Sunday, June 23, 2024
Homeರಾಜಕೀಯಗ್ಯಾರಂಟಿ ಸರ್ಕಾರಕ್ಕೆ ಗಂಡಾಂತರವಾಗುತ್ತಾ ಬೆಳಗಾವಿ ರಾಜಕಾರಣ..?

ಗ್ಯಾರಂಟಿ ಸರ್ಕಾರಕ್ಕೆ ಗಂಡಾಂತರವಾಗುತ್ತಾ ಬೆಳಗಾವಿ ರಾಜಕಾರಣ..?

ಬೆಂಗಳೂರು,ಅ.17- ಹಿಂದಿನ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಮುಳುವಾಗಿದ್ದ ಬೆಳಗಾವಿ ರಾಜಕಾರಣ ಮತ್ತೊಮ್ಮೆ ಗರಿಗೆದರಿದ್ದು, ಒಳಬೇಗುದಿಗೆ ಕಾರಣವಾಗಿದೆ. ರಾಜ್ಯ ರಾಜಕಾರಣದಲ್ಲಿ ಜಿಲ್ಲಾವಾರು, ಪ್ರಾದೇಶಿಕವಾರು ಹಾಗೂ ಕುಟುಂಬವಾರು ಪ್ರಾಬಲ್ಯ ಹೆಚ್ಚಾಗಿದ್ದು, ಪದೇ ಪದೇ ಪ್ರಭಾವ ಬೀರುತ್ತಲೇ ಇರುತ್ತದೆ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿವಾದಕ್ಕೀಡಾಗಿತ್ತು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿಯವರ ವೈಯಕ್ತಿಕ ಪ್ರತಿಷ್ಠೆ ಸರ್ಕಾರವನ್ನೇ ಬುಡಮೇಲು ಮಾಡುವ ಮಟ್ಟಕ್ಕೆ ಉಲ್ಬಣಗೊಂಡಿತ್ತು.

ತಮ್ಮ ಬಣದ ನಾಯಕನನ್ನೇ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಬೇಕೆಂದು ಲಕ್ಷ್ಮಿ ಹೆಬ್ಬಾಳ್ಕರ್ ಪಟ್ಟು ಹಿಡಿದಿದ್ದರು. ಅದಕ್ಕೆ ಆಗಿನ ಸಚಿವರೂ ಹಾಗೂ ಪ್ರಭಾವಿ ನಾಯಕರಾಗಿದ್ದ ಈಗಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲವಾಗಿದ್ದರು. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪ ಸರಿಯಲ್ಲ ಎಂದು ರಮೇಶ್ ಜಾರಕಿಹೊಳಿ ರೊಚ್ಚುಗೆದ್ದಿದ್ದರು. ಅದಕ್ಕೆ ಸಚಿವರಾಗಿದ್ದ ಸಹೋದರ ಸತೀಶ್ ಜಾರಕಿಹೊಳಿ ಕೈಜೋಡಿಸಿದ್ದರು.ಸಹೋದರರ ಸವಾಲಿಗೆ ಪಾಟಿ ಸವಾಲುವೊಡ್ಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಕೊನೆಗೂ ಮೇಲ್ಗೈ ಸಾಧಿಸಿ ತಮ್ಮ ಬೆಂಬಲಿಗನನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡರು.

ಇದು ಮೇಲ್ನೋಟಕ್ಕೆ ರಾಜಿಸಂಧಾನದ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥವಾದಂತೆ ಕಂಡರೂ ಒಳಬೇಗುದಿ ಜೀವಂತವಾಗಿತ್ತು. ಅದು ನಿಧಾನವಾಗಿ ಹೊಗೆಯಾಡಿ ಆಪರೇಷನ್ ಕಮಲದಂತಹ ಜ್ವಾಲಾಮುಖಿಗೆ ಕಾರಣವಾಯಿತಲ್ಲದೆ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು.

ದೇಶದೊಂದಿಗೆ ಪಾಲುದಾರರಾಗಲು ಹೂಡಿಕೆದಾರರಿಗೆ ಮೋದಿ ಕರೆ

ಆನಂತರ ಮೂರು ಮುಕ್ಕಾಲು ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಯಿತು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಿದೆ. ಆದರೂ ಬೆಳಗಾವಿ ರಾಜಕಾರಣ ಮತ್ತೆ ಮುನ್ನಲೆಗೆ ಬಂದಿದ್ದು, ಒಳಬೇಗುದಿಗೆ ಕಾರಣವಾಗಿದೆ.ಇನ್ನೊಮ್ಮೆ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ಮೇಲ್ನೋಟಕ್ಕೆ ಇಬ್ಬರೂ ಹೊಂದಾಣಿಕೆಯಿಂದಲೇ ಕೆಲಸ ಮಾಡಿದಂತೆ ಕಂಡುಬಂದರೂ ಅಧಿಕಾರಿಗಳ ವರ್ಗಾವಣೆ, ಸ್ಥಳೀಯ ಮಟ್ಟದ ಪಕ್ಷ ಸಂಘಟನೆಯಲ್ಲಿ ಪರಸ್ಪರ ಜಿದ್ದಿಗೆ ಬಿದ್ದಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಎಂದಿನಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೃಪಾಕಟಾಕ್ಷ ಇರುವುದು ಜಾರಕಿಹೊಳಿ ಕುಟುಂಬಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.ಇತ್ತೀಚೆಗೆ ಸಂಪುಟ ವಿಸ್ತರಣೆಯಲ್ಲೂ ಎಲ್ಲ ಮಹಿಳಾ ನಾಯಕಿಯರನ್ನು ಹಿಂದಿಕ್ಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವಕಾಶ ಗಿಟ್ಟಿಸಿದ್ದರು. ಅದಕ್ಕೆ ಪ್ರಭಾವಿಗಳ ಬೆಂಬಲವೇ ಕಾರಣ ಎಂಬ ಗುಸುಗುಸು ವ್ಯಾಪಕವಾಗಿತ್ತು.

ಸತೀಶ್ ಜಾರಕಿಹೊಳಿಯವರು ಇತ್ತೀಚೆಗೆ ಕುಟುಂಬದ ಸಹೋದರರನ್ನು ಮೀರಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ. ಅದರ ಪರಿಣಾಮ ಕಳೆದ ಲೋಕಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಮತ ಗಳಿಸಿತ್ತು. ವಿಧಾನಪರಿಷತ್‍ನ ಚುನಾವಣೆಯಲ್ಲೂ ಗೆಲುವು ಸಾಧಿಸಿತ್ತು. ವಿಧಾನಸಭೆ ಚುನಾವಣೆಗಳಲ್ಲೂ ಗಣನೀಯ ಮುನ್ನಡೆಗೆ ಸತೀಶ್ ಜಾರಕಿಹೊಳಿ ಅವರ ಪ್ರಾಮಾಣಿಕ ಪ್ರಯತ್ನ ಕಾರಣ ಎಂಬ ವ್ಯಾಖ್ಯಾನಗಳಿದ್ದವು.
ಜಾರಕಿಹೊಳಿ ಕುಟುಂಬದ ಹಿಡಿತವನ್ನು ಜಿಲ್ಲಾ ರಾಜಕೀಯದಲ್ಲಿ ತಪ್ಪಿಸಲು ನಾನಾ ರೀತಿಯ ತಂತ್ರಗಾರಿಕೆಗಳು ನಡೆಯುತ್ತಿವೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕಾಂಗ್ರೆಸ್ ಹೊರತಾಗಿ ಬಿಜೆಪಿಯ ನಾಯಕರು ಕೂಡ ಬೆಂಬಲ ನೀಡುತ್ತಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದೆ. ಅದರ ಜೊತೆಗೆ ಪ್ರಭಾವಿಗಳ ಸಹಕಾರವೂ ಇರುವುದರಿಂದ ಲಕ್ಷ್ಮಿ ಹೆಬ್ಬಾಳ್ಕರ್ ಪಿಎಲ್‍ಡಿ ಬ್ಯಾಂಕ್‍ನ ಹಿಡಿತ ಸಾಧಿಸಲು ಮತ್ತೊಮ್ಮೆ ಹವಣಿಸುತ್ತಿದ್ದಾರೆ.

ಇದರ ವಿರುದ್ಧ ಬಹಿರಂಗವಾಗಿ ಮಾತನಾಡಲಾಗದೆ ಸಿಡಿಮಿಡಿಗೊಳ್ಳುತ್ತಿರುವ ಸತೀಶ್ ಜಾರಕಿಹೊಳಿಯವರು 20ಕ್ಕೂ ಹೆಚ್ಚು ಮಂದಿ ಶಾಸಕರ ಮೋಜಿನ ಪ್ರವಾಸದ ತಯಾರಿ ನಡೆಸಿದರು ಎಂದು ಹೇಳಲಾಗಿದೆ.ಒಂದೆಡೆ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ , ಜೆಡಿಎಸ್ ತೆರೆಮರೆಯ ಪ್ರಯತ್ನಗಳನ್ನು ನಡೆಸುತ್ತಿದ್ದರೆ, ಕಾಂಗ್ರೆಸ್ ಒಳ ಬೇಗುದಿಗಳು ಮಗ್ಗಲು ಮುಳ್ಳಾಗಿವೆ. ಅದನ್ನು ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಮೂಲಕ ಸಂಧಾನದ ಪ್ರಯತ್ನ ನಡೆಸುತ್ತಿದ್ದಾರೆ.

ಬೆಂಗಳೂರಿನ 4 ದಿಕ್ಕಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಕ್ರೋಶ

ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪ ತಗ್ಗದೆ ಇದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಬೇರೆ ಸ್ವರೂಪದಲ್ಲಿರುತ್ತದೆ ಎಂದು ಎಚ್ಚರಿಕೆ ರವಾನೆಯಾಗಿದೆ ಎಂಬ ವದಂತಿಗಳಿವೆ.

RELATED ARTICLES

Latest News