ಇಸ್ಲಾಮಬಾದ್, ಏ.27- ಒಪ್ಪೋತ್ತಿನ ಉಟಕ್ಕೂ ವಿಶ್ವದ ಮುಂದೆ ಆಂಗಲಾಚುತ್ತಿರುವ ಪಾಕಿಸ್ತಾನ ತನ್ನ ದುರಂಹಕಾರವನ್ನು ಮಾತ್ರ ಕಡಿಮೆ ಮಾಡುತ್ತಿಲ್ಲ. ಹೊಟ್ಟೆಗೆ ಇಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತೆ ಭಾರತದ ವಿರುದ್ದ ಅಲ್ಲಿನ ಸಚಿವನೊಬ್ಬ ಅತಿರೇಕದ ಹೇಳಿಕೆಯನ್ನು ನೀಡಿದ್ದಾನೆ. ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಹಾಕಿದ್ದು, ಘೋರಿ, ಶಾಹೀನ್ ಮತ್ತು ಘಜ್ಞವಿ ಕ್ಷಿಪಣಿಗಳು ಮತ್ತು 130 ಪರಮಾಣು ಸಿಡಿತಲೆಗಳನ್ನು ಒಳಗೊಂಡಂತೆ ಪಾಕಿಸ್ತಾನದ ಶಸ್ತ್ರಾಗಾರವನ್ನು ಭಾರತಕ್ಕಾಗಿ ಮಾತ್ರ ಇಡಲಾಗಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾನೆ.
ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಭಾರತ ಪಾಕಿಸ್ತಾನದ ನೀರು ಸರಬರಾಜನ್ನು ನಿಲ್ಲಿಸಲು ಧೈರ್ಯ ಮಾಡಿದರೆ, ಅದು ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು. ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಪ್ರದರ್ಶನಕ್ಕೆ ಅಲ್ಲ, ಮತ್ತು ಅವುಗಳ ಸ್ಥಳಗಳು ದೇಶಾದ್ಯಂತ ಅಡಗಿಕೊಂಡಿವೆ, ಪ್ರಚೋದಿಸಿದರೆ ದಾಳಿ ಮಾಡಲು ಸಿದ್ಧವಾಗಿವೆ ಎಂದು ಅವರು ಘೋಷಿಸಿದ್ದಾನೆ.
ಅವರು ನಮಗೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದರೆ, ಅವರು ಯುದ್ಧಕ್ಕೆ ಸಿದ್ದರಾಗಿರಬೇಕು. ನಮ್ಮಲ್ಲಿರುವ ಮಿಲಿಟರಿ ಉಪಕರಣಗಳು, ನಮ್ಮಲ್ಲಿರುವ ಕ್ಷಿಪಣಿಗಳು, ಅವು ಪ್ರದರ್ಶನಕ್ಕೆ ಅಲ್ಲ. ನಾವು ದೇಶಾದ್ಯಂತ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆಂದು ಯಾರಿಗೂ ತಿಳಿದಿಲ್ಲ.
ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಇವೆಲ್ಲವೂ ನಿಮ್ಮ ಮೇಲೆ ಗುರಿಯಾಗಿವೆ ಎಂದು ಅಬ್ಬರಿಸಿಕೊಂಡಿದ್ದಾನೆ. 26 ಜನರ ಸಾವಿಗೆ ಕಾರಣವಾದ ಪಹಲ್ಯಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಪ್ರತಿದಾಳಿಗಳ ಸರಣಿಯನ್ನು ಘೋಷಿಸಿದ ನಂತರ ಅವರ ಪ್ರತಿಕ್ರಿಯೆ ಬಂದಿತು.
1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ನಿರ್ಧಾರವನ್ನು ಭಾರತ ಘೋಷಿಸಿತು ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ಎಲ್ಲಾ ವೀಸಾಗಳನ್ನು ರದ್ದುಗೊಳಿಸಿದೆ. ಪಾಕಿಸ್ತಾನದೊಂದಿಗಿನ ನೀರು ಸರಬರಾಜು ಮತ್ತು ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವನ್ನು ಅಪಹಾಸ್ಯ ಮಾಡಿದ ಹನೀಫ್ ಅಬ್ಬಾಸಿ, ನವದೆಹಲಿ ತನ್ನ ಕ್ರಮಗಳ ಕಠಿಣ ಪರಿಣಾಮಗಳನ್ನು ಅರಿತುಕೊಳ್ಳಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಉಂಟಾದ ಅಡಚಣೆಯನ್ನು ಉಲ್ಲೇಖಿಸಿದ ಅವರು, ಕೇವಲ ಎರಡು ದಿನಗಳಲ್ಲಿ ಭಾರತೀಯ ವಿಮಾನಯಾನದಲ್ಲಿ ಉಂಟಾದ ಅವ್ಯವಸ್ಥೆಯನ್ನು ತೋರಿಸಿದರು. ಇನ್ನೂ 10 ದಿನಗಳ ಕಾಲ ವಿಷಯಗಳು ಹೀಗೆ ಮುಂದುವರಿದರೆ, ಭಾರತದಲ್ಲಿನ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತವೆ ಎಂದು ಅಲವತ್ತುಕೊಂಡಿದ್ದಾನೆ.