Saturday, November 1, 2025
Homeರಾಜ್ಯರಾಜ್ಯೋತ್ಸವ ಭಾಷಣದಲ್ಲಿ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕುರಿತು ಮತ್ತೆ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯೋತ್ಸವ ಭಾಷಣದಲ್ಲಿ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕುರಿತು ಮತ್ತೆ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah again mentioned primary education in mother tongue in Rajyotsava speech

ಬೆಂಗಳೂರು, ನ.1- ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಪ್ರತ್ಯೇಕ ಹಾಗೂ ಪರೋಕ್ಷ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಥಮಿಕ ಶಿಕ್ಷಣ ಮಾತೃಭಾಷಾ ಮಾಧ್ಯಮದಲ್ಲೇ ಇರಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾಡು ಎಂದರೆ ರಸ್ತೆ, ಸೇತುವೆ, ವಿದ್ಯುತ್‌, ರೈಲು, ವಿಮಾನ, ಸುಸಜಿತ ಕಟ್ಟಡಗಳಷ್ಟೇ ಅಲ್ಲ, ನಾಡಿನ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಮುಖ್ಯ. ಅನ್ಯಭಾಷೆ, ಸಂಸ್ಕೃತಿ, ಜಾತಿ,ಧರ್ಮ ಹಾಗೂ ಇತರ ಭಿನ್ನತೆಗಳನ್ನು ಸಹನೆಯಿಂದ ನೋಡುವುದನ್ನು ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.

ಜಗತ್ತಿನ ಯಾವ ಭಾಷೆಗೂ ಇಲ್ಲದ ಬಿಕ್ಕಟ್ಟು ಕನ್ನಡಕ್ಕೆ ಬಂದುದೊದಗಿದೆ. ಶಿಕ್ಷಣದಲ್ಲಿ ಕನ್ನಡ ಭಾಷೆಯ ನಿರ್ಲಕ್ಷದಿಂದಾಗಿ ಸಮಸ್ಯೆ ಹೆಚ್ಚಾಗಿದೆ. ಮುಂದುವರಿದ ಭಾಷಾಗಳಲ್ಲಿನ ಮಕ್ಕಳು ತಮ ಮಾತೃ ಭಾಷೆಯಲ್ಲೇ ಯೋಚಿಸಿ, ಕಲಿಯುತ್ತಿದ್ದಾರೆ. ನಮಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿಯಿದೆ. ಹಿಂದಿ, ಇಂಗ್ಲಿಷ್‌ನಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಇದು ನಮ ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಜಾರಿಗೆ ತರಲು ಸೂಕ್ತ ಕಾನೂನುಗಳನ್ನು ತರಬೇಕಿದ್ದು, ಕೇಂದ್ರ ಸರ್ಕಾರ ಇತ್ತ ಗಮನ ಹರಿಸಿಬೇಕು. ಜಗತ್ತಿನ ಮುಖ್ಯ ದೇಶಗಳಲ್ಲಿ ನಡೆಯುತ್ತಿರುವ ಅನ್ವೇಷಣೆಗಳಿಗೆ ಸರಿಸಾಟಿಯಾಗಿ ನಿಲ್ಲುವ ಆಲೋಚನೆಗಳನ್ನು ಕಲಿಸುವುದು ಬಹಳ ಮುಖ್ಯವಾಗಿದೆ ಎಂದರು.

- Advertisement -

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ, ಕರ್ನಾಟಕದಿಂದ 4.5 ಲಕ್ಷ ಕೋಟಿ ರುಪಾಯಿಗಿಂತಲೂ ಹೆಚ್ಚಿನ ತೆರಿಗೆ ಸಂಪತ್ತನ್ನು ನೀಡಲಾಗುತ್ತಿದೆ. ಅದರ ಪ್ರತಿಯಾಗಿ ಬಿಡಿಗಾಸು ಮಾತ್ರ ಕೊಡುವ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಲಾಗುತ್ತಿದೆ ಎಂದು ಕಿಡಿಕಾರಿದರು.ಹಿಂದಿ ಭಾಷೆಯನ್ನು ಏರುವ ನಿರಂತರ ಹುನ್ನಾರ ನಡಯುತ್ತಿದೆ. ಹಿಂದಿ ಮತ್ತು ಸಂಸ್ಕೃತ ಭಾಷೆಯ ಅಭಿವೃದ್ಧಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ. ಕನ್ನಡ ಸೇರಿದಂತೆ ಇತರ ದೇಶೀಯ ಭಾಷೆಗಳನ್ನು ಕಡಗಣಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ನೀಡದೆ ವಂಚಿಸಲಾಗುತ್ತಿದೆ. ಕನ್ನಡ ಶಾಸ್ತ್ರೀಯ ಭಾಷೆಗೆ ನೀಡಬೇಕಾದ ಅನುದಾನವನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಈ ಕನ್ನಡ ವಿರೋಧಿ ನೀತಿಯನ್ನು ವಿರೋಧಿಸಬೇಕಾಗಿದೆ ಎಂದು ಕರೆ ನೀಡಿದರು.

ಕೇಂದ್ರ ಸರ್ಕಾದ ಮಲತಾಯಿ ಧೋರಣೆಯಿಂದ ಒಕ್ಕೊರಲಿನಿಂದ ಖಂಡಿಸಬೇಕಿದೆ. ಕಳೆದ 5 ವರ್ಷಗಳಲ್ಲಿ 15ನೇ ಹಣಕಾಸು ಆಯೋಗದ ಮೂಲಕ ಮಾಡಿದ ದ್ರೋಹದಿಂದ ರಾಜ್ಯಕ್ಕೆ 70 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ಅನುದಾನವನ್ನು ನೀಡದಿರುವುದು ಮತ್ತು ಯೋಜನೆಗಳ ಕಡಗಣೆನಿಯಿಂದ ರಾಜ್ಯಕ್ಕೆ ಒಟ್ಟು 1 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದ್ದು, ರಾಜ್ಯ ಸರ್ಕಾರದ ಹೋರಾಟ ನಡೆಸುತ್ತಿದೆ. ಜನ ಸಮುದಾಯವೂ ಗಂಭೀರವಾಗಿ ಪ್ರಶ್ನಿಸಬೇಕಿದೆ. ಬಲಿಷ್ಠ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸಿ ರಾಜ್ಯಗಳ ಅಧಿಕಾರಗಳನ್ನು ಮೊಟಕುಗೊಳಿಸುವ ಹೊಸಹಾತುಶಾಹಿ ಮನೋಭಾವ ಇತ್ತೀಚೆಗೆ ಕಾಣಿಸುತ್ತಿದೆ. ಇಡೀ ನಾಡು ಕೇಂದ್ರ ವಿರುದ್ಧ ಪ್ರತಿಭಟಿಸದಿದ್ದೆ ನಮನ್ನು ಅಪೋಶನ ತೆಗೆದುಕೊಳ್ಳಬಹುದು ಎಂದು ಆತಂಕ ವ್ಯಕ್ತ ಪಡಿಸಿದರು.

ರಾಜಕೀಯ ಕಾರಣಕ್ಕೆ ರಾಜ್ಯದ ಸೌಹಾರ್ದ ಪರಂಪರೆಗೆ ಕೋಮುವಾದಿ ಶಕ್ತಿಗಳು ನಿರಂತರವಾಗಿ ವಿಷ ಹಾಕುತ್ತಿವೆ. ಭಾರತವನ್ನು ಹಿಟ್ಲರ್‌ನ ಜರ್ಮನಿ, ಮುಸಲೋನಿಯ ಇಟಲಿ, ಟ್ರಾಂಕೋಸ್‌‍ನ ಸ್ಪೇನ್‌ ಮಾದರಿಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಎಲ್ಲಾ ಧರ್ಮದಲ್ಲೂ ಮೂಲ ಭೂತವಾದಿಗಳಿದ್ದಾರೆ. ಯುವ ಜನ ಇದಕ್ಕೆ ಬಲಿಯಾಗಬಾರದು. ವೈಚಾರಿಕವಾಗಿ ಯೋಚಿಸುವ ಗುಣ ಬೆಳೆಸಬೇಕು.
ಕೃತಕಬುದ್ಧಿಮತ್ತೆ ಜಗತನ್ನು ಆಕ್ರಮಿಸುತ್ತಿದೆ. ಇದರಿಂದ ಉದ್ಯೋಗ ನಷ್ಟವಾಗುವ ಆತಂಕವಿದೆ. ಹೊಸ ಸವಾಲಿಗೆ ತಕ್ಕ ಹಾಗೆ ಭಾಷೆಯನ್ನು ಸಜ್ಜುಗೊಳಿಸಬೇಕಿದೆ. ಇದಕ್ಕಾಗಿ ತಂತ್ರಜ್ಞರು ಹಾಗೂ ವಿದ್ವಾಂಸರು ಒಗ್ಗೂಡಿ ಕೆಲಸ ಮಾಡಬೇಕು. ಕನ್ನಡ ಭಾಷೆ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟಕ್ಕೇರಿಸಲು ಹೊಸ ನೀತಿ ರೂಪಿಸುವುದಾಗಿ ಹೇಳಿದರು.

ಹೊಸ ತಲೆ ಮಾರಿನ ಮಕ್ಕಳಲ್ಲಿ ಭಾಷಾಭಿಮಾನ ಮೂಡಿಸಿ ನಮ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳೋಣ. ಯುವ ತಲೆಮಾರು ಎದ್ದು ನಿಂತರೆ, ಕನ್ನಡ ಮತ್ತು ಕರ್ನಾಟಕವನ್ನು ಮುಂದುವರೆದ ದೇಶಗಳ ಮಟ್ಟಕ್ಕೆ ಬೆಳೆಸಬೇಕಾಗಿದೆ. ಜನರಲ್ಲಿ ಭಾಷೆ ಮತ್ತು ಸಂಸ್ಕೃತಿಯ ಅಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳನ್ನು ತಮ ಸರ್ಕಾರ ಆಯೋಜಿಸುತ್ತಲೆ ಇದೆ. ವಾಣಿಜ್ಯ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಗೊಳಿಸಲಾಗಿದ್ದು, ಹೆಸರಾಯಿತು ಕನ್ನಡ ಉಸಿರಾಯಿತು ಕನ್ನಡ ಅಭಿಯಾನ ನಡೆಸಲಾಗಿದೆ. ವಿಧಾನಸೌಧದ ಬಳಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಭಾಷೆ ನಮ ಹೆಮೆಯ ಪರಂಪರೆ ಮತ್ತು ಸಂಸ್ಕೃತಿ ಅಭಿವ್ಯಕ್ತಿಯ ರೂಪ. ಕನ್ನಡಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಮಹಾ ಕಾವ್ಯ ಮಹಾಭಾರತದಲ್ಲಿ ದಕ್ಷಿಣ ಭಾರತದ ಶಿಲ್ಪ ಕಾವ್ಯಗಳಲ್ಲಿ ಕನ್ನಡ ಉಲ್ಲೇಖ ಕಂಡು ಬರುತ್ತಿದೆ. ಕನ್ನಡ ನಾಡಿನ ಸಾಮ್ರಾಜ್ಯ ಪ್ರಭಾವ ಭಾರತದೆಲ್ಲೆಡೆ ಇದ್ದು, ಬಂಗಾಳದ ಸೇನಾ ರಾಜವಂಶರು ಹಾಗೂ ಬಿಹಾರದ ಯಾದವರು ತಮನ್ನು ತಾವು ಕನ್ನಡದ ವಂಶಸ್ತರು ಎಂದು ಹೇಳಿಕೊಂಡಿದ್ದಾರೆ.
ಏಕೀಕರಣಕ್ಕಾಗಿ ನಡೆದ ಚಳವಳಿಯಲ್ಲಿ ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ನಾಡಿನ ಅಸೀತೆಗಾಗಿ ನಡೆದ ಗೋಕಾಕ್‌ ಚಳುವಳಿಗಾರರನ್ನು ಸರಿಸಿಕೊಳ್ಳುವುದು ಅನಿವಾರ್ಯ ಎಂದರು.

ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೂ ಕನ್ನಡಕ್ಕೆ ತನ್ನದೇ ಆದ ಭಾಷಾ ಸ್ಥಾನಮಾನ ಸಿಕ್ಕಿದೆ. ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕೃತಿ, ಬಹು ಜನಾಂಗಗಳು ಒಟ್ಟು ಗೂಡಿ ಬದಕುವುದನ್ನು ನಮ ಹಿರಿಯರು ಕಂಡುಕೊಂಡಿದ್ದರು. ಮೊದಲಿನಿಂದಲೂ ನಮಲ್ಲಿ ಐಕ್ಯತೆಯೊಂದಿಗೆ ನಾಡನ್ನು ಕಟ್ಟಿ ಬೆಳೆಸಲಾಗಿದೆ. ನಾವು ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದು ಹೇಳಿದರು.


ಶಿಕ್ಷಣ ಬಲರ್ವಧನೆಗೆ 65 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ವಸತಿ ಶಾಲೆಗಳಲ್ಲಿ 8.36 ಲಕ್ಷ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಅಗತ್ಯ ಇರುವ ಕಡೆಗಳಲ್ಲಿ ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ಆರಂಭಿಸುತ್ತಿದ್ದೇವೆ. ರಾಜ್ಯಗಳಲ್ಲಿ ಶತಮಾನ ಪೂರೈಸಿದ 3 ಸಾವಿರ ಸರ್ಕಾರಿ ಶಾಲೆಗಳಿವೆ, ಅವುಗಳ ಜೀರ್ಣೋದ್ಧಾರ ಮಾಡಲಾಗುವುದು. 800 ಸರ್ಕಾರಿ ಶಾಲೆಗಳನ್ನು ಪಬ್ಲಿಕ್‌ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. 180 ಮದ್ರಾಸ್‌‍ಗಳಲ್ಲಿ ಕನ್ನಡ ಕಲಿಸಲಾಗುತ್ತಿದ್ದು, ಅದನ್ನು 1,500 ಮದ್ರಾಸಗಳಿಗೆ ವಿಸ್ತರಿಸಲಾಗುತ್ತಿದೆ. 483 ಕೋಟಿ ರೂ. ವೆಚ್ಚಗಳಲ್ಲಿ 100 ಉರ್ದು ಶಾಲೆಗಳನ್ನು ಕೆಪಿಎಸ್‌‍ ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷರ ನೇಮಕಾತಿ ಹಾಗೂ ತರಬೇತಿಗಳನ್ನು ಕಾಲಕಾಲಕ್ಕೆ ಕೈಗೊಳ್ಳಲಾಗಿದೆ. 800 ಪದವಿ ಪೂರ್ವ ಉಪನ್ಯಾಸಕರು ಸೇರಿ ಹೊಸದಾಗಿ 18 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿವರಿಸಿದರು.


ಪ್ರೊಫೆಸರ್‌ ಸುಖದೇವ್‌ ಭೋರಟ್‌ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗ ತನ್ನ ವರದಿ ನೀಡಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಲಾಗುವುದು. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ತನ್ನದೇ ಆದ ಶಿಕ್ಷಣ ನೀತಿಯನ್ನು ಜಾರಿಗೆ ತರಲಿದೆ ಎಂದರು.ಮೊಬೈಲ್‌ ಬಳಕೆಯಿಂದ ಮಕ್ಕಳಲ್ಲಿನ ಅಪಾಯಗಳ ಬಗ್ಗೆ ಇದೇ ವೇಳೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ತಂತ್ರಜ್ಞಾನ ಬಳಕೆ ಅನುಕೂಲದ ಜೊತೆಗೆ ಅನಾನುಕೂಲಗಳನ್ನು ತಂದೊಡುತ್ತಿದೆ ಎಂದರು.

ರಾಜ್ಯದಲ್ಲಿ ಪಂಚಖಾತ್ರಿ ಯೋಜನೆಗಳ ಮೂಲಕ 1.04 ಕೋಟಿ ರೂಪಾಯಿಗಳನ್ನು ನೇರವಾಗಿ ಜನರಿಗೆ ರವಾನಿಸಲಾಗಿದೆ ಎಂದು ಪ್ರತಿಯೊಂದು ಯೋಜನೆಯ ಬಗ್ಗೆಯೂ ವಿವರಣೆ ನೀಡಿದರು. 2024-25ನೇ ಸಾಲಿನ ವಿದೇಶಿ ಹೂಡಿಕೆಯಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕೆ ಕರ್ನಾಟಕ ಮೊದಲ ಸ್ಥಾನಕ್ಕೇರಿದೆ. 50107 ಕೋಟಿ ವಿದೇಶಿ ನೇರ ಹೂಡಿಕೆ ರಾಜ್ಯದಲ್ಲಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ದೇಶದಲ್ಲೇ ಶೇ.51ರಷ್ಟು ಹೂಡಿಕೆ ಪಾಲನ್ನು ಪಡೆದಿವೆ.

ಹಿಂದಿನ ಸರ್ಕಾರ ವಿದ್ಯುತ್‌ ಉತ್ಪಾದನೆಯನ್ನು ನಿರ್ಲಕ್ಷ್ಯಿಸಿತ್ತು, ನಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ನವೀಕೃತ ಇಂಧನವೇ 24 ಸಾವಿರ ಮೇಗಾವ್ಯಾಟ್‌ ಆಗಿದೆ. ತಲಾ ಆದಾಯದಲ್ಲೂ ಕಳೆದ 10 ವರ್ಷದಲ್ಲಿ ಶೇ.101ರಷ್ಟು ಸಾಧನೆ ಮಾಡಲಾಗಿದೆ. ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ. ಹೈನುಗಾರಿಕೆ ಪ್ರೋತ್ಸಾಹಿಸಲು ಗೋವಿನಿಂದ ಗ್ರಾಹಕರವರೆಗೆ ಎಂಬ ಶೀರ್ಷಿಕೆಯ ನಂದಿನ ಬ್ರಾಂಡ್‌ 175ಕ್ಕೂ ಹೆಚ್ಚಿ ಹಾಲಿ ಉತ್ಪನ್ನಗಳನ್ನು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ 8 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಬಂಡವಾಳ ವೆಚ್ಚ ಹೆಚ್ಚಿಸಲಾಗಿದೆ. ದೇಶದಲ್ಲಿ ಶೇ.7ರಷ್ಟಿದ್ದರೆ, ರಾಜ್ಯದ ನಿರೋದ್ಯೋಗದ ಪ್ರಮಾಣ ಶೇ.2.7ರಷ್ಟಿದೆ. ಶೇ.60ರಷ್ಟು ಜೈವಿಕ ತಂತ್ರಜ್ಞಾನ ಕಂಪೆನಿಗಳು ರಾಜ್ಯದಲ್ಲಿವೆ. ರಫ್ತಿನಲ್ಲಿ ಶೇ।58ರಷ್ಟು ಕೊಡುಗೆ ನೀಡುತ್ತಿದೆ. ಐಟಿ, ಹಣಕಾಸು, ಆತಿಥ್ಯ, ರಿಯಲ್‌ ಎಸ್ಟೇಟ್‌ ನಲ್ಲಿ, ಕೃಷಿಯಲ್ಲಿ ಕಾಫಿ, ಎಣ್ಣೆಕಾಳು, ರಾಗಿ ಸೇರಿ ಅನೇಕ ಉತ್ಪನ್ನಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿಕೊಂಡರು.

ಕನ್ನಡಕ್ಕೆ ಈ ವರ್ಷ ಬಾನುಮುಷ್ತಾಕ್‌ ಮತ್ತು ದೀಪಾಬಸ್ತಿ ಬೂಕರ್‌ ಪ್ರಶಸ್ತಿಯನ್ನು ತಂದುಕೊಡುವ ಮೂಲಕ ಕನ್ನಡವನ್ನು ಜಾಗತಿಕ ವೇದಿಕೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಸರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಾಸಕರಾದ ರಿಜ್ವಾನ್‌ ಅರ್ಷದ್‌, ಗಣೇಶ್‌ ಹುಕ್ಕೇರಿ, ವಿಧಾನ ಪರಿಷತ್‌ ಸದಸ್ಯರಾದ ಹಣಮಂತ ನಿರಾಣಿ, ಬಿ.ಜಿ.ಪಾಟೀಲ್‌, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌, ಡಿಜಿಪಿ ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಮತ್ತಿತರರು ಉಪಸ್ಥಿತರಿದ್ದರು.

- Advertisement -
RELATED ARTICLES

Latest News