ರಾಯ್ದುರ, ಏ.17: ಮಹಾದೇವ್ ಬೆಟ್ಟಿಂಗ್ ಆ್ಯಪ್ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಛತ್ತೀಸ್‌ಗಢ ಪೊಲೀಸರು ಹಲವಾರು ರಾಜ್ಯಗಳ 14 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಛತ್ತೀಸ್ ಗಢದ ಮಹಾದೇವ್ ಆ್ಯಪ್ ಬೆಟ್ಟಿಂಗ್ ಹಗರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಈಗಾಗಲೇ ನಡೆಸುತ್ತಿದೆ. ಬಂಧಿತ 14 ಮಂದಿಯಲ್ಲಿ ಆರು ಮಂದಿ ಛತ್ತೀಸ್ ಗಢದವರು, ಮೂವರು ಜಾರ್ಖಂಡ್ ನವರು, ಇಬ್ಬರು ಮಧ್ಯಪ್ರದೇಶದವರು ಮತ್ತು ಪಂಜಾಬ್, ಉತ್ತರ ಪ್ರದೇಶ ಮತ್ತು ಬಿಹಾರದ ತಲಾ ಒಬ್ಬರು ಎಂದು ರಾಯಪುರ ವಲಯದ ಪೊಲೀಸ್ ಮಹಾನಿರೀಕ್ಷಕ ಅಮರೇಶ್ ಮಿಶ್ರಾ ತಿಳಿಸಿದ್ದಾರೆ.
ಅವರಲ್ಲಿ ಎಂಟು ಮಂದಿಯನ್ನು ಕೋಲ್ಕತ್ತಾದಿಂದ ಮತ್ತು ಆರು ಮಂದಿಯನ್ನು ಗುವಾಹಟೆಯಿಂದ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಐಪಿಎಲ್ ಪಂದ್ಯಗಳ ಮೇಲೆ ಆನ್‌ಲೈನ್ ಬೆಟ್ಟಿಂಗ್ ಸ್ವೀಕರಿಸಿದ್ದಕ್ಕಾಗಿ ಏಪ್ರಿಲ್ 13 ರಂದು ಬಂಧಿಸಲ್ಪಟ್ಟ ನಿಖಿಲ್ ವಾಧ್ವಾನಿ ಎಂಬಾತನ ಹೇಳಿಕೆಯ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಂಧಿತರಿಂದ 67 ಮೊಬೈಲ್ ಫೋನ್‌ಗಳು, 8 ಲ್ಯಾಪ್‌ಟಾಪ್‌ಗಳು, 4 ರೂಟರ್‌ಗಳು, 94 ಎಟಿಎಂ ಕಾರ್ಡ್‌ಗಳು, 15 ಸಿಮ್, 32 ಬ್ಯಾಂಕ್ ಪಾಸ್‌ಬುಕ್‌ಗಳು, 3 ಬ್ಯಾಂಕ್ ಚೆಕ್ ಬುಕ್‌ಗಳು, ಸೆಕ್ಯುರಿಟಿ ಕ್ಯಾಮೆರಾ ಮತ್ತು 30 ಲಕ್ಷ ರೂ.ಗಳು ಬೆಟ್ಟಿಂಗ್ ವಹಿವಾಟು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.