ಬೆಂಗಳೂರು,ಮಾ.5- ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 20 ಲಕ್ಷ ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ವಿಧಾನಸಭೆಯ ಪ್ರಶೋತ್ತರದ ಅವಧಿಯಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರೀಯ ಕ್ಷೇತ್ರದ ಶಾಸಕ ಮಹೇಶ್ ತೆಂಗಿನಕಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಡಳಿಯಲ್ಲಿ 56 ಲಕ್ಷ ಮಂದಿ ನೋಂದಣಿಯಾಗಿದ್ದರು.
ಮನೆಮನೆಗೆ ತೆರಳಿ ತಪಾಸಣೆ ಮಾಡಿದಾಗ 26 ಲಕ್ಷ ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಅದರ ಬಳಿಕ 30 ಲಕ್ಷ ಕಾರ್ಡ್‌ಗಳು ಉಳಿದುಕೊಂಡಿವೆ. ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡಲು ನಮ್ಮ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಆರಗ ಜ್ಞಾನೇಂದ್ರ, ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆಯಿದೆ. ಮಲೆನಾಡು ಭಾಗದಂತಹ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ತಪಾಸಣೆ ನಡೆಸಲು ಕಷ್ಟದ ವಾತಾವರಣವಿದೆ ಎಂದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಚಿವರು, ಅಂಬೇಡ್ಕರ್ ಸೇವಾ ಕೇಂದ್ರಗಳೆಂದು ತೆರೆಯಲಾಗಿದೆ. 43 ವಾಹನಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಮನೆಮನೆಗೆ ತೆರಳಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ನೈಜತೆಯನ್ನು ಪರಿಶೀಲನೆ ಮಾಡಲಿದ್ದಾರೆ. ಅರ್ಹರ ಸೌಲಭ್ಯಗಳು ವಂಚನೆಯಾಗಬಾರದು. ಹಾಗೆಯೇ ಅನರ್ಹರಿಗೆ ಸೌಲಭ್ಯ ಸಿಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದು ತಿಳಿಸಿದರು.