Friday, November 22, 2024
Homeಬೆಂಗಳೂರುಮಹಿಳಾ ಪಿಜಿಗಳ ಸುರಕ್ಷತೆಗೆ 13 ಅಂಶಗಳ ಕಠಿಣ ಮಾರ್ಗಸೂಚಿ

ಮಹಿಳಾ ಪಿಜಿಗಳ ಸುರಕ್ಷತೆಗೆ 13 ಅಂಶಗಳ ಕಠಿಣ ಮಾರ್ಗಸೂಚಿ

ಬೆಂಗಳೂರು, ಆ.1- ಕೋರಮಂಗಲದ ಮಹಿಳಾ ಪಿಜಿಯಲ್ಲಿ ನಡೆದ ಯುವತಿ ಕೊಲೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ನಗರದ ಪಿಜಿಗಳಿಗೆ ಒಟ್ಟು 13 ಅಂಶಗಳ ಕಠಿಣ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಕೋರಮಂಗಲದ ಪಿಜಿಗೆ ಹಂತಕ ಸಲೀಸಾಗಿ ನುಗ್ಗಿ ಖಾಸಗಿ ಕಂಪನಿ ಉದ್ಯೋಗಿ ಕೃತಿಕುಮಾರಿಯನ್ನು ಭೀಕರವಾಗಿ ಕೊಲೆ ಮಾಡಿದ ದೃಶ್ಯ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಆ ದೃಶ್ಯ ಎಂಥವರನ್ನು ಭೀತಿಗೊಳಿಸುವಂತಿತ್ತು.

ಹೊರಗಿನವರು ಸಲೀಸಾಗಿ ಮಹಿಳಾ ಪಿಜಿಯೊಳಗೆ ಬರಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆ ಪಿಜಿಯಲ್ಲಿನ ಯುವತಿಯರ ಭದ್ರತೆಯ ಪ್ರಶ್ನೆ ಎದುರಾಗಿತ್ತು. ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಗರದಲ್ಲಿರುವ ಎಲ್ಲಾ ಪಿಜಿಗಳ ಡೆಟಾ ಸಂಗ್ರಹಿಸುವಂತೆ ನಗರದ ಎಲ್ಲಾ ಠಾಣೆಯ ಪೊಲೀಸ್ ಇನ್‌್ಸಪೆಕ್ಟರ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪ್ರತಿಯೊಂದು ಪಿಜಿಯ ರಕ್ಷಣೆಯ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ನಗರದಲ್ಲಿರುವ ಎಲ್ಲಾ ಪಿಜಿಗಳನ್ನು ಗುರುತಿಸುವುದರ ಜೊತೆಗೆ ಪಿಜಿಯಲ್ಲಿ ಪಾಲಿಸಬೇಕಾದ ಹಾಗೂ ಪೊಲೀಸರು ಕ್ರಮ ಕೈಗೊಳ್ಳಬೇಕಾದ ಬಗ್ಗೆ ಒಟ್ಟು 13 ಅಂಶಗಳ ಮಾರ್ಗಸೂಚಿಯನ್ನು ಆಯುಕ್ತರು ನೀಡಿದ್ದಾರೆ.

ಮಾರ್ಗಸೂಚಿಗಳು:
ಪ್ರಮುಖವಾಗಿ ಪಿಜಿಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು. ಸೆಕ್ಯುರಿಟಿ ಗಾರ್ಡ್ ನಿಯೋಜಿಸಬೇಕು. ಪಿಜಿಯಲ್ಲಿ ನೆಲೆಸುವ ಪ್ರತಿಯೊಬ್ಬರ ಮಾಹಿತಿಗಳನ್ನು ಸಂಗ್ರಹಿಸಬೇಕು. ಜೊತೆಗೆ ಕೆವೈಸಿ ಮಾಡಿಸಬೇಕು. ಹೊಸದಾಗಿ ಜಾರಿಗೆ ತಂದಿರುವ ಸಾಫ್‌್ಟವೇರ್ನಲ್ಲಿ ಎಲ್ಲಾ ಮಾಹಿತಿಗಳನ್ನು ನಮೋದಿಸಬೇಕು. ಪಿಜಿ ಮಾಲೀಕರು ಸುರಕ್ಷತಾ ಮಾಲೀಕರು ಕೈಗೊಳ್ಳಬೇಕು. ಆಹಾರದ ಗುಣಮಟ್ಟದ ಬಗ್ಗೆ ಗಮನಿಸಬೇಕು.

ಪೊಲೀಸರು ಪಿಜಿಗಳ ಟ್ರೇಡ್ ಲೆಸೆನ್‌್ಸಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಅನಧಿಕೃತವೆಂದು ಕಂಡುಬಂದರೆ ಬಿಬಿಎಂಪಿಗೆ ಮಾಹಿತಿ ನೀಡಬೇಕು. ಪಿಜಿಗಳಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ಮಾಹಿತಿ ಕಲೆ ಹಾಕಬೇಕು. ಬಿಬಿಎಂಪಿ ಅಧಿಕಾರಿಗಳ ಜೊತೆ ಸೇರಿ ಪ್ರಕರಣ ದಾಖಲಿಸಬೇಕು. ತಿಂಗಳಿಗೊಮೆ ಆಯಾ ಠಾಣಾ ವ್ಯಾಪ್ತಿಗಳಲ್ಲಿನ ಪಿಜಿಗಳನ್ನು ಪರಿಶೀಲನೆ ಮಾಡಬೇಕು. ಪಿಜಿಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಬೇಕು ಎಂಬ ಮಾರ್ಗಸೂಚಿಗಳನ್ನು ನೀಡಲಾಗಿದೆ.

ನಗರದಲ್ಲಿವೆ ಅನಧಿಕೃತ ಪೀಜಿಗಳು: ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಕಾರ್ಯಾಚರಣೆಗಿಳಿದಿರುವ ಪೊಲೀಸರು ನಗರದಲ್ಲಿ ಅನಧಿಕೃತ ಪಿಜಿಗಳು ಹೆಚ್ಚಾಗಿರುವ ಮಾಹಿತಿ ಕಲೆಹಾಕಿದ್ದಾರೆ.

ಇಂತಹ ಪಿಜಿಗಳು ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹುಟ್ಟಿಕೊಂಡಿರುವ ಪಿಜಿಗಳಾಗಿರುವುದು ಪೊಲೀಸರರ ತನಿಖೆಯಿಂದ ಗೊತ್ತಾಗಿದ್ದು, ಈ ಸಂಬಂಧ ಬಿಬಿಎಂಪಿಗೆ ಮಾಹಿತಿ ನೀಡಲು ಪೊಲೀಸರು ಮುಂದಾಗಿದ್ದಾರೆ.ಒಟ್ಟಾರೆ ನಗರ ಪೊಲೀಸ್ ಆಯುಕ್ತರ ಈ ಹೊಸ ನಿಯಮಗಳು ಮುಂದಿನ ದಿನಗಳಲ್ಲಿ ಯಾವ ರೀತಿ ಜಾರಿಯಾಗಲಿದೆ. ಎಷ್ಟರ ಮಟ್ಟಿಗೆ ಪಿಜಿಗಳಲ್ಲಿ ಸುರಕ್ಷತಾ ಕ್ರಮ ಅನುಸರಿಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Latest News