Friday, October 31, 2025
Homeರಾಜ್ಯರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದಿಂದ ರೋಸಿಹೋಗಿ ಪಕ್ಷದಿಂದ ದೂರವಾಗುತ್ತಿರುವ ಕಾರ್ಯಕರ್ತರು

ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದಿಂದ ರೋಸಿಹೋಗಿ ಪಕ್ಷದಿಂದ ದೂರವಾಗುತ್ತಿರುವ ಕಾರ್ಯಕರ್ತರು

BJP Workers are distancing themselves from the party,

ಬೆಂಗಳೂರು,ಅ.31- ಎತ್ತು ಏರಿಗೆ, ಕೋಣ ನೀರಿಗೆ ಎಂಬಂತೆ ಪ್ರತಿಪಕ್ಷ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಕೊಂಡೊಯ್ಯುವಲ್ಲಿ ವಿಫಲವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಮನೆಯೊಂದು ಮೂರು ಬಾಗಿಲು ಎಂಬಂತಿರುವ ಬಿಜೆಪಿಯ ಬಣ ರಾಜಕೀಯದಿಂದ ಸ್ವತಃ ಕಾರ್ಯಕರ್ತರೇ ಬೇಸರಗೊಂಡಿದ್ದು, ಪಕ್ಷದ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ. ಇದು ಸಹಜವಾಗಿ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಎಷ್ಟೇ ಅಸಮಾಧಾನ ಆರೋಪ, ಕುಟುಂಬ ಪ್ರೇಮ ಇದ್ದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಅಧ್ಯಕ್ಷರು ಇಲ್ಲವೇ ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಇದ್ದಾಗ ಕಾರ್ಯಕರ್ತರನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು.

- Advertisement -

ಇದರಿಂದ ಬಿಎಸ್‌‍ವೈ ಬಗ್ಗೆ ಎಷ್ಟೇ ಅಸಮಾಧಾನ ಇದ್ದರೂ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಈಗ ಕಾಲ ಬದಲಾದಂತೆ ನಿಷ್ಠಾವಂತರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಬದಲಿಗೆ ತಮ ಹಿಂಬಾಲಕರಿಗೆ ಮಾತ್ರ ಆಯಾಕಟ್ಟಿನ ಜಾಗದಲ್ಲಿ ಮಣೆ ಹಾಕಲಾಗುತ್ತದೆ ಎಂಬ ನೋವು ಕಾರ್ಯಕರ್ತರಲ್ಲಿ ಮನೆ ಮಾಡಿದೆ.

ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ನಾಯಕರು ಎಷ್ಟೇ ಹೇಳಿಕೊಂಡರೂ ವಾಸ್ತವ ಬೇರೆ ಇದೆ ಎಂದು ಪಕ್ಷದವರೇ ಹೇಳುತ್ತಾರೆ. ದೇಶದಲ್ಲಿ ಬಿಜೆಪಿ ಬಲಿಷ್ಠವಾಗಿದ್ದರೂ ಇಲ್ಲಿ ಮಾತ್ರ ಅದಕ್ಕೆ ವಿರುದ್ದವಾದ ಪರಿಸ್ಥಿತಿ ಇದೆ. ಯಡಿಯೂರಪ್ಪನವರಂಥ ಬಲಿಷ್ಠ ನಾಯಕ ಇಲ್ಲದಿರುವುದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಪಕ್ಷದ ಈ ಸ್ಥಿತಿಗೆ ಕಾರಣ ಎಂಬುದು ಬಹುತೇಕರ ಆಳಲು.

ಬಿಜೆಪಿ ಅಧ್ಯಕ್ಷ ಸ್ಥಾನ ಘೋಷಣೆಗೆ ಕ್ಷಣಗಣನೆ ಎಂಬ ಚರ್ಚೆಗಳು ನಡೆಯುತ್ತಿದ್ದರೂ, ಹೈಕಮಾಂಡ್‌ ನಾಯಕರು ಅಧಿಕೃತ ಘೋಷಣೆಗೆ ಮುಂದಾಗುತ್ತಿಲ್ಲ. ರಾಜ್ಯ ಮಟ್ಟದ ಬಣ ರಾಜಕೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೈಕಮಾಂಡ್‌ ನಾಯಕರ ಅಂಗಳಕ್ಕೆ ತಲುಪುತ್ತಿರುವ ಆರೋಪಗಳ ಸುರಿಮಳೆ ಇದಕ್ಕೆ ಕಾರಣವಾಗುತ್ತಿದೆ.

ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆಯ ಬಳಿಕ ಎಲ್ಲವೂ ಸರಿಹೋಗಲಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಅಧ್ಯಕ್ಷರ ಬಣ ಇತ್ತು. ಆದರೆ ಅಂದುಕೊಂಡಂತೆ ಆಗುತ್ತಿಲ್ಲ. ಯತಾಳ್‌ ಬಣದ ಅತೃಪ್ತರು ತಮ ತಗಾದೆ ಎತ್ತುತ್ತಲೇ ಇದ್ದಾರೆ. ಪ್ರತ್ಯೇಕ ಸಭೆಗಳ ಮೂಲಕ ಆಂತರಿಕ ಬಂಡಾಯದ ಸುಳಿವು ನೀಡುತ್ತಾ ಬಂದಿದ್ದಾರೆ.

ಬಿಜೆಪಿ ರಾಜ್ಯಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಇದ್ದಾರೆ. ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಆದರೆ ಬಿಜೆಪಿ ಅಧ್ಯಕ್ಷರ ನೇಮಕ ಪ್ರಕ್ರಿಯೆಯಂತೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಸಾಕಷ್ಟು ತಡವಾಗುತ್ತಿದೆ. ಅಧಿಕೃತವಾಗಿ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಏಕೆ ಘೋಷಣೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಬಿಜೆಪಿಯಲ್ಲಿರುವ ಆಂತರಿಕ ಗೊಂದಲಕ್ಕೆ ತಡೆ ಬಿದ್ದಿಲ್ಲ. ಒಂದು ಕಡೆಯಲ್ಲಿ ಅತೃಪ್ತ ಬಣ ಹಾಗೂ ವಿಜಯೇಂದ್ರ ಬಣದ ನಡುವೆ ಸಮಸ್ಯೆ ಬಿಗಡಾಯಿಸುತ್ತಿದೆ. ಮತ್ತೊಂದು ಕಡೆ ವಿಪಕ್ಷ ನಾಯಕ ಆರ್‌.ಅಶೋಕ್‌ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ನಡುವೆ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ಎಲ್ಲಾ ಗೊಂದಲಗಳ ನೇರ ಪರಿಣಾಮ ಬಿಜೆಪಿ ಪಕ್ಷದ ಚಟುವಟಿಕೆಗಳ ಮೇಲಾಗುತ್ತಿದೆ.
ರಾಜ್ಯದಲ್ಲಿ ಬಿಜೆಪಿ 2023 ಚುನಾವಣೆಯ ಹಿನ್ನಡೆ ಅನುಭವಿಸಿದ ನಂತರದಲ್ಲಿ ಎದ್ದೇಳಲಿಲ್ಲ. ವಿಜಯೇಂದ್ರರ ಕೈಗೆ ಅಧಿಕಾರ ಹಸ್ತಾಂತರ ಮಾಡಿದ್ದರೂ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವಲ್ಲೂ ಬಿಜೆಪಿ ಹಿನ್ನಡೆ ಅನುಭವಿಸುತ್ತಿದೆ.

ಸದ್ಯ ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಕೇಳಿ ಬರುತ್ತಿರುವ ಬಹುದೊಡ್ಡ ಆರೋಪವಾಗಿದೆ. ರಾಜ್ಯ ಬಿಜೆಪಿ ಆಡಳಿತಾರೂಢ ಪಕ್ಷದ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ ಎಂಬ ಆರೋಪವಿದೆ. ಅತೃಪ್ತ ಬಣ ಈ ಆರೋಪವನ್ನು ನಿರಂತರವಾಗಿ ಮಾಡುತ್ತಿದೆ. ಈ ಹಿಂದೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಈ ಆರೋಪ ಮಾಡುತ್ತಿದ್ದರು. ಇದೀಗ ಅತೃಪ್ತ ಬಣದ ಇತರರಿಂದಲೂ ಇದೇ ಆರೋಪ ಕೇಳಿಬರುತ್ತಿದೆ.

ಸದ್ಯ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಕೆಲವರು ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಉಸ್ತುವಾರಿ ಡಾ.ರಾಧಮೋಹನ್‌ ಅವರು ಹೇಳಿಕೆ ನೀಡಿದ್ದರು. ಆದರೆ ಸದ್ಯಕ್ಕೆ ಯಾವುದೇ ಕ್ರಮಗಳು ಜರುಗಲಿಲ್ಲ. ಸಹಜವಾಗಿ ಇವೆಲ್ಲವೂ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸದ್ಯ ಬಿಜೆಪಿಯ ಭಿನ್ನಮತಕ್ಕೆ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ. ರಾಜ್ಯ ಸರ್ಕಾರ 2 ವರ್ಷವನ್ನು ಈಗಾಗಲೇ ಪೂರೈಸಿದೆ. ಅದರೆ ವಿರೋಧಪಕ್ಷವಾಗಿ ಬಿಜೆಪಿ ವಿಫಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಯಾವ ರೀತಿಯಲ್ಲಿ ಹೋರಾಟ ನಡೆಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್‌ ನಡೆ ಏನು ಎಂಬುವುದು ಕಾದುನೋಡಬೇಕು.

- Advertisement -
RELATED ARTICLES

Latest News