ಬೆಂಗಳೂರು, ಏ.6- ಕಳೆದ ಆರ್ಥಿಕ ಸಾಲಿನಲ್ಲಿ ರಾಜ್ಯದ ವಾಣಿಜ್ಯ ತೆರಿಗೆಗಳ ಸಂಗ್ರಹ 1,02,585.52 ಕೋಟಿ ರೂ. ಸಂಗ್ರಹವಾಗಿದೆ. ಇದರಿಂದ 2023-24ನೇ ಸಾಲಿನ ಆರ್ಥಿಕ ವರ್ಷಕ್ಕಿಂತ 8,822.25 ಕೋಟಿ ರೂ. ಹೆಚ್ಚು ಸಂಗ್ರಹವಾದಂತಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ ಮಾಹಿತಿ ಪ್ರಕಾರ, ಮಾರ್ಚ್ ತಿಂಗಳಿನಲ್ಲಿ 7,111.97 ಕೋಟಿ ರೂ. ಸರಕು ಸೇವಾ ತೆರಿಗೆ, 2,232.57 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 107.34 ಕೋಟಿ ರೂ. ಸೇರಿದಂತೆ ಒಟ್ಟು 9,451.88 ಕೋಟಿ ರೂ. ಸಂಗ್ರಹಿಸಲಾಗಿದೆ. ಇದು ಫೆಬ್ರವರಿ ತಿಂಗಳಿಗಿಂತ ಸುಮಾರು 10 ಸಾವಿರ ಕೋಟಿ ರೂ. ಹೆಚ್ಚು ಸಂಗ್ರಹವಾದಂತಾಗಿದೆ.
2023-24ನೇ ಆರ್ಥಿಕ ಸಾಲಿನಲ್ಲಿ ಒಟ್ಟು 94,363.27 ಕೋಟಿ ರೂ. ಮಾತ್ರ ಸಂಗ್ರಹವಾಗಿತ್ತು. 2024-25ನೇ ಸಾಲಿನಲ್ಲಿ 77,321.80 ಕೋಟಿ ರೂ. ಸರಕು ಸೇವಾ ತೆರಿಗೆ, 23,904.33 ಕೋಟಿ ರೂ. ಮಾರಾಟ ತೆರಿಗೆ ಹಾಗೂ 1351.39 ಕೋಟಿ ರೂ. ವೃತ್ತಿ ತೆರಿಗೆ ಸೇರಿದಂತೆ ಒಟ್ಟು 1,02,585.52 ಕೋಟಿ ರೂ. ಸಂಗ್ರಹಿಸಲಾಗಿದೆ.
ಕಳೆದ 2023-24ನೇ ಸಾಲಿಗೆ ಹೋಲಿಸಿದರೆ 2024-25ನೇ ಆರ್ಥಿಕ ಸಾಲಿನಲ್ಲಿ ಪ್ರತೀ ತಿಂಗಳು ವಾಣಿಜ್ಯ ತೆರಿಗೆಗಳ ಸಂಗ್ರಹದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. ಏಪ್ರಿಲ್‌ನಲ್ಲಿ 9,662.80 ಕೋಟಿ ರೂ.. ಮೇನಲ್ಲಿ 7,453.94 ಕೋಟಿ ರೂ., ಜೂನ್‌ನಲ್ಲಿ 7,780.28 ಕೋಟಿ ರೂ., ಜುಲೈನಲ್ಲಿ 7,985.42 ಕೋಟಿ ರೂ., ಆಗಸ್ ನಲ್ಲಿ 7,988.34 ಕೋಟಿ ರೂ., ಸೆಪ್ಟೆಂಬರ್‌ನಲ್ಲಿ 8443.87 ಕೋಟಿ ರೂ., ಅಕ್ಟೋಬರ್ನಲ್ಲಿ 9,111.42 ಕೋಟಿ ರೂ., ನವೆಂಬರ್‌ನಲ್ಲಿ 9,146.48 ಕೋಟಿ ರೂ.. ಡಿಸೆಂಬರ್‌ನಲ್ಲಿ 8185.64 ಕೋಟಿ ರೂ., ಜನವರಿಯಲ್ಲಿ 8865.81 ಕೋಟಿ ರೂ., ಫೆಬ್ರವರಿಯಲ್ಲಿ 8499.57 ಕೋಟಿ ರೂ., ಮಾರ್ಚ್‌ನಲ್ಲಿ 9451.88 ಕೋಟಿ ರೂ., ಸಂಗ್ರಹವಾಗಿದೆ. ಏಪ್ರಿಲ್‌ನಲ್ಲಿ ಅತೀ ಹೆಚ್ಚು ತೆರಿಗೆ ಸಂಗ್ರಹವಾಗಿದ್ದು, ಆನಂತರ ಮಾರ್ಚ್‌ನಲ್ಲಿ 2ನೇ ಅತೀ ಹೆಚ್ಚು ತೆರಿಗೆ ಸಂಗ್ರಹವಾಗಿರುವುದು ಕಂಡುಬಂದಿದೆ.