ಬೆಂಗಳೂರು, ಜು.17-ಖಾಸಗಿ ಉದ್ಯಮ ಗಳಲ್ಲಿ ಕೂಡ ಕನ್ನಡಿಗರಿಗೆ ಕೆಲವು ಶ್ರೇಣಿಯ ಹುದ್ದೆಗಳನ್ನು ನೂರಕ್ಕೆ ನೂರರಷ್ಟು ಮೀಸಲಿಡಲಾಗುವುದು ಹಾಗೂ ಉದ್ಯಮಗಳ ಹಿತಾಸಕ್ತಿಗಳನ್ನು ಸಹ ಕಾಪಾಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಸರ್ಕಾರವು ವಿಧೇಯಕಕ್ಕೆ ಅನುಮೋದನೆ ನೀಡಿದೆ. ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ-ಬಿಟಿ, ಕಾನೂನು ಮತ್ತು ಕಾರ್ಮಿಕ ಸಚಿವರುಗಳ ಜೊತೆ ಈ ವಿಚಾರದ ಬಗ್ಗೆ ಚರ್ಚಿಸಿ, ಗೊಂದಲಗಳಿಗೆ ತೆರೆ ಎಳೆಯಲಾಗುವುದು ಎಂದರು.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ತಯಾರಿಕಾ ವಲಯ ಮತ್ತು ಕೈಗಾರಿಕಾ ಕ್ರಾಂತಿಯ ಉಜ್ವಲ ಅವಕಾಶಗಳನ್ನು ನಾವು ಕಳೆದುಕೊಳ್ಳುವಂತಿಲ್ಲ ಎಂದು ಅವರು ಪ್ರತಿಪಾದಿಸಿದರು.
ಸ್ಥಳೀಯರ ಹಿತಾಸಕ್ತಿಗಳನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಹಾಗೆಯೇ ಉದ್ಯಮ ವಲಯದವರ ಹಿತಾಸಕ್ತಿಗೂ ಧಕ್ಕೆಯಾಗದಂತೆ ನಿಗಾ ವಹಿಸಲಾಗುವುದು. ಈ ಕುರಿತು ಸಂಬಂಧಪಟ್ಟ ಎಲ್ಲರ ಜೊತೆಗೂ ಮಾತುಕತೆ ನಡೆಸಲಾಗುವುದು. ಈ ವಿಷಯದಲ್ಲಿ ಯಾವುದೇ ಆತಂಕ ಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕವು ಪುರೋಗಾಮಿ ರಾಜ್ಯವಾಗಿದೆ. ಗ್ಲೋಬಲ್ ಚೈನಾ ಒನ್ ನೀತಿಯಿಂದ ಒದಗಿ ಬಂದಿರುವ ಸದವಕಾಶವನ್ನು ನಾವು ಕಳೆದುಕೊಳ್ಳುವಂತಿಲ್ಲ. ಇದು ಶತಮಾನಕ್ಕೊಮ್ಮೆ ಒದಗಿ ಬರುವ ಅವಕಾಶ ಎಂದು ಪಾಟೀಲ ಬಣ್ಣಿಸಿದ್ದಾರೆ.
ಸಂಪುಟದಲ್ಲಿ ಒಪ್ಪಿಗೆ, ಸದನದಲ್ಲಿ ನಾಳೆ ಮಂಡನೆ :
ಬೆಂಗಳೂರು,ಜು.17- ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸಂಬಂಧಪಟ್ಟಂತಹ ಮಸೂದೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗರ ಪರವಾದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಮೊದಲು ವಾಣಿಜ್ಯ ಮಳಿಗೆಗಳು ಹಾಗೂ ಸಂಕೀರ್ಣಗಳ ಮುಂದೆ ಕನ್ನಡ ನಾಮಫಲಕ ಹಾಕುವ ಕುರಿತಂತೆ ನಿರ್ಣಯ ಕೈಗೊಳ್ಳಲಾಯಿತು.
ಭಾಷಾ ಬಳಕೆ, ಸರ್ಕಾರಿ ಕಡತದಲ್ಲಿ ಕನ್ನಡದ ಬಳಕೆ, ಧ್ವಜ ಬಳಕೆ ಕುರಿತಂತೆ ನಿರ್ಣಯ ಕೈಗೊಂಡಿದೆ. ಅದೇ ರೀತಿ ಉದ್ಯೋಗ ಸೃಷ್ಟಿಯಾಗುವ ಕಡೆ ಕನ್ನಡಿಗರಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗಗಳನ್ನು ಮೀಸಲಿಡುವ ಕುರಿತಂತೆಯೂ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಬಯೋಕಾನ್ ಹಾಗೂ ಇನ್ಫೋಸಿಸ್‌ನಂತಹ ಸಂಸ್ಥೆಗಳ ಮುಖ್ಯಸ್ಥರು ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಂತ್ರಜ್ಞಾನ ಹಾಗೂ ತಾಂತ್ರಿಕತೆ ಆಧರಿತ ಉದ್ಯೋಗಗಳ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ. ವಿರೋಧ ಮಾಡುತ್ತಿರುವ ಬಹಳಷ್ಟು ಸಂಸ್ಥೆಗಳು ರಾಜ್ಯದಿಂದಲೇ ಬೆಳೆದಿವೆ. ಅಗತ್ಯ ಸಂದರ್ಭಗಳಲ್ಲಿ ಅವರಿಗೆ ಮಸೂದೆಯಿಂದ ವಿನಾಯಿತಿ ನೀಡಲಾಗುವುದು. ಆದರೆ ಇದರ ಕುರಿತಂತೆ ಸರ್ಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ ಎಂದು ಹೇಳಿದರು.
ಅಧಿವೇಶನ ನಡೆಯುತ್ತಿರುವುದರಿಂದಾಗಿ ಯಾವ ಪ್ರಮಾಣದ ಮೀಸಲಾತಿ ಎಂದು ಸದ್ಯಕ್ಕೆ ತಾವು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.ಜಿ.ಟಿ.ಮಾಲ್‌ನಲ್ಲಿ ಪಂಚೆ ಧರಿಸಿದ್ದಾರೆ ಎಂಬ ಕಾರಣಕ್ಕೆ ರೈತರಿಗೆ ಪ್ರವೇಶ ನೀಡದೇ ಇರುವ ಕುರಿತು ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಈ ಕುರಿತಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಸೂಚಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ತೆರಿಗೆ ಹೆಚ್ಚಳ, ಪೆರಿಫೆರಲ್ ರಿಂಗ್ ರಸ್ತೆ, ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಹಲವಾರು ವಿಚಾರಗಳನ್ನು ಇಂದು ಮುಖ್ಯಮಂತ್ರಿ ಹಾಗೂ ಬೆಂಗಳೂರಿನ ಸಚಿವರುಗಳ ಜೊತೆ ಚರ್ಚೆ ನಡೆಸಲಾಗುವುದು. ಬ್ರ್ಯಾಂಡ್ ಬೆಂಗಳೂರಿನಲ್ಲಿ ಹಲವು ಸಲಹೆಗಳು ಕೇಳಿಬಂದಿವೆ. ಅವುಗಳ ಬಗ್ಗೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳುವ ಬದಲಾಗಿ ಎಲ್ಲರ ಜೊತೆ ಚರ್ಚಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳುವುದಾಗಿ ತಿಳಿಸಿದರು.
ಕಸ ವಿಲೇವಾರಿಯಲ್ಲಿ 15,000 ಕೋಟಿ ರೂ.ಗಳನ್ನು ಲೂಟಿ ಮಾಡುವ ತಯಾರಿ ನಡೆದಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಇದು ಸತ್ಯಕ್ಕೆ ದೂರವಾದ ವಿಚಾರ. ಕಸ ವಿಲೇವಾರಿಗೆ ವೆಚ್ಚ ಮಾಡುತ್ತಿರುವುದೇ 450 ಕೋಟಿ ರೂ., 15,000 ಕೋಟಿ ರೂ.ಗಳನ್ನು ಎಲ್ಲಿಂದ ತರಲು ಸಾಧ್ಯ ಎಂದು ಪ್ರಶ್ನಿಸಿದರು.
ತ್ಯಾಜ್ಯ ವಿಲೇವಾರಿಯಲ್ಲಿ ಟೆಂಡರ್ ನಡೆಸದೆ ಮನಸೋ ಇಚ್ಛೆ ಬಿಲ್‌ಗಳನ್ನು ಮಾಡಿ ದಂಧೆ ಮಾಡಲಾಗುತ್ತಿದೆ. ನಾವು ಅದಕ್ಕೆ ಟೆಂಡರ್ ಕರೆದು ಕ್ರಮಬದ್ಧಗೊಳಿಸಲು ಮುಂದಾಗಿದ್ದೇವೆ. ಇದರಲ್ಲಿ ಯಾವುದೇ ಅವ್ಯವಹಾರಗಳಿಲ್ಲ. ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ನ್ಯಾಯಾಲಯದಲ್ಲಿ ತಗಾದೆ ಇಲ್ಲಿದೆ. ಯಾವುದೇ ಪ್ರಕ್ರಿಯೆಗಳು ಇನ್ನೂ ಮುಗಿಯದೇ ಇದ್ದರೂ ಅನಗತ್ಯವಾಗಿ ಟೀಕೆಗಳನ್ನು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದ ಮಂಡೂರಿನಲ್ಲಿ ಈಗಾಗಲೇ ಕಸ ಹಾಕದಂತೆ ವಿರೋಧ ವ್ಯಕ್ತವಾಗಿದ್ದು, ಮೂರು ದಿನಗಳಿಂದ ಸ್ಥಗಿತಗೊಳಿಸಲಾಗಿದೆ.
ಬದಲಿ ಜಾಗವನ್ನು ಹುಡುಕಾಡಲಾಗುತ್ತಿದೆ. ನೈಸ್ ರಸ್ತೆಯಲ್ಲಿ ಒಂದು ಸ್ಥಳ ಗುರುತಿಸಲಾಗಿದ್ದು, ಬೇರೆ ಕಡೆ 2-3 ಜಾಗಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು.ರಾಜ್ಯದಲ್ಲಿ ಕೆಲವು ಭಾಗದಲ್ಲಿ ಉತ್ತಮ್ಮ ಮಳೆಯಾಗುತ್ತಿದೆ. ಬಹುಶಃ ತಮಿಳುನಾಡಿನೊಂದಿಗಿನ ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಈ ಸಂದರ್ಭದಲ್ಲಿ ಇತ್ಯರ್ಥವಾಗುವ ನಿರೀಕ್ಷೆಗಳಿವೆ ಎಂದರು.
ಉದ್ಯಮಿಗಳ ಅಪಸ್ವರ :
ಬೆಂಗಳೂರು,ಜು.17- ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖ್ಯಾತ ಉದ್ಯಮಿಳಾದ ಕಿರಣ್ ಮಜುಂದಾರ್ ಶಾ ಮತ್ತು ಮೋಹನ್‌ದಾಸ್ ಪೈ ಅವರಂತಹ ಪ್ರಮುಖರು ರಾಜ್ಯ ಸರ್ಕಾರದ ಈ ನಿರ್ಧಾರ ಫ್ಯಾಸಿಸ್ಟ್ ಮತ್ತು ರಿಗ್ರೆಸಿವ್ ಎಂದು ಬಣ್ಣಿಸಿದ್ದಾರೆ.
ಮಾತ್ರವಲ್ಲ ಅಂತಹ ಮಸೂದೆಗಳು ಹೂಡಿಕೆದಾರರನ್ನು ಕರ್ನಾಟಕದಿಂದ ದೂರವಿಡುವಂತೆ ಮಾಡುತ್ತದೆ ಮತ್ತು ರಾಜ್ಯದ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಐಟಿ ಬಿಟಿ ಸಂಸ್ಥೆಗಳಿಗೆ ನುರಿತ ಪ್ರತಿಭೆಗಳ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಂತೆ ಸೂಚಿಸುವುದು ಟೆಕ್ ಸಂಸ್ಥೆಗಳಿಗೆ ನಷ್ಟವಾಗಲಿದೆ ಹೀಗಾಗಿ ನುರಿತರ ನೇಮಕಕ್ಕೆ ಯಾವುದೇ ಅಡೆ ತಡೆ ಇರಬಾರದು ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಎಕ್ಸ್ ಸ ಮಾಡಿದ್ದಾರೆ.
ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿವಿ ಮೋಹನ್‌ದಾಸ್ ಪೈ ಕೂಡ ಮಸೂದೆಯನ್ನು ಬದಲಾವಣೆ ಮಾಡಬೇಕು ಮತ್ತು ಅದನ್ನು ಫ್ಯಾಸಿಸ್ಟ್ ಬಿಲ್ ಎಂದು ಕರೆದಿದ್ದಾರೆ. ಇದು ತಾರತಮ್ಯ, ಪ್ರತಿಗಾಮಿ ಮತ್ತು ಸಂವಿಧಾನದ ವಿರುದ್ಧವಾಗಿದೆ ಎಂದಿದ್ದಾರೆ.