Home Blog Page 89

ಗುಂಡಿಗಳಿವೆ ಎನ್ನುವವರು ಮೋದಿ ನಿವಾಸದ ಮುಂದೆ ಹೋಗಿ ನೋಡಲಿ : ಡಿಕೆಶಿ

ಬೆಂಗಳೂರು, ಸೆ.23- ರಾಜಧಾನಿ ಬೆಂಗಳೂರಿನಲ್ಲಿರುವ ರಸ್ತೆಗುಂಡಿಗಳನ್ನು ವೈಭವೀಕರಿಸುವವರು ಒಮೆ ದೆಹಲಿಗೆ ಹೋಗಿ ನೋಡಲಿ. ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮನೆಯ ರಸ್ತೆಯಲ್ಲಿ ಎಷ್ಟು ಗುಂಡಿಗಳು ಇವೆ ಎಂಬುದನ್ನು ಎಣಿಸಲಿ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನಾವು ನಮ ಕರ್ತವ್ಯವನ್ನು ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಮಳೆಯ ನಡುವೆಯೂ ದಿನವೊಂದಕ್ಕೆ ಪ್ರತಿಯೊಂದು ಪಾಲಿಕೆ ವ್ಯಾಪ್ತಿಯಲ್ಲಿ 200 ರಂತೆ ಒಂದು ಸಾವಿರ ರಸೆ್ತಗುಂಡಿಗಳನ್ನು ಮುಚ್ಚುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಷ್ಟೇ ಗುಂಡಿಗಳಿಲ್ಲ, ದೇಶಾದ್ಯಂತ ಇದು ಸಾಮಾನ್ಯ. ಬೇರೆ ಬೇರೆ ರಾಜ್ಯಗಳಲ್ಲೂ ಈ ಸಮಸ್ಯೆಯಿದೆ. ಅಷ್ಟೇ ಏಕೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ವ್ಯಾಪಕವಾದ ಗುಂಡಿಗಳಿವೆ ಎಂದು ಹೇಳಿದರು.

ಮಾಧ್ಯಮಗಳು ಹಾಗೂ ದೊಡ್ಡ ದೊಡ್ಡ ಐಟಿ ಕಂಪನಿಗಳು ಬೆಂಗಳೂರಿನಲ್ಲೇ ಗುಂಡಿಗಳಿವೆಯೆಂಬಂತೆ ವೈಭವೀಕರಿಸಿ ಕೆಟ್ಟ ಹೆಸರು ತರುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಲಿ ಎಂದು ಸಲಹೆ ನೀಡಿದರು.

ವಿರೋಧ ಪಕ್ಷ ಬಿಜೆಪಿಯವರು ಇದನ್ನೇ ದೊಡ್ಡದು ಮಾಡಿ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ, ಈಗ ಸಮಸ್ಯೆ ಏಕೆ ಬರುತ್ತಿತ್ತು? ಚುನಾವಣೆ ಹತ್ತಿರ ಇದೆ ಎಂಬ ಕಾರಣಕ್ಕೆ ರಾಜಕೀಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಹಾರದ ಪಾಟ್ನಾದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್‌‍ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಲು ತಾವು ಇಂದು ಬಿಹಾರಕ್ಕೆ ತೆರಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ ಆಗಮಿಸಲಿದ್ದಾರೆ. ಕಾರ್ಯಕಾರಿ ಸಭೆ ಮುಗಿಸಿಕೊಂಡು ನಾಳೆ ನಾವು ವಾಪಸ್‌‍ ಬರುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಬುರುಡೆ ಗ್ಯಾಂಗ್‌ಗೆ ಹಣಕಾಸು ಸಹಾಯ ಮಾಡಿದ್ದ 11 ಮಂದಿಗೆ ನೋಟೀಸ್‌‍

ಬೆಳ್ತಂಗಡಿ,ಸೆ.23- ಎಸ್‌‍ಐಟಿ ತನಿಖೆಯನ್ನು ಚುರುಕುಗೊಳಿಸಿದ್ದು, ಬುರುಡೆ ಗ್ಯಾಂಗ್‌ಗೆ ಹಣಕಾಸು ಸಹಾಯ ಮಾಡಿದ್ದ 11 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿದೆ.

ಪ್ರಮುಖವಾಗಿ ಚಿನ್ನಯ್ಯ ಹಾಗೂ ಪತ್ನಿಯ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿದವರ ಬಗ್ಗೆ ಎಸ್‌‍ಐಟಿ ಮಾಹಿತಿ ಕಲೆ ಹಾಕಿದ್ದಲ್ಲದೇ ಆತನ ಕುಟುಂಬದ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಯ ಮಾಹಿತಿಗಳನ್ನು ಪಡೆದು ಪರಿಶೀಲಿಸುತ್ತಿದೆ. ಮಹಿಳೆಯರ ಖಾತೆಯಿಂದಲೂ ಚಿನ್ನಯ್ಯನ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆಯಾಗಿರುವುದು ಎಸ್‌‍ಐಟಿ ತನಿಖೆಯಲ್ಲಿ ಬಯಲಾಗಿದೆ.

ಬುರುಡೆ ಪ್ರಕರಣದಲ್ಲಿ ಶಾಮೀಲಾಗಿರುವ ಕಾಣದ ಕೈಗಳ ಪತ್ತೆ ಬಗ್ಗೆ ಎಸ್‌‍ಐಟಿ ತನಿಖೆ ನಡೆಸುತ್ತಿದ್ದು ಮಹತ್ವದ ಬೆಳವಣಿಗೆ ಸಾಧಿಸಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರು ಸೇರಿದಂತೆ 11 ಜನರಿಗೆ ಎಸ್‌‍ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿದ್ದು, ಈಗಾಗಲೇ 6 ಮಂದಿಯನ್ನು ವಿಚಾರಣೆ ನಡೆಸಿದ್ದಾರೆ.

ಕಳೆದ ಒಂದು ವರ್ಷದಿಂದ ಹಣ ವರ್ಗಾವಣೆ ಆಗಿರುವ ಬಗ್ಗೆಯೂ ಎಸ್‌‍ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ತನಿಖೆ ಆಳಕ್ಕೆ ಇಳಿಯುತ್ತಿದ್ದಂತೆ ಪ್ರಕರಣದಲ್ಲಿ ಇನ್ನಷ್ಟು ಮಂದಿ ಹಣಕಾಸಿನ ನೆರವು ನೀಡಿರುವ ಬಗ್ಗೆಯೂ ಮಾಹಿತಿ ಸಿಕ್ಕಿದ್ದು, ಅವರಿಗೂ ಎಸ್‌‍ಐಟಿ ನೋಟಿಸ್‌‍ ನೀಡುವ ಸಾಧ್ಯತೆಗಳಿವೆ.ಈಗಾಗಲೇ ಷಡ್ಯಂತ್ರದ ಬಗ್ಗೆ ಹಲವರ ಪಾತ್ರದ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ.

ವಿಲಾಸಿ ಜೀವನಕ್ಕಾಗಿ 13 ದೇವಸ್ಥಾನಗಳಿಗೆ ಕನ್ನ ಹಾಕುತ್ತಿದ್ದವರ ಬಂಧನ : 14 ಲಕ್ಷ ಮೌಲ್ಯದ ದೇವರ ಆಭರಣ ಜಪ್ತಿ

ಬೆಂಗಳೂರು,ಸೆ.23-ವಿಲಾಸಿ ಜೀವನ ನಡೆಸಲು ಅರ್ಚಕನಂತೆ ದೇವರ ಗರ್ಭಗುಡಿಗೆ ಪ್ರವೇಶಿಸಿ ದೇವರ ವಿಗ್ರಹಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ, 14 ಲಕ್ಷ ಮೌಲ್ಯದ 5ಕೆಜಿ ಬೆಳ್ಳಿ ವಸ್ತುಗಳು , 67 ಗ್ರಾಂ ಚಿನ್ನಾಭರಣ ಹಾಗೂ ಹಿತ್ತಾಳೆ,ತಾಮ್ರದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗದ ಸಂತೋಷ್‌ ಅಲಿಯಾಸ್‌‍ ಕೆಜಿಎಫ್‌ (31) ಮತ್ತು ಹೆಬ್ಬಗೋಡಿಯ ಪ್ರವೀಣ್‌ಭಟ್‌ (51) ಬಂಧಿತ ಆರೋಪಿಗಳು. ಈ ಇಬ್ಬರು ದ್ವಿಚಕ್ರ ವಾಹನ ಕಳ್ಳತನ ಮಾಡಿ ಆ ವಾಹನದಲ್ಲೇ ವಿವಿಧ ದೇವಸ್ಥಾನಗಳಿಗೆ ಸುತ್ತಾಡಿ ಕಳ್ಳತನ ಮಾಡುತ್ತಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಬನಶಂಕರಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಸಿದ್ದಿ ಮಹಾಗಣಪತಿ ದೇವಸ್ಥಾನಕ್ಕೆ ಅರ್ಚಕನ ವೇಷದಲ್ಲಿ ಗರ್ಭಗುಡಿಗೆ ಹೋದ ವ್ಯಕ್ತಿ ದೇವರ ಮೈ ಮೇಲೆ ಇದ್ದ ಆಭರಣಗಳು, ದೀಪಾಲೆ ಕಂಬಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು.

ಈ ಬಗ್ಗೆ ದೇವಸ್ಥಾನದ ಅಧ್ಯಕ್ಷರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ಮಾಹಿತಿಯನ್ನು ಕಲೆಹಾಕಿ ಗೊಟ್ಟಿಗೆರೆ ಬಳಿ ದ್ವಿಚಕ್ರ ವಾಹನ ಸಮೇತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಸಿದಾಗ ದೇವಸ್ಥಾನದಲ್ಲಿ ಕಳ್ಳತನ ಮಾಡಿರು ವುದಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ, ವಿಲಾಸಿ ಜೀವನ ನಡೆಸಲು ನಗರದ ವಿವಿಧ ದೇವಸ್ಥಾನಗಳ ಬೀಗ ಮುರಿದು ದೇವರ ಮೂರ್ತಿಗೆ ತೊಡಿಸಿದ್ದ ಚಿನ್ನ, ಬೆಳ್ಳಿ ವಸ್ತುಗಳು ಹಾಗೂ ಹುಂಡಿ ಹಣ ಕಳವು ಮಾಡಿರುವುದಾಗಿ ಹೇಳಿದ್ದಾರೆ.

ಆರೋಪಿಗಳಿಬ್ಬರಿಂದ ಸುಮಾರು 14 ಲಕ್ಷ ಮೌಲ್ಯದ 5 ಕೆಜಿ ಬೆಳ್ಳಿ ವಸ್ತುಗಳು, 67 ಗ್ರಾಂ ಚಿನ್ನಾಭರಣ, 1.426 ಕೆಜಿ ಹಿತ್ತಾಳೆ ವಸ್ತುಗಳು ಹಾಗೂ 353 ಗ್ರಾಂ ತಾಮ್ರದ ವಸ್ತುಗಳು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ಕೊಟ್ರೇಶಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ. ಆರೋಪಿಗಳಿಬ್ಬರ ಬಂಧನದಿಂದ ಬನಶಂಕರಿ ಪೊಲೀಸ್‌‍ಠಾಣೆಯ ಎರಡು ದೇವಸ್ಥಾನ ಕಳವು ಪ್ರಕರಣಗಳು, ಜಯನಗರ, ಸುಬ್ರಹಣ್ಯಪುರ,ಕುಮಾರಸ್ವಾಮಿ ಲೇಔಟ್‌, ರಾಜರಾಜೇಶ್ವರಿ ಠಾಣೆ, ಕಾಡುಗೊಂಡನಹಳ್ಳಿ, ಕೆಂಗೇರಿ, ಸಂಪಿಗೆ ಹಳ್ಳಿ, ತಲಘಟ್ಟಪುರ, ಜಿಗಣಿ ಪೊಲೀಸ್‌‍ ಠಾಣೆಯ ತಲಾ ಒಂದು ದೇವಸ್ಥಾನ ಕಳವು ಪ್ರಕರಣಗಳು ಹಾಗೂ ಗಿರಿನಗರ ಪೊಲೀಸ್‌‍ ಠಾಣೆಯ ಎರಡು ದೇವಸ್ಥಾನ ಕಳವು ಸೇರಿ ಒಟ್ಟು 13 ಪ್ರಕರಣಗಳು ಪತ್ತೆಯಾಗಿರುತ್ತವೆ.

ಮಲ್ಟಿಪ್ಲೆಕ್ಸ್ ಟಿಕೆಟ್‌ ದರ ನೀತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು,ಸೆ.23- ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಒಂದು ಟಿಕೆಟ್‌ನ ಬೆಲೆ 200 ರೂಪಾಯಿ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ.

ಕಾಯ್ದಿರಿಸಿದ ತೀರ್ಪನ್ನು ಪ್ರಕಟಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ರವಿ ಹೊಸಮನಿ ನೇತೃತ್ವದ ಪೀಠವು, ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಜೊತೆಗೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ಪರಭಾಷಾ ಸಿನಿಮಾಗಳ ಹಾವಳಿ, ಮಿತಿ ಮೀರಿದ ಟಿಕೆಟ್‌ ದರದ ವಿರುದ್ಧ ಇಡೀ ಇಂಡಸ್ಟ್ರಿ ಏಕರೂಪ ಟಿಕೆಟ್‌ ದರ ನಿಗದಿ ಮಾಡಬೇಕು ಎಂದು ದಶಕಗಳಿಂದ ಹೋರಾಟ ನಡೆದಿತ್ತು. ಹತ್ತಾರು ಬಾರಿ ಈ ವಿಚಾರವಾಗಿ ಚರ್ಚೆ, ವಾದ- ಪ್ರತಿವಾದಗಳು ನಡೆದಿದ್ದವು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಏಕರೂಪದ ಟಿಕೆಟ್‌ ದರ ನಿಗದಿ ಮಾಡಿತ್ತು. ಸೆಪ್ಟೆಂಬರ್‌ 12ರಿಂದ ಅನ್ವಯವಾಗುವಂತೆ ಜಾರಿಗೆ ತಂದಿದ್ದ ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025 ಅನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆಯಾದ ಮಲ್ಟಿಪ್ಲೆಕ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಹೈಕೋರ್ಟ್‌ ಮೊರೆ ಹೋಗಿತ್ತು.

ಮಲ್ಟಿಪ್ಲೆಕ್‌್ಸ ಅಸೋಸಿಯೇಷನ್‌ ಆಫ್‌ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್‌, ಪಿವಿಆರ್‌ ಐನಾಕ್‌್ಸ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್‌ ಎಂಟರ್ಟೈನೆಂಟ್‌, ವಿ ಕೆ ಫಿಲ್‌್ಸ ಮತ್ತು ಸಿನಿಪ್ಲೆಕ್‌್ಸ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ಭಾಗವಾಗಿ ಮಧ್ಯಂತರ ಕೋರಿಕೆಗೆ ಸಂಬಂಧಿಸಿದ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಲಯ ಪ್ರಕಟಿಸಿದೆ,

ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025ಕ್ಕೆ ತಡೆ ಕೋರಿರುವ ಮಧ್ಯಂತರ ಕೋರಿಕೆಯನ್ನು ಪುರಸ್ಕರಿಸಲಾಗಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಕಳೆದ ವಿಚಾರಣೆಯಲ್ಲಿ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್‌ ಆಫ್‌ ಇಂಡಿಯಾ ಪರ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ಸಿನಿಮಾ ವೀಕ್ಷಕರು ಮತ್ತು ಸಿನಿಮಾ ಪ್ರದರ್ಶಕರ ಆಯ್ಕೆಯ ಹಕ್ಕಿನ ವಿಚಾರ ಇಲ್ಲಿದೆ. ಈ ಹಿಂದೆ ಸರ್ಕಾರವು ಇಂಥದ್ದೇ ಆದೇಶವನ್ನು ಹಿಂಪಡೆದಿತ್ತು. ಈಗ ಮತ್ತದೇ ಆದೇಶವನ್ನು ಹೊರಡಿಸಲಾಗಿದೆ. 2017ರಲ್ಲಿ ರಾಜ್ಯ ಸರ್ಕಾರ ಇಂಥದ್ದೇ ಆದೇಶ ಮಾಡಿತ್ತು. ಈಗ ನಿಯಮಗಳಿಗೆ ತಿದ್ದುಪಡಿ ಮಾಡಿ ಸಿನಿಮಾ ದರ ನಿಗದಿಪಡಿಸಲಾಗಿದ್ದು, ಇತಿಹಾಸ ಮರುಕಳಿಸಿದೆ” ಎಂದಿದ್ದರು.

ಸಿನಿಮಾ ಹಾಲ್‌ಗಳನ್ನು ರೂಪಿಸಲು ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಇಂತಿಷ್ಟೇ ಸೀಟುಗಳಿಗೆ ಸೀಮಿತಗೊಳಿಸಿ ಅಗತ್ಯ ಸೌಲಭ್ಯಗಳೊಂದಿಗೆ ಸಿನಿಮಾ ಹಾಲ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಸರ್ಕಾರವು 200 ರೂಪಾಯಿ ಅಥವಾ ಇಂತಿಷ್ಟೇ ದರಕ್ಕೆ ಟಿಕೆಟ್‌ ಮಾರಾಟ ಮಾಡಬೇಕು ಎಂದು ಹೇಳಲಾಗದು. ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು-2025ರಡಿ ದರ ನಿಗದಿಯು ಕಾನೂನುಬಾಹಿರ ಕ್ರಮವಾಗಿದೆ ಎಂದಿದ್ದರು.

ಇತರೆ ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಉದಯ್‌ ಹೊಳ್ಳ, ಧ್ಯಾನ್‌ ಚಿನ್ನಪ್ಪ ಮತ್ತು ಡಿ ಆರ್‌ ರವಿಶಂಕರ್‌ ಅವರು ಯಾವುದೇ ದತ್ತಾಂಶ ಮತ್ತು ಕಾನೂನಿನ ನೆರವು ಇಲ್ಲದೇ ಸರ್ಕಾರವು ಟಿಕೆಟ್‌ ದರ ಮಿತಿ ಹೇರಿದೆ. ಇದು ಸ್ವೇಚ್ಛೆಯ ಕ್ರಮವಾಗಿದ್ದು, ಅರ್ಜಿದಾರರ ಹಕ್ಕನ್ನು ಕಸಿಯಲಾಗಿದೆ ಎಂದಿದ್ದರು.

13 ದಲಿತ ಕ್ರೈಸ್ತ ಜಾತಿಗಳ ಬಹಿರಂಗಕ್ಕೆ ಬಿಜೆಪಿ ಆಗ್ರಹ

ಬೆಂಗಳೂರು,ಸೆ.23- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಸಂದರ್ಭದಲ್ಲಿ ಹೊರಗಿಟ್ಟಿರುವ 13 ದಲಿತ ಕ್ರೈಸ್ತ ಜಾತಿಗಳ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಮನವಿ ಮಾಡಿದೆ.

ಈ ಸಂಬಂಧ ಶಾಶ್ವತ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧುಸೂದನ್‌ ನಾಯಕ್‌ ಅವರಿಗೆ ವಿಧಾನಪರಿಷತ್‌ನ ಮುಖ್ಯ ಸಚೇತಕ ಎನ್‌.ರವಿಕುಮಾರ್‌, ಉಪಾಧ್ಯಕ್ಷ ಎನ್‌.ಮಹೇಶ್‌, ಕಾರ್ಯದರ್ಶಿ ಶರಣು ತಳಿಕೇರಿ, ಮಾಜಿ ಸಂಸದ ಎಸ್‌‍.ಮುನಿಸ್ವಾಮಿ, ವಿಧಾನಪರಿಷತ್‌ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ಮತ್ತಿತರರ ನಿಯೋಗವು ಮನವಿಪತ್ರ ಸಲ್ಲಿಸಿ ಜನತೆಯಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಬೇಕೆಂದು ಕೋರಿದೆ. ಕ್ರಿಶ್ಚಿಯನ್‌ ಉಪಜಾತಿಗಳ ಸಮೀಕ್ಷೆಯ ಆಪ್‌ನಲ್ಲಿ ಬಹಿರಂಗಪಡಿಸದ ಅಧಿಕೃತ ಪ್ರಕಟಣೆಯನ್ನು ಆಯೋಗ ಕೊಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತ ಸಂಸ್ಥೆಯಾದ ಹಿಂದುಳಿದ ವರ್ಗಗಳ ಆಯೋಗ 33 ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟು, ಉಳಿದ 13 ದಲಿತ ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಡದೆ, ಕತ್ತಲಲ್ಲಿ ಇಟ್ಟಿರುವುದು ಸಮರ್ಥನೀಯವಲ್ಲ ಎಂದು ಆಕ್ಷೇಪಿಸಿದೆ. ಎರಡು ತಿಂಗಳ ಹಿಂದೆಯಷ್ಟೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌‍ ಆಯೋಗ 101 ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನೇ ಮಾಡಿತ್ತು. ಆಗ ಈ 15 ಕ್ರೈಸ್ತ ಎಸ್‌‍ಸಿ ಜಾತಿಗಳು ಇರಲಿಲ್ಲ. ನ್ಯಾ.ನಾಗಮೋಹನ್‌ದಾಸ್‌‍ ಆಯೋಗದ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ಪ್ರವರ್ಗಗಳ ರಚನೆಯಾಗಿ ಮೀಸಲಾತಿಯ ವರ್ಗೀಕರಣವಾಗಿದೆ.

ಈಗ ನಿಮ ಆಯೋಗದಿಂದ 15 ಹೊಸ ಕ್ರೈಸ್ತ ಎಸ್‌‍ಸಿ ಜಾತಿಗಳ ಸೇರ್ಪಡೆಯಾಗಿ ಸಮೀಕ್ಷೆ ನಡೆದರೆ ದೊಡ್ಡ ಗೊಂದಲ ಉಂಟಾಗಿ ದತ್ತಾಂಶಗಳು ಏರುಪೇರಾಗುತ್ತದೆ.
ಹೀಗಾಗಿ ನೀವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದೆ.

ಆನ್‌ಲೈನ್‌ನಲ್ಲಿ ಲಭ್ಯವಿರುವ ತಮ ಆಯೋಗದ ಕೈಪಿಡಿಯಲ್ಲಿ ತಾವು ಈ ತಪ್ಪನ್ನು ಸರಿಪಡಿಸಿರುವುದು ನಿಜ. ಆದರೆ ಸಮೀಕ್ಷೆಗೆ ಬಳಸುವ ಆ್ಯಪ್‌ನಲ್ಲಿಯೂ ಈ 15 ಎಸ್‌‍ಸಿ ಜಾತಿಗಳನ್ನು ಬಹಿರಂಗಪಡಿಸಬೇಕು ಮತ್ತು ಅದನ್ನು ಸಾರ್ವಜನಿಕರ ಅವಗಾಹನೆಗೆ ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಬೇಕು. ಈ ಬಗ್ಗೆ ಆಯೋಗದ ಅಧ್ಯಕ್ಷರು ತುರ್ತು ಗಮನ ಹರಿಸಬೇಕೆಂದು ಬಿಜೆಪಿ ವಿನಂತಿಸಿದೆ.

ಅಯೋಧ್ಯೆಯಲ್ಲಿ ಮಸೀದಿ ಯೋಜನೆ ತಿರಸ್ಕಾರ

ಅಯೋಧ್ಯೆ,ಸೆ.23- ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಗೆ ಬದಲಾಗಿ ಪ್ರಸ್ತಾಪಿಸಲಾದ ಮಸೀದಿಯ ವಿನ್ಯಾಸ ಯೋಜನೆಯನ್ನು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿದೆ. ವಿವಿಧ ಸರ್ಕಾರಿ ಇಲಾಖೆಗಳಿಂದ ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರಗಳ ಕೊರತೆಯಿಂದಾಗಿ ಮಸೀದಿಯ ವಿನ್ಯಾಸ ಯೋಜನೆಯನ್ನು ಅನುಮೋದಿಸಲಾಗಿಲ್ಲ ಎಂದು ಮಾಹಿತಿ ಹಕ್ಕು ಪ್ರತಿಕ್ರಿಯೆಯಿಂದ ತಿಳಿದುಬಂದಿದೆ.

ನವೆಂಬರ್‌ 9, 2019ರಂದು ಸುಪ್ರೀಂಕೋರ್ಟ್‌ನ ಹೆಗ್ಗುರುತು ಅಯೋಧ್ಯಾ ತೀರ್ಪಿನ ಪ್ರಕಾರ, ಉತ್ತರಪ್ರದೇಶ ಸರ್ಕಾರವು ಮಸೀದಿ ನಿರ್ಮಾಣ ಮತ್ತು ಇತರ ಸೌಲಭ್ಯಗಳಿಗಾಗಿ ಅಯೋಧ್ಯಾ ಸುನ್ನಿ ಕೇಂದ್ರ ವಕ್‌್ಫ ಮಂಡಳಿಗೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು.

2020ರ ಆಗಸ್ಟ್‌ 3ರಂದು ಆಗಿನ ಅಯೋಧ್ಯಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅನುಜ್‌ಕುಮಾರ್‌ ಝಾ ಅವರು ಅಯೋಧ್ಯಾ ಬಳಿಯ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ವರ್ಗಾಯಿಸಿದ್ದರು. ಮಸೀದಿ ಟ್ರಸ್ಟ್‌ 2021ರ ಜೂನ್‌ 23ರಂದು ಈ ಭೂಮಿಯಲ್ಲಿ ನಿರ್ಮಾಣಕ್ಕಾಗಿ ವಿನ್ಯಾಸ ಯೋಜನೆಯನ್ನು ಅನುಮೋದಿಸಲು ಅರ್ಜಿ ಸಲ್ಲಿಸಿತ್ತು.

ಆದಾಗ್ಯೂ ಅಂದಿನಿಂದ ಯೋಜನಾ ಅನುಮೋದನೆ ಪ್ರಕ್ರಿಯೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ವಿವಿಧ ಸರ್ಕಾರಿ ಇಲಾಖೆಗಳಿಂದ ಅಗತ್ಯ ಎನ್‌ಒಸಿಗಳ ಕೊರತೆಯಿಂದಾಗಿ ಮಸೀದಿಯ ವಿನ್ಯಾಸ ಯೋಜನೆಯನ್ನು ಅನುಮೋದಿಸಲಾಗಿಲ್ಲ ಎಂದು ಆರ್‌ಟಿಐ ಕಾರ್ಯಕರ್ತರನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ. ಈ ಪ್ರಮಾಣಪತ್ರಗಳಿಲ್ಲದೆ ಪ್ರಾಧಿಕಾರವು ಯೋಜನೆಯನ್ನು ಮುಂದುವರಿಸಲು ನಿರಾಕರಿಸಿತ್ತು.

ಸುಪ್ರೀಂಕೋರ್ಟ್‌ನ ಅದೇ ತೀರ್ಪಿನಡಿ ಅನುಮೋದಿಸಲಾದ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣವು ವೇಗವಾಗಿ ಪ್ರಗತಿಯಲ್ಲಿರುವ ಸಮಯದಲ್ಲೇ ಇದು ಬಹಿರಂಗಗೊಂಡಿದೆ. ಸುನ್ನಿ ಕೇಂದ್ರ ವಕ್ಫ್ ಮಂಡಳಿ ಮತ್ತು ಮಸೀದಿ ಟ್ರಸ್ಟ್‌ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಈ ವಿಷಯದಲ್ಲಿ ಮುಂದಿನ ಪ್ರಕ್ರಿಯೆ ಅಥವಾ ಸಮಯದ ಬಗ್ಗೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ರಾಮಮಂದಿರ ನಿರ್ಮಾಣ ಕಾರ್ಯವು ವೇಗವಾಗಿ ಪ್ರಗತಿಯಲ್ಲಿದೆ ಮತ್ತು ಮಸೀದಿ ಯೋಜನೆಯು ಇನ್ನೂ ಆರಂಭಿಕ ಹಂತಗಳಲ್ಲಿಯೇ ಸಿಲುಕಿಕೊಂಡಿದೆ ಎಂದು ಗಮನಿಸಿದಾಗ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಈ ಬಹಿರಂಗಪಡಿಸುವಿಕೆಯ ನಂತರ, ಸುನ್ನಿ ಕೇಂದ್ರ ವಕ್‌್ಫ ಮಂಡಳಿ ಮತ್ತು ಸಂಬಂಧಪಟ್ಟ ಪಕ್ಷಗಳು ಯೋಜನೆಯನ್ನು ತ್ವರಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ನಿರೀಕ್ಷಿಸಲಾಗಿದೆ.

ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿಯಿಟ್ಟ ಗ್ರಾಮಸ್ಥರು

ಬೆಳಗಾವಿ ಸೆ.23– ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಗ್ರಾಮಸ್ಥರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ರಾತ್ರಿ ನಡೆದಿದೆ.

ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದ್ರಾಬಾದ್‌ಗೆ ಸಾಗಿಸುತ್ತಿದ್ದ ಸುಮಾರು 7 ಕ್ವಿಂಟಲ್‌ ಗೋಮಾಂಸ ಮತ್ತು ವಾಹನ ಸುಟ್ಟು ಭಸವಾಗಿದೆ.ಗೋಮಾಂಸ ಸಾಗಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಗ್ರಾಮಸ್ಥರು ವಾಹನವನ್ನ ಅಡ್ಡಗಟ್ಟಿ ನಿಲ್ಲಿಸಿದ್ದಾರೆ.

ಈ ವೇಳೆ ವಾಹನ ಪರಿಶೀಲಿಸಿದಾಗ ಗೋಮಾಂಸ ಇರುವುದು ಕಂಡುಬಂದಿದೆ. ಇದರಿಂದ ಕೊಂಪಗೊಂಡ ಗ್ರಾಮಸ್ಥರು ಚಾಲಕನನ್ನು ಹೊರಗೆಳೆದು ಥಳಿಸಿ, ಬಳಿಕ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಗವಾಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಐನಾಪುರ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌‍ ಬಂದೋಬಸ್ತ ಏರ್ಪಡಿಸಲಾಗಿದ್ದು, ಇಬ್ಬರು ಡಿಎಸ್‌‍ಪಿ, ನಾಲ್ಕು ಸಿಪಿಐ, ಎಂಟು ಪಿಎಸ್‌‍ಐ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸ್‌‍ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಂಡಿದ್ದಾರೆ.

ಜಾತಿ ಸಮೀಕ್ಷೆ ಅವ್ಯವಸ್ಥೆ : ಸಮೀಕ್ಷೆ ನಡೆಸುತ್ತಿರುವರ ಪರದಾಟ, ಜನರಲ್ಲಿ ಅಸಹನೆ, ಆಕ್ರೋಶ

ಬೆಂಗಳೂರು, ಸೆ.23– ನಾನಾ ರೀತಿಯ ಗೊಂದಲ, ತಾಂತ್ರಿಕ ಸಮಸ್ಯೆ, ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರ ನಿರುತ್ಸಾಹ ಮೊಬೈಲ್‌ ಆ್ಯಪ್‌ನ ಜಂಜಾಟಗಳ ನಡುವೆ ಎರಡನೇ ದಿನವೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುಂಟುತ್ತಾ ಸಾಗುತ್ತಿದೆ.

ನಿನ್ನೆಯಿಂದ ಆರಂಭವಾಗಿರುವ ಸಮೀಕ್ಷೆ ಅ.7ರ ವರೆಗೂ ನಡೆದು , ಒಟ್ಟು 2 ಕೋಟಿ ಮನೆಗಳ 7 ಕೋಟಿಗೂ ಅಧಿಕ ಜನರ ದತ್ತಾಂಶವನ್ನು ಸಂಗ್ರಹಿಸಬೇಕಿದೆ. ಆದರೆ ಸಮೀಕ್ಷೆ ನಿರೀಕ್ಷಿತ ವೇಗದಲ್ಲಿ ನಡೆಯದೆ ಗೊಂದಲಮಯವಾಗಿದೆ ಹಾಗೂ ಜನ ಸಾಮಾನ್ಯರನ್ನು ರೇಜಿಗಿಡಿಸಿದೆ. ಹಲವು ಸಮುದಾಯಗಳ ವಿರೋಧದ ನಡುವೆ ಕೂಡ ಹಠಕ್ಕೆ ಬಿದ್ದಂತೆ ನಡೆಯುತ್ತಿರುವ ಸಮೀಕ್ಷೆ ಬಗ್ಗೆ ಜನರಲ್ಲಿ ಅಸಹನೆ, ಆಕ್ರೋಶಗಳು ಮಡುಗಟ್ಟಿವೆ.

ರಾಜ್ಯದ ಒಟ್ಟು ಜನ ಸಂಖ್ಯೆಯಲ್ಲಿ ಶೇ. 20ಕ್ಕೂ ಹೆಚ್ಚು ಪಾಲು ಹೊಂದಿರುವ ಬೆಂಗಳೂರಿನಲ್ಲಿ ಈವರೆಗೂ ಸಮೀಕ್ಷೆ ಆರಂಭಗೊಂಡಿಲ್ಲ, ಬಹುತೇಕ ಸಮೀಕ್ಷಾದಾರರಿಗೆ ತರಬೇತಿಯನ್ನು ನೀಡಿಲ್ಲ. ಈ ಹಿಂದೆ ನ್ಯಾ.ನಾಗಮೋಹನದಾಸ್‌‍ ಆಯೋಗದ ಸಮೀಕ್ಷೆಯಲ್ಲೂ ಇದೇ ರೀತಿಯ ಅನಾದಾರಣೆಗಳು ಕಂಡು ಬಂದಿತ್ತು. ಕೊನೆ ಕೊನೆಗೆ ಅಧೋಗತಿಯಲ್ಲಿ ಕಾಟಾಚಾರದ ಸಮೀಕ್ಷೆ ನಡೆಸಿ, ವರದಿ ನೀಡಿದ್ದು ಕಂಡು ಬಂತು.

ಕೊನೆಯ ಹಂತದಲ್ಲಿ ಹೆಚ್ಚು ಮನೆಗಳನ್ನು ತಲುಪಬೇಕು ಎಂಬ ಕಾರಣಕ್ಕೆ ಹಿರಿಯ ಅಧಿಕಾರಿಗಳು ಸಮೀಕ್ಷಾದಾರರ ಮೇಲೆ ಒತ್ತಡ ಹೇರಿದರು. ಇದು ಹೇಗೊ ಮುಗಿದರೆ ಸಾಕು ಎಂಬ ಅಸಡ್ಡೆಯಲ್ಲಿ ಸಮೀಕ್ಷಾದಾರರು ದೂರವಾಣಿಯಲ್ಲೇ ಮಾಹಿತಿ ಪಡೆದು ಕೈತೊಳೆದುಕೊಂಡ ಉದಾಹರಣೆಗಳಿವೆ. ಹೀಗಾಗಿ ನ್ಯಾ.ನಾಗಮೋಹನದಾಸ್‌‍ ಸಮೀಕ್ಷೆ ಗೊಂದಲದ ಗೂಡಾಗಿದ್ದು, ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಈಗ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್‌‍ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಆಧಾರ ಸಂಖ್ಯೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ಗೆ ಓಟಿಪಿ ರವಾನೆಯಾಗುತ್ತಿಲ್ಲ. ಪ್ರತಿಯೊಬ್ಬ ಸಮೀಕ್ಷಾದಾರರಿಗೂ ಸುಮಾರು 50 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಸರಾಸರಿ ದಿನವೊಂದಕ್ಕೆ ಕನಿಷ್ಠ 10 ಮನೆಗಳನ್ನು ಸಮೀಕ್ಷೆ ಮಾಡುವ ಅನಿವಾರ್ಯತೆ ಇದೆ. ಆದರೆ ಓಟಿಪಿ ರವಾನೆಯಾಗದೆ ವಿಳಂಬವಾಗುತ್ತಿರುವುದರಿಂದ ಹಾಗೂ ಮೊಬೈಲ್‌ ಆ್ಯಪ್‌ ಹ್ಯಾಂಗ್‌ ಆಗುತ್ತಿರುವುದರಿಂದಾಗಿ ನಿಗದಿತ ಸಮಯಕ್ಕೆ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.

ಅಗತ್ಯವಾದರೆ ಒಂದೆರಡು ದಿನ ಸಮೀಕ್ಷಾ ಅವಧಿಯನ್ನು ವಿಸ್ತರಣೆ ಮಾಡುವುದಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂದನ್‌ ನಾಯಕ್‌ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ವರೆಗೂ ಸಮೀಕೆ್ಷಯೇ ಶುರುವಾಗಿಲ್ಲ. ಈಗಾಗಲೇ ದಸರಾ ರಜೆ ಆರಂಭಗೊಂಡಿದ್ದು ಬಹುತೇಕರು ಪ್ರವಾಸಕ್ಕೆ ತೆರಳಿದ್ದಾರೆ. ಇನ್ನೂ ಕೆಲವರು ಊರುಗಳಿಗೆ ಹೋಗಿ ಸಮಯ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಾಹಿತಿ ಕಲೆ ಹಾಕುವುದು ದುಸ್ತರವಾದ ಕೆಲಸ ಆಗಿದ್ದರೂ ಆಯೋಗ ಎಚ್ಚೆತ್ತುಕೊಳ್ಳದೆ ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭಿಸದೇ ವಿಳಂಬ ಮಾಡುತ್ತಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸ್ವಕ್ಷೇತ್ರದಲ್ಲೂ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ಆಕ್ಷೇಪಗಳಿವೆ. ಬಹುತೇಕ ಕ್ಷೇತ್ರಗಳಲ್ಲಿ ಸಮೀಕ್ಷೆಯ ಗೊಂದಲಗಳು ತೀವ್ರವಾಗಿವೆ. ರಾಜ್ಯಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡೆಸಿಕೊಳ್ಳದೇ ಎಲ್ಲವೂ ಸುಖಾಂತ್ಯವಾಗಿ ನಡೆಯುತ್ತಿದೆ ಎಂಬ ಭ್ರಮೆಯಲ್ಲಿದೆ.

ಇತ್ತ ಓಟಿಪಿ ಬರದೆ ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ನಡೆಸಲಾಗದೆ ಶಿಕ್ಷಕರು, ಆಶಾ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಸಮೀಕ್ಷಾದಾರರು ಭೇಟಿ ನೀಡುವ ಮೂರು ದಿನ ಮುಂಚಿತವಾಗಿಯೇ ಪ್ರಶ್ನಾವಳಿಗಳ ನಮೂನೆಗಳನ್ನು ಮನೆ ಮನೆಗಳಿಗೆ ತಲುಪಿಸಲಾಗುವುದೆಂದು ಆಯೋಗ ಹೇಳಿತ್ತು. ಆದರೆ ಎಲ್ಲಿಯೂ ಪ್ರಶ್ನಾವಳಿಗಳನ್ನು ತಲುಪಿಸಿದ ಉದಾಹರಣೆ ಇಲ್ಲ.

ಇನ್ನೂ ಮನೆಗಳಿಗೆ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸುವುದರಲ್ಲೂ ಪೂರ್ಣ ಪ್ರಮಾಣದ ಪ್ರಗತಿಯಾಗಿಲ್ಲ. ಅಸಂಬದ್ಧವಾದ ಸಮೀಕ್ಷೆ ನಡೆಸುವ ಬದಲಾಗಿ 3 ತಿಂಗಳ ಕಾಲ ಮುಂದೂಡುವಂತೆ ಜನ ಸಮುದಾಯ ಒತ್ತಡ ಹೇರಿದರೂ ಸರ್ಕಾರ ಅದನ್ನು ಪರಿಗಣಿಸದೆ ಸಮೀಕ್ಷೆ ಮಾಡಿಯೇ ತೀರುವುದಾಗಿ ಪಟ್ಟು ಹಿಡಿದಿದೆ.

ಈ ಮೊದಲು ಕಾಂತರಾಜು ಆಯೋಗದ ಸಮೀಕ್ಷೆಯ ವೇಳೆಯೂ ಇದೇ ರೀತಿಯ ಮೊಂಡು ಹಠ ಕಂಡು ಬಂದಿತ್ತು. ಕೊನೆಗೂ ಆ ವರದಿ 10 ವರ್ಷ ಆದರೂ ಅನುಷ್ಠಾನಗೊಳ್ಳದೆ ಮೂಲೆಗುಂಪಾಯಿತು. ಸುಮಾರು 175 ಕೋಟಿ ರೂ. ವ್ಯರ್ಥವಾಯಿತು. ಈಗ ಜನ ಸಮುದಾಯದ ಬೇಡಿಕೆಗಳನ್ನು ಕಡೆಗಣಿಸಿ, ಮತ್ತೆ ಸಮೀಕ್ಷೆಯನ್ನು ಮಾಡಿಯೇ ತೀರುವುದಾಗಿ ಸರ್ಕಾರ ಹಠಕ್ಕೆ ಬಿದ್ದಿದೆ. ಇದು ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡಬೇಕಿದೆ.

ಎಚ್‌1-ಬಿ ವೀಸಾ ಶುಲ್ಕದಲ್ಲಿ ವೈದ್ಯರಿಗೆ ವಿನಾಯಿತಿ..?

ವಾಷಿಂಗ್ಟನ್‌,ಸೆ.23- ಅಮೇರಿಕಾದಲ್ಲಿರುವ ವೈದ್ಯರಿಗೆ ಹೊಸ ಹೆಚ್‌- 1ಬಿ ವೀಸಾ ಶುಲ್ಕದಿಂದ ವಿನಾಯಿತಿ ನೀಡುವ ಸಾಧ್ಯತೆಯಿದೆ.ವಿನಾಯಿತಿ ಪಡೆದವರಲ್ಲಿ ವೈದ್ಯರು ಕೂಡ ಇರಬಹುದು ಎಂದು ಬ್ಲೂಮ್‌ಬರ್ಗ್‌ ಸುದ್ದಿ ವರದಿಗಾರರೊಬ್ಬರು ಶ್ವೇತಭವನದ ವಕ್ತಾರ ಟೇಲರ್‌ ರೋಜರ್ಸ್‌ ಅವರನ್ನು ಉಲ್ಲೇಖಿಸಿ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸೆಪ್ಟೆಂಬರ್‌ 21 ರಂದು ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಆಡಳಿತವು ಹೆಚ್‌- 1ಬಿ ವೀಸಾಗಳಿಗೆ ಹೊಸ ಯುಎಸ್‌‍ ಡಿ 100,000 ಶುಲ್ಕವು ಹೊಸ ಅರ್ಜಿಗಳಿಗೆ ಮಾತ್ರ ಅನ್ವಯವಾಗುವ ಒಂದು ಬಾರಿ ಪಾವತಿಯಾಗಿದೆ. ಪ್ರಸ್ತುತ ವೀಸಾ ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದು. ಇದು ಭಾರತದಿಂದ ಬಂದವರು ಸೇರಿದಂತೆ ಯುಎಸ್‌‍ನಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ವೃತ್ತಿಪರರಿಗೆ ಭಾರೀ ಪರಿಹಾರವನ್ನು ನೀಡುತ್ತದೆ.
ಟ್ರಂಪ್‌ ಅವರ ಹೊಸ ವೀಸಾ ಅವಶ್ಯಕತೆಯು ಇನ್ನೂ ಸಲ್ಲಿಸದ ಹೊಸ, ಸಂಭಾವ್ಯ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು ಹೇಳಿಕೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್‌ 21ರ ಜಾರಿಗೆ ಬರುವ ಘೋಷಣೆ ದಿನಾಂಕದ ಮೊದಲು ಸಲ್ಲಿಸಲಾದ ಹೆಚ್‌- 1ಬಿ ಅರ್ಜಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಸ್ತುತ ಯುಎಸ್‌‍ ಹೊರಗೆ ಇರುವ ವೀಸಾ ಹೊಂದಿರುವವರು ದೇಶಕ್ಕೆ ಮರುಪ್ರವೇಶಿಸಲು ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಟ್ರಂಪ್‌ ಶುಲ್ಕ ವಿಧಿಸುವ ಆದೇಶದ ನಂತರ ಅಮೆರಿಕದಲ್ಲಿರುವ ಭಾರತೀಯರಲ್ಲಿ ವ್ಯಾಪಕ ಭೀತಿ, ಗೊಂದಲ ಮತ್ತು ಕಳವಳ ಆವರಿಸಿತ್ತು, ಅನೇಕರು ತಾಯ್ನಾಡಿಗೆ ವಿಮಾನ ಹತ್ತಲು ಕಾಯುತ್ತಿರುವಾಗ ಕೊನೆಯ ಕ್ಷಣದಲ್ಲಿ ಪ್ರಯಾಣ ಯೋಜನೆಗಳನ್ನು ರದ್ದುಗೊಳಿಸಿದರು.

ಈಗಾಗಲೇ ಭಾರತದಲ್ಲಿರುವ ಇನ್ನೂ ಅನೇಕರು ಮರಳಲು ಪರದಾಡುತ್ತಿದ್ದರು. ವಲಸೆ ವಕೀಲರು ಮತ್ತು ಕಂಪನಿಗಳು ಎಚ್‌1-ಬಿ ವೀಸಾ ಹೊಂದಿರುವವರು ಅಥವಾ ಪ್ರಸ್ತುತ ಕೆಲಸ ಅಥವಾ ರಜೆಗಾಗಿ ಅಮೆರಿಕದ ಹೊರಗೆ ಇರುವ ಅವರ ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿ, ಸೆಪ್ಟೆಂಬರ್‌ 21ರಂದು ಘೋಷಣೆ ಪ್ರಾರಂಭವಾಗುವ ಮೊದಲು ಅಮೆರಿಕಕ್ಕೆ ಮರಳಲು ಕೇಳಿಕೊಂಡಿದ್ದರು.

ಹೆಚ್‌- 1ಬಿ ಎಂದರೇನು?
ಹೆಚ್‌1ಬಿ ವಲಸೆರಹಿತ ವೀಸಾವಾಗಿದ್ದು, ಇದು ಅಮೆರಿಕದ ಕಂಪನಿಗಳು ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತಾರು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.

ಈ ವೀಸಾಗಳು ಭಾರತೀಯ ತಂತ್ರಜ್ಞಾನ ವೃತ್ತಿಪರರಲ್ಲಿ ಬಹಳ ಜನಪ್ರಿಯವಾಗಿದ್ದು, ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತವೆ ಮತ್ತು ಇನ್ನೂ ಮೂರು ವರ್ಷಗಳವರೆಗೆ ನವೀಕರಿಸಬಹುದು. ಕಾಂಗ್ರೆಸ್ಸಿನ ಕಡ್ಡಾಯ ಮಿತಿಯಡಿ, ಅಮೆರಿಕವು ಪ್ರತಿ ವರ್ಷ ಗರಿಷ್ಠ 65,000 ಎಚ್‌1ಬಿ ವೀಸಾಗಳನ್ನು ಮತ್ತು ಅಮೆರಿಕದಿಂದ ಸ್ನಾತಕೋತ್ತರ ಮತ್ತು ಉನ್ನತ ಪದವಿಗಳನ್ನು ಪಡೆದವರಿಗೆ ಇನ್ನೂ 20,000 ವೀಸಾಗಳನ್ನು ನೀಡಬಹುದು.
ಪ್ರಸ್ತುತ ಎಚ್‌1ಬಿ ವೀಸಾ ಶುಲ್ಕವು ಉದ್ಯೋಗದಾತರ ಗಾತ್ರ ಮತ್ತು ಇತರ ವೆಚ್ಚಗಳನ್ನು ಅವಲಂಬಿಸಿ ಸುಮಾರು ಯುಎಸ್‌‍ ಡಾಲರ್‌ 2,000ರಿಂದ 5,000ವರೆಗೆ ಇರುತ್ತದೆ.

ವಿಜಯಪುರ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾದಿಂದ ಬಂದಿಳಿದ 2 ಅಗ್ನಿಶಾಮಕ ವಾಹನ

ವಿಜಯಪುರ, ಸೆ.23-ಉದ್ಘಾಟನೆಗೆ ಸಜ್ಜಾಗಿರುವ ಇಲ್ಲಿನ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳು ದೂರದ ಆಸ್ಟ್ರಿಯಾದಿಂದ ಬಂದಿವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಅಗ್ನಿಶಾಮಕ ವಾಹನಗಳು ಕಂಪ್ಯೂಟರೀಕೃತವಾಗಿದ್ದು, ಜಾಗತಿಕ ಟೆಂಡರ್ ಅಡಿಯಲ್ಲಿ ಆಸ್ಟ್ರಿಯಾದಿಂದ ಪೂರೈಕೆಯಾಗಿವೆ. ಇವುಗಳ ಬೆಲೆ ಅಂದಾಜು 24 ಕೋಟಿ ರೂಪಾಯಿ. ಇವು ತುರ್ತು ಸಂದರ್ಭಗಳಲ್ಲಿ 160 ಮೀಟರಿನವರೆಗೂ ನೀರನ್ನು ಹಾಯಿಸಿ, ಬೆಂಕಿಯನ್ನು ನಂದಿಸುವ ಸಾಮರ್ಥ್ಯ ಹೊಂದಿವೆ.

ಈ ಮೂಲಕ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹೇಳಿದ್ದ ಮತ್ತೊಂದು ಅಗತ್ಯ ಪೂರೈಸಲಾಗಿದೆ ಎಂದಿದ್ದಾರೆ.
ಈ ಅಗ್ನಿಶಾಮಕ ವಾಹನಗಳು ನೆಲದ ಮೇಲಿನ ಬೆಂಕಿಯನ್ನು ನಂದಿಸಿಕೊಂಡು ವೇಗದಿಂದ ಮುನ್ನುಗ್ಗಬಲ್ಲವು. ವಿಜಯಪುರ ವಿಮಾನ ನಿಲ್ದಾಣದ ಮೂಲ ವಿನ್ಯಾಸದಲ್ಲಿ ಈ ಸೌಲಭ್ಯಗಳು ಇರಲಿಲ್ಲ. ಆಮೇಲೆ ಇದರ ಜತೆಗೆ ಇನ್ನೂ ಹಲವು ಅನುಕೂಲಗಳನ್ನು ಸೇರಿಸಲಾಯಿತು.

ಆಸ್ಟ್ರಿಯಾದಿಂದ ಹಡಗಿನಲ್ಲಿ ಮುಂಬೈಗೆ ಬಂದಿಳಿದ ಈ ವಾಹನಗಳನ್ನು, ಅಲ್ಲಿಂದ ಟ್ರಕ್ ಮೂಲಕ ವಿಜಯಪುರಕ್ಕೆ ಸಾಗಿಸಿಕೊಂಡು ಬರಲಾಗಿದೆ ಎಂದು ಅವರು ವಿವರಿಸಿದ್ದಾರೆ.ಅಗ್ನಿಶಾಮಕ ವಾಹನಗಳು ಬಂದಿರುವುದರಿಂದ ವಿಮಾನ ನಿಲ್ದಾಣ ಉದ್ಘಾಟನೆಯತ್ತ ಮತ್ತೊಂದು ಹೆಜ್ಜೆ ಮುಂದಿಡಲಾಗಿದೆ. ಪರಿಸರ ಸಂಬಂಧಿ ಅನುಮತಿ ಮಾತ್ರ ಬಾಕಿ ಇದ್ದು, ಅದನ್ನು ಪಡೆದುಕೊಳ್ಳಲು ಕೂಡ ಪ್ರಯತ್ನಿಸಲಾಗುತ್ತಿದೆ ಎಂದು ಪಾಟೀಲ ನುಡಿದಿದ್ದಾರೆ.