Tuesday, September 23, 2025
Homeರಾಜ್ಯವಿಜಯಪುರ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾದಿಂದ ಬಂದಿಳಿದ 2 ಅಗ್ನಿಶಾಮಕ ವಾಹನ

ವಿಜಯಪುರ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾದಿಂದ ಬಂದಿಳಿದ 2 ಅಗ್ನಿಶಾಮಕ ವಾಹನ

2 fire engines arrive at Vijayapura airport from Austria

ವಿಜಯಪುರ, ಸೆ.23-ಉದ್ಘಾಟನೆಗೆ ಸಜ್ಜಾಗಿರುವ ಇಲ್ಲಿನ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳು ದೂರದ ಆಸ್ಟ್ರಿಯಾದಿಂದ ಬಂದಿವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಅಗ್ನಿಶಾಮಕ ವಾಹನಗಳು ಕಂಪ್ಯೂಟರೀಕೃತವಾಗಿದ್ದು, ಜಾಗತಿಕ ಟೆಂಡರ್ ಅಡಿಯಲ್ಲಿ ಆಸ್ಟ್ರಿಯಾದಿಂದ ಪೂರೈಕೆಯಾಗಿವೆ. ಇವುಗಳ ಬೆಲೆ ಅಂದಾಜು 24 ಕೋಟಿ ರೂಪಾಯಿ. ಇವು ತುರ್ತು ಸಂದರ್ಭಗಳಲ್ಲಿ 160 ಮೀಟರಿನವರೆಗೂ ನೀರನ್ನು ಹಾಯಿಸಿ, ಬೆಂಕಿಯನ್ನು ನಂದಿಸುವ ಸಾಮರ್ಥ್ಯ ಹೊಂದಿವೆ.

- Advertisement -

ಈ ಮೂಲಕ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹೇಳಿದ್ದ ಮತ್ತೊಂದು ಅಗತ್ಯ ಪೂರೈಸಲಾಗಿದೆ ಎಂದಿದ್ದಾರೆ.
ಈ ಅಗ್ನಿಶಾಮಕ ವಾಹನಗಳು ನೆಲದ ಮೇಲಿನ ಬೆಂಕಿಯನ್ನು ನಂದಿಸಿಕೊಂಡು ವೇಗದಿಂದ ಮುನ್ನುಗ್ಗಬಲ್ಲವು. ವಿಜಯಪುರ ವಿಮಾನ ನಿಲ್ದಾಣದ ಮೂಲ ವಿನ್ಯಾಸದಲ್ಲಿ ಈ ಸೌಲಭ್ಯಗಳು ಇರಲಿಲ್ಲ. ಆಮೇಲೆ ಇದರ ಜತೆಗೆ ಇನ್ನೂ ಹಲವು ಅನುಕೂಲಗಳನ್ನು ಸೇರಿಸಲಾಯಿತು.

ಆಸ್ಟ್ರಿಯಾದಿಂದ ಹಡಗಿನಲ್ಲಿ ಮುಂಬೈಗೆ ಬಂದಿಳಿದ ಈ ವಾಹನಗಳನ್ನು, ಅಲ್ಲಿಂದ ಟ್ರಕ್ ಮೂಲಕ ವಿಜಯಪುರಕ್ಕೆ ಸಾಗಿಸಿಕೊಂಡು ಬರಲಾಗಿದೆ ಎಂದು ಅವರು ವಿವರಿಸಿದ್ದಾರೆ.ಅಗ್ನಿಶಾಮಕ ವಾಹನಗಳು ಬಂದಿರುವುದರಿಂದ ವಿಮಾನ ನಿಲ್ದಾಣ ಉದ್ಘಾಟನೆಯತ್ತ ಮತ್ತೊಂದು ಹೆಜ್ಜೆ ಮುಂದಿಡಲಾಗಿದೆ. ಪರಿಸರ ಸಂಬಂಧಿ ಅನುಮತಿ ಮಾತ್ರ ಬಾಕಿ ಇದ್ದು, ಅದನ್ನು ಪಡೆದುಕೊಳ್ಳಲು ಕೂಡ ಪ್ರಯತ್ನಿಸಲಾಗುತ್ತಿದೆ ಎಂದು ಪಾಟೀಲ ನುಡಿದಿದ್ದಾರೆ.

RELATED ARTICLES

Latest News