ಮೈಸೂರು, ಅ.6- ವಿಶ್ವ ವಿಖ್ಯಾತ ಮೈಸೂರು ದಸರಾದ ವಿಶೇಷ ಆಕರ್ಷಣೀಯವಾಗಿ ಇದೇ ಮೊದಲ ಬಾರಿಗೆ ಇಂದಿನಿಂದ ಬೃಹತ್ ಡ್ರೋಣ್ ಪ್ರದರ್ಶನ ನಡೆಯಲಿದೆ. ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಇಂದಿನಿಂದ 12ರ ವರೆಗೆ ಪ್ರತಿದಿನ ರಾತ್ರಿ 8 ಗಂಟೆಯಿಂದ 8.15ರ ವರೆಗೆ ಡ್ರೋಣ್ ಪ್ರದರ್ಶನ ನಡೆಯಲಿದ್ದು, ಮೊದಲ ಎರಡು ದಿನಗಳು ಉಚಿತ ಪ್ರವೇಶವಿದೆ.
ಎಲ್‌ಇಡಿ ಬಲ್‌್ಪ ಅಳವಡಿಸಿರುವ 1500 ಡ್ರೋಣ್‌ಗಳನ್ನು ಆಕಾಶದೆತ್ತರಕ್ಕೆ ಹಾರಿಸಿ ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಜಂಬೂ ಸವಾರಿ ಮೆರವಣಿಗೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳು, ಕಲಾಕೃತಿಗಳನ್ನು ವಿನ್ಯಾಸ ಮಾಡಲಾಗಿದೆ ಎಂದು ದಸರಾ ದೀಪಾಲಂಕಾರ ಉಪಸಮಿತಿ ಅಧ್ಯಕ್ಷ ಸಯ್ಯದ್ ಇಕ್ಬಾಲ್ ತಿಳಿಸಿದ್ದಾರೆ.
ಈಗಾಗಲೇ ಅರಮನೆ ನಗರಿ ಆಕರ್ಷಕ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಡ್ರೋಣ್ ಪ್ರದರ್ಶನ ಮತ್ತಷ್ಟು ಮೆರುಗು ನೀಡಲಿದ್ದು, ಮೈಸೂರಿನ ಅಂದ ಮತ್ತಷ್ಟು ಹೆಚ್ಚಲಿದೆ.
ಪ್ರತಿಯೊಂದು ರಸ್ತೆ ಹಾಗೂ ವೃತ್ತಗಳಿಗೂ ದೀಪಾಲಂಕಾರ ಮಾಡಲಾಗಿದ್ದು, ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿದ್ಯುತ್ ದೀಪಾಲಂಕಾರದ ಜತೆಗೆ ಸೆಸ್ಕ್ ವತಿಯಿಂದ ವಿದ್ಯುತ್ ರಥ ನಿರ್ಮಿಸಲಾಗಿದ್ದು, ಈ ರಥ ನಗರದ ಹಲವೆಡೆ ಸಂಚರಿಸಲಿದೆ. ಇದರಲ್ಲಿ ವಿದ್ಯುತ್ ಸುರಕ್ಷತೆ, ಸೋಲಾರ್ ಬಳಕೆ ಹಾಗೂ ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.