ಬೆಂಗಳೂರು,ಜ.22- ರಾಜ್ಯದಲ್ಲಿ ಇಂದು ಮುಂಜಾನೆ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತಗಳಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ 14 ಮಂದಿ ಮೃತಪಟ್ಟಿರುವ ಘಟನೆ ನಡೆದಿದ್ದು, ಒಂದು ಪ್ರಕರಣದಲ್ಲಿ ತರಕಾರಿ ಲಾರಿ ಪಲ್ಟಿಯಾಗಿ 10 ಮಂದಿ ಮೃತಪಟ್ಟರೆ, ಮತ್ತೊಂದು ಪ್ರಕರಣದಲ್ಲಿ ಪ್ರಾರ್ಥನೆ ಸಲ್ಲಿಸಲು ಹಂಪಿಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು ಹಾಗೂ ವಾಹನದ ಚಾಲಕ ಸಾವನ್ನಪ್ಪಿದ್ದಾರೆ.
ಕಾರವಾರ :
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಬಳಿ ತರಕಾರಿ ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ 10 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮುಂಜಾನೆ 4.30 ರ ಸುಮಾರಿನಲ್ಲಿ ಸಂಭವಿಸಿದೆ.ಮೃತರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದವರೆಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೃತಪಟ್ಟವರನ್ನು ಫಯಾಜ್ ಜಮಖಂಡಿ (45), ವಾಸಿಂ ಮುಡಗೇರಿ (35), ಹಿಜಾಜ್‌ಮುಲ್ಲಾ (20), ಸಾಧಿಕ್ ಭಾಷ (30), ಗುಲಾಂ ಹುಸೇನ್ ಜವಳಿ (40), ಇಮ್ತಿಯಾಜ್ (36), ಅಲ್ಫಾಜ್ ಜಾಫರ್ (25), ಜಿಲಾನಿ ಅಬ್ದುಲ್ (28), ಅಸ್ಲಂ (24) ಹಾಗೂ ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇವರ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ.
ಸವಣೂರಿನಿಂದ ಸುಮಾರು 28 ಮಂದಿ ತರಕಾರಿ ಹಾಗೂ ಹಣ್ಣುಗಳನ್ನು ಲಾರಿಯಲ್ಲಿ ತುಂಬಿಕೊಂಡು ಕುಮಟಾದಲ್ಲಿ ಇಂದು ಸಂತೆಯಿದ್ದ ಕಾರಣ ಹೋಗುತ್ತಿದ್ದರು. ಈ ಲಾರಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಗುಳ್ಳಾಪುರಘಟ್ಟ ಭಾಗದಲ್ಲಿ ಮುಂಜಾನೆ 4.30 ರ ಸುಮಾರಿನಲ್ಲಿ ತೆರಳುತ್ತಿದ್ದಾಗ ಇಳಿಜಾರು ಪ್ರದೇಶವಾದ್ದರಿಂದ ಚಾಲಕನ ಗಮನಕ್ಕೆ ಬಾರದೆ ಎಡಕ್ಕೆ ಹೋಗಿ ಸುಮಾರು 50 ಮೀಟರ್ ಆಳದ ಕಣಿವೆಗೆ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಪರಿಣಾಮ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ ಗಂಭೀರ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಗಾಯಗೊಂಡಿರುವ 15ಕ್ಕೂ ಹೆಚ್ಚು ಮಂದಿಯ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.ಲಾರಿ ಮಗುಚಿಬಿದ್ದ ಪರಿಣಾಮ ಲಾರಿ ಬಾಗಿಲು ತೆಗೆಯಲಾಗದೆ ಮುಂಭಾಗದಲ್ಲಿ ಕುಳಿತಿದ್ದವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಯಲ್ಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕ್ಕೆತ್ತಿ ಮೃತದೇಹಗಳನ್ನು ಹೊರತೆಗೆದು ಸ್ಥಳೀಯರ ನೆರವಿನೊಂದಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಅವರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಅಪಘಾತದದಲ್ಲಿ ಸವಣೂರು ಪಟ್ಟಣದ 10 ಮಂದಿ ಮೃತಪಟ್ಟಿರುವ ಸುದ್ದಿ ತಿಳಿದು ಪಟ್ಟಣವೇ ಶೋಕಸಾಗರದಲ್ಲಿ ಮುಳುಗಿದ್ದು, ನೀರವ ಮೌನ ಆವರಿಸಿದೆ. ಈ ಅಪಘಾತದಲ್ಲಿ ಬಹುತೇಕ ಯುವಕರೇ ಮೃತಪಟ್ಟಿರುವುದು ವಿಷಾದಕರ.
2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಅಸ್ಲಾಂ :
ಅಪಘಾತದಲ್ಲಿ ಮೃತಪಟ್ಟಿರುವ ಅಸ್ಲಾಂ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ತಡರಾತ್ರಿ ತರಕಾರಿ ಸಾಗಿಸಲು ತಾನು ಬರುತ್ತೇನೆಂದು ಅಸ್ಲಾಂ ಹಠ ಹಿಡಿದು ಲಾರಿ ಹತ್ತಿದ್ದರು ಎಂದು ಕಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರ ಸಾವು :
ಮತ್ತೊಂದು ಪ್ರಕರಣದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಸಿಂಧನೂರಿನ ಅರಗಿನಮರ ಬಳಿ ಸಂಭವಿಸಿದೆ.ಮೃತ ವಿದ್ಯಾರ್ಥಿಗಳನ್ನು ಆರ್ಯವಂದನ್ (18), ಸುಚೀಂದ್ರ (22) ಮತ್ತು ಅಭಿಲಾಷ್ (20) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಚಾಲಕ ಶಿವ (24) ಕೂಡ ಸಾವನ್ನಪ್ಪಿದ್ದಾರೆ. ಗಾಯಗೊಂಡ 10 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂತ್ರಾಲಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳನ್ನು ನರಹರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹಂಪೆಗೆ ಕರೆದೊಯ್ಯಲಾಗುತ್ತಿದ್ದ ಸಂದರ್ಭದಲ್ಲಿ ಸಿಂಧನೂರಿನ ಅರಗಿನಮರ ಶಿಬಿರದ ಬಳಿ ಮುಂಜಾನೆ ವಾಹನ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸಿಂಧನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ನಾಲ್ವರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡ 10 ಮಂದಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ದಟ್ಟ ಮಂಜಿನ ನಡುವೆ ವೇಗವಾಗಿ ಚಲಿಸುತ್ತಿದ್ದ ವಾಹನದ ಆಕ್ಸಿಲ್ ಕಟ್‌ಆಗಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಅಪಘಾತದ ಸುದ್ದಿ ತಿಳಿದು ಮಂತ್ರಾಲಯ ಶ್ರೀಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಪೋಷಕರಿಗೆ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಬೊಮ್ಮಾಯಿ ಸಂತಾಪ :
ಬೆಂಗಳೂರು,ಜ.22- ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಅರಬೈಲ್ ಬಳಿ ನಡೆದ ಲಾರಿ ಅಪಘಾತದಲ್ಲಿ ಹಾವೇರಿ ಜಿಲ್ಲೆಯ ಸವಣೂರಿನ ಹತ್ತು ಮಂದಿ ಸಾವಿಗೀಡಾದ ಸುದ್ದಿ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದುಃಖ ವ್ಯಕ್ತಪಡಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು, ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಅವರ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಸ್ಥರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.