Friday, November 22, 2024
Homeರಾಜ್ಯಬೆಂಗಳೂರಿನ ಸಂಚಾರದಟ್ಟಣೆಯನ್ನು ಸುಧಾರಿಸಲು 150 ಕಿ.ಮೀ. ಹೊಸ ರಸ್ತೆ ಯೋಜನೆ

ಬೆಂಗಳೂರಿನ ಸಂಚಾರದಟ್ಟಣೆಯನ್ನು ಸುಧಾರಿಸಲು 150 ಕಿ.ಮೀ. ಹೊಸ ರಸ್ತೆ ಯೋಜನೆ

ಬೆಂಗಳೂರು, ಜೂ.27– ನಾಡಪ್ರಭು ಕೆಂಪೇಗೌಡ ನಿರ್ಮಿತ ಮಹಾನಗರಿ ಬೆಂಗಳೂರಿನ ಸಂಚಾರದಟ್ಟಣೆಯನ್ನು ಸುಧಾರಿಸಲು 150 ಕಿ.ಮೀ.ನಷ್ಟು ಹೊಸ ಕಾರ್ಯಯೋಜನೆಯನ್ನು ಸಿದ್ಧಗೊಳಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಉತ್ಸವದಲ್ಲಿ ಮಾತನಾಡಿದ ಅವರು, 150 ಕಿ.ಮೀ. ಯೋಜನೆಯಲ್ಲಿ ಮೇಲ್ಸೇತುವೆ, ಕೆಳ ಸೇತುವೆ ಹಾಗೂ ಸುರಂಗ ಮಾರ್ಗದ ರಸ್ತೆಗಳು ಒಳಗೊಂಡಿರುತ್ತವೆ ಎಂದು ಹೇಳಿದರು.

ಪೆರಿಫೆರಲ್‌ ರಿಂಗ್‌ ರಸ್ತೆ ನೆನೆಗುದಿಗೆ ಬಿದ್ದಿದೆ. ಏಳೆಂಟು ಬಾರಿ ಟೆಂಡರ್‌ ಕರೆದರೂ ಅದನ್ನು ಕೈಗೆತ್ತಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಯೋಜನೆಯ ಸ್ವರೂಪವನ್ನು ಬದಲಾಯಿಸಿ ಬ್ಯುಸಿನೆಸ್‌‍ ಕಾರಿಡಾರನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದರು.

ಬ್ರ್ಯಾಂಡ್‌ ಬೆಂಗಳೂರಿನ ಮೂಲಕ ಬೆಂಗಳೂರಿಗೆ ಹೊಸ ಸ್ವರೂಪ ನೀಡಲು ಕ್ರಮ ಕೈಗೊಳ್ಳಲಾಗಿದೆ. 70 ಸಾವಿರ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು. ನಾಡಪ್ರಭು ಕೆಂಪೇಗೌಡರ ಕುರಿತು ಶಾಲಾ-ಕಾಲೇಜುಗಳಲ್ಲಿ ಚರ್ಚಾಗೋಷ್ಠಿ, ಅಧ್ಯಯನ ಹಾಗೂ ಇತರ ಚಟುವಟಿಕೆಗಳಿಗೆ ಪ್ರತೀ ತಾಲ್ಲೂಕಿಗೆ ಬಿಬಿಎಂಪಿಯಿಂದ 1 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ ಎಂದರು.

ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎಂಬುದು ಮುಖ್ಯ ಅಲ್ಲ. ಅವರು ಯಾವ ರೀತಿ ಜನಾನುರಾಗಿಯಾಗಿ ಕೆಲಸ ಮಾಡುತ್ತಾರೆ ಎಂಬುದಕ್ಕೆ ಕೆಂಪೇಗೌಡರು ಉದಾಹರಣೆ ಎಂದರು. ಬೆಂಗಳೂರಿನಲ್ಲಿ ಒಂದು ಕೋಟಿ ನಲ್ವತ್ತು ಲಕ್ಷ ಜನ ವಾಸಿಸುತ್ತಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ.25 ರಷ್ಟು ಸಾಂದ್ರತೆ ನಗರದಲ್ಲಿದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು. ಅವಕಾಶಗಳು ಯಾರನ್ನೂ ಹುಡುಕಿಕೊಂಡು ಬರುವುದಿಲ್ಲ. ಸಂಘಸಂಸ್ಥೆಗಳು ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

RELATED ARTICLES

Latest News