ಬೆಂಗಳೂರು, ಆ.14- ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ದಾರರಿದ್ದು, ಅವುಗಳನ್ನು ಪರಿಷ್ಕರಣೆ ಮಾಡಲಾಗುವುದು ಜತೆಗೆ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲು ಮುಂದಿನ ತಿಂಗಳಿನಿಂದ ವೆಬ್‌ಸೈಟ್ ಮುಕ್ತವಾಗಿಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಡಾ. ವೈ. ಭರತ್‌ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೈದ್ಯಕೀಯ ಚಿಕಿತ್ಸೆಯ ತುರ್ತು ಸಂದರ್ಭಕ್ಕೆ ಅನುಕೂಲವಾಗಲು ಪಡಿತರ ಕಾರ್ಡ್ ನೀಡುವ ಸಲುವಾಗಿ ಪ್ರತ್ಯೇಕ ಪೇರ್ಟಲ್ ಆರಂಭಿಸಲಾಗುತ್ತಿದೆ. ಇನ್ನುಮುಂದೆ 24 ಗಂಟೆಯೊಳಗಾಗಿ ವೈದ್ಯಕೀಯ ಚಿಕಿತ್ಸೆಗೆ ಪಡಿತರ ಕಾರ್ಡ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದರು.
ರಾಜ್ಯದಲ್ಲಿ 25 ಲಕ್ಷ ಎಪಿಎಲ್‌ಕಾರ್ಡ್‌ದಾರರಿದ್ದು 1ಲಕ್ಷ ಮಂದಿ ಅಕ್ಕಿ ತೆಗೆದುಕೊಳ್ಳುತ್ತಿರಲಿಲ್ಲ. ಅದಕ್ಕಾಗಿ ಎಪಿಎಲ್ ಕಾರ್ಡ್‌ಗೆ ಅಕ್ಕಿ ನೀಡುವುದನ್ನು ನಿಲ್ಲಿಸಲಾಗಿದೆ ಎಂದರು. ರಾಜ್ಯದಲ್ಲಿ ಒಟ್ಟು ಕಾರ್ಡ್‌ದಾರರ ಪೈಕಿ ಶೇ.75ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿ ಶೇ.50ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ. ಕಾರ್ಡ್‌ಗಳನ್ನು ಆಧರಿಸಿ ನೋಡುವುದಾದರೆ ಮಹಾರಾಷ್ಟ್ರಕ್ಕಿಂತ ಹೆಚ್ಚು ಬಡತನದ ರಾಜ್ಯ ಕರ್ನಾಟಕ. ಬಿಪಿಎಲ್ ಪಟ್ಟಿಯಲ್ಲಿ 13 ಲಕ್ಷ ಮಂದಿ ಅನರ್ಹರಿದ್ದಾರೆ. ಅವರನ್ನು ತೆಗೆಯಲು ಪ್ರಯತ್ನಿಸಿದಾಗ ಗೊಂದಲ ಉಂಟಾದವು. ಈ ಕಾರ್ಯಕ್ಕೆ ಎಲ್ಲಾ ಪಕ್ಷಗಳು ಕೈ ಜೋಡಿಸಬೇಕು ಎಂದರು.
ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ. ಅನರ್ಹರನ್ನು ಎಪಿಎಲ್ ವ್ಯಾಪ್ತಿಗೆ ತರುತ್ತೇವೆ. ಒಂದು ವೇಳೆ ಅರ್ಹರ ಕಾರ್ಡ್‌ಗಳು ರದ್ದುಗೊಂಡಿದ್ದರೆ ತಹಶೀಲ್ದಾರ್ ಅವರಿಗೆ ಮೇಲನವಿ ಸಲ್ಲಿಸಬಹುದು. ತಕ್ಷಣವೇ ಅವರಿಗೆ ಬಿಪಿಎಲ್ ಕಾರ್ಡ್ ನೀಡುವುದಾಗಿ ಭರವಸೆ ನೀಡಿದರು.ಅನರ್ಹ ಬಿಪಿಎಲ್ ಕಾರ್ಡ್ ದಾರರಿಗೆ ಹೊಸದಾಗಿ ಎಪಿಎಲ್ ನೀಡಲು ಹಾಗೂ ಅನರ್ಹರ ಪರಿಷ್ಕರಣೆಯ ನಂತರ ಮುಂದಿನ ತಿಂಗಳಲ್ಲಿ ಬಿಪಿಎಲ್ ಹೊಸದಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷಪಡಿಸಿದರು.
ಶಾಸಕರಾದ ಕೆ.ಗೋಪಾಲಯ್ಯಸೇರಿದಂತೆ ಹಲವರು ವೈದ್ಯಕೀಯ ತುರ್ತು ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದಾಗ, ಪ್ರತ್ಯೇಕ ಪೋರ್ಟಲ್ ಮಾಡುವುದಾಗಿ ಭರವಸೆ ನೀಡಿದರು.