ಬೆಂಗಳೂರು, ಮಾ.21- ಹನಿಟ್ರ್ಯಾಪ್ ಪ್ರಕರಣ ಕುರಿತಂತೆ ಗದ್ದಲ ಎಬ್ಬಿಸಿ, ಸದನದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಬಿಜೆಪಿಯ 18 ಮಂದಿ ಶಾಸಕರನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಆರು ತಿಂಗಳವರೆಗೂ ಅಮಾನತುಗೊಳಿಸಿದ್ದಾರೆ.ಇಂದು ಮಧ್ಯಾಹ್ನ ಬೋಜನ ವಿರಾಮದ ಬಳಿಕ ಕಲಾಪ ಸಮಾವೇಶಗೊಂಡಾಗ, ಬಿಜೆಪಿಯ ಸದಸ್ಯರು ಕೇಸರಿ ಶಾಲು ಧರಿಸಿ ಹಾಜರಾದರು. ಯಥಾರೀತಿ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ಧರಣಿ ಆರಂಭಿಸಿ, ಘೋಷಣೆ ಕೂಗಿದರು. ಸ್ವಸ್ಥಾನಗಳಿಗೆ ತೆರಳಿ ಕಲಾಪ ನಡೆಸಲು ಅವಕಾಶ ಮಾಡಿಕೊಡುವಂತೆ ಸಭಾಧ್ಯಕ್ಷರು ಮನವಿ ಮಾಡಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸರ್ಕಾರ ಹನಿಟ್ರ್ಯಾಪ್ ಗೆ ಒಳಗಾದ ಸಚಿವರ ಮಾತು ಕೇಳದೆ ಕಣ್ಣು ಮುಚ್ಚಿ ಕುಳಿತಿದೆ. ಸರ್ಕಾರ ಸತ್ತು ಹೋಗಿದೆ. ಯಾರು ಸಚಿವ ಕೆ.ಎನ್.ರಾಜಣ್ಣ ಅವರ ಬೆಂಬಲಕ್ಕಿಲ್ಲ. ಸಹಾಯ ಮಾಡದಿದ್ದ ಮೇಲೆ ಹನಿಟ್ರ್ಯಾಪ್ ಕುರಿತು ಸಚಿವರು ಹೇಳಿಕೆ ನೀಡಲು ಸಭಾಧ್ಯಕ್ಷರು ಏಕೆ ಅನುಮತಿ ನೀಡಿದರು ಎಂದು ಪ್ರಶ್ನಿಸಿದರು.
ಸಭಾಧ್ಯಕ್ಷರು, ಈ ಪೀಠದಲ್ಲಿ ಕುಳಿತು ಮಾತನಾಡುವುದು ದೊಡ್ಡ ಗೌರವ. ಪ್ರತಿಯೊಬ್ಬರು ಪೀಠಕ್ಕೆ ಗೌರವ ನೀಡಬೇಕು. ಯಾರು ಪೀಠಕ್ಕಿಂತ ದೊಡ್ಡವರಲ್ಲ. ವೈಯಕ್ತಿಕ ಭಾವನೇ ಪೀಠಕ್ಕಿಂತ ಮುಖ್ಯವಲ್ಲ. ಸಂವಿಧಾನದ ಪಾವಿತ್ರ್ಯತೆ ಕಾಪಾಡಬೇಕು. ಸದನ ಅತ್ಯಂತ ಪಾವಿತ್ರ್ಯವಾದದ್ದು, ಸದನದಲ್ಲಿ ಅಗೌರವಯುತವಾಗಿ ನಡೆದುಕೊಂಡರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಯು.ಟಿ.ಖಾದರ್ ಕ್ಷಮಿಸುತ್ತಾರೆ. ಆದರೆ ಪೀಠ ಸಹಿಸುವುದಿಲ್ಲ ಎಂದು ಹೇಳಿದರು.
ಶಾಸಕರಾದ ದೊಡ್ಡಣ್ಣಗೌಡ ಹೆಚ್.ಪಾಟೀಲ್, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಎಸ್.ಆರ್.ವಿಶ್ವನಾಥ್, ಬಸವರಾಜ್, ಎಂ.ಆರ್.ಪಾಟೀಲ್ , ಚೆನ್ನಬಸಪ್ಪ, ಬಿ.ಸುರೇಶ್ ಗೌಡ, ಉಮಾನಾಥ್ ಕೋಟ್ಯಾನ್, ಶರಣು ಸಲಗಾರ್, ಡಾ. ಶೈಲೇಂದ್ರ ಬೆಲ್ದಾಳೆ, ಸಿ.ಕೆ.ರಾಮಮೂರ್ತಿ, ಯಶ್ ಪಾಲ್ ಸುವರ್ಣ, ಬಿ.ಪಿ.ಹರೀಶ್, ಡಾ.ಭರತ್ ಶೆಟ್ಟಿ, ಮುನಿರತ್ನ, ಬಸವರಾಜ್ ಮುತ್ತಿಮುಡ್, ಧೀರಜ್ ಮುನಿರಾಜು, ಡಾ. ಚಂದ್ರು ಲಮಾಣಿ ಅವರು ಪೀಠದ ಆದೇಶವನ್ನು ಲೆಕ್ಕಿಸದೆ ಅಶಿಸ್ತಿನಿಂದ ವರ್ತಿಸಿದ್ದಾರೆ ಎಂದು ಸಭಾಧ್ಯಕ್ಷರು ಹೆಸರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ಪೀಠದ ಆದೇಶವನ್ನು ಧಿಕ್ಕರಿಸಿ, ಕಾಗದ ತೂರಿ, ಗೂಂಡಾಗಿರಿ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಸದನದಲ್ಲಿ ಪರಸ್ಪರ ಗೌರವ, ಪ್ರೀತಿ ಇರಬೇಕು. ಅದನ್ನು ಧಿಕ್ಕರಿಸಿ ಅನಾಗರೀಕ ವರ್ತನೆ ತೋರಿಸಿರುವ 18 ಜನರನ್ನು ಸಭಾಧ್ಯಕ್ಷರು ಹೆಸರಿಸಿದ್ದಾರೆ. ಇದನ್ನು ಬೆಂಬಲಿಸುತ್ತೇನೆ. ತಕ್ಷಣದಿಂದ ಜಾರಿಗೆ ಬರುವಂತೆ ಆರು ತಿಂಗಳವರೆಗೆ ಸದನಕ್ಕೆ ಬರದಂತೆ ತಡೆ ಹಿಡಿಯಬೇಕು ಎಂಬ ಸಲಹೆ ನೀಡಿದರು. ಸಚಿವರ ಪ್ರಸ್ತಾವನೆಯನ್ನು ಸಭಾಧ್ಯಕ್ಷರು ಮತಕ್ಕೆ ಹಾಕಿದಾಗ ಧ್ವನಿ ಮತದ ಮೂಲಕ ಪ್ರಸ್ತಾವನೆ ಅಂಗೀಕಾರಗೊಂಡಿದೆ ಎಂದು ಘೋಷಿಸಲಾಯಿತು.
ಪೀಠದ ಆದೇಶ ಉಲ್ಲಂಘಿಸಿ ಅಶಿಸ್ತಿನಿಂದ ನಡೆದುಕೊಂಡ 18 ಮಂದಿ ಶಾಸಕರನ್ನುಆರು ತಿಂಗಳ ವರೆಗೂ ಅಮಾನತು ಮಾಡಲಾಗಿದೆ. ಈ ಸದಸ್ಯರು ತಕ್ಷಣವೇ ಸದನದಿಂದ ಹೊರ ಹೋಗಬೇಕು ಎಂದು ಸಭಾಧ್ಯಕ್ಷರು ಆದೇಶಿಸಿದರು.
ಈ ನಡುವೆ ಆರ್.ಅಶೋಕ್, ಸುನೀಲ್ ಕುಮಾರ್ ಮತ್ತಿತರು ಹನಿಟ್ರ್ಯಾಪ್ ಮಾಡಿದವರನ್ನು ಮೊದಲು ಅಮಾನತು ಮಾಡಿ ಎಂದು ಆಗ್ರಹಿಸಿದರು. ಖುದ್ದು ಯು.ಟಿ.ಖಾದರ್ ಈ ಮೊದಲು ಶಾಸಕರಾಗಿದ್ದಾಗ ಅಮಾನತುಗೊಂಡಿದ್ದರು, ಈಗ ಸಭಾಧ್ಯಕ್ಷರಾಗಿ ಬೇರೆಯವರನ್ನು ಅಮಾನತು ಮಾಡುವುದು ಸೂಕ್ತ ಅಲ್ಲ ಎಂದು ಕಿಡಿಕಾರಿದರು. ನಂತರ ಕಲಾಪವನ್ನು 10 ನಿಮಿಷಗಳ ಕಾಲ ಸಭಾಧ್ಯಕ್ಷರು ಮುಂದೂಡಿದರು.