Sunday, September 15, 2024
Homeಬೆಂಗಳೂರುಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ಬಿ.ದಯಾನಂದ

ಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ : ಬಿ.ದಯಾನಂದ

Public cooperation is necessary for crime control : B. Dayananda

ಬೆಂಗಳೂರು,ಆ.24- ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಜನರ ಸಹಕಾರ ಅಗತ್ಯವಾಗಿದ್ದು, ಅದರಂತೆಯೇ ನಮ ಸಿಬ್ಬಂದಿಯೂ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾರೆ ಎಂದು ನಗರ ಪೊಲೀಸ್‌‍ ಆಯುಕ್ತ ದಯಾನಂದ ತಿಳಿಸಿದ್ದಾರೆ.

ಟೋಲ್‌ಗೇಟ್‌ ಸಮೀಪದ ಕಾಸಿಯಾ ಭವನದಲ್ಲಿ ನಡೆದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಲ್ಲಿ ಜನಸಾಮಾನ್ಯರಿಂದ ಕೇಳಿಬಂದಿದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇದೇ ರೀತಿ ನಮ ಪೊಲೀಸರು ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನತೆ ಕೂಡ ಸಂಚಾರ ನಿಯಮಗಳನ್ನು ಪಾಲಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಕೆಲವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸಮೀಪ ಇಳಿಜಾರಿನಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಅಪಘಾತದ ಸಾಧ್ಯತೆಗಳು ಇರುವುದರಿಂದ ಇದನ್ನು ಸರಿಪಡಿಸಬೇಕುಎಂದು ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿದ ಆಯುಕ್ತರು ಕೂಡಲೇ ಟ್ರಾಫಿಕ್ ಇನ್ಸ್ ಪೆಕ್ಟರ್ ಅವರಿಗೆ ಬ್ಯಾರಿಕೇಡ್ಗಳನ್ನು ಹಾಕಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸುವಂತೆ ಗುತ್ತಿಗೆದಾರರಿಗೆ ತಿಳಿಸುವಂತೆ ಹೇಳಿದರು.

ಇದೇ ವೇಳೆ ಮಾಗಡಿ ರಸ್ತೆಯಲ್ಲಿ ಮಿನರ್ವ ಮಿಲ್ ಬಳಿ ಕೆಎಸ್ಆರ್ಟಿಸಿ ಬಸ್ಗಳು ಹೆಚ್ಚಾಗಿ ಸಂಚರಿಸುತ್ತವೆ ಮತ್ತು ಇಲ್ಲಿ ಅಂಗಾಳ ಪರಮೇಶ್ವರಿ ದೇವಸ್ಥಾನ ಇರುವುದರಿಂದ ಭಕ್ತರು ಅನೇಕ ಸಂಖ್ಯೆಯಲ್ಲಿ ಬರುವುದರಿಂದ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಕಳೆದ ಕೆಲವು
ದಿನಗಳಿಂದ ಮಿನರ್ವ ಮಿಲ್ ಜಾಗವನ್ನು ಬಳಸಿಕೊಂಡು ರಸ್ತೆ ವಿಸ್ತರಣೆ ಮಾಡಬೇಕೆಂದು ಹೇಳುತ್ತಿದ್ದೇವೆ. ಆದರೆ ಅದಕ್ಕೆ ಗಮನ ಕೊಡುತ್ತಿಲ್ಲ ಎಂದು ದೂರಿದರು.

ಒಂದು ಬಸ್‌‍ ಹೋದರೆ, ಬೇರೆ ವಾಹನಗಳ ಓಡಾಟಕ್ಕೆ ಅವಕಾಶ ಆಗುವುದಿಲ್ಲ. ಹೀಗಾಗಿ ಇದರ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.ಚಂದ್ರ ಬಡಾವಣೆ ಹಾಗೂ ಹೊರವರ್ತುಲ ರಸ್ತೆಯಲ್ಲಿ ಬಾರ್‌ಗಳು ಮಧ್ಯರಾತ್ರಿಯ ನಂತರವೂ ತೆರೆದಿರುವುದರಿಂದ ಪುಂಡರ ಹಾವಳಿ ಹೆಚ್ಚುತ್ತಿದೆ.

ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರೊಬ್ಬರು ಕಮಿಷನರ್‌ಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಅವರು, ಒಂದು ಗಂಟೆವರೆಗೆ ಕೆಲವು ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶವಿದೆ. ಅಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗಸ್ತುಪಡೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಮೆಟ್ರೋ ನಿಲ್ದಾಣಗಳ ಬಳಿ ಕೆಲವರು ಅಸಭ್ಯವಾಗಿ ವರ್ತಿಸುತ್ತಿದ್ದು, ಇಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಓಡಾಡುತ್ತಿದ್ದು, ಅವರಿಗಾಗುವ ಕಿರಿಕಿರಿಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.ಶಾಲೆಗಳ ಬಳಿಯೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ನಿಯಮ ಉಲ್ಲಂಘಿಸಲಾಗುತ್ತಿದೆ.

ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಅಪರ ಪೊಲೀಸ್‌‍ ಆಯುಕ್ತ ನವೀನ್‌ಕುಮಾರ್‌, ಜಂಟಿ ಪೊಲೀಸ್‌‍ ಆಯುಕ್ತ ಅನುಚೇತ್‌, ಉಪ ಪೊಲೀಸ್‌‍ ಆಯುಕ್ತರಾದ ಗಿರೀಶ್‌, ಅನಿತಾ ಉಪಸ್ಥಿತರಿದ್ದರು.

RELATED ARTICLES

Latest News