ಬೆಂಗಳೂರು,ಮಾ.19- ರಾಜ್ಯದಲ್ಲಿ 34 ಸಾವಿರ ಮುಜರಾಯಿ ದೇವಾಲಯಗಳಿದ್ದು, ಈಗಾಗಲೇ 15 ಸಾವಿರ ಎಕರೆ ಜಮೀನನ್ನು ದೇವಾಲಯಗಳ ಹೆಸರಿಗೆ ಪಹಣಿ ದಾಖಲಿಸಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಜರಾಯಿ ದೇವಾಲಯಗಳ ಎಲ್ಲ ಆಸ್ತಿಯನ್ನು ಆಯಾ ದೇವಾಲಯಗಳ ಹೆಸರಿಗೆ ಪಹಣಿ ದಾಖಲು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ಚಿಕ್ಕಮಗಳೂರು ಜಾಗರ ಹೋಬಳಿ ಇನಾಮು ದತ್ತಾತ್ರೇಯ ಪೀಠ ಗ್ರಾಮದ ಆಕಾರಬಂಧಿನಂತೆ 6,213 ಎಕರೆ 25 ಗುಂಟೆ ಆಸ್ತಿ ಇದೆ. 104 ಎಕರೆ 39 ಗುಂಟೆ ಜಮೀನು ಮಂಜೂರಾಗಿದೆ. ದತ್ತಾತ್ರೇಯ ಪೀಠಕ್ಕೆ ಒಟ್ಟು 1861 ಎಕರೆ 31 ಗುಂಟೆ ಜಮೀನಿದೆ ಎಂದು ಸಚಿವರು ಹೇಳಿದರು.
ಅಕ್ರಮವಾಗಿ ಭೂ ಮಂಜೂರಾಗಿದ್ದರೆ ಅದರ ಬಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ತನಿಖೆ ನಡೆಸಲಾಗುವುದು. ಒಬ್ಬರಿಗೆ 6 ಎಕರೆಗಿಂತ ಹೆಚ್ಚು ಮಂಜೂರಾಗಿರುವ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸಿ.ಟಿ.ರವಿ, ಕಂದಾಯ ಹಾಗೂ ಮುಜರಾಯಿ ಇಲಾಖೆಯ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಸದಸ್ಯ ಡಿ.ಟಿ.ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಮುಜರಾಯಿ ಸಚಿವರು, ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವ್ಯಾಪ್ತಿಗೊಳಪಡುವ ಅಧಿಸೂಚಿತ ಸಂಸ್ಥೆಗಳಲ್ಲಿ ಭಕ್ತರು ನೀಡಿರುವ ಕಾಣಿಕೆ, ಹರಕೆ ಸೇವೆ ಇತ್ಯಾದಿ ಮೂಲಕ ಬರುವ ಆದಾಯವನ್ನು ಆಯಾ ದೇವಾಲಯಗಳ ನಿಧಿಗೆ ಜಮೆ ಮಾಡಲಾಗುತ್ತಿದೆ. ದೇವಾಲಯದ ಯಾವುದೇ ಆದಾಯವನ್ನು ಸರ್ಕಾರದ ಬೊಕ್ಕಸಕ್ಕೆ ಸಂದಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎ ವರ್ಗದ ದೇವಾಲಯಗಳಲ್ಲಿ 2023-24ರಲ್ಲಿ 74,391.68 ಲಕ್ಷ ರೂ. ಹಾಗೂ ಬಿ ವರ್ಗದ ದೇವಾಲಯಗಳಲ್ಲಿ 3,481.81 ಲಕ್ಷ ರೂ. ಆದಾಯ ಬಂದಿರುತ್ತದೆ ಎಂದು ಹೇಳಿದರು.
ಜೆಡಿಎಸ್ ಸದ್ಯ ಟಿ.ಎನ್.ಜವರಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ, ಧಾರ್ಮಿಕ ದತ್ತಿ ಇಲಾಖೆಗಳು ಹೊಂದಿರುವ ಚಿರಾಸ್ತಿಗಳನ್ನು ಸಂಬಂಧಿಸಿದ ದೇವರ ಹೆಸರಿಗೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ದೇವಾಲಯದ ಹೆಸರನ್ನು ಮ್ಯುಟೇಷನ್ ಮತ್ತು ಆರ್‌ಟಿಸಿಯಲ್ಲಿ ನಮೂದಿಸುವಾಗ ದೇವಸ್ಥಾನದ ಹೆಸರು ಹಾಗೂ ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ಸರ್ಕಾರ ಎಂದು ನಮೂದಿಸಲು ಆದೇಶಿಸಲಾಗಿದೆ.
ದೇವಾಲಯದ ಆಸ್ತಿಗಳ ಸರ್ವೇ ಕಾರ್ಯ ಕೈಗೊಂಡು ಜಮೀನುಗಳನ್ನು ದೇವಾಲಯಗಳ ಹೆಸರಿಗೆ ದಾಖಲಿಸುವ ಕಾರ್ಯ ಜಾರಿಯಲ್ಲಿದೆ. ಒಮೆ ದೇವಸ್ಥಾನದ ಭೂಮಿ ಎಂದು ಪರಿಗಣಿಸಿದ ನಂತರ ಯಾವುದೇ ಕಾಲದಲ್ಲೂ ದೇವಸ್ಥಾನದ ಭೂಮಿಯೇ ಆಗಿರುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಮೇ ಒಳಗೆ ಪೂರ್ಣ:
ತಿರುಪತಿಯಲ್ಲಿ ನವೀಕರಣ ಹಾಗೂ ನಿರ್ಮಾಣವಾಗುತ್ತಿರುವ ಕರ್ನಾಟಕ ಸರ್ಕಾರದ ಛತ್ರ ಮತ್ತು ಅತಿಥಿಗೃಹಗಳ ಕಾಮಗಾರಿಗಳನ್ನು ಮೇ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದರು.
ಕಾಮಗಾರಿ ಪೂರ್ಣಗೊಂಡ ಬಳಿಕ ಟೆಂಡರ್ ಕರೆದು ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗುವುದು. 4ಸ್ಟಾರ್ ಹೋಟೆಲ್‌ಗಳ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ತಿರುಪತಿಯಲ್ಲಿರುವ ಶೇ.60ರಷ್ಟು ಕೊಠಡಿಗಳನ್ನು ಆನ್‌ಲೈನ್ ಮೂಲಕ ಒದಗಿಸಲಾಗುವುದು. ಉಳಿದ 40ರಷ್ಟನ್ನು ಕರ್ನಾಟಕದ ಭಕ್ತರಿಗೆ ಮೀಸಲಿಡಲಾಗುವುದು ಎಂದರು.
ಹೊರರಾಜ್ಯಗಳಲ್ಲಿರುವ ಕರ್ನಾಟಕ ರಾಜ್ಯದ ಛತ್ರ, ಆಸ್ತಿಗಳಿಂದ 2024-25ನೇ ಸಾಲಿನಲ್ಲಿ 11,54,61,170 ರೂ. ಆದಾಯ ಬಂದಿದೆ. ಈ ಛತ್ರಗಳಿಂದ ಬರುವ ಆದಾಯವು ಸರ್ಕಾರಕ್ಕೆ ಸಂದಾಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.