಾವನೆಯನ್ನು ಗುಜರಾತ್‌ ಸರ್ಕಾರ ಕಾಮನ್‌ವೆಲ್ತ್‌‍ ಕ್ರೀಡಾ ಮೌಲ್ಯಮಾಪನ ಸಮಿತಿಗೆ ಔಪಚಾರಿಕವಾಗಿ ಮಂಡಿಸಿದೆ ಎಂದು ತಿಳಿದುಬಂದಿದೆ.

ಲಂಡನ್‌ ಪ್ರವಾಸದಲ್ಲಿರುವ ಭಾರತೀಯ ತಂಡವನ್ನು ಗುಜರಾತ್‌ನ ಕ್ರೀಡಾ ಸಚಿವ ಹರ್ಷ್‌ ಸಾಂಘವಿ ಮತ್ತು ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ (ಐಒಎ) ಅಧ್ಯಕ್ಷೆ ಪಿ ಟಿ ಉಷಾ ನೇತೃತ್ವ ವಹಿಸಿದ್ದು, ಈ ತಂಡ ಮೌಲ್ಯ ಮಾಪನ ಸಮಿತಿ ಮುಂದೆ ತಮ ನಿರ್ಧಾರ ತಿಳಿಸಿದೆ ಎಂದು ವರದಿಯಾಗಿದೆ.

2030 ರ ಆವೃತ್ತಿಯು ಐತಿಹಾಸಿಕ ಮಹತ್ವವನ್ನು ಹೊಂದಿದೆ, ಇದು ಕಾಮನ್‌ವೆಲ್ತ್‌‍ ಕ್ರೀಡಾ ಚಳವಳಿಯ 100 ವರ್ಷಗಳನ್ನು ಗುರುತಿಸುತ್ತದೆ ಮತ್ತು ಭಾರತದ ಬಿಡ್‌ನಲ್ಲಿ ಈ ಶತಮಾನೋತ್ಸವ ಆವೃತ್ತಿಗೆ ಅಹಮದಾಬಾದ್‌ ಅನ್ನು ಆತಿಥೇಯ ನಗರವಾಗಿ ಇರಿಸಲಾಗಿದೆ ಎಂದು ಗುಜರಾತ್‌ ಸರ್ಕಾರದ ಪ್ರಕಟಣೆ ತಿಳಿಸಿದೆ.

ಅಹಮದಾಬಾದ್‌ ಅಂತರರಾಷ್ಟ್ರೀಯ ಗುಣಮಟ್ಟದ ಸ್ಥಳಗಳು, ದೃಢವಾದ ಸಾರಿಗೆ ವ್ಯವಸ್ಥೆಗಳು ಮತ್ತು ಉತ್ತಮ ಗುಣಮಟ್ಟದ ವಸತಿ ಸೌಕರ್ಯಗಳನ್ನು ಕೇಂದ್ರೀಕರಿಸಿದ ಕಾಂಪ್ಯಾಕ್ಟ್‌ ಕ್ರೀಡಾ ಹೆಜ್ಜೆಗುರುತನ್ನು ನೀಡುತ್ತದೆ ಎಂದು ಅದು ಹೇಳಿದೆ.ಕ್ರೀಡಾಕೂಟಗಳ ಮರುಹೊಂದಿಸುವಿಕೆಯ ತತ್ವಗಳಿಗೆ ಅನುಗುಣವಾಗಿ, ಈ ಪ್ರಸ್ತಾವನೆಯು ಕೈಗೆಟುಕುವಿಕೆ, ಒಳಗೊಳ್ಳುವಿಕೆ, ನಮ್ಯತೆ ಮತ್ತು ಸುಸ್ಥಿರತೆಗೆ ಬಲವಾದ ಒತ್ತು ನೀಡುತ್ತದೆ. ಇದು ಪ್ಯಾರಾ-ಸ್ಪೋರ್ಟ್‌ನ ಏಕೀಕರಣ, ಮಾನವ ಹಕ್ಕುಗಳ ರಕ್ಷಣೆ, ಲಿಂಗ ಸಮಾನತೆಯ ಪ್ರಚಾರ ಮತ್ತು ಕ್ರೀಡಾಪಟುಗಳು, ಸಮುದಾಯಗಳು ಮತ್ತು ವಿಶಾಲ ಕಾಮನ್‌ವೆಲ್ತ್‌ಗೆ ಕ್ರೀಡಾಕೂಟವನ್ನು ಮೀರಿ ಪ್ರಯೋಜನಗಳನ್ನು ವಿಸ್ತರಿಸುವುದನ್ನು ಖಚಿತಪಡಿಸುವ ದೀರ್ಘಕಾಲೀನ ಪರಂಪರೆಯ ಚೌಕಟ್ಟನ್ನು ಅಳವಡಿಸಲು ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶತಮಾನೋತ್ಸವ ಕಾಮನ್‌ವೆಲ್ತ್‌‍ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸುವುದು ಗುಜರಾತ್‌ಗೆ ಮಾತ್ರವಲ್ಲದೆ ಭಾರತಕ್ಕೆ ಹೆಮ್ಮೆಯ ಮೈಲಿಗಲ್ಲಾಗಲಿದೆ. ನಾವು ಈ ಕ್ರೀಡಾಕೂಟಗಳನ್ನು ವೇಗವರ್ಧಕವಾಗಿ ನೋಡುತ್ತೇವೆ – ನಮ್ಮ ಯುವಕರಿಗೆ ಸ್ಫೂರ್ತಿ ನೀಡಲು, ವಿಕಸಿತ್‌ ಭಾರತ್‌ 2047 ಕಡೆಗೆ ನಮ್ಮ ಪ್ರಯಾಣವನ್ನು ವೇಗಗೊಳಿಸಲು ಮತ್ತು ಮುಂದಿನ 100 ವರ್ಷಗಳ ಕಾಲ ಕಾಮನ್‌ವೆಲ್ತ್‌‍ ಚಳುವಳಿಯನ್ನು ಬಲಪಡಿಸಲು ಎಂದು ಸಚಿವ ಸಂಘವಿ ಹೇಳಿದರು.

ಭಾರತದ ಪ್ರಯತ್ನವು ಕೇವಲ ಸಾಮರ್ಥ್ಯದ ಬಗ್ಗೆ ಅಲ್ಲ, ಆದರೆ ಮೌಲ್ಯಗಳ ಬಗ್ಗೆ. ಅಹಮದಾಬಾದ್‌ 2026 ರ ಗ್ಲ್ಯಾಸ್ಗೋದಿಂದ ಲಾಠಿ ಎತ್ತಿಕೊಳ್ಳಲು ಮತ್ತು 2034 ರ ಕ್ರೀಡಾಕೂಟಕ್ಕೆ ಸ್ಪ್ರಿಂಗ್‌ಬೋರ್ಡ್‌ ಆಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ, ಶತಮಾನೋತ್ಸವ ಆವೃತ್ತಿಯು ಕಾಮನ್‌ವೆಲ್ತ್‌‍ ಕ್ರೀಡೆಯ ಭವಿಷ್ಯವನ್ನು ರೂಪಿಸುವಾಗ ಭೂತಕಾಲವನ್ನು ಗೌರವಿಸುತ್ತದೆ ಎಂದು ಖಚಿತಪಡಿಸುತ್ತದೆ ಎಂದು ಉಷಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಮತ್ತು ಗುಜರಾತ್‌ ಸರ್ಕಾರ ಮತ್ತು ಭಾರತೀಯ ಕಾಮನ್‌ವೆಲ್ತ್‌‍ ಕ್ರೀಡಾಕೂಟದ ಬಲವಾದ ಮತ್ತು ಸಂಘಟಿತ ಬೆಂಬಲದೊಂದಿಗೆ, ಈ ಪ್ರಸ್ತಾವನೆಯು ಸಾಂದ್ರ, ಸುಸ್ಥಿರ, ಅಂತರ್ಗತ ಮತ್ತು ಜಾಗತಿಕವಾಗಿ ಪ್ರಭಾವಶಾಲಿ ಕ್ರೀಡಾಕೂಟಗಳನ್ನು ನೀಡುವ ಭಾರತದ ಮಹತ್ವಾಕಾಂಕ್ಷೆಯನ್ನು ಎತ್ತಿ ತೋರಿಸುತ್ತದೆ ಎಂದು ಅದು ಹೇಳಿದೆ.

ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್‌

ವಿಶ್ವಸಂಸ್ಥೆ, ಸೆ. 24 (ಪಿಟಿಐ) ಟರ್ಕಿ ಅಧ್ಯಕ್ಷ ತಯ್ಯಿಪ್‌ ಎರ್ಡೊಗನ್‌ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಉಲ್ಲೇಖಿಸಿ, ಈ ವರ್ಷದ ಆರಂಭದಲ್ಲಿ ನಡೆದ ಸಂಘರ್ಷದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದಿಂದ ತಮ್ಮ ರಾಷ್ಟ್ರವು ತೃಪ್ತಿಗೊಂಡಿದೆ ಎಂದು ಹೇಳಿದರು.

ಭಯೋತ್ಪಾದನೆ ನಿಗ್ರಹದ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಹಕಾರವನ್ನು ನೋಡುವುದು ಮುಖ್ಯ ಎಂದು ಅವರು ಹೇಳಿದರು. ಕಾಶ್ಮೀರದ ನಮ್ಮ ಸಹೋದರ ಸಹೋದರಿಯರಿಗೆ ಉತ್ತಮವಾಗುವಂತೆ ವಿಶ್ವಸಂಸ್ಥೆಯ ನಿರ್ಣಯಗಳ ಆಧಾರದ ಮೇಲೆ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಬೇಕು, ಮಾತುಕತೆಯ ಮೂಲಕ ನಾವು ಆಶಿಸುತ್ತೇವೆ ಎಂದು ಅವರು ಹೇಳಿದರು.

ದಕ್ಷಿಣ ಏಷ್ಯಾದಲ್ಲಿ, ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ಅತ್ಯಂತ ಮುಖ್ಯವೆಂದು ನಾವು ಪರಿಗಣಿಸುತ್ತೇವೆ. ಕಳೆದ ಏಪ್ರಿಲ್‌ನಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಉದ್ವಿಗ್ನತೆಯ ನಂತರ ಸಾಧಿಸಲಾದ ಕದನ ವಿರಾಮದಿಂದ ನಾವು ಸಂತೋಷಪಟ್ಟಿದ್ದೇವೆ, ಈ ಉದ್ವಿಗ್ನತೆಯು ಸಂಘರ್ಷಕ್ಕೆ ಕಾರಣವಾಯಿತು ಎಂದು ಎರ್ಡೊಗನ್‌ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80 ನೇ ಅಧಿವೇಶನದಲ್ಲಿ ಸಾಮಾನ್ಯ ಚರ್ಚೆಯಲ್ಲಿ ತಮ್ಮ ಭಾಷಣದಲ್ಲಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ, ಟರ್ಕಿಯ ನಾಯಕ ಉನ್ನತ ಮಟ್ಟದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕಾಶ್ಮೀರದ ವಿಷಯವನ್ನು ಉಲ್ಲೇಖಿಸಿದ್ದಾರೆ.26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತವು ಮೇ 7 ರಂದು ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್‌ ಸಿಂಧೂರ್‌ ಅನ್ನು ಪ್ರಾರಂಭಿಸಿತು. ಈ ದಾಳಿಗಳು ನಾಲ್ಕು ದಿನಗಳ ತೀವ್ರ ಘರ್ಷಣೆಗಳಿಗೆ ಕಾರಣವಾಯಿತು, ಇದು ಮೇ 10 ರಂದು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದದೊಂದಿಗೆ ಕೊನೆಗೊಂಡಿತು.

ಹಣಕಾಸು ಸಲಹೆ ಕುರಿತ ನಕಲಿ ವಿಡಿಯೋಗಳು ನನ್ನದಲ್ಲ : ರಫೇಲ್‌ ನಡಾಲ್‌

ಮ್ಯಾಡ್ರಿಡ್‌, ಸೆ.24- ನಾನು ಹಣಕಾಸು ಸಲಹೆ ನೀಡುತ್ತಿರುವಂತೆ ಹರಿದಾಡುತ್ತಿರುವ ಆನ್‌ಲೈನ್‌ ವಿಡಿಯೋಗಳು ನಕಲಿಯಾಗಿವೆ. ಇವು ಕೃತಕ ಬುದ್ಧಿಮತ್ತೆ (ಎಐ)ಯಿಂದ ಸೃಷ್ಟಿಗೊಂಡಂಥವೇ ಹೊರತು ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಟೆನ್ನಿಸ್‌‍ ದಿಗ್ಗಜ ರಫೇಲ್‌ ನಡಾಲ್‌ ಸ್ಪಷ್ಟಪಡಿಸಿದ್ದಾರೆ.

ನಾನು ಈ ರೀತಿಯ ಯಾವುದೇ ಆನ್‌ಲೈನ್‌ ಸಂದೇಶ ಕಳುಹಿಸಿಲ್ಲ ಎಂದು ನಿವೃತ್ತ ಟೆನ್ನಿಸ್‌‍ ದಂತಕಥೆ ನಡಾಲ್‌ ಹೇಳಿದ್ದಾರೆ.ನಾನು ಈ ಎಚ್ಚರಿಕೆಯ ಸಂದೇಶವನ್ನು ಹಂಚಿಕೊಳ್ಳಬೇಕಾಗಿದೆ. ಇದು ನನ್ನ ಸಾಮಾಜಿಕ ಜಾಲತಾಣಕ್ಕೆ ಅಸಹಜ. ಆದರೆ ಅತ್ಯವಶ್ಯಕವಾಗಿದೆ ಎಂದು ಅವರು ಲಿಂಕೆಡಿನ್‌ನಲ್ಲಿ ಬರೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾನು ಮತ್ತು ನನ್ನ ತಂಡ ಕೆಲವು ಜಾಲತಾಣದ ವೇದಿಕೆಗಳಲ್ಲಿ ನಕಲಿ ವಿಡಿಯೋಗಳು ಪ್ರಸಾರವಾಗುತ್ತಿರುವುದನ್ನು ಪತ್ತೆ ಹಚ್ಚಿದ್ದೇವೆ. ಇವು ಎಐನ ಸೃಷ್ಟಿಯಾಗಿದೆ. ಈ ವಿಡಿಯೋಗಳಲ್ಲಿ ನಾನು ಹಣ ಹೂಡಿಕೆ ಮಾಡುವ ಪ್ರಸ್ತಾವನೆಗಳನ್ನು ಮತ್ತು ಸಲಹೆಗಳನ್ನು ನೀಡುತ್ತಿರುವುದಾಗಿ ತಪ್ಪಾಗಿ ತೋರಿಸಲಾಗಿದೆ. ಇವ್ಯಾವುವೂ ನನ್ನಿಂದ ಪ್ರಕಟಗೊಂಡಿಲ್ಲ ಎಂದು ನಡಾಲ್‌ ವಿವರಿಸಿದ್ದಾರೆ.

ಇವು ಹಾದಿ ತಪ್ಪಿಸುವ ಜಾಹಿರಾತುಗಳಾಗಿದ್ದು ಇದಕ್ಕೂ ನನಗೂ ಅರ್ಥಾರ್ಥಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.ಆವಿಷ್ಕಾರವು ಜನತೆಗೆ ಸೇವೆ ಸಲ್ಲಿಸುವಾಗ ಯಾವಾಗಲೂ ಸಕಾರಾತಕವಾಗಿರುತ್ತದೆ. ಆದರೆ ತಂತ್ರಜ್ಞಾನದ ದುರ್ಬಳಕೆ ಬಗ್ಗೆ ನಾವು ಜಾಗ್ರತೆಯಿಂದಿರಬೇಕು.

ಕೃತಕ ಬುದ್ಧಿಮತ್ತೆಯು ಶಿಕ್ಷಣ, ವೈದ್ಯಕೀಯ, ಕ್ರೀಡೆಗಳು ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ತರುವ ಅಗಾಧ ಸಾಮರ್ಥ್ಯ ಹೊಂದಿದೆ. ಹೀಗಿದ್ದರೂ ಅದನ್ನು ತಪ್ಪು ವಿಚಾರಗಳಿಂದ ದುರ್ಬಳಕೆ ಸಹ ಮಾಡಬಹುದಾಗಿದೆ. ಈ ರೀತಿಯ ಸುಳ್ಳು ಪ್ರಚಾರಗಳು ಗೊಂದಲವನ್ನುಂಟು ಮಾಡಿ ಜನರನ್ನು ವಂಚಿಸುತ್ತವೆ ಎಂದು ನಡಾಲ್‌ ಎಚ್ಚರಿಸಿದ್ದಾರೆ.

ಜಂಬೂ ಸವಾರಿ ವೀಕ್ಷಣೆ ಆಸನ ಸಾಮರ್ಥ್ಯ 65 ಸಾವಿರದಿಂದ ರಿಂದ 40 ಸಾವಿರಕ್ಕೆ ಇಳಿಕೆ

ಮೈಸೂರು,ಸೆ.24- ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಜನರ ಸುರಕ್ಷತೆಯ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆಯ ಆಸನ ಸಾಮರ್ಥ್ಯವನ್ನು 65 ಸಾವಿರದಿಂದ 40 ಸಾವರಕ್ಕೆ ಇಳಿಸಲು ನಿರ್ಧರಿಸಿದೆ.

ಅ.2 ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಗೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಬಾರಿ ಆಸನಗಳ ಸಾಮರ್ಥ್ಯವನ್ನು ಇಳಕೆ ಮಾಡಿದೆ.

ಕನಿಷ್ಟ 25 ಸಾವಿರ ಆಸನಗಳನ್ನು ಕಡಿಮೆ ಮಾಡಲಾಗುವುದು. ದೊಡ್ಡ ಸಭೆಗಳನ್ನು ನಿರ್ವಹಿಸುವ ಬಗ್ಗೆ ಜಾಗೃತರಾಗಲು ಪಾಸ್‌‍ಗಳ ಸಂಖ್ಯೆಯನ್ನು ಕೂಡ ಕಡಿಮೆ ಮುದ್ರಿಸಲಾಗಿದೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ ಅವರು ಅಧಿಕಾರಿಗಳು ಮತ್ತು ದಸರಾ ಸಮಿತಿಯ ಸಭೆ ನಡೆಸಿ ದಸರಾ ಸುರಕ್ಷತಾ ಕ್ರಮ ಹಾಗೂ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ಕಳೆದ ವರ್ಷ 60 ಸಾವಿರ ಆಸನ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಈ ಬಾರಿ 40 ಸಾವಿರ ಆಸನಗಳನ್ನು ಹಾಕಲು ನಿರ್ಧರಿಸಲಾಗಿದೆ.ಜಂಬೂ ಸವಾರಿಗೆ ಹೆಚ್ಚು ಜನರು ಆಗಮಿಸುತ್ತಾರೆ. ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ವೀಕ್ಷಿಸಲು ದೇಶ-ವಿದೇಶದಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ಪ್ರತಿ ವರ್ಷ ಪಾಸ್‌‍ಗಳ ಅವ್ಯವಸ್ಥೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಪಾಸ್‌‍ಗಳನ್ನು ಮುದ್ರಿಸಲಾಗುತ್ತದೆ ಎಂಬ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ವರ್ಷ ಉಪಸಮಿತಿಯು ಆಸನ ಲಭ್ಯತೆ ಇರುವಷ್ಟು ಮಾತ್ರ ಪಾಸ್‌‍ಗಳನ್ನು ಮುದ್ರಿಸಲು ನಿರ್ಧರಿಸಿದೆ.

ಜಾತಿ ಗಣತಿಯಲ್ಲಿ ಯಾವುದೇ ಗೊಂದಲ, ಸಮಸ್ಯೆಗಳಿಲ್ಲ ; ಸಚಿವ ಮಧು ಬಂಗಾರಪ್ಪ

ಮೈಸೂರು,ಸೆ.24– ಜಾತಿ ಗಣತಿಯಲ್ಲಿ ಯಾವುದೇ ಗೊಂದಲ, ಸಮಸ್ಯೆಗಳಿಲ್ಲ. ಆದರೆ ಬಿಜೆಪಿಯವರು ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2025 ರ ಅಂಗವಾಗಿ ಕಲಾಮಂದಿರದಲ್ಲಿ ಆಯೋಜಿಸಿರುವ ಮಕ್ಕಳ ದಸರಾವನ್ನು ದೀಪ ಬೆಳಗುವ ಮೂಲಕ ಸಚಿವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಾವು ಮಾಡುತ್ತಿರುವುದು ಜಾತಿ ಗಣತಿಯಲ್ಲ. ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. ಜನ ಯಾವ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಕೊಳ್ಳಬೇಕಲ್ವಾ.

ಅದಕ್ಕಾಗಿ ಈ ಸಮೀಕ್ಷೆ ನಡೆಯುತ್ತಿದೆ. ನಿನ್ನೆಯಿಂದಷ್ಟೇ ಆರಂಭವಾಗಿದೆ. ಎಲ್ಲಿಯೂ ಏನು ಸಮಸ್ಯೆ ಉಂಟಾಗಿಲ್ಲ. ಖುದ್ದು ನಾನೇ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎಲ್ಲಾ ಕಡೆಯೂ ಚೆನ್ನಾಗಿ ನಡೆಯುತ್ತಿದೆ. ಬಿಜೆಪಿಯವರು ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜಾತಿ ಗಣತಿ ಮಾಡುತ್ತಿರುವುದು ಕೇಂದ್ರ ಸರ್ಕಾರ ಎಂದರು.

ಕೇಂದ್ರದಿಂದ ಜಿಎಸ್‌‍ಟಿ ಪರಿಷ್ಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಈಗ ಎಲ್ಲರಿಗೂ ಜಿಎಸ್‌‍ಟಿ ಲಡ್ಡು ತಿನ್ನಿಸುತ್ತಿದೆ. ಜಿಎಸ್‌‍ಟಿ ಹೊಸ ನೀತಿಯಿಂದ ದೊಡ್ಡ ಬದಲಾವಣೆ ಆಗುತ್ತಿಲ್ಲ. ಜಿಎಸ್‌‍ಟಿ ಹೊರೆ ಕಮಿ ವಿಚಾರವನ್ನು ನೋಡುವುದಾದರೆ ರಾಜ್ಯದ ಮಟ್ಟಿಗೆ ತಲಾ 57 ರೂ ಅಷ್ಟೇ. ಆದರೆ ಸಿದ್ದರಾಮಯ್ಯ ನವರು ಪ್ರತಿ ತಿಂಗಳು 2 ಸಾವಿರ ಕೊಡುತ್ತಿದ್ದಾರೆ. 200 ಯುನಿಟ್‌ ವಿದ್ಯುತ್‌ ನೀಡಿ ಮನೆ ಬೆಳಗುತ್ತಿದ್ದಾರೆ.

ಜಿಎಸ್‌‍ಟಿ ಪಾಲು ರಾಜ್ಯಕ್ಕೆಷ್ಟು ಕಡಿಮೆ ಸಿಗುತ್ತಿದೆ ಎಂದು ಚಿಂತನೆ ಮಾಡಬೇಕು. ಇದರ ಬಗ್ಗೆ ನಮ ಸಂಸದರು ಧ್ವನಿ ಎತ್ತದೆ ಇರುವುದು ಬೇಸರ ತಂದಿದೆ. ಜಿಎಸ್‌‍ಟಿ ಲಡ್ಡು ಕೇವಲ ಬಿಜೆಪಿಗರಿಗಷ್ಟೇ ಸಿಹಿಯಾಗಿದೆ. ಆದರೆ ರಾಜ್ಯದ ಜನರಿಗೆ ಕಹಿಯಾಗಿದೆ ಎಂದರು.ಇದೇ ವೇಳೆ ಎಂ.ಎಲ್‌.ಸಿ ಎನ್‌.ಮಂಜೇಗೌಡ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಮಹಿಷಾ ದಸರಾ ಆಚರಣೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ

ಮೈಸೂರು,ಸೆ.24– ನಗರದಲ್ಲಿಂದು ಮಹಿಷಾ ದಸರಾ ಆಚರಣೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ನಾಳೆ ಬೆಳಿಗ್ಗೆ 6 ಗಂಟೆವರೆಗೆ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಯ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದ ಎಂದು ನಗರ ಪೊಲೀಸ್‌‍ ಆಯುಕ್ತರಾದ ಸೀಮಾ ಲಟ್ಕರ್‌ ಆದೇಶ ಹೊರಡಿಸಿದ್ದಾರೆ.

ಮಹಿಷಾ ದಸರಾ ಆಚರಣೆ ಮಾಡುವ ಸಂಘಟಕರು ಇಂದು ಪುರಭವನದ ಬಳಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಬೆಟ್ಟದ ಮೇಲಿರುವ ಮಹಿಷಾಸುರ ಪ್ರತಿಮೆಗೂ ಸಹ ಮಾಲಾರ್ಪಣೆ ಮಾಡಲಾಗುವುದು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಕೆಲ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸುವ ಸಾಧ್ಯತೆಯಿದ್ದು, ಮಹಿಷಾ ದಸರಾ ಆಚರಣೆ ವಿಚಾರದಲ್ಲಿ ಪರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ನಾಳೆ ಬೆಳಿಗ್ಗೆ 6 ಗಂಟೆವರೆಗೆ ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ತಿಳಿಸಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2025)

ನಿತ್ಯ ನೀತಿ : ಮಾನವನು ನಿಜವಾದ ಜ್ಞಾನದಿಂದ ವಂಚಿತನಾಗಿರುವುದು ಸಹಜ. ಏಕೆಂದರೆ, ಅವನನ್ನು ಅಜ್ಞಾನವು ಸದಾ ಕಾಲ ಸುತ್ತುವರಿದಿರುತ್ತದೆ.

ಪಂಚಾಂಗ : ಬುಧವಾರ, 24-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ತೃತೀಯಾ / ನಕ್ಷತ್ರ: ಚಿತ್ರಾ / ಯೋಗ: ಐಂದ್ರ / ಕರಣ: ತೈತಿಲ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.15
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ -10.30-12.00

ರಾಶಿಭವಿಷ್ಯ :
ಮೇಷ
: ನೀವು ಮಾಡುವ ತಪ್ಪಿನಿಂದಾಗಿ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಕಲಿಯಬೇಕಾಗುತ್ತದೆ.
ವೃಷಭ: ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಲು ಶ್ರಮ ಪಡಬೇಕಾದೀತು. ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು.
ಮಿಥುನ:ಹಿತವಾದ ಮಾತುಗಳಿಂದ ಸಂಗಾತಿ ಅಥವಾ ಪ್ರೀತಿಪಾತ್ರರನ್ನು ಮೆಚ್ಚಿಸಲು ಪ್ರಯತ್ನಿಸುವಿರಿ.

ಕಟಕ: ಮಕ್ಕಳ ವಿದ್ಯಾಭ್ಯಾಸ ಅಥವಾ ವಿವಾಹದ ವಿಚಾರವಾಗಿ ಅನವಶ್ಯಕ ವಾದ ಮಾಡದಿರಿ.
ಸಿಂಹ: ನಿಮ್ಮ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇಂದು ಸಾಧ್ಯವಾಗುತ್ತದೆ.
ಕನ್ಯಾ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.

ತುಲಾ: ವ್ಯಾಪಾರ ಕ್ಷೇತ್ರದಲ್ಲಿ ಹೊಸ ಮಿತ್ರರು ಸಿಗುವರು.
ವೃಶ್ಚಿಕ: ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.
ಧನುಸ್ಸು: ಉದ್ಯಮಿಗಳು ತಮ್ಮ ಸಹೋದ್ಯೋಗಿ ಗಳೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಿ.

ಮಕರ: ಸಹೋದ್ಯೋಗಿಗಳು ಗೌರವಾನ್ವಿತವಾಗಿ ವರ್ತಿಸುವುದರಿಮದ ಕೆಲಸ ಸರಾಗವಾಗಿ ಸಾಗಲಿದೆ.
ಕುಂಭ: ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ.
ಮೀನ: ಒಡಹುಟ್ಟಿದವ ರೊಂದಿಗಿನ ಸಂಬಂಧ ಸುಧಾ ರಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.

ಸೆ 26 ರಿಂದ 5 ದಿನಗಳ ಕಾಲ ಕೆಆರ್‌ಎಸ್‌ನಲ್ಲಿ “ಕಾವೇರಿ ಆರತಿ”

ಬೆಂಗಳೂರು: ಕನ್ನಡ ನಾಡಿನ ಜೀವನದಿ “ಕಾವೇರಿ ಆರತಿ” ಎಂಬ ಐದು ದಿನಗಳ ಭವ್ಯ ಕಾರ್ಯಕ್ರಮವು ಕೆಆರ್ ಎಸ್ ನಲ್ಲಿ ಸೆಪ್ಟೆಂಬರ್ 26 ರಿಂದ ಆಯೋಜನೆಯಾಗಿದೆ.

ಶುಕ್ರವಾರ ಸಾಯಂಕಾಲ 5 ಗಂಟೆಗೆ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಜಲ‌ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ “ಕಾವೇರಿ ಆರತಿ” ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವರಿ ಸಚಿವ ಎನ್. ಚೆಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠಾಧ್ಯಕ್ಷರಾದ ಶ್ರೀ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ, ಮಂಡ್ಯ ಜಿಲ್ಲೆಯ ಶಾಸಕರುಗಳಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ಕೆ.ಎನ್.ಉದಯ್, ದರ್ಶನ್ ಪುಟ್ಟಣ್ಣಯ್ಯ, ಮಧು ಮಾದೇಗೌಡ, ದಿನೇಶ್ ಗೂಳಿಗೌಡ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ನೀರಾವರಿ ನಿಗಮದ ಅಧಿಕಾರಿಗಳು ಪಾಲ್ಗೊಳ್ಳುವರು.

ಹಿನ್ನೆಲೆ:
ಕೊಡಗಿನಲ್ಲಿ ಹುಟ್ಟಿ, ಕೃಷ್ಣರಾಜ ಸಾಗರದಲ್ಲಿ ನಿಂತು ಮಂಡ್ಯ, ಮೈಸೂರು, ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಡಿಯುವ ನೀರು, ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿರುವ ಕಾವೇರಿ ನದಿ, ತಮಿಳುನಾಡಿನ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೇಸಾಯ ಹಾಗೂ ಕುಡಿಯುವ ನೀರಿಗೆ ಕಾರಣೀಭೂತವಾಗಿ ಪಾಂಡಿಚೇರಿ ಮುಖಾಂತರ ಅರಬ್ಬಿ ಸಮುದ್ರದಲ್ಲಿ ಲೀನವಾಗುತ್ತದೆ.

ಗಂಗೆಯಷ್ಟೇ ಪಾವಿತ್ರ್ಯ ಹೊಂದಿರುವ ಕಾವೇರಿ ನದಿಗೆ ಕಾವೇರಿ ಆರತಿ ಮಾಡಿ ಭಕ್ತಿ ಭಾವದಿಂದ ನಮಿಸಿ ಪೂಜಿಸಬೇಕೆಂಬುದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಕನಸಾಗಿತ್ತು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2024ರಲ್ಲಿ ಕೆಆರ್ ಎಸ್ ನಲ್ಲಿ ಕಾವೇರಿಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಡಿಸಿಎಂ ಅವರು ಈ ವಿಷಯವನ್ನು ಘೋಷಣೆ ಮಾಡಿದ್ದರು‌. ಅದರಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರ ನೇತೃತ್ವದ ಶಾಸಕರ ನಿಯೋಗ ವಾರಣಾಸಿ ಮತ್ತು ಹರಿದ್ವಾರಕ್ಕೆ ಭೇಟಿ ನೀಡಿ ಗಂಗಾರತಿಯನ್ನು ವೀಕ್ಷಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಆ ಪ್ರಕಾರ ಸರ್ಕಾರ ಕಾವೇರಿ ಆರತಿ ಮಾಡಲು ತೀರ್ಮಾನಿಸಿ, ಸುಮಾರು 10 ಸಾವಿರ ಜನರು ಭವ್ಯ ಕಾರ್ಯಕ್ರಮ ವೀಕ್ಷಣೆ ಮಾಡಬಹುದಾದ ಬೃಹತ್ ಸ್ಟೇಡಿಯಂ ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿತು.

ಈ ಬಾರಿಯ ದಸರಾದಲ್ಲಿ ಸಾಂಕೇತಿಕವಾಗಿ 5 ದಿನಗಳ ಕಾಲ ಕೆಆರ್ ಎಸ್ ನಲ್ಲಿ ಕಾವೇರಿ ತಾಯಿಗೆ ಆರತಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಮಳೆ, ಬೆಳೆ ಒಳ್ಳೆಯದಾಗಲಿ, ರಾಜ್ಯಕ್ಕೆ ಸನ್ಮಂಗಳವಾಗಲಿ ಎಂದು ತಾಯಿ ಕಾವೇರಿಯಲ್ಲಿ ಪೂಜೆ ಮಾಡಿ ಪ್ರಾರ್ಥಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.

ಕಾವೇರಿ ಆರತಿಯ ವಿಧಿ ವಿಧಾನಗಳು
*13 ಜನರಿಂದ ಆರತಿ. ಅವರಿಗೆ ತಲಾ ಇಬ್ಬರು ಸಹಾಯಕರು ಸೇರಿ ಒಟ್ಟು 40 ಜನರ ತಂಡ ಪೂಜೆಯಲ್ಲಿ ಭಾಗಿ.
*ಮೊದಲು “ವಾತಾಪಿ ಗಣಪತಿಂ ಭಜೆ” ಮಂಗಳವಾದ್ಯದಿಂದ ಪೂಜೆ ಪ್ರಾರಂಭ.
*ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ, ಸಂಕಲ್ಪ.‌
*ಕಾವೇರಿ ಸ್ತೊತ್ರದ ಮೂಲಕ ತೀರ್ಥಕ್ಕೆ ಪೂಜೆ, ಬಾಗಿನ ಅರ್ಪಣೆ.
*ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆ.
*ಮೂರು ದಿಕ್ಕಿಗೂ ಶಂಖನಾದ, ದೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣ
*ಕೊನೆಯಲ್ಲಿ ಕುಂಭಾರತಿ, ನಾಗಾರತಿ, ಕಾವೇರಿ ಆರತಿಯೊಂದಿಗೆ ಪೂಜಾ ಕೈಂಕರ್ಯ ಸಂಪನ್ನ..