ಹಾಸನ,ಸೆ.21- ಪಿತೃ ಪಕ್ಷಕ್ಕೆ ಅಕ್ಕನ ಮನೆಗೆ ಬಂದಿದ್ದ ಸಹೋದರ ಚಿನ್ನದ ಸರವನ್ನು ಎಗರಿಸಿರುವ ಘಟನೆ ಸಕಲೇಶಪುರ ಪಟ್ಟಣದ ಚಂಪಕನಗರ ಬಡಾವಣೆಯಲ್ಲಿ ನಡೆದಿದೆ. ಮಾನಸ ಚಿನ್ನದ ಸರ ಕಳೆದುಕೊಂಡವರು.
ಪಿತೃ ಪಕ್ಷದ ಹಬ್ಬದ ಊಟಕ್ಕೆಂದು ಒಡಹುಟ್ಟಿದ ತಮ್ಮ ಜೀವನ್‌ನನ್ನು ಕರೆದಿದ್ದಳು. ಅಕ್ಕನೆ ಮನೆಗೆ ಸ್ನೇಹಿತ ಪ್ರಶಾಂತ್ ಜೊತೆ ಬಂದಿದ್ದ ಜೀವನ್ ಮನೆಯಲ್ಲಿ ಎಲ್ಲರೂ ಬ್ಯುಸಿಯಾಗಿರುವುದನ್ನು ಗಮನಿಸಿ ಅಕ್ಕನ ಬ್ಯಾಗ್‌ನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿದ್ದ.
ನಂತರ ಬೆಂಗಳೂರಿನ ಸ್ನೇಹಿತನೊಂದಿಗೆ ಸೇರಿಕೊಂಡು ಚಿನ್ನದ ಸರ ಮಾರಾಟ ಮಾಡಿದ್ದರು. ಇದರಿಂದ ಬಂದ ಹಣದಿಂದ ಸ್ನೇಹಿತರು ಮೋಜು ಮಸ್ತಿ ಮಾಡಿದ್ದರು.ಚಿನ್ನದ ಸರ ಕಾಣದಿದ್ದಾಗ ಅನುಮಾನಗೊಂಡ ಮಾನಸ ಸಹೋದರ ಹಾಗೂ ಆತನ ಸ್ನೇಹಿತನ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜೀವನ್ ಹಾಗೂ ಪ್ರಶಾಂತ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ ಸರಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡು ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿದ್ದರು.ಮಾನಸ ಅವರಿಗೆ ಪೊಲೀಸರು ಸರವನ್ನು ಹಸ್ತಾಂತರಿಸಿದ ನಂತರ ಜೀವನ್ ಆಕೆಯ ಸಹೋದರನಾಗಿದ್ದು ಜೊತೆಗೆ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಬುದ್ದಿವಾದ ಹೇಳಿ ಕಳುಹಿಸಲಾಗಿದೆ.
ರಾಶಿಭವಿಷ್ಯ : ಮೇಷ: ಧಾರ್ಮಿಕ ವೃತ್ತಿಯವರಿಗೆ ಒತ್ತಡ ಹೆಚ್ಚಾಗಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ವೃಷಭ: ಲೇವಾದೇವಿ ವ್ಯವ ಹಾರ ನಡೆಸುವುದು ಸರಿಯಲ್ಲ. ಮಾತನಾಡುವಾಗ ಎಚ್ಚರಿಕೆ ಇರಲಿ. ಮಿಥುನ: ಹಣ ಉಳಿತಾಯ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸುವುದು ಒಳಿತು.
ಕಟಕ: ಅಂದುಕೊಂಡಿದ್ದ ಕೆಲಸಗಳು ಉತ್ತಮ ವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ. ಸಿಂಹ: ಕಷ್ಟದ ಪರಿಸ್ಥಿತಿ ಯಲ್ಲಿ ಜನಬಲದ ಕೊರತೆ ಯಾದರೂ ಸ್ನೇಹಿತರ ಸಹಕಾರ ಸಿಗಲಿದೆ. ಕನ್ಯಾ: ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.
ತುಲಾ: ನಿರೀಕ್ಷಿಸಿದಂತೆ ಅ ಕ ಧನಲಾಭ ದೊರೆಯ ಲಿದೆ. ಅನ್ಯರ ಮಾತಿನ ಬಗ್ಗೆ ವಿಶ್ವಾಸ ಬೇಡ. ವೃಶ್ಚಿಕ: ನಿಮ್ಮಲ್ಲಿರುವ ಆಲಸ್ಯ ತಂದೆಯ ಮಾರ್ಗದರ್ಶನದಿಂದ ದೂರವಾಗಲಿದೆ. ಧನುಸ್ಸು: ಹಣದ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ವಾಗ್ವಾದ ನಡೆಯಬಹುದು.
ಮಕರ: ವ್ಯವಹಾರದಲ್ಲಿ ಮೋಸವಾಗಬಹುದು. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಕುಂಭ: ಹಿರಿಯರ ಆಶೀರ್ವಾದ ಸದಾಕಾಲ ನಿಮ್ಮೊಂದಿಗಿರುತ್ತದೆ. ಅನ್ಯರಿಗೆ ಉಪಕಾರ ಮಾಡುವಿರಿ. ಮೀನ: ಸಂಗಾತಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಆದಾಯ ಹೆಚ್ಚಲಿದೆ.
ಬೆಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಆತುರಾತುರವಾಗಿ ಜಾತಿ ಗಣತಿ ಮಾಡುತ್ತಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ. ಇದರ ಪ್ರತಿಫಲವನ್ನು ಕಾಂಗ್ರೆಸ್ ಪಕ್ಷ ಅನುಭವಿಸಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ಬೆಂಗಳೂರಿನಲ್ಲಿ ಶನಿವಾರ ಸಮೀಕ್ಷೆ ಕುರಿತ ಒಕ್ಕಲಿಗ ಸಮುದಾಯದ ಜಾಗೃತಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.
ಸಭೆಯಲ್ಲಿ ಎಲ್ಲಾ ಸಾಧಕ -ಬಾಧಕಗಳ ಬಗ್ಗೆ ಚರ್ಚೆ ಮಾಡೆಲಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಎಲ್ಲಾ ಸಮಸ್ಯೆ ಬಗೆಹರಿಸುವ ಬಗ್ಗೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಹೇಳಿದರು.
ಈಗಾಗಲೇ ಕಾಂತರಾಜ್ ಆಯೋಗ, ಜಯಪ್ರಕಾಶ್ ಹೆಗಡೆ ಆಯೋಗ ಆಯಿತು. ಈಗ ಮೂರನೇ ಆಯೋಗ ರಚನೆ ಆಗಿದೆ. ಈ ರೀತಿಯ ಆಯೋಗ ರಚನೆ ಮಾಡಬೇಕಾದರೆ ಏನೆಲ್ಲಾ ಮಾನದಂಡಗಳನ್ನು ಅನುಸರಿಸಿದ್ದಾರೆ ಎನ್ನುವುದನ್ನು ಎಂಬುದನ್ನು ನೋಡಬೇಕು. ಸುಮ್ಮ ಸುಮ್ಮನೆ ಆಯೋಗ ರಚನೆ ಮಾಡಲು ಸಾಧ್ಯವಿಲ್ಲ. ಸಮೀಕ್ಷೆಗೆ 15 ದಿನಗಳ ಅವಕಾಶ ಕೊಟ್ಟಿದ್ದಾರೆ. ಅದರಲ್ಲಿ 9 ದಿನ ನವರಾತ್ರಿ ಬರುತ್ತದೆ, ಉಳಿದ 6 ದಿನಗಳಲ್ಲಿ ಆಯೋಗ ಏನು ವರದಿ ಕೊಡಲು ಸಾಧ್ಯ? ಹಾಗಾದರೆ ಇವರು ಕಾಂತರಾಜ್ ವರದಿಯನ್ನೇ ಭಟ್ಟಿ ಇಳಿಸುತ್ತಾರ? ಇಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ಮಾಡಿದ್ದೇವೆ. ಸರ್ಕಾರದಿಂದ ಸಮೀಕ್ಷೆಯಲ್ಲಿ ಅನ್ಯಾಯವಾದರೆ ಸ್ವಾಮೀಜಿಗಳ ನೇತೃತ್ವದಲ್ಲಿ ಮುಂದಿನ ಹೋರಾಟದ ರೂಪರೇಷದ ಬಗ್ಗೆ ಚರ್ಚೆ ಮಾಡಿದ್ದೇವೆ. ಇದು ಸಣ್ಣ ಮಟ್ಟದ ಸಭೆ ಅಷ್ಟೇ. ಈ ಸರ್ಕಾರ ಬೆಂಕಿ ಹಚ್ಚಲು ಏನ್ ಬೇಕೋ ಅದನ್ನು ಮಾಡಿದೆ. ಇದರ ಪ್ರತಿಪ್ರಲ ಮುಂದೆ ಗೊತ್ತಾಗುತ್ತದೆ. ವಾಸ್ತವಾಂಶದ ಬಗ್ಗೆ ಮಾತ್ರ ಚರ್ಚೆ ಆಗಬೇಕು ಎಂದು ಅವರು ಕಿಡಿಕಾರಿದರು.
ಜಾತಿ ವಿಚಾರದಲ್ಲಿ ಒಕ್ಕಲಿಗರಿಗೆ ದೊಡ್ಡಮಟ್ಟದ ಪೆಟ್ಟು ಬಿದ್ದಿದೆ. ಬೆಂಗಳೂರಿನಲ್ಲಿ ಹೆಚ್ಚು ಭೂಮಿಯನ್ನು ಕಳೆದುಕೊಂಡಿದ್ದು ಒಕ್ಕಲಿಗರ ಸಮಾಜ. ಡಿ.ಕೆ ಶಿವಕುಮಾರ್ ಎಲ್ಲಾ ಸಮಸ್ಯೆ ಬಗೆಹರಿಸಲು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಮುಂದೆ ನೋಡೋಣ, ಏನಾಗುತ್ತದೆ ಅಂತ. ಇದು ಇನ್ನೊಂದು ಕಾಂತರಾಜ್ ವರದಿ ಅಲ್ಲ, ಅದಕ್ಕಿಂತಲೂ ಕೆಟ್ಟದಾಗಿ ಇರುತ್ತದೆ ಎಂದು ದೂರಿದರು ಕೇಂದ್ರ ಸಚಿವರು.
ರಾಜ್ಯ ಸರ್ಕಾರ ಜಾತಿ ಜನಗಣತಿಯನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ವರದಿ ಕೊಡಬೇಕು ಅಂತ ಮೂರನೇ ಆಯೋಗ ರಚನೆ ಮಾಡಿದೆ. ಮಧುಸೂದನ್ ನಾಯ್ಕ್ ಆಯೋಗ ರಚನೆ ಆಗಿದೆ. ಕೇವಲ ಹದಿನೈದು ದಿನಗಳಲ್ಲಿ ವರದಿ ಕೊಡಬೇಕು ಅಂತೆ. ಆಯೋಗ ಸ್ಟ್ಯಾಚುಟರಿ ಬಾಡಿ, ಹೀಗಾಗಿ ನಾನು ಏನು ಡೈರೆಕ್ಷನ್ ಕೊಡಲು ಆಗಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಏನಾದರೂ ಬದಲಾವಣೆ ತರಲು ಪವರ್ ಇಲ್ಲ ಅಂತಾರೆ ಎಂದ ಕುಮಾರಸ್ವಾಮಿ ಅವರು; ನಮ್ಮ ಸಮಾಜದ ಭವಿಷ್ಯಕ್ಕಾಗಿ ಹಾಗೂ ಸಮಾಜಕ್ಕೆ ಆದ ಅನ್ಯಾಯದ ಬಗ್ಗೆ ಧ್ವನಿ ಎತ್ತುವ ಸಲುವಾಗಿ ಸಭೆ ಮಾಡಿದ್ದೇವೆ. ಸ್ವಾಮೀಜಿಗಳ ಸೂಚನೆ ಮೇರೆಗೆ ಇಲ್ಲಿ ಸೇರಿದ್ದೇವೆ ಎಂದರು.
ಕ್ರಿಶ್ಚಿಯನ್ ಒಕ್ಕಲಿಗ ಜಾತಿಯನ್ನು ಹೇಗೆ ತೆಗೆಯುತ್ತಾರೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ; ಸಮಯದ ಅಭಾವ ಇದೆ. ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು,ಈಗ ಏನಿದೆ ಅದನ್ನೇ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬ ಮಂತ್ರಿ ಹೇಳಿದ್ದಾರೆ, ಈಗಿನ ಆಯೋಗ ಉತ್ತಮವಾದ ಆಯೋಗವಂತೆ. ಒಳ್ಳೆಯ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ನಾನು ಆ ಮಂತ್ರಿಯನ್ನು ಕೇಳಲು ಬಯಸುತ್ತೇನೆ, ಇದು ಸತ್ಯದ ಆಯೋಗವೇ? ರಾಜ್ಯ ನೆಮ್ಮದಿಯಾಗಿ ಇದೆ. ಈ ಆಯೋಗ ಬೆಂಕಿ ಹಚ್ಚುವ ಕೆಲಸ ಮಾಡಲು ಹೊರಟಿದೆ. ಸಿದ್ದರಾಮಯ್ಯನವರು ಮುಂಜಾಗ್ರತೆ ಕ್ರಮವಾಗಿ ಯಾವುದೇ ಆಲೋಚನೆ ಮಾಡಿಲ್ಲ ಎಂದು ಕೇಂದ್ರ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಮಯ ಮುಂದೂಡುವುದು ಮುಖ್ಯವಲ್ಲ. ವಾಸ್ತವಾಂಶದ ಪರಿಹಾರವಾಗಿ ತೀರ್ಮಾನ ತೆಗೆದುಕೊಳ್ಳಬೇಕು. ಬೆಂಗಳೂರು ನಗರದ ಅಭಿವೃದ್ಧಿ ಬಗ್ಗೆ ಪದೇ ಪದೇ ಚರ್ಚೆ ಮಾಡುತ್ತೇವೆ. ಬೆಂಗಳೂರು ನಗರದ ಅಭಿವೃದ್ಧಿಗಾಗಿ ಕಳೆದ 30 ವರ್ಷಗಳಲ್ಲಿ ಬೆಂಗಳೂರು ಅಭಿವೃದ್ಧಿಗಾಗಿ ಎಷ್ಟು ರೈತರ ಭೂಮಿ ಬಳಕೆ ಆಗಿದೆ, ಅದರಲ್ಲಿ ಬಹುಪಾಲು ಭೂಮಿ ಕಳೆದುಕೊಂಡವರು ಒಕ್ಕಲಿಗರು. ಈಗಲೂ ಗ್ರೇಟರ್ ಬೆಂಗಳೂರು ಹೆಸರಲ್ಲಿ ನಡೆಯುತ್ತಿದೆ ಭೂಮಿಯನ್ನು ಕಿತ್ತುಕೊಳ್ಳುವುದು ನಡೆಯುತ್ತಿದೆ ಎಂದರು ಅವರು.
ಏರ್ ಪೋರ್ಟ್ ಮಾಡುವುದಕ್ಕೆ 50 ಸಾವಿರ ಎಕರೆ ಭೂಮಿ ಬೇಕು. ಇದಕ್ಕೆ ಯಾವ ಸಮಾಜದ ಜಮೀನು ಜಾಸ್ತಿ ಹೋಗುತ್ತಿದೆ? ಬೇರೆ ಸಮಾಜಗಳ ಜನರ ಭೂಮಿ ಸಣ್ಣ ಪುಟ್ಟ ಪ್ರಮಾಣದಲ್ಲಿ ಹೋಗಿರಬಹುದು. ಆದರೆ ಹೆಚ್ಚಿನ ಭೂಮಿ ಕಳೆದುಕೊಂಡಿದ್ದು ಒಕ್ಕಲಿಗರು. ಜಮೀನು ಮಾರಿ ಯಾವುದೋ ಒಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆಲ್ಲ ಏನ್ ಕೊಟ್ಡಿದ್ದಾರೆ? ನನ್ನ ಪ್ರಕಾರ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ನಡೆ ನೋಡಿದರೆ ಇದು ಕಾಂತರಾಜ್ ವರದಿಗಿಂತಲೂ ಕೆಟ್ಟದಾಗಿ ಇರುತ್ತದೆ. ಈ ಬಗ್ಗೆ ಯಾವ ಸಂಶಯವೂ ಬೇಡ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು : ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿ ಗುರುತಿಸಿ ತಯಾರಿಸುವ ಜಾತಿಗಣತಿಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಇದು ಅವೈಜ್ಞಾನಿಕವಾಗಿ ತಯಾರಿಸಿರುವ ವರದಿ ಆಗಿದ್ದು, ವಿರೋಧಿಸುತ್ತೇವೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಆದಿಚುಂಚನಗಿರಿ ಶಾಖ ಮಠದಲ್ಲಿ ಆಯೋಜಿಸಿದ್ದ ಒಕ್ಕಲಿಗ ಸಮುದಾಯದ ಜಾಗೃತಿ ಸಭೆಯ ನಂತರ ಮಾಧ್ಯಮಗಳ ಜೊತೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದರು.
ಸಮಾಜ ಸಮಾಜ ಜೊತೆ ಸಂಘರ್ಷ ತರಲು ರಾಜ್ಯ ಸರ್ಕಾರ ಹೊರಟಿದೆ. 331 ಹೊಸ ಜಾತಿ ಎಲ್ಲಿ ಹುಟ್ಟಿಕೊಂಡಿದೆ ಗೊತ್ತಿಲ್ಲ ಎಂದು ಜಾತಿ ಸಮೀಕ್ಷೆ ಬಗ್ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರು ವ್ಯಂಗ್ಯವಾಡಿದರು.
ಕುಮಾರಣ್ಣನವರು ಕಾಂತರಾಜು ವರದಿಯನ್ನ ರಿಜೆಕ್ಟ್ ಮಾಡ್ತಾರೇ, ಮಧೂಸುದನ್ ಅಧ್ಯಕ್ಷರಾದ 15 ದಿನದಲ್ಲಿ 2 ಕೋಟಿ ಜನರ ಮಾಹಿತಿ ಕಲೆ ಹಾಕಲು ಸಾಧ್ಯವಾ.? ಎಂದು ನಿಖಿಲ್ ಅವರು ಪ್ರಶ್ನಿಸಿದರು.
ಜಾತಿ ಸಮೀಕ್ಷೆಗಳು ಆಗಬೇಕಾಗಿರೋದು ಕಟ್ಟಕಡೆಯ ವ್ಯಕ್ತಿ ಮೇಲೆತ್ತಲು ಮಾಡಬೇಕು. ಆರ್ಥಿಕ ಮತ್ತು ಸಾಮಾಜಿಕವಾಗಿ ನ್ಯಾಯವಾದಿಸುವ ನಿಟ್ಟಿನಲ್ಲಿ ಈ ಸಮೀಕ್ಷೆಗಳು ಆಗುವದರಲ್ಲಿ ನಮ್ಮ ಸ್ವಾಗತ ಇದೆ. ಆದರೆ ಇದರ ಹಿಂದೆ ದುರುದ್ದೇಶಗಳನ್ನು ಇಟ್ಟುಕೊಂಡು ಒಂದು ಸಮುದಾಯವನ್ನು ಮೇಲೆತ್ತಿಕೊಳ್ಳುವುದಕ್ಕೆ. ಇನ್ನೊಂದು ಪ್ರಬಲ ಸಮುದಾಯದ ನಂಬರ್ ಗಳನ್ನು ಮುಂದಿಟ್ಟು ಸಮಾಜ ಸಮಾಜಗಳ ನಡುವೆ ಸಂಘರ್ಷ ಉಂಟು ಮಾಡುವುದಕ್ಕೆ ಸರ್ಕಾರ ಮುಂದಾಗಬಾರದು ಎಂದು ಹೇಳಿದರು.
ಇಲ್ಲಿ 331 ಹೊಸ ಜಾತಿಗಳು ಎಲ್ಲಿಂದ ಹುಟ್ಟಿಕೊಳ್ಳುತ್ತೋ ಗೊತ್ತಿಲ್ಲ. ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದ ಆಯೋಗ ಮಾಡಿಕೊಂಡು 180 ಕೋಟಿ ಖರ್ಚು ಮಾಡಿದರು, ಈಗ ಮಧುಸೂದನ್ ಅವರ ಅಧ್ಯಕ್ಷತೆಯಲ್ಲಿ ಹೊಸ ಆಯೋಗವನ್ನು ರಚಿಸಿ 15 ದಿನದಲ್ಲಿ 2 ಕೋಟಿ ಜನರ ಮಾಹಿತಿ ಕಲೆ ಹಾಕಲು ಸಾಧ್ಯವಾ..,? ಇಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.
10 ವರ್ಷದಲ್ಲಿ ಆಗದೆ ಇರುವಂತಹ ಜಾತಿ ಸಮೀಕ್ಷೆ ಹೀಗ್ಯಾಕೆ.? ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ಮಾಡೋದಕ್ಕೆ ಅಧಿಕಾರವಿದೆ. ಆದರೆ ಅಂತಿಮವಾಗಿ ಕೇಂದ್ರ ಸರ್ಕಾರ ಜಾತಿ ಗಣತಿ ಕಾಲಂ ನನ್ನ ಸೇರಿಸಿದ್ದಾರೆ. ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರದ ಕಡೆಯಿಂದ ಇಡೀ ರಾಜ್ಯ ವ್ಯಾಪ್ತಿ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಜಾತಿಗಣತಿ ವಿಚಾರದಲ್ಲಿ ಸರ್ಕಾರ ಆಗಾಗ ಕೆಲವೊಂದಿಷ್ಟು ಹೆಜ್ಜೆಗಳನ್ನ ಇಡುವುದನ್ನು ನೋಡಿದ್ದೇವೆ.ಈ ಹಿಂದೆಯೂ ಕೂಡ ಇದೇ ರೀತಿ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದ ಸಚಿವ ಸಂಪುಟದ ಸಭೆಯಲ್ಲಿ ಆಡಳಿತ ಪಕ್ಷದ ಮಂತ್ರಿಗಳಲ್ಲೇ ಅಪಸ್ವರ, ಭಿನ್ನಾಭಿಪ್ರಾಯ ಇರುವುದನ್ನ ನೋಡಿದ್ದೇವೆ ಎಂದು ಹೇಳಿದರು.
ಜಾತಿಗಣತಿ ಎಲ್ಲಾ ಸಮುದಾಯದಲ್ಲಿ ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ. ಈ ನೆಲೆಯಲ್ಲಿ ಪರಮ ಪೂಜ್ಯ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಸರ್ವ ಪಕ್ಷದ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಕೆಲವೊಂದಿಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು,ಸೆ.20- ಹೊಸಹೊಸ ಜಾತಿಗಳನ್ನು ಸೃಷ್ಟಿಸಿ ಗೊಂದಲ ಮೂಡಿಸಿರುವುದು ಸರಿಯಲ್ಲ ಎಂದು ಪಟ್ಟನಾಯಕನಹಳ್ಳಿಯ ಸ್ಫಟಿಕ ಪುರಿ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೊಸ ಜಾತಿಯ ಹೆಸರುಗಳು ಪ್ರಕಟವಾಗಿವೆ. ಅಲ್ಲದೆ ಒಕ್ಕಲಿಗ ಸಮುದಾಯದ ಜೊತೆ ಧರ್ಮದ ಹೆಸರು ತಳುಕು ಹಾಕಲಾಗಿದೆ. ಇದಕ್ಕೆ ನಮ ತೀವ್ರ ಆಕ್ಷೇಪವಿದೆ ಎಂದು ಹೇಳಿದರು.
ಈ ರೀತಿ ಯಾವುದೇ ಜಾತಿ, ಧರ್ಮ ಪ್ರಕಟವಾಗಬೇಕಾದರೆ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಆಯೋಗದಲ್ಲಿ ಚರ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅದನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಕು. ಈ ರೀತಿಯ ಯಾವ ಪ್ರಕ್ರಿಯೆಗಳೂ ನಡೆದಿಲ್ಲ ಎಂದರು.
ಜಾತಿಗಣತಿಗೆ ಇದು ಸಕಾಲವಲ್ಲ. ಕೃಷಿ ಚಟುವಟಿಕೆಗಳಲ್ಲಿ ಸಮುದಾಯದವರು ತೊಡಗಿದ್ದಾರೆ. ಪಿತೃಪಕ್ಷ, ನವರಾತ್ರಿ, ದಸರಾ ಸೇರಿದಂತೆ ಸಾಲುಸಾಲು ಹಬ್ಬಗಳಿವೆ. ಆಯೋಗ ಅವಸರವಾಗಿ ಗಣತಿಗೆ ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಾವಿರಾರು ಅಹವಾಲು, ಆಕ್ಷೇಪಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದ್ದರೂ ಅವುಗಳಿಗೆ ಸಮಂಜಸ ಉತ್ತರ ನೀಡದೇ ಏಕ ಪಕ್ಷೀಯವಾಗಿ ತೆಗೆದುಕೊಂಡು ತರಾತುರಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯವೂ ಕೂಡ ಸಮೀಕ್ಷೆಯನ್ನು ಮುಂದೂಡಬೇಕು ಮತ್ತು ಹೆಚ್ಚು ಸಮಯಾವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುವೆ ಎಂದರು.
ನಮ ಜನಾಂಗದವರು ಮುಗ್ಧರು, ಅನಕ್ಷರಸ್ಥರಿದ್ದು, ಅವರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಹೀಗಾಗಿ ಎಲ್ಲರ ಅಭಿಪ್ರಾಯವನ್ನು ಆಯೋಗ ಗೌರವಿಸಬೇಕು ಎಂದು ಹೇಳಿದರು.ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಸಮೀಕ್ಷೆ ಸಂದರ್ಭದಲ್ಲಿ ಜಾತಿ ಕಾಲಂ 9 ರಲ್ಲಿ ಒಕ್ಕಲಿಗ ಎಂದೇ ಬರೆಸಬೇಕು. ಅಗತ್ಯವಿದ್ದರೆ ಮಾತ್ರ ಉಪಜಾತಿ ನಮೂದಿಸಬೇಕು. ಸಮೀಕ್ಷೆ ನಡೆಸಲು ಈಗ ಸಕಾಲವಲ್ಲ. ಹೀಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಲ್ಲಿ ನಮ ಮನವಿ ಏನೆಂದರೆ 15 ದಿನ ಸಮಯ ಸಾಲುವುದಿಲ್ಲ. ಕನಿಷ್ಠ ಪಕ್ಷ 45 ದಿನವಾದರೂ ಗಣತಿಗೆ ಕಾಲಾವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ನ್ಯಾಯಯುತವಾಗಿ ಸಮೀಕ್ಷೆ ನಡೆಯಬೇಕು : ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಮಾತನಾಡಿ, ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಜಾತಿಗಣತಿಯ ಬಗ್ಗೆ ಸಲಹೆ ಕೊಟ್ಟಿದ್ದಾರೆ. ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ನಮ ವಿರೋಧವಿಲ್ಲ. ಆದರೆ ನ್ಯಾಯಯುತವಾಗಿ ಸಮೀಕ್ಷೆ ನಡೆಯಬೇಕು. ಹಿಂದುಳಿದ ವರ್ಗಗಳ ಆಯೋಗದಿಂದ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ನಮ ಸಮುದಾಯಕ್ಕಷ್ಟೇ ಅಲ್ಲ ಯಾವುದೇ ಸಮುದಾಯಕ್ಕೂ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು.
ಸಮೀಕ್ಷೆ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ. ಈಗ ಸಮೀಕ್ಷೆಯನ್ನು ಮುಂದೂಡಿ ಎಲ್ಲದಕ್ಕೂ ಕಾಲಾವಕಾಶ ಸಿಗಲಿ. ಕೇವಲ 15 ದಿನದಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು. ಅಗತ್ಯವಿದ್ದರಷ್ಟೇ ಉಪಪಂಗಡಗಳನ್ನು ಬರೆಸಬೇಕು. ನಮ ಜನಾಂಗದ ಜೊತೆ ಕೆಲವು ಜಾತಿಗಳನ್ನು ಸೇರ್ಪಡೆ ಮಾಡಿದ್ದು, ಅವುಗಳನ್ನು ತೆಗೆಯಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲಾ, ತಾಲ್ಲೂಕು, ಪಟ್ಟಣ, ಗ್ರಾಮಗಳಿಗೆ ಒಕ್ಕಲಿಗ ಸಮುದಾಯದವರು ಭೇಟಿ ನೀಡಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಅಲ್ಲದೆ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುತ್ತೇವೆ. ಈಗಾಗಲೇ ಸಂಘದ ನೌಕರರನ್ನು ಜಾಗೃತಿಗೊಳಿಸಲು ನಿಯೋಜಿಸಿದ್ದೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಖಚಾಂಚಿ ನೆಲ್ಲಿಗೆರೆ ಬಾಲು, ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ನಾಗರಾಜ್, ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು,ಸೆ.20- ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22 ರಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ(ಜಾತಿಗಣತಿ)ಯನ್ನು ಮುಂದೂಡಬೇಕು ಹಾಗೂ ಸಮೀಕ್ಷಾ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರಾಜ್ಯಸರ್ಕಾರವನ್ನು ಆಗ್ರಹಿಸಿದರು.
ವಿಜಯನಗರದ ಆದಿಚುಂಚನಗಿರಿ ಮಠದ ಸಮುದಾಯ ಭವನದಲ್ಲಿ ಇಂದು ವಿವಿಧ ಮಠಾಧೀಶರು, ಒಕ್ಕಲಿಗ ಜನಾಂಗದ ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳ ಪ್ರಮುಖರೊಂದಿಗೆ ನಡೆದ ಜಾತಿಗಣತಿಯ ಸಮಾಲೋಚನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸಮೀಕ್ಷೆ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದವರು ಜಾತಿ ಕಾಲಂ 9, 10, 11 ರಲ್ಲಿ ಏನೇ ಇದ್ದರೂ ಒಕ್ಕಲಿಗ ಎಂದೇ ಬರೆಸಬೇಕು. ಒಕ್ಕಲಿಗ ಜನಾಂಗದ ಕೋಡ್ 1541 ನಮೂದಿಸಬೇಕು. ಅಗತ್ಯವಿದ್ದರೆ ಮಾತ್ರ ತಮ ತಮ ಉಪಪಂಗಡಗಳನ್ನು ಬರೆಸಬೇಕು ಎಂದು ಕರೆ ನೀಡಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.30 ರಿಂದ 40 ರಷ್ಟು ಸಮೀಕ್ಷೆ ಆಗಿರಲಿಲ್ಲ. ಹಾಗಾಗಿ ಆ ವರದಿ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಜನರ ಭಾವನೆಗೆ ಸರ್ಕಾರ ಸ್ಪಂದಿಸಿ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಅವಕಾಶ ಕಲ್ಪಿಸಿರುವುದನ್ನು ಸ್ವಾಗತಿಸುತ್ತೇವೆ ಎಂದರು.
ಸೆ.22 ರಿಂದ 10 ದಿನಗಳ ಕಾಲ ನವರಾತ್ರಿ ವ್ರತ ಆಚರಣೆ ನಡೆಯುತ್ತದೆ. ಅಲ್ಲದೆ, ಈ ಸಂದರ್ಭದಲ್ಲಿ ಪಿತೃಪಕ್ಷ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ. ರೈತಾಪಿ ಸಮುದಾಯ ಕೃಷಿ ಚಟುವಟಿಕೆಯಲ್ಲಿ ಮಗ್ನವಾಗಿರುತ್ತದೆ. ಜೊತೆಗೆ ಶಾಲಾ ರಜಾದಿನಗಳಾಗಿರುವುದರಿಂದ ಪ್ರವಾಸವನ್ನು ಕೈಗೊಂಡಿರುತ್ತಾರೆ. ಹೀಗಾಗಿ ಈ ಕಾಲಘಟ್ಟ ವಾಸ್ತವಿಕವಾಗಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ರಾಜ್ಯಸರ್ಕಾರ 400 ರಿಂದ 500 ಕೋಟಿ ರೂ. ವೆಚ್ಚ ಮಾಡಿ ಸಮೀಕ್ಷೆ ನಡೆಸುತ್ತಿತ್ತು. ಇದು ಅರ್ಥಪೂರ್ಣವಾಗಬೇಕು ಎಂಬುದೇ ನಮ ಅಪೇಕ್ಷೆ ಎಂದು ಹೇಳಿದರು. ಸೂಕ್ತ ಕಾಲವಲ್ಲವಾದ್ದರಿಂದ ಸಮೀಕ್ಷೆಯನ್ನು ಮುಂದೂಡಬೇಕು. ಹಾಗೂ ಸಮೀಕ್ಷೆಗೆ ಹೆಚ್ಚು ಸಮಯ ನೀಡಬೇಕು. ತೆಲಂಗಾಣ ರಾಜ್ಯದಲ್ಲಿ 3.50 ಕೋಟಿ ಜನಸಂಖ್ಯೆ ಇದೆ. ಅಲ್ಲಿ 3 ತಿಂಗಳ ಕಾಲಾವಕಾಶ ಕೊಟ್ಟು ಉನ್ನತ ತಂತ್ರಜ್ಞಾನ ಬಳಸಿ ಸಮೀಕ್ಷೆ ಮಾಡಿದ್ದಾರೆ. ರಾಜ್ಯದಲ್ಲಿ 7 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ವೈಜ್ಞಾನಿಕವಾಗಿ ಆಗಬೇಕು. ಅದಕ್ಕಾಗಿ ಹೆಚ್ಚು ಸಮಯವನ್ನು ನೀಡಬೇಕು ಎಂದು ಶ್ರೀಗಳು ತಿಳಿಸಿದರು.
ಒಕ್ಕಲಿಗರ ಜಾತಿಯ ಜೊತೆಗೆ ವಿವಿಧ ಧರ್ಮ, ಜಾತಿಗಳನ್ನು ಸೇರಿಸಿರುವುದು ಅಸಮಾಧಾನ, ವೈರುಧ್ಯಕ್ಕೆ ಕಾರಣವಾಗಿದೆ. ಜಾತಿಗಣತಿ ಬಗ್ಗೆ ಶ್ರೀಮಠದ ಭಕ್ತರು ಹಾಗೂ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಲ್ಲಾ ಜನಪ್ರತಿನಿಧಿಗಳಿಗೆ ಈ ವಿಚಾರವನ್ನು ಮನದಟ್ಟು ಮಾಡಲಾಗಿದೆ. ಏಕೆಂದರೆ ಒಕ್ಕಲಿಗ ಸಮುದಾಯದ ಮುಖವಾಣಿ, ಸಮುದಾಯದ ಶಕ್ತಿ ಹಾಗೂ ಜನಪ್ರತಿನಿಧಿಗಳಾಗಿದ್ದಾರೆ. ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಈಗ ಪ್ರಕಟಿಸಿರುವ ಜಾತಿಗಳ ಪಟ್ಟಿ ಹಾಗೂ ಸಮೀಕ್ಷೆಯಲ್ಲಿ ಸಾಕಷ್ಟು ನ್ಯೂನತೆ ಕಂಡುಬಂದಿದ್ದು, ಅವುಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯಸರ್ಕಾರಕ್ಕೆ ಜನಗಣತಿ ಮಾಡುವ ಅಧಿಕಾರವಿಲ್ಲ. ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾತ್ರ ಸಮೀಕ್ಷೆ ಮಾಡಬೇಕು ಎಂಬುದು ತಮಗಿರುವ ಮಾಹಿತಿ. ಕೇಂದ್ರ ಸರ್ಕಾರ ಜನಗಣತಿ ನಡೆಸಲಿದ್ದು ಅದು ಅಧಿಕೃತವಾಗಲಿದೆ ಎಂದರು.
ಶೇ.90 ರಷ್ಟು ಒಕ್ಕಲಿಗರು ನಾವೇನೇ ಹೇಳಿದರೂ ಅವರು ಉಪಜಾತಿಯನ್ನು ಬರೆಸಲು ಸಿದ್ಧವಿಲ್ಲ. ಕಾರಣಾಂತರದಿಂದ ಸಣ್ಣಪುಟ್ಟ ಆಚರಣೆಯಿಂದ ಬಂದಿರುವ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ಮನೆಗೆ ಸೀಮಿತವಾಗಿರುತ್ತವೆ ಎನ್ನುತ್ತಿದ್ದಾರೆ. ಹೀಗಾಗಿ ಪ್ರಜ್ಞಾವಂತ ರಾಜ್ಯಸರ್ಕಾರ ಜಾತಿಗಣತಿಯನ್ನು ಮುಂದೂಡಬೇಕು ಎಂದು ಆಗ್ರಹಿಸುತ್ತೇವೆ. ಸಕಾರಾತಕವಾಗಿ ಸ್ಪಂದನೆ ಮಾಡುತ್ತದೆ ಎಂಬ ನಿಲುವನ್ನು ಹೊಂದಿದ್ದೇವೆ ಎಂದು ಹೇಳಿದರು. ಸಮುದಾಯದ ಜನಪ್ರತಿನಿಧಿಗಳಿಗೆ ಸರ್ಕಾರದಲ್ಲಿ ಸಮುದಾಯದ ದನಿಯಾಗುವಂತೆ ನಿರ್ದೇಶನ ಕೊಡಲಾಗಿದೆ. ಅದಕ್ಕೆ ಸೂಕ್ತ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತದೆ ಎಂಬ ವಿಶ್ವಾಸವಿದೆ. ಸಮೀಕ್ಷೆಯಲ್ಲಿನ ನ್ಯೂನತೆಗಳು ಸರ್ಕಾರದ ಅರಿವಿಗೆ ಬಂದು ವಾಪಸ್ಸು ಪಡೆಯುತ್ತಾರೆ ಎಂಬ ನಿರೀಕ್ಷೆಯಿದೆ. ಕ್ರಿಶ್ಚಿಯನ್ ಒಕ್ಕಲಿಗ, ಜೈನ ಒಕ್ಕಲಿಗ ಎಂದೆಲ್ಲಾ ಉಲ್ಲೇಖಿಸಲಾಗಿದೆ. ಮುಂದೆ ಮುಸ್ಲಿಂ ಒಕ್ಕಲಿಗ, ಹಿಂದೂ ಕ್ರಿಶ್ಚಿಯನ್ ಆಗಬಹುದಲ್ಲವೇ ಎಂದು ಪ್ರಶ್ನಿಸಿದರು. ಧರ್ಮ ಒಡೆದಿರುವ ಬಗ್ಗೆ ಇತಿಹಾಸ ಅವಲೋಕಿಸಿದರೆ ಗಮನಕ್ಕೆ ಬರುತ್ತದೆ. ನಾಸ್ತಿಕ ಬಳಕೆಗೆ ಅವಕಾಶ ಕಲ್ಪಿಸಿರುವುದು ಗಮನಿಸಿದರೆ ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು ಎಂದರು.
ಪಾರದರ್ಶಕವಾಗಿರಲಿ : ಗಣತಿಯ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ಪಡೆದ ಮೇಲೆ ಗಣತಿದಾರರು ಪೂರ್ಣ ಮಾಹಿತಿ ಪಡೆದು ಅಪ್ಲೋಡ್ ಮಾಡಿದ ಬಳಿಕ ಮನೆಯ ಯಜಮಾನನಿಗೆ ಅದರ ಪೂರ್ಣ ಮಾಹಿತಿ ಬಂದರೆ ಸಂತೋಷ. ಸಮೀಕ್ಷೆಯ ಮಾಹಿತಿಯೂ ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತಿರಬೇಕು, ಪಾರದರ್ಶಕವಾಗಿರಬೇಕು ಎಂದು ಬಯಸುತ್ತೇವೆ ಎಂದು ಹೇಳಿದರು.
ನವದೆಹಲಿ, ಸೆ. 20- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬರತೊಡಗಿವೆ.ದ್ವಾರಕ ಡಿಪಿಎಸ್ ಸೇರಿದಂತೆ ಹಲವು ಶಾಲೆಗಳಿಗೆ ದುಷ್ಕರ್ಮಿಗಳಿಂದ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದೆ. ಬಾಂಬ್ ಬೆದರಿಕೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸ್ಥಳಾಂತರ ಮಾಡಲಾಗಿದೆ.
ಶಾಲೆಗಳಲ್ಲಿ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದಿಂದ ಪರಿಶೀಲನೆ ಮಾಡಲಾಗುತ್ತಿದೆ.ಡಿಪಿಎಸ್ ದ್ವಾರಕಾ ಹಾಗೂ ನಜಾಫ್ ಗಡ, ದೆಹಲಿ ಪಬ್ಲಿಕ್ ಸ್ಕೂಲ್, ಕೃಷ್ಣ ಮಾಡೆಲ್ ಪಬ್ಲಿಕ್ ಸ್ಕೂಲ್ ಹಾಗೂ ಸರ್ವೋದಯ ವಿದ್ಯಾಲಯ ಸೇರಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿವೆ.
ಪರೀಕ್ಷೆಗಳ ಸಮಯದಲ್ಲಿ ಬಾಂಬ್ ಬೆದರಿಕೆ ಕರೆ ಹಲವು ಅನುಮಾನಗಳಿಗೂ ಕಾರಣವಾಗಿದೆ.ಕಳೆದ 8 ತಿಂಗಳಲ್ಲಿ 150ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಕರೆ ದೆಹಲಿಯ ಶಾಲೆಗಳಿಗೆ ಸರಣಿ ಬಾಂಬ್ ಬೆದರಿಕೆಗಳು ಬರುತ್ತಿವೆ. ಕಳೆದ 8 ತಿಂಗಳಲ್ಲಿ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿವೆ.
ಸದ್ಯ ದೆಹಲಿ ಪೊಲೀಸರಿಗೆ ಈ ಬಾಂಬ್ ಬೆದರಿಕೆ ಸಂದೇಶಗಳು ತಲೆನೋವಾಗಿ ಪರಿಣಮಿಸಿದೆ. ್ಟಈ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾವು ಕ್ಯಾಂಪಸ್‌ನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ದೆಹಲಿ ಹೈಕೋರ್ಟ್‌ಗೂ ಬಾಂಬ್ ಬೆದರಿಕೆ ಬಂದಿತ್ತು. ಕೋರ್ಟ್‌ಗೆ ಈ ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆ ಕೆಲಕಾಲ ತಲ್ಲಣವನ್ನುಂಟು ಮಾಡಿತ್ತು. ವಿಷಯ ತಿಳಿಯುತ್ತಿದ್ದಂತೆ ಕೋರ್ಟ್‌ನಿಂದ ಎಲ್ಲರನ್ನು ತೆರವುಗೊಳಿಸಲಾಗಿತ್ತು.
ಬಾಂಬ್ ನಿಷ್ಕ್ರಿಯ ದಳ, ಪೊಲೀಸರು, ಶ್ವಾನ ದಳ ಸ್ಥಳಕ್ಕೆ ದಾಡಾಯಿಸಿದ್ದವು. ಭದ್ರತಾ ಸಿಬ್ಬಂದಿ ಇಡೀ ಕೋರ್ಟ್ ಆವರಣ ಸುತ್ತುವರಿದಿದ್ದರು.ಕೋರ್ಟ್‌ನಲ್ಲಿದ್ದ ವಕೀಲರು ಆತಂಕದಿಂದಲೇ ಹೊರ ಬಂದರು. ಬಾಂಬ್ ನಿಷ್ಕ್ರಿಯ ದಳ, ಪೊಲೀಸರು, ಶ್ವಾನ ದಳ ಕೋರ್ಟ್‌ನಲ್ಲಿ ಶೋಧ ನಡೆಸಿದರು ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ. ಇದರಿಂದ ವಕೀಲರು ನಿಟ್ಟಿಸಿರು ಬಿಟ್ಟಿದ್ದರು.
ಬೆಂಗಳೂರು,ಸೆ.20- ಬೀದಿಗಳಲ್ಲಿ ಬೀಡಿ, ಸಿಗರೇಟ್ ಸೇದುವವರಿಗೆ ಹಾಗೂ ಬಾರ್‌ಗಳಲ್ಲಿ ಎಣ್ಣೆ ಹೊಡೆಯುವವರಿಗೆ ಪೊಲೀಸರು ಬೆಂಡೆತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಹಾಗೂ ಬಾರ್‌ಗಳಲ್ಲಿ ಮದ್ಯಪಾನಕ್ಕೆ ಅವಕಾಶವಿಲ್ಲ ಎಂಬ ನಿಯಮವಿದ್ದರೂ ಕಾನೂನು ಉಲ್ಲಂಘನೆ ಮಾಡಿರುವ ಮದ್ಯಪಾನಿ-ಧೂಮಪಾನಿಗಳಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ರಾತ್ರೋರಾತ್ರಿ ರೌಡಿಗಳ ಮನೆಗಳ ಮೇಲೆ ಮುಗಿಬಿದ್ದು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಶೋಭಾ ವೈನ್‌್ಸ ಒಳಗೆ ಕೆಲವರು ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದ್ದು, ಪಿಎಸ್‌ಐ ನಾಗಭೂಷಣ್ ನೀಡಿರುವ ದೂರಿನ ಆಧಾರದ ಮೇರೆಗೆ ಬಾರ್ ಕ್ಯಾಷಿಯರ್ ದಿನೇಶ್ (38) ಎಂಬುವವರ ಮೇಲೆ ಎಫ್‌ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಮೋದಿ ರಸ್ತೆಯಲ್ಲಿರುವ ಸಂತೋಷ್ ಪಾನ್ ಅಂಗಡಿ ಬಳಿ ಜನ ಗುಂಪುಗೂಡಿ ಧೂಮಪಾನ ಹಾಗೂ ಪಾನ್ ಸೇವಿಸುತ್ತಿರುವುದನ್ನು ಗಮನಿಸಿ ಇದೇ ಠಾಣೆ ಪೊಲೀಸರು ಪಾನ್ ಅಂಗಡಿ ಮಾಲೀಕ ರಾಜು ರವರ ವಿರುದ್ಧ ಕ್ರಮಕೈಗೊಂಡು ಪಾನ್, ಬೀಡ, ಸಿಗರೇಟ್ ಮತ್ತಿತರರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು, ಸೆ.20- ಕಂಡ ಕಂಡ ಖಾಲಿ ಜಾಗಗಳಿಗೆ ಬೇಲಿ ಹಾಕುತ್ತಿದ್ದ ಬಿಬಿಎಂಪಿ ಮಾಜಿ ಸದಸ್ಯ ಹನುಮಂತೇಗೌಡ ಒತ್ತುವರಿ ಮಾಡಿಕೊಂಡಿದ್ದ ಕೋಟಿ ಕೋಟಿ ಬೆಲೆಬಾಳುವ ಬಿಡಿಎಗೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಿಡಿಎ ಎಸ್‌ಪಿ ಲಕ್ಷ್ಮೀಗಣೇಶ್ ನೇತೃತ್ವದಲ್ಲಿ ಇಂದು ದಿಢೀರ್ ದಾಳಿ ನಡೆಸಿದ ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಅಂದಾಜು 150 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿ ಬಳಿಯ ವಳಗೆರೆಹಳ್ಳಿ ಸರ್ವೆ ನಂಬರ್‌ನಲ್ಲಿದ ಬಿಡಿಎಗೆ ಸೇರಿದ್ದ 1.22 ಎಕರೆ ಭೂಮಿಗೆ ಹನುಮಂತೆಗೌಡ ಬೇಲಿ ಹಾಕಿದ್ದರು. ಮಾತ್ರವಲ್ಲ ಆ ಜಮೀನನ್ನು ಪತ್ನಿ ಲತಾ ಹೆಸರಿಗೆ ಖಾತೆ ಮಾಡಿಸಿದ್ದರು.
ಬೇಲಿ ಹಾಕಿರುವ ಪ್ರದೇಶ ಬಿಡಿಎಗೆ ಸೇರಿದ್ದು ಜಾಗ ತೆರವು ಮಾಡುವಂತೆ ಬಿಡಿಎ ಅಧಿಕಾರಿಗಳು ಹಲವಾರು ಬಾರಿ ನೋಟೀಸ್ ನೀಡಿದ್ದರೂ ಹನುಮಂತೆಗೌಡ ಕ್ಯಾರೇ ಎಂದಿರಲಿಲ್ಲ. ಹೀಗಾಗಿ ಇಂದು ಮುಂಜಾನೆ ಲಕ್ಷ್ಮೀ ಗಣೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಆಸ್ತಿ ವಶಪಡಿಸಿಕೊಳ್ಳಲಾಗಿದೆ.
ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹನುಮಂತೇಗೌಡ ಅವರು ಈ ಹಿಂದೆ ಹೇರೋಹಳ್ಳಿ ವಾರ್ಡ್‌ನಿಂದ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಬೆಂಗಳೂರು,ಸೆ.20- ಮನೆಗಳಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಹಾಗೂ ಬಾರ್‌ಗಳಲ್ಲಿ ನಶೆ ಏರಿಸಿಕೊಳ್ಳುತ್ತಿದ್ದ ರೌಡಿಗಳಿಗೆ ನಗರ ಪೊಲೀಸರು ರಾತ್ರಿ ಚಳಿ ಬಿಡಿಸಿದ್ದಾರೆ. ನಗರದ ಎಲ್ಲಾ 11 ವಿಭಾಗಗಳ ಹಾಗೂ ಸಿಸಿಬಿ ಪೊಲೀಸರು ಏಕಕಾಲದಲ್ಲಿ ರೌಡಿಗಳ ಮನೆಗಳು ಹಾಗೂ ವೈನ್ಸ್ ಸ್ಟೋರ್, ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ರಾತ್ರಿ 11 ಗಂಟೆಯಿಂದ ನಗರದಾದ್ಯಂತ ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ಇಂದು ಬೆಳಗಿನ ಜಾವ 3 ಗಂಟೆಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಸಾರ್ವಜನಿಕರ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಅಪರಾಧವನ್ನು ನಿಯಂತ್ರಿಸುವುದು ಮತ್ತು ಅಪರಾಧಿ ಅಂಶಗಳ ಜಾಲವನ್ನು ಧ್ವಂಸ ಮಾಡುವ ದೃಢ ಮತ್ತು ಮುಂಚೂಣಿ ಕ್ರಮವಾಗಿ ನಗರ ಪೊಲೀಸರು ಈ ದಾಳಿ ನಡೆಸಿದ್ದಾರೆ. ತಲೆ ಮರೆಸಿಕೊಂಡಿದ್ದ ರೌಡಿಗಳು,ವಾರಂಟುದಾರರು ಮತ್ತು ಪ್ರ್ಲೊಕೇಮ್ ಮಾಡಿದ ಅಪರಾಧಿಗಳನ್ನು ಪತ್ತೆಹಚ್ಚುವುದು, ಜವಬ್ದಾರಿತನವನ್ನು ಹೆಚ್ಚಿಸಿ ತಡೆಗಟ್ಟುವಿಕೆಗೆ, ಸಮುದಾಯದ ಭದ್ರತೆ ಮತ್ತು ಕಲ್ಯಾಣಕ್ಕೆ ಈ ದಾಳಿ ಸಹಕಾರಿಯಾಗಿದೆ.
ರಾತ್ರಿಯಿಂದ ಬೆಳಗಿನ ಜಾವದವರೆಗೂ ಒಟ್ಟು 1478 ರೌಡಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಈ ಪೈಕಿ 165 ಹಳೆ ಆರೋಪಿಗಳ ಮನೆಗಳು, ತಲೆಮರೆಸಿಕೊಂಡಿದ್ದ 3 ರೌಡಿಗಳು, ವಾರೆಂಟ್ ಜಾರಿಯಾದರೂ ಪತ್ತೆಯಾಗದ 7 ರೌಡಿಗಳು, ಪ್ರ್ಲೊಕೇಮ್ ಮಾಡಿದ ಮೂವರು ರೌಡಿಗಳು ಪತ್ತೆಯಾಗಿದ್ದಾರೆ.
ದಾಳಿಯ ಸಂದರ್ಭದಲ್ಲಿ ಒಟ್ಟು 124 ಪ್ರಕರಣಗಳು ಹಾಗೂ ಮಾದಕ ವಸ್ತು ಬಳಕೆದಾರರ ವಿರದ್ಧ 10 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ, ಮೂವರು ಹೆಚ್ಚುವರಿ ಪೊಲೀಸ್ ಆಯುಕ್ತರು, 13 ಮಂದಿ ಡಿಸಿಪಿಗಳು, ನಗರದ ಎಲ್ಲಾ ವಿಭಾಗಗಳ ಎಸಿಪಿಗಳು, ಇನ್‌್ಸಪೆಕ್ಟರ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.
ಈಶಾನ್ಯ ವಿಭಾಗದಲ್ಲಿ ನಗರ ಪೊಲೀಸರು 169 ರೌಡಿಗಳ ಮನೆಗಳ ಮೇಲೆ ದಾಳಿ ನಡೆದರೆ, ಉತ್ತರ -179, ಪೂರ್ವ-247, ಪಶ್ಚಿಮ-222, ಎಲೆಕ್ಟ್ರಾನಿಕ್ ಸಿಟಿ -100, ಆಗ್ನೇಯ-120,ಕೇಂದ್ರ ವಿಭಾಗ-20, ವಾಯುವ್ಯ-102, ವೈಟ್‌ಫೀಲ್‌್ಡ-140 ರೌಡಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.
ಸಿಸಿಬಿ ಪೊಲೀಸರು 179 ರೌಡಿಗಳ ಮನೆಗಳ ಮೇಲೆ ಹಾಗೂ ಬಾರ್‌ಗಳ ಮೇಲೆ ದಾಳಿ ನಡೆಸಿ ರೌಡಿಗಳಿಗೆ ಚಳಿಯಲ್ಲೂ ಬೆವರಿಳಿಸಿದ್ದಾರೆ.ನಿರ್ಜನ (ಅಪಾಯದ)ಪ್ರದೇಶಗಳಲ್ಲಿ ನಿರಂತರ ನಿಗಾ ಮತ್ತು ಗುಪ್ತಚರ ಆಧಾರಿತ ಕಾರ್ಯಾಚರಣೆಗಳು ಮುಂದುವರೆಯುತ್ತವೆ. ಹಾಗೂ ದಾಳಿ ಸಂದರ್ಭದಲ್ಲಿ ಪತ್ತೆಯಾದ ರೌಡಿಗಳ ಪರಿಶೀಲನೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಾರ್ವಜನಿಕರ ಭದ್ರತೆ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಗೆ ನಗರ ಪೊಲೀಸ್ ಆಯುಕ್ತರು ತಮ ಬದ್ದತೆಯನ್ನು ಪುನರುಚ್ಚರಿಸಿದ್ದಾರೆ, ಜೊತೆಗೆ ಕಾನೂನು ಪ್ರಕ್ರಿಯೆಯನ್ನು ಪಾಲಿಸುವುದನ್ನು ಖಚಿತಪಡಿಸಿದ್ದಾರೆ.