Sunday, September 8, 2024
Homeರಾಜ್ಯಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಖರೀದಿಗೆ 121 ಕೋಟಿ ರೂ. ಬಿಡುಗಡೆ

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಖರೀದಿಗೆ 121 ಕೋಟಿ ರೂ. ಬಿಡುಗಡೆ

ಬೆಂಗಳೂರು, ಮೇ 30- ಶಿಕ್ಷಣ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಒಂದನಿಂದ ಹತ್ತನೇ ತರಗತಿವರೆಗೆ 2024-25 ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು, ಶೂ ಮತ್ತು ಸಾಕ್ಸ್ ಖರೀದಿಸಲು 121 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಅರ್ಹ ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಖರೀದಿ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ರಾಜ್ಯದಲ್ಲಿ ಸುಮಾರು 42.65 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ಗಳನ್ನು ಅಥವಾ ಪಾದರಕ್ಷೆಗಳನ್ನು ಖರೀದಿಸುವ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ.

ಶೂ ಖರೀದಿಗೆ ಸಂಬಂಧಿಸಿದಂತೆ ಕೆಲವೊಂದು ಷರತ್ತುಗಳನ್ನು ಸುತ್ತೋಲೆಯಲ್ಲಿ ವಿಧಿಸಲಾಗಿದೆ. ಅರ್ಹ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ದಾಖಲಿಸಿ, ಉತ್ತಮ ಗುಣಮಟ್ಟದ ಪಾದರಕ್ಷೆಯನ್ನು ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನು ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ವಹಿಸಲು ಸೂಚಿಸಿದೆ.

ಒಂದು ಜೊತೆ ಕಪ್ಪು ಬಣ್ಣದ ಶೂ, ಎರಡು ಜೊತೆ ಬಿಳಿ ಬಣ್ಣದ ಸಾಕ್ಸ್ ಗಳನ್ನು ಖರೀದಿಸಿ, ವಿತರಿಸುವುದು, ಸ್ಥಳೀಯ ವಾತಾವರಣಕ್ಕನುಗುಣವಾಗಿ ಪಾದರಕ್ಷೆಗಳನ್ನು ಖರೀದಿಸಿ ವಿತರಿಸುವಂತೆ ನಿರ್ದೇಶನ ನೀಡಲಾಗಿದೆ.

ಶೂ ಮತ್ತು ಸಾಕ್ಸ್ ಖರೀದಿಗೆ ಎಸ್‌‍ಡಿಎಂಸಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸುವುದು, ಸಂಬಂಧಿಸಿದ ಶಾಲೆಯ ಮುಖ್ಯೋಪಾಧ್ಯಾಯರು ಸದಸ್ಯ ಕಾರ್ಯದರ್ಶಿಯಾಗಿದ್ದು, ಎಸ್‌‍ಡಿಎಂಸಿ ನಾಮನಿರ್ದೇಶಿತ 3 ಸದಸ್ಯರು ಸಮಿತಿಯ ಸದಸ್ಯರಾಗಿರಬೇಕೆಂದು ನಿರ್ದೇಶಿಸಲಾಗಿದೆ.

ಪಾರದರ್ಶಕ ಅಧಿನಿಯಮದ ಪ್ರಕಾರ, ಖರೀದಿ ಪ್ರಕ್ರಿಯೆ ಕೈಗೊಳ್ಳಬೇಕು. ಪ್ರತಿಯೊಂದು ತಾಲೂಕಿನಲ್ಲಿ ಶೇ.5 ರಷ್ಟು ಶಾಲೆಗಳಲ್ಲಿನ ಶೂ ಮತ್ತು ಸಾಕ್ಸ್ ಗಳ ಗುಣಮಟ್ಟ ಪರಿಶೀಲನೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಒಂದು ಸಮಿತಿ ರಚಿಸಲು ಕ್ರಮ ಕೈಗೊಳ್ಳಬೇಕು. ಪ್ರತಿಷ್ಠಿತ ಬ್ರಾಂಡ್‌ಗಳ ಅಧಿಕೃತ ಮಾರಾಟಗಾರರಿಂದ ಶೂ ಮತ್ತು ಸಾಕ್ಸ್ ಗಳನ್ನು ಖರೀದಿಸಬೇಕೆಂಬ ಷರತ್ತು ವಿಧಿಸಲಾಗಿದೆ.

ಯಾವುದೇ ಕಾರಣಕ್ಕೂ ಶೂ ಮತ್ತು ಸಾಕ್ಸ್ ಗಳನ್ನು ವಲಯ, ಕ್ಲಸ್ಟರ್‌ ಅಥವಾ ಜಿಲ್ಲಾ ಮಟ್ಟದಲ್ಲಿ ಕೇಂದ್ರೀಕೃತ ವ್ಯವಸ್ಥೆಯಡಿ ಖರೀದಿಸುವುದನ್ನು ನಿಷೇಧಿಸಲಾಗಿದೆ.ಒಂದರಿಂದ ಐದನೇ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ 265 ರೂ., ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 295 ರೂ. ಹಾಗೂ ಒಂಭತ್ತರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ನಂತೆ ಖರೀದಿಸಲು ದರ ನಿಗದಿಪಡಿಸಲಾಗಿದೆ.

ಅಲ್ಲದೆ, ದಾನಿಗಳು, ಖಾಸಗಿ ಸಂಸ್ಥೆಗಳು ಈ ಉದ್ದೇಶಕ್ಕೆ ಹೆಚ್ಚುವರಿ ಹಣ ನೀಡಲು ಮುಂದೆ ಬಂದರೆ ಅದನ್ನೂ ಬಳಸಿಕೊಂಡು ಉತ್ತಮ ಗುಣಮಟ್ಟದ ಶೂ, ಸಾಕ್ಸ್ , ಪಾದರಕ್ಷೆಗಳನ್ನು ಖರೀದಿಸಿ ವಿತರಿಸಬಹುದಾಗಿದೆ.ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರು ಈ ಕಾರ್ಯಕ್ರಮದ ಅನುಷ್ಠಾನದ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.

RELATED ARTICLES

Latest News