Home Blog Page 9

ಯಾದಗಿರಿ ಜಿಲ್ಲೆಯ ಕೆಂಬಾವಿಯಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಜಿಲ್ಲಾಧಿಕಾರಿ ಅನುಮತಿ

ಬೆಂಗಳೂರು,ನ.3- ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಬಾವಿಯಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಕೊನೆಗೂ ಜಿಲ್ಲಾಡಳಿತ ಅನುಮತಿ ನೀಡಿದೆ. ಮಂಗಳವಾರ ಕೆಂಬಾವಿಯಲಿ ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್‌ ಭೋಯಲ್‌ ಅವರು 10 ಷರತ್ತುಗಳನ್ನು ವಿಧಿಸಿ ಪಥಸಂಚಲನಕ್ಕೆ ಅನುಮತಿ ನೀಡಿದ್ದಾರೆ.

ನಾವು ಕೂಡ ಅದೇ ದಿನ ಪಥಸಂಚಲನ ನಡೆಸುತ್ತೇವೆ. ನಮಗೂ ಕೂಡ ಅನುಮತಿ ನೀಡಬೇಕೆಂದು ಕೆಲವು ದಲಿತಪರ ಸಂಘಟನೆಗಳು ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿರುವ ಜಿಲ್ಲಾಧಿಕಾರಿಗಳು ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ.

ಇದೀಗ ಜಿಲ್ಲಾಧಿಕಾರಿಗಳು ಅನುಮತಿ ನೀಡಿರುವ ಹಿನ್ನಲೆಯಲ್ಲಿ ಮಂಗಳವಾರ ನಿಗದಿಯಾಗಿದ್ದ ಆರ್‌ಎಸ್‌‍ಎಸ್‌‍ ಪಥಸಂಚಲನವು ನಿಗದಿಯಂತೆ ನಡೆಯಲಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಕೆಂಬಾವಿಯಲ್ಲಿ ಭಾರೀ ಬಿಗಿ ಭದ್ರತೆಯನ್ನು ಕೈಗೊಂಡಿದೆ.

ಪಥಸಂಚಲನ ಹಾದುಹೋಗುವ ಪ್ರಮುಖ ಬೀದಿಗಳು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೆಎಸ್‌‍ಆರ್‌ಪಿ, ಡಿಎಆರ್‌ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.

ಕಲಬುರಗಿ ಜಿಲ್ಲೆ ಚಿತ್ತಪುರದಲ್ಲಿ ಕಾನೂನು ಸುವ್ಯವಸ್ಥೆ ಮುಂದಿಟ್ಟು ಜಿಲ್ಲಾಡಳಿತ ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ನಿರ್ಬಂಧ ಹಾಕಿದ್ದು ಭಾರೀ ವಿವಾದವನ್ನು ಸೃಷ್ಟಿಸಿತ್ತು. ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದು, ನ.5ರಂದು ಎಲ್ಲಾ ಸಂಘಟನೆಯ ಮುಖಂಡರು ಬೆಂಗಳೂರಿನಲ್ಲಿ ಶಾಂತಿಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ನ.2ರಂದು ಆರ್‌ಎಸ್‌‍ಎಸ್‌‍ ಚಿತ್ತಪುರದಲ್ಲಿ ಪಥಸಂಚಲನ ನಡೆಸಲು ಉದ್ದೇಶಿಸಿತ್ತು. ಆದರೆ ಅದೇ ದಿನ ನಮಗೂ ಅವಕಾಶ ಕೊಡಿ ಎಂದು ದಲಿತರಪರ ಸಂಘಟನೆಗಳು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದರು. ಏಕಕಾಲಕ್ಕೆ ಆರ್‌ಎಸ್‌‍ಎಸ್‌‍ ಸೇರಿದಂತೆ ಮತ್ತಿತರ ಸಂಘಟನೆಗಳಿಗೆ ಅವಕಾಶ ಕೊಟ್ಟರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಹುದೆಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯಾರಿಗೂ ಪಥಸಂಚಲನ ನಡೆಸಲು ಅವಕಾಶ ಕೊಟ್ಟಿರಲಿಲ್ಲ.

ಇದರ ಬೆನ್ನಲ್ಲೇ ಪಕ್ಕದ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಬಾವಿಯಲ್ಲಿ ಮಂಗಳವಾರ ಆರ್‌ಎಸ್‌‍ಎಸ್‌‍ ಪಥಸಂಚಲನ ನಡೆಸಲು ಉದ್ದೇಶಿಸಿತ್ತು. ಆದರೆ ಅಂದೇ ನಮಗೂ ಅವಕಾಶ ಕೊಡಿ ಎಂದು ಕೆಲವು ಸಂಘಟನೆಗಳು ಪಟ್ಟು ಹಿಡಿದಿದ್ದವು. ಈಗ ಜಿಲ್ಲಾಧಿಕಾರಿಗಳು ಆರ್‌ಎಸ್‌‍ಎಸ್‌‍ಗೆ ಪಥಸಂಚಲನ ನಡೆಸಲು ಹಸಿರುನಿಶಾನೆ ತೋರಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ಅರ್ಜಿ ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿದ ಸುಪ್ರೀಂ

ಬೆಂಗಳೂರು,ನ.3- ಬಹುನಿರೀಕ್ಷಿತ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ಅರ್ಜಿ ವಿಚಾರಣೆ ಯನ್ನು ಸುಪ್ರೀಂ ಕೋರ್ಟ್‌ ಡಿ.15ಕ್ಕೆ ಮುಂದೂಡಿದೆ. ಈ ಹಿಂದಿನ ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರ ವಿಭಾಗೀಯ ಪೀಠದ ಮುಂದೆ ರಾಜ್ಯ ಸರ್ಕಾರ, ಕಾಲಾವಕಾಶ ಕೋರಿದ ಮನವಿಯನ್ನು ಪುಸ್ಕರಿಸಿ ವಾರ್ಡ್‌ ಪುನರ್‌ ವಿಂಗಡಣೆ ಮತ್ತು ಮೀಸಲಾತಿಪಟ್ಟಿ ಪೂರ್ಣಗೊಳಿಸಲು ಡಿ.15ರವರೆಗೆ ಕಾಲಾವಕಾಶ ನೀಡಿದೆ.

ಇಂದು ನ್ಯಾಯಾಲಯದ ಮುಂದೆ ಹಾಜರಾದ ಸರ್ಕಾರದ ಪರ ವಕೀಲರು, ವಾರ್ಡ್‌ ವಿಂಗಡಣೆ ಮತ್ತು ಬಗ್ಗೆ 4,500ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ರಾಜ್ಯಸರ್ಕಾರದ ವತಿಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಕಾಲಕ್ಕೆ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ವಾರ್ಡ್‌ ವಿಂಗಡಣೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

15 ದಿನದೊಳಗೆ ವಾರ್ಡ್‌ ಪುನರ್‌ ವಿಂಗಡಣೆ ಹಾಗೂ ಡಿ.15ರೊಳಗೆ ಮೀಸಲಾತಿ ಪಟ್ಟಿ ಪೂರ್ಣಗೊಳಿಸುವಂತೆ ಸೂಚಿಸಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.
ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಇಂದು ಚುನಾವಣೆ ಘೋಷಣೆ ಆಗುವ ಬಗ್ಗೆ ಕುತೂಹಲ ಸೃಷ್ಟಿಯಾಗಿತ್ತು. ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಬಿಬಿಎಂಪಿ ಮಾಜಿ ಸದಸ್ಯ ಎಂ.ಶ್ರೀನಿವಾಸ್‌‍ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ತನಕ 20 ಬಾರಿ ಅರ್ಜಿಗಳು ವಿಚಾರಣೆಗೆ ಬಂದಿತು.

ಕಳೆದ ಆಗಸ್ಟ್‌ನಲ್ಲಿ ಮೂರು ತಿಂಗಳೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್‌ ಸೂಚಿಸಿತ್ತು. ವಾರ್ಡ್‌ ವಿಂಗಡಣೆ, ಮತದಾರರಪಟ್ಟಿ ಸಿದ್ದಪಡಿಸುವುದು ಸೇರಿದಂತೆ ಎಲ್ಲವನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಪೀಠ ನಿರ್ದೇಶನ ನೀಡಿತು. ಸರ್ಕಾರ ಇಂದು ತಾನು ಕೈಗೊಂಡಿರುವ ತಯಾರಿಯ ಬಗ್ಗೆ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್‌ ವಿಚಾರಣೆಯನ್ನು ಮುಂದೂಡಿದೆ.

ಬಿಹಾರ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ : ಸಿಎಂ ಸಿದ್ದರಾಮಯ್ಯ

ಮೈಸೂರು, ನ.3- ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ತಾವು ದೆಹಲಿಗೆ ತೆರಳುತ್ತಿದ್ದು ಸಚಿವ ಸಂಪುಟ ಪುನಾರಚನೆಯ ಕುರಿತು ವರಿಷ್ಠರ ಜೊತೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನವೆಂಬರ್‌ 15 ರಂದು ತಾವು ದೆಹಲಿಗೆ ತೆರಳುತ್ತಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ,
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಜೊತೆ ಚರ್ಚೆ ನಡೆಸುತ್ತೇನೆ ಎನ್ನುವ ಮೂಲಕ ಸಚಿವ ಸಂಪುಟ ಪುನರ್‌ರಚನೆಯ ಸುಳಿವು ನೀಡಿದರು.

ನಾಯಕತ್ವದ ಬದಲಾವಣೆ ಬಗ್ಗೆ ವರಿಷ್ಠ ಮಂಡಳಿಯ ಯಾವ ನಾಯಕರೂ ಮಾತನಾಡಿಲ್ಲ. ಹೀಗಿರುವಾಗ ಅನಗತ್ಯ ವದ್ದಂತಿಗಳು ಏಕೆ? ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ವರಿಷ್ಠ ನಾಯಕರು ಹೇಳದ ಹೊರತು, ಯಾರು ಏನೇ ಚರ್ಚೆ ಮಾಡಿದರೂ ಅದು ನಗಣ್ಯ. ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ ಅವರು ಮಾತನಾಡಬೇಕು, ಅದಕ್ಕೆ ಮಾತ್ರ ಬೆಲೆ ಇದೆ. ಅದು ಬಿಟ್ಟು ಜನ ಮಾತನಾಡುತ್ತಾರೆ ಎಂದು ವದ್ದಂತಿಗಳನ್ನು ಹರಡಬೇಡಿ. ಜನರಿಗಿಂತಲೂ ಮಾಧ್ಯಮಗಳಲ್ಲಿಯೇ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಹಾರ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವಂತೆ ತಮಗೆ ಈ ವರೆಗೂ ಕರೆ ಬಂದಿಲ್ಲ. ಆಹ್ವಾನ ಬಂದರೆ ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿದರು.ಬಿಹಾರದಲ್ಲಿ ಇಂಡಿಯಾ ರಾಜಕೀಯ ಕೂಟ ಗೆಲುವು ಸಾಧಿಸಲಿದೆ ಎಂದು ಈವರೆಗಿನ ವಾತಾವರಣದ ಪ್ರಕಾರ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಬಿಹಾರದ ಮೂಲದವರು ಹೆಚ್ಚು ಜನ ನೆಲೆಸಿದ್ದಾರೆ. ಅವರು ಬಿಹಾರಕ್ಕೆ ತೆರಳಿ ಮತ ನೀಡಬೇಕು ಎಂದು ಕರೆ ನೀಡುತ್ತಿದ್ದೇವೆ. ಆದರೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂದು ಕಾದು ನೋಡುತ್ತೇವೆ ಎಂದರು.

ಬಿಹಾರದಲ್ಲಿ ದೀರ್ಘಕಾಲ ನಿತೀಶ್‌ಕುಮಾರ್‌ ಮುಖ್ಯಮಂತ್ರಿಯಾಗಿರುವುದರಿಂದ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿಯವರ ಭ್ರಷ್ಟಚಾರ, ದುರಾಡಳಿತ ಕಾಂಗ್ರೆಸ್‌‍ ನೇತೃತ್ವದ ಮೈತ್ರಿ ಕೂಟದ ಗೆಲುವಿಗೆ ಕಾರಣವಾಗಲಿದೆ ಎಂದು ಹೇಳಿದರು.

ಬಿಹಾರದಲ್ಲಿ ಚುನಾವಣೆಯ ಕಾರಣಕ್ಕಾಗಿ ಏಕ ಕಾಲಕ್ಕೆ 10 ಸಾವಿರ ರೂ. ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ 1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ತಲಾ 2 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಈವರೆಗೂ ಸುಮಾರು ಒಂದು ಲಕ್ಷ ಕೋಟಿಗೂ ಹೆಚ್ಚಿನ ಹಣ ಖರ್ಚುಮಾಡಿದ್ದೇವೆ ಎಂದರು.
ನಿತೀಶ್‌ಕುಮಾರ್‌ ಅವರಿಗೆ ರಾಜಕೀಯ ಸಿದ್ಧಾಂತವಿಲ್ಲ. ಕಾಂಗ್ರೆಸ್‌‍, ಬಿಜೆಪಿ, ಲಾಲುಪ್ರಸಾದ್‌ ಯಾದವ್‌ರ ಆರ್‌ಜೆಡಿ ಸೇರಿದಂತೆ ಎಲ್ಲರ ಜೊತೆಯೂ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಬಿಹಾರದಲ್ಲಿ ಬಡತನ ಹೆಚ್ಚಿದ್ದು, ಅಲ್ಲಿರುವ ಬಡವರು, ಹಿಂದುಳಿದ ವರ್ಗದವರು, ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್‌‍ ಪರವಾಗಿ ಮತ ಚಲಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆಯ ಕಾಡಂಚಿನಲ್ಲಿ ಹುಲಿಗಳ ದಾಳಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿಯವರು, ನಿಜ ಹೇಳಬೇಕೆಂದರೆ ಕಾಡಿನಲ್ಲಿ ಜನರ ಓಡಾಟ ಹೆಚ್ಚಾಗುತ್ತಿವೆ. ರೆಸಾರ್ಟ್‌ಗಳನ್ನು ಮಾಡಿಕೊಂಡಿದ್ದಾರೆ, ಸಫಾರಿಗಳು ಹೆಚ್ಚಾಗಿವೆ ಈ ಕಾರಣಕ್ಕೆ ವನ್ಯ ಜೀವಿಗಳು ಕಾಡಿನಿಂದ ಹೊರ ಬರುತ್ತಿವೆ ಎಂದರು.

ಕಾಡಿನಲ್ಲಿ ನೀರು ಮತ್ತು ಮೇವಿನ ಕೊರತೆ ಇದೆ. ಜೊತೆಗೆ ಚಿರತೆಯ ಹಾವಳಿಯೂ ಹೆಚ್ಚಾಗಿದೆ. ಆನೆ, ಜಿಂಕೆ, ಹುಲಿ, ಚಿರತೆ, ಕಾಡುಹಂದಿ, ಕಾಡುಎಮೆಗಳು ಮೇವು, ನೀರಿಗಾಗಿ ಜನವಸತಿ ಪ್ರದೇಶಗಳತ್ತ ಬರುತ್ತಿವೆ ಎಂದು ವಿಶ್ಲೇಷಿಸಿದರು.

ಅರಣ್ಯ ಸಚಿವರು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ತಾವು ಕೂಡ ಅರಣ್ಯಾಧಿಕಾರಿಗಳ ಜೊತೆ ಸಭೆ ಮಾಡಿ ಚರ್ಚಿಸುತ್ತೇನೆ. ಅಕ್ರಮವಾಗಿರುವ ರೆಸಾರ್ಟ್‌ಗಳಿಗೆ ಕಡಿವಾಣ ಹಾಕಲಾಗುವುದು. ಸಫಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ವಿವರಿಸಿದರು.

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅರ್ಹರಿಗೆ ನೀಡಲಾಗಿದೆ. ಯಾರಿಂದಲೂ ಅರ್ಜಿ ಪಡೆಯಲಾಗಿಲ್ಲ. ಎಲೆ ಮರೆಕಾಯಿಯಂತಿರುವವರನ್ನು ಹುಡುಕಿ ಪ್ರಶಸ್ತಿ ನೀಡಲಾಗಿದೆ. ಸಾಮಾಜಿಕ ನ್ಯಾಯ, ಭೌಗೋಳಿಕ ಆದ್ಯತೆ ನೀಡಲಾಗಿದ್ದು ಪ್ರತಿ ಜಿಲ್ಲೆಗೂ ಅವಕಾಶ ಕಲ್ಪಿಸಿಲಾಗಿದೆ ಎಂದರು.

ಮೇ ತಿಂಗಳಲ್ಲಿ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಪೂರ್ಣ

ಬೆಂಗಳೂರು, ನ.3– ನಗರದ ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಮೆಟ್ರೋ ವಿವಿಧ ಹಂತಗಳ ಕಾಮಗಾರಿ ಪ್ರಗತಿಯಲ್ಲಿರುವ ಸಂದರ್ಭದಲ್ಲೇ ನಮ ಮೆಟ್ರೋ ಗುಲಾಬಿ ಮಾರ್ಗ 2026ರ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ನಮ್ಮ ಮೆಟ್ರೋ ಗುಲಾಬಿ ಮಾರ್ಗ 2026 ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸ್ವತಃ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೇ ಎಕ್‌್ಸ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹೀಗಾಗಿ ಬಹುನಿರೀಕ್ಷಿತ ಗುಲಾಬಿ ಮಾರ್ಗದ ಸಂಚಾರ ಮೇ ತಿಂಗಳಿನಿಂದ ಕಾರ್ಯರಂಭಗೊಳ್ಳುವುದು ಬಹುತಕ ಖಚಿತಪಟ್ಟಿದೆ.ಕಾಳೇನ ಅಗ್ರಹಾರ ದಿಂದ ನಾಗವಾರ ಮಾರ್ಗ ಇರುವ ಗುಲಾಬಿ ಮಾರ್ಗ 21.25 ಕಿಮೀ ವಿಸ್ತೀರ್ಣವಿದ್ದು, ಒಟ್ಟು 18 ಮೆಟ್ರೋ ಸ್ಟೇಷನ್‌ಗಳು ಇರಲಿವೆ.

ಅದರಲ್ಲಿ 6 ಎಲಿವೇಟೆಡ್‌ ಸ್ಟೇಷನ್‌ಗಳು,ಎರಡು ಅಂಡರ್‌ ಗ್ರೌಂಡ್‌ ಮೆಟ್ರೋ ಸ್ಟೇಷನ್‌ಗಳನ್ನ ಒಳಗೊಂಡಿದೆ. ಬೆಂಗಳೂರು ದಕ್ಷಿಣದಿಂದ ಉತ್ತರಕ್ಕೆ ಸಂಪರ್ಕ ಕಲ್ಪಿಸುವ ಗುಲಾಬಿ ಮಾರ್ಗದಲ್ಲಿ 13.76 ಕಿಮೀ ಭೂಗತ ಮಾರ್ಗ ಒಳಗೊಂಡಿರುವುದು ವಿಶೇಷವಾಗಿದೆ.

ಬಿಹಾರದಲ್ಲಿ ಇಂಡಿಯಾ ಘಟಬಂಧನ್‌ ಗೆದ್ದರೆ ಎಲ್ಲಾ ಹುದ್ದೆಗಳು ಸಿಕ್ಕಂತೆ : ಡಿಕೆಶಿ

ಬೆಂಗಳೂರು, ನ.3- ಬಿಹಾರದಲ್ಲಿ ಇಂಡಿಯಾ ಘಟಬಂಧನ್‌ ಗೆಲ್ಲಿಸಿ ಅಧಿಕಾರಕ್ಕೆ ತಂದರೆ, ನನಗೆ ಎಲ್ಲಾ ಹುದ್ದೆಗಳು ಸಿಕ್ಕಂತೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಶಸ್ತ್ರ ತ್ಯಾಗ ಮಾಡಿದ್ದಾರೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ನಿನ್ನೆ ಬೆಂಗಳೂರಿನಲ್ಲಿ ಬಿಹಾರಿ ಸಮುದಾಯದ ಜೊತೆ ಚರ್ಚೆ ನಡೆಸುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡುವ ಬಯಕೆ ಇದೆ ಎಂದು ಬಿಹಾರದ ಮೂಲದ ಪ್ರಮುಖರು ಅಭಿಲಾಶೆೆ ವ್ಯಕ್ತಪಡಿಸಿದರು.

ಇದಕ್ಕೆ ಅಷ್ಟೇ ವಿನಮ್ರವಾಗಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್‌ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ನೇತೃತ್ವದ ಮಹಾ ಘಟಬಂಧನ್‌ನನ್ನು ಗೆಲ್ಲಿಸಿದರೆ ತಮಗೆ ಎಲ್ಲಾ ರೀತಿಯ ಸ್ಥಾನಗಳನ್ನು ಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೇ ತಿಂಗಳ 21ರ ರೊಳಗಾಗಿ ತಮಗೆ ಅಧಿಕಾರ ಬಿಟ್ಟುಕೊಡಬೇಕೆಂದು ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌‍ ಹೈಕಮಾಂಡ್‌ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌‍ನಲ್ಲಿ ನವೆಂಬರ್‌ ಕ್ರಾಂತಿಯ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ವದ್ದಂತಿಗಳು ವ್ಯಾಪಕವಾಗಿವೆ. ಬೆಂಬಲಿಗರು ನಾನಾ ರೀತಿಯ ವ್ಯಾಖ್ಯಾನಗಳ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ.

ಇತ್ತೀಚೆಗೆ ಲಾಲ್‌ಬಾಗ್‌ನಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಸಿದ ವೇಳೆಯಲ್ಲೂ ಹಲವಾರು ಮಂದಿ ಸಾರ್ವಜನಿಕರು ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸಿದರು. ಆಗಲೂ ಡಿ.ಕೆ.ಶಿವಕುಮಾರ್‌ ಅವರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿ, ನನ್ನ ಬಗ್ಗೆ ಚರ್ಚೆ ಬೇಡ ಎಂದು ಹೇಳುವ ಮೂಲಕ ಧ್ವನಿ ಎತ್ತಿದವರನ್ನು ತಣ್ಣಗಾಗಿಸಿದರು.

ಪಕ್ಷದ ಶಾಸಕರಿಗೂ ಅನೇಕ ಬಾರಿ ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡಬೇಡಿ ಎಂದು ಹೇಳುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಪಕ್ಷದ ಕಚೇರಿ ತಮಗೆ ದೇವಸ್ಥಾನವಿದ್ದಂತೆ, ಯಾವುದೇ ಅವಕಾಶಗಳಾದರೂ ವರಿಷ್ಠರಿಂದಲೇ ದೊರೆಯಬೇಕು ಎಂಬುದು ಡಿ.ಕೆ.ಶಿವಕುಮಾರ್‌ ಅವರ ಬಲವಾದ ನಂಬಿಕೆ. ಈ ಕಾರಣಕ್ಕೆ ರಾಜಕೀಯ ಚರ್ಚೆಗಳಿಗೆ ಅವರು ಇಂಬು ನೀಡುತ್ತಿಲ್ಲ.

ಬಿಹಾರಿಗಳ ಸಮುದಾಯದ ಸಭೆಯಲ್ಲೂ ಡಿ.ಕೆ.ಶಿವಕುಮಾರ್‌ ಶಸ್ತ್ರ ತ್ಯಾಗದ ರೀತಿಯಲ್ಲೇ ಮಾತನಾಡುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಒಳಗೊಳಗೆ ಅಧಿಕಾರ ಹಂಚಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ರಾಜ್ಯ ರಾಜಕೀಯದಲ್ಲಿದೆ. ಹಾಗಿದ್ದರೂ ತಾವು ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಅಲ್ಲ ಎಂದು ಪರೋಕ್ಷ ಸಂದೇಶದ ಮೂಲಕ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ಗೆ ಯಾವ ರೀತಿಯ ಮಾಹಿತಿ ರವಾನೆ ಮಾಡುತ್ತಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಕಾಂಗ್ರೆಸ್‌‍ನ ಒಳ ವಲಯದಲ್ಲಿ ಹೇಳುತ್ತಿರುವಂತೆ ನವೆಂಬರ್‌ ಕ್ರಾಂತಿ ನಡೆಯಲಿದೆಯೇ ಅಥವಾ ಎಲ್ಲವೂ ಬಾಯಿ ಮಾತಿನ ವದ್ದಂತಿಗಳೇ ಎಂಬ ಅನುಮಾನ ಕಾಡಲಾರಂಭಿಸಿದೆ.
ಇತ್ತ ವಿಜಯನಗರದಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸಿದ್ದರಾಮಯ್ಯ ಟಗರು ಇದ್ದಂತೆ. ಅವರಿಗೆ ಠಕ್ಕರ್‌ ಕೊಡಲು ಯಾರ ಕೈಯಲ್ಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್‌ ಅವರ ಬೆಂಬಲಿಗರನ್ನು ಕೆಣಕಿದ್ದಾರೆ.

ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ : 20 ಮಂದಿ ಸಾವು

ಕಾಬೂಲ್‌,ನ.3-ಅಫ್ಘಾನಿಸ್ತಾನದಲ್ಲಿ ಮಧ್ಯರಾತ್ರಿ 6.3 ತೀವ್ರತೆಯ ಭೂಕಂಪನ ಸಂಭವಿಸಿದ್ದು ಸುಮಾರು 20 ಮಂದಿ ಸಾವನ್ನಪ್ಪಿ,320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಕಾಲಮಾನ ಮಧ್ಯರಾತ್ರಿ 1 ಗಂಟೆಗೆ ಭೂಕಂಪದ ಸಂಭವಿಸಿದೆ ಎಂದು ಅಮೆರಿಕದ ಜಿಯೋಲಾಜಿಕಲ್‌ ಸರ್ವೆಹೇಳೆದೆ.

ಅಫ್ಘಾನಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯು ಸಾವುನೋವುಗಳು ಮತ್ತು ಹಾನಿಗಳ ಮೌಲ್ಯಮಾಪನಗಳನ್ನು ನಂತರ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ. ಸಾಮಾಜಿಕ ಮಾಧ್ಯಮದ ವೀಡಿಯೊದಿಂದ ಪಡೆದ ಚಿತ್ರದಲ್ಲಿ ಅಫ್ಘಾನಿಸ್ತಾನದ ಮಜರ್‌ ಇ ಷರೀಫ್‌ನಲ್ಲಿ ಭೂಕಂಪದ ನಂತರ ಬ್ಲೂ ಮಸೀದಿ ,ಕಟ್ಟಡಗಳು ಕುಸಿದಿದೆ.

ಅಫ್ಘಾನಿಸ್ತಾನದ ಅತಿದೊಡ್ಡ ನಗರ ಭೂಕಂಪನದಿಂದ ತತ್ತರಿಸಿದ್ದು ಭೂಕಂಪನದ ಕೇಮದ್ರ ಬಿಂದು ಖುಲ್‌ ಪಟ್ಟಣದ ಬಳಿ ಪತ್ತೆಯಾಗಿದೆ ಭೂಮಿಯ 23 ಕಿಲೋಮೀಟರ್‌ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರತಿಳಿಸಿದೆ.

ಬೆಂಗಳೂರು ಟನಲ್‌ ರಸ್ತೆಯ ಟೆಂಡರ್‌ ಅವಧಿ ಮತ್ತೆ ವಿಸ್ತರಣೆ

ಬೆಂಗಳೂರು, ನ.3- ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಕನಸಿನ ಯೋಜನೆಯಾದ ಟನಲ್‌ ರಸ್ತೆ ನಿರ್ಮಾಣ ಯೋಜನೆಗೆ ಗ್ರಹಣ ಬಿಟ್ಟಂತೆ ಕಾಣುತ್ತಿಲ್ಲ.ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಕರೆದಿದ್ದ ಟೆಂಡರ್‌ ಸಲ್ಲಿಕೆ ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಣೆ ಮಾಡಿದೆ.

ಈಗಾಗಲೇ ಎರಡು ಬಾರಿ ಟೆಂಡರ್‌ ಕರೆದಿದ್ದರೂ ಯಾವೊಬ್ಬ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಗಳಲ್ಲಿ ಭಾಗಿಯಾಗದ ಹಿನ್ನೆಲೆಯಲ್ಲಿ ಮತ್ತೆ ಗುತ್ತಿಗೆ ಅವಧಿಯನ್ನು ನ.11 ರವರೆಗೆ ವಿಸ್ತರಣೆ ಮಾಡಲಾಗಿದೆ.

ಎರಡು ಪ್ಯಾಕೇಜ್‌ ಗಳಲ್ಲಿ ಟನಲ್‌ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ನಗರದ ಹೆಬ್ಬಾಳ ಜಂಕ್ಷನ್‌ ನಿಂದ ಸಿಲ್ಕ್ ಬೋರ್ಡ ಜಂಕ್ಷನ್‌ ವರೆಗಿನ ಸುಮಾರು 17 ಕಿ.ಮೀಟರ್‌ ಉದ್ದದ ಟನಲ್‌ ರಸ್ತೆ ್ತಯನ್ನು 8770 ಕೋಟಿ ರೂ. ವೆಚ್ಚದಲ್ಲಿ ಮೊದಲನೆ ಹಂತದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಅದೇ ರೀತಿ ಎರಡನೇ ಪ್ಯಾಕೇಜ್‌ನಲ್ಲಿ ರೇಸ್‌‍ ಕೋರ್ಸ್‌ ಜಂಕ್ಷನ್‌ ನಿಂದ ಸಿಲ್‌್ಕ ಬೋರ್ಡ ಜಂಕ್ಷನ್‌ ವರೆಗೆ ಸುಮಾರು 8.8 ಕಿ.ಮೀಟರ್‌ ಉದ್ದ ರಸ್ತೆಯನ್ನು ಅಂದಾಜು 8928 ಕೋಟಿ ವೆಚ್ಚದಲ್ಲಿ ಮೂರು ಪಥದ ಸುರಂಗ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಎರಡು ಪ್ಯಾಕೇಜ್‌ಗಳಿಗೂ 50 ತಿಂಗಳ ಕಾಲಾವಧಿ ನೀಡಲಾಗಿದೆ. ಸದ್ಯ ಟೆಂಡರ್‌ ಅವಧಿ ವಿಸ್ತರಣೆ ಗೆ ಗುತ್ತಿಗೆದಾರರು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಗುತ್ತಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಟನಲ್‌ ರಸ್ತೆ ನಿರ್ಮಾಣಕ್ಕೆ ಪರ-ವಿರೋಧ ವ್ಯಕ್ತವಾಗಿರುವುದರಿಂದ ಸದ್ಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಯಾವುದೇ ಗುತ್ತಿಗೆದಾರರು ಆಸಕ್ತಿ ತೋರುತ್ತಿಲ್ಲ.

ಮೊನ್ನೆಯಷ್ಟೇ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ‘ವೀಣೆ ಬಹ್ಮ’ ಪೆನ್ನ ಓಬಳಯ್ಯ ನಿಧನ

ಬೆಂಗಳೂರು, ಅ.3-ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ವೀಣೆ ಬಹ್ಮ ಎಂದೇ ಖ್ಯಾತರಾಗಿದ್ದ ಪೆನ್ನ ಓಬಳಯ್ಯ(103) ಅವರು ನಿಧನರಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಮಧುರೈ ಸಮೀಪದ ಸಿಂಪಾಡಿ ಪುರದ ನಿವಾಸಿಯಾಗಿದ್ದ ಅವರು ಇಡೀ ದೇಶಕ್ಕೆ ಸಾಂಪ್ರದಾಯಿಕ ವೀಣೆ ತಯಾರಿಸಿ ಸರಬರಾಜು ಮಾಡುತ್ತಿದ್ದರು. ಅವರಿಂದ ನೂರಾರು ಜನ ವೀಣೆ ತಯಾರಿಸುವುದನ್ನು ಕಲಿತಿದ್ದಾರೆ.

103 ವರ್ಷದ ಪೆನ್ನ ಓಬಳಯ್ಯ ಅವರ ಈ ಸಾಧನೆಯನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಲು ಬಂದ ಪೆನ್ನ ಓಬಳಯ್ಯ ಅಸ್ವಸ್ಥರಾಗಿದ್ದರು. ಅವರ ಪರವಾಗಿ ಅವರ ಮಕ್ಕಳು ಪ್ರಶಸ್ತಿ ಸ್ವೀಕಾರ ಮಾಡಿದ್ದರು.

ಪ್ರಶಸ್ತಿ ಪಡೆದ ಮರುದಿನವೇ ಅವರು ದೈವಾಧೀನರಾಗಿರುವುದು ದುರಾದೃಷ್ಟಕರ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಸಿಂಪಾಡಿಪುರದ ಹೆಸರನ್ನು ತಮ ವೀಣೆಗಳ ಮೂಲಕ ರಾಷ್ಟ್ರಕ್ಕೆ ಪರಿಚಯಿಸಿದ ಪೆನ್ನ ಓಬಳಯ್ಯ ಅವರ ಸಾಂಸ್ಕೃತಿಕ ಸೇವೆಯನ್ನು ನೆನೆಯುತ್ತಾ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

“ಖರ್ಗೆ ಅವರು ಯಾವತ್ತಾದರೂ ಸಮಾಜಘಾತುಕ PFI, SDPI ಸಂಘಟನೆಗಳನ್ನು ನಿಷೇಧಿಸುವಂತೆ ಕೇಳಿದ್ದಾರೆಯೇ?”

ಬೆಂಗಳೂರು,ನ.3- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಿಎಫ್‌ಐ ಮತ್ತು ಎಸ್‌‍ಡಿಪಿಐಯಂತಹ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸುವಂತೆ ಎಂದಾದರೂ ಕೇಳಿದ್ದಾರೆಯೇ? ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಪ್ರಶ್ನಿಸಿದ್ದಾರೆ.

ರಾಷ್ಟೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌‍ಎಸ್‌‍)ವನ್ನು ನಿಷೇಧಿಸಬೇಕೆಂಬ ಮಲ್ಲಿಕಾರ್ಜುನ ಖರ್ಗೆ ಅವರ ಅಸಂಬದ್ಧ ಹೇಳಿಕೆ ತೀವ್ರ ಖಂಡನೀಯ. ಪಿಎಫ್‌ಐ ಮತ್ತು ಎಸ್‌‍ಡಿಪಿಐಯಂತಹ ಸಮಾಜಘಾತುಕ ಸಂಘಟನೆಗಳನ್ನು ನಿಷೇಧಿಸುವಂತೆ ಎಂದಾದರೂ ಅವರು ಕೇಳಿದ್ದಾರೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌‍ ಪಕ್ಷವು ರಾಜ್ಯದಲ್ಲಿ ಪಿಎಫ್‌ಐ ಮತ್ತು ಎಸ್‌‍ಡಿಪಿಐ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ನೂರಾರು ಪ್ರಕರಣಗಳನ್ನು ಹಿಂತೆಗೆದುಕೊಂಡಿದೆ. ಕರಾವಳಿ ಕರ್ನಾಟಕ ಮತ್ತು ಕೇರಳ ಎರಡರಲ್ಲೂ ನೂರಾರು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದರಲ್ಲಿ ಪಿಎಫ್‌ಐ ಕೈವಾಡವಿದೆ ಎಂಬ ಆರೋಪವಿದೆ.

ಪಿಎಫ್‌ಐ ಮತ್ತು ಎಸ್‌‍ಡಿಪಿಐ ವಿಷಯ ಬಂದಾಗ, ಖರ್ಗೆ ಅವರಿಂದ ಹಿಡಿದು ಕೆಳಹಂತದವರೆಗಿನ ಕಾಂಗ್ರೆಸಿಗರು ಹಿಂದೆ ಸರಿಯುತ್ತಾರೆ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿನ ಪೊಲೀಸ್‌‍ ಠಾಣೆ ಮತ್ತು ಪೊಲೀಸ್‌‍ ವಾಹನಗಳಿಗೆ ಬೆಂಕಿ ಹಚ್ಚಿದ ಕೃತ್ಯದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಸಮಾಜಘಾತುಕ ಶಕ್ತಿಗಳ ವಿರುದ್ಧ ದಾಖಲಾದ ಪ್ರಕರಣಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಹಿಂತೆಗೆದುಕೊಂಡಿರುವುದನ್ನು ಇಡೀ ಜಗತ್ತು ಕಂಡಿದೆ. ಈ ಕಾಂಗ್ರೇಸ್‌‍ ಸರ್ಕಾರ ಸ್ಪಷ್ಟವಾಗಿ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವನ್ನು ಖಂಡಿಸುವ ಧೈರ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗಿದೆಯೇ? ಎಂದು ತರಾಟೆ ೆತೆಗೆದುಕೊಂಡಿದ್ದಾರೆ.

ಕಳೆದ 100 ವರ್ಷಗಳಿಂದ ರಾಷ್ಟ್ರೀಯ ಏಕತೆ, ಸಮಗ್ರತೆ, ಸಾಂಸ್ಕೃತಿಕ ಪುನರುಜ್ಜೀವನ, ಸಮಾಜಸೇವೆ ಮತ್ತು ಸಾಮಾಜಿಕ ಸೌಹಾರ್ದಕ್ಕಾಗಿ ಕೆಲಸ ಮಾಡುತ್ತಿರುವ ಆರ್‌ಎಸ್‌‍ಎಸ್‌‍ ಅನ್ನು ನಿಷೇಧಿಸುವಂತೆ ಖರ್ಗೆ ಆಗ್ರಹ ಕೇವಲ ವಿಪರ್ಯಾಸ ಮಾತ್ರವಲ್ಲ, ಇದು ಸತ್ಯದ ತಿರುಚುವಿಕೆಯೂ ಆಗಿದೆ. ಆರ್‌ಎಸ್‌‍ಎಸ್‌‍ ಇಡೀ ದೇಶದ ಜನರಿಂದ ಗೌರವ, ವಿಶ್ವಾಸಾರ್ಹತೆ ಮತ್ತು ಸ್ವೀಕಾರಾರ್ಹತೆಯನ್ನು ಗಳಿಸಿದೆ. ಜನರ ಬೆಂಬಲವಿಲ್ಲದೆ ಆರ್‌ಎಸ್‌‍ಎಸ್‌‍ ಹೇಗೆ ಆಲದ ಮರದಂತೆ ಬೆಳೆಯಲು ಸಾಧ್ಯ? ಎಂದು ಗುಡುಗಿದ್ದಾರೆ.

ಕಾಂಗ್ರೆಸ್‌‍ ಹಿಂದೆಯೂ ಮೂರು ಬಾರಿ ಆರ್‌ಎಸ್‌‍ಎಸ್‌‍ ಅನ್ನು ನಿಷೇಧಿಸಲು ಪ್ರಯತ್ನಿಸಿತ್ತು ಎಂಬುದನ್ನು ಖರ್ಗೆ ಅರ್ಥಮಾಡಿಕೊಳ್ಳಬೇಕು. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸೇರಿದಂತೆ ಅದೇ ಕಾಂಗ್ರೆಸ್‌‍ ಸರ್ಕಾರವು ನಿಷೇಧವನ್ನು ಬೇಷರತ್ತಾಗಿ ತೆರವುಗೊಳಿಸಬೇಕಾಯಿತು ಎಂದು ರವಿಕುಮಾರ್‌ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಅನಿಲ್‌ ಅಂಬಾನಿಯ 3000 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇಡಿ

ನವದೆಹಲಿ, ನ. 3 (ಪಿಟಿಐ) ರಿಲಯನ್ಸ್ ಗ್ರೂಪ್‌ ಅಧ್ಯಕ್ಷ ಅನಿಲ್‌ ಅಂಬಾನಿ ಅವರ ಕಂಪನಿಗಳ ವಿರುದ್ಧದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಅವರಿಗೆ ಸಂಬಂಧಿಸಿದ 3,000 ಕೋಟಿ ರೂ.ಗಳಿಗೂ ಹೆಚ್ಚಿನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

66 ವರ್ಷದ ಅಂಬಾನಿ ಅವರ ಮುಂಬೈನ ಪಾಲಿ ಹಿಲ್‌ನಲ್ಲಿರುವ ಮನೆ ಸೇರಿದಂತೆ ಅವರ ಗುಂಪಿನ ಕಂಪನಿಗಳ ಇತರ ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಫೆಡರಲ್‌ ತನಿಖಾ ಸಂಸ್ಥೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ನಾಲ್ಕು ತಾತ್ಕಾಲಿಕ ಆದೇಶಗಳನ್ನು ಹೊರಡಿಸಿದೆ.

ದೆಹಲಿಯ ಮಹಾರಾಜ ರಂಜಿತ್‌ ಸಿಂಗ್‌ ಮಾರ್ಗದಲ್ಲಿರುವ ರಿಲಯನ್‌್ಸ ಸೆಂಟರ್‌ಗೆ ಸೇರಿದ ಭೂಮಿ ಮತ್ತು ರಾಷ್ಟ್ರ ರಾಜಧಾನಿ ನೋಯ್ಡಾ, ಗಾಜಿಯಾಬಾದ್‌‍, ಮುಂಬೈ, ಪುಣೆ, ಥಾಣೆ, ಹೈದರಾಬಾದ್‌‍, ಚೆನ್ನೈ ಮತ್ತು ಪೂರ್ವ ಗೋದಾವರಿಯಲ್ಲಿರುವ ಅನೇಕ ಇತರ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಮೂಲಗಳ ಪ್ರಕಾರ, ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 3,084 ಕೋಟಿ ರೂ.ಈ ಪ್ರಕರಣವು ರಿಲಯನ್‌್ಸ ಹೋಮ್‌ ಫೈನಾನ್‌್ಸ ಲಿಮಿಟೆಡ್‌ ಮತ್ತು ರಿಲಯನ್‌್ಸ ಕಮರ್ಷಿಯಲ್‌ ಫೈನಾನ್‌್ಸ ಲಿಮಿಟೆಡ್‌ ಸಂಗ್ರಹಿಸಿದ ಸಾರ್ವಜನಿಕ ನಿಧಿಯ ಹಣ ವರ್ಗಾವಣೆ ಮತ್ತು ಅಕ್ರಮ ವರ್ಗಾವಣೆಗೆ ಸಂಬಂಧಿಸಿದೆ ಎಂದು ಆರೋಪಿಸಲಾಗಿದೆ.

2017-2019ರ ಅವಧಿಯಲ್ಲಿ, ಯೆಸ್‌‍ ಬ್ಯಾಂಕ್‌ ಸಾಧನಗಳಲ್ಲಿ 2,965 ಕೋಟಿ ರೂ.ಗಳನ್ನು ಮತ್ತು ಸಾಧನಗಳಲ್ಲಿ 2,045 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ.ಇವು ಡಿಸೆಂಬರ್‌ 2019 ರ ವೇಳೆಗೆ ನಿಷ್ಕ್ರಿಯ ಹೂಡಿಕೆಗಳಾಗಿ ಮಾರ್ಪಟ್ಟವು, ಇದರಿಂದ 1,353.50 ಕೋಟಿ ರೂ.ಗಳು ಮತ್ತು ಗೆ 1,984 ಕೋಟಿ ರೂ.ಗಳು ಬಾಕಿ ಉಳಿದಿವೆ ಎಂದು ತಿಳಿಸಿದೆ.

ಅಂಬಾನಿ ವಿರುದ್ಧದ ಕ್ರಮವು ರಿಲಯನ್‌್ಸ ಇನ್ಫ್ರಾಸ್ಟ್ರಕ್ಚರ್‌ ಸೇರಿದಂತೆ ಬಹು ಗುಂಪು ಕಂಪನಿಗಳು 17,000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಆರ್ಥಿಕ ಅಕ್ರಮಗಳು ಮತ್ತು ಸಾಮೂಹಿಕ ಸಾಲ ಮರುಪಾವತಿಗೆ ಸಂಬಂಧಿಸಿದೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಉದ್ಯಮಿಯನ್ನು ಆಗಸ್ಟ್‌ನಲ್ಲಿ ಪ್ರಶ್ನಿಸಿತು.ಜುಲೈ 24 ರಂದು ಮುಂಬೈನಲ್ಲಿ ಏಜೆನ್ಸಿಯು 50 ಕಂಪನಿಗಳ 35 ಆವರಣಗಳು ಮತ್ತು ಅವರ ವ್ಯವಹಾರ ಗುಂಪಿನ ಕಾರ್ಯನಿರ್ವಾಹಕರು ಸೇರಿದಂತೆ 25 ಜನರನ್ನು ಶೋಧಿಸಿದ ನಂತರ ಇದು ಸಂಭವಿಸಿದೆ.ಇಡಿಯ ಹಣ ವರ್ಗಾವಣೆ ಪ್ರಕರಣವು ಕೇಂದ್ರ ತನಿಖಾ ದಳದ ಎಫ್‌ಐಆರ್‌ನಿಂದ ಬಂದಿದೆ.