Thursday, September 19, 2024
Homeರಾಜ್ಯಕ್ರಸ್ಟ್ ಗೇಟ್ ತುಂಡಾಗಿ ಖಾಲಿಯಾಗಿದ್ದ ತುಂಗಭದ್ರಾ ಜಲಾಶಯ ಮತ್ತೆ ಭಾರ್ತಿ

ಕ್ರಸ್ಟ್ ಗೇಟ್ ತುಂಡಾಗಿ ಖಾಲಿಯಾಗಿದ್ದ ತುಂಗಭದ್ರಾ ಜಲಾಶಯ ಮತ್ತೆ ಭಾರ್ತಿ

Tungabhadra Dam nears full capacity with 92tmcft of water

ಬೆಂಗಳೂರು,ಸೆ.1- ಕ್ರಸ್ಟ್ ಗೇಟ್ವೊಂದರ ಚೈನ್ ಲಿಂಕ್ ತುಂಡಾಗಿ ಆತಂಕ ಉಂಟು ಮಾಡಿದ್ದ ತುಂಗಭದ್ರಾ ಜಲಾಶಯ ಮತ್ತೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಆಶಾಭಾವನೆ ಮೂಡಿಸಿದೆ. ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಶೇ.92ರಷ್ಟು ನೀರು ಹರಿದುಬಂದಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, 105.79 ಟಿಎಂಸಿ ಅಡಿ ಗರಿಷ್ಠ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಇಂದು 96.84 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 40 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ಒಳಹರಿವಿದ್ದು, 13 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ಹೊರಹರಿವಿದೆ. ಶೇ.92ರಷ್ಟು ಭರ್ತಿಯಾಗಿದೆ.

1633 ಅಡಿ ಎತ್ತರದ ಈ ಜಲಾಶಯದಲ್ಲಿ ಈಗಾಗಲೇ 1630.73 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಒಳಹರಿವು ಸಾಕಷ್ಟು ಪ್ರಮಾಣದಲ್ಲಿದೆ. ಹೀಗಾಗಿ ಜಲಾಶಯ ಭರ್ತಿಯಾಗುವುದು ಬಹುತೇಕ ಖಚಿತವಾಗಿದೆ.ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಮುನ್ಸೂಚನೆಯನ್ನು ತುಂಗಭದ್ರಾ ಮಂಡಳಿ ನೀಡಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚನೆ ರವಾನಿಸಿದೆ.

ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದು ಸುಮಾರು 35 ಸಾವಿರ ಟಿಎಂಸಿಗೂ ಅಧಿಕ ನೀರು ಹರಿದುಹೋಗಿತ್ತು. ಮತ್ತೆ ಜಲಾಶಯ ಭರ್ತಿಯಾಗುತ್ತೋ ಇಲ್ಲವೋ ಎಂಬ ಆತಂಕ ಮನೆ ಮಾಡಿತ್ತು.ಸರ್ಕಾರ ಮುರಿದು ಹೋಗಿದ್ದ ಗೇಟ್ ಅನ್ನು ಬದಲಿಸಿ ತುರ್ತಾಗಿ ಹೊಸ ಗೇಟ್ ಅಳವಡಿಸಿದ್ದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಏರಿಕೆಯಾಗುತ್ತಾ ಬಂದಿದೆ.

ರಾಜ್ಯದ ಪ್ರಮುಖ 14 ಜಲಾಶಯಗಳ ಗರಿಷ್ಠ ನೀರಿನ ಪ್ರಮಾಣ 895.62 ಟಿಎಂಸಿ ಆಗಿದ್ದು, ಇದುವರೆಗೂ 831.95 ಟಿಎಂಸಿ ಸಂಗ್ರಹವಾಗಿದೆ. ಕಾವೇರಿ ಜಲಾನಯನ ಭಾಗದ ಹಾರಂಗಿ, ಹೇಮಾವತಿ, ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ.

ಅದೇ ರೀತಿ ಕೃಷ್ಣಾ ಕೊಳ್ಳದ ಭದ್ರಾ, ಘಟಪ್ರಭ, ಮಲಪ್ರಭ, ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ತುಂಗಭದ್ರ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು. ಆದರೆ ಗೇಟ್ ಚೈನ್ಲಿಂಕ್ ಕಟ್ಟಾದ ಪರಿಣಾಮ ನೀರು ಪೋಲಾಗಿತ್ತು. ಈಗ ಮತ್ತೆ ಜಲಾಶಯದಲ್ಲಿ ನೀರು ಸಂಗ್ರಹವಾಗಿರುವುದರಿಂದ ನದಿಪಾತ್ರದ ಜನರಲ್ಲಿ ಸಂತಸ ಉಂಟಾಗಿದೆ.

ವಾಣಿವಿಲಾಸ ಸಾಗರದ ಜಲಾಶಯದಲ್ಲಿ ಶೇ.70ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಗರಿಷ್ಠ 30.42 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಇದುವರೆಗೂ 21.22 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಒಳ ಹರಿವು 693 ಕ್ಯೂಸೆಕ್ನಷ್ಟಿದ್ದು, ಹೊಳಹರಿವು 135 ಕ್ಯೂಸೆಕ್‌್ಸನಷ್ಟಿದೆ.

ಜಲ ವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ ಹಾಗೂ ಸೂಪಾ ಜಲಾಶಯಗಳು ಕೂಡ ಭರ್ತಿಯಾಗುವ ಹಂತದಲ್ಲಿವೆ. ಲಿಂಗನಮಕ್ಕಿ ಜಲಾಶಯಕ್ಕೆ 151.75 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯವಿದ್ದು, ಈಗಾಗಲೇ 146.75 ಟಿಎಂಸಿ ನೀರಿದೆ.17 ಸಾವಿರ ಕ್ಯೂಸೆಕ್ಗೂ ಹೆಚ್ಚು ಕ್ಯೂಸೆಕ್ ನೀರಿನ ಒಳಹರಿವಿದ್ದು, 12 ಸಾವಿರಕ್ಕೂ ಹೆಚ್ಚು ಹೊರಹರಿವಿದೆ. ಶೇ. 97ರಷ್ಟು ಈಗಾಗಲೇ ಭರ್ತಿಯಾಗಿದೆ.

ಸೂಪಾ ಜಲಾಶಯವು 145.3 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗಾಗಲೇ 131.08 ಟಿಎಂಸಿ ನೀರು ಸಂಗ್ರಹವಾಗಿದ್ದು, ಶೇ.90ರಷ್ಟು ಭರ್ತಿಯಾಗಿದೆ.10 ಸಾವಿರ ಕ್ಯೂಸೆಕ್ಗೂ ಹೆಚ್ಚು ಒಳಹರಿವು, 4.5 ಸಾವಿರ ಕ್ಯೂಸೆಕ್ಗೂ ಹೆಚ್ಚು ಹೊರಹರಿವಿದೆ. ವಾರಾಹಿ ಜಲಾಶಯದ ಗರಿಷ್ಠ ಸಾಮರ್ಥ್ಯ 31.10 ಟಿಎಂಸಿ ಆಗಿದ್ದು, 23.65 ಟಿಎಂಸಿ ನೀರು ಸಂಗ್ರಹವಿದ್ದು, ಶೇ.76ರಷ್ಟು ಭರ್ತಿಯಾಗಿದೆ. 1800 ಕ್ಯೂಸೆಕ್ಗೂ ಹೆಚ್ಚು ಒಳ ಹರಿವಿದೆ.

RELATED ARTICLES

Latest News