ಚಂಡೀಗಢ,ಏ.9 – ಪಂಜಾಬ್‌ನ ಬಿಜೆಪಿ ಮುಖಂಡ ಮನೋರಂಜನ್ ಕಾಲಿಯಾ ಅವರ ನಿವಾಸದ ಮೇಲೆ ಗ್ರೆನೇಡ್ ದಾಳಿ ನಡೆಸಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.ಜಲಂಧರ್‌ನ ಶಾಸ್ತ್ರಿ ಮಾರ್ಕೆಟ್ ಸಮೀಪ ಇರುವ ಕಾಲಿಯಾ ಅವರ ನಿವಾಸದ ಮೇಲೆ ಅಪರಿಚಿತ ವ್ಯಕ್ತಿಗಳು ನಿನ್ನೆ ನಸುಕಿನ ಜಾವ 1 ಗಂಟೆಯ ವೇಳೆಯಲ್ಲಿ ಗ್ರೆನೇಡ್ ದಾಳಿ ನಡೆಸಿದ್ದರು, ಕಾಲಿಯಾ ಅವರು ಈ ಸಂದರ್ಭದಲ್ಲಿ ಮನೆಯಲ್ಲಿದ್ದರು.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಬಳಿಕ ಇಬ್ಬರನ್ನು ಸೆರೆಹಿಡಿದ ಪೊಲೀಸರು ಇದು ಪಾಕಿಸ್ತಾನ ಮೂಲದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಬೇಹುಗಾರಿಕಾ ಸಂಸ್ಥೆ ಮತ್ತು ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್‌ನ ಸದಸ್ಯರ ಕೃತ್ಯವಾಗಿದ್ದು, ಪಂಜಾಬ್‌ನಲ್ಲಿ ಕೋಮುಗಲಭೆ ಸೃಷ್ಟಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.
ಅಪರಾಧ ಕೃತ್ಯಕ್ಕೆ ಬಳಸಿದ ಎಲೆಕ್ನಿಕ್ ರಿಕ್ಷಾವೊಂದನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅರ್ಪಿತ್ ಶುಕ್ಲಾ ಅವರು ಹೇಳಿದ್ದಾರೆ. ಘಟನೆ ನಡೆದ 12 ಗಂಟೆಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.
ಇದು ಪಾಕಿಸ್ತಾನದ ಐಎಸ್‌ಐ ನ ಭಾರಿ ಪಿತೂರಿಯಾಗಿದ್ದು, ಲಾರೆನ್ಸ್ ಬಿಷ್ಟೋಯ್ ಗ್ಯಾಂಗನ ಸಹರರ ಝೀಶನ್ ಅಖರ್ ಮತ್ತು ಪಾಕಿಸ್ತಾನದ ಪಾತಕಿ ಶೆಹಜಾದ್ ಭಟ್ಟಿ ಎಂಬುವರು ಈ ಸಂಚಿನ ರೂವಾರಿಗಳು ಎಂದು ಶುಕ್ಲಾ ವಿವರಿಸಿದ್ದಾರೆ.
ಆರೋಪಿಗಳಿಗೆ ಪಾಕಿಸ್ತಾನ ಮೂಲದ ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ (ಬಿಕೆಐ) ಮಾಸ್ಟರ್ಮೈಂಡ್ ಹಲ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ಮತ್ತು ಗ್ಯಾಂಗ್‌ಸ್ಟರ್ ಹ್ಯಾಪಿ ಪಸ್ಸಿಯಾನ ಸಂಪರ್ಕ ಇರುವ ಸಾಧ್ಯತೆಗಳನ್ನು ಅವರು ಅಲ್ಲಗಳೆಯಲಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ಅವರು ನುಡಿದರು.