ಬೆಳಗಾವಿ, ಡಿ.13- ರಾಜ್ಯದಲ್ಲಿ ಪ್ರಸ್ತಕ ಮುಂಗಾರು, ಹಿಂಗಾರು ಮಳೆ ಅನಾಹುತಗಳಿಂದ 133 ಮಂದಿ ಪ್ರಾಣ ಕಳೆದುಕೊಂಡಿದ್ದು, ಪುರ್ನವಸತಿ ಹಾಗೂ ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರ 297 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದಲ್ಲಿ ಮಳೆ ಹಾನಿಯ ಕುರಿತು ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿದ ಅವರು, ಭಾರೀ ಮಳೆಯಿಂದ ರಸ್ತೆಗಳು ಹಾಗೂ ಇತರ ಮೂಲಸೌಲಭ್ಯಗಳು ಹಾಳಾಗಿವೆ. ಮಳೆ ಹಾನಿ ಪರಿಹಾರಕ್ಕೆ ಹಲವು ಶಾಸಕರು ಮನವಿ ಸಲ್ಲಿಸಿದ್ದಾರೆ ಎಂದರು.
ರಾಜ್ಯದಲ್ಲಿ 20 ವರ್ಷದಿಂದ ಒಂದಲ್ಲ ಒಂದು ಪ್ರಕೃತಿ ವಿಕೋಪ ಸಂಭವಿಸುತ್ತಿದೆ. 2000ರಿಂದ ಆರಂಭಿಸಿದರೆ ಸುಮಾರು 15 ರಿಂದ 17 ವರ್ಷ ಬರ ಇದೆ. ಕೆಲ ವರ್ಷಗಳಲ್ಲಿ ಅತಿವೃಷ್ಟಿಯೂ ಆಗಿದೆ. 2018, 2019, 2022 ಹಾಗೂ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆನಿಕಲ್ಲಿನಿಂದ ಬೆಳೆ ಹಾನಿ ಹಾಗೂ ಪ್ರಾಣ ಹಾನಿಯಾಗಿದೆ. ಸಿಡಿಲು ಕೂಡ ಹೆಚ್ಚಾಗಿದ್ದು, ಮೊದಲು ವರ್ಷಕ್ಕೆ 10 ಮಂದಿ ಸಾವನ್ನಪ್ಪುತ್ತಿದ್ದರು, ಇತ್ತೀಚೆಗೆ ವರ್ಷಕ್ಕೆ 60 ಮಂದಿ ಸಾವನ್ನಪ್ಪುತ್ತಿದ್ದಾರೆ. ಅಧಿಕ ಗಾಳಿಯಿಂದ ಕಟಾವಿಗೆ ಬಂದ ಭತ್ತ ಹಾಗೂ ಇತರ ಬೆಳೆಗಳು ನಷ್ಟವಾಗಿವೆ. 2019 ಮತ್ತು 2024ರಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತವಾಗುತ್ತಿವೆ. ಈ ರೀತಿ ನಾನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವಿವರಿಸಿದರು.
ಸರ್ಕಾರ ಮುನ್ನೆಚ್ಚರಿಕೆಯಿಂದ ಕೆಲಸ ಮಾಡಿದ್ದೇವೆ. ಕಳೆದ ವರ್ಷ ತೀವ್ರವಾದ ಬರ ಹೆದುರಿಸಿತ್ತು, ರಾಜ್ಯ ಸರ್ಕಾರ 800 ಕೋಟಿ ರೂಪಾಯಿ ಖರ್ಚು ಮಾಡಿ ಪರಿಹಾರ ಕೈಗೊಂಡಿತ್ತು. ಕೇಂದ್ರ ಸರ್ಕಾರ ನ್ಯಾಯಾಲಯದ ಸೂಚನೆ ಅನುಸಾರ ಎನ್ ಡಿಆರ್ ಎಫ್ ನೆರವು ನೀಡಿತ್ತು. ಅದನ್ನು ಬಳಸಿ ನಾಲ್ಕು ಸಾವಿರ ಕೋಟಿ ರೂ.ಗಳನ್ನು 45 ಲಕ್ಷ ರೈತರಿಗೆ ಪರಿಹಾರವಾಗಿ ನೀಡಲಾಗಿದೆ ಎಂದರು.
ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮುಂಗಾರಿನಲ್ಲಿ 850 ಮಿಮಿ ಮಳೆಯಾಗುವುದು ವಾಡಿಕೆ. ಈ ವರ್ಷ 978 ಮಿಮಿ ಮಳೆಯಾಗಿದೆ, ಶೇ.20ರಷ್ಟು ಹೆಚ್ಚುವರಿ ಮಳೆಯಾಗಿದೆ. ಹಿಂಗಾರಿನಲ್ಲಿ 173 ಮಿಮಿ ಎದುರಾಗಿ 213 ಮಿಮಿ ಮಳೆಯಾಗಿದೆ. ಶೇ.23ರಷ್ಟು ಹೆಚ್ಚಾಗಿದೆ. ಪೂರ್ವ ಮುಂಗಾರು, ಮುಂಗಾರು, ಹಿಂಗಾರಿನಲ್ಲಿ ಸರಾಸರಿ ಶೇ.20ರಷ್ಟು ಹೆಚ್ಚು ಮಳೆಯಾಗಿದೆ. ಕೆಲವು ಕಡೆ ಕಡಿಮೆ ಮಳೆಯಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ 10 ಆಗ್ರೋ ಕ್ಲೈಮ್ಯಾಟಿಕ್ ಝೋನ್ ಇವೆ. ಇಲ್ಲಿ 450 ಮಿಮಿ ಯಿಂದ 4500 ಮಿಮಿ ಮಳೆಯಾಗುವ ವೈವಿದ್ಯಮಯ ಪ್ರದೇಶಗಳಿವೆ. ಮಳೆ ಅವಗಡಗಳಲ್ಲಿ 133 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹದಲ್ಲಿ ನೀರಿಗೆ ಇಳಿದು, ಇನ್ನೂ ಕೆಲವರು ತುಂಬಿದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿನಂತೆ 6.64 ಕೋಟಿ ರೂಪಾಯಿ ನೀಡಲಾಗಿದೆ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಜಾನುವಾರು ಪ್ರಾಣ ಹಾನಿ ಕಡಿಮೆಯಿದೆ. ಆದರೂ 714 ಸಣ್ಣ ಮತ್ತು ದೊಡ್ಡ ಜಾನುವಾರುಗಳು ಪ್ರಾಣ ಕಳೆದುಕೊಂಡಿದ್ದು, 1.20 ಕೋಟಿ ರೂಪಾಯಿಯನ್ನು ಪರಿಹಾರ ಪಾವತಿಸಲಾಗಿದೆ ಎಂದರು.
ಮುಂಗಾರಿನಲ್ಲಿ 1,59,718 ಹೆಕ್ಟರ್ ನಲ್ಲಿ ಬೆಳೆ ಹಾನಿಯಾಗಿತ್ತು. 94.94 ಕೋಟಿ ಪರಿಹಾರ ವಿತರಿಸಿದ್ದೇವೆ. ಹಿಂಗಾರಿನಲ್ಲಿ 1,45,254 ಹೆಕ್ಟರ್ ನಲ್ಲಿ ಬೆಳೆ ಹಾನಿಯಾಗಿದ್ದು, ಅದಕ್ಕೆ 112 ಕೋಟಿ ಪರಿಹಾರ ಮಂಜೂರು ಮಾಡಿದ್ದೇವೆ. ಕೆಲವು ಭಾಗದಲ್ಲಿ ಪರಿಹಾರ ಪಾವತಿಯಾಗಿದ್ದು, ಉಳಿದ ಕಡೆ ಇಂದು ಕೂಡ ಹಣ ಸಂದಾಯವಾಗುತ್ತಿದೆ. 20,893 ಮನೆಗಳು ಹಾನಿಗೆ ಒಳಗಾಗಿದ್ದು, 3200 ಮನೆಗಳು ಪೂರ್ತಿ ಬಿದ್ದಿವೆ. 82.20 ಕೋಟಿ ಪರಿಹಾರ ಪಾವತಿಸಲಾಗಿದೆ. ಈ ವರ್ಷ ಒಟ್ಟು 297 ಕೋಟಿ ರೂಪಾಯಿಗಳನ್ನು ಮಳೆ ಹಾನಿ ಪರಿಹಾರವನ್ನಾಗಿ ಪಾವತಿಸಿದ್ದೇವೆ ಎಂದು ವಿವರಿಸಿದರು.
ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕೇರಳದಲ್ಲೂ ಹೆಚ್ಚು ಮಳೆಯಾಗಿ ಗಡಿ ಭಾಗದಲ್ಲಿನ ನದಿಗಳು ತುಂಬಿ ಹರಿದಿವೆ.ರಸ್ತೆ, ಶಾಲಾ-ಅಂಗನವಾಡಿ ಕೊಠಡಿಗಳು, ವಿದ್ಯುತ್ ಸಂಪರ್ಕ ಮೂಲ ಸೌಕರ್ಯಕ್ಕು ಹಾನಿಯಾಗಿದೆ. ಸಾರ್ವಜನಿಕ ಮೂಲಸೌಲಭ್ಯಗಳ ತುರ್ತು ಪರಿಹಾರಕ್ಕೆ 80.47 ಕೋಟಿ ಅನುದಾನ ಒದಗಿಸಿದ್ದೇವೆ. 60.16 ಕೋಟಿ ಬಿಡುಗಡೆಯಾಗಿದೆ. 15 ಕೋಟಿ ಬಿಡುಗಡೆಗೆ ಬಾಕಿ ಇದೆ. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಶಾಲಾ ಶಿಕ್ಷಣ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರ ಖಾತೆಯಲ್ಲಿ 579 ಕೋಟಿ ಉಳಿದಿದೆ. ಅದರಲ್ಲಿ ತುರ್ತು ಪರಿಹಾರ ಕೈಗೊಳ್ಳಲು ಅವಕಾಶ ಇದೆ. ಮನೆಗೆ ನೀರು ನುಗ್ಗಿದವರಿಗೆ ದಿನ ಖರ್ಚಿಗೆ 5 ಸಾವಿರದಂತೆ 11,171 ಕುಟುಂಬಗಳಿಗೆ ಒಟ್ಟು 5.62 ಕೋಟಿ ಅನುದಾನ ಒದಗಿಸಿದ್ದೇವೆ. ನೀರು ನುಗ್ಗಿದ್ದರಿಂದ ಮನೆಯಲ್ಲಿ ವಾಸ ಮಾಡಲಾಗದ್ದಿದ್ದರಿಗಾಗಿ 290 ಕಾಳಜಿ ಕೇಂದ್ರಗಳನ್ನ ತೆರಯಲಾಗಿದೆ. ಅಲ್ಲಿ 25,914 ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಎಸ್ ಟಿ ಆರ್ ಎಫ್, ಎನ್‌ಡಿಆರ್‌ಎಫ್ ತುಕ್ಕಡಿಗಳನ್ನು ನಿಯೋಜಿಸಿ ನೆರವು ನೀಡಲಾಗಿದೆ.
ಭೂ ಕುಸಿತಕ್ಕೆ ಶಾಶ್ವತ ಪರಿಹಾರ:
ಪ್ರಕೃತಿ ವಿಕೋಪಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಬೇಡಿಕೆ ಬಹಳ ದಿನದಿಂದ ಕೇಳಿ ಬರುತ್ತಿದೆ. ಇತ್ತೀಚೆಗೆ ನಡೆದ ಕಾರಾವರ ಹಾಗೂ ಇತರ ಭೂ ಕುಸಿತಗಳಂತಹ ಪ್ರಕರಣಗಳನ್ನು ಮುಂದಿನ ವರ್ಷದಲ್ಲಿ ತಪ್ಪಿಸಲು ಎರಡು ವರ್ಷದ ಅವಧಿಗೆ 400 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಏಳು ಜಿಲ್ಲೆಗಳ 863 ಗ್ರಾಮ ಮಂಚಾಯತ್‌ಗಳನ್ನು ಗುರುತಿಸಲಾಗಿದೆ. ಅಲ್ಲಿ ಶಾಶ್ವತ ಕಾಮಗಾರಿಗೆ 425 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಕಳುಹಿಸಿದ್ದಾರೆ. ಅದರ ಭಾಗವಾಗಿ 152 ಕಾಮಗಾರಿಗಳಿಗೆ 115 ಕೋಟಿ ರೂಪಾಯಿಗಳಿಗೆ ಶೀಘ್ರ ಮಂಜೂರಾತಿ ನೀಡಲಾಗುವುದು ಎಂದು ಹೇಳಿದರು.