ಬೆಂಗಳೂರು,ಜೂ.22- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳಿಗೆ 24ನೇ ಎಸಿಎಂಎಂ ನ್ಯಾಯಾಲಯ 13 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಆರೋಪಿಗಳಾದ ನಟ ದರ್ಶನ್, ವಿನಯ್, ಧನರಾಜ್, ಪ್ರದೂಷ್ ಅವರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಸರ್ಕಾರಿ ವಿಶೇಷ ಅಭಿಯೋಜಕರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದರು.
ಇಂದು ವಿಚಾರಣೆ ನಡೆಸಿದ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಚಾಟ್ಲಾ ಅವರು ಆರೋಪಿಗಳಾದ ನಟ ದರ್ಶನ್, ವಿನಯ್, ಧನರಾಜ್, ಪ್ರದೂಷ್ ಅವರನ್ನು ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು. ಈ ಮೂಲಕ ದರ್ಶನ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲುಪಾಲಾಗಬೇಕಾಯಿತು.
ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ದರ್ಶನ್ ಮತ್ತು ಅವರ ಬೆಂಬಲಿಗರನ್ನು ಬಂಧಿಸಿದ್ದ ವಿಜಯನಗರ ಉಪವಿಭಾಗದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ವಶಕ್ಕೆ ಪಡೆದಿದ್ದರು.
ಕಸ್ಟಡಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿತರನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಪವಿತ್ರಾಗೌಡ ಸೇರಿ 9 ಆರೋಪಿಗಳಿಗೆ ಜೂ.20 ರಂದು ನ್ಯಾಯಾಂಗ ಬಂಧನ ವಿಧಿಸಿ, ನಟ ದರ್ಶನ್, ಧನರಾಜ್, ವಿನಯ್, ಪ್ರದೂಷ್ ಅವರನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು.
ಪೊಲೀಸ್ ಕಸ್ಟಡಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.ನಟ ದರ್ಶನ್, ಇತರೆ ಆರೋಪಿಗಳು ಜೈಲು ಸೇರುತ್ತಿರುವ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಬಂಧಿಖಾನೆ ಬಳಿ ಭಾರಿ ಬಂದೋಬಸ್ತ್ ಮಾಡಲಾಗಿತ್ತು.