ಬೆಂಗಳೂರು,ಜ.4- ನಗರದಲ್ಲಿರುವ ಅನಧಿಕೃತ ಕಟ್ಟಡಗಳ ಮೇಲೆ ಮತ್ತೆ ಬಿಬಿಎಂಪಿ ಸಮರ ಸಾರಿದೆ.ಅನಧಿಕೃತ ಕಟ್ಟಡ ನಿರ್ಮಿಸಿರುವವರಿಗೆ ಮೋದಲು ನೋಟೀಸ್ ನೀಡಲಾಗುವುದು. 7 ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಅಂತಹ ಕಟ್ಟಡಗಳನ್ನು ನೆಲಸಮ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
ಕಳೆದ ಅಕ್ಟೋಬರ್ನಲ್ಲಿ ಬಾಬುಸಾಬ್ ಪಾಳ್ಯದಲ್ಲಿ ಅನಧಿಕೃತ ಕಟ್ಟಡ ಕುಸಿದು 9 ಕಾರ್ಮಿಕರು ಮೃತಪಟ್ಟ ಘಟನೆ ನಂತರ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.ಆ ಘಟನೆ ನಂತರ ನಗರದಲ್ಲಿ ನಿರ್ಮಿಸಲಾಗುತ್ತಿರುವ ಅನಧಿಕೃತ ಕಟ್ಟಡಗಳ ಸರ್ವೇ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿತ್ತು. ಪಾಲಿಕೆ ಅಧಿಕಾರಿಗಳ ಸರ್ವೆ ಪ್ರಕಾರ ನಗರದಲ್ಲಿ 2 ಸಾವಿರಕ್ಕೂ ಅಧಿಕ ಅಕ್ರಮ ಕಟ್ಟಡಗಳು ಪತ್ತೆಯಾಗಿವೆಯಂತೆ. ಹೀಗಾಗಿ ಹಂತ ಹಂತವಾಗಿ ಅನಧಿಕೃತ ಕಟ್ಟಡಗಳ ನೆಲಸಮ ಕಾರ್ಯ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.
ಮೊದಲ ಹಂತದಲ್ಲಿ ಅತಿ ಹೆಚ್ಚು ಅನಧಿಕೃತ ಕಟ್ಟಡ ನಿರ್ಮಾಣವಾಗಿರುವ ಮಹದೇವಪುರ ವಲಯದಿಂದಲೇ ಕಟ್ಟಡ ನೆಲಸಮ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಮಹದೇವಪುರ ವಲಯ ಒಂದರಲ್ಲೇ 400 ಕ್ಕೂ ಅಧಿಕ ಅನಧಿಕತ ನಿರ್ಮಾಣ ಹಂತದ ಕಟ್ಟಡ ಪತ್ತೆಯಾಗಿದ್ದು ಅವುಗಳ ತೆರವು ಕಾರ್ಯಚರಣೆ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಆ ವಲಯದ ಮುಖ್ಯ ಆಯುಕ್ತ ಲೋಕೇಶ್ ತಿಳಿಸಿದ್ದಾರೆ.
ಅನಧಿಕತ ನಿರ್ಮಾಣ ಮಾಡಿರುವ 400 ಕಟ್ಟಡಗಳಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ ಹಾಗೂ ಅನಧಿಕತ ಕಟ್ಟಡಗಳ ಮೇಲೆ ಬ್ಯಾನರ್ ಅಳವಡಿಸಿ, ಕಟ್ಟಡ ಮಾಲೀಕರಿಗೆ ತೆರವಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಮಾಲೀಕರು ಕ್ರಮ ಕೈಗೊಳ್ಳದಿದ್ದರೆ ಕಟ್ಟಡ ಸೀಜ್ ಮಾಡುತ್ತೇವೆ ಇಲ್ಲವೇ ಕಟ್ಟಡ ತೆರವು ಮಾಡ್ತೀವಿ ಎಂದು ಅವರು ಮಾಹಿತಿ ನೀಡಿದ್ದಾರೆ.