ಬೆಂಗಳೂರು,ಸೆ.20- ಹೊಸಹೊಸ ಜಾತಿಗಳನ್ನು ಸೃಷ್ಟಿಸಿ ಗೊಂದಲ ಮೂಡಿಸಿರುವುದು ಸರಿಯಲ್ಲ ಎಂದು ಪಟ್ಟನಾಯಕನಹಳ್ಳಿಯ ಸ್ಫಟಿಕ ಪುರಿ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೊಸ ಜಾತಿಯ ಹೆಸರುಗಳು ಪ್ರಕಟವಾಗಿವೆ. ಅಲ್ಲದೆ ಒಕ್ಕಲಿಗ ಸಮುದಾಯದ ಜೊತೆ ಧರ್ಮದ ಹೆಸರು ತಳುಕು ಹಾಕಲಾಗಿದೆ. ಇದಕ್ಕೆ ನಮ ತೀವ್ರ ಆಕ್ಷೇಪವಿದೆ ಎಂದು ಹೇಳಿದರು.
ಈ ರೀತಿ ಯಾವುದೇ ಜಾತಿ, ಧರ್ಮ ಪ್ರಕಟವಾಗಬೇಕಾದರೆ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಆಯೋಗದಲ್ಲಿ ಚರ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅದನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಕು. ಈ ರೀತಿಯ ಯಾವ ಪ್ರಕ್ರಿಯೆಗಳೂ ನಡೆದಿಲ್ಲ ಎಂದರು.
ಜಾತಿಗಣತಿಗೆ ಇದು ಸಕಾಲವಲ್ಲ. ಕೃಷಿ ಚಟುವಟಿಕೆಗಳಲ್ಲಿ ಸಮುದಾಯದವರು ತೊಡಗಿದ್ದಾರೆ. ಪಿತೃಪಕ್ಷ, ನವರಾತ್ರಿ, ದಸರಾ ಸೇರಿದಂತೆ ಸಾಲುಸಾಲು ಹಬ್ಬಗಳಿವೆ. ಆಯೋಗ ಅವಸರವಾಗಿ ಗಣತಿಗೆ ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಾವಿರಾರು ಅಹವಾಲು, ಆಕ್ಷೇಪಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದ್ದರೂ ಅವುಗಳಿಗೆ ಸಮಂಜಸ ಉತ್ತರ ನೀಡದೇ ಏಕ ಪಕ್ಷೀಯವಾಗಿ ತೆಗೆದುಕೊಂಡು ತರಾತುರಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯವೂ ಕೂಡ ಸಮೀಕ್ಷೆಯನ್ನು ಮುಂದೂಡಬೇಕು ಮತ್ತು ಹೆಚ್ಚು ಸಮಯಾವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುವೆ ಎಂದರು.

ನಮ ಜನಾಂಗದವರು ಮುಗ್ಧರು, ಅನಕ್ಷರಸ್ಥರಿದ್ದು, ಅವರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಹೀಗಾಗಿ ಎಲ್ಲರ ಅಭಿಪ್ರಾಯವನ್ನು ಆಯೋಗ ಗೌರವಿಸಬೇಕು ಎಂದು ಹೇಳಿದರು.ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಸಮೀಕ್ಷೆ ಸಂದರ್ಭದಲ್ಲಿ ಜಾತಿ ಕಾಲಂ 9 ರಲ್ಲಿ ಒಕ್ಕಲಿಗ ಎಂದೇ ಬರೆಸಬೇಕು. ಅಗತ್ಯವಿದ್ದರೆ ಮಾತ್ರ ಉಪಜಾತಿ ನಮೂದಿಸಬೇಕು. ಸಮೀಕ್ಷೆ ನಡೆಸಲು ಈಗ ಸಕಾಲವಲ್ಲ. ಹೀಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಲ್ಲಿ ನಮ ಮನವಿ ಏನೆಂದರೆ 15 ದಿನ ಸಮಯ ಸಾಲುವುದಿಲ್ಲ. ಕನಿಷ್ಠ ಪಕ್ಷ 45 ದಿನವಾದರೂ ಗಣತಿಗೆ ಕಾಲಾವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ನ್ಯಾಯಯುತವಾಗಿ ಸಮೀಕ್ಷೆ ನಡೆಯಬೇಕು :
ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಮಾತನಾಡಿ, ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಜಾತಿಗಣತಿಯ ಬಗ್ಗೆ ಸಲಹೆ ಕೊಟ್ಟಿದ್ದಾರೆ. ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ನಮ ವಿರೋಧವಿಲ್ಲ. ಆದರೆ ನ್ಯಾಯಯುತವಾಗಿ ಸಮೀಕ್ಷೆ ನಡೆಯಬೇಕು. ಹಿಂದುಳಿದ ವರ್ಗಗಳ ಆಯೋಗದಿಂದ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ನಮ ಸಮುದಾಯಕ್ಕಷ್ಟೇ ಅಲ್ಲ ಯಾವುದೇ ಸಮುದಾಯಕ್ಕೂ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು.
ಸಮೀಕ್ಷೆ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ. ಈಗ ಸಮೀಕ್ಷೆಯನ್ನು ಮುಂದೂಡಿ ಎಲ್ಲದಕ್ಕೂ ಕಾಲಾವಕಾಶ ಸಿಗಲಿ. ಕೇವಲ 15 ದಿನದಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು. ಅಗತ್ಯವಿದ್ದರಷ್ಟೇ ಉಪಪಂಗಡಗಳನ್ನು ಬರೆಸಬೇಕು. ನಮ ಜನಾಂಗದ ಜೊತೆ ಕೆಲವು ಜಾತಿಗಳನ್ನು ಸೇರ್ಪಡೆ ಮಾಡಿದ್ದು, ಅವುಗಳನ್ನು ತೆಗೆಯಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲಾ, ತಾಲ್ಲೂಕು, ಪಟ್ಟಣ, ಗ್ರಾಮಗಳಿಗೆ ಒಕ್ಕಲಿಗ ಸಮುದಾಯದವರು ಭೇಟಿ ನೀಡಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಅಲ್ಲದೆ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುತ್ತೇವೆ. ಈಗಾಗಲೇ ಸಂಘದ ನೌಕರರನ್ನು ಜಾಗೃತಿಗೊಳಿಸಲು ನಿಯೋಜಿಸಿದ್ದೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಖಚಾಂಚಿ ನೆಲ್ಲಿಗೆರೆ ಬಾಲು, ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ನಾಗರಾಜ್, ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ ಮತ್ತಿತರರು ಉಪಸ್ಥಿತರಿದ್ದರು.