Tuesday, July 2, 2024
Homeರಾಜ್ಯರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 118 ಸಾಕ್ಷ್ಯಗಳ ಸಂಗ್ರಹ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 118 ಸಾಕ್ಷ್ಯಗಳ ಸಂಗ್ರಹ!

ಬೆಂಗಳೂರು, ಜೂ.19- ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರು ಕುಗೊಳಿಸಿ ಇಂಚಿಂಚೂ ಬಿಡದೆ ಸಾಕ್ಷಿಗಳನ್ನು ಸಂಗ್ರಹಿಸುತ್ತಿರುವ ವಿಜಯನಗರ ಉಪವಿಭಾಗದ ಪೊಲೀಸರು ಇದು ವರೆಗೂ ಬರೋಬ್ಬರಿ 118 ವಸ್ತುಗಳನ್ನು ವಿವಿಧ ಸ್ಥಳಗಳಿಂದ ಜಪ್ತಿ ಮಾಡಿದ್ದಾರೆ.

ಜೂ. 8ರಂದು ರೇಣುಕಾಸ್ವಾಮಿಯನ್ನು ಚಿತ್ರ ದುರ್ಗದಿಂದ ಕರೆತಂದ ವಾಹನ ಸೇರಿದಂತೆ ಅವರು ಕೊಲೆಯಾದ ಪಟ್ಟಣಗೆರೆ ಶೆಡ್ನಲ್ಲಿ ದೊರೆತ ಪ್ರತಿಯೊಂದು ವಸ್ತುವನ್ನು ಸಹ ಸೀಜ್ ಮಾಡಲಾಗಿದೆ. ಬೆಂಗಳೂರು, ಮೈಸೂರು, ಚಿತ್ರದುರ್ಗದಲ್ಲಿ ಸ್ಥಳ ಮಹಜರು ಮಾಡಿ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ಕೃತ್ಯಕ್ಕೆ ಬಳಸಿದಂತಹ ವಸ್ತುಗಳು, ಆರೋಪಿಗಳ ಬಟ್ಟೆಗಳು, ಶೂ, ಚಪ್ಪಲಿ ಹಾಗೂ ಓಡಾಡಲು ಬಳಸಿದಂತಹ ವಾಹನಗಳು ಸೇರಿದಂತೆ ಹೀಗೆ ಹಲವು ಸಾಕ್ಷ್ಯಗಳನ್ನು ಕಲೆಹಾಕಿ ವಶಪಡಿಸಿಕೊಳ್ಳಲಾಗಿದೆ.

ಈಗಾಗಲೇ ನಟ ದರ್ಶನ್ ಮನೆ, ಪವಿತ್ರಗೌಡ ಮನೆ ಹಾಗೂ ದರ್ಶನ್ಗೆ ಸೇರಿದ ಫಾರ್ಮ್ಹೌಸ್ ಹಾಗೂ ಕೃತ್ಯಕ್ಕೂ ಮುನ್ನ ಪಾರ್ಟಿ ಮಾಡಿದಂತಹ ಹೊಟೇಲ್ ಮತ್ತು ದರ್ಶನ್ ಬಂಧನದ ವೇಳೆ ತಂಗಿದ್ದ ಹೊಟೇಲ್ಗಳಲ್ಲೂ ಸಹ ಸ್ಥಳ ಮಹಜರು ನಡೆಸಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.ಈ ಪ್ರಕರಣದ ಆರೋಪಿಗಳನ್ನು ಅಷ್ಟೇ ಅಲ್ಲದೆ ಅವರಿಗೆ ಸಂಬಂಧಿಸಿದವರನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಈ ಪ್ರಕರಣದಲ್ಲಿ ಪ್ರಮುಖ ಹಾಗೂ ಮಹತ್ತರವಾದ ಸಾಕ್ಷ್ಯವಾದ ರೇಣುಕಾಸ್ವಾಮಿ ಅವರ ಮೊಬೈಲ್ ಹಾಗೂ ಸಿಮ್ ಇದುವರೆಗೂ ಪತ್ತೆಯಾಗಿಲ್ಲ. ಈ ಮೊಬೈಲ್ ಕೊಲೆ ಪ್ರಕರಣಕ್ಕೆ ಅತ್ಯಂತ ಮಹತ್ವದ್ದಾಗಿದೆ. ಸಾಕ್ಷಿ ನಾಶ ಪಡಿಸಲೆಂದೇ ರೇಣುಕಾಸ್ವಾಮಿ ಮೃತದೇಹ ಎಸೆದ ರಾಜಕಾಲುವೆಗೆ ಆತನ ಮೊಬೈಲ್ನ್ನು ಸಹ ಆರೋಪಿ ರಘು ಎಸೆದಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದ್ದು, ರಾಜಕಾಲುವೆಯಲ್ಲಿ ಹುಡುಕಾಟ ನಡೆಸಿದರಾದರೂ ಇದುವರೆಗೂ ಪತ್ತೆಯಾಗಿಲ್ಲ.

ರೇಣುಕಾಸ್ವಾಮಿ ಮೊಬೈಲ್ ಅಲ್ಲದೆ ಆರೋಪಿ ರಘು ಮೊಬೈಲ್ನ್ನು ಸಹ ಆರೋಪಿ ಪ್ರದೋಶ್ ಅದೇ ರಾಜಕಾಲುವೆಗೆ ಎಸೆದಿದ್ದು, ಈ ಎರಡೂ ಮೊಬೈಲ್ ಫೋನ್ಗಳು ಪತ್ತೆಯಾದರೆ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.

ಅಗ್ನಿಶಾಮಕದ ನೆರವು:
ಮೊಬೈಲ್ ಪತ್ತೆಗಾಗಿ ಇದೀಗ ಅಗ್ನಿಶಾಮಕ ಇಲಾಖೆಯ ನೆರವನ್ನು ಪಡೆದು ಮೊಬೈಲ್ಗಾಗಿ ಪೊಲೀಸರು ಹುಡುಕಾಟ ನಡೆಸಲಿದ್ದಾರೆ.ರೇಣುಕಾಸ್ವಾಮಿ ಮೊಬೈಲ್ನಲ್ಲಿ ಪವಿತ್ರಾಗೌಡಗೆ ಕಳುಹಿಸಿದ ಚಿತ್ರಗಳು, ಸಂದೇಶ ಹಾಗೂ ಅಪಹರಣದ ದಿನ ಆತನಿಗೆ ಬಂದ ಮೊಬೈಲ್ ಕರೆಗಳು ಸಂಗ್ರಹವಾಗಿವೆ. ಅಲ್ಲದೆ, ರೇಣುಕಾಸ್ವಾಮಿ ಮೇಲೆ ಅಂದು ನಡೆದ ಹಲ್ಲೆಯನ್ನು ರಘು ಮೊಬೈಲ್ನಲ್ಲಿ ವಿಡಿಯೋ ವಿಡಿಯೋ ಮಾಡಿಕೊಂಡಿದ್ದ.

ಹಾಗಾಗಿ ಆತನ ಮೊಬೈಲ್ನ್ನು ಪ್ರದೋಶ್ ರಾಜಕಾಲುವೆಗೆ ಎಸೆದಿದ್ದ. ಈತನ ಮೊಬೈಲ್ ದೊರೆತರೆ ಈ ಪ್ರಕರಣ ದೊಡ್ಡ ತಿರುವನ್ನೇ ಪಡೆದುಕೊಳ್ಳಲಿದ್ದು, ಆರೋಪಿಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ.ಒಟ್ಟಾರೆ ರೇಣುಕಾಸ್ವಾಮಿ ಕೊಲೆಗೆ ಸಂಗ್ರಹಿಸಿದ ಪ್ರತಿ ವಸ್ತುವನ್ನು ಸಹ ಸಾಕ್ಷ್ಯವನ್ನಾಗಿ ಪರಿಗಣಿಸಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES

Latest News