ಬೆಂಗಳೂರು,ಮಾ.25- ಬೆಸ್ಕಾಂ ಸೇರಿ ಎಲ್ಲಾ ಎಸ್ಕಾಂಗಳ ಸಾರ್ಟ್ ಮೀಟರ್ ಖರೀದಿ ಟೆಂಡರ್‌ನಲ್ಲಿ ಸುಮಾರು 15,568 ಕೋಟಿ ಮೊತ್ತದ ಹಗರಣ ನಡೆದಿದ್ದು, ಇದು ರಾಜ್ಯ ಕಂಡ ಬಹುದೊಡ್ಡ ಹಗರಣವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಕೆಇಆರ್‌ಸಿ ಮಾರ್ಗಸೂಚಿ ಪ್ರಕಾರ ಸಾರ್ಟ್ ಮೀಟರ್ ಕಡ್ಡಾಯಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ತಾತ್ಕಾಲಿಕ ಗ್ರಾಹಕರಿಗೆ ಮಾತ್ರ ಕಡ್ಡಾಯ ಮಾಡಬಹುದೇ ಹೊರತು ಹೊಸ ಗ್ರಾಹಕರಿಗೆ ಕಡ್ಡಾಯ ಮಾಡುವಂತಿಲ್ಲ ಎಂಬ ನಿಯಮವಿದೆ. ಈಗ ಬೆಸ್ಕಾಂ ಮತ್ತು ಎಲ್ಲಾ ಎಸ್ಕಾಂ ವ್ಯಾಪ್ತಿಗಳಲ್ಲಿ ಸಾರ್ಟ್ ಮೀಟರ್ ಕಡ್ಡಾಯಗೊಳಿಸಿ ಇದರ ಖರೀದಿ ಟೆಂಡರ್‌ನಲ್ಲಿ 15,568 ಕೋಟಿ ರೂ. ಮೊತ್ತದ ಹಗರಣ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಶಾಸಕ ಎಸ್.ಆರ್.ವಿಶ್ವನಾಥ್, ಬೆಂಗಳೂರು ಸೆಂಟ್ರಲ್ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಅವರುಗಳು ಸಾರ್ಟ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಪೂರಕವಾದ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಶಾಸಕ ಅಶ್ವಥ್ ನಾರಾಯಣ ಮಾತನಾಡಿ, ಸಾರ್ಟ್ ಮೀಟರ್‌ಗಳ ಖರೀದಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ನಾನು ವಿಶ್ವನಾಥ್ ಇಬ್ಬರೂ ಸದನದಲ್ಲೂ ಇದರ ಬಗ್ಗೆ ಮಾತಾಡಿದ್ದೇವೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರ ಅವ್ಯವಹಾರ ಮಾಡಿದೆ. ನಮ ಆರೋಪ ಬಗ್ಗೆ ಸದನದಲ್ಲೇ ಉತ್ತರ ಕೊಡುತ್ತೇನೆ ಎಂದು ಇಂಧನ ಸಚಿವರು ಹೇಳಿದ್ದರು. ಆದರೆ ಸದನಕ್ಕೆ ಅಂದು ಬಂದರೂ ಸಚಿವ ಜಾರ್ಜ್ ನಾಪತ್ತೆ ಆಗಿದ್ದರು. ನಮ ಆರೋಪಗಳಿಗೆ ಸಚಿವರು ಉತ್ತರ ಕೊಡಲಿಲ್ಲ. ಆದರೆ ನಿನ್ನೆ ಅಧಿಕಾರಿಗಳ ಮೂಲಕ ಹಗರಣ ಆಗಿಲ್ಲವೆಂದು ಸರ್ಕಾರ ಹೇಳಿಸಿದೆ ಎಂದು ಕಿಡಿಕಾರಿದರು.
ಬೆಸ್ಕಾಂ ಸೇರಿ ಎಲ್ಲ ಎಸ್ಕಾಂಗಳ ಸಾರ್ಟ್ ಮೀಟರ್ ಖರೀದಿ ಟೆಂಡರ್‌ನಲ್ಲಿ 15,568 ಕೋಟಿ ಮೊತ್ತದ ಹಗರಣವಾಗಿದೆ. ಇದೊಂದು ರಾಜ್ಯದ ದೊಡ್ಡ ಹಗರಣ. ಸಾರ್ಟ್ ಮೀಟರ್ ಕಡ್ಡಾಯನಾ? ಕೆಇಆರ್‌ಸಿ ಗೈಡ್‌ಲೈನ್‌್ಸ ಪ್ರಕಾರ ಸಾರ್ಟ್ ಮೀಟರ್ ಕಡ್ಡಾಯ ಮಾಡುವಂತಿಲ್ಲ. ತಾತ್ಕಾಲಿಕ ಗ್ರಾಹಕರಿಗೆ ಮಾತ್ದ ಕಡ್ಡಾಯ ಮಾಡಬಹುದೇ ಹೊರತು ಹೊಸ ಗ್ರಾಹಕರಿಗೆ ಕಡ್ಡಾಯ ಮಾಡಿವಂತಿಲ್ಲ ಎಂದರು.
ಸಾರ್ಟ್‌ಮೀಟರ್‌ಗಳ ಖರೀದಿಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆಯಾಗಿದೆ. ರಾಜಶ್ರೀ ಕಂಪೆನಿಗೆ ಅನುಕೂಲವಾಗುವಂತೆ ಟೆಂಡರ್ ಕರೆಯಲಾಗಿದೆ. ನಿಯಮಗಳ ಪ್ರಕಾರ ಬಿಡ್ ಸಾಮರ್ಥ್ಯ ಇಲ್ಲದೇ ಟೆಂಡರ್ ಕರೆಯುವಂತಿಲ್ಲ. ಕೆಟಿಪಿಪಿ ಕಾಯ್ದೆ ಪ್ರಕಾರ ಟೆಂಡರ್ ಪಡೆದುಕೊಳ್ಳುವ ಸಂಸ್ಥೆ ಬಳಿ 6800 ಕೋಟಿ ಬಿಡ್ ಸಾಮರ್ಥ್ಯ ಮೊತ್ತ ಇರಬೇಕು ಎಂದು ಹೇಳಿದರು.
ಆದರೆ ಟೆಂಡರ್ ಪಡೆದ ರಾಜಶ್ರೀ ಕಂಪೆನಿ ಬಳಿ ಇದ್ದಿದ್ದು ಕೇವಲ 400 ಕೋಟಿ ರೂ. ಅಷ್ಟೇ. ಟೆಂಡರ್ ಮೌಲ್ಯ 1920 ಕೋಟಿ ಇಡಬೇಕಿತ್ತು. ಆದರೆ ಟೆಂಡರ್‌ನಲ್ಲಿಟ್ಟಿದ್ದು ಕೇವಲ 107 ಕೋಟಿ ರೂ. ಬ್ಲಾಕ್‌ಲಿಸ್ಟ್‌ನಲ್ಲಿರುವ ಸಂಸ್ಥೆಗೆ ಟೆಂಡರ್ ಕೊಡುವಂತಿಲ್ಲ ಎಂದು ಕೆಟಿಟಿಪಿ ಕಾಯ್ದೆಯಲ್ಲಿದೆ. ಆದರೆ ಉತ್ತರಪ್ರದೇಶದಲ್ಲಿ ಬ್ಲಾಕ್‌ಲಿಸ್ಟ್ ಆಗಿದ್ದ ಬಿಸಿಐಟಿಎಸ್ ಕಂಪೆನಿಗೆ ಸಾಫ್‌್ಟವೇರ್ ಟೆಂಡರ್ ಕೊಟ್ಟಿರುತ್ತಾರೆ ಎಂದು ಉಲ್ಲೇಖಿಸಿದರು.
ಕೇಂದ್ರದ ಗೈಡ್‌ಲೈನ್‌್ಸ ಪ್ರಕಾರ 1 ಲಕ್ಷ ಸಾರ್ಟ್‌ಮೀಟರ್ ಸಾಕು. ಆದರೆ ರಾಜ್ಯ ಸರ್ಕಾರ 10 ಲಕ್ಷ ಸಾರ್ಟ್‌ಮೀಟರ್ ಕಡ್ಡಾಯ ಮಾಡಿದೆ. ಸಾರ್ಟ್‌ಮೀಟರ್‌ಗಳನ್ನು ಮೊದಲು ವಿದ್ಯುತ್ ಫೀಡರ್‌ಗಳಲ್ಲಿ ಅಳವಡಿಕೆ ಮಾಡಬೇಕು. ನಂತರ ಹಳೆಯ ಗ್ರಾಹಕರ ಮನೆಗಳಿಗೆ ಅಳವಡಿಕೆ ಮಾಡಬೇಕು, ಇದರ ನಂತರ ಹೊಸ ಗ್ರಾಹಕರಿಗೆ ಅಳವಡಿಸಬೇಕು. ಈ ಹಂತಗಳನ್ನು ಅನುಸರಿಸದೇ ಏಕಾಏಕಿ ಹೊಸ ಗ್ರಾಹಕರಿಗೆ ಸಾರ್ಟ್‌ಮೀಟರ್ ಕಡ್ಡಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಸಾರ್ಟ್‌ಮೀಟರ್‌ಗಳ ದರಗಳಲ್ಲಿ ಬೇರೆ ರಾಜ್ಯಗಳಿಗೂ ನಮಗೂ ಬಹಳ ವ್ಯತ್ಯಾಸ ಇದೆ. ಒಂದು ಮೀಟರ್‌ಗೆ ಮೊದಲೇ ನಮಲ್ಲಿ 8160 ರೂ. ತೆಗೆದುಕೊಳ್ಳುತ್ತಾರೆ. ನಮಲ್ಲಿ ತಿಂಗಳಿಗೆ ಕೊಡುವ ದರ ಹತ್ತು ವರ್ಷಗಳಿಗೆ ಲೆಕ್ಕ ಹಾಕಿದರೆ ಪ್ರತೀ ಮೀಟರ್‌ಗೆ 17 ಸಾವಿರ ರೂ ಆಗುತ್ತದೆ. ಬೇರೆ ರಾಜ್ಯಗಳಲ್ಲಿ 7400 ರೂ. 9260 ರೂ. ಆಗಲಿದೆ. ಸಾರ್ಟ್ ಮೀಟರ್ ದರ, ಸಾಫ್‌್ಟವೇರ್ ನಿರ್ವಹಣೆ ದರ ಹಾಗೂ ಸಿಬ್ಬಂದಿ ವೇತನ ದರಗಳನ್ನು ಸೇರಿಸಿ ಹತ್ತು ವರ್ಷಕ್ಕೆ ಜನರಿಂದ ಸಂಗ್ರಹ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಾರ್ಟೀಟರ್‌ಗೆ ಗ್ಲೋಬಲ್ ಟೆಂಡರ್ ಕರೆಯಬೇಕಿತ್ತು. ಆದರೆ ಇವರು ಕರೆದಿಲ್ಲ. ಭಂಡತನದಿಂದ ಕಣುಂದೆ ಸುಳ್ಳು ಹೇಳಿ ಅವ್ಯವಹಾರ ಮಾಡಿದ್ದಾರೆ. ರಾಜಶ್ರೀ ಸಹ್ಯಾದ್ರಿ ಹಾಗೂ ವಿಆರ್ ಪಾಟೀಲ್ ಕಂಪನಿಗಳು ಬಿಡ್ ಹಾಕಿದ್ದವು. ಇವರ ಟೆಂಡರ್ ದಾಖಲೆ ಪ್ರಕಾರ ಒಂದೇ ಒಂದು ಕಂಪನಿ ಅರ್ಹವಾಗಿದ್ದು, ಅದೇ ರಾಜಶ್ರೀ ಕಂಪನಿ ಎಂದಿದ್ದಾರೆ. ನಾವು ರಾಜಕೀಯ ಪ್ರೇರಿತ ಆರೋಪ ಮಾಡುತ್ತಿಲ್ಲ. ಸತ್ಯ ಹೇಳಿದ್ದೀವಿ. ಸರ್ಕಾರ ಎಚ್ಚೆತ್ತುಕೊಳ್ಳಬೇಕು, ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಬಿಸಿ ಮುಟ್ಟಿಸಬೇಕಾಗುತ್ತದೆ. ಹಗಲು ದರೋಡೆ ನಿಲ್ಲಿಸಬೇಕು, ಈಗ ಆಗಿರುವ ಟೆಂಡರ್ ರದ್ದು ಮಾಡಬೇಕು. ಮತ್ತೆ ನಿಯಮಾನುಸಾರ ಟೆಂಡರ್ ಕರೆಯಲಿ ಎಂದು ಅವರು ಆಗ್ರಹಿಸಿದರು.