Home Blog Page 95

331 ಹೊಸ ಜಾತಿಗಳು ಎಲ್ಲಿಂದ ಹುಟ್ಟಿಕೊಂಡವು..? : ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿ ಗುರುತಿಸಿ ತಯಾರಿಸುವ ಜಾತಿಗಣತಿಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಇದು ಅವೈಜ್ಞಾನಿಕವಾಗಿ ತಯಾರಿಸಿರುವ ವರದಿ ಆಗಿದ್ದು, ವಿರೋಧಿಸುತ್ತೇವೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಆದಿಚುಂಚನಗಿರಿ ಶಾಖ ಮಠದಲ್ಲಿ ಆಯೋಜಿಸಿದ್ದ ಒಕ್ಕಲಿಗ ಸಮುದಾಯದ ಜಾಗೃತಿ ಸಭೆಯ ನಂತರ ಮಾಧ್ಯಮಗಳ ಜೊತೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದರು.

ಸಮಾಜ ಸಮಾಜ ಜೊತೆ ಸಂಘರ್ಷ ತರಲು ರಾಜ್ಯ ಸರ್ಕಾರ ಹೊರಟಿದೆ. 331 ಹೊಸ ಜಾತಿ ಎಲ್ಲಿ ಹುಟ್ಟಿಕೊಂಡಿದೆ ಗೊತ್ತಿಲ್ಲ ಎಂದು ಜಾತಿ ಸಮೀಕ್ಷೆ ಬಗ್ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರು ವ್ಯಂಗ್ಯವಾಡಿದರು.

ಕುಮಾರಣ್ಣನವರು ಕಾಂತರಾಜು ವರದಿಯನ್ನ ರಿಜೆಕ್ಟ್ ಮಾಡ್ತಾರೇ, ಮಧೂಸುದನ್ ಅಧ್ಯಕ್ಷರಾದ 15 ದಿನದಲ್ಲಿ 2 ಕೋಟಿ ಜನರ ಮಾಹಿತಿ ಕಲೆ ಹಾಕಲು ಸಾಧ್ಯವಾ.? ಎಂದು ನಿಖಿಲ್ ಅವರು ಪ್ರಶ್ನಿಸಿದರು.

ಜಾತಿ ಸಮೀಕ್ಷೆಗಳು ಆಗಬೇಕಾಗಿರೋದು ಕಟ್ಟಕಡೆಯ ವ್ಯಕ್ತಿ ಮೇಲೆತ್ತಲು ಮಾಡಬೇಕು. ಆರ್ಥಿಕ ಮತ್ತು ಸಾಮಾಜಿಕವಾಗಿ ನ್ಯಾಯವಾದಿಸುವ ನಿಟ್ಟಿನಲ್ಲಿ ಈ ಸಮೀಕ್ಷೆಗಳು ಆಗುವದರಲ್ಲಿ ನಮ್ಮ ಸ್ವಾಗತ ಇದೆ. ಆದರೆ ಇದರ ಹಿಂದೆ ದುರುದ್ದೇಶಗಳನ್ನು ಇಟ್ಟುಕೊಂಡು ಒಂದು ಸಮುದಾಯವನ್ನು ಮೇಲೆತ್ತಿಕೊಳ್ಳುವುದಕ್ಕೆ. ಇನ್ನೊಂದು ಪ್ರಬಲ ಸಮುದಾಯದ ನಂಬರ್ ಗಳನ್ನು ಮುಂದಿಟ್ಟು ಸಮಾಜ ಸಮಾಜಗಳ ನಡುವೆ ಸಂಘರ್ಷ ಉಂಟು ಮಾಡುವುದಕ್ಕೆ ಸರ್ಕಾರ ಮುಂದಾಗಬಾರದು ಎಂದು ಹೇಳಿದರು.

ಇಲ್ಲಿ 331 ಹೊಸ ಜಾತಿಗಳು ಎಲ್ಲಿಂದ ಹುಟ್ಟಿಕೊಳ್ಳುತ್ತೋ ಗೊತ್ತಿಲ್ಲ. ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದ ಆಯೋಗ ಮಾಡಿಕೊಂಡು 180 ಕೋಟಿ ಖರ್ಚು ಮಾಡಿದರು, ಈಗ ಮಧುಸೂದನ್ ಅವರ ಅಧ್ಯಕ್ಷತೆಯಲ್ಲಿ ಹೊಸ ಆಯೋಗವನ್ನು ರಚಿಸಿ 15 ದಿನದಲ್ಲಿ 2 ಕೋಟಿ ಜನರ ಮಾಹಿತಿ ಕಲೆ ಹಾಕಲು ಸಾಧ್ಯವಾ..,? ಇಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.

10 ವರ್ಷದಲ್ಲಿ ಆಗದೆ ಇರುವಂತಹ ಜಾತಿ ಸಮೀಕ್ಷೆ ಹೀಗ್ಯಾಕೆ.? ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ಮಾಡೋದಕ್ಕೆ ಅಧಿಕಾರವಿದೆ. ಆದರೆ ಅಂತಿಮವಾಗಿ ಕೇಂದ್ರ ಸರ್ಕಾರ ಜಾತಿ ಗಣತಿ ಕಾಲಂ ನನ್ನ ಸೇರಿಸಿದ್ದಾರೆ. ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರದ ಕಡೆಯಿಂದ ಇಡೀ ರಾಜ್ಯ ವ್ಯಾಪ್ತಿ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಜಾತಿಗಣತಿ ವಿಚಾರದಲ್ಲಿ ಸರ್ಕಾರ ಆಗಾಗ ಕೆಲವೊಂದಿಷ್ಟು ಹೆಜ್ಜೆಗಳನ್ನ ಇಡುವುದನ್ನು ನೋಡಿದ್ದೇವೆ.ಈ ಹಿಂದೆಯೂ ಕೂಡ ಇದೇ ರೀತಿ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದ ಸಚಿವ ಸಂಪುಟದ ಸಭೆಯಲ್ಲಿ ಆಡಳಿತ ಪಕ್ಷದ ಮಂತ್ರಿಗಳಲ್ಲೇ ಅಪಸ್ವರ, ಭಿನ್ನಾಭಿಪ್ರಾಯ ಇರುವುದನ್ನ ನೋಡಿದ್ದೇವೆ ಎಂದು ಹೇಳಿದರು.

ಜಾತಿಗಣತಿ ಎಲ್ಲಾ ಸಮುದಾಯದಲ್ಲಿ ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ. ಈ ನೆಲೆಯಲ್ಲಿ ಪರಮ ಪೂಜ್ಯ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಸರ್ವ ಪಕ್ಷದ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಕೆಲವೊಂದಿಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ತಿಳಿಸಿದರು.

ಹೊಸಹೊಸ ಜಾತಿಗಳನ್ನು ಸೃಷ್ಟಿಸಿ ಗೊಂದಲ ಮೂಡಿಸಿರುವುದು ಸರಿಯಲ್ಲ : ನಂಜಾವಧೂತ ಸ್ವಾಮೀಜಿ

ಬೆಂಗಳೂರು,ಸೆ.20- ಹೊಸಹೊಸ ಜಾತಿಗಳನ್ನು ಸೃಷ್ಟಿಸಿ ಗೊಂದಲ ಮೂಡಿಸಿರುವುದು ಸರಿಯಲ್ಲ ಎಂದು ಪಟ್ಟನಾಯಕನಹಳ್ಳಿಯ ಸ್ಫಟಿಕ ಪುರಿ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೊಸ ಜಾತಿಯ ಹೆಸರುಗಳು ಪ್ರಕಟವಾಗಿವೆ. ಅಲ್ಲದೆ ಒಕ್ಕಲಿಗ ಸಮುದಾಯದ ಜೊತೆ ಧರ್ಮದ ಹೆಸರು ತಳುಕು ಹಾಕಲಾಗಿದೆ. ಇದಕ್ಕೆ ನಮ ತೀವ್ರ ಆಕ್ಷೇಪವಿದೆ ಎಂದು ಹೇಳಿದರು.

ಈ ರೀತಿ ಯಾವುದೇ ಜಾತಿ, ಧರ್ಮ ಪ್ರಕಟವಾಗಬೇಕಾದರೆ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಆಯೋಗದಲ್ಲಿ ಚರ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅದನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಕು. ಈ ರೀತಿಯ ಯಾವ ಪ್ರಕ್ರಿಯೆಗಳೂ ನಡೆದಿಲ್ಲ ಎಂದರು.

ಜಾತಿಗಣತಿಗೆ ಇದು ಸಕಾಲವಲ್ಲ. ಕೃಷಿ ಚಟುವಟಿಕೆಗಳಲ್ಲಿ ಸಮುದಾಯದವರು ತೊಡಗಿದ್ದಾರೆ. ಪಿತೃಪಕ್ಷ, ನವರಾತ್ರಿ, ದಸರಾ ಸೇರಿದಂತೆ ಸಾಲುಸಾಲು ಹಬ್ಬಗಳಿವೆ. ಆಯೋಗ ಅವಸರವಾಗಿ ಗಣತಿಗೆ ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಾವಿರಾರು ಅಹವಾಲು, ಆಕ್ಷೇಪಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದ್ದರೂ ಅವುಗಳಿಗೆ ಸಮಂಜಸ ಉತ್ತರ ನೀಡದೇ ಏಕ ಪಕ್ಷೀಯವಾಗಿ ತೆಗೆದುಕೊಂಡು ತರಾತುರಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯವೂ ಕೂಡ ಸಮೀಕ್ಷೆಯನ್ನು ಮುಂದೂಡಬೇಕು ಮತ್ತು ಹೆಚ್ಚು ಸಮಯಾವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುವೆ ಎಂದರು.

ನಮ ಜನಾಂಗದವರು ಮುಗ್ಧರು, ಅನಕ್ಷರಸ್ಥರಿದ್ದು, ಅವರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಹೀಗಾಗಿ ಎಲ್ಲರ ಅಭಿಪ್ರಾಯವನ್ನು ಆಯೋಗ ಗೌರವಿಸಬೇಕು ಎಂದು ಹೇಳಿದರು.ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಸಮೀಕ್ಷೆ ಸಂದರ್ಭದಲ್ಲಿ ಜಾತಿ ಕಾಲಂ 9 ರಲ್ಲಿ ಒಕ್ಕಲಿಗ ಎಂದೇ ಬರೆಸಬೇಕು. ಅಗತ್ಯವಿದ್ದರೆ ಮಾತ್ರ ಉಪಜಾತಿ ನಮೂದಿಸಬೇಕು. ಸಮೀಕ್ಷೆ ನಡೆಸಲು ಈಗ ಸಕಾಲವಲ್ಲ. ಹೀಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಲ್ಲಿ ನಮ ಮನವಿ ಏನೆಂದರೆ 15 ದಿನ ಸಮಯ ಸಾಲುವುದಿಲ್ಲ. ಕನಿಷ್ಠ ಪಕ್ಷ 45 ದಿನವಾದರೂ ಗಣತಿಗೆ ಕಾಲಾವಕಾಶ ಕೊಡಬೇಕು ಎಂದು ಆಗ್ರಹಿಸಿದರು.

ನ್ಯಾಯಯುತವಾಗಿ ಸಮೀಕ್ಷೆ ನಡೆಯಬೇಕು :
ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಮಾತನಾಡಿ, ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಜಾತಿಗಣತಿಯ ಬಗ್ಗೆ ಸಲಹೆ ಕೊಟ್ಟಿದ್ದಾರೆ. ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ನಮ ವಿರೋಧವಿಲ್ಲ. ಆದರೆ ನ್ಯಾಯಯುತವಾಗಿ ಸಮೀಕ್ಷೆ ನಡೆಯಬೇಕು. ಹಿಂದುಳಿದ ವರ್ಗಗಳ ಆಯೋಗದಿಂದ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ನಮ ಸಮುದಾಯಕ್ಕಷ್ಟೇ ಅಲ್ಲ ಯಾವುದೇ ಸಮುದಾಯಕ್ಕೂ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು.

ಸಮೀಕ್ಷೆ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ. ಈಗ ಸಮೀಕ್ಷೆಯನ್ನು ಮುಂದೂಡಿ ಎಲ್ಲದಕ್ಕೂ ಕಾಲಾವಕಾಶ ಸಿಗಲಿ. ಕೇವಲ 15 ದಿನದಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು. ಅಗತ್ಯವಿದ್ದರಷ್ಟೇ ಉಪಪಂಗಡಗಳನ್ನು ಬರೆಸಬೇಕು. ನಮ ಜನಾಂಗದ ಜೊತೆ ಕೆಲವು ಜಾತಿಗಳನ್ನು ಸೇರ್ಪಡೆ ಮಾಡಿದ್ದು, ಅವುಗಳನ್ನು ತೆಗೆಯಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲಾ, ತಾಲ್ಲೂಕು, ಪಟ್ಟಣ, ಗ್ರಾಮಗಳಿಗೆ ಒಕ್ಕಲಿಗ ಸಮುದಾಯದವರು ಭೇಟಿ ನೀಡಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಅಲ್ಲದೆ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುತ್ತೇವೆ. ಈಗಾಗಲೇ ಸಂಘದ ನೌಕರರನ್ನು ಜಾಗೃತಿಗೊಳಿಸಲು ನಿಯೋಜಿಸಿದ್ದೇವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಖಚಾಂಚಿ ನೆಲ್ಲಿಗೆರೆ ಬಾಲು, ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ನಾಗರಾಜ್‌, ಸಂಚಾಲಕ ಆಡಿಟರ್‌ ನಾಗರಾಜ್‌ ಯಲಚವಾಡಿ ಮತ್ತಿತರರು ಉಪಸ್ಥಿತರಿದ್ದರು.

ಜಾತಿಗಣತಿ ಮುಂದೂಡುವಂತೆ ರಾಜ್ಯಸರ್ಕಾರಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹ

ಬೆಂಗಳೂರು,ಸೆ.20- ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22 ರಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ(ಜಾತಿಗಣತಿ)ಯನ್ನು ಮುಂದೂಡಬೇಕು ಹಾಗೂ ಸಮೀಕ್ಷಾ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರಾಜ್ಯಸರ್ಕಾರವನ್ನು ಆಗ್ರಹಿಸಿದರು.

ವಿಜಯನಗರದ ಆದಿಚುಂಚನಗಿರಿ ಮಠದ ಸಮುದಾಯ ಭವನದಲ್ಲಿ ಇಂದು ವಿವಿಧ ಮಠಾಧೀಶರು, ಒಕ್ಕಲಿಗ ಜನಾಂಗದ ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳ ಪ್ರಮುಖರೊಂದಿಗೆ ನಡೆದ ಜಾತಿಗಣತಿಯ ಸಮಾಲೋಚನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸಮೀಕ್ಷೆ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದವರು ಜಾತಿ ಕಾಲಂ 9, 10, 11 ರಲ್ಲಿ ಏನೇ ಇದ್ದರೂ ಒಕ್ಕಲಿಗ ಎಂದೇ ಬರೆಸಬೇಕು. ಒಕ್ಕಲಿಗ ಜನಾಂಗದ ಕೋಡ್‌ 1541 ನಮೂದಿಸಬೇಕು. ಅಗತ್ಯವಿದ್ದರೆ ಮಾತ್ರ ತಮ ತಮ ಉಪಪಂಗಡಗಳನ್ನು ಬರೆಸಬೇಕು ಎಂದು ಕರೆ ನೀಡಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.30 ರಿಂದ 40 ರಷ್ಟು ಸಮೀಕ್ಷೆ ಆಗಿರಲಿಲ್ಲ. ಹಾಗಾಗಿ ಆ ವರದಿ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಜನರ ಭಾವನೆಗೆ ಸರ್ಕಾರ ಸ್ಪಂದಿಸಿ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಅವಕಾಶ ಕಲ್ಪಿಸಿರುವುದನ್ನು ಸ್ವಾಗತಿಸುತ್ತೇವೆ ಎಂದರು.

ಸೆ.22 ರಿಂದ 10 ದಿನಗಳ ಕಾಲ ನವರಾತ್ರಿ ವ್ರತ ಆಚರಣೆ ನಡೆಯುತ್ತದೆ. ಅಲ್ಲದೆ, ಈ ಸಂದರ್ಭದಲ್ಲಿ ಪಿತೃಪಕ್ಷ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ. ರೈತಾಪಿ ಸಮುದಾಯ ಕೃಷಿ ಚಟುವಟಿಕೆಯಲ್ಲಿ ಮಗ್ನವಾಗಿರುತ್ತದೆ. ಜೊತೆಗೆ ಶಾಲಾ ರಜಾದಿನಗಳಾಗಿರುವುದರಿಂದ ಪ್ರವಾಸವನ್ನು ಕೈಗೊಂಡಿರುತ್ತಾರೆ. ಹೀಗಾಗಿ ಈ ಕಾಲಘಟ್ಟ ವಾಸ್ತವಿಕವಾಗಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ರಾಜ್ಯಸರ್ಕಾರ 400 ರಿಂದ 500 ಕೋಟಿ ರೂ. ವೆಚ್ಚ ಮಾಡಿ ಸಮೀಕ್ಷೆ ನಡೆಸುತ್ತಿತ್ತು. ಇದು ಅರ್ಥಪೂರ್ಣವಾಗಬೇಕು ಎಂಬುದೇ ನಮ ಅಪೇಕ್ಷೆ ಎಂದು ಹೇಳಿದರು.
ಸೂಕ್ತ ಕಾಲವಲ್ಲವಾದ್ದರಿಂದ ಸಮೀಕ್ಷೆಯನ್ನು ಮುಂದೂಡಬೇಕು. ಹಾಗೂ ಸಮೀಕ್ಷೆಗೆ ಹೆಚ್ಚು ಸಮಯ ನೀಡಬೇಕು. ತೆಲಂಗಾಣ ರಾಜ್ಯದಲ್ಲಿ 3.50 ಕೋಟಿ ಜನಸಂಖ್ಯೆ ಇದೆ. ಅಲ್ಲಿ 3 ತಿಂಗಳ ಕಾಲಾವಕಾಶ ಕೊಟ್ಟು ಉನ್ನತ ತಂತ್ರಜ್ಞಾನ ಬಳಸಿ ಸಮೀಕ್ಷೆ ಮಾಡಿದ್ದಾರೆ. ರಾಜ್ಯದಲ್ಲಿ 7 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ವೈಜ್ಞಾನಿಕವಾಗಿ ಆಗಬೇಕು. ಅದಕ್ಕಾಗಿ ಹೆಚ್ಚು ಸಮಯವನ್ನು ನೀಡಬೇಕು ಎಂದು ಶ್ರೀಗಳು ತಿಳಿಸಿದರು.

ಒಕ್ಕಲಿಗರ ಜಾತಿಯ ಜೊತೆಗೆ ವಿವಿಧ ಧರ್ಮ, ಜಾತಿಗಳನ್ನು ಸೇರಿಸಿರುವುದು ಅಸಮಾಧಾನ, ವೈರುಧ್ಯಕ್ಕೆ ಕಾರಣವಾಗಿದೆ. ಜಾತಿಗಣತಿ ಬಗ್ಗೆ ಶ್ರೀಮಠದ ಭಕ್ತರು ಹಾಗೂ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಲ್ಲಾ ಜನಪ್ರತಿನಿಧಿಗಳಿಗೆ ಈ ವಿಚಾರವನ್ನು ಮನದಟ್ಟು ಮಾಡಲಾಗಿದೆ. ಏಕೆಂದರೆ ಒಕ್ಕಲಿಗ ಸಮುದಾಯದ ಮುಖವಾಣಿ, ಸಮುದಾಯದ ಶಕ್ತಿ ಹಾಗೂ ಜನಪ್ರತಿನಿಧಿಗಳಾಗಿದ್ದಾರೆ. ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಈಗ ಪ್ರಕಟಿಸಿರುವ ಜಾತಿಗಳ ಪಟ್ಟಿ ಹಾಗೂ ಸಮೀಕ್ಷೆಯಲ್ಲಿ ಸಾಕಷ್ಟು ನ್ಯೂನತೆ ಕಂಡುಬಂದಿದ್ದು, ಅವುಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯಸರ್ಕಾರಕ್ಕೆ ಜನಗಣತಿ ಮಾಡುವ ಅಧಿಕಾರವಿಲ್ಲ. ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾತ್ರ ಸಮೀಕ್ಷೆ ಮಾಡಬೇಕು ಎಂಬುದು ತಮಗಿರುವ ಮಾಹಿತಿ. ಕೇಂದ್ರ ಸರ್ಕಾರ ಜನಗಣತಿ ನಡೆಸಲಿದ್ದು ಅದು ಅಧಿಕೃತವಾಗಲಿದೆ ಎಂದರು.

ಶೇ.90 ರಷ್ಟು ಒಕ್ಕಲಿಗರು ನಾವೇನೇ ಹೇಳಿದರೂ ಅವರು ಉಪಜಾತಿಯನ್ನು ಬರೆಸಲು ಸಿದ್ಧವಿಲ್ಲ. ಕಾರಣಾಂತರದಿಂದ ಸಣ್ಣಪುಟ್ಟ ಆಚರಣೆಯಿಂದ ಬಂದಿರುವ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ಮನೆಗೆ ಸೀಮಿತವಾಗಿರುತ್ತವೆ ಎನ್ನುತ್ತಿದ್ದಾರೆ. ಹೀಗಾಗಿ ಪ್ರಜ್ಞಾವಂತ ರಾಜ್ಯಸರ್ಕಾರ ಜಾತಿಗಣತಿಯನ್ನು ಮುಂದೂಡಬೇಕು ಎಂದು ಆಗ್ರಹಿಸುತ್ತೇವೆ. ಸಕಾರಾತಕವಾಗಿ ಸ್ಪಂದನೆ ಮಾಡುತ್ತದೆ ಎಂಬ ನಿಲುವನ್ನು ಹೊಂದಿದ್ದೇವೆ ಎಂದು ಹೇಳಿದರು.
ಸಮುದಾಯದ ಜನಪ್ರತಿನಿಧಿಗಳಿಗೆ ಸರ್ಕಾರದಲ್ಲಿ ಸಮುದಾಯದ ದನಿಯಾಗುವಂತೆ ನಿರ್ದೇಶನ ಕೊಡಲಾಗಿದೆ. ಅದಕ್ಕೆ ಸೂಕ್ತ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತದೆ ಎಂಬ ವಿಶ್ವಾಸವಿದೆ. ಸಮೀಕ್ಷೆಯಲ್ಲಿನ ನ್ಯೂನತೆಗಳು ಸರ್ಕಾರದ ಅರಿವಿಗೆ ಬಂದು ವಾಪಸ್ಸು ಪಡೆಯುತ್ತಾರೆ ಎಂಬ ನಿರೀಕ್ಷೆಯಿದೆ. ಕ್ರಿಶ್ಚಿಯನ್‌ ಒಕ್ಕಲಿಗ, ಜೈನ ಒಕ್ಕಲಿಗ ಎಂದೆಲ್ಲಾ ಉಲ್ಲೇಖಿಸಲಾಗಿದೆ. ಮುಂದೆ ಮುಸ್ಲಿಂ ಒಕ್ಕಲಿಗ, ಹಿಂದೂ ಕ್ರಿಶ್ಚಿಯನ್‌ ಆಗಬಹುದಲ್ಲವೇ ಎಂದು ಪ್ರಶ್ನಿಸಿದರು. ಧರ್ಮ ಒಡೆದಿರುವ ಬಗ್ಗೆ ಇತಿಹಾಸ ಅವಲೋಕಿಸಿದರೆ ಗಮನಕ್ಕೆ ಬರುತ್ತದೆ. ನಾಸ್ತಿಕ ಬಳಕೆಗೆ ಅವಕಾಶ ಕಲ್ಪಿಸಿರುವುದು ಗಮನಿಸಿದರೆ ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು ಎಂದರು.

ಪಾರದರ್ಶಕವಾಗಿರಲಿ :
ಗಣತಿಯ ಸಂದರ್ಭದಲ್ಲಿ ಮೊಬೈಲ್‌ ಸಂಖ್ಯೆ ಹಾಗೂ ಇ-ಮೇಲ್‌ ವಿಳಾಸ ಪಡೆದ ಮೇಲೆ ಗಣತಿದಾರರು ಪೂರ್ಣ ಮಾಹಿತಿ ಪಡೆದು ಅಪ್ಲೋಡ್‌ ಮಾಡಿದ ಬಳಿಕ ಮನೆಯ ಯಜಮಾನನಿಗೆ ಅದರ ಪೂರ್ಣ ಮಾಹಿತಿ ಬಂದರೆ ಸಂತೋಷ. ಸಮೀಕ್ಷೆಯ ಮಾಹಿತಿಯೂ ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತಿರಬೇಕು, ಪಾರದರ್ಶಕವಾಗಿರಬೇಕು ಎಂದು ಬಯಸುತ್ತೇವೆ ಎಂದು ಹೇಳಿದರು.

ದೆಹಲಿ ಶಾಲೆಗಳಿಗೆ ಮತ್ತೆ ಬರುತ್ತಿವೆ ಹುಸಿ ಬಾಂಬ್‌ ಕರೆಗಳು

ನವದೆಹಲಿ, ಸೆ. 20- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆಗಳು ಬರತೊಡಗಿವೆ.ದ್ವಾರಕ ಡಿಪಿಎಸ್‌‍ ಸೇರಿದಂತೆ ಹಲವು ಶಾಲೆಗಳಿಗೆ ದುಷ್ಕರ್ಮಿಗಳಿಂದ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ರವಾನಿಸಲಾಗಿದೆ. ಬಾಂಬ್‌ ಬೆದರಿಕೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸ್ಥಳಾಂತರ ಮಾಡಲಾಗಿದೆ.

ಶಾಲೆಗಳಲ್ಲಿ ಬಾಂಬ್‌ ಪತ್ತೆ ದಳ ಹಾಗೂ ಶ್ವಾನ ದಳದಿಂದ ಪರಿಶೀಲನೆ ಮಾಡಲಾಗುತ್ತಿದೆ.ಡಿಪಿಎಸ್‌‍ ದ್ವಾರಕಾ ಹಾಗೂ ನಜಾಫ್‌ ಗಡ, ದೆಹಲಿ ಪಬ್ಲಿಕ್‌ ಸ್ಕೂಲ್‌‍, ಕೃಷ್ಣ ಮಾಡೆಲ್‌ ಪಬ್ಲಿಕ್‌ ಸ್ಕೂಲ್‌ ಹಾಗೂ ಸರ್ವೋದಯ ವಿದ್ಯಾಲಯ ಸೇರಿ ಹಲವು ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿವೆ.

ಪರೀಕ್ಷೆಗಳ ಸಮಯದಲ್ಲಿ ಬಾಂಬ್‌ ಬೆದರಿಕೆ ಕರೆ ಹಲವು ಅನುಮಾನಗಳಿಗೂ ಕಾರಣವಾಗಿದೆ.ಕಳೆದ 8 ತಿಂಗಳಲ್ಲಿ 150ಕ್ಕೂ ಹೆಚ್ಚು ಬಾಂಬ್‌ ಬೆದರಿಕೆ ಕರೆ ದೆಹಲಿಯ ಶಾಲೆಗಳಿಗೆ ಸರಣಿ ಬಾಂಬ್‌ ಬೆದರಿಕೆಗಳು ಬರುತ್ತಿವೆ. ಕಳೆದ 8 ತಿಂಗಳಲ್ಲಿ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿವೆ.

ಸದ್ಯ ದೆಹಲಿ ಪೊಲೀಸರಿಗೆ ಈ ಬಾಂಬ್‌ ಬೆದರಿಕೆ ಸಂದೇಶಗಳು ತಲೆನೋವಾಗಿ ಪರಿಣಮಿಸಿದೆ. ್ಟಈ ವಿಚಾರವಾಗಿ ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾವು ಕ್ಯಾಂಪಸ್‌‍ನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ದೆಹಲಿ ಹೈಕೋರ್ಟ್‌ಗೂ ಬಾಂಬ್‌ ಬೆದರಿಕೆ ಬಂದಿತ್ತು. ಕೋರ್ಟ್‌ಗೆ ಈ ಮೇಲ್‌ ಮೂಲಕ ಬಂದ ಬಾಂಬ್‌ ಬೆದರಿಕೆ ಕೆಲಕಾಲ ತಲ್ಲಣವನ್ನುಂಟು ಮಾಡಿತ್ತು. ವಿಷಯ ತಿಳಿಯುತ್ತಿದ್ದಂತೆ ಕೋರ್ಟ್‌ನಿಂದ ಎಲ್ಲರನ್ನು ತೆರವುಗೊಳಿಸಲಾಗಿತ್ತು.

ಬಾಂಬ್‌ ನಿಷ್ಕ್ರಿಯ ದಳ, ಪೊಲೀಸರು, ಶ್ವಾನ ದಳ ಸ್ಥಳಕ್ಕೆ ದಾಡಾಯಿಸಿದ್ದವು. ಭದ್ರತಾ ಸಿಬ್ಬಂದಿ ಇಡೀ ಕೋರ್ಟ್‌ ಆವರಣ ಸುತ್ತುವರಿದಿದ್ದರು.ಕೋರ್ಟ್‌ನಲ್ಲಿದ್ದ ವಕೀಲರು ಆತಂಕದಿಂದಲೇ ಹೊರ ಬಂದರು. ಬಾಂಬ್‌ ನಿಷ್ಕ್ರಿಯ ದಳ, ಪೊಲೀಸರು, ಶ್ವಾನ ದಳ ಕೋರ್ಟ್‌ನಲ್ಲಿ ಶೋಧ ನಡೆಸಿದರು ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ. ಇದರಿಂದ ವಕೀಲರು ನಿಟ್ಟಿಸಿರು ಬಿಟ್ಟಿದ್ದರು.

ಬೆಂಗಳೂರಲ್ಲಿ ಮದ್ಯಪಾನಿ-ಧೂಮಪಾನಿಗಳಿಗೆ ಶಾಕ್‌ ಕೊಟ್ಟ ಪೊಲೀಸರು

ಬೆಂಗಳೂರು,ಸೆ.20- ಬೀದಿಗಳಲ್ಲಿ ಬೀಡಿ, ಸಿಗರೇಟ್‌ ಸೇದುವವರಿಗೆ ಹಾಗೂ ಬಾರ್‌ಗಳಲ್ಲಿ ಎಣ್ಣೆ ಹೊಡೆಯುವವರಿಗೆ ಪೊಲೀಸರು ಬೆಂಡೆತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಹಾಗೂ ಬಾರ್‌ಗಳಲ್ಲಿ ಮದ್ಯಪಾನಕ್ಕೆ ಅವಕಾಶವಿಲ್ಲ ಎಂಬ ನಿಯಮವಿದ್ದರೂ ಕಾನೂನು ಉಲ್ಲಂಘನೆ ಮಾಡಿರುವ ಮದ್ಯಪಾನಿ-ಧೂಮಪಾನಿಗಳಿಗೆ ಪೊಲೀಸರು ಶಾಕ್‌ ನೀಡಿದ್ದಾರೆ.

ರಾತ್ರೋರಾತ್ರಿ ರೌಡಿಗಳ ಮನೆಗಳ ಮೇಲೆ ಮುಗಿಬಿದ್ದು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬಸವೇಶ್ವರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಶೋಭಾ ವೈನ್‌್ಸ ಒಳಗೆ ಕೆಲವರು ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದ್ದು, ಪಿಎಸ್‌‍ಐ ನಾಗಭೂಷಣ್‌ ನೀಡಿರುವ ದೂರಿನ ಆಧಾರದ ಮೇರೆಗೆ ಬಾರ್‌ ಕ್ಯಾಷಿಯರ್‌ ದಿನೇಶ್‌ (38) ಎಂಬುವವರ ಮೇಲೆ ಎಫ್‌ಐಆರ್‌ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಮೋದಿ ರಸ್ತೆಯಲ್ಲಿರುವ ಸಂತೋಷ್‌ ಪಾನ್‌ ಅಂಗಡಿ ಬಳಿ ಜನ ಗುಂಪುಗೂಡಿ ಧೂಮಪಾನ ಹಾಗೂ ಪಾನ್‌ ಸೇವಿಸುತ್ತಿರುವುದನ್ನು ಗಮನಿಸಿ ಇದೇ ಠಾಣೆ ಪೊಲೀಸರು ಪಾನ್‌ ಅಂಗಡಿ ಮಾಲೀಕ ರಾಜು ರವರ ವಿರುದ್ಧ ಕ್ರಮಕೈಗೊಂಡು ಪಾನ್‌, ಬೀಡ, ಸಿಗರೇಟ್‌ ಮತ್ತಿತರರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಬಿಎಂಪಿ ಮಾಜಿ ಸದಸ್ಯ ಹನುಮಂತೇಗೌಡ ಒತ್ತುವರಿ ಮಾಡಿಕೊಂಡಿದ್ದ 150 ಕೋಟಿ ವೌಲ್ಯದ ಬಿಡಿಎ ಭೂಮಿ ವಶ

ಬೆಂಗಳೂರು, ಸೆ.20- ಕಂಡ ಕಂಡ ಖಾಲಿ ಜಾಗಗಳಿಗೆ ಬೇಲಿ ಹಾಕುತ್ತಿದ್ದ ಬಿಬಿಎಂಪಿ ಮಾಜಿ ಸದಸ್ಯ ಹನುಮಂತೇಗೌಡ ಒತ್ತುವರಿ ಮಾಡಿಕೊಂಡಿದ್ದ ಕೋಟಿ ಕೋಟಿ ಬೆಲೆಬಾಳುವ ಬಿಡಿಎಗೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.

ಬಿಡಿಎ ಎಸ್‌‍ಪಿ ಲಕ್ಷ್ಮೀಗಣೇಶ್‌ ನೇತೃತ್ವದಲ್ಲಿ ಇಂದು ದಿಢೀರ್‌ ದಾಳಿ ನಡೆಸಿದ ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಅಂದಾಜು 150 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ.

ಕೆಂಗೇರಿ ಬಳಿಯ ವಳಗೆರೆಹಳ್ಳಿ ಸರ್ವೆ ನಂಬರ್‌ನಲ್ಲಿದ ಬಿಡಿಎಗೆ ಸೇರಿದ್ದ 1.22 ಎಕರೆ ಭೂಮಿಗೆ ಹನುಮಂತೆಗೌಡ ಬೇಲಿ ಹಾಕಿದ್ದರು. ಮಾತ್ರವಲ್ಲ ಆ ಜಮೀನನ್ನು ಪತ್ನಿ ಲತಾ ಹೆಸರಿಗೆ ಖಾತೆ ಮಾಡಿಸಿದ್ದರು.

ಬೇಲಿ ಹಾಕಿರುವ ಪ್ರದೇಶ ಬಿಡಿಎಗೆ ಸೇರಿದ್ದು ಜಾಗ ತೆರವು ಮಾಡುವಂತೆ ಬಿಡಿಎ ಅಧಿಕಾರಿಗಳು ಹಲವಾರು ಬಾರಿ ನೋಟೀಸ್‌‍ ನೀಡಿದ್ದರೂ ಹನುಮಂತೆಗೌಡ ಕ್ಯಾರೇ ಎಂದಿರಲಿಲ್ಲ. ಹೀಗಾಗಿ ಇಂದು ಮುಂಜಾನೆ ಲಕ್ಷ್ಮೀ ಗಣೇಶ್‌ ನೇತೃತ್ವದಲ್ಲಿ ದಾಳಿ ನಡೆಸಿ ಆಸ್ತಿ ವಶಪಡಿಸಿಕೊಳ್ಳಲಾಗಿದೆ.

ಜೆಡಿಎಸ್‌‍ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹನುಮಂತೇಗೌಡ ಅವರು ಈ ಹಿಂದೆ ಹೇರೋಹಳ್ಳಿ ವಾರ್ಡ್‌ನಿಂದ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌‍ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಬೆಂಗಳೂರಲ್ಲಿ ಬೆಚ್ಚಗೆ ಮಲಗಿದ್ದ ರೌಡಿಗಳ ಚಳಿ ಬಿಡಿಸಿದ ಪೊಲೀಸರು

ಬೆಂಗಳೂರು,ಸೆ.20- ಮನೆಗಳಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಹಾಗೂ ಬಾರ್‌ಗಳಲ್ಲಿ ನಶೆ ಏರಿಸಿಕೊಳ್ಳುತ್ತಿದ್ದ ರೌಡಿಗಳಿಗೆ ನಗರ ಪೊಲೀಸರು ರಾತ್ರಿ ಚಳಿ ಬಿಡಿಸಿದ್ದಾರೆ. ನಗರದ ಎಲ್ಲಾ 11 ವಿಭಾಗಗಳ ಹಾಗೂ ಸಿಸಿಬಿ ಪೊಲೀಸರು ಏಕಕಾಲದಲ್ಲಿ ರೌಡಿಗಳ ಮನೆಗಳು ಹಾಗೂ ವೈನ್ಸ್ ಸ್ಟೋರ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ರಾತ್ರಿ 11 ಗಂಟೆಯಿಂದ ನಗರದಾದ್ಯಂತ ರೌಡಿಗಳ ಮನೆಗಳ ಮೇಲೆ ದಿಢೀರ್‌ ದಾಳಿ ನಡೆಸಿ ಇಂದು ಬೆಳಗಿನ ಜಾವ 3 ಗಂಟೆಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಸಾರ್ವಜನಿಕರ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಅಪರಾಧವನ್ನು ನಿಯಂತ್ರಿಸುವುದು ಮತ್ತು ಅಪರಾಧಿ ಅಂಶಗಳ ಜಾಲವನ್ನು ಧ್ವಂಸ ಮಾಡುವ ದೃಢ ಮತ್ತು ಮುಂಚೂಣಿ ಕ್ರಮವಾಗಿ ನಗರ ಪೊಲೀಸರು ಈ ದಾಳಿ ನಡೆಸಿದ್ದಾರೆ. ತಲೆ ಮರೆಸಿಕೊಂಡಿದ್ದ ರೌಡಿಗಳು,ವಾರಂಟುದಾರರು ಮತ್ತು ಪ್ರ್ಲೊಕೇಮ್‌ ಮಾಡಿದ ಅಪರಾಧಿಗಳನ್ನು ಪತ್ತೆಹಚ್ಚುವುದು, ಜವಬ್ದಾರಿತನವನ್ನು ಹೆಚ್ಚಿಸಿ ತಡೆಗಟ್ಟುವಿಕೆಗೆ, ಸಮುದಾಯದ ಭದ್ರತೆ ಮತ್ತು ಕಲ್ಯಾಣಕ್ಕೆ ಈ ದಾಳಿ ಸಹಕಾರಿಯಾಗಿದೆ.

ರಾತ್ರಿಯಿಂದ ಬೆಳಗಿನ ಜಾವದವರೆಗೂ ಒಟ್ಟು 1478 ರೌಡಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಈ ಪೈಕಿ 165 ಹಳೆ ಆರೋಪಿಗಳ ಮನೆಗಳು, ತಲೆಮರೆಸಿಕೊಂಡಿದ್ದ 3 ರೌಡಿಗಳು, ವಾರೆಂಟ್‌ ಜಾರಿಯಾದರೂ ಪತ್ತೆಯಾಗದ 7 ರೌಡಿಗಳು, ಪ್ರ್ಲೊಕೇಮ್‌ ಮಾಡಿದ ಮೂವರು ರೌಡಿಗಳು ಪತ್ತೆಯಾಗಿದ್ದಾರೆ.

ದಾಳಿಯ ಸಂದರ್ಭದಲ್ಲಿ ಒಟ್ಟು 124 ಪ್ರಕರಣಗಳು ಹಾಗೂ ಮಾದಕ ವಸ್ತು ಬಳಕೆದಾರರ ವಿರದ್ಧ 10 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರ ಮಾರ್ಗದರ್ಶನದಲ್ಲಿ, ಮೂವರು ಹೆಚ್ಚುವರಿ ಪೊಲೀಸ್‌‍ ಆಯುಕ್ತರು, 13 ಮಂದಿ ಡಿಸಿಪಿಗಳು, ನಗರದ ಎಲ್ಲಾ ವಿಭಾಗಗಳ ಎಸಿಪಿಗಳು, ಇನ್‌್ಸಪೆಕ್ಟರ್‌ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.

ಈಶಾನ್ಯ ವಿಭಾಗದಲ್ಲಿ ನಗರ ಪೊಲೀಸರು 169 ರೌಡಿಗಳ ಮನೆಗಳ ಮೇಲೆ ದಾಳಿ ನಡೆದರೆ, ಉತ್ತರ -179, ಪೂರ್ವ-247, ಪಶ್ಚಿಮ-222, ಎಲೆಕ್ಟ್ರಾನಿಕ್‌ ಸಿಟಿ -100, ಆಗ್ನೇಯ-120,ಕೇಂದ್ರ ವಿಭಾಗ-20, ವಾಯುವ್ಯ-102, ವೈಟ್‌ಫೀಲ್‌್ಡ-140 ರೌಡಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.

ಸಿಸಿಬಿ ಪೊಲೀಸರು 179 ರೌಡಿಗಳ ಮನೆಗಳ ಮೇಲೆ ಹಾಗೂ ಬಾರ್‌ಗಳ ಮೇಲೆ ದಾಳಿ ನಡೆಸಿ ರೌಡಿಗಳಿಗೆ ಚಳಿಯಲ್ಲೂ ಬೆವರಿಳಿಸಿದ್ದಾರೆ.ನಿರ್ಜನ (ಅಪಾಯದ)ಪ್ರದೇಶಗಳಲ್ಲಿ ನಿರಂತರ ನಿಗಾ ಮತ್ತು ಗುಪ್ತಚರ ಆಧಾರಿತ ಕಾರ್ಯಾಚರಣೆಗಳು ಮುಂದುವರೆಯುತ್ತವೆ. ಹಾಗೂ ದಾಳಿ ಸಂದರ್ಭದಲ್ಲಿ ಪತ್ತೆಯಾದ ರೌಡಿಗಳ ಪರಿಶೀಲನೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಾರ್ವಜನಿಕರ ಭದ್ರತೆ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಗೆ ನಗರ ಪೊಲೀಸ್‌‍ ಆಯುಕ್ತರು ತಮ ಬದ್ದತೆಯನ್ನು ಪುನರುಚ್ಚರಿಸಿದ್ದಾರೆ, ಜೊತೆಗೆ ಕಾನೂನು ಪ್ರಕ್ರಿಯೆಯನ್ನು ಪಾಲಿಸುವುದನ್ನು ಖಚಿತಪಡಿಸಿದ್ದಾರೆ.

ಮಹಾರಾಷ್ಟ್ರದ ರಾಜೂರ ಕ್ಷೇತ್ರದಲ್ಲಿ ನಕಲಿ ಮತದಾರರಿಗೆ ಕಡಿವಾಣ ಹಾಕಿದ್ದೇವೆ : ಚುನಾವಣಾ ಆಯೋಗ

0

ಚಂದ್ರಾಪುರ, ಸೆ. 20 (ಪಿಟಿಐ)- ಮಹಾರಾಷ್ಟ್ರದ ರಾಜೂರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳ ತ್ವರಿತ ಕ್ರಮದಿಂದಾಗಿ ದೊಡ್ಡ ಪ್ರಮಾಣದ ನಕಲಿ ಮತದಾರರ ನೋಂದಣಿ ತಪ್ಪಿದೆ, 2024 ರ ವಿಧಾನಸಭಾ ಚುನಾವಣೆಗೆ ಮುನ್ನ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 6,861 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಅವರು ಸ್ವಯಂಚಾಲಿತ ಸಾಫ್ಟ್ ವೇರ್‌ ಬಳಸಿ ಪೂರ್ವ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ರಾಜೂರ ಕ್ಷೇತ್ರದಲ್ಲಿ 6,850 ಮತದಾರರನ್ನು ಮೋಸದ ರೀತಿಯಲ್ಲಿ ಸೇರಿಸಲಾಗಿದೆ ಎಂದು ನೀಡಿದ್ದ ಹೇಳಿಕೆಗೆ
ಆಯೋಗ ಸ್ಪಷ್ಟನೆ ನೀಡಿದೆ.

ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಡಿಮೆ ಅವಧಿಯಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಆನ್‌ಲೈನ್‌‍ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ರವೀಂದ್ರ ಮಾನೆ ಹೇಳಿದ್ದಾರೆ.

ಅಕ್ಟೋಬರ್‌ 1 ರಿಂದ 17, 2024 ರವರೆಗೆ ಸಲ್ಲಿಸಲಾದ 7,592 ಅರ್ಜಿಗಳಲ್ಲಿ, ಅರ್ಜಿದಾರರು ನೀಡಿರುವ ವಿಳಾಸಗಳಲ್ಲಿ ವಾಸಿಸುತ್ತಿಲ್ಲ, ಅಸ್ತಿತ್ವದಲ್ಲಿಲ್ಲ, ಅಥವಾ ಅಪೂರ್ಣ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸಲ್ಲಿಸಿದ್ದಾರೆ ಎಂದು ಕಂಡುಬಂದ ನಂತರ 6,861 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮಾನೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜೂರದ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ಮತ್ತು ತಹಶೀಲ್ದಾರ್‌ ಅವರು ಬೂತ್‌ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೂಲಕ ಪರಿಶೀಲನೆ ನಡೆಸಿದರು. ವಿಚಾರಣೆಯ ನಂತರ, ನಿರಾಕರಣೆಗೆ ವಿವರವಾದ ಪ್ರಸ್ತಾವನೆಯನ್ನು ಅಕ್ಟೋಬರ್‌ 17, 2024 ರಂದು ಜಿಲ್ಲಾ ಕಚೇರಿಗೆ ಸಲ್ಲಿಸಲಾಯಿತು ಎಂದು ಹೇಳಿಕೆ ತಿಳಿಸಿದೆ.ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ನವೆಂಬರ್‌ 20, 2024 ರಂದು ನಡೆಸಲಾಯಿತು ಮತ್ತು ಮೂರು ದಿನಗಳ ನಂತರ ಮತಗಳನ್ನು ಎಣಿಕೆ ಮಾಡಲಾಯಿತು.

ರಾಜೂರದಲ್ಲಿ ಮತದಾರರ ಪಟ್ಟಿ ಅಕ್ರಮಗಳ ಆರೋಪಗಳನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಹೊರಿಸಿದ ಹಿನ್ನೆಲೆಯಲ್ಲಿ ಮಾನೆ ಅವರ ಸ್ಪಷ್ಟೀಕರಣ ಬಂದಿದೆ.ವಿಷಯದ ಗಂಭೀರತೆಯನ್ನು ಪರಿಗಣಿಸಿ, ಜಿಲ್ಲಾ ಚುನಾವಣಾ ಅಧಿಕಾರಿ ಎಲ್ಲಾ ಅರ್ಜಿಗಳ ಆಳವಾದ ಪರಿಶೀಲನೆಗೆ ನಿರ್ದೇಶನ ನೀಡಿದರು. 1950 ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು 2000 ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕ್ರಿಮಿನಲ್‌ ಮೊಕದ್ದಮೆಗಳನ್ನು ಪ್ರಾರಂಭಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ನಿರ್ದೇಶನಗಳ ಆಧಾರದ ಮೇಲೆ, ಇಆರ್‌ಒ ಅರ್ಜಿಗಳನ್ನು ಔಪಚಾರಿಕವಾಗಿ ತಿರಸ್ಕರಿಸಿತು ಮತ್ತು ರಾಜೂರ ಪೊಲೀಸ್‌‍ ಠಾಣೆಯಲ್ಲಿ ಅಪರಾಧ ಸಂಖ್ಯೆ 629/2024 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ರಾಜೂರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಕಲಿ ಅರ್ಜಿದಾರರ ಹೆಸರುಗಳು ಸೇರ್ಪಡೆಯಾಗದಂತೆ ಸಕಾಲಿಕ ಜಾಗರೂಕತೆಯು ಖಚಿತಪಡಿಸಿದೆ ಎಂದು ಅಧಿಕಾರಿಗಳು ಒತ್ತಿ ಹೇಳಿದರು.ಕಳೆದ ವರ್ಷ ಬಿಜೆಪಿ ಅಭ್ಯರ್ಥಿ ದಿಯೋರಾವ್‌ ವಿಠೋಬ ಭೋಂಗ್ಲೆ ಅವರನ್ನು ಈ ಸ್ಥಾನದಿಂದ ಆಯ್ಕೆಯಾಗಿ ಘೋಷಿಸಲಾಯಿತು. ಅವರು 72,882 ಮತಗಳನ್ನು ಗಳಿಸಿದರು ಮತ್ತು 69,828 ಮತಗಳನ್ನು ಪಡೆದ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್‌‍ನ ಸುಭಾಷ್‌ ರಾಮಚಂದ್ರರಾವ್‌ ಧೋಟೆ ಅವರನ್ನು 3,054 ಮತಗಳ ಅಂತರದಿಂದ ಸೋಲಿಸಿದರು.

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಆಡಳಿತ-ವಿಪಕ್ಷದಲ್ಲಿರುವ ಒಕ್ಕಲಿಗ ಸಮುದಾಯದ ನಾಯಕರು

ಬೆಂಗಳೂರು : ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದ ಒಕ್ಕಲಿಗ ಸಮುದಾಯದ ರಾಜಕೀಯ ನಾಯಕರು ಜಾತಿಗಣತಿ ವಿಚಾರದಲ್ಲಿ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು.

ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದ ನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಇಂದು ನಡೆದ ಜಾತಿಗಣತಿ ಸಮಾಲೋಚನಾ ಸಭೆಯಲ್ಲಿ ಪಕ್ಷಬೇಧ ಮರೆತು ರಾಜಕೀಯ ಪಕ್ಷಗಳ ಮುಖಂಡರು ಒಗ್ಗೂಡಿದ್ದು ವಿಶೇಷವಾಗಿತ್ತು.
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಸೇರಿದಂತೆ ಕಾಂಗ್ರೆಸ್‌‍, ಬಿಜೆಪಿ, ಜೆಡಿಎಸ್‌‍ನ ನಾಯಕರುಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿದ್ದು ಕಂಡುಬಂದಿತು.

ರಾಜಕೀಯವಾಗಿ ಭಿನ್ನಾಭಿಪ್ರಾಯ, ಸಿದ್ಧಾಂತ ಏನೇ ಇದ್ದರೂ ಜನಾಂಗದ ವಿಚಾರದಲ್ಲಿ ಒಗ್ಗಟ್ಟಿನ ಸಂದೇಶವನ್ನು ಇಂದು ರವಾನಿಸಿದರು.ಪರಸ್ಪರ ರಾಜಕೀಯವಾಗಿ ಬದ್ಧ ದ್ವೇಷಿಗಳಂತೆ ಬಿಂಬಿಸಿಕೊಂಡಿದ್ದ ಕುಮಾರಸ್ವಾಮಿಯವರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಬಲಭಾಗದಲ್ಲಿ ಹಾಗೂ ಡಿ.ಕೆ.ಶಿವಕುಮಾರ್‌ಯವರ ಎಡಭಾಗದಲ್ಲಿ ವೇದಿಕೆ ಹಂಚಿಕೊಂಡಿದ್ದರು.

ಕಾಂಗ್ರೆಸ್‌‍, ಜೆಡಿಎಸ್‌‍ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಇಬ್ಬರೂ ನಾಯಕರು ಜೋಡೆತ್ತುಗಳಂತೆ ಜೊತೆಯಾಗಿದ್ದರು.ಆನಂತರ ರಾಜಕೀಯದಲ್ಲಾದ ಬದಲಾವಣೆಯಿಂದ ಪರಸ್ಪರ ಇಬ್ಬರೂ ನಾಯಕರು ದೂರವಾಗಿ ಆರೋಪ-ಪ್ರತ್ಯಾರೋಪವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.

ಜಾತಿಗಣತಿ ಪ್ರಮುಖವಾಗಿರುವುದರಿಂದ ಜನಾಂಗಕ್ಕೆ ಅನ್ಯಾಯವಾಗಬಾರದು. ಜನಾಂಗ ಒಗ್ಗಟ್ಟಿನಿಂದ ಇರಬೇಕು. ಒಡಕು ಉಂಟಾಗಬಾರದು ಎಂಬ ಕಾರಣಕ್ಕೆ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಒಗ್ಗೂಡಿದ್ದರು. ಇವರಲ್ಲದೆ ಜನಾಂಗವನ್ನು ಪ್ರತಿನಿಧಿಸುವ ಸಂಸದರು, ಶಾಸಕರು, ಮಾಜಿ ಶಾಸಕರು, ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಜನಾಂಗದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದು ಮತ್ತಷ್ಟು ಒಗ್ಗೂಡುವಿಕೆಗೆ ಇಂಬು ನೀಡುವಂತಾಗಿತ್ತು.

ಜಾತಿ ಗಣತಿ ವಿವಾದದ ನಡುವೆಯೇ ಒಕ್ಕಲಿಗರ ಒಗ್ಗಟ್ಟು ಪ್ರದರ್ಶನ, ಮಹತ್ವದ ಸಮಾಲೋಚನಾ ಸಭೆ

ಬೆಂಗಳೂರು,ಸೆ.20- ಸೋಮವಾರದಿಂದ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಆರಂಭವಾಗುವ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಒಕ್ಕಲಿಗ ಸಮುದಾಯದ ಮಠಾಧೀಶರು, ಜನಪ್ರತಿನಿಧಿಗಳ ಮಹತ್ವದ ಸಮಾಲೋಚನಾ ಸಭೆ ನಡೆಸಲಾಯಿತು.

ಜಾತಿಗಣತಿ ವಿಚಾರದಲ್ಲಿ ಸಾಕಷ್ಟು ಸಂಘರ್ಷ, ವಿವಾದಗಳು ತಲೆದೋರಿರುವ ಬೆನ್ನಲ್ಲೇ ಒಕ್ಕಲಿಗರ ಸಮುದಾಯದ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಮುಖಂಡರು, ಸಂಘ ಸಂಸ್ಥೆಗಳು ಒಗ್ಗೂಡಿ ಸಮಾಲೋಚನೆ ನಡೆಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಲಾಯಿತು. ಜನಾಂಗದ ಹಿತ ಕಾಪಾಡಲು ಈ ಸಮೀಕ್ಷೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ವಿಜಯನಗರದ ಆದಿಚುಂಚನಗಿರಿ ಮಠದ ಸಮುದಾಯ ಭವನದಲ್ಲಿ ಇಂದು ನಡೆದ ಈ ಸಭೆಯಲ್ಲಿ ಪಟ್ಟನಾಯ್ಕನಹಳ್ಳಿಯ ಸ್ಫಟಿಕಪುರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಆದಿ ಚುಂಚನಗಿರಿ ವಿಜಯನಗರ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಸಚಿವ ಡಾ.ಎಂ.ಸಿ.ಸುಧಾಕರ್‌, ಸಂಸದ ಡಾ.ಕೆ.ಸುಧಾಕರ್‌, ಶಾಸಕರಾದ ಆರಗ ಜ್ಞಾನೇಂದ್ರ, ಗೋಪಾಲಯ್ಯ, ಎಸ್‌‍.ಟಿ.ಸೋಮಶೇಖರ್‌, ಟಿ.ಬಿ.ಜಯಚಂದ್ರ, ಶರತ್‌ ಬಚ್ಚೇಗೌಡ, ಸತೀಶ್‌ರೆಡ್ಡಿ, ಜಿ.ಟಿ.ದೇವೇಗೌಡ, ಡಾ.ರಂಗನಾಥ್‌, ಸುರೇಶ್‌ಗೌಡ, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸಿ.ಟಿ.ರವಿ, ಎಸ್‌‍.ಎಲ್‌.ಭೋಜೇಗೌಡ, ರವಿಕುಮಾರ್‌, ಗುಬ್ಬಿ ಶ್ರೀನಿವಾಸ್‌‍, ಎಚ್‌.ಸಿ.ಬಾಲಕೃಷ್ಣ, ರವಿ ಗಣಿಗ, ಉದಯ್‌, ಪುಟ್ಟಣ್ಣ, ಮಾಜಿ ಶಾಸಕರಾದ ರಾಮಚಂದ್ರಗೌಡ, ಡಿ.ಸಿ.ತಮಣ್ಣ, ಕೆ.ಜಿ.ಬೋಪಯ್ಯ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಸಮಾಲೋಚನಾ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಜಾತಿಗಣತಿ ಕುರಿತು ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಮಠಾಧೀಶರು ಜಾತಿಗಣತಿ ಸಂದರ್ಭದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡಿದರು.

ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ಬರೆಸಿದರೆ ಸಣ್ಣಪುಟ್ಟ ಜಾತಿಗಳು, ಉಪಜಾತಿಗಳು, ಪಂಗಡಗಳು ಒಗ್ಗೂಡಲು ಸಹಕಾರಿಯಾಗುತ್ತದೆ. ಸಂಘಟಿತರಾದರೆ ಹಕ್ಕುಗಳ ರಕ್ಷಣೆ, ಹೋರಾಟ, ಪ್ರಾತಿನಿಧ್ಯಕ್ಕೆ ಅನುಕೂಲವಾಗಲಿದೆ. ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯ, ಸಿದ್ಧಾಂತ ಇದ್ದರೂ ಜನಾಂಗದ ವಿಚಾರದಲ್ಲಿ ಎಲ್ಲರೂ ಒಗ್ಗೂಡುವ ಅನಿವಾರ್ಯತೆ ಇದೆ.
ಜನರ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಜನಾಂಗವನ್ನು ಜಾಗೃತಗೊಳಿಸಿ ಏನು ಮಾಡಬೇಕು, ಏನು ಮಾಡಬಾರದು ಎಂಬ ತಿಳಿವಳಿಕೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಅಂತಿಮವಾಗಿ ಆದಿಚುಂಚನಗಿರಿ ಮಠದ ಶ್ರೀಗಳು ನೀಡುವ ಸಲಹೆ ಸೂಚನೆಯನ್ನು ಪಾಲಿಸಲು ಬದ್ಧವಾಗಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಸಣ್ಣಪುಟ್ಟ ಜಾತಿಗಳನ್ನು ಬದಿಗಿರಿಸಿ ಒಕ್ಕಲಿಗ ಜಾತಿಯಲ್ಲೇ ನಮೂದಿಸಿದರೆ ಈಗ ಸರ್ಕಾರದಿಂದ ಸಿಗುತ್ತಿರುವ ಮೀಸಲಾತಿ, ವಿವಿಧ ಸೌಲಭ್ಯಗಳು ಕೈತಪ್ಪಬಹುದು. ಈಗಿರುವ ಜಾತಿ, ಉಪಜಾತಿಗಳನ್ನೇ ಮುಂದುವರೆಸಿದರೆ ಸಣ್ಣ ಸಣ್ಣ ಜಾತಿಗಳಾಗುವುದರಿಂದ ಸಂಘಟನಾತಕ ಹೋರಾಟಕ್ಕೆ ಹಿನ್ನಡೆಯಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಲಾಯಿತು.
ಸಮೀಕ್ಷೆಯ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸಲು ಈಗಾಗಲೇ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಒಕ್ಕಲಿಗ ಜನಾಂಗದವರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗಿತ್ತು. ಸಮುದಾಯದವರು ಸಮೀಕ್ಷೆಯಿಂದ ಯಾರೊಬ್ಬರೂ ಹೊರಗುಳಿಯದಂತೆ ಎಲ್ಲರೂ ವಾಸ್ತವ ಮಾಹಿತಿಗಳನ್ನು ನೀಡಬೇಕು ಎಂಬ ವಿಚಾರದಲ್ಲಿ ಸಮಾಲೋಚನೆ ನಡೆಸಲಾಯಿತು.

ಈ ಬಗ್ಗೆ ಜನಾಂಗದವರಲ್ಲಿ ಸೂಕ್ತ ತಿಳಿವಳಿಕೆ ನೀಡಿ ವಸ್ತುನಿಷ್ಠ ಮಾಹಿತಿಯನ್ನು ನೀಡುವಂತೆ ಕರೆ ನೀಡಲಾಯಿತು.ಈ ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುವ ದತ್ತಾಂಶಗಳು ಸರ್ಕಾರದ ನೀತಿ ನಿರೂಪಣೆ, ಕಾರ್ಯಕ್ರಮ ಆಯೋಜನೆ, ಮೀಸಲಾತಿ ನಿರ್ಧಾರ ಮಾಡಲು ಪರಿಗಣಿತವಾಗುವ ಸಾಧ್ಯತೆ ಇರುವುದರಿಂದ ಜಾಗೃತರಾಗಿ ನೈಜ ಮಾಹಿತಿಗಳನ್ನು ನೀಡುವಂತೆ ಮನವಿ ಮಾಡಲಾಯಿತು.

ಈ ಬಗ್ಗೆ ಜನಾಂಗದವರು, ಸಂಘ ಸಂಸ್ಥೆಗಳು ತಮ ತಮ ವ್ಯಾಪ್ತಿಯಲ್ಲಿ ಅರಿವು ಮೂಡಿಸಿ ಎಲ್ಲರೂ ಗಣತಿ ವ್ಯಾಪ್ತಿಗೆ ಒಳಪಡುವಂತೆ ಮಾಡಲು ನಿರ್ಧರಿಸಲಾಯಿತು.ಒಟ್ಟಾರೆ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸಲು ತೀರ್ಮಾನಿಸಲಾಗಿದ್ದು, ಉಪಜಾತಿ ಕಾಲಂನಲ್ಲಿ ಅವರವರ ಉಪಜಾತಿಯನ್ನು ಬರೆಸಿಕೊಳ್ಳಲು ಸಲಹೆ ನೀಡಲಾಗಿದೆ.ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸುವುದರಿಂದ ಸಮುದಾಯದಲ್ಲಿ ಒಗ್ಗಟ್ಟು ಮೂಡುತ್ತದೆ. ಅಲ್ಲದೆ, ಸಮುದಾಯದ ನಿರ್ದಿಷ್ಟ ಜನಸಂಖ್ಯೆಯೂ ತಿಳಿಯುತ್ತದೆ ಎಂಬೆಲ್ಲಾ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.