Tuesday, October 21, 2025
Homeಇದೀಗ ಬಂದ ಸುದ್ದಿಬೆಂಗಳೂರಿನಲ್ಲಿ ಪಟಾಕಿ ಸಿಡಿದು 20 ಮಂದಿಗೆ ಗಾಯ

ಬೆಂಗಳೂರಿನಲ್ಲಿ ಪಟಾಕಿ ಸಿಡಿದು 20 ಮಂದಿಗೆ ಗಾಯ

14 injured in firecracker explosion in Bengaluru

ಬೆಂಗಳೂರು, ಅ.21-ದೀಪಾವಳಿ ಹಬ್ಬದ ಸಂಭ್ರದಲ್ಲಿ ಪಟಾಕಿ ಸಿಡಿಸುವಾಗ ನಗರದಲ್ಲಿ 20 ಮಂದಿ ಗಾಯಗೊಂಡಿದ್ದಾರೆ.ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಒಟ್ಟು 13 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ನಿನ್ನೆ ಇಬ್ಬರು ಮಕ್ಕಳ ಕಣ್ಣಿಗೆ ಪಟಾಕಿ ಸಿಡಿಸುವಾಗ ಹಾನಿಯಾಗಿದ್ದು, ಅವರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.

ನಿನ್ನೆ ರಾತ್ರಿಯಿಂದ ಇಂದು ಬೆಳಿಗ್ಗೆ ವರೆಗೆ 11 ಮಂದಿ ಆಸ್ಪತ್ರೆ ಆಗಮಿಸಿದ್ದರು. ಅವರಲ್ಲಿ 7 ಮಕ್ಕಳಿಗೆ ಸಾಧಾರಣ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಮಿಂಟೋ ಆಸ್ಪತ್ರೆ ತಿಳಿಸಿದೆ.

ನಾಲ್ವರಿಗೆ ತೀವ್ರ ತೊಂದರೆಯಾಗಿದ್ದು, ತೀವ್ರ ಹಾನಿಯಾಗಿದ್ದ ಇಬ್ಬರ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರ ಕಣ್ಣಿನಲ್ಲಿ ತೀವ್ರ ರಕ್ತಸ್ರಾವ ಆಗಿದ್ದು, ಒಳ ರೋಗಿಗಳಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಪಟಾಕಿಯಿಂದ ಗಾಯಗೊಂಡಿರುವ 13 ಮಂದಿಯಲ್ಲಿ 10 ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳು ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಪಟಾಕಿಯ ಕಿಡಿಗಳು ಕಣ್ಣಿಗೆ ಸಿಡಿದು 3 ವರ್ಷದ ಬಾಲಕನ ಕಣ್ಣಿಗೆ ಗಾಯವಾಗಿದ್ದು, ನಾರಾಯಣ ನೇತ್ರಾಲಯದಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ಪಟಾಕಿ ಸಿಡಿಸಿದಾಗ ಎಗರಿ ಬಂದ ಪಟಾಕಿ ಕಣಗಳಿಂದ ಬಾಲಕಿಯ ಕಣ್ಣಿಗೆ ಹಾನಿಯಾಗಿದೆ.

ಶೇಖರ್‌ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದ ಐವರಿಗೆ ಚಿಕಿತ್ಸೆ ನೀಡಲಾಗಿದೆ. ಗಾಯಗೊಂಡವರಲ್ಲಿ ದೀಪಾವಳಿ ಹಬ್ಬದ ಪಟಾಕಿ ಸಿಡಿಸಿದವರಲ್ಲದೆ, ಪಟಾಕಿ ಸಿಡಿಸುವುದನ್ನು ನೋಡುತ್ತಾ ನಿಂತವರು, ರಸ್ತೆಗಳಲ್ಲಿ ನಡೆದು ಹೋಗುತ್ತಿದ್ದವರೂ ಸೇರಿದ್ದಾರೆ.

ಪ್ರತಿ ವರ್ಷ ಪಟಾಕಿ ಸಿಡಿತದಿಂದಾಗುವ ಅನಾಹುತದ ಬಗ್ಗೆ ಅರಿವು ಮೂಡಿಸಿ ಮುನ್ನೆಚ್ಚರಿಕೆ ವಹಿಸಲು ಕಣ್ಣಿನ ಆಸ್ಪತ್ರೆಗಳು ಸಲಹೆ ಮಾಡುತ್ತಿವೆ. ಆದರೆ, ಹಬ್ಬದ ಸಡಗರ ಸಂಭ್ರಮದಲ್ಲಿ ಮುನ್ನೆಚ್ಚರಿಕೆ ವಹಿಸದೇ ಅನಾಹುತಗಳಾಗುತ್ತಿರುವುದು ಕೂಡ ಮರುಕಳಿಹಿಸುತ್ತಲೇ ಇವೆ.

RELATED ARTICLES

Latest News