ಬೆಂಗಳೂರು, ಮೇ 14– ಸಾರ್ವಜನಿಕರಿಂದ ಫೋನ್ ಪೇ, ಗೂಗಲ್ ಪೇ ಹಾಗೂ ಬ್ಯಾಂಕ್‌ಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ 12 ಮಂದಿ ಅಂತಾರಾಜ್ಯ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 400 ಮೊಬೈಲ್ ಸಿಮ್‌ಗಳು, 140 ಎಟಿಎಂ ಕಾರ್ಡ್‌ಗಳು,17 ಚೆಕ್ ಪುಸ್ತಕಗಳು, 27 ಮೊಬೈಲ್ ಫೋನ್‌ಗಳು, 22 ವಿವಿಧ ಬ್ಯಾಂಕ್ ಪಾಸ್‌ಬುಕ್‌ಗಳು, ಆದಾಯ ಮತ್ತು ಖರ್ಚು ವೆಚ್ಚಗಳನ್ನು ನಮೂದಿಸಿರುವ ಸ್ಪೈರಲ್ ಬೈಂಡಿನ ಪುಸ್ತಕ ಮತ್ತು 15 ಸಾವಿರ ರೂ.ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಲ್.ಆರ್. ನಗರದ ನಿವಾಸಿಯೊಬ್ಬರ ಮೊಬೈಲ್ ನಂಬರ್‌ಗೆ ಕಳೆದ ತಿಂಗಳು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ವರ್ಕ್‌ಫ್ರಮ್ ಹೋಂ ಪ್ರಾಜೆಕ್ಟ್ ಇರುವುದಾಗಿ ಮೆಸೇಜ್ ಕಳುಹಿಸಿ ಈ ಕೆಲಸ ಮುಗಿಸಿದ್ದಲ್ಲಿ ಕಮಿಷನ್ ಹಣ ನೀಡುವುದಾಗಿ ತಿಳಿಸಿದ್ದಾನೆ.
ಈ ಮೆಸೇಜ್ ನಂಬಿ ಅವರು ಹೇಳಿದ ಕೆಲಸ ಮುಗಿಸಿದಾಗ, ಪ್ರಾಜೆಕ್ಟ್ ವರ್ಕ್ ಕ್ರೆಡಿಟ್‌ಸ್ಕೊರ್ ಬ್ಯಾಲೆನ್‌್ಸ ಶೀಟ್ ನೆಗೆಟಿವ್ ತೋರಿಸುವುದಾಗಿ ತಿಳಿಸಿ ಹಣ ಡ್ರಾ ಮಾಡಲು ಪ್ಲಾಟ್‌ಫಾರ್ಮ್‌ನಲ್ಲಿ ರಿಜಿಸ್ಟರ್ ಮಾಡುವಂತೆ ಅಪರಿಚಿತ ವ್ಯಕ್ತಿ ಹೇಳಿದ್ದಾನೆ. ಅದರಂತೆ ರಿಜಿಸ್ಟರ್ ಮಾಡಿದ್ದು, 800 ರೂ. ಲಾಭದ ಹಣ ಖಾತೆಗೆ ಬಂದಿದೆ. ಉಳಿದ ಹಣ ಡ್ರಾಮಾಡಲು 10 ಸಾವಿರ ರೂ. ಪೇ ಮಾಡಲು ತಿಳಿಸಿದ್ದು, ಅದರಂತೆ ಆ ಹಣವನ್ನು ವರ್ಗಾವಣೆ ಮಾಡಿದ ನಂತರ 20 ಸಾವಿರ ಹಣ ಖಾತೆಗೆ ಜಮಾ ಆಗಿದೆ.
ಅಪರಿಚಿತ ವ್ಯಕ್ತಿ ಇದೇ ರೀತಿ ಆಸೆ ಹಾಗೂ ನಂಬಿಕೆ ಬರುವಂತೆ ಮಾಡಿ ಸ್ಕೋರ್ ಬ್ಯಾಲೆನ್‌್ಸ ಶೀಟ್‌ನಲ್ಲಿ 10,83,502 ರೂ. ಹಣ ಇರುವುದಾಗಿ ಅವರಿಗೆ ತೋರಿಸಿ, ಈ ಹಣ ನಿಮ ಖಾತೆಗೆ ಜಮಾವಾಗಬೇಕಾದರೆ 5 ಲಕ್ಷ ರೂ. ಹಣವನ್ನು ನೀಡಬೇಕೆಂದು ಹೇಳಿ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ಹಂತಹಂತವಾಗಿ 5 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ತದ ನಂತರದಲ್ಲಿ ಅಪರಿಚಿತ ವ್ಯಕ್ತಿ ಇನ್ನೂ ಹೆಚ್ಚಿನ ಹಣ 3.24 ಲಕ್ಷ ರೂ. ಹಣ ಜಮಾ ಮಾಡಲು ತಿಳಿಸಿದಾಗ ಅನುಮಾನಗೊಂಡು ಅವರು ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಹಣ ವರ್ಗಾವಣೆಯಾಗಿದ್ದ ಫೆಡರಲ್ ಬ್ಯಾಂಕ್, ಉತ್ತರಪ್ರದೇಶ ಶಾಖೆಯ ಕೆವೈಸಿ ವಿವರಗಳನ್ನು ಪಡೆದು ಖಾತೆದಾರರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಫೆಡರಲ್ ಬ್ಯಾಂಕಿನ ಖಾತೆದಾರನು ನೋಟೀಸ್‌ನೊಂದಿಗೆ ಠಾಣೆಗೆ ಹಾಜರಾಗಿ ಅದು ತನ್ನದೇ ಖಾತೆ ಎಂದು ಹೇಳಿದ್ದು, ಈ ಬ್ಯಾಂಕಿನ ಖಾತೆಯನ್ನು ಮುಂಬೈನಲ್ಲಿರುವ ಲೇಬರ್ ಕಾಂಟ್ರ್ಯಾಕ್ಟ್‌ನ ಮಾಲೀಕನು ತೆರೆಸಿದ್ದಾಗಿ ಈ ಖಾತೆಯ ಪಾಸ್‌ಬುಕ್, ಎಟಿಎಂ ಕಾರ್ಡ್,ಸಿಮ್ ಕಾರ್ಡ್ ಆತನ ಬಳಿಯಲ್ಲಿಯೇ ಇಟ್ಟುಕೊಂಡಿರುವುದಾಗಿ ಹೇಳಿದ್ದಾನೆ. ಹಾಗಾಗಿ ಈ ಬ್ಯಾಂಕ್‌ನ ಖಾತೆಯನ್ನು ಲೀನ್‌ಮಾರ್ಕ್ ಮಾಡಿಸಲಾಗಿರುತ್ತದೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು ಫೆಡರಲ್ ಬ್ಯಾಂಕ್‌ನ ಖಾತೆದಾರನೊಂದಿಗೆ ಮುಂಬೈಗೆ ತೆರಳಿ ಲೇಬರ್ ಕಾಂಟ್ರ್ಯಾಕ್ಟ್ ಕೆಲಸ ಮಾಡಿಕೊಂಡಿದ್ದ ಮಾಲೀಕನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿ ಲೇಬರ್ ಕಾಂಟ್ರ್ಯಾಕ್ಟ್ ಕೆಲಸ ಮಾಡುವ ವ್ಯಕ್ತಿಗಳಿಂದ ಬ್ಯಾಂಕ್ ಖಾತೆಗಳನ್ನು ತೆರೆಸಿ ಉತ್ತರ ಪ್ರದೇಶದಲ್ಲಿರುವ ಮೂವರು ವ್ಯಕ್ತಿಗಳಿಗೆ ಖಾತೆಯ ಪಾಸ್‌ಬುಕ್, ಎಟಿಎಂ ಕಾರ್ಡ್ ಮತ್ತು ಸಿಮ್ ಕಾರ್ಡ್‌ಗಳನ್ನು ನೀಡಿದ್ದಾಗಿ ತಿಳಿಸಿದ್ದು, ಅದಕ್ಕಾಗಿ ಅವರು ಒಂದು ಖಾತೆಗೆ 1500 ರೂ.ಕಮಿಷನ್ ನೀಡುತ್ತಿದ್ದರೆಂದು ಹಾಗೂ ಇದೇ ರೀತಿ 22 ಖಾತೆಗಳ ದಾಖಲಾತಿಗಳನ್ನು ನೀಡಿದ್ದು, ಕಮಿಷನ್ ಹಣವನ್ನು ಪಡೆದಿರುವುದಾಗಿ ತಿಳಿಸಿದ್ದಾನೆ.
ಈ ಮಾಹಿತಿಗಳನ್ವಯ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಮುಂಬೈನಲ್ಲಿ ಕಮಿಷನ್ ಪಡೆದ ಆರೋಪಿಯೊಂದಿಗೆ ಉತ್ತರಪ್ರದೇಶಕ್ಕೆ ತೆರಳಿ ಅಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುದಲ್ಲದೇ ತನ್ನೊಂದಿಗೆ ಇತರೆ ಸ್ನೇಹಿತರುಗಳೂ ಭಾಗಿಯಾಗಿರುವುದಾಗಿ ಹೇಳಿದ್ದಾನೆ.
ಈ ಪ್ರಕರಣದಲ್ಲಿ ತನಗೆ ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ದಾಖಲಾತಿಗಳನ್ನು ನೀಡಿದಲ್ಲಿ 18 ರಿಂದ 20 ಸಾವಿರ ಕಮಿಷನ್ ಹಣ ಪಡೆಯುತ್ತಿದ್ದುದ್ದಾಗಿ, ಲೋಕಲ್ ಬ್ಯಾಂಕ್ ಖಾತೆಯಾಗಿದ್ದಲ್ಲಿ 3 ಸಾವಿರ ರೂ. ಕಮಿಷನ್ ಪಡೆದುಕೊಂಡಿರುವುದಾಗಿ ತಿಳಿಸಿದ್ದಾನೆ. ತನಿಖೆ ಮುಂದುವರೆಸಿದ ಪೊಲೀಸರು, ಮುಂಬೈನಲ್ಲಿ ಕಮಿಷನ್ ಪಡೆಯುತ್ತಿದ್ದ ಆರೋಪಿಯೊಂದಿಗೆ ವಾರಾಣಸಿಯ ಪ್ರಯಾಗ್‌ರಾಜ್‌ಗೆ ತೆರಳಿ ಅಲ್ಲಿನ ಕಮಲಾನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಹತ್ತು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಇನ್‌ಸ್ಪೆೆಕ್ಟರ್ ರವಿಕುಮಾರ್ ಮತ್ತು ಸಿಬ್ಬಂದಿ ಯಶಸ್ವಿಯಾಗಿರುತ್ತಾರೆ.