ಬೆಂಗಳೂರು,ಆ.13- ರಾಜಧಾನಿ ಬೆಂಗಳೂರು ನಗರದ ಪುಟ್ಟೆನಹಳ್ಳಿ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಕುಕ್ಕರ್ ಸ್ಪೋಟ ಪ್ರಕರಣದಲ್ಲಿ ಒಟ್ಟು 8 ಮಂದಿ ಗಾಯಗೊಂಡಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ರೂಮ್‌ನಲ್ಲಿ ಕುಕ್ಕರ್ ಸ್ಪೋಟಗೊಂಡು ಆರು ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.
ಸವದತ್ತಿಗೆ ಬಂದಿದ್ದ ಬೆಂಗಳೂರು ಮತ್ತು ಯಾದಗಿರಿ ಮೂಲದ ಭಕ್ತಾಧಿಗಳು ಹೋಟೆಲ್‌ನಲ್ಲಿ ರೂಮ್‌ಗಳನ್ನು ಮಾಡಿಕೊಂಡಿದ್ದು, ದೇವಿಗೆ ನೇವೈದ್ಯಕ್ಕಾಗಿ ಹೋಳಿಗೆ ತಯಾರಿಸಲು ಪ್ರೆಸರ್ ಕುಕ್ಕರ್‌ನಲ್ಲಿ ಅಡುಗೆ ಮಾಡುತ್ತಿದ್ದಾಗ ಏಕಾಏಕಿ ಸ್ಪೋಟಗೊಂಡಿದೆ.
ಪರಿಣಾಮ ರೂಮ್‌ನಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಸ್ಥಳಕ್ಕೆ ಜಿಲ್ಲಾ ಎಸ್ಪಿ ಡಾ.ಭೀಮಾಶಂಕರ ಗುಳೇದ ಹಾಗೂ ಸವದತ್ತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ವರದಿ:
ಅನ್ನ ಮಾಡಲು ಇಟ್ಟಿದ್ದ ಕುಕ್ಕರ್ ಏಕಾಏಕಿ ಸ್ಫೋಟಗೊಂಡು, ಶಾರ್ಟ್ ಸೆಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಯುವಕರು ಗಾಯಗೊಂಡಿದ್ದಾರೆ.ದೆಹಲಿ ಮೂಲದ ಮೋಸಿನ್ ಮತ್ತು ಅದರ್‌ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಇಬ್ಬರು ಯುವಕರು ಪುಟ್ಟೇನಹಳ್ಳಿಯ 24ನೇ ಮುಖ್ಯರಸ್ತೆಯಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದು, ಸೆಲ್ಯೂನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.ಇಂದು ಮಂಗಳವಾರವಾದ್ದರಿಂದ ರಜೆ ಇದ್ದ ಕಾರಣ ಬೆಳಗ್ಗೆ ತಡವಾಗಿ ಎದ್ದು 11.30ರ ಸುಮಾರಿನಲ್ಲಿ ತಿಂಡಿಗಾಗಿ ಕುಕ್ಕರ್‌ನಲ್ಲಿ ಅನ್ನ ಮಾಡಲು ಅಕ್ಕಿ ಇಟ್ಟಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಕುಕ್ಕರ್ ಸ್ಫೋಟಗೊಂಡಿದೆ. ಆ ವೇಳೆ ಎಲೆಕ್ಟ್ರಿಕ್ ಶಾರ್ಟ್ ಸೆರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಇಬ್ಬರು ಯುವಕರಿಗೆ ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ರೂಮ್‌ನಲ್ಲಿದ್ದ ಗ್ಯಾಸ್ ಸಿಲಿಂಡರ್ ಹಾಗೆಯೇ ಇದೆ.
ಇವರ ರೂಮ್‌ನಿಂದ ಶಬ್ದ ಕೇಳಿ ನೆರೆಹೊರೆಯವರು ಬಂದು ನೋಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುದ್ದಿ ತಿಳಿದು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕುಕ್ಕರ್ ಸ್ಫೋಟ ಹಾಗೂ ಶಾರ್ಟ್ ಸೆರ್ಕ್ಯೂಟ್‌ಗೆ ಕಾರಣವೇನೆಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.