ಬೆಂಗಳೂರು,ನ.3- ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಬಾವಿಯಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಕೊನೆಗೂ ಜಿಲ್ಲಾಡಳಿತ ಅನುಮತಿ ನೀಡಿದೆ. ಮಂಗಳವಾರ ಕೆಂಬಾವಿಯಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯಲ್ ಅವರು 10 ಷರತ್ತುಗಳನ್ನು ವಿಧಿಸಿ ಪಥಸಂಚಲನಕ್ಕೆ ಅನುಮತಿ ನೀಡಿದ್ದಾರೆ.
ನಾವು ಕೂಡ ಅದೇ ದಿನ ಪಥಸಂಚಲನ ನಡೆಸುತ್ತೇವೆ. ನಮಗೂ ಕೂಡ ಅನುಮತಿ ನೀಡಬೇಕೆಂದು ಕೆಲವು ದಲಿತಪರ ಸಂಘಟನೆಗಳು ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿರುವ ಜಿಲ್ಲಾಧಿಕಾರಿಗಳು ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ.
ಇದೀಗ ಜಿಲ್ಲಾಧಿಕಾರಿಗಳು ಅನುಮತಿ ನೀಡಿರುವ ಹಿನ್ನಲೆಯಲ್ಲಿ ಮಂಗಳವಾರ ನಿಗದಿಯಾಗಿದ್ದ ಆರ್ಎಸ್ಎಸ್ ಪಥಸಂಚಲನವು ನಿಗದಿಯಂತೆ ನಡೆಯಲಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಕೆಂಬಾವಿಯಲ್ಲಿ ಭಾರೀ ಬಿಗಿ ಭದ್ರತೆಯನ್ನು ಕೈಗೊಂಡಿದೆ.
ಪಥಸಂಚಲನ ಹಾದುಹೋಗುವ ಪ್ರಮುಖ ಬೀದಿಗಳು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೆಎಸ್ಆರ್ಪಿ, ಡಿಎಆರ್ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.
ಕಲಬುರಗಿ ಜಿಲ್ಲೆ ಚಿತ್ತಪುರದಲ್ಲಿ ಕಾನೂನು ಸುವ್ಯವಸ್ಥೆ ಮುಂದಿಟ್ಟು ಜಿಲ್ಲಾಡಳಿತ ಆರ್ಎಸ್ಎಸ್ ಪಥಸಂಚಲನಕ್ಕೆ ನಿರ್ಬಂಧ ಹಾಕಿದ್ದು ಭಾರೀ ವಿವಾದವನ್ನು ಸೃಷ್ಟಿಸಿತ್ತು. ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದು, ನ.5ರಂದು ಎಲ್ಲಾ ಸಂಘಟನೆಯ ಮುಖಂಡರು ಬೆಂಗಳೂರಿನಲ್ಲಿ ಶಾಂತಿಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
ನ.2ರಂದು ಆರ್ಎಸ್ಎಸ್ ಚಿತ್ತಪುರದಲ್ಲಿ ಪಥಸಂಚಲನ ನಡೆಸಲು ಉದ್ದೇಶಿಸಿತ್ತು. ಆದರೆ ಅದೇ ದಿನ ನಮಗೂ ಅವಕಾಶ ಕೊಡಿ ಎಂದು ದಲಿತರಪರ ಸಂಘಟನೆಗಳು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದರು. ಏಕಕಾಲಕ್ಕೆ ಆರ್ಎಸ್ಎಸ್ ಸೇರಿದಂತೆ ಮತ್ತಿತರ ಸಂಘಟನೆಗಳಿಗೆ ಅವಕಾಶ ಕೊಟ್ಟರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಹುದೆಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯಾರಿಗೂ ಪಥಸಂಚಲನ ನಡೆಸಲು ಅವಕಾಶ ಕೊಟ್ಟಿರಲಿಲ್ಲ.
ಇದರ ಬೆನ್ನಲ್ಲೇ ಪಕ್ಕದ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಬಾವಿಯಲ್ಲಿ ಮಂಗಳವಾರ ಆರ್ಎಸ್ಎಸ್ ಪಥಸಂಚಲನ ನಡೆಸಲು ಉದ್ದೇಶಿಸಿತ್ತು. ಆದರೆ ಅಂದೇ ನಮಗೂ ಅವಕಾಶ ಕೊಡಿ ಎಂದು ಕೆಲವು ಸಂಘಟನೆಗಳು ಪಟ್ಟು ಹಿಡಿದಿದ್ದವು. ಈಗ ಜಿಲ್ಲಾಧಿಕಾರಿಗಳು ಆರ್ಎಸ್ಎಸ್ಗೆ ಪಥಸಂಚಲನ ನಡೆಸಲು ಹಸಿರುನಿಶಾನೆ ತೋರಿದ್ದಾರೆ.