Sunday, June 30, 2024
Homeರಾಜ್ಯನಾಳೆ ಪರಿಷತ್‌ನ 17 ನೂತನ ಪರಿಷತ್‌ ಸದಸ್ಯರ ಪ್ರಮಾಣ ವಚನ

ನಾಳೆ ಪರಿಷತ್‌ನ 17 ನೂತನ ಪರಿಷತ್‌ ಸದಸ್ಯರ ಪ್ರಮಾಣ ವಚನ

ಬೆಂಗಳೂರು, ಜೂ.23-ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾಗಿರುವ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಒಟ್ಟು 17 ಮಂದಿ ವಿಧಾನ ಪರಿಷತ್‌ನ ನೂತನ ಸದಸ್ಯರು ನಾಳೆ ಪ್ರಮಾವಣ ವಚನ ಸ್ವೀಕರಿಸಲಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ನೂತನ ಸದಸ್ಯರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ.ವಿಧಾನಸಭೆಯ ಸದಸ್ಯರಿಂದ 11 ಮಂದಿ, ಶಿಕ್ಷಕರ ಕ್ಷೇತ್ರಗಳಿಂದ ಮೂವರು ಹಾಗೂ ಪದವೀಧರ ಕ್ಷೇತ್ರಗಳಿಂದ ಮೂವರು ಸದಸ್ಯರು ಚುನಾಯಿತರಾಗಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌‍ನಿಂದ ಸ್ಫರ್ಧಿಸಿ ಸಚಿವ ಎನ್‌.ಎಸ್‌‍.ಬೋಸರಾಜು, ಕೆ.ಗೋವಿಂದರಾಜು, ಎ.ವಸಂತಕುಮಾರ್‌, ಡಾ.ಯತೀಂದ್ರ ಸಿದ್ದರಾಮಯ್ಯ, ಐವಾನ್‌ ಡಿಸೋಜ, ಜಗದೇವ ಗುತ್ತೇದಾರ್‌, ಬಲ್ಕೀಸ್‌‍ ಬಾನು, ಡಿ.ಟಿ.ಶ್ರೀನಿವಾಸ, ರಾಮೋಜಿಗೌಡ, ಡಾ. ಚಂದ್ರಶೇಖರ ಬಸವರಾಜ ಪಾಟೀಲ ಸೇರಿದಂತೆ 10 ಮಂದಿ ಚುನಾಯಿತರಾಗಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿ ಸಿ.ಟಿ.ರವಿ, ಎನ್‌.ರವಿಕುಮಾರ್‌, ಮೂಳೆ ಮಾರುತಿರಾವ್‌, ಡಾ.ಧನಂಜಯ ಸರ್ಜಿ ಸೇರಿದಂತೆ ನಾಲ್ಕು ಮಂದಿ ಆಯ್ಕೆಯಾಗಿದ್ದಾರೆ.

ಜೆಡಿಎಸ್‌‍ನಿಂದ ಟಿ.ಎನ್‌.ಜವರಾಯಿಗೌಡ, ಎಸ್‌‍.ಎಲ್‌.ಭೋಜೇಗೌಡ, ಕೆ. ವಿವೇಕಾನಂದ ಸೇರಿದಂತೆ ಮೂವರು ಚುನಾಯಿತರಾಗಿದ್ದಾರೆ.
ಆಡಳಿತ ಪಕ್ಷದ 10 ಮಂದಿ ಹಾಗೂ ವಿರೋಧ ಪಕ್ಷಗಳ 7 ಮಂದಿ ಸದಸ್ಯತ್ವದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೂರು ರಾಜಕೀಯ ಪಕ್ಷಗಳ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವುದರಿಂದ ಸಚಿವರು, ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು, ನೂತನ ಸದಸ್ಯರ ಕುಟುಂಬದವರು, ಅಭಿಮಾನಿಗಳು ಹಾಜರಿದ್ದು, ಅಭಿನಂದಿಸಲಿದ್ದಾರೆ.

RELATED ARTICLES

Latest News