Home ಇದೀಗ ಬಂದ ಸುದ್ದಿ 2025ರಲ್ಲಿ ವಿಶ್ವಮಟ್ಟದಲ್ಲಿ ಸುದ್ದಿಯಾಗಲಿದೆ ಸ್ಯಾಂಡಲ್‌ವುಡ್, ಭಾರಿ ನಿರೀಕ್ಷೆ ಹುಟ್ಟಿಸಿವೆ “ಸ್ಟಾರ್‌” ಸಿನಿಮಾಗಳು

2025ರಲ್ಲಿ ವಿಶ್ವಮಟ್ಟದಲ್ಲಿ ಸುದ್ದಿಯಾಗಲಿದೆ ಸ್ಯಾಂಡಲ್‌ವುಡ್, ಭಾರಿ ನಿರೀಕ್ಷೆ ಹುಟ್ಟಿಸಿವೆ “ಸ್ಟಾರ್‌” ಸಿನಿಮಾಗಳು

0
2025ರಲ್ಲಿ ವಿಶ್ವಮಟ್ಟದಲ್ಲಿ ಸುದ್ದಿಯಾಗಲಿದೆ ಸ್ಯಾಂಡಲ್‌ವುಡ್, ಭಾರಿ ನಿರೀಕ್ಷೆ ಹುಟ್ಟಿಸಿವೆ “ಸ್ಟಾರ್‌” ಸಿನಿಮಾಗಳು

  • ಜಯಪ್ರಕಾಶ್‌
    2024ರ ವರ್ಷದಲ್ಲಿ ಎಲ್ಲಾ ಚಿತ್ರರಂಗದಂತೆ ಚಂದನವನದಲ್ಲೂ ಕೆಲವು ಸಿನಿಮಾಗಳು ಇಡೀ ವಿಶ್ವವೇ ಕರುನಾಡಿನ ಕಡೆ ತಿರುಗಿ ನೋಡುವಂತೆ ಮಾಡಿವೆ. ಸ್ಯಾಂಡಲ್‌ ವುಡ್‌ ನ ದೊಡ್ಡಮನೆಯ ಕುಡಿ ಯುವರಾಜ್‌ ಕುಮಾರ್‌ ಎಂಟ್ರಿ ಸೇರಿದಂತೆ ಕೆಲವು ಸ್ಟಾರ್‌ ಕಲಾವಿದರ ಮಕ್ಕಳ ಜಮಾನ ಕೂಡ ಶುರುವಾಗಿದೆ. 2024ರ ವರ್ಷದ ಆರಂಭದ ತಿಂಗಳುಗಳಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಹಾಗೂ ಪ್ರಭುದೇವ ನಟನೆಯ ಕರಟಕ ದಮನಕ ಬಿಟ್ಟರೆ ಯಾವುದೇ ಸ್ಟಾರ್‌ ಸಿನಿಮಾಗಳು ತೆರೆ ಕಾಣದೆ ಚಿತ್ರರಂಗ ಸೊರಗಿತ್ತು.

ಸ್ಟಾರ್‌ ನಟರ ಕೆಲವು ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿದ್ದರೂ, ಗಳಿಕೆಯಲ್ಲಿ ಮಕಾಡೆ ಮಲಗಿ ನಿರ್ಮಾಪಕರನ್ನು ನಷ್ಟದ ಸುಳಿಗೆ ಸಿಲುಕಿಸಿತು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಒಂದೇ ಒಂದು ಸಿನಿಮಾ 2024ರಲ್ಲಿ ತೆರೆ ಕಾಣದೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

ಆದರೆ ಚಂದನವನದ ಕೊನೆಯ ಅರ್ಧ ವರ್ಷದಲ್ಲಿ ಕೆಲವು ಸ್ಟಾರ್‌ ಗಳ ಸಿನಿಮಾಗಳು ಗೆಲುವಿನ ಮಳೆ ಸುರಿಸಿದವು. ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಕೃಷ್ಣಂ ಪ್ರಣಯ ಸಖಿ ಕಳೆದ ವರ್ಷದಲ್ಲಿ ಶತದಿನೋತ್ಸವ ಸಂಭ್ರಮ ಕಂಡಿದ್ದರೆ, ಸಲಗ ನಂತರ ದುನಿಯಾ ವಿಜಯ್‌ ನಿರ್ದೇಶಿಸಿ ನಟಿಸಿದ್ದ, ಭೀಮ ಗಾಂಧಿನಗರದಲ್ಲಿ ಸದ್ದು ಮಾಡಿತ್ತು. ಯಶಸ್ವಿ ಚಿತ್ರವಾದ ಮಫ್ತಿ ಸಿನಿಮಾದ ಪ್ರೀಕ್ವೆಲ್‌ ಭೈರತಿ ರಣಗಲ್‌ ಮೂಲಕ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ತಮ ಅಭಿಮಾನಿಗಳ ಮನಗೆದ್ದರೆ, ವರ್ಷದ ಅಂತ್ಯದ ಮಾಸದಲ್ಲಿ ತೆರೆಕಂಡ ರಿಯಲ್‌ ಸ್ಟಾರ್‌ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಯುಐ, ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್‌್ಸ ಸಿನಿಮಾಗಳು ಯಶಸ್ಸಿನ ಹಾದಿಯಲ್ಲಿ ಸಾಗಿದ್ದು, 2025ರಲ್ಲೂ ಕೆಲವು ಸ್ಟಾರ್‌ ಸಿನಿಮಾಗಳು ಚಂದನವನವಲ್ಲದೆ ವಿಶ್ವದಾದ್ಯಂತ ಆರ್ಭಟ ನಡೆಸುವ ಸೂಚನೆ ನೀಡಿದೆ.

ಡಿ ಬಾಸ್‌‍ ಸದ್ದು:
2024ರಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಭಾರೀ ಸುದ್ದಿಯಲ್ಲಿದ್ದರು. ರಾಕ್‌ ಲೈನ್‌ ವೆಂಕಟೇಶ್‌ ನಿರ್ಮಿಸಿದ್ದ ಕಾಟೇರ ಯಶಸ್ಸು ಕಂಡ ಬೆನ್ನಲ್ಲೇ, ಅವರ ಮುಂದಿನ ಸಿನಿಮಾ ಡೆವಿಲ್‌ ಬಗ್ಗೆ ಅಭಿಮಾನಿಗಳು ಸಾಕಷ್ಟು ಕ್ರೇಜ್‌ ಮೂಡಿಸಿಕೊಂಡಿದ್ದರು. ಆದರೆ ದರ್ಶನ್‌ ಅವರು ಜೈಲುವಾಸ ಅನುಭವಿಸಿದ್ದರಿಂದ 2024ರಲ್ಲಿ ಚಿತ್ರ ತೆರೆ ಕಾಣದೆ ಅಭಿಮಾನಿಗಳನ್ನು ನಿರಾಸೆಗೊಳಿಸಿದೆ.

ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಪ್ರಕಾಶ್‌ ನಿರ್ದೇಶನದ ಈ ಸಿನಿಮಾ ಜನವರಿ ಆರಂಭದಲ್ಲೇ ಮತ್ತೆ ಚಿತ್ರೀಕರಣ ಆರಂಭಗೊಳ್ಳುವ ಸಾಧ್ಯತೆಯಿದ್ದು, 2025 ರ ಆರಂಭ ಭಾಗದಲ್ಲೇ ಬಿಡುಗಡೆಗೊಂಡು ಶತದಿನೋತ್ಸವ ಆಚರಿಸುವ ಭರವಸೆ ಮೂಡಿಸಿದೆ.

ಕಾಂತಾರ ಚಾಪ್ಟರ್‌ -1 ಹವಾ:
ಸ್ಯಾಂಡಲ್‌ ವುಡ್‌ ಅಲ್ಲದೆ ವಿಶ್ವದೆಲ್ಲೆಡೆ ಹವಾ ಸೃಷ್ಟಿಸಿ ಹಲವು ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್‌ ಕೂಡ ಈ ವರ್ಷದ ಅಕ್ಟೋಬರ್‌ 2 ರಂದು ಭಾರತದಾದ್ಯಂತ ತೆರೆಕಾಣುವ ಸಂಭವವಿದೆ. ಅತ್ಯಾಧುನಿಕ ಹಾಲಿವುಡ್‌ ಮಟ್ಟದ ತಂತ್ರಜ್ಞಾನ ಬಳಸಿಕೊಂಡು ಪ್ರಾದೇಶಿಕ ಕಥೆಯನ್ನು ರಚಿಸಲಾಗಿರುವ ಕಾಂತಾರ ಚಾಪ್ಟರ್‌ 1ಚಿತ್ರಕ್ಕೆ ಹೊಂಬಾಳೆ ಫಿಲಂಸ್‌‍ ಸುಮಾರು 125 ಕೋಟಿಗೂ ಹೆಚ್ಚು ಬಂಡವಾಳ ಹೂಡಲಿದ್ದು, ರಿಷಭ್‌ ಶೆಟ್ಟಿ ನಟನೆಯ ಜೊತೆಗೆ ಚಿತ್ರಕತೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

2022ರಲ್ಲಿ ಕೇವಲ 16 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಕಾಂತಾರ ಸಿನಿಮಾ ಸರಿಸುಮಾರು 400 ರಿಂದ 450 ಕೋಟಿ ಗಳಿಸಿ ಬಾಕ್ಸಾಫೀಸ್‌‍ ಕೊಳ್ಳೆ ಹೊಡೆದಿದ್ದು, ಪ್ಯಾನ್‌ ಇಂಡಿಯಾ ಸಿನಿಮಾವಾಗಿರುವ ಕಾಂತಾರ ಚಾಪ್ಟರ್‌ 1ಕೂಡ ಜಾಕ್‌ ಪಾಟ್‌ ಹೊಡೆಯುವ ಸಾಧ್ಯತೆಗಳಿವೆ.

ಕುತೂಹಲ ಮೂಡಿಸಿರುವ ಟಾಕ್ಸಿಕ್‌:
ಬಾಲಿವುಡ್‌ ಅಂಗಳದಲ್ಲಿ ಬ್ಯುಸಿಯಾಗಿರುವ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಯಾವುದೇ ಚಿತ್ರವು 2024ರಲ್ಲಿ ಬಿಡುಗಡೆ ಆಗದೆ ಅಭಿಮಾನಿಗಳನ್ನು ನಿರಾಸೆ ಗೊಳಿಸಿದ್ದಾರೆ. ಆದರೆ 2025ರಲ್ಲಿ ಟಾಕ್ಸಿಕ್‌ ಮೂಲಕ ಅಭಿಮಾನಿಗಳಿಗೆ ಹಬ್ಬದ ರಸದೌತಣ ಉಣ ಬಡಿಸಲಿದ್ದಾರೆ. ಗೋವಾದ ಡ್ರಗ್‌್ಸ ಮಾಫಿಯಾ ಸುತ್ತ ಗಿರಕಿ ಹೊಡೆಯುವ ಈ ಸಿನಿಮಾಗೆ ಗೀತು ಮೋಹನ್‌ ದಾಸ್‌‍ ಆಕ್ಷನ್‌ ಕಟ್‌ ಹೇಳುತ್ತಿದ್ದರೆ, ಪ್ಯಾನ್‌ ಇಂಡಿಯಾ ಚಿತ್ರಕ್ಕೆ ವೆಂಕಟ್‌ ನಾರಾಯಣ್‌ ಬಂಡವಾಳ ಹೂಡಿದ್ದಾರೆ. ಮಾದಕ ಬೆಡಗಿಯರಾದ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಸೇರಿದಂತೆ ಬಹು ತಾರಾಗಣ ಈ ಚಿತ್ರದಲ್ಲಿದೆ.

ಅರ್ಜುನ್‌ ಮೋಡಿ:
ಚಂದನವನದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಇಂಪಾದ ಸಂಗೀತ ನೀಡಿರುವ ಅರ್ಜುನ್‌ ಜನ್ಯ ಇದೇ ಮೊದಲ ಬಾರಿಗೆ 45 ಸಿನಿಮಾಕ್ಕೆ ನಿರ್ದೇಶಕನ ಕ್ಯಾಪ್‌ ಧರಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ನಿರ್ಮಾಣವಾಗುವ ಈ ಸಿನಿಮಾವು 2025ರಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದು ನಿಶ್ಚಿತ. ರಮೇಶ್‌ ರೆಡ್ಡಿ ನಿರ್ಮಾಣದ ಈ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ರಾಜ್‌ ಬಿ.ಶೆಟ್ಟಿ ಕಾಂಬಿನೇಷನ್‌ ಇದ್ದು ಯುಗಾದಿ ಹಬ್ಬದ ವೇಳೆಗೆ ಅಭಿಮಾನಿಗಳಿಗೆ ಸಿಹಿ ಹಂಚಲು ಚಿತ್ರಮಂದಿರಕ್ಕೆ ಲಗ್ಗೆ ಇಡಬಹುದು.

ಧ್ರುವ- ಪ್ರೇಮ್‌ ಕಮಾಲ್‌‍:
2024ರಲ್ಲಿ ಮಾರ್ಟಿನ್‌ ಚಿತ್ರ ಸಾಕಷ್ಟು ಸದ್ದು ಮಾಡದಿದ್ದರೂ, 2025ರಲ್ಲಿ ತೆರೆ ಕಾಣಲು ಸಜ್ಜಾಗುತ್ತಿರುವ ಜೋಗಿ ಪ್ರೇಮ್‌ ಹಾಗೂ ಆಕ್ಷನ್‌ ಪ್ರಿನ್‌್ಸ ಧ್ರುವ ಸರ್ಜಾ ಕಾಂಬಿನೇಷನ್‌ ನ ಕೆಡಿ ಚಿತ್ರದ ಮೂಲಕ ಅಭಿಮಾನಿಗಳ ದಿಲ್‌ ಕದಿಯಲು ಧ್ರುವ ಹೊರಟಿದ್ದಾರೆ. ಈಗಾಗಲೇ ಪೋಸ್ಟರ್‌, ಟೀಸರ್‌ ಹಾಗೂ ಜಾನಪದ ಧಾಟಿ ಇರುವ ಗೀತೆ ಮೂಲಕ ಗಾಂಧಿನಗರದಲ್ಲಿ ಸಾಕಷ್ಟು ಸೌಂಡ್‌ ಮಾಡಿರುವ ಕೆಡಿ ಸಿನಿಮಾಕ್ಕೆ ವೆಂಕಟ್‌ ನಾರಾಯಣ್‌ ಬಂಡವಾಳ ಹೂಡಿದ್ದಾರೆ.

ಬಾಲಿವುಡ್‌ ನ ಖಳನಾಯಕ್‌ ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ, ರೇಷಾ ನಾಣಯ್ಯ, ಕ್ರೇಜಿಸ್ಟಾರ್‌ ರವಿಚಂದ್ರನ್‌, ರಮೇಶ್‌ ರಂತಹ ಮಲ್ಟಿ ಸ್ಟಾರ್‌ ಗಳು ಇದ್ದು, 1970 ರ ಕಾಲಘಟ್ಟದ ಕಥೆ ಹೊಂದಿರುವ ಈ ಸಿನಿಮಾವು ಸಾಕಷ್ಟು ಕ್ರೇಜ್‌ ಮೂಡಿಸಿದೆ.

ಕಿಚ್ಚ ಸುದೀಪ್‌ ಹಾಗೂ ಅನುಪ್‌ ಭಂಡಾರಿ ಕಾಂಬಿನೇಷನ್‌ ನ ಬಿಲ್ಲಾ ರಂಗ ಬಾಷಾ, ಶರಣ್‌ ನಟನೆಯ ಛೂ ಮಂತರ್‌, ಯುವರಾಜ್‌ ಕುಮಾರ್‌ ನಟನೆಯ ಎಕ್ಕ, ಆಕ್ಷನ್‌ ಪ್ರಿನ್‌್ಸ ಪ್ರಜ್ವಲ್‌ ದೇವರಾಜ್‌ ಅಭಿನಯದ ಕರಾವಳಿ, ರಕ್ಷಿತ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ರಿಚರ್ಡ್‌ ಆಂಟನಿ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಹಾಗೂ ಡಾಲಿ ಧನಂಜಯ್‌ ಕಾಂಬಿನೇಷನ್‌ ನ ಉತ್ತರಕಾಂಡ, ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ನಟನೆಯ ಭೈರವನ ಕೊನೆಯ ಪಾಠ, ದಿಗಂತ್‌ ಅಭಿನಯದ ಎಡಗೈಯೇ ಅಪಘಾತಕ್ಕೆ ಕಾರಣ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ರಮೇಶ್‌ ಕಾಂಬಿನೇಷನ್‌ ನ ಯುವರ್ಸ್‌ ಸಿನ್ಸಿಯರ್ಲಿ ರಾಮ್‌ ಸಿನಿಮಾಗಳೂ ಸೇರಿದಂತೆ ಕೆಲವು ಯುವ ಪ್ರತಿಭೆಗಳ ಸಿನಿಮಾಗಳು ಕೂಡ 2025 ರಲ್ಲಿಯೇ ಬಿಡುಗಡೆಗೊಂಡು ಸ್ಯಾಂಡಲ್‌ ವುಡ್‌ ಅನ್ನು ಮತ್ತಷ್ಟು ರಂಗಾಗಿಸಲಿವೆ.