Sunday, November 24, 2024
Homeರಾಜಕೀಯ | Politicsಯಾವ ಆಧಾರದ ಮೇಲೆ ನಿವೇಶನ ರದ್ದು ಮಾಡಿದ್ದೀರಿ..? : ವಿಜಯೇಂದ್ರ ಪ್ರಶ್ನೆ

ಯಾವ ಆಧಾರದ ಮೇಲೆ ನಿವೇಶನ ರದ್ದು ಮಾಡಿದ್ದೀರಿ..? : ವಿಜಯೇಂದ್ರ ಪ್ರಶ್ನೆ

BY Vijayendra

ಬೆಂಗಳೂರು,ಅ.2- ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಪತ್ರ ನೀಡಿದ ಕೇವಲ 24 ಗಂಟೆಯೊಳಗೆ ಮುಡಾ ಆಯುಕ್ತರು ಮಂಜೂರು ಮಾಡಿದ್ದ ನಿವೇಶನಗಳನ್ನು ಯಾವ ಆಧಾರದ ಮೇಲೆ ರದ್ದುಪಡಿಸಿ ದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಆಯುಕ್ತರು ಇಷ್ಟು ತರಾತುರಿಯಲ್ಲಿ ನಿವೇಶನಗಳನ್ನು ರದ್ದುಪಡಿಸುವ ಅಗತ್ಯವಾದರೂ ಏನಿತ್ತು. ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಿತ್ತಲ್ಲವೇ? ಬೇರೆಯವರಿಗೊಂದು ನ್ಯಾಯ. ಮುಖ್ಯಮಂತ್ರಿ ಕುಟುಂಬಕ್ಕೆ ಇನ್ನೊಂದು ನ್ಯಾಯವೇ ಎಂದು ತರಾಟೆಗೆ ತೆಗೆದುಕೊಂಡರು.

ನನಗಿರುವ ಮಾಹಿತಿ ಪ್ರಕಾರ ಮುಡಾ ಆಯುಕ್ತರ ನಿರ್ಧಾರ ನಿಜಕ್ಕೂ ಅಚ್ಚರಿ ತಂದಿದೆ. ಹೈಕೋರ್ಟ್ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದ್ದರೆ, ಕೆಳಹಂತದ ನ್ಯಾಯಾಲಯ ಎಫ್ಐಆರ್ ದಾಖಲಿಸಲು ಆದೇಶಿಸಿದೆ. ಹಾಗಾದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೇ? ಎಂದು ಪ್ರಶ್ನೆ ಮಾಡಿದರು.

ಒಂದು ಕಡೆ ಲೋಕಾಯುಕ್ತ ಮತ್ತೊಂದು ಕಡೆ ಇ.ಡಿಯಲ್ಲಿ ದೂರು ದಾಖಲಾಗಿದೆ. ಮತ್ತೊಂದು ಕಡೆ ತನಿಖೆಯೂ ಪ್ರಾರಂಭವಾಗಿದೆ. ಈಗ ನಿವೇಶನ ವಾಪಸ್ ಕೊಟ್ಟರೆ ಪ್ರಕರಣ ಇತ್ಯರ್ಥವಾಗುತ್ತದೆಯೇ? ಕಾನೂನು ತಜ್ಞರು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರಿಗೆ ಪರಿಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಒಂದಾದ ಮೇಲೆ ಒಂದು ತಪ್ಪು ಮಾಡುತ್ತಿದ್ದಾರೆ. ಅವರು ಬಹಳ ಅನುಭವಿಗಳು! ಮುಡಾ ಪ್ರಕರಣವನ್ನು ಬಿಜೆಪಿ ಕೈಗೆತ್ತಿಕೊಂಡಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಹಿಂದೆಯೇ ಅವರು ಸೈಟ್ ವಾಪಸ್ ನೀಡಿದ್ದರೆ ನಾವು ಇಷ್ಟು ಹೋರಾಟ ಮಾಡಬೇಕಿರಲಿಲ್ಲ. ಆದರೆ ಅವರಿಗೆ ಯಾರು ಸಲಹೆ ನೀಡಿದರೋ ಗೊತ್ತಿಲ್ಲ? ಬಹುಶಃ ಡಿಕೆಶಿ ಅವರೇ ಸಲಹೆ ನೀಡುತ್ತಿರಬಹುದು ಎಂದು ವ್ಯಂಗ್ಯವಾಡಿದರು.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣಾ ಅವರು ಇಡಿಯಲ್ಲೂ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಪತ್ರ ಬರೆದ 24 ಗಂಟೆಯೊಳಗೆ ಸೈಟ್ ವಾಪಸ್ ಪಡೆದಿದ್ದಾರೆ. ಹಾಗಾಗಿ ಲೋಕಾಯುಕ್ತಾ ತನಿಖೆ ಬೇಡ ಅಂತಲೇ, ಸ್ನೇಹಮಯಿ ಕೃಷ್ಣಾ ಸಿಬಿಐ ತನಿಖೆ ಬೇಕು ಅನ್ನುತ್ತಿದ್ದಾರೆ. ಬಿಜೆಪಿ ಕೂಡ ಸಿಬಿಐ ತನಿಖೆಗೆ ಆಗ್ರಹಿಸುತ್ತಿದೆ ಎಂದರು.

ರಾಜ್ಯ ಸರ್ಕಾರ ಒನ್ ಮ್ಯಾನ್ ಕಮೀಷನ್ ತನಿಖೆಗೆ ನೀಡಿದೆ ಎಂದು ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಎಲ್ಲಾ ನಿರ್ಧಾರ ಒಂದರ ಮೇಲೆ, ಒಂದು ತಪ್ಪು ಹೊರಗೆ ಬರುತ್ತಿದೆ. ನಿವೇಶನ ವಾಪಸ್ ಪತ್ರ ಬರೆದಿದ್ದಾರೆ. ಮುಡಾ ಆಯುಕ್ತರು ಸಂಜೆಯೊಳಗೆ ಖಾತಾ ವಾಪಸ್ ಪಡೆದಿದ್ದಾರೆ. ಅಕ್ರಮ ಈಗಾಗಲೇ ಆಗಿದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಕೊಡಲೇ ಬೇಕು. ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಮಾತಾಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಬೆಳವಣಿಗೆ ನೋಡಿ. ಸಿದ್ದರಾಮಯ್ಯ ಅವರು ಯಾವ ಕ್ಷಣ, ಯಾವಾಗ ರಾಜೀನಾಮೆ ಕೊಡ್ತಾರೆ ಎಂದು ಗೊತ್ತಿಲ್ಲ. ಆದರೆ ರಾಜೀನಾಮೆ ಕೊಡುವುದಂತೂ ಸತ್ಯ ಎಂದರು.

ಸಿಎಂ ಸಿದ್ದರಾಮಯ್ಯ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಡಿ.ಕೆ.ಶಿವಕುಮಾರ್ ಅವರನ್ನು ಕೇಳಿ ಹೇಳುತ್ತೇನೆ ಎಂದು ಹಾಸ್ಯ ಮಾಡಿದರು.

RELATED ARTICLES

Latest News