ಚೆನ್ನೈ, ಸೆ.22- ಭಾರತದ ಅನುಭವಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ (88ಕ್ಕೆ6) ಹಾಗೂ ರವೀಂದ್ರಾ ಜಾಡೇಜಾ (58ಕ್ಕೆ3) ಅವರ ಸ್ಪಿನ್ ಬಲೆಯಲ್ಲಿ ಸೆರೆಯಾದ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದಲ್ಲಿ 280 ರನ್‌ಗಳ ಬೃಹತ್ ಅಂತರದ ಸೋಲು ಕಂಡಿದ್ದು, ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ 12 ವರ್ಷಗಳಿಂದ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.
ಈ ಗೆಲುವಿನೊಂದಿಗೆ ಐಸಿಸಿ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಗವಾಗಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಬಳಗ ಇನ್ನೂ ಎರಡೂವರೆ ದಿನದ ಆಟ ಬಾಕಿ ಇರುವಾಗಲೇ 1-0 ಮುನ್ನಡೆ ಸಾಧಿಸಿದೆ.
ಬಾಂಗ್ಲಾಗೆ 515 ರನ್ ಕಠಿಣ ಗುರಿ:
ಮೊದಲ ಇನಿಂಗ್‌್ಸ 149 ರನ್‌ಗಳಿಗೆ ಸರ್ವಪತನವಾಗಿದ್ದ ಬಾಂಗ್ಲಾದೇಶ ದ್ವಿತೀಯ ಇನಿಂಗ್‌್ಸನಲ್ಲಿ ಪಂದ್ಯ ಗೆಲ್ಲಲು 515 ರನ್‌ಗಳ ಬೃಹತ್ ಮೊತ್ತ ಹಿಂಬಾಲಿಸಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿದ್ದ ಬಾಂಗ್ಲಾದೇಶ ಸೋಲಿನ ಸುಳಿಗೆ ಸಿಲುಕಿತ್ತು.
37ನೇ 5 ವಿಕೆಟ್ ಸಾಧನೆ:
ಇಂದು ಬೆಳಗ್ಗೆ ಆಟ ಮುಂದುವರೆಸಿದ ಬಾಂಗ್ಲಾ ನಾಯಕ ನೈಜುಲ್ ಹೊಸೆನ್ ಸ್ಯಾಂಟೊ (82 ರನ್) ಹಾಗೂ ಮಾಜಿ ನಾಯಕ ಶಕೀಬ್ ಅಲ್ ಹಸನ್ (25 ರನ್) ತಂಡಕ್ಕೆ ಆಸರೆಯಾಗುವ ಭರವಸೆ ಮೂಡಿಸಿದ್ದರಾದರೂ, ಲೋಕಲ್ ಬೌಲರ್ ರವಿಚಂದ್ರನ್ ಅಶ್ವಿನ್ ಪಂದ್ಯದ ಆರಂಭದಲ್ಲೇ ಶಕಿಬ್ ಅವರ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಘಾತ ನೀಡಿದರು.
ಮೊದಲ ಇನಿಂಗ್‌್ಸನಲ್ಲಿ ವಿಕೆಟ್ ಪಡೆಯುಲ್ಲಿ ಎಡವಿದ್ದ ರವಿಚಂದ್ರನ್ ಅಶ್ವಿನ್, ದ್ವಿತೀಯ ಇನಿಂಗ್‌್ಸನಲ್ಲಿ ತಮ ಸ್ಪಿನ್ ಮೋಡಿಯಿಂದ 88 ರನ್‌ಗಳಿಗೆ 6 ವಿಕೆಟ್ ಕಬಳಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 37ನೇ 5 ವಿಕೆಟ್ ಸಾಧನೆ ಮಾಡಿದ ಅಶ್ವಿನ್‌ಗೆ ಉತ್ತಮ ಸಾಥ್ ನೀಡಿದ ರವೀಂದ್ರಾ ಜಾಡೇಜಾ (58ಕ್ಕೆ 3) ಕೂಡ ಉತ್ತಮ ಬೌಲಿಂಗ್ ಸಂಘಟಿಸಿ ಬಾಂಗ್ಲಾ ಪಡೆಯನ್ನು 234 ರನ್‌ಗಳಿಗೆ ನಿಯಂತ್ರಿಸಿದರೆ, ಜಸ್‌ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು.
ಅಶ್ವಿನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ:
ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದು ಶತಕ ಸಿಡಿಸಿದ್ದ ರವಿಚಂದ್ರನ್ ಅಶ್ವಿನ್ (113 ರನ್) ಹಾಗೂ ದ್ವಿತೀಯ ಇನ್ನಿಂಗ್‌್ಸನಲ್ಲಿ 6 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಭಾರತದ ಪರ ರವೀಂದ್ರಾ ಜಾಡೇಜಾ ( 86 ರನ್, 5 ವಿಕೆಟ್), ಶುಭಮನ್ ಗಿಲ್ (119 ರನ್), ರಿಷಭ್ ಪಂತ್ (39 ರನ್ ಹಾಗೂ 109 ರನ್) ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.