ಬೆಂಗಳೂರು,ಸೆ.9- ಹಳದಿ ಫಲಕ ಟ್ಯಾಕ್ಸಿ ಚಾಲಕರ ಮತ್ತು ಆಟೋ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸುವ ವಿದ್ಯಾನಿಧಿ ಯೋಜನೆಗೆ 2,65,65,000 ರೂ.ಗಳನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಾರಿಗೆ ಇಲಾಖೆ ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಿ 2024-25ನೇ ಸಾಲಿಗೆ ವಿದ್ಯಾನಿಧಿ ಯೋಜನೆಗೆ ಈ ಹಣವನ್ನು ಬಿಡುಗಡೆ ಮಾಡಲಾಗಿದೆ.ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹದಡಿ 531.30 ಲಕ್ಷ ಅನುದಾನದಡಿಯಲ್ಲಿ 1 ಮತ್ತು 2ನೇ ಕಂತಿನ ಅನುದಾನವನ್ನು ಕೆಲವು ಷರತ್ತು ವಿಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಬಿಡುಗಡೆಯಾದ ಅನುದಾನದಿಂದ ವಿದ್ಯಾರ್ಥಿವೇತನ ಪಾವತಿಸಿರುವ ವಿವರವಾದ ಮಾಹಿತಿಯೊಂದಿಗೆ ಕಡ್ಡಾಯವಾಗಿ ಒದಗಿಸಬೇಕು.ಮುಂದಿನ ತ್ರೈಮಾಸಿಕ ಕಂತಿನ ಹಣ ಬಿಡುಗಡೆಗೂ ಮುನ್ನ ಈಗಾಗಲೇ ಬಿಡುಗಡೆಯಾಗಿರುವ ಅನುದಾನ ಬಳಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಬಿಡುಗಡೆಯಾದ ಅನುದಾನವನ್ನು ಇತರೆ ಕಾರ್ಯಕ್ರಮ ಅಥವಾ ಯೋಜನೆಗಳಿಗೆ ಬಳಸುವಂತಿಲ್ಲ ಎಂಬ ಷರತ್ತು ವಿಧಿಸಿ ಆದೇಶಿಸಲಾಗಿದೆ.